ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 27, 2010ಭವಿಷ್ಯದ ಗಾಳಿಯಂತ್ರ - ವಿದ್ಯುತ್ ಕೊರತೆಗೆ ನೂತನ ಮಂತ್ರ-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡಿಬರುವುದು ಚಿತ್ರದುರ್ಗದ ಕಲ್ಲಿನ ಕೋಟೆ, ಒನಕೆ ಓಬವ್ವ, ಡಾ. ವಿಷ್ಣುವರ್ಧನರ ಮೊದಲ ಚಿತ್ರ ನಾಗರಹಾವು ಮೊದಲಾದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗಕ್ಕೆ ಭೇಟಿನೀಡಿದವರಿಗೆ ಚಿತ್ರದುರ್ಗದ ಬೆಟ್ಟಗಳ ಮೇಲೆ ಸ್ಥಾಪಿಸಿರುವ ಬೃಹತ್ ಗಾಳಿಯಂತ್ರಗಳು ಕಲ್ಲಿನ ಕೋಟೆ ಗೋಚರಿಸುವ ಮೊದಲೇ ತಮ್ಮ ದರ್ಶನ ನೀಡುತ್ತವೆ.

ಏನೀ ಗಾಳಿಯಂತ್ರಗಳು? ನಾಗರಿಕತೆ ಬೆಳೆಯುತ್ತಿದ್ದಂತೆ ಪ್ರಸ್ತುತದಿನದ ಅಗತ್ಯವಾದ ವಿದ್ಯುತ್ತಿಗೂ ಬೇಡಿಕೆ ಹೆಚ್ಚುತ್ತಿದೆ. ಅಣೆಕಟ್ಟುಗಳ ಮುಖಾಂತರ ಹರಿಯುವ ನದಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದಿಸುವ ಮಾರ್ಗ ಬಹುತೇಕ ದುಬಾರಿಯೂ ಕಷ್ಟಕರವೂ ಆಗಿದೆ. ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕಿ ಸ್ವಾವಲಂಬಿಯಾಗುವುದು ಇಂದಿನ ಅಗತ್ಯವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕದ ಹಲವೆಡೆ ಗಾಳಿಯಂತ್ರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ. ಸೋಲಾರ್ ವಿದ್ಯುತ್ ದೀಪಗಳಿಗೂ ಮನ್ನಣೆ ದೊರಕುತ್ತಿದೆ.


ಗಾಳಿಯಂತ್ರಗಳೇಕೆ ಸರ್ವವ್ಯಾಪಿಯಾಗಿಲ್ಲ? ಒಂದು ವೇಳೆ ವಿದ್ಯುತ್ ಕೊರತೆಗೆ ಗಾಳಿಯಂತ್ರಗಳು ಸಮರ್ಪಕ ಉತ್ತರವಾದರೆ ಪ್ರತಿ ಊರಿನಲ್ಲೇಕೆ ಇವನ್ನು ಸ್ಥಾಪಿಸಲಾಗುತ್ತಿಲ್ಲ? ಇದಕ್ಕೆ ಕಾರಣ ಹಲವಾರು. ಗಾಳಿಯಂತ್ರಕ್ಕೆ ಅವಶ್ಯವಾಗಿರುವ ಹಲವು ಪರಿಸ್ಥಿತಿಗಳು ಎಲ್ಲಾ ಪರಿಸರದಲ್ಲಿ ಸಿಗಲು ಸಾಧ್ಯವಿಲ್ಲ. ಉದಾಹರಣೆಗೆ ಗಾಳಿಯಂತ್ರದ ಸ್ಥಾಪನೆಗೆ ದಿನದ ಎಲ್ಲಾ ಅವಧಿಗಳಲ್ಲೂ ಕನಿಷ್ಟ ೫ ಮೀ/ಸೆಕೆಂಡ್ ವೇಗದ ಗಾಳಿ ಬೀಸುತ್ತಿರುವ ಎತ್ತರದ ಜಾಗ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗದ ಬೆಟ್ಟಗಳ ಮೇಲೆ ಹಲವು ಗಾಳಿಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅತಿ‌ಎತ್ತರದ ಬೆಟ್ಟದ ಮೇಲೂ ಸಹಾ ಗಾಳಿಯ ವೇಗ ದಿನದ ಕೆಲವು ಘಂಟೆಗಳ ಕಾಲ ೫ ಮೀ/ಸೆಕೆಂಡ್ ಗಿಂತಲೂ ಕಡಿಮೆಯಿರುತ್ತವೆ. ಆಗ ಆ ಯಂತ್ರಗಳ ಬ್ಲೇಡುಗಳು ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ಕಾರಣದಿಂದ ಬೆಟ್ಟದ ಮೇಲೆ ಹಲವಾರು ಗಾಳಿಯಂತ್ರಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಅಲ್ಲದೇ ಪ್ರತಿ ಗಾಳಿಯಂತ್ರದ ಬೆಲೆ ಬಲುದುಬಾರಿ. ಸ್ಥಾಪನಾ ವೆಚ್ಚವೂ ಹೆಚ್ಚು. ನಿರ್ವಹಣೆಗಾಗಿ ಎತ್ತರದ ಕ್ರೇನುಗಳನ್ನು ಆ ಗಾಳಿಯಂತ್ರದ ಬಳಿಗೆ ಸಾಗಿಸುವ ಸಾಗಾಣಿಕಾ ವೆಚ್ಚವೇ ಕೆಲವೊಮ್ಮೆ ನಿರ್ವಹಣಾ ವೆಚ್ಚಕ್ಕೂ ಅಧಿಕವಾಗುವುದುಂಟು. ಎತ್ತರದ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸಬಹುದಾದ್ದರಿಂದ ಎಲ್ಲಾ ಊರುಗಳಿಗೆ ಈ ಯಂತ್ರಗಳ ಸೌಭಾಗ್ಯವಿಲ್ಲ.

ಹಾಗಾದರೆ ಬೇರೆ ಪರ್ಯಾಯ ಮಾರ್ಗಗಳೇ ಇಲ್ಲವೇ? ಇದೆ. ಕೆನಡಾದ ಮ್ಯಾಗೆನ್ನ್ ಪವರ್ ಸಂಸ್ಥೆ ಯಾವುದೇ ಸ್ಥಳದಲ್ಲಿ ಸ್ಥಾಪಿಸಬಹುದಾದ ಸರಳ ಗಾಳಿಯಂತ್ರದ ಕರಡುಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಮಾರ್ಸ್ ((Magenn Air Rotor System -M.A.R.S) ಎಂಬ ಹೆಸರಿನ ಈ ತ್ರಂತ್ರಜ್ಞಾನವನ್ನು ಸುಲಭವಾಗಿ ಹಾಗೂ ಅತಿಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದು ಎಂದು ಸಂಸ್ಥೆ ಪ್ರಕಟಿಸಿದೆ. ಈ ಉಪಕರಣದ ಕಾರ್ಯವೈಖರಿ ಹೇಗೆ ಎಂದು ತಿಳಿಯುವ ಮೊದಲು ಕೆಲವು ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.


ಗಾಳಿಪಟ: ಗಾಳಿಪಟವನ್ನು ನಾವೆಲ್ಲರೂ ಹಾರಿಸಿಯೇ ಇದ್ದೇವೆ. ಕಡಿಮೆ ಎತ್ತರದಲ್ಲಿದ್ದಾಗ ಗೋತಾ ಹೊಡೆಯುವ, ಕೆಳಕ್ಕಿಳಿಯುವ ಗಾಳಿಪಟ ಕೊಂಚ ಎತ್ತರ ಪಡೆದ ಬಳಿಕ ಸ್ಥಿರವಾಗಿರುವುದೇಕೆ? ಇದಕ್ಕೆ ಕಾರಣ ಎತ್ತರ ಹೆಚ್ಚಿದಂತೆ ಗಾಳಿಯ ವೇಗ ಹೆಚ್ಚು ಸ್ಥಿರವಾಗಿರುವುದೂ ಹಾಗೂ ಹೆಚ್ಚಿನದ್ದಾಗಿರುವುದೇ ಆಗಿದೆ. ಅದೂ ಅಲ್ಲದೇ ಒಂದು ಹಂತದಲ್ಲಿ ಗಾಳಿಪಟದ ದಾರವನ್ನು ಒಂದೆಡೆ ಕಟ್ಟಿಬಿಟ್ಟರೆ ಇಡಿಯದಿನ ಅದು ತನ್ನಷ್ಟಕ್ಕೆ ಹಾರಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ -ಮ್ಯಾಗ್ನಸ್ ಎಫೆಕ್ಟ್. ಸುಮ್ಮನೇ ಎಸೆದ ಕ್ರಿಕೆಟ್ ಚೆಂಡು ನೇರವಾಗಿ ಹೋಗುತ್ತದೆ. ಅದೇ ಕ್ರಿಕೆಟ್ ಚೆಂಡನ್ನು ತನ್ನ ಸುತ್ತ ತಿರುಗುವಂತೆ ಮಾಡಿ ಎಸೆದರೆ (ಸ್ಪಿನ್) ಚೆಂಡು ತ್ರಿಜ್ಯಾಕಾರದ ಮಾರ್ಗದಲ್ಲಿ ಮುನ್ನಡೆಯುತ್ತದೆ. ಫುಟ್ಬಾಲ್ ಆಟಗಾರ ವೇಗವಾಗಿ ತಿರುಗುವಂತೆ ಒದ್ದ ಚೆಂಡು ಸರಳ ರೇಖೆಯಲ್ಲಿ ಚಲಿಸದೇ ತ್ರಿಜ್ಯಾಕಾರದಲ್ಲಿ ಚಲಿಸಿ ಗೋಲ್ ಪಡೆಯುವುದಕ್ಕೂ ಇದೇ ಕಾರಣ. ವೃತ್ತಾಕಾರದ ವಸ್ತು ತನ್ನ ಸುತ್ತ ತಿರುಗುತ್ತಾ ಗಾಳಿಯಲ್ಲಿ ಚಲಿಸಿದರೆ ಒಂದು ಬದಿಯಲ್ಲಿ ಹೆಚ್ಚಿನ ಸಾಂದ್ರತೆಯನ್ನೂ, ಇನ್ನೊಂದೆಡೆ ಕಡಿಮೆ ಸಾಂದ್ರತೆಯನ್ನೂ ಪಡೆಯುವುದರಿಂದ ವಸ್ತುವಿನ ಪಥದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ವಸ್ತುವನ್ನು ವೇಗವಾಗಿ ಬೀಸುತ್ತಿರುವ ಗಾಳಿಯ ಮಧ್ಯೆ ಇರಿಸಿದರೆ? ಇದಕ್ಕೆ ವಿರುದ್ಧವಾದ
ಪ್ರತಿಕ್ರಿಯೆ ಉಂಟಾಗುತ್ತದೆ. ಅಂದರೆ ವಸ್ತು ತಿರುಗಲು ಪ್ರಾರಂಭಿಸುತ್ತದೆ. (ಗಿರಿಗಿಟ್ಟಲೆ ನೆನಪಿಗೆ ಬಂತಲ್ಲವೇ) ಈಗ ಈ ಗಿರಿಗಿಟ್ಟಲೆಯನ್ನು ವೇಗವಾಗಿ ಗಾಳಿ ಬೀಸುತ್ತಿರುವಲ್ಲಿಟ್ಟರೆ ಗಿರಿಗಿರಿ ತಿರುಗುತ್ತದೆ. ಆ ತಿರುಗುವ ಗಿರಿಗಿಟ್ಟಲೆಯನ್ನು ವಿದ್ಯುತ್ ಉತ್ಪಾದಿಸುವ ರೋಟಾರಿಗೆ ಜೋಡಿಸಿದರೆ ಸತತ ವಿದ್ಯುತ್ ಲಭ್ಯವಾಗುತ್ತದೆ. ಮಾರ್ಸ್ ಉಪಕರಣ ಉಪಯೋಗಿಸುವ ತಂತ್ರಜ್ಞಾನದ ಜೀವಾಳವೂ ಇದೇ.ಆದರೆ ಸತತವಾಗಿ ವೇಗವಾಗಿ ಬೀಸುತ್ತಿರುವ ಗಾಳಿ ಇರುವುದು ಎಲ್ಲಿ? ಬೇರೆಲ್ಲೂ ಹೋಗುವುದು ಬೇಡ, ನಾವಿದ್ದಲ್ಲಿಯೇ ಮುನ್ನೂರು ಅಡಿ ಮೇಲೆ ಹೋದರೆ ಸಾಕು. ಸತತವಾದ, ಒಂದೇ ದಿಕ್ಕಿನಲ್ಲಿ ಬೀಸುತ್ತಿರುವ ಸಾಧಾರಣವಾಗಿ ಹತ್ತು ಮೀ/ಸೆಕೆಂಡ್ ಗೆ ಕಡಿಮೆಯಿಲ್ಲದ ವೇಗದ ಗಾಳಿ ಸದಾ ಲಭ್ಯ. ಆದರೆ ಅಷ್ಟು ಎತ್ತರದಲ್ಲಿ ಸ್ಥಾಪಿಸುವುದು ಹೇಗೆ? ಇದಕ್ಕೆ ಉತ್ತರ ಹಗುರ ಅನಿಲ. ಅನಿಲಗಳಲ್ಲಿಯೇ ಅತಿಹಗುರವಾಗಿರುವುದು ಜಲಜನಕ. ಆದರೆ ಜಲಜನಕ ಸ್ವದಹ್ಯ (ಅಂದರೆ ತನಗೆ ತಾನೇ ಹೊತ್ತಿಕೊಳ್ಳುವ) ಗುಣವುಳ್ಳ ಅನಿಲವಾದ್ದರಿಂದ ಅದರ ಬಳಿಕ ಅತಿಹಗುರವಾದ ಅನಿಲ ಹೀಲಿಯಂ ಅನಿಲ ಈ ಉಪಕರಣದ ಮುಖ್ಯ ಪರಿಕರ.ಮಾರ್ಸ್ ಕಾರ್ಯನಿರ್ವಹಣೆ: ಅಗತ್ಯಕ್ಕೆ ತಕ್ಕ ಗಾತ್ರದ ಬೆಲೂನ್ ಹಾಗೂ ಅದಕ್ಕೆ ಅಲವಡಿಸಬಹುದಾದ ಬ್ಲೇಡುಗಳನ್ನು ಸಾಮಾನ್ಯ ವಾಹನದಲ್ಲಿ ಕೊಂಡೊಯ್ದು ಹೀಲಿಯಂ ತುಂಬಿಸಿ ಬಲಿಷ್ಠವಾದ ಉಕ್ಕಿನ ಕೇಬಲ್ ಮೂಲಕ ಆಗಸಕ್ಕೆ ಹಾರಿಬಿಟ್ಟರೆ ಸಾಕು. ಇಡಿಯ ಪಟ್ಟಣಕ್ಕೆ ವಿದ್ಯುತ್ ಅಗತ್ಯವಾದರೆ ಒಂದಕ್ಕಿಂತ ಹೆಚ್ಚಿನ ಬೆಲೂನುಗಳ ಸಮೂಹದ ಅಗತ್ಯವಿದೆ. ಆಗಸದಲ್ಲಿ ಗಿರಗಿರ ತಿರುಗುವ ರೋಟರಿಗೆ ಅಳವಡಿಸಿರುವ ಡಿ.ಸಿ. ವಿದ್ಯುತ್ ಜನರೇಟರ್ ಮೂಲಕ ಭೂಮಿಗೆ ವಿದ್ಯುತ್ ವರ್ಗಾಯಿಸಿ ಸೂಕ್ತ ಆಲ್ಟರ್ನೇಟರ್ ಮೂಲಕ ಎ.ಸಿ.ಗೆ ಪರಿವರ್ತಿಸಿಕೊಳ್ಳಬಹುದು.


ಅತಿಸರಳವಾದ ಈ ಮಾರ್ಸ್ ಉಪಕರಣದ ಉಪಯೋಗಗಳು ಹಲವಾರು. ಇದನ್ನು ಯಾವುದೇ ಊರಿನಲ್ಲಿ, ಯಾವುದೇ ಸ್ಥಳದಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಅಗತ್ಯವಾದ ಗಾಳಿಯ ವೇಗ ಕನಿಷ್ಟ ನಾಲ್ಕು ಮೀಟರ್ ಪ್ರತಿ ಸೆಕೆಂಡ್ ಇದ್ದರೂ ಸಾಕು. ಆದರೆ ಸುಮಾರು ಮೂನ್ನೂರು ಅಡಿ ಎತ್ತರದಲ್ಲಿ ಕನಿಷ್ಟ ಹತ್ತು ಮೀಟರ್ ಆದರೂ ಗಾಳಿ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ಉಪಕರಣ ನಿಲ್ಲುವ ಭಯ ಇಲ್ಲವೇ ಇಲ್ಲ. ಎಷ್ಟೇ ವೇಗವಾದ ಗಾಳಿಯಿದ್ದರೂ ತಡೆದುಕೊಳ್ಳುವ ಸಾಮರ್ಥ್ಯ ಮಾರ್ಸ್ ಗೆ ಇದೆ.
ಸುಮಾರು ಆರುನೂರರಿಂದ ಒಂದು ಸಾವಿರ ಅಡಿ ಎತ್ತರದಲ್ಲಿ ಉಪಕರಣವನ್ನು ಸ್ಥಾಪಿಸಿದರೆ ಆ ಊರಿನ ವಿದ್ಯುತ್ ಕೊರತೆ ಶಾಶ್ವತವಾಗಿ ನೀಗಲು ಸಾಧ್ಯ. ಚಿಕ್ಕ ಮನೆಗೆ ಬೇಕಾದ ಒಂದು ಯಂತ್ರದಿಂದ ಹಿಡಿದು ಇಡಿಯ ನಗರಕ್ಕೆ ಬೇಕಾದ ಹಲವು ಯಂತ್ರಗಳ ಸಮುಚ್ಛಯದವರೆಗೂ ಸ್ಥಾಪಿಸಲು ಸಾಧ್ಯ. ಗಾಳಿಯಂತ್ರದ ಒಂದು ಭಾಗದಷ್ಟು ಮಾತ್ರ ಉತ್ಪಾದನಾವೆಚ್ಚವಿರುವ ಮಾರ್ಸ್ ಉಪಕರಣವನ್ನು ಮೇಲಕ್ಕೇರಿಸುವುದೂ ನಿರ್ವಹಣೆಗಾಗಿ ಕೆಳಕ್ಕಿಳಿಸುವುದೂ ಅತಿಸುಲಭ. ಹಗುರವಾದ್ದರಿಂದ ಯಾವ ಸ್ಥಳದಲ್ಲಿ ಅಗತ್ಯವಿದೆಯೋ ಅಲ್ಲಿ ಸುಲಭವಾಗಿ ವಾಹನದಲ್ಲಿ ಕೊಂಡೊಯ್ಯಲೂ ಸಾದ್ಯ. ಯಾವುದೇ ರೀತಿಯ ಮಾಲಿನ್ಯವಿರದ ಕಾರಣ ಅತ್ಯಂತ ಪರಿಸರಸ್ನೇಹಿ ಕೂಡಾ. ಸುರಕ್ಷತೆಯ ಕಾರಣಕ್ಕೆ ಲೈಟ್ನಿಂಗ್ ಅರೆಸ್ಟರ್ ಅಳವಡಿಸುವುದು ಅಗತ್ಯ. ಮಳೆಗಾಲದಲ್ಲಿ ಸಹಾ ಮೇಲ್ಬಾಗದಲ್ಲಿ ಗಾಳಿಯೊಂದಿಗೆ ಮಳೆಹನಿ ಹಾಗೂ ತೇವಾಂಶದ ಕಾರಣ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆಯಿರುವುದರಿಂದ ತುಕ್ಕು ನಿರೋಧಕ ಹಾಗೂ ಹಗುರವಾದ ಅಲ್ಯೂಮಿನಿಯಂ ಲೋಹದಿಂದ ಮಾರ್ಸ್ ಉಪಕರಣವನ್ನು ತಯಾರಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಬಳಿಕ ಹೆಚ್ಚೂ ಕಡಿಮೆ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾದುದರಿಂದ ವಿದ್ಯುತ್ ಬೆಲೆ ಈಗ ಲಭ್ಯವಾಗುತ್ತಿರುವ ವಿದ್ಯುತ್ ಬೆಲೆಯ ಒಂದಂಶದಷ್ಟು ಅಗ್ಗವಾಗಲಿದೆ.ಹತ್ತು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉಪಕರಣದ ಅಂಕಿ‌ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಒಮ್ಮೆ ಅಳವಡಿಸಿದರೆ ಸುಮಾರು ಹದಿನೈದು ವರ್ಷಗಳವರೆಗೆ ಬಾಳಿಕೆ ಬರುವ ಈ ಉಪಕರಣದ ಬೆಲೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಈ ವರ್ಷದ ಅಂತ್ಯದಲ್ಲಿ ಮಾರ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.Magenn Power Product
Model 10kW
Rated Power 10,000 Watts
Size (Diameter x Length) 30 feet by 60 feet
Shipping Weight Under 3,000 lbs - depending on tether length
Volume of Helium 33,000 cubic feet (approx.)
Tether Height 400 ft standard - up to 1,000 ft optional tether length, in increments of 100 feet
Start-up Wind Speed 2.0 m/sec - 4.48 mph
Cut-in Wind Speed 3.0 m/sec - 6.7 mph
Rated Wind Speed 12.0 m/sec - 26.8 mph
Cut-out Wind Speed 25.0 m/sec - 53.7 mph
Maximum Wind Speed 28.0 m/sec - 62.6 mph
Temperature Range -40ºC /-40ºF to +45ºC/+113ºF
Generators 2 x 5 kW
Output Form Various Options Available: 120 VAC 60Hz - 240 VAC 50 Hz - Regulated DC 12-600V
Warranty Up to 5 Years
Life Cycle 10 - 15 Years
Price (USD) (Estimated) TBD
Availability 2009-10
ಪ್ರಸ್ತುತ ಗಣಿ, ಸಮುದ್ರ, ಧೃವಪ್ರದೇಶ ಮೊದಲಾದ ನಿeನ ಪ್ರದೇಶಗಳಲ್ಲೂ ಜನವಸರಿ ವಿರಳವಾದೆಡೆಗಳಲ್ಲೂ ವಿದ್ಯುತ್ ಉತ್ಪಾದನೆ ಸುಲಭಸಾಧ್ಯವಲ್ಲ. ಇಲ್ಲಿ ಭಾರವಾದ ಡೀಸೆಲ್ eನರೇಟರುಗಳನ್ನು ಉಪಯೋಗಿಸಲಾಗುತ್ತಿದೆ. ಉರಿಸುವ ಡೀಸೆಲ್ ಹೊಗೆ ಪರಿಸರಕ್ಕೂ ಹಾನಿಕರ, ಇಂಜಿನ್ ನಿರ್ವಹಣೆಯೂ ಕಷ್ಟಕರ. ಇಂಥಹ ಸ್ಥಳಗಳಲ್ಲೆಲ್ಲಾ ಮಾರ್ಸ್ ಒಂದು ವರದಾನವಾಗಿ ಪರಿಣಮಿಸಲಿದೆ.


ಈ ಸರಳವಿದ್ಯುತ್ ಗಾಳಿಯಂತ್ರ ನಮ್ಮ ಊರುಗಳಿಗೂ ಶೀಘ್ರವೇ ಆಗಮಿಸುವಂತಾಗಲಿ ಎಂದು ಆಶಿಸೋಣ.


(ಈ ಲೇಖನ ಸುಧಾ ವಾರಪತ್ರಿಕೆಯಲ್ಲಿ 2010 ರ ಏಪ್ರಿಲ್ ನಂದು ಪ್ರಕಟವಾಗಿದೆ.)