ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಏಪ್ರಿಲ್ 14, 2010

ಶತಾಯುಶಿ ಅಜ್ಜಿಯ ತಲೆ ಮೇಲೊಂದು ಕೋಡು

ಚಿಕ್ಕಂದಿನಲ್ಲಿ ನಮ್ಮ ಸ್ನೇಹಿತವರ್ಗದಲ್ಲಿ ಕೆಲವರ ಬಳಿ ಬೇರೆಯವರ ಬಳಿ ಇರದ ಯಾವುದಾದರೂ ವಸ್ತು ಇದ್ದರೆ ಅದರ ಮಾಲಿಕ ತೋರುವ ಬಿಂಕ ಬಿನ್ನಾಣವನ್ನು ನಾವು 'ಅವನ ಹತ್ತಿರ ಆ ವಸ್ತು ಇದೆ ಅಂತ ಅವನ ತಲೆಯಲ್ಲೊಂದು ಕೊಂಬು ಬಂದಿದೆ' ಎಂದು ಛೇಡಿಸುತ್ತಿದ್ದೆವು. ಅಲ್ಲದೇ ಪರೀಕ್ಷೆಯಲ್ಲಿ ಪಾಸಾದಾಗ, ಯಾವುದಾದರೂ ಸಂತೋಷ ನೀಡುವ ಸಂಗತಿಗಳಿಗೂ ಈ 'ತಲೆಯ ಮೇಲೊಂದು ಕೊಂಬು' ಎಂಬ ಉತ್ಪ್ರೇಕ್ಷೆಯನ್ನೇ ಉಪಯೋಗಿಸುತ್ತೇವೆ.

ಆದರೆ ಚೀನಾದ ಈ ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ನಿಜವಾಗಿಯೂ ಕೋಡು ಮೂಡಿದೆ. ಚೀನಾದ ಹೆನಾನ್ ಪ್ರಾಂತದ ಲಿನ್ಲೋ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿರುವ ಜಾಂಜ್ ರುಯಿಫಾಂಗ್ ಎಂಬ ನೂರಾಒಂದು ವರ್ಷದ ಅಜ್ಜಿಯ ಹಣೆಯ ಎಡಭಾಗದಲ್ಲಿ ಕಳೆದ ವರ್ಷ ಸರಿಸುಮಾರು ಇದೇ ವೇಳೆಗೆ ಗಟ್ಟಿಯಾದ ಮಚ್ಚೆಯೊಂದು ಕಾಣಿಸಿಕೊಂಡಿತ್ತು. ದಿನಕಳೆದಂತೆ ನಿಧಾನವಾಗಿ ಬೆಳೆಯುತ್ತಾ ಹೋದ ಆ ಮಚ್ಚೆ ನಿಧಾನಕ್ಕೆ ಕೋಡಿನಾಕಾರ ತಳೆದು ಈಗ ಒಂದು ವರ್ಷದ ಬಳಿಕ ಸುಮಾರು ಆರು ಸೆಂಟಿಮೀಟರ್ ಉದ್ದ ತಲುಪಿದೆ. ಕಳೆದ ವಾರ ವೀಕ್ಲಿ ವರ್ಲ್ಡ್ ನ್ಯೂಸ್ ಮೂಲಕ ವಿಶ್ವದ ಗಮನ ಸೆಳೆದು ಇದ್ದಕ್ಕಿದಂತೆ ವಿಶ್ಯವಿಖ್ಯಾತಿ ಗಳಿಸಿಕೊಂಡಿದ್ದಾರೆ.



ಆದರೆ ಮಚ್ಚೆ ಇಷ್ಟು ದೊಡ್ಡದಾಗುವ ತನಕ ಯಾರಿಗೂ ತೋರಿಸಲಿಲ್ಲವೇಕೆ ಎಂಬ ಪ್ರಶ್ನೆಗೆ ಅವರ ಮನೆಯವರು ಇದರಿಂದ ಅಜ್ಜಿಗೆ ಯಾವುದೇ ನೋವಾಗಲೀ ತೊಂದರೆಯಾಗಲೀ ಇರದಿದ್ದುದರಿಂದ ಇದೊಂದು ವಯಸ್ಸಿಗೆ ಸ್ವಾಭಾವಿಕವಾದ ಯಾವುದೋ ಬೆಳವಣಿಗೆ ಇರಬಹುದು ಎಂದು ಉಪೇಕ್ಷಿಸಿದೆವು ಎಂದು ಅವರ ಅರವತ್ತು ವರ್ಷ ವಯಸ್ಸಿನ ಮಗ ಜಾಂಗ್ ಗೊವುಜೆಂಗ್ ತಿಳಿಸಿದ್ದಾರೆ. ಅಜ್ಜಿಗೆ ಒಟ್ಟು ಆರು ಜನರು ಮಕ್ಕಳಿದ್ದು ಅತಿ ಹಿರಿಯ ಮಗನಿಗೆ ಎಂಭತ್ತೆರೆಡು ವರ್ಷ ಪ್ರಾಯ. ಮಕ್ಕಳಲ್ಲಾಗಲೀ ಸಂಬಂಧಿಕರಲ್ಲಾಗಲೀ ಯಾರಲ್ಲೂ ಈ ತರಹದ ಮಚ್ಚೆ ಇಲ್ಲ. ಈಗ ಅವರ ಹಣೆಯ ಬಲಭಾಗದಲ್ಲೂ ಚಿಕ್ಕ ಮಚ್ಚೆಯೊಂದು ಕಾಣಿಸಿಕೊಂಡಿದ್ದು ಇದು ಎರಡನೆಯ ಕೊಂಬು ಮೂಡುವ ಸೂಚನೆ ಇರಬಹುದು ಎಂದು ಅವರ ಮನೆಯವರು ತಿಳಿಸುತ್ತಾರೆ.
ಅಷ್ಟಕ್ಕೂ ಈ ಕೋಡು ಮೂಡಿದ್ದು ಹೇಗೆ? ಪ್ರಸ್ತುತ ಈ ಪ್ರಶ್ನೆ ಹಲವರನ್ನು ಕಾಡಿದೆ. ನಮ್ಮ ಉಗುರು ಹಾಗೂ ಕೂದಲಿನ ಮೂಲವಸ್ತುವಾದ ಕೆರಾಟಿನ್ ಸಾಂದ್ರಗೊಂಡು ಈ ಕೋಡಿನ ರೂಪ ತಳೆದಿದೆ. ಒಂದೇ ಸ್ಥಳದಲ್ಲಿ ಸಂಗ್ರಹವಾದ ಕೆರಾಟಿನ್ ಒತ್ತಡದ ಕಾರಣ ಚರ್ಮದಿಂದ ಹೊರದೂಡಲ್ಪಟ್ಟು ದಿನದಿಂದ ದಿನಕ್ಕೆ ಬೆಳೆಯುತ್ತಾ ಕೊಂಬಿನ ರೂಪ ಪಡೆದಿದೆ ಎಂದು ಆಕೆಯನ್ನು ಪರಿಶೀಲಿಸಿದ ವೈದ್ಯರು ಸರಳವಾದ ಉತ್ತರ ನೀಡುತ್ತಾರೆ. ಆದರೆ ಚೀನಾದಲ್ಲಿ ಶತಾಯುಶಿಗಳು ಸಾವಿರಾರಿದ್ದರೂ ಅವರಿಗೇಕೆ ಈ ಕೊಂಬು ಮೂಡಿಲ್ಲ? ಅದೂ ಅಲ್ಲದೇ ಅಜ್ಜಿಯ ಊರಿನಲ್ಲಿಯೇ ಆಕೆಯ ಸಹವರ್ತಿಗಳಲ್ಲೂ ಈ ಕೊಂಬು ಏಕಿಲ್ಲ? ಈ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ. ಆದರೆ ಶೀಘ್ರವೇ ಪರಿಣಿತರ ತಂಡ ಆಕೆಯ ಕೊಂಬನ್ನು ಹಾಗೂ ಪರಿಸರವನ್ನು ಪರಿಶೀಲಿಸಲಿದೆ. ಆ ಬಳಿಕವಷ್ಟೆ ಇನ್ನಷ್ಟು ವಿವರಗಳು ಕಂಡುಬರಬಹುದು.



ಆದರೆ ಅಜ್ಜಿಯ ಕುಟುಂಬದವರಿಗೆ ಇದೊಂದು ವರದಾನವಾಗಿ ಕಂಡುಬಂದಿದ್ದು ದೇವರು ನೀಡಿರುವ ಒಂದು ವರಪ್ರಸಾದವೆಂಬಂತೆ ಸ್ವೀಕರಿಸಿದ್ದಾರೆ. ಇದನ್ನು ತೆಗೆಸುವುದಾಗಲೀ ಯಾವುದೇ ತರಹದ ಚಿಕಿತ್ಸೆ ನೀಡುವುದಾಗಲೀ ಅವರು ಒಪ್ಪುತ್ತಿಲ್ಲ. ಈ ಕೊಂಬಿನ ಕಾರಣ ಅಜ್ಜಿಯವರಿಗೆ ಗೋಟ್ ವುಮನ್ (ಕುರಿ ಮಹಿಳೆ ಎಂದರೆ ಸರಿಹೋಗಬಹುದೇ?) ಎಂಬ ಅನ್ವರ್ಥನಾಮವೂ ಸಿಕ್ಕಿದೆ.
ಅರ್ಶದ್ ಹುಸೇನ್ ಎಂ. ಹೆಚ್,
ದುಬೈ
(ಈ ಲೇಖನ 'ಅನುಪಮ' ಮಹಿಳಾ ಮಾಸಪತ್ರಿಕೆಯ ಏಪ್ರಿಲ್-೨೦೧೦ ನೇ ಸಂಚಿಕೆಯಲ್ಲಿ ಪ್ರಕಟವಾಗಿದೆ)