ಬಟ್ಟೆ ಒಗೆಯುವುದೆಂದರೆ ಕಲ್ಲಿಗೆ ಬಡಿಯುವ ಶಿಕ್ಷೆ ಎನ್ನುವ ಕಾಲ ಹೋಯಿತು. ಈಗ ಏನಿದ್ದರೂ ಸೆಮಿ ಆಟೋಮ್ಯಾಟಿಕ್, ಫುಲ್ಲೀ ಆಟೋಮ್ಯಾಟಿಕ್ ವಾಶಿಂಗ್ ಮಶೀನುಗಳ ಕಾಲ. ದಿನೇ ದಿನೇ ಹೊರಬರುತ್ತಿರುವ ಆವಿಶ್ಕಾರಗಳಲ್ಲಿ ಬ್ರಿಟನ್ನಿನ ನೀರಿಲ್ಲದ ಒಗೆತ ಹೊಸ ಆಯಾಮವನ್ನೇ ಉಪಯೋಗಿಸಿದೆ.
ಬಟ್ಟೆ ಒಗೆಯುವುದೆಂದರೆ ನೀರಿಲ್ಲದ ಅಥವಾ ನೀರಿನ ಅಭಾವವಿರುವ ನಗರಗಳಿಗೆ ಒಂದು ಶಿಕ್ಷೆಯೇ ಸರಿ. ಅಂತಹವರಿಗೆ ವರದಾನವಾಗಲಿದೆ ಬ್ರಿಟನ್ನಿನ ಕ್ಸೆರೋಸ್ ಸಂಸ್ಥೆ ಪರಿಚಯಿಸಿರುವ ಹೊಸ ನೀರಿಲ್ಲದ ವಾಶಿಂಗ್ ಮಶೀನ್. ಕೇವಲ ೨ ಶೇಖಡಾ ನೀರನ್ನು ಬಳಸಿ ಬಟ್ಟೆಗಳನ್ನು ಒಗೆಯುವ ಹೊಸ ವಾಶಿಂಗ್ ಮಷೀನನ್ನು ಮಾಮೂಲಿ ವಾಷಿಂಗ್ ಮಷೀನುಗಳ ಹತ್ತು ಶೇಖಡಾ ವಿದ್ಯುತ್ ಬಳಸುವುದರಿಂದ ಅತ್ಯಂತ ಪರಿಸರಸ್ನೇಹಿಯಾಗಿದೆ. ಬ್ರಿಟನ್ನಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಾಯೋಗಿಕವಾಗಿ ಪ್ರದರ್ಶನವನ್ನು ನೀಡಿ ಎಲ್ಲರ ಮನಗೆದ್ದಿರುವ ಈ ವಾಶಿಂಗ್ ಮೆಶೀನ್ ೨೦೦೯ ರಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲಿದೆ.
ನೀರಿಲ್ಲದೆ ಈ ಯಂತ್ರ ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ತರ್ಕ ಸುಲಭವಾಗಿದೆ. ನೀರು ಮಾಡುವ ಕೆಲಸವನ್ನು ಇಲ್ಲಿ ಪ್ಲಾಸ್ಟಿಕ್ಕಿನ ಚಿಕ್ಕ ಚಿಕ್ಕ ಗೋಳಗಳು ನಿರ್ವಹಿಸಲಿವೆ. ಮಾಮೂಲಿ ಒಗೆತದಲ್ಲಿ ಬಟ್ಟೆಯಲ್ಲಿರುವ ಕೊಳೆಯ ಋಣ ಚಾರ್ಜ್ ಅನ್ನು ಸೋಪಿನಲ್ಲಿರುವ ಧನಾಂಶ ಕಿತ್ತುಕೊಳ್ಳುತ್ತದೆ. ಇಲ್ಲಿ ನೀರು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತದೆ. ಹೊಸ ತಂತ್ರಜ್ಞಾನದಲ್ಲಿ ನೀರಿನ ಕೆಲಸವನ್ನು ವಿಶೇಷ ಪ್ಲಾಸ್ಟಿಕ್ ನಿರ್ವಹಿಸುತ್ತದೆ. ಮೊದಲಿಗೆ ಒಂದು ಕಪ್ ನೀರು ಹಾಗೂ ಡಿಟರ್ಜೆಂಟುಗಳ ಮಿಶ್ರಣವನ್ನು ಯಂತ್ರದೊಳಕ್ಕೆ ಸೇರಿಸಬೇಕಾಗುತ್ತದೆ. ಆ ಬಳಿಕ ನೀರು ಹಾಗೂ ಡಿಟರ್ಜೆಂಟ್ ಮಿಶ್ರಣ ಪ್ಲಾಸ್ಟಿಕ್ ಗೋಳಗಳ ಮೂಲಕ ಬಟ್ಟೆಗಳ ನಡುವೆ ಹಾದುಹೋಗುತ್ತದೆ. ಈ ಗೋಳಗಳು ಡಿಟರ್ಜೆಂಟ್ ಹಾಗೂ ಕೊಳೆಯ ನಡುವೆ ಮಧ್ಯವರ್ತಿಯಾಗಿ ವರ್ತಿಸಿ ಕೊಳೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಬಟ್ಟೆ ಸರಿಸುಮಾರಾಗಿ ನೂರು ಪ್ರತಿಶತ ಒಣಗಿಯೇ ಹೊರಬರುತ್ತದೆ.
ವಿಶಿಷ್ಟ ಬಗೆಯ ಈ ಪ್ಲಾಸ್ಟಿಕ್ ತುಣುಕುಗಳನು ಅತಿನುಣುಪಾಗಿದ್ದು ಬಟ್ಟೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಹಾಗೂ ಕನಿಷ್ಟ ನೂರು ಬಾರಿಯಾದರೂ ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ ಎಂದು ಕ್ಸಿರೋಸ್ ಸಂಸ್ಥೆ ಹೇಳಿಕೊಂಡಿದೆ.
ನೀರು ಬಳಸದಿರುವ , ಒಣಗಿಸುವ ಅಗತ್ಯವಿಲ್ಲದ ಈ ವಾಶಿಂಗ್ ಮಶೀನ್ ನಮ್ಮೂರಿಗೂ ಬೇಗನೇ ಬರಲಿ ಎಂದು ಹಾರೈಸೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ