ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಡಿಸೆಂಬರ್ 28, 2009

ಚಾಣಕ್ಯನ ಹದಿನಾರು ಉಕ್ತಿಗಳು


ಚಾಣಕ್ಯ ಕ್ರಿಸ್ತಪೂರ್ವ ೩೫೦ ರಲ್ಲಿ ಉತ್ತರಭಾರತದ (ಈಗಿನ ಬಿಹಾರ) ಪಾಟಲಿಪುತ್ರ ನಗರದಲ್ಲಿ ಜೀವಿಸಿದ್ದ ಮಹಾನ್ ಮೇಧಾವಿ. ಆ ಕಾಲದಲ್ಲಿಯೇ ಹಲವು ಉಕ್ತಿಗಳನ್ನು ಆತ ಪ್ರಸ್ತುತಪಡಿಸಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ. ಚಾಣಕ್ಯನ ಹಲವಾರು ಉಕ್ತಿಗಳಲ್ಲಿ ಹದಿನಾರನ್ನು ಆರಿಸಿ ಕೆಳಗೆ ವಿವರಿಸಲಾಗಿದೆ.


೧)ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ, ಎಲ್ಲಾ ತಪ್ಪುಗಳನ್ನು ನೀವೊಬ್ಬರೇ ಮಾಡಲು ನಿಮ್ಮ ಆಯಸ್ಸು ಸಾಲದು

೨)ಅತಿಪ್ರಾಮಾಣಿಕರಾಗದಿರಿ. ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ. ಆ ಬಳಿಕ ಡೊಂಕಮರದ ಸರದಿ

೩)ಒಂದು ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡಬೇಕು

೪)ಅತ್ಯಂತ ದೊಡ್ಡ ಗುರುಮಂತ್ರ : ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ.

೫)ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥರಹಿರ ಸ್ನೇಹವೇ ಇಲ್ಲ. ಇದೊಂದು ಕಹಿಸತ್ಯ

೬)ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ? ಈ ಕಾರ್ಯದ ಫಲಗಳೇನು ಮತ್ತು ಈ ಕಾರ್ಯದಲ್ಲಿ ನಾನು ಸಫಲನಾಗುತ್ತೇನೆಯೇ? ಈ ಮೂರೂ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಆ ಪ್ರಯತ್ನ ವ್ಯರ್ಥ

೭)ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಅಕ್ರಮಣ ಮಾಡಿ ಅದನ್ನು ವಿನಾಶಗೊಳಿಸಿಬಿಡಿ

೮)ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ

೯)ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯದಿಂದ ಮಧ್ಯಕ್ಕೆ ನಿಲ್ಲಿಸಬೇಡಿ. ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೆ ಅತ್ಯಂತ ಸುಖಿಗಳು

೧೦)ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಓರ್ವ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿ ಪಸರಿಸುತ್ತದೆ.

೧೧)ದೇವರು ವಿಗ್ರಹದೊಳಗಿಲ್ಲ. ನಿಮ್ಮ ಭಾವನೆಗಳೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಸ್ಥಾನ

೧೨)ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡಮನುಷ್ಯನಾಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲ

೧೩)ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ

೧೪)ನಿಮ್ಮ ಮಗುವನ್ನು ಮೊದಲ ಐದು ವರ್ಷಗಳವರೆಗೆ ಮುದ್ದಾಗಿ ಸಾಕಿರಿ. ಆ ಬಳಿಕ ಐದು ವರ್ಷಗಳಲ್ಲಿ ಮಗು ಎಸಗುವ ತಪ್ಪುಗಳನ್ನು ಬೆದರಿಸಿ ತಿದ್ದಿರಿ. ಹದಿನಾರಾಯಿತೋ, ಸ್ನೇಹಿತನಂತೆ ಕಾಣಿ. ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗುತ್ತಾರೆ.

೧೫)ಮೂರ್ಖ ವ್ಯಕ್ತಿಗೆ ಪುಸ್ತಕಗಳು ಅಂಧ ವ್ಯಕ್ತಿಗೆ ಕನ್ನಡಿಗಿರುವಷ್ಟೇ ನಿರುಪಯೋಗಿ

೧೬)ವಿದ್ಯೆಯೇ ನಿಜವಾದ ಸ್ನೇಹಿತ. ವಿದ್ಯಾವಂತನಿಗೆ ಎಲ್ಲೂ ಮನ್ನಣೆಯಿದೆ. ವಿದ್ಯೆಯೇ ನಿಜವಾದ ಭೂಷಣ, ವಿದ್ಯೆ ಎಂದಿಗೂ ಯೌವನ.

ಶನಿವಾರ, ಡಿಸೆಂಬರ್ 26, 2009

ವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ


ವಿಶ್ವದೆಲ್ಲೆಡೆ ಪರ್ಯಾಯ ಇಂಧನಕ್ಕೆ ಹೆಚ್ಚಿನ ಕಾಳಜಿ ವ್ಯಕ್ತವಾಗುತ್ತಿದೆ. ಸೂರ್ಯಶಕ್ತಿ, ಪವನಶಕ್ತಿ ಮೊದಲಾದ ಶಕ್ತಿಮೂಲಗಳ ಸಮರ್ಥ ಬಳಕೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಸೋಲಾರ್ ಪ್ಯಾನೆಲ್ ಅಳವಡಿಸಿದ ದಾರಿದೀಪಗಳು ಬಳಕೆಯಾಗುತ್ತಿವೆ.

ಈ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ವಿದ್ಯುತ್ ಚಾಲಿತ ವಿಮಾನ. ಇದು ಯಾವುದೇ ಸಂಸ್ಥೆ ನಿರ್ಮಿಸಿದ್ದಲ್ಲ, ಬದಲಿಗೆ ರಾಂಡೆಲ್ ಫಿಶರ್ ಮ್ಯಾನ್ ಎಂಬ ಸಾಮಾನ್ಯ ಹವ್ಯಾಸಿ ಹಾರಾಟಗಾರ ನಿರ್ಮಿಸಿದ್ದು. ಎಲೆಕ್ಟ್ರಾಫ್ಲೈಯರ್-ಸಿ ಎಂಬ ಹೆಸರಿನ ಈ ವಿಮಾನದ ನಿರ್ಮಾಣವೂ ಒಂದು ಆಕಸ್ಮಿಕ. ಸುಮಾರು ಹತ್ತು ವರ್ಷಗಳ ಹಿಂದೆ ಸ್ವತಃ ಜೋಡಿಸಬಹುದಾದ ಚಿಕ್ಕ ಒಬ್ಬರು ಕುಳಿತುಕೊಳ್ಳಬಹುದಾದ ವಿಮಾನವೊಂದನ್ನು ಫಿಶರ್ ಮ್ಯಾನ್ ಕೊಂಡು ತಂದಿದ್ದರು. ಆದರೆ ಅದರ ಇಂಜಿನ್ ವಿಪರೀತ ಸದ್ದು ಮಾಡುತ್ತಿದ್ದು ಹಾರಾಟವೂ ಅಷ್ಟೊಂದು ಆಹ್ಲಾದಕರವಾಗಿರಲಿಲ್ಲ. ಕಿಟ್ ಕೊಂಡು ತಂದಾಗಿದೆ, ಸುಮ್ಮನೇ ಬಿಟ್ಟರೆ ಹಾಕಿದ ಹಣ ದಂಡ, ಹಾರಾಡೋಣವೆಂದರೆ ಕರ್ಕಶ ಸದ್ದು. ಏನು ಮಾಡಬಹುದೆಂದು ಯೋಚಿಸಿದವರಿಗೆ ಸೂಕ್ತವಾಗಿ ಕಂಡದ್ದು ಇದರ ಪೆಟ್ರೋಲ್ ಇಂಜಿನ್ ತೆಗೆದು ವಿದ್ಯುತ್ ಆಧಾರಿತ ಇಂಜಿನ್ ಬಳಕೆ.

ಆ ಬಳಿಕ ಮುಂದಿನ ಹತ್ತು ವರ್ಷಗಳ ಕಾಲ ಅವರು ತಮ್ಮ ವಿಮಾನಕ್ಕೆ ಬೇಕಾದ ಎಲೆಕ್ಟ್ರ್‍ಇಕ್ ಮೋಟಾರ್ ಹೊಂದಿಸುವಲ್ಲಿ ಕಳೆದರು. ಹದಿನೆಂಟು ಅಶ್ವಶಕ್ತಿಯ ಮೋಟಾರ್ ಒಂದನ್ನು ವಿಮಾನದಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದೊಂಗಿದೆ ಅಳವಡಿಸಲಾಯ್ತು. ವಿದ್ಯುತ್ ಒದಗಿಸಲು ತಲಾ ಎಪ್ಪತ್ತೈದು ವೋಲ್ಟುಗಳ ಎರೆಡು ಲಿಥಿಯಂ ಐಯಾನ್ ಬ್ಯಾಟರಿಗಳ ವ್ಯವಸ್ಥೆಯೂ ಆಯಿತು. ಹೆಚ್ಚಿದ ವಿಮಾನದ ಭಾರವನ್ನು ಹೊರಲು ಸಾಧ್ಯವಾಗುವಂತೆ ವಿಮಾನದ ಪ್ರೊಪೆಲ್ಲರ್ ರೆಕ್ಕೆಗಳ ಉದ್ದವನ್ನು ನಲವತ್ತೈದು ಇಂಚುಗಳಿಗೆ ಹೆಚ್ಚಿಸಲಾಯಿತು. ಒಂದೂವರೆ ಪಟ್ಟು ಹೆಚ್ಚಿನ ಪ್ರೊಪೆಲ್ಲರ್ ಶಕ್ತಿಗೆ ಅನುಗುಣವಾಗಿ ವಿಮಾನದ ಎತ್ತರವನ್ನೂ ಎಂಟು ಇಂಚುಗಳಷ್ಟು ಹೆಚ್ಚಿಸಲಾಯಿತು.

ಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಗಳ ಸಹಾಯದಿಂದ ಈ ವಿಮಾನ ಪ್ರತಿ ಘಂಟೆಗೆ ಎಪ್ಪತ್ತು ಕಿ.ಮೀ. ವೇಗದಲ್ಲಿ ಒಟ್ಟು ಒಂದೂವರೆ ಘಂಟೆ ಹಾರಾಟ ನಡೆಸಬಲ್ಲ ಕ್ಷಮತೆ ಹೊಂದಿದೆ. ಒಮ್ಮೆ ವಿಮಾನ ತನ್ನ ನಿರ್ಧರಿತ ಎತ್ತರವನ್ನು ತಲುಪಿದ ಬಳಿಕ ಮೋಟಾರನ್ನು ಸ್ಥಗಿತಗೊಳಿಸಿ ಗ್ಲೈಡರಿನಂತೆ ಚಲಿಸಬಹುದಾಗಿದೆ. ವಿಮಾನ ಮುಂದುವರೆಯುವಾಗ ಪ್ರೊಪೆಲ್ಲರ್ ವಿರುದ್ಧ ದಿಕ್ಕಿಗೆ ತಿರುಗುವ ಶಕ್ತಿಯನ್ನು ಬ್ಯಾಟರಿ ಚಾರ್ಚ್ ಮಾಡಲು ಬಳಸಬಹುದಾಗಿದೆ. ಪ್ರತಿ ಬ್ಯಾಟರಿಯನ್ನೂ ಸೆರಾಮಿಕ್ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಕವಚದೊಳಗೆ ಭದ್ರವಾಗಿರಿಸಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.

ಸಾಮಾನ್ಯ ಅಂತರ್ದಹನ ಇಂಜಿನ್ ಕೇವಲ ೧೫% ಕಾರ್ಯಕ್ಷಮತೆ ನೀಡಿದರೆ ವಿದ್ಯುತ್ ಬ್ಯಾಟರಿ ಮೋಟಾರ್ ೮೮% ಕಾರ್ಯಕ್ಷಮತೆ ನೀಡುತ್ತದೆ ಎಂದು ಫಿಶರ್ ಮ್ಯಾನ್ ಹೆಮ್ಮೆಯಿಂದ ನುಡಿಯುತ್ತಾರೆ. ಹೆಚ್ಚಿನ ಬ್ಯಾಟರಿಗಳನ್ನು ಹೊಂದಿಸಿ ಪೂರ್ಣವಾಗಿ ಚಾರ್ಚ್ ಮಾಡಿ ಹೊರಟರೆ ಆರು ಘಂಟೆ ಸತತವಾದ ಹಾರಾಟ ನಡೆಸಬಹುದೆಂದು ಅವರು ತಿಳಿಸುತ್ತಾರೆ.

ಸರಳವಾದ ವಿನ್ಯಾಸ ಸಾಮಾನ್ಯ ವಿಮಾನದಲ್ಲಿರುವ ಹೆಚ್ಚಿನ ಸಂಖ್ಯೆಯ ನಿಯಂತ್ರಣಗಳನ್ನು ಕಡಿತಗೊಳಿಸಿದೆ. ಕಾಕ್ ಪಿಟ್ ಒಳಗಿರುವುದು ಒಂದು ವೋಲ್ಟ್ ಮೀಟರ್. ಇದು ಬ್ಯಾಟರಿಗಳಲ್ಲಿರುವ ಚಾರ್ಜ್ ಅನ್ನು ತೋರಿಸುತ್ತದೆ. ಪರ್ಯಾಯವಾಗಿ ಇದೇ ವಿಮಾನದ ಇಂಧನ ಗೇಜ್ ಸಹಾ ಆಗಿದೆ. ಒಂದು ಆಂ ಮೀಟರ್ ಬ್ಯಾಟರಿಯಿಂದ ವ್ಯಯವಾಗುತ್ತಿರುವ ವಿದ್ಯುತ್ (ಕರೆಂಟ್) ಅನ್ನು ತೋರಿಸುತ್ತದೆ. ಇದು ಯಾವ ವೇಗದಲ್ಲಿ ವಿದ್ಯುತ್ ವ್ಯಯವಾಗಿರುತ್ತದೆ ಎಂದು ತೋಸಿಸುವುದಲ್ಲದೇ ವಿಮಾನ ಗ್ಲೈಡರಿನಂತೆ ಹಾರುತ್ತಿರುವಾಗ ಬ್ಯಾಟರಿ ಚಾರ್ಜ್ ಆಗುತ್ತಿರುವುದನ್ನೂ ತೋರಿಸುತ್ತದೆ.

ಪ್ರತಿಬಾರಿ ಬ್ಯಾಟರಿ ಚಾರ್ಚ್ ಮಾಡಲು ಕೇವಲ ಎಪ್ಪತ್ತು ಸೆಂಟ್ (ಸುಮಾರು ಮೂವತ್ತು ರೂಪಾಯಿಗಳು) ಖರ್ಚಾಗುತ್ತದೆ.

ಈ ವಿಮಾನ ಸುಲಭಬೆಲಯಲ್ಲಿ ಮಾರಾಟಕ್ಕಿದ್ದು ೨೦೧೦ರ ಮಧ್ಯಭಾಗದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಅವರ ಅಂತರ್ಜಾಲ ತಾಣಕ್ಕೆ www.ElectraFlyer.com ಭೇಟಿ ನೀಡಬಹುದಾಗಿದೆ.


ಕೃಪೆ: ಇನ್ವೆಂಟರ್ ಸ್ಪಾಟ್

ಶುಕ್ರವಾರ, ಡಿಸೆಂಬರ್ 25, 2009

ನೀರನ್ನೇ ಉಪಯೋಗಿಸದ ವಾಶಿಂಗ್ ಮಶೀನ್


ಬಟ್ಟೆ ಒಗೆಯುವುದೆಂದರೆ ಕಲ್ಲಿಗೆ ಬಡಿಯುವ ಶಿಕ್ಷೆ ಎನ್ನುವ ಕಾಲ ಹೋಯಿತು. ಈಗ ಏನಿದ್ದರೂ ಸೆಮಿ ಆಟೋಮ್ಯಾಟಿಕ್, ಫುಲ್ಲೀ ಆಟೋಮ್ಯಾಟಿಕ್ ವಾಶಿಂಗ್ ಮಶೀನುಗಳ ಕಾಲ. ದಿನೇ ದಿನೇ ಹೊರಬರುತ್ತಿರುವ ಆವಿಶ್ಕಾರಗಳಲ್ಲಿ ಬ್ರಿಟನ್ನಿನ ನೀರಿಲ್ಲದ ಒಗೆತ ಹೊಸ ಆಯಾಮವನ್ನೇ ಉಪಯೋಗಿಸಿದೆ.


ಬಟ್ಟೆ ಒಗೆಯುವುದೆಂದರೆ ನೀರಿಲ್ಲದ ಅಥವಾ ನೀರಿನ ಅಭಾವವಿರುವ ನಗರಗಳಿಗೆ ಒಂದು ಶಿಕ್ಷೆಯೇ ಸರಿ. ಅಂತಹವರಿಗೆ ವರದಾನವಾಗಲಿದೆ ಬ್ರಿಟನ್ನಿನ ಕ್ಸೆರೋಸ್ ಸಂಸ್ಥೆ ಪರಿಚಯಿಸಿರುವ ಹೊಸ ನೀರಿಲ್ಲದ ವಾಶಿಂಗ್ ಮಶೀನ್. ಕೇವಲ ೨ ಶೇಖಡಾ ನೀರನ್ನು ಬಳಸಿ ಬಟ್ಟೆಗಳನ್ನು ಒಗೆಯುವ ಹೊಸ ವಾಶಿಂಗ್ ಮಷೀನನ್ನು ಮಾಮೂಲಿ ವಾಷಿಂಗ್ ಮಷೀನುಗಳ ಹತ್ತು ಶೇಖಡಾ ವಿದ್ಯುತ್ ಬಳಸುವುದರಿಂದ ಅತ್ಯಂತ ಪರಿಸರಸ್ನೇಹಿಯಾಗಿದೆ. ಬ್ರಿಟನ್ನಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಾಯೋಗಿಕವಾಗಿ ಪ್ರದರ್ಶನವನ್ನು ನೀಡಿ ಎಲ್ಲರ ಮನಗೆದ್ದಿರುವ ಈ ವಾಶಿಂಗ್ ಮೆಶೀನ್ ೨೦೦೯ ರಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲಿದೆ.

ನೀರಿಲ್ಲದೆ ಈ ಯಂತ್ರ ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ತರ್ಕ ಸುಲಭವಾಗಿದೆ. ನೀರು ಮಾಡುವ ಕೆಲಸವನ್ನು ಇಲ್ಲಿ ಪ್ಲಾಸ್ಟಿಕ್ಕಿನ ಚಿಕ್ಕ ಚಿಕ್ಕ ಗೋಳಗಳು ನಿರ್ವಹಿಸಲಿವೆ. ಮಾಮೂಲಿ ಒಗೆತದಲ್ಲಿ ಬಟ್ಟೆಯಲ್ಲಿರುವ ಕೊಳೆಯ ಋಣ ಚಾರ್ಜ್ ಅನ್ನು ಸೋಪಿನಲ್ಲಿರುವ ಧನಾಂಶ ಕಿತ್ತುಕೊಳ್ಳುತ್ತದೆ. ಇಲ್ಲಿ ನೀರು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತದೆ. ಹೊಸ ತಂತ್ರಜ್ಞಾನದಲ್ಲಿ ನೀರಿನ ಕೆಲಸವನ್ನು ವಿಶೇಷ ಪ್ಲಾಸ್ಟಿಕ್ ನಿರ್ವಹಿಸುತ್ತದೆ. ಮೊದಲಿಗೆ ಒಂದು ಕಪ್ ನೀರು ಹಾಗೂ ಡಿಟರ್ಜೆಂಟುಗಳ ಮಿಶ್ರಣವನ್ನು ಯಂತ್ರದೊಳಕ್ಕೆ ಸೇರಿಸಬೇಕಾಗುತ್ತದೆ. ಆ ಬಳಿಕ ನೀರು ಹಾಗೂ ಡಿಟರ್ಜೆಂಟ್ ಮಿಶ್ರಣ ಪ್ಲಾಸ್ಟಿಕ್ ಗೋಳಗಳ ಮೂಲಕ ಬಟ್ಟೆಗಳ ನಡುವೆ ಹಾದುಹೋಗುತ್ತದೆ. ಈ ಗೋಳಗಳು ಡಿಟರ್ಜೆಂಟ್ ಹಾಗೂ ಕೊಳೆಯ ನಡುವೆ ಮಧ್ಯವರ್ತಿಯಾಗಿ ವರ್ತಿಸಿ ಕೊಳೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಬಟ್ಟೆ ಸರಿಸುಮಾರಾಗಿ ನೂರು ಪ್ರತಿಶತ ಒಣಗಿಯೇ ಹೊರಬರುತ್ತದೆ.

ವಿಶಿಷ್ಟ ಬಗೆಯ ಈ ಪ್ಲಾಸ್ಟಿಕ್ ತುಣುಕುಗಳನು ಅತಿನುಣುಪಾಗಿದ್ದು ಬಟ್ಟೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಹಾಗೂ ಕನಿಷ್ಟ ನೂರು ಬಾರಿಯಾದರೂ ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ ಎಂದು ಕ್ಸಿರೋಸ್ ಸಂಸ್ಥೆ ಹೇಳಿಕೊಂಡಿದೆ.

ನೀರು ಬಳಸದಿರುವ , ಒಣಗಿಸುವ ಅಗತ್ಯವಿಲ್ಲದ ಈ ವಾಶಿಂಗ್ ಮಶೀನ್ ನಮ್ಮೂರಿಗೂ ಬೇಗನೇ ಬರಲಿ ಎಂದು ಹಾರೈಸೋಣ.

ಬರಲಿದೆ ಬಿದಿರಿನ ಹೆಲ್ಮೆಟ್


ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.


ಈ ನಿಟ್ಟಿನಲ್ಲಿ ಬ್ರಿಟನ್ನಿನ ರೂಫ್ ಸಂಸ್ಥೆ ಸಂಪೂರ್ಣ ಪರಿಸರಸ್ನೇಹಿ ಹೆಲ್ಮೆಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದ ರೂಫ್ ಆರ್.ಒ.ಸಿಕ್ಸ್ ಎಂಬ ಹೆಸರಿನ ಈ ಹೆಲ್ಮೆಟ್ಟನ್ನು ಬಿದಿರಿನಿಂದ ತಯಾರಿಸಿದ್ದು ಒಳಭಾಗವನ್ನು ಹತ್ತಿಯಿಂದ ನಿರ್ಮಿಸಲಾಗಿದೆ. ಈ ಹತ್ತಿಯ ವಿಶೇಷ ವಿನ್ಯಾಸದಿಂದ ತಲೆಬುರುಡೆಗೆ ಅಗತ್ಯವಾದ ಗಾಳಿ ಲಭಿಸಲಿದ್ದು ಹೆಚ್ಚಿನ ಆರಾಮ ನೀಡಲಿದೆ.

ತಲೆಬುರುಡೆಯ ಮೇಲೆ ಹೆಲ್ಮೆಟ್ ಧೃಢವಾಗಿ ಕೂರಲು ಅನುಕೂಲವಾಗುವಂತೆ ಇದರ ಪಟ್ಟಿಯನ್ನೂ ಸೀಟ್ ಬೆಲ್ಟ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣವಾಗಿ ತಿರುಗಬಲ್ಲ ಬೈಫೋಕಲ್ ಮಸೂರ ಯಾವುದೇ ಋತುಮಾನದಲ್ಲಿಯೂ ಚಾಲಕನಿಗೆ ಸ್ಪಷ್ಟದರ್ಶನ ನೀಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಮಾದರಿಗಿಂತಲೂ ಈ ಮಾದರಿ ಚಾಲಕನಿಗೆ ಹೆಚ್ಚಿನ ಆರಾಮ ಹಾಗೂ ಸುರಕ್ಷತೆ ನೀಡುತ್ತದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.

ಬ್ರಿಟನ್ನಿನ ಉತ್ಕೃಷ್ಟತಾ ಪರೀಕ್ಷೆಯಾದ ಇ-22-05 ಪರೀಕ್ಷೆಯನ್ನೂ ಈ ಹೆಲ್ಮೆಟ್ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಹೊಸತಾಗಿ ಬರುತ್ತಿರುವುದರಿಂದ ಬೆಲೆ ಕೊಂಚ ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪಾದನೆ ಬೆಲೆಯನ್ನು ಕಡಿಮೆಗೊಳಿಸಲೂ ಬಹುದು

ಅಂದ ಹಾಗೆ ನಮ್ಮ ಮಲೆನಾಡಿನಲ್ಲಿ ಅಡಿಕೆ ಹಾಳೆಯ ಹೆಲ್ಮೆಟ್ ಒಂದು ಶತಮಾನಗಳಿಂದ ತಲೆಗಳನ್ನು ರಕ್ಷಿಸುತ್ತಾ ಬಂದಿದ್ದು ಈ ಸಂಸ್ಥೆಗೆ ತಿಳಿಯಲಿಲ್ಲವೇನೋ, ಗೊತ್ತಿದ್ದಿದ್ದರೆ ಬಿದಿರಿನ ಬದಲಿಗೆ ಅಡಿಕೆ ಹಾಳೆಗೂ ಕಾಯಕಲ್ಪ ಒದಗುತ್ತಿತ್ತು.

ಗಾಳಿ, ಜಲ, ಸೌರ ವಿದ್ಯುತ್ ಆಯಿತು. ಈಗ ತೇವಮಣ್ಣಿನ ಸರದಿ


ನಮ್ಮ ಊರುಗಳಲ್ಲಿ ಪವರ್ ಕಟ್ ಎಂದು ನಾವು ಗೊಣಗಾಡುತ್ತಿರುತ್ತೇವೆ. ನಮಗೆ ಪವರ್ ಕಟ್ ಇದ್ದರೂ ದಿನದ ಕೆಲವಾರು ಘಂಟೆಗಳಾದರೂ ವಿದ್ಯುತ್ ಸಿಗುತ್ತದೆ. ಅದೇ ಆಫ್ರಿಕಾದ ಇನ್ನೂರೈವತ್ತು ಮಿಲಿಯನ್ ಜನರಿಗೆ ವಿದ್ಯುತ್ ಭಾಗ್ಯವೇ ಇಲ್ಲ. ಇಂದಿಗೂ ಅವರು ಕತ್ತಲೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಉಣ್ಣುವ ಊಟಕ್ಕೇ ತಾತ್ವಾರ ಬಂದಿರುವಾಗ ವಿದ್ಯುತ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದು ಆ ರಾಷ್ಟ್ರಗಳ ಸರಕಾರಗಳಿಗೆ ಗಗನದ ಮರೀಚಿಕೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಸ್ಥಳೀಯವಾಗಿ ತಯಾರಿಸಿ ನೀಡಬಹುದಾದ ವಿದ್ಯುತ್ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಕರೆ ನೀಡಿತ್ತು. ಇದು ಸುಮಾರು ಮೂರು ವರ್ಷ ಹಳೆಯ ಕಥೆ. ಹೆಚ್ಚಿನವರು ತಮ್ಮ ಪಾಲಿಗೆ ಲಭಿಸಿದ ಐಶಾರಾಮವನ್ನು ಅನುಭವಿಸುತ್ತಾ ಕುಳಿತಿದ್ದರೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಆರು ವಿದ್ಯಾರ್ಥಿಗಳು ಆಫ್ರಿಕಾದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ತಾವೇನಾದರು ಮಾಡಬಹುದೇ ಎಂದು ಪ್ರಯತ್ನಪಟ್ಟರು. ಇವರ ಪ್ರಯತ್ನಗಳಿಗೆ ಈಗ ಸಂಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿನ ಜಯ ದೊರಕಿದೆ.



ಸಾಮಾನ್ಯ ಬ್ಯಾಟರಿಗಳಲ್ಲಿ ಧನ ಮತ್ತು ಋಣ ಧೃವಗಳಿದ್ದು ಬ್ಯಾಟರಿಯೊಳಗಿನ ರಾಸಾಯನಿಕಗಳ ಪ್ರಕ್ರಿಯೆಯಿಂದ ಧನ ಮತ್ತು ಋಣಧಾತುಗಳ ನಡುವೆ ಚಿಕ್ಕ ವಿದ್ಯುದಾವೇಶ (ವೋಲ್ಟೇಜ್) ಕಂಡುಬರುತ್ತದೆ. ಸಾಮಾನ್ಯವಾಗಿ ಎಲ್ಲಾ ನೆಲದಲ್ಲಿ ಕೊಂಚ ಪ್ರಮಾಣದ ಆರ್ದ್ರತೆ ಇದ್ದೇ ಇರುತ್ತದೆ. ನೆಲದಲ್ಲಿರುವ ಮಣ್ಣಿನ ಆಲ್ಗೇ ಮತ್ತು ಬ್ಯಾಕ್ಟೀರಿಯಾಗಳನ್ನು ಆಧರಿಸಿ ಆ ಮಣ್ಣಿನ ಎರೆಡು ಸ್ತರಗಳಲ್ಲಿ ಎರೆಡು ಬಗೆಯ ಲೋಹಗಳನ್ನು ಹುಗಿಯುವುದರ ಮೂಲಕ ಚಿಕ್ಕ ಪ್ರಮಾಣದ ವೋಲ್ಟೇಜ್ ಪಡೆಯಬಹುದಾಗಿದೆ. ಹೀಗೆ ಒಂದರ ಪಕ್ಕ ಒಂದರಂತೆ ಹಲವಾರು ಗುಂಡಿಗಳನ್ನು ತೋಡಿ ಸೀರೀಸ್ ಜೋಡಣೆಯಿಂದ ಬ್ಯಾಟರಿಯೊಂದನ್ನು ಚಾರ್ಜ್ ಮಾಡಬಹುದಾಗಿದೆ. ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳು ನಿರಂತವಾಗಿ ವೃದ್ಧಿಹೊಂದಿ ಸತತವಾಗಿ ವಿದ್ಯುತ್ ಉತ್ಪಾದಿಸುತ್ತಿರುತ್ತದೆ.

ಸುಮಾರು ಒಂದು ಘನ ಮೀಟರ್ ಮಣ್ಣಿನಿಂದ ಒಂದು ಚಿಕ್ಕ ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪವನ್ನು ಹತ್ತಿಸಬಹುದಾಗಿದೆ. ಅಗತ್ಯತೆಗೆ ತೀರಾ ಅಲ್ಪವೆನ್ನಿಸುವ ಈ ಪ್ರಮಾಣ ಏನೂ ಇಲ್ಲದವರಿಗೊಂದು ಆಶಾಕಿರಣ. ಈ ಸಂಶೋಧನೆಗಾಗಿ ಆ ಆರು ವಿದ್ಯಾರ್ಥಿಗಳಿಗೆ ವಿಶ್ವಬ್ಯಾಂಕಿನ ಎರೆಡು ಲಕ್ಷ ಡಾಲರ್ ಸಹಾಯಧನ ದೊರಕಿದೆ.

ಈ ಪ್ರಯೋಗ ಘಾನಾ ಹಾಗೂ ನಮೀಬಿಯಾ ದೇಶಗಳ ಹಲವು ಹಳ್ಳಿಗಳಲ್ಲಿ ನಡೆಸಲಾಗಿದ್ದು ಸ್ಥಳೀಯರಿಗೆ ತಮಗೆ ಬೇಕಾದ ವಿದ್ಯುತ್ತನ್ನು ತಾವೇ ತಯಾರಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಟಾಂಜಾನಿಯಾದಲ್ಲಿ ಒಂದು ಘಟಕವನ್ನು ಸಂಪೂರ್ಣಗೊಳಿಸಲಾಗಿದ್ದು ಸ್ಥಳೀಯರು ಅತೀವ ಆಸಕ್ತಿ ವಹಿಸಿದ್ದಾರೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಲೆಬೋನ್ ಸೊಲ್ಯೂಶನ್ಸ್ ಇನ್ಕ್. ಹೆಚ್ಚಿನ ಸಂಶೋಧನೆಗೆ ಅಣಿಯಾಗುತ್ತಿದೆ.

ಇವರ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಆಶಿಸೋಣ ಅಲ್ಲವೇ.

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ ಹೆಚ್ಚು ಬಾಳಿಕೆ ಬರುತ್ತವೆಂದೂ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆದರೆ ಈ ಸಿ.ಎಫ್. ಎಲ್ ಗಳು ನಮ್ಮ ಹಳೆಯ ಟ್ಯೂಬ್ ಲೈಟಿನ ಹೃಸ್ವಸ್ವರೂಪವೇ ಹೊರತು ತಂತ್ರಜ್ಞಾನದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ನಿಜಕ್ಕೂ ಈ ಟ್ಯೂಬ್ ಲೈಟ್ ಹಾಗೂ ಸಿ.ಎಫ್.ಎಲ್ ಗಳು ನೀಡುವ ಬೆಳಕು ಕಂಪಿಸುವ ಬೆಳಕು (ಅಂದರೆ ಪ್ರಖರತೆಯಲ್ಲಿ ಏರುಪೇರು). ಆದರೆ ಈ ಕಂಪನ ನಮ್ಮ ವಿದ್ಯುತ್ ಸರಬರಾಜಿನ ಫ್ರೀಕ್ವೆನ್ಸಿ (೫೦ ಹರ್ಟ್ಸ್) ಅಂದರೆ ಸೆಕೆಂಡಿಗೆ ಐವತ್ತು ಬಾರಿ ಇರುವುದರಿಂದ ನಮ್ಮ ಕಣ್ಣು ಅದನ್ನು ಗುರುತಿಸಲು ಅಸಮರ್ಥವಾಗುತ್ತದೆ. ಹಾಗಾಗಿ ನಮಗೆ ಏರುಪೇರಿಲ್ಲದ ಬೆಳಕಿನಂತೆ ಕಂಡುಬರುತ್ತದೆ. ಆದರೆ ಕಾಲಕ್ರಮೇಣ ಸಿ.ಎಫ್. ಅಲ್ ಅಥವಾ ಟ್ಯೂಬ್ ಲೈಟ್ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ, ಬಳಿಕ ಏರುಪೇರು ಇನ್ನಷ್ಟು ಹೆಚ್ಚಾಗುತ್ತದೆ (ಫ್ಲಿಕರಿಂಗ್).


ಇದಕ್ಕೆ ಪರ್ಯಾಯವಾಗಿ ಬೆಳಕನ್ನು ಸೂಸುವ ಇನ್ನೊಂದು ವಸ್ತು ನಮ್ಮ ಜೀವನದಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ, ಅದೇ ಎಲ್.ಇ.ಡಿ. (ಲೈಟ್ ಎಮಿಟಿಂಗ್ ಡಯೋಡ್). ಈ ಎಲ್.ಇ.ಡಿ. ಗೂ ಸುಮಾರು ಮೂವತ್ತು ವರ್ಷವೇ ಆಯಿತು. ಇದು ಸೂಸುವ ಬೆಳಕು ಅಪ್ಪಟವಾದದ್ದು, ಅಂದರೆ ಯಾವುದೇ ಏರುಪೇರಿಲ್ಲದಿರುವುದು. ಇದು ಮೊಬೈಲ್, ಸೈಕಲ್ ಲೈಟ್, ಟಾರ್ಚ್ ಮೊದಲಾದ ದಿನಬಳಕೆಯ ವಸ್ತುಗಳಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹಲವು ಬಸ್ಸುಗಳ ದೇವರ ಫೋಟೋಗಳ ಮುಂದೆ ಕೆಂಪು ಮತ್ತು ಹಸಿರು ಬಣ್ಣಗಳ ಬದಲಾಗುತ್ತಿರುವ ಫ್ಲಿಪ್ ಫ್ಲಾಪ್ ರೂಪದಲ್ಲಿ ಸೇವೆ ನೀಡುತ್ತಾ ಬಂದು ದಶಕಗಳೇ ಕಳೆದಿವೆ.

ಈಗ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಎಲ್.ಇ.ಡಿ.ಗೆ ಹೆಚ್ಚಿನ ಸಾಮರ್ಥ್ಯ ಒದಗಿಸುವತ್ತ ತಮ್ಮ ಗಮನ ಹರಿಸಿದ್ದಾರೆ. ಹಿಂದಿನ ಎಲ್.ಇ.ಡಿ.ಯಲ್ಲಿ ಗ್ಯಾಲಿಯಂ ನೈಟ್ರೈಡ್ ಎಂಬ ಸೆಮಿಕಂಡಕ್ಟರ್ ಮುಖ್ಯ ವಸ್ತುವಾಗಿತ್ತು. ದುಬಾರಿಯಾದ ಈ ವಸ್ತುವನ್ನು ಉಪಯೋಗಿಸಿ ಸುಮಾರು ನೂರು ವ್ಯಾಟ್ ಬಲ್ಬ್ ನೀಡುವ ಬೆಳಕನ್ನು ಸೂಸುವ ಸಾಮರ್ಥ್ಯಕ್ಕೆ ಸಿದ್ಧಪಡಿಸಬೇಕಾದರೆ ಪ್ರತಿ ಬಲ್ಬ್ ಗೆ ಸುಮಾರು ಮೂವತ್ತು ಡಾಲರ್ (ಸುಮಾರು ಸಾವಿರದ ಮುನ್ನೂರೈವತ್ತು ರೂಪಾಯಿ) ಬೆಲೆಯಾಗುತ್ತಿತ್ತು. (ಇದು ಉತ್ಪಾದನಾ ವೆಚ್ಚ, ಮಾರುಕಟ್ಟೆಗೆ ಬರಬೇಕಾದರೆ ಎರೆಡು ಸಾವಿರವಾಗಬಹುದು).

ಈ ನಿಟ್ಟಿನಲ್ಲಿ ಹೊಸ ಎಲ್.ಇ.ಡಿ ಯನ್ನು ಅವರು ಪ್ರಸ್ತುತಪಡಿಸಿದ್ದು ಅದರಲ್ಲಿ ಅತಿ ಕಡಿಮೆ ವೆಚ್ಚದ ಸಫೈರ್ ಹಾಳೆಗಳನ್ನು ಬಳಸಲಾಗಿದೆ. ಈ ಸಫೈರ್ ಹಾಳೆಗಳನ್ನು ಬಳಸಿ ಉತ್ಪಾದಿಸಲಾದ ಸೆಮಿಕಂಡಕ್ಟರ್ ಎಲ್.ಇ.ಡಿ. ಹಿಂದಿನ ಗ್ಯಾಲಿಯಂ ನೈಟ್ರೈಡ್ ಎಲ್.ಇ.ಡಿ ಗಿಂತಲೂ ಹೆಚ್ಚು ಸಾಮರ್ಥ್ಯ ಹಾಗೂ ಅದಕ್ಕಿಂತಲೂ ೭೫ % ಕಡಿಮೆ ಬೆಲೆ ಹೊಂದಿದೆ. ಅಂದರೆ ಸುಮಾರು ಮುನ್ನೂರೈವತ್ತು ರೂಪಾಯಿಗೆ ನೂರು ವ್ಯಾಟ್ ಬೆಳಕು ಸೂಸುವ ಬಲ್ಬಿನ ಬಾಳಿಕೆ ಒಂದು ಲಕ್ಷ ಘಂಟೆಗಳು! ಅಂದರೆ ಸುಮಾರು ಅರವತ್ತು ವರ್ಷಗಳು. ಅಪ್ಪಟ ಬಿಳಿಯ ಬೆಳಕು ನೀಡುವ ಬಲ್ಬ್ ಉಪಯೋಗಿಸುವ ವಿದ್ಯುತ್ ಸಹಾ ಒಂದು ಟ್ಯೂಬ್ ಲೈಟ್ ಉಪಯೋಗಿಸುವ ೧೦% ಅಂದರೆ ವಿದ್ಯುತ್ ಬಿಲ್ ನಲ್ಲಿ ಶೇಖಡಾ ೯೦ ನೇರ ಉಳಿತಾಯ. ಒಮ್ಮೆ ಬಲ್ಬ್ ಅಳವಡಿಸಿದರೆ ಮುಂದಿನ ಅರವತ್ತು ವರ್ಷ ಬದಲಿಸಬೇಕಾದ ಅಗತ್ಯವಿಲ್ಲವಾದ್ದರಿಂದ ಪ್ರತಿವರ್ಷದ ಟ್ಯೂಬ್ ಲೈಟ್ ಗೆ ಗುಡ್ ಬೈ. ಅಂದರೆ ಅರವತ್ತು ವರ್ಷಗಳಲ್ಲಿ ಎಷ್ಟು ಟ್ಯೂಬ್ ಲೈಟ್ ಹಣ ಉಳಿತಾಯವಾಗಬಹುದು ಲೆಕ್ಕ ಹಾಕಿ. ಹೆಚ್ಚೂಕಡಿಮೆ ಶಾಖರಹಿತವಾದ ಬೆಳಕು, ಚಿಕ್ಕದಾದ ಗಾತ್ರ ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾದ ಸ್ವಾತಂತ್ಯ ನೀಡುತ್ತದೆ. ಒಮ್ಮೆ ಮಾರುಕಟ್ಟೆಗೆ ಬಂದರೆ ಇದು ಇಂದು ನಮ್ಮ ಮನೆ, ಕಛೇರಿಗಳಲ್ಲಿ ಹಾಸುಹೊಕ್ಕಾಗಿರುವ ಟ್ಯೂಬ್ ಲೈಟ್, ಬಲ್ಬ್, ಹ್ಯಾಲೋಜನ್ ಲೈಟ್ ಮೊದಲಾದವುಗಳನ್ನು ನೇಪಥ್ಯಕ್ಕೆ ಸರಿಸುವುದರಲ್ಲಿ ಅನುಮಾನವಿಲ್ಲ.


ಈ ವಿಷಯವನ್ನು ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನಡೆಯುವ ಸಂಸ್ಥೆ-ಆರ್.ಎಫ್.ಎಮ್.ಡಿ. - ಯ ನಿರ್ದೇಶಕರಾದ ಪ್ರೊಫೆಸರ್ ಕಾಲಿನ್ ಹಂಫ್ರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಲ್ಲರ ಕುತೂಹಲ ಕೆರಳಿಸಿರುವ ಅರವತ್ತು ವರ್ಷ ಬಾಳಿಕೆ ಬಾಳುವ ಬಲ್ಬ್ ಆದಷ್ಟು ಶೀಘ್ರ ನಮ್ಮ ಮನೆಗಳಲ್ಲೂ ಬರುವಂತಾಗಲಿ ಎಂದು ಹಾರೈಸೋಣ.

ಶುಕ್ರವಾರ, ಮಾರ್ಚ್ 13, 2009

ಥಾಯ್ಲೆಂಡ್: ತೆಂಗಿನಕಾಯಿ ಕೀಳುವ ಮಂಗನಿಂದ ಮಾಲೀಕನ ಕೊಲೆ


ಥಾಲ್ಲೆಂಡ್, ಮಾರ್ಚ್ 13:  ಭಾರತದ ಕೇರಳದಲ್ಲಿ ಹಾಗೂ ಇನ್ನೂ ಹಲವೆಡೆ ತೆಂಗಿನಮರದಿಂದ ತೆಂಗಿನಕಾಯಿಗಳನ್ನು ಉದುರಿಸಲು ಮಂಗಗಳಿಗೆ ತರಬೇತಿ ನೀಡಲಾಗಿರುತ್ತದೆ. ಈ ಮಂಗಗಳು ಲೀಲಾಜಾಲವಾಗಿ ಮರಹತ್ತಿ ಪಕ್ವವಾದ ತೆಂಗಿನಕಾಯಿಗಳನ್ನು ಗುರುತಿಸಿ ಅವುಗಳನ್ನು ತಿರುಚಿ ಕೆಳಕ್ಕೆಸೆಯುವ ಅಧ್ಬುತ ಸಾಮರ್ಥ್ಯ ಪಡೆದಿರುತ್ತವೆ.

ತೆಂಗಿನ ಕಾಯಿ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ನಿತ್ಯಾಧಾರವಾಗಿರುವಂತೆಯೇ ಪೂರ್ವದ ಥಾಯ್ಲೆಂಡಿಗೂ ಸಹಾ.  ಅಲ್ಲಿಯೂ ತೆಂಗಿನಕಾಯಿ ಕೀಳುವವರಿಗೆ ಬರ. ಆದ್ದರಿಂದ ತೆಂಗಿನ ಕಾಯಿ ಕೀಳುವ ಮಂಗಗಳಿಗೆ ಭಾರೀ ಬೇಡಿಕೆ. ಈ ಬೇಡಿಕೆಯ ಮೂಲಕ ಮಂಗಗಳಿಗೂ ದುಬಾರಿ ಬೆಲೆ.

ಕಳೆದ ವರ್ಷ ಥಾಯ್ಲೆಂಡಿನ ನಾಕೋರಾನ್ ಶ್ರೀ ಥಮಾರಾಟ್ ಎಂಬಲ್ಲಿ ವಾಸವಾಗಿದ್ದ ಲೀಲಿಟ್ ಜಾಂಛೂಮ್ ಎಂಬ ನಲವತ್ತೆಂಟು ವರ್ಷದ ಕೃಷಿಕರೊಬ್ಬರು ನೂರಾಮೂವತ್ತು ಡಾಲರ್ ತೆತ್ತು ತರಬೇತುಗೊಂಡ ಮಂಗವೊಂದನ್ನು ಖರೀದಿಸಿ ಬ್ರದರ್ ಕ್ವಾನ್ ಎಂದು ಹೆಸರಿಟ್ಟಿದ್ದರು. ತಮ್ಮ ತೋಟಗಳ ತೆಂಗಿನಕಾಯಿಗಳನ್ನು ಕೀಳುವುದು ಮಾತ್ರವಲ್ಲದೇ ಅಕ್ಕಪಕ್ಕದ ತೋಟಗಳಿಂದ ಕಾಯಿ ಕೀಳಲು ಪ್ರತಿ ಕಾಯಿಗೆ ನಾಲ್ಕು ಪೆನ್ನಿಯಂತೆ ಬಾಡಿಗೆಗೂ ದುಡಿಸಿಕೊಳ್ಳುತ್ತಿದ್ದರು.

ಸುಮಾರು ಒಂದು ವರ್ಷ ಯಾವುದೇ ತಕರಾರಿಲ್ಲದೆ ಕೆಲಸ ಮಾಡಿದ ಮಾರುತಿಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತೇನೋ, ಆದರೆ ಹಣ ಎಣಿಸುತ್ತಿದ್ದ ಮಾಲಿಕನಿಗೆ ಅದರ ಅಳಲು ಅರ್ಥವಾಗಬೇಕಲ್ಲ, ಇನ್ನಷ್ಟು ಕಾಯಿಗಳನ್ನು ಉದುರಿಸುವಂತೆ ಮಾರುತಿಯನ್ನು ಹುರಿದುಂಬಿಸುತ್ತಿದ್ದರು. ಅಲ್ಲದೇ ಮರವನ್ನೇರಲು ನಿರಾಕರಿಸಿದರೆ ಏಟುಗಳ ಶಿಕ್ಷೆಯನ್ನೂ ನೀಡಲಾಗುತ್ತಿತ್ತು. 

ಕಳೆದ ಮಾರ್ಚ್ ಹನ್ನೊಂದನೇ ತಾರೀಖಿಗೆ ಅದೇ ಪ್ರಕಾರ ಕಾಯಿ ಕೀಳೆಂದು ಪೀಡಿಸಿದ ಮಾಲಿಕನ ಮೇಲೆ ಮಾರುತಿ ದಪ್ಪನಾದ ತೆಂಗಿನಕಾಯಿಯೊಂದನ್ನು ನೇರ ತಲೆಯ ಮೇಲೆ ಬೀಳುವಂತೆ ಎಸೆದಿತ್ತು.  ನೇರವಾಗಿ ಆಗಸದಿಂದ ನೆತ್ತಿಗೆ ಬಿದ್ದ ಹೊಡೆತಕ್ಕೆ ಕಿಮಕ್ ಕಮ್ಮಕ್ ಎನ್ನದೇ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  

ಸ್ಥಳದಲ್ಲಿಯೇ ಉಪಸ್ಥಿತರಿದ್ದವರು ಮಂಗ ಉದ್ದೇಶಪೂರ್ವಕವಾಗಿಯೇ ಮಾಲಿಕನ ತಲೆಯ ಮೇಲೆ ತೆಂಗಿನ ಕಾಯಿ ಎಸೆದು ಕೊಲೆ ಮಾಡಿದೆ ಎಂದು ಆರೋಪಿಸಿದ್ದಾರೆ.  ಮೃತನ ಪತ್ನಿ ಮಂಗ ತಮ್ಮೊಂದಿಗೆ ಕಳೆದವರ್ಷದಿಂದಲೂ ಸ್ನೇಹದಿಂದಿದ್ದು ಈಗ ಕೆಲಸದ ಒತ್ತಡ ಅದಕ್ಕೆ ಈರೀತಿ ಮಾಡಲು ಪ್ರೇರೇಪಿಸಿರಬಹುದೆಂದು ತಿಳಿಸಿದ್ದಾರೆ.

ಮಂಗನಿಗೆ ಕೊಲೆ ಆರೋಪ ಹೊರಿಸಲಾಗುತ್ತದೆಯೇ? ಹೊರಿಸಿದರೂ ಯಾವ ಸೆಕ್ಷನ್ ಹಾಕಲಾಗುತ್ತದೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ. ಆದರೆ ಕೊಲೆ ಮಾಡಿದ ಮಾರುತಿ ನಿರಾಳವಾಗಿ ಕುಳಿತಿದೆ.

ಮಂಗಳವಾರ, ಮಾರ್ಚ್ 10, 2009

ಜಾರ್ಜಿಯಾ: ಜೈಲಿನಿಂದ ಆರಾಮವಾಗಿ ಪಾರಾದ, ಮತ್ತೆ ಹಿಂದಿರುಗಿದಾಗ ಸಿಕ್ಕಿಬಿದ್ದ


ಜಾರ್ಜಿಯಾ, ಮಾರ್ಚ್ 10: ಜೈಲಿನಲ್ಲಿ ಕೊಳೆಯುತ್ತಿರುವವರು ತಾವು ಯಾವಾಗ ಜೈಲಿನಿಂದ ಪಾರಾಗುತ್ತೇವೆಯೋ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಆದರೆ ಅಮೇರಿಕಾದ ಜಾರ್ಜಿಯಾ ರಾಜ್ಯದ ವುಡ್ ಬೈನ್ ಎಂಬ ಪಟ್ಟಣದ ಜೈಲೊಂದರಲ್ಲಿ ಕೈದಿಯಾಗಿದ್ದ ಹ್ಯಾರಿ ಜಾಕ್ಸನ್ ಎಂಬ ಇಪ್ಪತ್ತೈದು ವರ್ಷದ ತರುಣನೊಬ್ಬನಿಗೆ ಸಿಗರೇಟು ಸೇದುವ ಹಂಬಲ ತಡೆಯಲಾಗದೇ ಹೇಗೋ ಜೈಲಿನ ಬಂಧನವನ್ನು ಪಾರಾಗಿ ಹೊರಬಂದಿದ್ದ. ಬಂದವ ಸುಮ್ಮನೇ ಪರಾರಿಯಾಗಬಾರದೇ, ಅದುಬಿಟ್ಟು ಸಮೀಪದ ಅಂಗಡಿಗೆ ನುಗ್ಗಿ ಹದಿನಾಲ್ಕು ಪ್ಯಾಕೆಟ್ ಸಿಗರೇಟುಗಳನ್ನು ಕದ್ದು ಮತ್ತೆ ಜೈಲಿಗೇ ವಾಪಸಾದ.  

ಆದರೆ ವಾಪಸ್ಸು ಬರುವಾಗ ಯಾವುದೋ ಘಳಿಗೆಯಲ್ಲಿ ಅಲಾರಾಂ ಹೊಡೆದು ಸುರಕ್ಷಾ ತಂಡದವರ ಕೈಗೆ ಸಿಕ್ಕಿಬಿದ್ದ. ಈತ ಪರಾರಿಯಾಗಿದ್ದು ಹೇಗೆ ಎಂದು ತಲೆಕೆಡಿಸಿಕೊಂಡ ಜೈಲಿನ ಷೆರೀಫ್ ಟಾಮಿ ಗ್ರೆಗರಿ ಈತ ವ್ಯಾಯಾಮಶಾಲೆಯ ಗೋಡೆ ಹತ್ತಿ ಅಲ್ಲಿಂದ ಜೈಲಿನ ಬೇಲಿಯನ್ನು ಹಾರಿ ಬಂದಿದ್ದ ಎಂದು ತಿಳಿಸಿದ್ದಾರೆ. ಈಗ ಹಿಂದಿನ ಶಿಕ್ಷೆಯ ಜೊತೆಗೆ ಜೈಲು ಪಾರಾಗಿ ಹೋದ ಮತ್ತು ಕಳ್ಳತನದ ಅಪಾದನೆಯನ್ನೂ ಜಾಕ್ಸನ್ ಎದುರಿಸಬೇಕಾಗಿದೆ. ಇದಕ್ಕೂ ಮೊದಲು ನಿಯಂತ್ರಿತ ವಸ್ತುವೊಂದನ್ನು ಹೊಂದಿದ್ದ ಮತ್ತು ತರಬೇತಿಯ ಅವಧಿಗೂ ಮುನ್ನ ಓಡಿಹೋದ ಆರೋಪದ ಮೇಲೆ ಜೈಲುಶಿಕ್ಷೆ ಅನುಭವಿಸುತ್ತಿದ್ದ. ಈಗ ಹದಿನಾಲ್ಕು ಪ್ಯಾಕೆಟ್ ಸಿಗರೇಟು ಸೇದಲು ಹೆಚ್ಚು ಸಮಯ ಸಿಗುತ್ತದಂತಾಯಿತು. 

ಕೃಪೆ: ಬಿಬಿಸಿ

ಶುಕ್ರವಾರ, ಮಾರ್ಚ್ 6, 2009

ಬರಲಿದೆ - ಅರೆಪಾರದರ್ಶಕ ಕಾಂಕ್ರೀಟ್


ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್.  ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು.  ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?

ಹಂಗರಿ ದೇಶದ ಆರನ್ ಲೊಸೊನ್ಸ್ಕಿ ಎಂಬುವರು ಸಿಮೆಂಟಿಗೆ ಹಾಗೂ ಜಲ್ಲಿಕಲ್ಲಿಗೆ ಪರ್ಯಾಯವಾದ ಆದರೆ ಅವುಗಳಷ್ಟೇ ಸುದೃಢವಾದ ಸಾಮಾಗ್ರಿಗಳಿಂದ ಅರೆಪಾರದರ್ಶಕ ಕಾಂಕ್ರೀಟನ್ನು ಸಿದ್ಧಪಡಿಸಿದ್ದಾರೆ. ಲಿಟ್ರಾಕಾನ್ (LiTraCon - light transmitting concrete) ಎಂಬ ಹೆಸರಿನ ಈ ಸಾಮಾಗ್ರಿ ಹೊರಗಿನ ಬೆಳಕಿನ ಅರ್ಧದಷ್ಟನ್ನು ತನ್ಮೂಲಕ ಹಾಯಲು ಸಾಧ್ಯವಾಗುವಂತೆ ನಿರ್ಮಿತವಾಗಿದೆ. ಈ ಕಾಂಕ್ರಿಟನ್ನು ಅವರು ಸುಮಾರು ೨೦೦೧ ರಲ್ಲಿಯೇ ಸಿದ್ಧಪಡಿಸಿದ್ದರೂ ಇನ್ನೂ ಹತ್ತು ಹಲವು ಪರೀಕ್ಷೆಗಳ ಕಾರಣದಿಂದಾಗಿ ಮಾರುಕಟ್ಟೆಗೆ ತರುವಲ್ಲಿ ವಿಳಂಬವಾಗಿದೆ.  ಜರ್ಮನಿಯ ಲಿಟ್ರಾಕಾನ್ ಸಂಸ್ಥೆ ಈ ವರ್ಷ ಈ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಅಷ್ಟಕ್ಕೂ ಪಾರದರ್ಶಕ ಕಾಂಕ್ರೀಟ್ ಆಗಿದ್ದರೆ ಪ್ರಯೋಜನವೇನು ಎಂದು ಎಲ್ಲರೂ ಕೇಳುವ ಮೊದಲ ಪ್ರಶ್ನೆ.  ಕಟ್ಟಡ ನಿರ್ಮಾಣದಲ್ಲಿ ಬೆಳಕಿಗೆ ಬಹುಮಹತ್ವ ನೀಡಲಾಗುತ್ತದೆ.  ಬೆಳಕು ಎಲ್ಲೆಡೆ ಸಮಾನವಾಗಿ ಲಭ್ಯವಾಗುವಂತೆ ಕಟ್ಟಡವಿನ್ಯಾಸಕಾರರು ಕಟ್ಟಡಗಳಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕಾಗುತ್ತದೆ.  ಪರಿಣಾಮವಾಗಿ ಕಟ್ಟಡ ಹೆಚ್ಚಿನ ಸ್ಥಳದ ಕಾರಣ ತುಸು ದುಬಾರಿಯಾಗುತ್ತದೆ.  ದೊಡ್ಡ ದೊಡ್ಡ ಕಿಟಕಿಗಳನ್ನು ನೀಡಬೇಕಾಗುತ್ತದೆ.  ಬೆಳಕು ಲಭ್ಯವಿಲ್ಲದೆಡೆ ವಿದ್ಯುತ್ ದೀಪಗಳನ್ನು ಅಳವಡಿಸಿ ಹಗಲಿನಲ್ಲಿಯೂ ವಿದ್ಯುತ್ ಬಳಸಬೇಕಾಗುತ್ತದೆ. 

ಅರೆಪಾರದರ್ಶಕ ಕಾಂಕ್ರೀಟ್ ಬಳಸಿ ನಿರ್ಮಿಸಿದ ಕಟ್ಟಡಗಳಲ್ಲಿ ಸಾಕಷ್ಟು ಮಟ್ಟಿನ ಬೆಳಕು ಗೋಡೆಯಿಂದಲೇ ಲಭ್ಯವಾಗುವುದರಿಂದ ವಿದ್ಯುತ್ ದೀಪ ಉರಿಸುವ ಅಗತ್ಯವಿಲ್ಲ. ಪರಿಣಾಮ ಪೋಲಾಗುತ್ತಿದ್ದ ವಿದ್ಯುತ್ ಗೆ ಶಾಶ್ವತ ಕಡಿವಾಣ.  ದೊಡ್ಡ ದೊಡ್ಡ ಕಿಟಕಿ ರಚಿಸಬೇಕಾಗಿಲ್ಲ. ಬಿಸಿಲನ್ನು ಹೀರದ ಕಾಂಕ್ರೀಟು ಒಳಗಿನ ವಾತಾವರಣವನ್ನು ತಂಪಾಗಿಸಿರುವುದರಿಂದ ಹವಾನಿಯಂತ್ರಣ ಖರ್ಚಿನಲ್ಲೂ ಉಳಿತಾಯ. 

ಕಳೆದ ಸುಮಾರು ಎಂಟು ವರ್ಷಗಳಲ್ಲಿ ಹಲವು ಮಾರ್ಪಾಡುಗಳನ್ನು ಮೂಡಿಸಿಕೊಂಡು ವಿವಿಧ ಬಗೆಗಳಲ್ಲಿ ಲಿಟ್ರಾಕಾನ್ ಈಗ ಅಮೇರಿಕಾದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.  ಕಳೆದ ಜನವರಿ ನ್ಯೂಯಾರ್ಕಿನಲ್ಲಿ ನಡೆದ  ಯುವ ಸಂಶೋಧಕರಿಗೆ ನೀಡಲಾಗುವ Ernst & Young "Innovator" award, 2008 ಪ್ರಶಸ್ತಿಗೂ ಪಾತ್ರರಾಗಿದ್ದಾರೆ.


ಇವರ ಪಾರದರ್ಶಕ ಉತ್ಪನ್ನಗಳ ಪ್ರದರ್ಶನ ನ್ಯೂಯಾರ್ಕ್ ನಗರದ AIA Center for Architecture on exhibition ಸಭಾಂಗಣದಲ್ಲಿ ಜನವರಿ ೨೨ ರಿಂದ ಪ್ರಾರಂಭವಾಗಿದ್ದು ಏಪ್ರಿಲ್ ೨೫ ರ ವರೆಗೂ ನಡೆಯಲಿದೆ.  ಮೇಕ್ ಇಟ್ ವರ್ಕ್ ಎಂಬ ಈ ಅಭಿಯಾನದಲ್ಲಿ ವಿಶ್ವದ ಹಲವು ಇಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲಾತ್ತಿದ್ದು ಪಾರದರ್ಶಕ ಕಾಂಕ್ರೀಟ್ ಗಮನ ಸೆಳೆಯುತ್ತಿದೆ.

ಗುರುವಾರ, ಫೆಬ್ರವರಿ 26, 2009

300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು


ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.  ಮೂರು ಗಾಲಿಗಳನ್ನು ಹೊಂದಿರುವ ಈ ವಾಹನ ಸುಮಾರು 30 ಸಾವಿರ ಡಾಲರ್ ಬೆಲೆಯುಳ್ಳದ್ದಾಗಿದೆ. 2009 ರಲ್ಲಿ ಬಿಡುಗಡೆಯಾಗಲಿರುವ ಟೈಪ್ ೧-ಹೆಚ್ ಎಂದು ತಾತ್ಕಾಲಿಕ ನಾಮಕರಣವಾಗಿರುವ ಈ ಮಾದರಿಯು ಇಬ್ಬರು ಪ್ರಯಾಣಿಸಲು ಅನುಕೂಲಕರವಾಗಿದೆ. ನಾಲ್ಕು ಗಾಲಿಯ ಐವರು ಪ್ರಯಾಣಿಸಬಹುದಾದ ಕಾರಿಗೆ ಪ್ರಾಜೆಕ್ಟ್ ಎಕ್ಸ್ ಎಂದು ಹೆಸರಿಟ್ಟಿದ್ದು ಸಂಸ್ಥೆ ಇನ್ನೂ ಸಂಶೋಧನೆಗಳನ್ನು ನಡೆಸುತ್ತಿದೆ. 

ಇಂಧನ ಕ್ಷಮತೆಯನ್ನೇ ಮುಖ್ಯ ಗುರಿಯನ್ನಾಗಿಸಿ ಈ ಕಾರನ್ನು ನಿರ್ಮಿಸಲಾಗಿದೆ. ಇದರ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಕೊಂಡಿ ಉಪಯೋಗಿಸಿ ವೀಡಿಯೋ ಚಿತ್ರ ವೀಕ್ಷಿಸಬಹುದಾಗಿದೆ.

http://www.popularmechanics.com/automotive/new_cars/4237853.html

ಭಾನುವಾರ, ಫೆಬ್ರವರಿ 22, 2009

ಪವಿತ್ರ ನೀರು: ಇನ್ನು ಮೇಲೆ ಬಾಟಲಿಗಳಲ್ಲಿ ಲಭ್ಯ



ಹಿಂದೂಗಳಿಗೆ ಗಂಗಾಜಲವಿದೆ, ಮುಸ್ಲಿಮರಿಗೆ ಜಮ್ ಜಮ್ ಜಲವಿದೆ. ಅದೇ ಕ್ರಿಶ್ಚಿಯನರಿಗೆ? ಏನೂ ಇಲ್ಲವೆಂದು ಇನ್ನು ಕೊರಗಬೇಕಾಗಿಲ್ಲ. ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಈ ಕೊರಗನ್ನು ನೀಗಿಸಿದೆ. ಮಿನರಲ್ ನೀರು ಅಥವಾ ವಿಟಾಮಿನ್ ನೀರನನ್ನು ಇನ್ನು ಮೇಲೆ ಮರೆತುಬಿಡಿ, -ಪವಿತ್ರ ನೀರು - (Holy Water) ಮಾತ್ರ ಕುಡಿಯಿರಿ ಎಂದು ತನ್ನ ಜಾಹೀರಾತುಗಳಲ್ಲಿ ಪ್ರಚಾರ ನೀಡುತ್ತಿದೆ.


ಬೈಬಲ್ ಹೊಸ ಟೆಸ್ಟಮೆಂಟ್ ಪ್ರಕಾರ ಜಾನ್ ಅವರು ಯೇಸುಕ್ರಿಸ್ತನನ್ನು ಜೋರ್ಡಾನ್ ನದಿಯ ನೀರಿನಿಂದ ದೀಕ್ಷಾಸ್ನಾನ ಮಾಡಿಸಿದ್ದರು. ಬೈಬಲ್ ನಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ  ಪವಿತ್ರ ನೀರನ್ನು ಬಳಸಿದ ಉಲ್ಲೇಖವಿದೆ. ದೀಕ್ಷೆ ಪಡೆದ ಈ ನೀರಿನಿಂದ ಬಳಕೆದಾರನಿಗೆ ನೀರಿನ ಪೂರೈಕೆ ಮಾತ್ರವಲ್ಲ, ಪವಿತ್ರತೆಯ ಅನುಭೂತಿಯನ್ನೂ, ಆರೋಗ್ಯಕ್ಕೆ ಬೇಕಾದ ಲವಣಗಳನ್ನೂ ನೀಡುವುದರಿಂದ ಸಾಧಾರಣ ನೀರಿಗಿಂತ ಭಿನ್ನವಾಗಿದೆ ಎಂದು ಮಾರುಕಟ್ಟೆಯಲ್ಲಿ ಈ ಸಂಸ್ಥೆಗಳು ಪ್ರಚಾರ ನಡೆಸುತ್ತಿವೆ.

ಕ್ಯಾಲಿಫೋರ್ನಿಯಾ ಮೂಲದ ವೇಯ್ನ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯು ಪವಿತ್ರ ಕುಡಿಯುವ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈ ನೀರು ಆಂಗ್ಲಿಕನ್ ಅಥವಾ ರೋಮನ್ ಕ್ಯಾಥೋಲಿಕ್ ಪಾದ್ರಿಯವರಿಂದ ದೀಕ್ಷೆಪಡೆದೆ ಎಂದು ತನ್ನ ಪ್ರಚಾರದಲ್ಲಿ ವಿವರಿಸಿದೆ. ಬೇಕಾದರೆ ಇದನ್ನು ಪರಿಶೀಲಿಸಲೂ ಬಹುದೆಂದು ವಿವರಿಸಿದೆ. ಈ ನೀರನ್ನು ಪ್ರತಿದಿನ ಕುಡಿಯುವುದರಿಂದ ಇತರರಿಗೆ ದಯೆ ಮನ್ನು ಅನುಕಂಪ ತೋರಿಸಲು ಅನುವುಮಾಡಿಕೊಡುತ್ತದೆ ಎಂದು ವೇಯ್ನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಬ್ರಿಯಾನ್ ಜರ್ಮನ್ನ್ ಅವರು ತಿಳಿಸಿದ್ದಾರೆ.


ಲಿಕ್ವಿಡ್ ಓ.ಎಂ. ಎಂಬ ಹೆಸರಿನ ಇನ್ನೊಂದು ಪವಿತ್ರ ನೀರನ್ನು ಮಾರಾಟ ಮಾಡುತ್ತಿರುವ ಸಂಸ್ಥೆಯು ಈ ನೀರಿನಲ್ಲಿ ಧನಾತ್ಮಕ  ದೃಷ್ಟಿಕೋನವನ್ನು ಬಿಂಬಿಸುವ ಕಂಪನಗಳನ್ನು ಹೊಂದಿರುವುದೆಂದು ಪ್ರತಿಪಾದಿಸುತ್ತಿದೆ.  ಈ ನೀರನ್ನು ಚಿಕಾಗೋದ ಶ್ರವಣ ಚಿಕಿತ್ಸಾಕಾರರಾದ ಕೆನ್ನಿ ಮಜ್ರೂಸ್ಕಿ ಎಂಬುವರು ಅಭಿವೃದ್ಧಿಪಡಿಸಿದ್ದಾರೆ.  ಈ ನೀರನ್ನು ಕುಡಿಯುವುದರಿಂದ ಟಿಬೆಟ್ಟಿನಲ್ಲಿ ದೊಡ್ಡ ಘಂಟೆ ಬಾರಿಸಿದಾಗ ಕಂಪನಗಳಿಂದ ಆಗುವ ಅನುಭೂತಿಯೇ ಆಗುವುದೆಂದು ವಿವರಿಸುತ್ತಾರೆ. ಈ ಅನುಭೂತಿಯನ್ನು ಪಡೆಯಲು ನೀರನ್ನು ಕುಡಿಯಲೇ ಬೇಕಾಗಿಲ್ಲ, ಕೇವಲ ಕೈಯಲ್ಲಿ ಹಿಡಿದುಕೊಂಡರೂ ಈ ಕಂಪನಗಳ ಸ್ಪರ್ಶಜ್ಞಾನವನ್ನು ಪಡೆಯಬಹುದಾಗಿದೆ ಎಂದು ಈ ನೀರಿನ ಮಹತ್ವವನ್ನು ವಿವರಿಸುತ್ತಾರೆ.

ಈ ನೀರು ಹತ್ತು ಕ್ರಿಶ್ಚಿಯನ್ ಲೇಬಲ್ಲುಗಳ ಮೂಲಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಉದಾಹರಣೆಗೆ ವರ್ಜಿನ್ ಮೇರಿ ಚಿತ್ರವಿರುವ ನೀರು ನಿಮ್ಮಲ್ಲಿ ನೀವು ಕೇಂದ್ರೀಕೃತವಾಗಿರಿ, ನಿಮ್ಮನ್ನು ನೀವು ಬಲವಾಗಿ ನಂಬಿರಿ, ಮತ್ತು ದೇವರಲ್ಲಿ ನಂಬಿಕೆಯಿಡಿ ಎಂಬ ಹಣೆಪಟ್ಟಿ ಹೊಂದಿದೆ. ಸಧ್ಯಕ್ಕೆ ಮೂರು ಕಂಪನಿಗಳು ಈ ಪವಿತ್ರ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬರುವ ಲಾಭದಲ್ಲಿ ಒಂದು ಅಂಶವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ನೀಡುತ್ತಿವೆ.

ಆದರೆ ಮತವನ್ನಾಧರಿಸಿ ನೀರನ್ನು ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಕ್ರಿಶ್ಚಿಯನ್ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ.

ಬುಧವಾರ, ಫೆಬ್ರವರಿ 18, 2009

ಒಂಟಿತನ: ಧೂಮಪಾನದಷ್ಟೇ ಹಾನಿಕರ - ತಜ್ಞರ ಎಚ್ಚರಿಕೆ


ಒಂಟಿತನ: ಧೂಮಪಾನದಷ್ಟೇ ಹಾನಿಕರ - ತಜ್ಞರ ಎಚ್ಚರಿಕೆ

ಅಮೇರಿಕಾದ ಶಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಒಂಟಿಜೀವನ ಧೂಮಪಾನ ಮಾಡುವಷ್ಟೇ ಕೆಡಕುಗಳನ್ನು ಉಂಟುವಾಡುತ್ತದೆ.  ತಮ್ಮನ್ನು ಜನಸಂಪರ್ಕದಿಂದ ಬೇರ್ಪಡಿಸಿಕೊಂಡು ಹೆಚ್ಚು ಒಂಟಿಯಾಗಿರಬಯಸುವವರಿಗೆ ಹೆಚ್ಚಿದ ರಕ್ತದೊತ್ತಡ ಮತ್ತಿತರ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.  ಹೆಚ್ಚು ಉದ್ವೇಗಗೊಳ್ಳುವಾಗ ಬಿಡುಗಡೆಯಾಗುವ ಕಾರ್ಟಿಸೋಲ್ ಎಂಬ ಹೆಸರಿನ ಹಾರ್ಮೋನ್ ಒಂಟಿಜೀವಿಗಳಲ್ಲೇ ಹೆಚ್ಚು ಕಂಡುಬಂದಿದ್ದು  ಹೆಚ್ಚಿನ ಸ್ರಾವ ಧಡೂತಿತನ ಹಾಗೂ ಆಲ್ಜೀಮರ್ ರೋಗಕ್ಕೆ ಕಾರಣವಾಗಬಲ್ಲದು.

ಪ್ರತಿಕೂಲ ಪರಿಣಾಮಗಳಾಗಿ ನಿದ್ದೆ ಬಾರದ ಹೊತ್ತಿನಲ್ಲಿ ನಿದ್ದೆ ಬರುವುದೂ, ನಿದ್ದೆ ಬರಬೇಕಾದ ಸಮಯದಲ್ಲಿ ಬಾರದಿರುವುದು, ಜೀರ್ಣ ವ್ಯವಸ್ಥೆಯಲ್ಲಿ ಏರುಪೇರು ಹಾಗೂ ಇನ್ನಷ್ಟು ಖಿನ್ನತೆ ಕಂಡುಬರಬಹುದು. ಈ ಗುಣಲಕ್ಷಣಗಳು ಓರ್ವ ಧೂಮಪಾನಿಯಲ್ಲಿ ಕಂಡುಬರುವ ಲಕ್ಷಣಗಳೇ ಆಗಿದ್ದು ಒಂಟಿತನ ಪರೋಕ್ಷವಾಗಿ ಧೂಮಪಾನದಷ್ಟೇ ಕೆಡಕು ಉಂಟುಮಾಡಬಹುದಾಗಿದೆ. 

ಇತ್ತೀಚೆಗೆ ಅಮೇರಿಕಾದ ವಾರ್ಷಿಕ ಸಮ್ಮೇಳನದಲ್ಲಿ ಸಂಶೋಧಕರಾದ ಜಾನ್ ಕ್ಯಾಸಿಯೊಪ್ಪೋ ಈ ವಿವರಗಳನ್ನು ಪ್ರಕಟಿಸಿದ್ದಾರೆ. ಸ್ನೇಹಿತರ, ಬಂಧುಗಳ, ಕುಟುಂಬದ ನಡುವೆ ಬಾಳುವೆ ನಡೆಸುವವರು ಹೆಚ್ಚು ಆರೋಗ್ಯ ಹೊಂದಿರುತ್ತಾರೆ.  ಆದುದರಿಂದ ಆದಷ್ಟು ಮಟ್ಟಿಗೆ ಬಳಗದಲ್ಲಿರಿ ಎಂದು ಸಂಶೋಧಕರು ಕರೆನೀಡಿದ್ದಾರೆ. 

ಕೃಪೆ: ಎನ್.ಬಿ.ಸಿ. ಫಿಲಡೆಲ್ಫಿಯಾ

ಸೋಮವಾರ, ಫೆಬ್ರವರಿ 16, 2009

ಬುಡಾಪೆಸ್ಟ್: 83 ವರ್ಷದ ’ಹಾರುವ ಕಳ್ಳಿ’ ಮತ್ತೊಮ್ಮೆ ಬಂಧನದಲ್ಲಿ


ಬುಡಾಪೆಸ್ಟ್: ಹಂಗೆರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದ ನಿವಾಸಿಯಾಗಿರುವ ಕೋಸ್ಟೋರ್ ಸಾಂಡ್ರೋನ್ ಎಂಬ 83 ವರ್ಷದ ಅಜ್ಜಮ್ಮರಿಗೆ ಕದಿಯುವುದು ಒಂದು ಚಾಳಿ.  ಸುಮಾರು ಆರು ದಶಕಗಳಿಂದ ಹಲವು ಬಾರಿ ಕದ್ದು ಜೈಲು ಅನುಭವಿಸಿರುವ ಇವರು ಕಳೆದ ಗುರುವಾರ ಮತ್ತೊಮ್ಮೆ ಪೋಲೀಸರ ಅತಿಥಿಯಾಗಿದ್ದಾರೆ. ಈ ಬಾರಿ ಬುಡಾಪೆಸ್ಟ್ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಲು ನುಗ್ಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 

ಹಂಗೆರಿಯ ಮಾಧ್ಯಮಗಳು ನೀಡಿರುವ ’ಹಾರುವ ಕಳ್ಳಿ’ (ಫ್ಲೈಯಿಂಗ್ ಗೀಜಿ) ಎಂಬ ಅನ್ವರ್ಥನಾಮ ಇವರಿಗೆ ಅಂಟಿಕೊಂಡಿದ್ದು ಅವರು ಕದ್ದ ಬಳಿಕ ವಿಮಾನಹತ್ತಿ ಪರಾರಿಯಾಗುತ್ತಿದ್ದ ಬಗೆಯ ಮೇಲೆ.  

ಈ ಬಾರಿ ಮಾತ್ರ ಸಿಕ್ಕಬಿದ್ದ ಮೇಲೆ ಬುಡಾಪೆಸ್ಟ್ ನಲ್ಲಿ ವಸತಿ ವಿಪರೀತ ದುಬಾರಿಯಾದುದರಿಂದ ನಗರದ ಹೊರಕ್ಕೆ ಕಡಿಮೆ ಬೆಲೆಯ ವಸತಿಯನ್ನು ಕೊಳ್ಳಲು ಹಣ ಸಂಗ್ರಹಿಸುತ್ತಿದ್ದೆ ಎಂಬ ವಾದ ಮುಂದಿಟ್ಟಿದ್ದಾರೆ.  

ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಜೈಲುವಾಸ ಅನುಭವಿಸಿರುವ ಈ ಅಜ್ಜಮ್ಮ ಈಗ ವಿಮಾನ ಬಿಟ್ಟು ರೈಲು ಹತ್ತಿದ್ದಾರೆ. ಏಕೆಂದರೆ ಹಂಗೆರಿ ಸರ್ಕಾರ ನೀಡಿದ ಸೌಲಭ್ಯದ ಪ್ರಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ಉಚಿತ.

ಭಾನುವಾರ, ಫೆಬ್ರವರಿ 15, 2009

ಅಬುಭಾಬಿ: ನಂ. 5 + ನಂ. 7 =? 12, ಅಲ್ಲ ನಲವತ್ತಾರು ಕೋಟಿ



ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿ ಮಾತ್ರ

ಅಬುಧಾಬಿ, ಫೆಬ್ರವರಿ 14:  ಯು.ಎ.ಇ.ಯಲ್ಲಿ ಒಂದಂಕೆಯ ವಾಹನ ನೋಂದಣೆ ಸಂಖ್ಯೆ ಅತಿಪ್ರಮುಖರಿಗೆ ಮೀಸಲು. ಸಂಖ್ಯೆ ನಂ.1 ಆಯಾ ಸಂಸ್ಥಾನದ ಆಡಳಿತಗಾರಿಗೆ ಮೀಸಲು.  ಉಳಿದ ಅಂಕೆಗಳು ಬೇಕೆಂದರೂ ಅತ್ಯಂತ ದುಬಾರಿ.  ಅಂತ್ಯದಲ್ಲಿ 786 ಬರುವ ಸಂಖ್ಯೆಗಳಿಗೂ ಹೆಚ್ಚಿನ ಬೆಲೆ.  ವಿಶೇಷ ಸಂಖ್ಯೆಗಳನ್ನು ದುಬೈ, ಅಬುಧಾಬಿ ಸರ್ಕಾರಗಳು ಹರಾಜು ಹಾಕುತ್ತಲೇ ಇರುತ್ತವೆ.

ಇತ್ತೀಚೆಗೆ ಅಬುಧಾಬಿಯ ಶ್ರೀಮಂತ ವಾಣಿಜ್ಯೋದಮಿಯಾಗಿರುವ ತಲಾಲ್ ಖೋರಿಯವರು ತಮ್ಮ ಎರೆಡು ರೋಲ್ಸ್ ರಾಯ್ಸ್ ಕಾರುಗಳಿಗೆ ಸಂಖ್ಯೆ ೫ ಹಾಗೂ ಸಂಖ್ಯೆ ೭ ನ್ನು ಕ್ರಮವಾಗಿ ೨೫.೨ ಮಿಲಿಯನ್ ಹಾಗೂ ಹನ್ನೊಂದು ಮಿಲಿಯನ್ ದಿರ್ಹಾಮ್(ಒಟ್ಟು ಮೂವತ್ತಾರು ಮಿಲಿಯನ್ ದಿರ್ಹಾಂ - ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿಗಳು) ನೀಡಿ ಖರೀದಿಸಿದ್ದಾರೆ.  ಈ ಬೆಲೆ ಕಾರಿನ ಬೆಲೆಗಿಂತಲೂ ಹೆಚ್ಚಾಗಿದ್ದು ಒಂದು ವಿಶ್ವದಾಖಲೆಯಾಗಿದೆ.

ಈ ಬೆಲೆಯನ್ನು ಹರಾಜಿನಲ್ಲಿ ಕೂಗಿದಾಗ ಬೇರೆ ಯಾರೂ ಬೆಲೆ ಏರಿಸದಿದ್ದುದರಿಂದ 25.2 ಮಿಲಿಯನ್ ದಿರ್ಹಾಂಗಳಿಗೆ ಮಾರಟವಾಗಿತ್ತೇ ಹೊರತು ಒಂದು ವೇಳೆ ಬೇರೆ ಯಾರಾದರೂ ಸ್ಪರ್ಧಿಗಳಿದ್ದಿದ್ದರೆ ಇದರ ಬೆಲೆ ಐವತ್ತು ಮಿಲಿಯನ್ ನೀಡಲೂ ಖೋರಿ ತಯಾರಾಗಿದ್ದರು.

ಈ ಮೊತ್ತವನ್ನು ಯು.ಎ.ಇ.ಯಲ್ಲಿ ಅಪಘಾತದಲ್ಲಿ ಮಡಿದವರ ಬಂಧುಗಳಿಗೆ ಹಾಗೂ ಗಾಯಗೊಂಡವರಿಗೆ ನೆರವು ನೀಡುವಲ್ಲಿ ಮತ್ತು ವಿಕಲಚೇತನರಿಗೆ ಹೆಚ್ಚಿನ ನೆರವು ನೀಡುವಲ್ಲಿ ಬಳಸಲಾಗುವುದು ಎಂದು ಅಬುಧಾಬಿ ಪೋಲೀಸ್ ಇಲಾಖೆಯ ವಾಹನ ನೋಂದಣೆ ವಿಭಾಗದ ನಿರ್ದೇಶಕರಾದ ಮೇಜರ್ ಸುಹೈಲ್ ಅಲ್ ಖಲೀಲಿಯವರು ತಿಳಿಸಿದ್ದಾರೆ.

ಉಳಿದ ಸಂಖ್ಯೆಗಳ ಹರಾಜು ನಡೆದು ಒಟ್ಟು ಎಪ್ಪತ್ತಾರು ಮಿಲಿಯನ್ ದಿರ್ಹಾಂ (ಸುಮಾರು ತೊಂಭತ್ತೆಂಟು ಕೋಟಿ ರೂಪಾಯಿಗಳು) ಸಂಗ್ರಹವಾಗಿದ್ದು ಎಲ್ಲವೂ ಅಪಘಾತ ಪೀಡಿತರಿಗೆ ಹಾಗೂ ವಿಕಲಚೇತನರಿಗೆ ನೆರವಾಗಲಿದೆ. 

ಮೊದಲು ತನಗೆ 5 ಸಂಖ್ಯೆಯ ಮೇಲೆ ಮೋಹವಿದ್ದಿತ್ತಾದರೂ ಹೆಚ್ಚಿನ ಹಣ ಕೊಟ್ಟು ಕೊಳ್ಳಲೇಬೇಕೆಂಬ ಹಟವಿರಲಿಲ್ಲ. ಆದರೆ ಆ ಹಣದ ಬಳಕೆ ಎಲ್ಲಿ ಆಗಲಿದೆಯೆಂದು ಗೊತ್ತಾದ ಬಳಿಕ ಐವತ್ತು ಮಿಲಿಯನ್ ದಿರ್ಹಾಂವರೆಗೂ ನೀಡಲು ತಾನು ತಯಾರಿದ್ದೆ ಎಂದು ಖೋರಿ ತಿಳಿಸಿದ್ದಾರೆ.

ಉತ್ತಮ ಧ್ಯೇಯವಿದ್ದರೆ ಸಹಾಯ ಎಲ್ಲಿಂದ ಬೇಕಾದರೂ ಬರಬಹುದು ಅಲ್ಲವೇ?

ಶನಿವಾರ, ಫೆಬ್ರವರಿ 14, 2009

ನವದೆಹಲಿ: ಇನ್ಪೋಸಿಸ್ ನಲ್ಲಿದ್ದೀರಾ? ಸಂಜೆ ಏಳರ ಬಳಿಕ ಮೂತ್ರಕ್ಕೆ ನಿಷೇಧವಿದೆ, ಎಚ್ಚರಿಕೆ!


ನವದೆಹಲಿ, ಫೆಬ್ರವರಿ 14: ಜಾಗತಿಕ ಮಹಾಕುಸಿತದ ಪರಿಣಾಮ ಈಗಾಗಲೇ ಹಲವು ಪ್ರಮುಖ ಸಂಸ್ಥೆಗಳು ಅನುಭವಿಸುತ್ತಿವೆ. ಹೆಚ್ಚಿನ ಸಂಸ್ಥೆಗಳು ವೆಚ್ಚದಲ್ಲಿ ಕಡಿತ (ಕಾಸ್ಟ್ ಕಟಿಂಗ್) ಗೊಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಿವೆ. ಅನವಶ್ಯಕ ವಸ್ತುಗಳನ್ನು ಕೊಳ್ಳದಿರುವುದು, ಜಾಹೀರಾತುಗಳ ಸಂಖ್ಯೆಯಲ್ಲಿ ಕಡಿತ, ಫಲಕಾರಿಯಲ್ಲದ ಪ್ರಾಜೆಕ್ಟುಗಳನ್ನು ನಿಲ್ಲಿಸುವುದು ಅಥವಾ ಮುಂದೂಡುವುದು ಮೊದಲಾದವು.


ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿರುವವರಿಗೂ ಹಲವು ನಿಬಂಧನೆಗಳು. ಇವೆಲ್ಲಕ್ಕೂ ವಿಭಿನ್ನವಾಗಿ ಭಾರತದ ಪ್ರಮುಖ ಐಟಿ ಸಂಸ್ಥೆ ಇನ್ಪೋಸಿಸ್ ಒಂದು ವಿಶಿಷ್ಟ ರೀತಿಯ ಕಾಸ್ಟ್ ಕಟಿಂಗ್ ಪ್ರಕಟಿಸಿದೆ. ಈಗ ಸಂಸ್ಥೆಯಲ್ಲಿ ಸಂಜೆ ಏಳರ ಬಳಿಕ ಕಾರ್ಯ ನಿರ್ವಹಿಸುವಂತಿಲ್ಲ. ಅಂದರೆ ತಮ್ಮ ಕೆಲಸಗಳನ್ನು ಮುಗಿಸಲು ಅವರಿಗೆ ಅಂತಿಮ ಗಡುವು ಸಂಜೆ ಏಳು ಘಂಟೆ. ಬಳಿಕ ಶೌಚಾಲಯ ಸಹಿತ ಎಲ್ಲಾ ವಿಭಾಗಗಳನ್ನು ಮುಚ್ಚಲಾಗುವುದು. ಶೌಚಾಲಯದ ಬಳಕೆಯನ್ನು ಕಡಿಮೆಗೊಳಿಸಲು ಸಂಜೆ ನಾಲ್ಕುವರೆಯ ನಂತರ ಕುಡಿಯುವ ನೀರು ಲಭ್ಯವಿರುವುದಿಲ್ಲ. ಅಂದರೆ ಮೂತ್ರಕ್ಕೂ ಒಂದು ತರಹದಲ್ಲಿ ಬಂಧನ.  ಕಾಸ್ಟ್ ಕಟಿಂಗ್ ಹೊಸ ರೂಪವನ್ನು ಮೊನ್ನೆ ಗುರುವಾರದಿಂದ ಇನ್ಫೋಸಿಸ್ ಪ್ರಾರಂಭಿಸಿದೆ. ಸಂಸ್ಥೆಯಲ್ಲಿನ ಲಿಫ್ಟ್ ಬಳಸದೇ ಮೆಟ್ಟಿಲುಗಳನ್ನು ಬಳಸುವಂತೆ ಕರಪತ್ರಗಳನ್ನು ಲಿಫ್ಟ್ ಬಳಿ ಅಂಟಿಸಿದೆ. ಇದಕ್ಕೆ ಮಾತ್ರ ಕಾಸ್ಟ್ ಕಟಿಂಗ್ ಹೆಸರಿಡದೇ ಉದ್ಯೋಗಿಗಳ ಉತ್ತಮ ಆರೋಗ್ಯಕ್ಕಾಗಿ ಎಂದು ವಿವರಿಸಿದೆ.ಮುಂದಿನ ಸಾರಿ ಇನ್ಫೋಸಿಸ್ ಕಛೇರಿಗೆ ಹೋಗುವಾಗ ನಾಲ್ಕುವರೆಯ ಮೊದಲೇ ನೀರು ಕುಡಿಯಲು ಮರೆಯದಿರಿ.

ಕೃಪೆ: ಬಿಸಿನೆಸ್ ಸ್ಟಾಂಡರ್ಡ್

ಶನಿವಾರ, ಫೆಬ್ರವರಿ 7, 2009

ಜಗತ್ತಿನ ಅತ್ಯಂತ ಚಿಕ್ಕ ಕಾರು - ದ ಪೀಲ್ 50

1962 ರಲ್ಲಿ ಪ್ರಸ್ತುತಪಡಿಸಿದ್ದ ಇಂಗ್ಲೆಂಡಿನ ಕಾರೊಂದು ಇಂದಿಗೂ ಜಗತ್ತಿನ ಅತ್ಯಂತ ಕಿರಿಯ ಕಾರೆಂದು ಗಿನ್ನೆಸ್ ದಾಖಲೆಯಲ್ಲಿ ರಾರಾಜಿಸುತ್ತಿದೆ. 

ಇಂದು ಜಗತ್ತಿನ ಹತ್ತು ಹಲವು ಕಾರುನಿರ್ಮಾಣ ಸಂಸ್ಥೆಗಳು ಒಂದಕ್ಕಿಂತ ಒಂದು ಉನ್ನತ ಮಾದರಿಯ ಕಾರುಗಳನ್ನು ತಯಾರಿಸುತ್ತಾ ನಡೆದರೂ ಈ ಕಾರಿಗಿಂತ ಚಿಕ್ಕ ಕಾರನ್ನು ನಿರ್ಮಿಸುವತ್ತ ಏಕೆ ಒಲವು ತೋರಲಿಲ್ಲವೋ ಏನೋ. ಇದೇ ಕಾರಣದಿಂದ ಇಂದಿಗೂ ಈ ಪೀಲ್ - 50 ಕಾರು ಜಗತ್ತಿನ ಅತ್ಯಂತ ಚಿಕ್ಕ ಕಾರೆಂಬ ಹಣೆಪಟ್ಟಿ ಹೊತ್ತಿದೆ.

1950ರ ದಶಕದಲ್ಲಿ ಇಂಗ್ಲೆಂಡಿನ ಪೀಲ್ ಇಂಜಿನಿಯರಿಂಗ್ ಸಂಸ್ಥೆ ಸ್ಥಾಪನೆಯಾಗಿತ್ತು. ಈ ಕಾರಣದಿಂದಲೇ ಈ ಕಾರಿಗೆ ೫೦ರ ವಿಶೇಷಣ ನೀಡಲಾಯಿತು. ಆ ಕಾಲಕ್ಕೆ ಸಂಸ್ಥೆ ಹೊಂದಿದ್ದ ಉದ್ಯೋಗಿಗಳ ಸಂಖ್ಯೆ ಕೇವಲ ನಲವತ್ತು.
ಸಂಸ್ಥೆಯ ಅಭಿಯಂತರರಾದ ಸಿರಿಲ್ ಕ್ಯಾನೆಲ್ ಮತ್ತು ಹೆನ್ರಿ ಕಿಸ್ಸಾಕ್ ಎಂಬಿಬ್ಬರು ವಿನ್ಯಾಸಗೊಳಿಸಿದ ಈ ಕಾರನ್ನು 1962 ರ ಅರ್ಲ್ಸ್ ಕೋರ್ಟ್ ಮೋಟಾರ್ ಶೋ ಪ್ರದರ್ಶನದಲ್ಲಿ ಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಲಾಯಿತು. ಆ ಬಳಿಕ ಅದಕ್ಕೆ ಅರ್ಹ ಗಿನ್ನೆಸ್ ದಾಖಲೆಯೂ ಸಿಕ್ಕಿತು.

ಮೂರು ಚಕ್ರಗಳ ಈ ವಾಹನವನ್ನು ಕಾರೆಂದು ಕರೆಯುವುದಕ್ಕಿಂತ ಕಾರಿನಾಕಾರ ಪಡೆದಿರುವ ಮೋಟಾರ್ ಸೈಕಲ್ ಎಂದರೇ ಹೆಚ್ಚು ಸೂಕ್ತ. ಮೋಟಾರ್ ಸೈಕಲ್ ಮೈಲೇಜ್ ಹಾಗೂ ಕಾರಿನ ಅನುಕೂಲತೆಗಳನ್ನು ಹೊಂದಿರುವ ವಾಹನವಾಗಿ ಮಾರ್ಪಟ್ಟ ಪೀಲ್-50 ನೀಡುವ ಮೈಲೇಜ್ ನೂರು ಮೈಲಿ ಪ್ರತಿ ಗ್ಯಾಲನ್ (ಅಂದರೆ ಸುಮಾರು ಮೂವತ್ತೈದುವರೆ ಕಿ.ಮೀ. ಪ್ರತಿ ಲೀಟರ್ ಪೆಟ್ರೋಲಿಗೆ). ಒಬ್ಬರು ಮಾತ್ರ ಪ್ರಯಾಣಿಸಬಹುದಾದ ಕಾರಿನ ಅಂದಿನ ಬೆಲೆ ಕೇವಲ ಇನ್ನೂರು ಪೌಂಡ್. ಐವತ್ತು ಸೀಸಿ ಇಂಜಿನ್ ಉಳ್ಳ ಕಾರಿನ ಗರಿಷ್ಟ ವೇಗ 61 ಕಿ.ಮೀ. ಪ್ರತಿ ಘಂಟೆಗೆ. ಆ ಕಾಲಕ್ಕೆ ಸುಮಾರು ಐವತ್ತು ಕಾರುಗಳನ್ನು ಮಾತ್ರ ಉತ್ಪಾದಿಸಲಾಗಿದ್ದು ಅವುಗಳಲ್ಲಿ ಇಪ್ಪತ್ತು ಇಂದಿಗೂ ಸುಸ್ಥಿತಿಯಲ್ಲಿವೆ. ಇಂದು ಇವುಗಳ ಬೆಲೆ ಐವತ್ತು ಸಾವಿರ ಪೌಂಡ್(ಸುಮಾರು ಮೂವತ್ತು ಲಕ್ಷ ರೂಪಾಯಿಗಳು).

ಇಂಗ್ಲೆಂಡಿನ ನಾರ್ಟಿಂಗ್ ಹಾಮ್ ನ ಆಂಡಿ ಕಾರ್ಟರ್ ಸಂಸ್ಥೆ ಈ ಕಾರುಗಳ ಮರುನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದು ಹತ್ತು ಸಾವಿರ ಪೌಂಡ್ ಬೆಲೆ ಹೊಂದಿದೆ. ಕೇವಲ ಮೂರು ಗೇರುಗಳ ಈ ಕಾರಿಗೆ ಹಿಂದೆ ಹೋಗಲು ರಿವರ್ಸ್ ಗೇರೇ ಇಲ್ಲ. ಹಗುರವಾದ ಈ ಕಾರನ್ನು ಸ್ಕೂಟರಿನಂತೆ ತಳ್ಳಿಕೊಂಡೇ ರಿವರ್ಸ್ ತೆಗೆಯುವುದು ಸುಲಭವಾಗಿದೆ.

ಕಾರಿನ ಸೊಬಗಿಗಿಂತಲೂ ಅತಿ ಚಿಕ್ಕ ಕಾರೆಂಬ ಖ್ಯಾತಿಯೇ ಈ ಕಾರಿನ ಗರಿಮೆಯಾಗಿದೆ. ಬ್ರಿಟನ್ನಿನ ಅಂಚೆ ಇಲಾಖೆ ಹಲವು ಅಂಚೆಚೀಟಿಗಳಲ್ಲಿ ಈ ಕಾರಿನ ವಿವಿಧ ಮಾದರಿಯ ಚಿತ್ರಗಳನ್ನು ಮುದ್ರಿಸಿ ಹೆಚ್ಚಿನ ಖ್ಯಾತಿ ತಂದುಕೊಟ್ಟಿದೆ.





ಬುಧವಾರ, ಫೆಬ್ರವರಿ 4, 2009

ಅರವತ್ತು ವರ್ಷಗಳ ಕಾಲ ಸತ್ತ ಭ್ರೂಣವನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92ರ ವೃದ್ಧೆ



1948 ರಲ್ಲಿ ಗರ್ಭದಲ್ಲಿಯೇ ಸತ್ತ ಭ್ರೂಣವೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ವರ್ಷದ ಚೀನೀ ವೃದ್ಧೆಯೊಬ್ಬರ ಕಥೆ ಬೆಳಕಿಗೆ ಬಂದಿದೆ.

ಲಂಡನ್ನಿನ ಕಿಂಗ್ಸ್‍ಟನ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಲಿಯು ಅನ್ಬಿನ್ ಅವರ ಕ್ಲಿನಿಕ್ಕಿಗೆ ಜನವರಿ ಮೊದಲ ವಾರದಲ್ಲಿ ಹುವಾಂಗ್ ಯಿಜುನ್ ಹುವಾಂಗ್ಜಿಯೋಟನ್ ಎಂಬ 92 ವರ್ಷದ ಚೀನೀ ವೃದ್ಧೆಯೊಬ್ಬರು ಹೊಟ್ಟೆನೋವು ಎಂದು ಹೇಳಿಕೊಂಡು ಚಿಕಿತ್ಸೆಗಾಗಿ ಬಂದಿದ್ದರು.  ಮನೆಗೆಲಸದ ಯಾವುದೋ ಘಳಿಗೆಯಲ್ಲಿ ಪೆಟ್ಟಾಗಿ ನೋವು ತಡೆಯಲಾಗದೇ ಆಕೆ ವೈದ್ಯರಲ್ಲಿ ಬಂದಿದ್ದರು.  ಆಕೆಯ ಉಬ್ಬಿದ್ದ ಹೊಟ್ಟೆಯನ್ನು ವೈದ್ಯರು ಸ್ಕ್ಯಾನ್ ಉಪಕರಣದಿಂದ ಪರಿಶೀಲಿಸಿದ ವೈದ್ಯರು ಅವಾಕ್ಕಾದರು.  ಆಕೆಯ ಹೊಟ್ಟೆಯಲ್ಲಿ ಸಂಪೂರ್ಣವಾಗಿ ಬೆಳೆದ ಆದರೆ ಸತ್ತ ಭ್ರೂಣವಿತ್ತು.  ತಮ್ಮ ಕಣ್ಣನ್ನು ನಂಬಲಾಗದೇ ಡಾ. ಅನ್ಬಿನ್ ಎರೆಡು ಮೂರು ಸಲ ಸ್ಕ್ಯಾನ್ ಮಾಡಿ ತಮ್ಮ ಸಹೋದ್ಯೋಗಿಗಳೊಂದಿಗೆ ಪರಾಮರ್ಶಿಸಿ ತಮ್ಮ ತಪಾಸಣೆಯನ್ನು ಖಚಿತಪಡಿಸಿಕೊಂಡರು.  

ಆ ಬಳಿಕ ಆಕೆಯನ್ನು ಪ್ರಶ್ನಿಸಿದವರಿಗೆ ಆಕೆ ಹೇಳಿದ ಕಥೆ ಹೃದಯ ವಿದ್ರಾವಕವಾಗಿತ್ತು. ಸುಮಾರು ಅರವತ್ತು ವರ್ಷಗಳ ಹಿಂದೆ ಉತ್ತಮ ಜೀವನ ಅರಸಿ ಲಂಡನ್ನಿಗೆ ಬಂದು ಅಲ್ಲಿನ ನಿವಾಸಿಗಳಾದ ಆಕೆಯ ಜೀವನ ಕಷ್ಟಕರವಾಗಿಯೇ ಸಾಗಿತ್ತು. 1948ರಲ್ಲಿ  ಆಕೆ ಗರ್ಭ ಧರಿಸಿದ ಸುಮಾರು ಎಂಟು  ತಿಂಗಳಿಗೇ ಗರ್ಭದೊಳಗಿನ ಮಗು ಸತ್ತಿತ್ತು. ಆದರೆ ಶಸ್ತ್ರಕ್ರಿಯೆ ನಡೆಸಿ ಸತ್ತಭ್ರೂಣವನ್ನು ಹೊರತೆಗೆಯಲು ವೈದ್ಯರು ನೂರು ಪೌಂಡ್ (ಸುಮಾರು ಏಳು ಸಾವಿರ ರೂಪಾಯಿ) ಚಿಕಿತ್ಸಾವೆಚ್ಚವನ್ನು ಕೇಳಿದ್ದರು.  ಆಗಿನ ಕಾಲಕ್ಕೆ ನೂರು ಪೌಂಡ್ ಎಂದರೆ ಇಡಿಯ ಕುಟುಂಬ ಹಲವು ವರ್ಷಗಳ ಕಾಲ ಕೆಲಸ ಮಾಡಿದರೂ ಒಟ್ಟು ಮಾಡಲಸಾಧ್ಯವಾದ ಮೊತ್ತವಾಗಿತ್ತು.  ಆದ್ದರಿಂದ ನಿರ್ವಾಹವಿಲ್ಲದೇ ಅದನ್ನು ತೆಗೆಸದೇ ದೇವರ ಮೇಲೆ ಭಾರ ಹಾಕಿ ಹಾಗೆಯೇ ಬಿಟ್ಟರು.  ಸುಮಾರು ನಲವತ್ತು ವರ್ಷದವರೆಗೂ ಯಾರಿಗೂ ಈ ವಿಷಯ ಹೇಳದ ಆಕೆಯ  ಹೊಟ್ಟೆಯಲ್ಲಿ ಯಾವುದೋ ಗಡ್ಡೆಯಿದೆ ಎಂದೇ ಎಲ್ಲರೂ ನಂಬಿದ್ದರು.

ಆದರೆ ಕಳೆದ ವಾರದ ಸ್ಕ್ಯಾನ್ ಬಳಿಕ ನಿಜವಿಷಯವನ್ನು ಆಕೆ ಸನ್ ಪತ್ರಿಕೆಯ ವರದಿಗಾರರಿಗೆ ತಿಳಿಸಿದ್ದಾರೆ.  ಸಾಧಾರಣವಾಗಿ ಭ್ರೂಣ ಹೊಟ್ಟೆಯಲ್ಲಿಯೇ ಸತ್ತರೆ ಕಾಲಕ್ರಮೇಣ ಕರಗಿ ಹೋಗುತ್ತದೆ. ಆದರೆ ನಲವತ್ತು ವರ್ಷಗಳ ಬಳಿಕವೂ ಅದೇ ಅವಸ್ಥೆಯಲ್ಲಿರುವುದು ಒಂದು ವಿಚಿತ್ರವಾಗಿದೆ ಎಂದು ಕಿಂಗ್ಸ್ ಟನ್ ಆಸ್ಪತ್ರೆಯ ಗೈನಕಾಲಜಿ ವಿಭಾಗದ ನಿರ್ದೇಶಕರಾಗಿರುವ ಡಾ. ಕ್ಸು. ಕ್ಸಿಯಾಮಿಂಗ್ ತಿಳಿಸಿದ್ದಾರೆ.  ಈ ಗರ್ಭವನ್ನು ಹೇಗೆ ಮತ್ತು ಯಾವಾಗ ತೆಗೆಯಬೇಕೆಂದು ನಿಪುಣ ವೈದ್ಯರ ತಂಡ ಸಮಾಲೋಚಿಸುತ್ತಿದೆ. ಶೀಘ್ರದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಯಲಿದೆ.  

ಅರವತ್ತು ವರ್ಷಗಳ ಕಾಲ ಗರ್ಭಿಣಿಯಾಗಿದ್ದ 92 ರ ವೃದ್ಧೆ ಹುವಾಂಗ್ ಯಿಜುನ್ ಹುವಾಂಗ್ಜಿಯೋಟನ್

ಮಂಗಳವಾರ, ಫೆಬ್ರವರಿ 3, 2009

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ


ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ.  ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ ಹೆಚ್ಚು ಬಾಳಿಕೆ ಬರುತ್ತವೆಂದೂ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆದರೆ ಈ ಸಿ.ಎಫ್. ಎಲ್ ಗಳು ನಮ್ಮ ಹಳೆಯ ಟ್ಯೂಬ್ ಲೈಟಿನ ಹೃಸ್ವಸ್ವರೂಪವೇ ಹೊರತು ತಂತ್ರಜ್ಞಾನದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ನಿಜಕ್ಕೂ ಈ ಟ್ಯೂಬ್ ಲೈಟ್ ಹಾಗೂ ಸಿ.ಎಫ್.ಎಲ್ ಗಳು ನೀಡುವ ಬೆಳಕು ಕಂಪಿಸುವ ಬೆಳಕು (ಅಂದರೆ ಪ್ರಖರತೆಯಲ್ಲಿ ಏರುಪೇರು). ಆದರೆ ಈ ಕಂಪನ ನಮ್ಮ ವಿದ್ಯುತ್ ಸರಬರಾಜಿನ ಫ್ರೀಕ್ವೆನ್ಸಿ (50 ಹರ್ಟ್ಸ್) ಅಂದರೆ ಸೆಕೆಂಡಿಗೆ ಐವತ್ತು ಬಾರಿ ಇರುವುದರಿಂದ ನಮ್ಮ ಕಣ್ಣು ಅದನ್ನು ಗುರುತಿಸಲು ಅಸಮರ್ಥವಾಗುತ್ತದೆ. ಹಾಗಾಗಿ ನಮಗೆ ಏರುಪೇರಿಲ್ಲದ ಬೆಳಕಿನಂತೆ ಕಂಡುಬರುತ್ತದೆ. ಆದರೆ ಕಾಲಕ್ರಮೇಣ ಸಿ.ಎಫ್. ಅಲ್ ಅಥವಾ ಟ್ಯೂಬ್ ಲೈಟ್ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ, ಬಳಿಕ ಏರುಪೇರು ಇನ್ನಷ್ಟು ಹೆಚ್ಚಾಗುತ್ತದೆ (ಫ್ಲಿಕರಿಂಗ್). 

ಇದಕ್ಕೆ ಪರ್ಯಾಯವಾಗಿ ಬೆಳಕನ್ನು ಸೂಸುವ ಇನ್ನೊಂದು ವಸ್ತು ನಮ್ಮ ಜೀವನದಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ, ಅದೇ ಎಲ್.ಇ.ಡಿ. (ಲೈಟ್ ಎಮಿಟಿಂಗ್ ಡಯೋಡ್).  ಈ ಎಲ್.ಇ.ಡಿ. ಗೂ ಸುಮಾರು ಮೂವತ್ತು ವರ್ಷವೇ ಆಯಿತು. ಇದು ಸೂಸುವ ಬೆಳಕು ಅಪ್ಪಟವಾದದ್ದು, ಅಂದರೆ ಯಾವುದೇ ಏರುಪೇರಿಲ್ಲದಿರುವುದು.  ಇದು ಮೊಬೈಲ್, ಸೈಕಲ್ ಲೈಟ್, ಟಾರ್ಚ್ ಮೊದಲಾದ ದಿನಬಳಕೆಯ ವಸ್ತುಗಳಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹಲವು ಬಸ್ಸುಗಳ ದೇವರ ಫೋಟೋಗಳ ಮುಂದೆ ಕೆಂಪು ಮತ್ತು ಹಸಿರು ಬಣ್ಣಗಳ ಬದಲಾಗುತ್ತಿರುವ ಫ್ಲಿಪ್ ಫ್ಲಾಪ್ ರೂಪದಲ್ಲಿ ಸೇವೆ ನೀಡುತ್ತಾ ಬಂದು ದಶಕಗಳೇ ಕಳೆದಿವೆ.

ಈಗ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಎಲ್.ಇ.ಡಿ.ಗೆ ಹೆಚ್ಚಿನ ಸಾಮರ್ಥ್ಯ ಒದಗಿಸುವತ್ತ ತಮ್ಮ ಗಮನ ಹರಿಸಿದ್ದಾರೆ. ಹಿಂದಿನ ಎಲ್.ಇ.ಡಿ.ಯಲ್ಲಿ ಗ್ಯಾಲಿಯಂ ನೈಟ್ರೈಡ್ ಎಂಬ ಸೆಮಿಕಂಡಕ್ಟರ್ ಮುಖ್ಯ ವಸ್ತುವಾಗಿತ್ತು. ದುಬಾರಿಯಾದ ಈ ವಸ್ತುವನ್ನು ಉಪಯೋಗಿಸಿ ಸುಮಾರು ನೂರು ವ್ಯಾಟ್ ಬಲ್ಬ್ ನೀಡುವ ಬೆಳಕನ್ನು ಸೂಸುವ ಸಾಮರ್ಥ್ಯಕ್ಕೆ ಸಿದ್ಧಪಡಿಸಬೇಕಾದರೆ ಪ್ರತಿ ಬಲ್ಬ್ ಗೆ ಸುಮಾರು ಮೂವತ್ತು ಡಾಲರ್ (ಸುಮಾರು ಸಾವಿರದ ಮುನ್ನೂರೈವತ್ತು ರೂಪಾಯಿ) ಬೆಲೆಯಾಗುತ್ತಿತ್ತು. (ಇದು ಉತ್ಪಾದನಾ ವೆಚ್ಚ, ಮಾರುಕಟ್ಟೆಗೆ ಬರಬೇಕಾದರೆ ಎರೆಡು ಸಾವಿರವಾಗಬಹುದು).

ಈ ನಿಟ್ಟಿನಲ್ಲಿ ಹೊಸ ಎಲ್.ಇ.ಡಿ ಯನ್ನು ಅವರು ಪ್ರಸ್ತುತಪಡಿಸಿದ್ದು ಅದರಲ್ಲಿ ಅತಿ ಕಡಿಮೆ ವೆಚ್ಚದ ಸಫೈರ್ ಹಾಳೆಗಳನ್ನು ಬಳಸಲಾಗಿದೆ.  ಈ ಸಫೈರ್ ಹಾಳೆಗಳನ್ನು ಬಳಸಿ ಉತ್ಪಾದಿಸಲಾದ ಸೆಮಿಕಂಡಕ್ಟರ್ ಎಲ್.ಇ.ಡಿ. ಹಿಂದಿನ ಗ್ಯಾಲಿಯಂ ನೈಟ್ರೈಡ್ ಎಲ್.ಇ.ಡಿ ಗಿಂತಲೂ ಹೆಚ್ಚು ಸಾಮರ್ಥ್ಯ ಹಾಗೂ ಅದಕ್ಕಿಂತಲೂ 75 % ಕಡಿಮೆ ಬೆಲೆ ಹೊಂದಿದೆ. ಅಂದರೆ ಸುಮಾರು ಮುನ್ನೂರೈವತ್ತು ರೂಪಾಯಿಗೆ ನೂರು ವ್ಯಾಟ್ ಬೆಳಕು ಸೂಸುವ ಬಲ್ಬಿನ ಬಾಳಿಕೆ ಒಂದು ಲಕ್ಷ ಘಂಟೆಗಳು! ಅಂದರೆ ಸುಮಾರು ಅರವತ್ತು ವರ್ಷಗಳು. ಅಪ್ಪಟ ಬಿಳಿಯ ಬೆಳಕು ನೀಡುವ ಬಲ್ಬ್ ಉಪಯೋಗಿಸುವ ವಿದ್ಯುತ್ ಸಹಾ ಒಂದು ಟ್ಯೂಬ್ ಲೈಟ್ ಉಪಯೋಗಿಸುವ 10% ಅಂದರೆ ವಿದ್ಯುತ್ ಬಿಲ್ ನಲ್ಲಿ ಶೇಖಡಾ 90 ನೇರ ಉಳಿತಾಯ.  ಒಮ್ಮೆ ಬಲ್ಬ್ ಅಳವಡಿಸಿದರೆ ಮುಂದಿನ ಅರವತ್ತು ವರ್ಷ ಬದಲಿಸಬೇಕಾದ ಅಗತ್ಯವಿಲ್ಲವಾದ್ದರಿಂದ ಪ್ರತಿವರ್ಷದ ಟ್ಯೂಬ್ ಲೈಟ್ ಗೆ ಗುಡ್ ಬೈ. ಅಂದರೆ ಅರವತ್ತು ವರ್ಷಗಳಲ್ಲಿ ಎಷ್ಟು ಟ್ಯೂಬ್ ಲೈಟ್ ಹಣ ಉಳಿತಾಯವಾಗಬಹುದು ಲೆಕ್ಕ ಹಾಕಿ. ಹೆಚ್ಚೂಕಡಿಮೆ ಶಾಖರಹಿತವಾದ ಬೆಳಕು, ಚಿಕ್ಕದಾದ ಗಾತ್ರ ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾದ ಸ್ವಾತಂತ್ಯ ನೀಡುತ್ತದೆ.  ಒಮ್ಮೆ ಮಾರುಕಟ್ಟೆಗೆ ಬಂದರೆ ಇದು ಇಂದು ನಮ್ಮ ಮನೆ, ಕಛೇರಿಗಳಲ್ಲಿ ಹಾಸುಹೊಕ್ಕಾಗಿರುವ ಟ್ಯೂಬ್ ಲೈಟ್, ಬಲ್ಬ್, ಹ್ಯಾಲೋಜನ್ ಲೈಟ್ ಮೊದಲಾದವುಗಳನ್ನು ನೇಪಥ್ಯಕ್ಕೆ ಸರಿಸುವುದರಲ್ಲಿ ಅನುಮಾನವಿಲ್ಲ. 

ಈ ವಿಷಯವನ್ನು ಮೊನ್ನೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನಡೆಯುವ ಸಂಸ್ಥೆ-ಆರ್.ಎಫ್.ಎಮ್.ಡಿ. - ಯ ನಿರ್ದೇಶಕರಾದ ಪ್ರೊಫೆಸರ್ ಕಾಲಿನ್ ಹಂಫ್ರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  

ಎಲ್ಲರ ಕುತೂಹಲ ಕೆರಳಿಸಿರುವ ಅರವತ್ತು ವರ್ಷ ಬಾಳಿಕೆ ಬಾಳುವ ಬಲ್ಬ್ ಆದಷ್ಟು ಶೀಘ್ರ ನಮ್ಮ ಮನೆಗಳಲ್ಲೂ ಬರುವಂತಾಗಲಿ ಎಂದು ಹಾರೈಸೋಣ. 

ಸೋಮವಾರ, ಫೆಬ್ರವರಿ 2, 2009

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?








ವಿಭಿನ್ನವಾಗಿ ಕಾಣುವ ಈ ವಾಹನವನ್ನು ವಿಶೇಷವಾಗಿ ಸೌತೆಕಾಯಿ ಕೊಯ್ಲಿಗೆಂದೇ ನಿರ್ಮಿಸಲಾಗಿದೆ.  












ಬೆಲಾರಸ್, ರಷ್ಯಾ ಹಾಗೂ ಪೂರ್ವ ಯೋರೋಪ್ ನಡುವಣ ಒಂದು ರಾಷ್ಟ್ರ. ಇಲ್ಲಿನ ಮರಳು ಮಿಶ್ರಿತ ಮಣ್ಣು ಸೌತೆಬೆಳೆಗೆ ಅತ್ಯಂತ ಸೂಕ್ತ. ಅಂತೆಯೇ ಬೆಳೆಯುವ ಬೆಳೆಯ ಪ್ರಮಾಣವೂ ಆಗಾಧ.  ಆದರೆ ಒಮ್ಮೆಲೇ ಕಟಾವಿಗೆ ಬರುವ ಬೆಳೆಯನ್ನು ಸೂಕ್ತಕಾಲದಲ್ಲಿ ಕೀಳದೇ ಇದ್ದರೆ ಸೌತೆಕಾಯಿ ಬಲಿತು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುವ ಸಾಧ್ಯತೆ.  ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡದ್ದೇ ಈ ಟ್ರಾಲಿ. 

ಸುಮಾರು ನೂರು ವರ್ಷಗಳ ಹಿಂದೆ ಮರದಲ್ಲಿ ಮಾಡಿದ ಟ್ರಾಲಿ ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಬಂದು ಇಂದು ಈ ರೂಪ ಪಡೆದಿದೆ.

ಸುಮಾರು ಹತ್ತರಿಂದ ಹನ್ನೆರೆಡು ಜನರು ತಮ್ಮ ಹೊಟ್ಟೆಯ ಮೇಲೆ ಮಲಗಿ ಸೌತೆಕಾಯಿ ಕಟಾವು ಮಾಡಬಹುದಾದ ಈ ಟ್ರಾಲಿಯನ್ನು ಒಂದು ಟ್ರಾಕ್ಟರ್  ನಿಧಾನಗತಿಯಲ್ಲಿ ಮುಂದೆ ಎಳೆಯುತ್ತದೆ. ಟ್ರಾಲಿಯ ಅಗತ್ಯವಿಲ್ಲದೇ ಕಟಾವು ನಡೆಸಬಹುದಾದರೂ  ಪ್ರತಿಬಾರಿಯೂ ಬಗ್ಗಿ ಕೆಲಸ ಮಾಡಬೇಕಾಗಿರುವುದರಿಂದ ಕೆಲಸವೂ ಹೆಚ್ಚು, ಆಯಾಸವೂ ಹೆಚ್ಚು.  ಅದೇ ಮಲಗಿಕೊಂಡು ಕೆಲಸ ಮಾಡುವುದರಿಂದ ಈ ಎರೆಡೂ ಕಷ್ಟಗಳಿಂದ ಬಿಡುಗಡೆ, ಶೀಘ್ರಕಾಲದಲ್ಲಿ ಹೆಚ್ಚಿನ ಕಟಾವು ಸಾಧ್ಯ.  ಕಿತ್ತ ಬೆಳೆಯನ್ನು ಮುಂದಿರುವ ಚಲಿಸುವ ಬೆಲ್ಟ್ ಮೇಲಿಟ್ಟರೆ ಸಾಕು ಅದು ಬೆಲ್ಟ್ ಮೇಲೆ ಸಾಗಿ ನಡುಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ.  

ಈ ರೀತಿಯಲ್ಲಿ ಸುಲಭವಾಗಿ, ಕ್ಷಿಪ್ರಸಮಯದಲ್ಲಿ ಹೆಚ್ಚಿನ ಬೆಳೆಯನ್ನು ಕಟಾವು ಮಾಡಬಹುದಾಗಿದೆ.  ಬೆಲಾರಸ್ ದೇಶದಲ್ಲಿ ಸೌತೆಕಾಯಿ ಮಾತ್ರವಲ್ಲದೇ ಶುಗರ್ ಬೀಟ್ (ಸಕ್ಕರೆ ತಯಾರಿಸಬಹುದಾದ ಬೀಟ್ ರೂಟ್ ಗಡ್ಡೆ), ಆಲುಗೆಡ್ಡೆ ಮೊದಲಾದ ಬೆಳೆಗಳನ್ನೂ ಕಟಾವು ಮಾಡಲಾಗುತ್ತದೆ.  

ಬೆಲಾರಸ್ ಬಿಟ್ಟರೆ ಈ ರೀತಿಯ ಕಟಾವು ಮಾಡುವ ಇನ್ನೊಂದು ರಾಷ್ಟ್ರವೆಂದರೆ ಕೆನಡಾ.  ಆದರೆ ಅಲ್ಲಿ ಯಾಂತ್ರೀಕೃತ ಕಟಾವು ವ್ಯವಸ್ಥೆ ಬಂದ ಮೇಲೆ ಸಾಂಪ್ರಾದಾಯಿಕ ವಿಧಾನ ಮೂಲೆಗುಂಪಾಗಿದೆ.

ಕೃಪೆ:  www.odditycentral.com


ಶುಕ್ರವಾರ, ಜನವರಿ 30, 2009

ಮನಃಶಕ್ತಿಯಿಂದ ವಸ್ತುಗಳನ್ನೆತ್ತಬಲ್ಲ ಮಿರೋಸ್ಲಾವ್ ಮಗೋಲಾ

ಮನಃಶಕ್ತಿ, ಅಥವಾ ಮನಸ್ಸಿನ ಶಕ್ತಿಯಿಂದ ವಸ್ತುಗಳನ್ನು ಚಲಿಸಲು ಸಾಧ್ಯವೇ?  ಪುರಾಣಗಳಲ್ಲಿ ಮಾತ್ರ ಕೇಳಿದ್ದ ಈ ವಿದ್ಯಮಾನ ಈಗ ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವವರಿಗೆ ಸಿದ್ದಿಸಿದೆ.  
ಪೋಲ್ಯಾಂಡಿನ ಐವತ್ತು ವರ್ಷ ವಯಸ್ಸಿನ ಮಿರೋಸ್ಲಾವ್ ಅವರು ಕೇವಲ ಮನಸ್ಸಿನ ಶಕ್ತಿಯಿಂದಲೇ ವಸ್ತುಗಳನ್ನು ಮೇಲೆತ್ತಬಲ್ಲರು. ಅವರು ಮುಟ್ಟಿದ ವಸ್ತು ಆಯಸ್ಕಾಂತಕ್ಕೆ ಅಂಟಿಕೊಂಡು ಬರುವಂತಹ ಕಬ್ಬಿಣದ ತುಂಡಿನಂತೆಯೇ ಸರಾಗವಾಗಿ ಮೇಲೆದ್ದು ಬರಬಲ್ಲದು.  ಈ ಕಾರಣದಿಂದಾಗಿಯೇ ಅವರಿಗೆ ಮ್ಯಾಗ್ನೆಟಿಕ್ ಮ್ಯಾನ್ ಅಥವಾ ಆಯಸ್ಕಾಂತ ಮನುಷ್ಯ ಎಂಬ ಅನ್ವರ್ಥನಾಮವೂ ಬಂದಿದೆ.
ಪ್ರತಿ ಮನುಷ್ಯನಲ್ಲಿಯೂ ಒಂದು ವಿಧವಾದ ಆಯಸ್ಕಾಂತೀಯ ಶಕ್ತಿಯಿದೆ ಆದರೆ ಅದು ಒಂದೆಡೆ ಕೇಂದ್ರ್‍ಈಕೃತವಾಗದೆ ಹರಡಿ ಹೋಗಿರುವುದರಿಂದ ನಾವು ಅದರ ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಆದರೆ ಕೊಂಚ ಪ್ರಯತ್ನದ ಬಳಿಕ ಈ ಶಕ್ತಿಯನ್ನು ಕೇಂದ್ರ್‍ಈಕರಿಸಲು ಸಾಧ್ಯವಾದರೆ ಪವಾಡಗಳನ್ನೇ ಸೃಷ್ಟಿಸಬಹುದು ಎಂದು ಮಿರೋಸ್ಲಾವ್ ಹೇಳುತ್ತಾರೆ.

ಇವರ ಶಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ ಹಲವಾರು ವೈದ್ಯರು, ಮನಃಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಇದರಲ್ಲಿ ಯಾವುದೇ ಬೂಟಾಟಿಕೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.  ಇವರು ಬಳಸುವ ಶಕ್ತಿಗೆ ಸೈಕೋ ಕೈನೆಸಿಸ್ psycho kinesis ಎಂಬ ಕರೆಯಲಾಗುತ್ತದೆ.  

ತಮ್ಮ ಶಕ್ತಿಯಿಂದ ಅವರು ಕಬ್ಬಿಣ, ಮಾರ್ಬಲ್, ಸೆರಾಮಿಕ್, ಮೊದಲಾದವುಗಳಿಂದ ತಯಾರಿಸಿದ ವಸ್ತುಗಳನ್ನು ಆಯಸ್ಕಾಂತದಂತೆ ಮೇಲೆತ್ತಬಲ್ಲರು.  ತಮ್ಮ ತಲೆಯ ಮೇಲೆ ಅಂಟಿಕೊಂಡಂತೆ ಇರಿಸಬಲ್ಲರು. 

ಈಗ ಈ ವಸ್ತುಗಳನ್ನು ಗಾಳಿಯಲ್ಲಿ ತೇಲುವಂತೆ ಮಾಡುವತ್ತ ಅವರ ಗಮನ ಹರಿದಿದೆ.  ಈ ವಿದ್ಯೆಯನ್ನು ಸಾಧಿಸಲು ಅವರು ಆಫ್ರಿಕಾ, ಚೀನಾ, ಮಧ್ಯಪ್ರಾಚ್ಯ ದೇಶಗಳು ಹಾಗೂ ಭಾರತಕ್ಕೂ ಬಂದಿದ್ದರು.  ತಮ್ಮ ಸಾಧನೆಗೆ ಅತಿಹೆಚ್ಚಿನ ಮಾಹಿತಿ ತನಗೆ ಭಾರತ ಹಾಗೂ ಚೀನಾದಲ್ಲಿ ದೊರಕಿತು ಎಂದು ಅವರು ಹೇಳುತ್ತಾರೆ.   

ಸುಮ್ಮನೆ ವಸ್ತುವನ್ನು ಮುಟ್ಟಿ ಆಯಸ್ಕಾಂತದಂತೆ ಮೇಲೆತ್ತಿದರೆ ಏನು ಮಹಾ? ಅದರಿಂದ ಏನು ಉಪಯೋಗ ಎಂದು ಹಲವರ ಅನುಮಾನ.  ಆದರೆ ಮನಃಶಾಸ್ತ್ರಜ್ಞರ ಪ್ರಕಾರ ಇವರೊಂದು ಅಪರೂಪದ ಮಾಂತ್ರಿಕ.  ಮನುಷ್ಯನ ಮಾನಸಿಕ ಲೋಕ ಇನ್ನೂ ಅರ್ಥವಾಗದ ಆಗರ.  ಒಂದು ವೇಳೆ ಈ ವಿದ್ಯೆಯಿಂದ ಮನುಷ್ಯನ ಮಾನಸಿಕ ಲೋಕವನ್ನು ಪ್ರವೇಶಿಸಲು ಸಾಧ್ಯವಾದರೆ ಅಥವಾ ಈ ವಿದ್ಯೆಯಿಂದ ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ಸಾಧ್ಯವಾದರೆ ಮನುಕುಲಕ್ಕೆ ಲಭಿಸಬಹುದಾದ ಉಪಯೋಗ ಅಸದಳ. 

ಆದ್ದರಿಂದ ಪೋಲ್ಯಂಡಿನ ಹಲವು ಮನಃಶಾಸ್ತ್ರಜ್ಞರು ಇವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.  ಮನುಕುಲಕ್ಕೆ ಉಪಯೋಗವಾಗುವುದಾದರೆ ತಾನು ಯಾವುದೇ ತ್ಯಾಗಕ್ಕೆ ಸಿದ್ಧ ಎಂದು ಮಿರೋಸ್ಲಾವ್ ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ Power of the Brain (ಮೆದುಳಿನ ಸಾಮರ್ಥ್ಯ) ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಈಗ ಎರಡನೆಯ ಪುಸ್ತಕ ಬರೆಯುವ ಹುನ್ನಾರದಲ್ಲಿದ್ದಾರೆ. ಈ ವರೆಗೆ ಹಲವಾರು ಉಪನ್ಯಾಸಗಳನ್ನು ನೀಡಿ ಹಲವಾರು ಮಾನಸಿಕ ಕಾಯಿಲೆಗಳಿಂದ ಹೊರಬರಲು ಜನರಿಗೆ ಪ್ರೋತ್ಸಾಹ ನೀಡಿದ್ದಾರೆ. 

ಇವರ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸೋಣವೇ.

ಕೃಪೆ: www.magneticman.org

ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.


cucumber-hearts-2.jpg

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ, ಬಿರಿಯಾನಿಯಂತಹ ಭಾರೀ ಊಟವೇ ಆಗಲಿ, ಸೌತೆಕಾಯಿ ಹೋಳು ಪಕ್ಕದಲ್ಲಿದ್ದರೆ ಊಟಕ್ಕೊಂದು ಕಳೆ.

ಒಂದು ವೇಳೆ ಇದೇ ಸೌತೆಕಾಯಿಯನ್ನು ಅಡ್ಡಡ್ಡಲಾಗಿ ಕತ್ತರಿಸಿದಾಗ ಮೂಡುವ ಹೋಳುಗಳು ವೃತ್ತಾಕಾರದಲ್ಲಿಲ್ಲದೆ ಹೃದಯಾಕಾರ, ನಕ್ಷತ್ರಾಕಾರ ಅಥವಾ ನಮಗೆ ಬೇಕಾದ ಇನ್ಯಾವುದೇ ಆಕಾರದಲ್ಲಿದ್ದರೆ?ಇದರಲ್ಲೆಲ್ಲಾ ತಲೆ ಓಡುವುದು ಜಪಾನೀಯರದ್ದೇ ಅಂತ ಅವರು ಮತ್ತೊಮ್ಮೆ ಪುರಾವೆ ಸಮೇತ ಸಾಧಿಸಿತೋರಿಸಿದ್ದಾರೆ.ಜಪಾನಿನ ಹಲವಾರು ತರಕಾರಿ ಬೆಳೆಸುವ ತೋಟಗಳು ವಿವಿಧ ರೂಪದಲ್ಲಿ ಬೆಳೆಸಲಾದ ಸೌತೆಕಾಯಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದಕ್ಕಾಗಿ ಅವು ಹೆಚ್ಚೇನೂ ಕಷ್ಟಪಡುವುದಿಲ್ಲ. ತಮಗೆ ಬೇಕಾದ ಆಕೃತಿಯಿರುವ ಸಂಪೂರ್ಣ ಪಾರದರ್ಶಕವಾದ ಆದರೆ ಅಷ್ಟೇ ಧೃಢವಾದ ಪ್ಲಾಸ್ಟಿಕ್ ಕೊಳವೆಯೊಂದನ್ನು ಸೌತೆ ಇನ್ನೂ ಹೀಚಾಗಿರುವಾಗಲೇ ತೂರಿಸಿಬಿಟ್ಟರಾಯಿತು ಅಷ್ಟೇ. ಸೌತೆ ಬೆಳೆಯುತ್ತಾ ಹೋದಂತೆ ಪ್ಲಾಸ್ಟಿಕ್ ಒಳಗಣ ವಿಸ್ತಾರದ ಪ್ರಕಾರ ದೊಡ್ಡದಾಗುತ್ತಾ ಹೋಗಿ ಕಟಾವಿಗೆ ಬರುವ ವೇಳೆಗೆ ಕೊಳವೆಯನ್ನು ಆಕ್ರಮಿಸಿರುತ್ತದೆ. ಕಟಾವು ಮಾಡಿದ ಬಳಿಕ ಕೊಳವೆಯನ್ನು ಕಳಚಿದರೆ ಸಾಕು. ಯಥಾ ಆಕೃತಿಯ ಸೌತೇಕಾಯಿ ಲಭ್ಯ.

 

ಅಡ್ಡಡ್ಡಲಾಗಿ ಕತ್ತರಿಸಿದಾದ ಸುಂದರ ವಿನ್ಯಾಸದ ಹೋಳು ಊಟದ ಸೊಬಗನ್ನು ಹೆಚ್ಚಿಸಲೂ ಸಾಧ್ಯ.ಇದೇ ವಿಧಾನವನ್ನು ಅನುಸರಿಸಿ ಜಪಾನಿನ ತೋಟಗಳು ಚೌಕಾಕಾರದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನ ಸೆಳೆದಿದ್ದವು. ನಾಳೆ ಇನ್ನೇನು ಬರಬಹುದೋ ಗೊತ್ತಿಲ್ಲ. ಹೃದಯಾಕಾರದ ಮಾವಿನಕಾಯಿ, ವೃತ್ತಾಕಾರದ ಪಡವಲಕಾಯಿ..... ಇನ್ನೇನಾದರೂ ಹೊಳೆಯುತ್ತಿದೆಯೇ?

 

ಮಂಗಳವಾರ, ಜನವರಿ 27, 2009

ಬಂದಿದೆ ಬಿದಿರಿನ ಕಾರು - ಬಿದಿರ್ಕಾರು





ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ.  ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.  

ಕ್ಯೋಟೋ ವಿಶ್ವವಿದ್ಯಾಲಯದ ವೆಂಚರ್ ಬಿಸಿನೆಸ್ ಲ್ಯಾಬೋರೇಟರಿ ಪ್ರಸ್ತುತಪಡಿಸಿದ ಈ ಕಾರಿನ ಹೆಸರು ಬಾಂಬ್ಗೂ (Bambgoo). ಪ್ರತಿ ಬಾರಿ ಚಾರ್ಜ್ ಮಾಡಿದ ಬಳಿಕ ಸತತವಾಗಿ ಐವತ್ತು ಕಿ.ಮೀ ಓಡುವ ಸಾಮರ್ಥ್ಯವುಳ್ಳ ಈ ಬಿದಿರ್ಕಾರು ಕೇಲಲ 2.7 ಮೀ ಉದ್ದ, 1.3 ಮೀಟರ್ ಅಗಲ, 1.65 ಮೀಟರ್ ಎತ್ತರ ಹಾಗೂ ಕೇವಲ ಅರವತ್ತು ಕೇಜಿ ಭಾರವಿದೆ.  ಹೆಸರೇ ತಿಳಿಸುವಂತೆ ಇದರ ಸಂಪೂರ್ಣ ಹೊರಮೈ ತಯಾರಿಸಿದ್ದು ಕೇವಲ ಬಿದಿರಿನಿಂದ. 

ಒಂದು ವೇಳೆ ಈ ಕಾರು ಭಾರತದಲ್ಲಿ ಪ್ರಸ್ತುತಪಡಿಸಿದರೆ ನಮ್ಮ ಗ್ರಾಮೋದ್ಯೋಗಕ್ಕೆ ಒಂದು ಕಳೆ ಬರಬಹುದೇನೋ.  ಏಕೆಂದರೆ ಹೆಣೆದಿರುವ ಬಿದಿರು ಅಷ್ಟೊಂದು ಕಲಾತ್ಮಕವಾಗಿಲ್ಲ.  ನಮ್ಮ ಗ್ರಾಮಗಳಳಲ್ಲಿ ಇನ್ನಷ್ಟು ಚೆನ್ನಾಗಿ ಬುಟ್ಟಿ, ತಟ್ಟಿ ಹೆಣೆಯುವವರಿದ್ದಾರೆ.  ಚಾಸಿ ಜಪಾನಿದ್ದು ಬಾಡಿ ಕರ್ನಾಟಕದ್ದು ಮಾಡಿ ಒಂದು ಜಾಯಿಂಟ್ ವೆಂಚರ್ ತೆರೆದರೆ ಹೇಗೆ?

ಸೋಮವಾರ, ಜನವರಿ 26, 2009

ಚಾಕ್-ಓ-ಬಾಮಾ - ಹೊಸ ಅಧ್ಯಕ್ಷರ ಮುಖವಿರುವ ಹೊಸ ಚಾಕಲೇಟು

ನಿಯೋಪಾಲಿಟನ್  ಪ್ರಿಂಟಿಂಗ್ ಅಂಡ್ ಕಂಪನಿ - ಹೆಸರು ಕೇಳಿದರೆ ಏನೆನ್ನಿಸುತ್ತದೆ?  ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಈ ಸಂಸ್ಥೆ ವಿಶೇಷ ಚಾಕಲೇಟುಗಳನ್ನು ತಯಾರಿಸಿ ನೀಡುವ ಕೆಲಸವನ್ನೂ ಮಾಡುತ್ತದೆ.  ಕಳೆದ ವಾರ ಅಧ್ಯಕ್ಷರ ಪದವಿಗೇರಿದ ಬರಾಕ್ ಹುಸೇನ್ ಒಬಾಮಾರವರ ಪದವಿಗ್ರಹಣ ಸಂದರ್ಭದಲ್ಲಿ ಸಂಸ್ಥೆ ಅವರ ಮುಖದ ಪಡಿಯಚ್ಚಿರುವ ಚಾಕಲೇಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಅದರ ಹೆಸರೇ ಚಾಕ್-ಒ-ಬಾಮಾ. ಪ್ರತಿ ಉತ್ಪನ್ನಕ್ಕೂ ಒಂದು ವಿಶೇಷ ವಾಕ್ಯ ಇರಬೇಕಲ್ಲ, ಹಾಗೇ ಇದಕ್ಕೂ ಇದೆ, "ಎಸ್-ವಿ-ಕ್ಯಾನ್" (ನಾವು ಸಾಧಿಸಬಲ್ಲೆವು) ಎಂಬ ಅಧ್ಯಕ್ಷರ ನುಡಿಯೇ ಚಾಕಲೇಟಿನ ಧ್ಯೇಯವಾಕ್ಯವೂ ಆಗಿದೆ.






ಮೂರುವರೆ ಇಂಚು ಎತ್ತರ, ಎರೆಡೂವರೆ ಇಂಚು ಅಗಲದ ಚಿಕ್ಕ ಪೆಟ್ಟಿಗೆಯಲ್ಲಿಈ ಚಾಕಲೇಟನ್ನು ಪ್ಯಾಕ್ ಮಾಡಲಾಗಿದ್ದು ಹಿಂಭಾಗದಲ್ಲಿ ಅಧ್ಯಕ್ಷರು ಪ್ರಮಾಣವಚನದ ದಿನ ನೀಡಿದ ಭಾಷಣದ ಪ್ರಮುಖ ಅಂಶಗಳನ್ನು ಮುದ್ರಿಸಲಾಗಿದೆ. ಈ ಚಾಕಲೇಟು ತಯಾರಿಗೆ ಬಳಸಲಾದ ವಸ್ತುಗಳ ವಿವರಗಳನ್ನು ಸಂಸ್ಥೆ ಗೋಪ್ಯವಾಗಿರಿಸಿದೆ.  ಆದರೆ ಈ ಉತ್ಪನ್ನ ಅತ್ಯುನ್ನತ ಗುಣಮಟ್ಟದಿಂದ ಕೂಡಿದೆ ಎಂದು ಸಂಸ್ಥೆ ಪ್ರಚಾರ ಪಡಿಸಿದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ರುಚಿಯಿರುವ ಈ ಚಾಕಲೇಟು ಅಪ್ಪಟ ಕಂದುಬಣ್ಣದ್ದಾದೆ. ವಿಶೇಷ ಮೆರುಗು ತರಲು ಅರಗಿಸಿಕೊಳ್ಳಬಹುದಾದ ಕಂಚಿನ ಪುಡಿಯನ್ನೂ ಉದುರಿಸಲಾಗಿದೆಯಂತೆ.





ಒಂದು ಚಾಕಲೇಟಿನ ಬೆಲೆ ಇಪ್ಪತ್ತು ಡಾಲರ್ (ಸುಮಾರು ಒಂಭೈನೂರು ರೂಪಾಯಿ) ಇದ್ದು ಅಮೇರಿಕಾದಲ್ಲಿ ಎಲ್ಲಿ ಬೇಕಿದ್ದರೂ ಅಂಚೆ ಮೂಲಕ ಕಳುಹಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಅದರಲ್ಲಿ ಒಂದು ಡಾಲರ್ ದತ್ತಕ ನಿಧಿಗೂ ಅರ್ಪಿಸಲಾಗುವುದು.  ಈ ನಿಧಿ ಯಾವ ದತ್ತಕ ಸಂಸ್ಥೆಗೆ ಹೋಗಬೇಕೆಂದು ಬಯಸುವಿರೋ ಆ ಸಂಸ್ಥೆಗೆ ಮತ ನೀಡಿ ಆಯ್ಕೆಯನ್ನೂ ಮಾಡಿಕೊಳ್ಳಬಹುದಾಗಿದೆ.

ಸಂಸ್ಥೆ 2009 ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ಚಾಕಲೇಟುಗಳಲ್ಲಿ ಚಾಕ್ ಒ ಬಾಮಾ ಮಾತ್ರವಲ್ಲದೇ ಮುಸ್ಟೇಶ್ ಆನ್ ಅ ಸ್ಟಿಕ್ (ಕೋಲಿನಲ್ಲೊಂದು ಮೀಸೆ), ದ ಆಕ್ಸ್ ಬಾಕ್ಸ್ (ಚೀನಾದ ಹೊಸವರ್ಷದ ಪ್ರತೀಕವಾದ ಎತ್ತಿನ ಚಾಕಲೇಟು) ಮೊದಲಾದವು ಗಮನ ಸೆಳೆಯುತ್ತಿವೆ.

ಭಾನುವಾರ, ಜನವರಿ 25, 2009

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು






ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್ನಾಮಿನ ಜನಪ್ರಿಯ ಮಾದಕದ್ರವ್ಯ. ವಿಯೆಟ್ನಾಂ ನಲ್ಲಿ ಮದ್ಯ ತುಂಬಿದ ಒಂದು ಬಾಟಲಿಯಲ್ಲಿ ಇಡಿಯ ನಾಗರಹಾವನ್ನೇ ಮುಳುಗಿಸಿಟ್ಟಿರುವ ಪೇಯ ಸ್ನೇಕ್ ವೈನ್ (ಕನ್ನಡದಲ್ಲಿ ಹಾಮ್ವದ್ಯ ಎಂದು ಕರೆಯಬಹುದೇ???) ಎಂದೇ ಜನಪ್ರಿಯ. ಬರೆಯ ವಿಯೆಟ್ನಾಂ ಮಾತ್ರವಲ್ಲದೇ ಹಲವು ಆಗ್ನೇಯ ಏಷಿಯಾ ದೇಶಗಳಲ್ಲೂ ಹಲವು ಶತಮಾನಗಳಿಂದ ಈ ಪೇಯ ಜನರಿಗೆ ಕಿಕ್ ನೀಡುತ್ತಿದೆ. ಆದರೆ ನಾಗರ ಹಾವಿನ ವಿಷದಿಂದ ಸಾವು ಕಟ್ಟಿಟ್ಟ ಬುತ್ತಿಯಲ್ಲವೇ? ಅದು ಹೇಗೆ ಹಾವಿನ ವಿಷ ಸೇರಿದ ಮದ್ಯ ಮನುಷ್ಯರನ್ನು ಕೊಲ್ಲುವುದಿಲ್ಲ್? ನಿಜಕ್ಕೂ ಹಾವಿನ ವಿಷ ಒಂದು ಪ್ರೋಟೀನ್. ರಕ್ತದಲ್ಲಿ ಸೇರಿದೊಡನೇ ಅದು ರಕ್ತದಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ನರಮಂಡಲವನ್ನೇ ಘಾಸಿಗೊಳಿಸುವುದರಿಂದಲೇ ಸಾವು ಸಂಭವಿಸುತ್ತದೆ. ಆದರೆ ಮದ್ಯದಲ್ಲಿ ಮಿಶ್ರವಾದ ಹಾವಿನ ವಿಷ ಮದ್ಯ (ಇಥನಾಲ್) ಹುಳಿಬಂದಂತೆ (ಫರ್ಮೆಂಟ್) ಹಾವಿನ ವಿಷ ತನ್ನ ವಿಷಯುಕ್ತ ಗುಣವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಹಾಗಾಗಿ ಮದ್ಯದೊಳಗಿರುವ ಸತ್ತ ಹಾವಿನಷ್ಟೇ ಅದರ ವಿಷವೂ ನಿರಪಾಯಕಾರಿ. ಆದರೆ ಈ ಪ್ರಕ್ರಿಯೆಗೆ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕಾದುದರಿಂದ ಹಾವು ಮುಳುಗಿಸಿದ ಒಂದು ತಿಂಗಳ ಒಳಗೇ ಏನಾದರೂ ರುಚಿ ನೋಡಿದರೆ ಆತಂಕ ಕಟ್ಟಿಟ್ಟ ಬುತ್ತಿ. ಈ ಹಾವ್ಮದ್ಯದಲ್ಲಿ ಬರೆಯ ನಾಗರ ಹಾವಲ್ಲದೇ ಇತರ ಹಾವುಗಳು, ಚೇಳು, ಓತಿಕ್ಯಾತ, ಜಿರಳೆ, ಹಕ್ಕಿಗಳು, ಆಮೆ, ಅಥವಾ ಇವುಗಳಲ್ಲಿ ಒಂದೆರೆಡದ ಸಂಯೋಜನೆಯ ಮದ್ಯವೂ ದೊರಕುತ್ತದೆ. ಬಾಟಲಿಯಿಂದ ಚಿಕ್ಕ ಕಪ್ ಗಳಲ್ಲಿ ಮದ್ಯ ಸುರುವಿ ಗ್ರಾಹಕನಿಗೆ ನೀಡಲಾಗುತ್ತದೆ. ಹೆಚ್ಚಿಗೆ ಈ ಮದ್ಯವನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ. ಬೇರೆ ಧಾನ್ಯಗಳ ಮದ್ಯ ವಿಷವನ್ನು ಅಷ್ಟೊಂದು ಚೆನ್ನಾಗಿ ಹೀರಿಕೊಳ್ಳುವುದಿಲ್ಲ ಎಂದು ಅಕ್ಕಿಯ ಮದ್ಯವನ್ನೇ ಆರಿಸಿಕೊಳ್ಳಲಾಗುತ್ತದೆ. ಹಾವಿನ ವಿಷದಂತೆ ಹಾವಿನ ರಕ್ತಭರಿತ ಮದ್ಯವೂ ಚಲಾವಣೆಯಲ್ಲಿದೆ. ಹಾವಿನ ಮೈಗೆ ಹರಿತವಾದ ಚಾಕುವಿನಿಂದ ಗೆರೆಗಳನ್ನೆಳೆದು ರಕ್ತ ಮದ್ಯದಲ್ಲಿ ಸೇರುವಂತೆ ಮಾಡಲಾಗುತ್ತದೆ. ಹಾವಿನ ಯಕೃತ್ತು ಅಥವಾ ಪಿತ್ತರಸಬೆರೆತ ಮದ್ಯ ಇನ್ನೊಂದು ವಿಶೇಷ. ಅಲ್ಲದೇ ಹಾವಿನ ಇತರ ಅಂಗಗಳಾದ ಚರ್ಮ, ಮಾಂಸ, ಯಕೃತ್ತು ಮೊದಲಾದವುಗಳು ಸೈಡ್ ಡಿಶ್ ಆಗಿಯೂ ಲಭ್ಯ. ಮುಂದಿನ ಸಲ ವಿಯೆಟ್ನಾಂ ಅಥವಾ ಇತರ ಸುತ್ತಮುತ್ತಲ ದೇಶಗಳಿಗೆ ಪ್ರವಾಸ ಹೋದಾಗ ಚಿಕ್ಕ ಕಪ್ಪಿನಲ್ಲಿ ವಿಶೇಷ ಎಂದು ಮದ್ಯ ಕೊಟ್ಟರೆ ಕೊಂಚ ಜಾಗರೂಕರಾಗಿರಿ.