ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ನವೆಂಬರ್ 30, 2017

ಥಟ್ಟಂತ ತಯಾರಾಗುವ ನೂಡಲ್ ಏಕೆ ತಿನ್ನಬಾರದು?

ಬೋಲ್ಡ್ ಸ್ಕೈ . ಕಾಂ ನಲ್ಲಿ ಪ್ರಕಟವಾದ ಲೇಖನ
https://goo.gl/7QV854

ಇನ್ಸ್ಟಂಟ್ ನೂಡಲ್ಸ್ - ಇದು ಇಂದು ಪ್ರತಿ ಅಂಗಡಿಯಲ್ಲಿಯೂ ಥಟ್ಟನೇ ಕೈಗೆ ಸಿಗುವ ಸಿದ್ಧ ಆಹಾರದ ಪೊಟ್ಟಣವಾಗಿದೆ. ಹೆಸರೇ ತಿಳಿಸುವಂತೆ ಇದನ್ನು ಇನ್ಸ್ಟಂಟ್ ಅಥವಾ ಥಟ್ಟನೇ ತಯಾರಿಸಿ ಸೇವಿಸಬಹುದು. ರುಚಿಕರವೂ ಆರೋಗ್ಯಕರವೂ ಆಗಿರುವ ಈ ಮಸಾಲೆಭರಿತ ಶ್ಯಾವಿಗೆ ಸಮಯವಿಲ್ಲದವರ ಪಾಲಿಗೆ ಅಕ್ಷಯ ಪಾತ್ರೆಯೇ ಸರಿ. ವಿದ್ಯಾರ್ಥಿಗಳು, ಬೆಳಿಗ್ಗೆ ಧಾವಂತದಲ್ಲಿ ಬೇಗನೇ ಕಛೇರಿ, ಉದ್ಯೋಗದ ಸ್ಥಳಗಳಿಗೆ ತಲುಪಬೇಕಾದ ಉದ್ಯೋಗಸ್ಥರು, ಬೇರೆ ಕೆಲಸದಲ್ಲಿ ತೊಡಗಿದ್ದು ಅಡುಗೆಗೆ ಸಮಯವಿಲ್ಲದಿರುವ ಗೃಹಿಣಿಯರು ಒಟ್ಟಾರೆ ಎಲ್ಲರಿಗೂ ಈ ನೂಡಲ್ಸ್ ನೆಚ್ಚಿನ ಆಯ್ಕೆಯಾಗಿದೆ. ಥಟ್ಟಂತ ತಯಾರಿಸಬಹುದು ಹಾಗೂ ರುಚಿಕರವಾಗಿರುತ್ತದೆ ಎಂಬ ಎರಡು ಕಾರಣಗಳನ್ನು ಹೊರತುಪಡಿಸಿದರೆ ವಾಸ್ತವದಲ್ಲಿ ವಿಶ್ವದ ಅತ್ಯಂತ ಕೆಟ್ಟ ಆಹಾರವೇ ಈ ನೂಡಲ್ಸ್. ಎಷ್ಟೋ ದಿನಗಳಿಂದ ತಿನ್ನುತ್ತಿದ್ದೇವೆ, ನಮಗೇನೂ ತೊಂದರೆಯಾಗಿಲ್ಲವಲ್ಲ ಎಂದು ನೂಡಲ್ಸ್ ನ ಗುಣಗಾನ ಮಾಡುವವರಿಗೆ ನಿರಾಶೆ ಕಾದಿದೆ. ಏಕೆಂದರೆ ಇದರ ಸೇವನೆಯಿಂದ ಹೊಟ್ಟೆ ತುಂಬಿದಂತಾಗುವುದು, ವಾಯುಪ್ರಕೋಪ, ಅಜೀರ್ಣ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ.

ಈ ನೂಡಲ್ಸ್ ಮಕ್ಕಳಿಗೆ ಹೆಚ್ಚು ಇಷ್ಟ. ಮಕ್ಕಳಿಗೆ ಹಸಿವಾದರೆ ತಕ್ಷಣವೇ ಏನಾದರೂ ತಿನ್ನಬೇಕಿರುತ್ತದೆ ಹಾಗೂ ಇವರ ನೆಚ್ಚಿನ ಕಾರ್ಟೂನು ಪಾತ್ರಗಳನ್ನೂ ಇದರ ಪ್ಯಾಕೆಟ್ಟಿನ ಮೇಲೆ ಮುದ್ರಿಸುವ ಮೂಲಕ ಮಕ್ಕಳು ಇನ್ನಷ್ಟು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳು ಇಷ್ಟಪಡ್ತುತಾರೆ ಎಂದೇ ಹೆಚ್ಚಿನ ಪಾಲಕರು ಹೆಚ್ಚು ಹೆಚ್ಚು ಪ್ರಮಾಣ ಹಾಗೂ ಭಿನ್ನವಾದ ರುಚಿಯ ನೂಡಲ್ಸ್ ಪ್ಯಾಕೆಟ್ಟುಗಳನ್ನು ಕೊಂಡು ತರುತ್ತಾರೆ. ಈ ನೂಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂದರೆ ಇದನ್ನು ತಯಾರಿಸಲು ಮೊದಲಾಗಿ ನಾರಿನ ಅಂಶವೇ ಇಲ್ಲದ ಮೈದಾ ಹಿಟ್ಟಿನ ಶಾವಿಗೆಯನ್ನು ಯಂತ್ರಗಳ ಮೂಲಕ ತಯಾರಿಸಿ ಇದಕ್ಕೆ ಹಲವಾರು ಮಸಾಲೆ ಹಾಗೂ ಕೆಡದೇ ಇರುವಂತೆ ಸಂರಕ್ಷಕಗಳು ಹಾಗೂ ಕೃತಕ ರುಚಿಬರುವ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕಗಳೆಲ್ಲಾ ರುಚಿಯಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಬಲ್ಲವು.
ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ

ಬನ್ನಿ, ಥಟ್ಟಂತ ತಯಾರಾಗುವ ನೋಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂಬುದನ್ನು ನೋಡೋಣ:
೧) ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ.
ಸತತವಾಗಿ ನೂಡಲ್ಸ್ ಸೇವಿಸುವ ಮೂಲಕ ಜೀರ್ಣಕ್ರಿಯೆಯ ಲಯಬದ್ದತೆ ಹಾನಿಗೊಳಗಾಗುತ್ತದೆ. ಕೆಲವು ದಿನಗಳ ಬಳಿಕ ಮಲಬದ್ದತೆ, ಆಮಶಂಕೆ, ಹೊಟ್ಟೆಯಲ್ಲಿ ನೋವು, ಆಮ್ಲೀಯತೆ, ಎದೆಯುರಿ, ಹೊಟ್ಟೆಯಲ್ಲಿ ಗುಡುಗುಡು, ಹೊಟ್ಟೆಯುಬ್ಬರಿಕೆ ಹಾಗೂ ಸದಾ ಹೊಟ್ಟೆ ತುಂಬಿದಂತಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.
ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ
೨) ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ:
ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದೆ. ಇದು ರಕ್ತದ ಒತ್ತಡವನ್ನು ಹೆಚ್ಚಿಸಲು ಪ್ರಮುಖವಾದ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಹೆಚ್ಚುವರಿ ಪ್ರಮಾಣವನ್ನು ನಮ್ಮ ದೇಹದಿಂದ ಹೊರಹಾಕಲು ನಮ್ಮ ಮೂತ್ರಪಿಂಡಗಳು ಅತಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಮೂತ್ರಪಿಂಡಗಳು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ (fluid retention) ಪರಿಣಾಮವಾಗಿ ಕೈಕಾಲುಗಳು ನೀರುತುಂಬಿಕೊಂಡಂತೆ ಊದಿಕೊಳ್ಳುತ್ತವೆ. ಒಂದು ವೇಳೆ ಈಗಾಗಲೇ ಹೃದಯದೊತ್ತಡ ಮತ್ತು ಮೂತ್ರಪಿಂಡದ ತೊಂದರೆ ಇರುವ ವ್ಯಕ್ತಿಗಳಿಗೆ ನೂಡಲ್ಸ್ ನೇರವಾದ ವಿಷಾಹಾರವಾಗಿದೆ.
ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ
೩) ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ.
ಒಂದು ವೇಳೆ ನಿಮ್ಮ ಜೀವರಾಸಾಯನಿಕ ಕ್ರಿಯೆ ಕುಗ್ಗಿದರೆ ಇದು ಸ್ಥೂಲಕಾಯಕ್ಕೆ ನೇರವಾದ ಕಾರಣವಾಗುತ್ತದೆ. ಈ ಆಹಾರ ದೇಹದಲ್ಲಿ ವಿಷವಸ್ತುಗಳ ಸಂಗ್ರಹ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಜೀವರಾಸಾಯನಿಕ ಕ್ರಿಯೆ ಕುಗ್ಗುತ್ತದೆ. ಈ ವಿಷಗಳೆಲ್ಲಾ ನಾಲಿಗೆಗೆ ರುಚಿಕರವಾಗಿರುವ ರಾಸಾಯನಿಕ ಹಾಗೂ ಸಂರಕ್ಷಕಗಳಾಗಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನುವಂತೆ ಪ್ರಚೋದಿಸುತ್ತದೆ.

೪) ಅಜಿನೋಮೋಟೋ ಸಹಾ ಇದೆ
Mono Sodium Glutamate (MSG) ಅಥವ Chinese Salt ಎಂದೂ ಕರೆಯಲ್ಪಡುವ ಅಜಿನೋಮೋಟೋ (ವಾಸ್ತವವಾಗಿ ಇದು ಉತ್ಪಾದಿಸುವ ಸಂಸ್ಥೆಯ ಹೆಸರು) ಒಂದು ರುಚಿಹೆಚ್ಚಿಸುವ ಉಪ್ಪಾಗಿದ್ದರೂ ಮಾರಕವಾದ ರಾಸಾಯನಿಕವಾಗಿದೆ. ಇದರ ಹೆಸರು ಗೊತ್ತಿಲ್ಲದ ಮುಗ್ಧ ಬಾಣಸಿಗರು ಇಂದಿಗೂ ಇದಕ್ಕೆ ಟೇಸ್ಟಿಂಗ್ ಪೌಡರ್ ಎಂದೇ ಕರೆಯುತ್ತಾರೆ. ಆದರೆ ಸಂಶೋಧನೆಗಳ ಮೂಲಕ ಈ ರಾಸಾಯನಿಕದ ಸೇವನೆ ಮೆದುಳಿಗೆ ಹಾನಿಕಾರಕ ಎಂದು ಸಾಬೀತಾಗಿದೆ. ಅಲ್ಲದೇ ಮೂತ್ರಪಿಂಡಗಳ ವೈಫಲ್ಯ ಹಾಗೂ ಇತರ ದೈಹಿಕ ತೊಂದರೆಗಳನ್ನೂ ತಂದೊಡ್ಡುತ್ತದೆ. ಕೆಲವರಿಗೆ ಈ ರಾಸಾಯನಿಕ ಅಲರ್ಜಿಕಾರಕವಾಗಿದ್ದು ಕೊಂಚ ಹೆಚ್ಚಿನ ಪ್ರಮಾಣ ದೇಹ ಸೇರಿದರೂ ಇವರಿಗೆ ಎದೆಯಲ್ಲಿ ನೋವು, ತಲೆನೋವು ಮೊದಲಾದವು ಎದುರಾಗುತ್ತವೆ.
ಮೇಣ
೫) ಮೇಣ
ಶ್ಯಾವಿಗೆಯ ನೂಲುಗಳು ಒಂದಕ್ಕೊಂದು ಅಂಟಿಕೊಂಡಿರದಂತೆ ಇರಲು ಈ ಉತ್ಪನ್ನಗಳಲ್ಲಿ ಮೇಣವನ್ನು ಬಳಸಲಾಗುತ್ತದೆ. ಒಣಗಿದ್ದಾಗ ಈ ಮೇಣ ಕಾಣಲು ಬರುವುದಿಲ್ಲ. ಇದನ್ನು ಪರೀಕ್ಷಿಸಬೇಕೆಂದರೆ ಕುದಿಯುವ ನೀರಿನಲ್ಲಿ ಕೊಂಚ ನೂಡಲ್ಸ್ ಗಳನ್ನು ಮಾತ್ರ ಹಾಕಿ ಒಂದು ನಿಮಿಷ ಬಿಟ್ಟರೆ ಸಾಕು. ಮೇಣಕರಗಿ ನೀರಿನ ಮೇಲ್ಮೈಯಲ್ಲಿ ತೇಲುತ್ತಾ ರಂಗುರಂಗಿನ ಚಿತ್ತಾರ ಬಿಡಿಸುವುದನ್ನು ಕಾಣಬಹುದು. ಈ ಮೇಣವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದು ವಿಸರ್ಜನೆಗೊಳ್ಳುವ ಮೊದಲು ಕರುಳುಗಳಲ್ಲಿ ತೊಂದರೆ, ಮಲಬದ್ದತೆ, ವಾಯುಪ್ರಕೋಪ ಮೊದಲಾದವುಗಳನ್ನು ಉಂಟುಮಾಡಿಯೇ ವಿದಾಯ ಹೇಳುತ್ತದೆ.
ಕ್ಯಾನ್ಸರ್‌ಕಾರಕ ಕಣಗಳು
೬) ಕ್ಯಾನ್ಸರ್ ಕಾರಕ ಕಣಗಳು:
ಈ ನೂಡಲ್ಸ್ ಗಳಲ್ಲಿ ಕೆಲವಾರು ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಹೊಂದಿವೆ. ವಿಶೇಷವಾಗಿ ಕಪ್ ಗಳಲ್ಲಿ ಪ್ಯಾಕ್ ಮಾಡಿಸುವ ಉತ್ಪನ್ನಗಳು. ಈ ಕಪ್ ಗಳನ್ನು ಥರ್ಮೋಕೋಲ್ ಆಧಾರಿತ ಉತ್ಪನ್ನಗಳಿಂದ ತಯಾರಿಸಲಾಗಿದ್ದು ಇದಕ್ಕೆ ಬಿಸಿನೀರು ತಗುಲಿದೊಡನೆ ಇದರಲ್ಲಿರುವ ಕೆಲವು ರಾಸಾಯನಿಕಗಳು ಕರಗಿ ನೀರಿನೊಡನೆ ಬೆರೆಯುತ್ತವೆ. ಎಷ್ಟೋ ಮುಂದುವರೆದ ರಾಷ್ಟ್ರಗಳಲ್ಲಿ ಥರ್ಮೋಕೋಲ್ ಆಧಾರಿತ ಉತ್ಪನ್ನಗಳನ್ನು ಬಿಸಿದ್ರವಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದರ ನಿಷೇಧದ ಅಗತ್ಯವಿದ್ದು ಈಗಲೂ ಈ ಉತ್ಪನ್ನಗಳನ್ನು ನೂಡಲ್ಸ್ ನಲ್ಲಿ ಪ್ಯಾಕ್ ಮಾಡಿರುವ ಕಾರಣ ಇದನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇದ್ದೇ ಇರುತ್ತದೆ.
 ಯಕೃತ್‌ಗೆ ಆಗುವ ಹಾನಿಯ ಸಾಧ್ಯತೆ
೭) ಯಕೃತ್ ಗೆ ಆಗುವ ಹಾನಿಯ ಸಾಧ್ಯತೆ
ನೂಡಲ್ಸ್ ನಲ್ಲಿರುವ humectants ಅಥವಾ ಮಂಜುಗಡ್ಡೆಯಾಗದಂತೆ ತಡೆಯಲು ಬಳಸಲಾಗುವ ಕೆಲವು  ರಾಸಾಯನಿಕಗಳು ವಿಶೇಷವಾಗಿ ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿ ಎಸಗುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ ಬಳಸಲಾಗುವ  propylene glycol ಎಂಬ ರಾಸಾಯನಿಕ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಲ್ಲುದು.
ತೂಕದಲ್ಲಿ ಹೆಚ್ಚಳ
೮) ತೂಕದಲ್ಲಿ ಹೆಚ್ಚಳ:
ಥಟ್ಟನೇ ತಯಾರಾಗುವ ನೂಡಲ್ಸ್ ನಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟುಗಳಾದ ಮೈದಾ ಹಾಗೂ ಇತರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರೊಂದಿಗೇ ಅಜಿನೋಮೋಟೋ, ಉಪ್ಪು, ರುಚಿಕಾರಕಗಳು ಹೆಚ್ಚು ಹೆಚ್ಚು ತಿನ್ನಲು ಹಾಗೂ ತೂಕ ಹೆಚ್ಚಲು ಬೆಂಬಲ ನೀಡುತ್ತವೆ. ಅಲ್ಲದೇ ಈ ಆಹಾರದ ಸೇವನೆಯಿಂದ ನಮ್ಮ ರಕ್ತದಲ್ಲಿಯೂ ಸಕ್ಕರೆಯ ಪ್ರಮಾಣ ಥಟ್ಟಂತ ಏರುತ್ತದೆ ಹಾಗೂ ಈ ಆಗಾಧ ಪ್ರಮಾಣವನ್ನು ನಿಭಾಯಿಸಲು ಮೇದೋಜೀರಕ ಗ್ರಂಥಿ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅನ್ನೂ ಬಿಡುಗಡೆಗೊಳಿಸಬೇಕಾಗಿ ಬರುತ್ತದೆ. ಇದು ದೇಹದಲ್ಲಿ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಈ ಏರುಪೇರು ಹಲವಾರು ತೊಂದರೆಗಳನ್ನು ಹುಟ್ಟುಹಾಕುತ್ತದೆ.

೯) ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ
ನೂಡಲ್ಸ್ ಅನ್ನೇ ಹೆಚ್ಚು ಇಷ್ಟಪಟ್ಟು ತಿನ್ನುವವರಿಗೆ ಕೊಂಚ ನಿರಾಶೆಯಾಗುವುದಂತೂ ಖಂಡಿತಾ. ಏಕೆಂದರೆ ಈ ಆಹಾರ ನಮ್ಮ ಕರುಳುಗಳ ಒಳಗಿನ ವಿಲ್ಲೈ ಎಂಬ ಹೀರುಕ ಭಾಗಕ್ಕೆ ಅಂಟಿಕೊಳ್ಳುವ ಗುಣವಿದ್ದು ಇದು ಮುಂದೆಹೋಗದೇ ಅಲ್ಲಿಯೇ ವಾಯುವಿನ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.
ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ
ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?
ಕೆಲದಿನಗಳ ಹಿಂದೆ ಮ್ಯಾಗಿ ಎಂಬ ಉತ್ಪನ್ನವನ್ನು ಭಾರತದ ಮಾರುಕಟ್ಟೆ ನಿಷೇಧಿಸಿತ್ತು. ಈ ಉತ್ಪನ್ನಗಳಲ್ಲಿ ಅಪಾಯಕರ ಮಟ್ಟದಲ್ಲಿ ಬೂದಿ ಇದೆ ಎಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸಿ ತೋರಿಸಲಾಗಿತ್ತು. ಇದನ್ನು ಸರಿಪಡಿಸಿದ ಬಳಿಕ ಮತ್ತೆ ಇದು ಮಾರುಕಟ್ಟೆಗೆ ಬಂದಿದೆ. ಆದರೆ ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವಾಗ ಇದರ ಸೇವನೆ ಆರೋಗ್ಯಕ್ಕೆ ಹೇಗೆ ಮಾರಕ ಎಂದು ಅಧ್ಯಯನ ಮಾಡಿಯೇ ಬಿಡುಗಡೆಮಾಡಲಾಗುತ್ತದೆ. ಆದ್ದರಿಂದ ಇದರ ಪರಿಣಾಮಗಳು ತಕ್ಷಣದ ಬಳಕೆಯಿಂದ ಗೋಚರಿಸಲ್ಪಡುವುದಿಲ್ಲ. ಹಾಗಾಗಿ ಈ ಸಂಸ್ಥೆಗಳು ಬಚಾವು. ಒಂದು ವರ್ಷದ ಮೇಲೆ ಯಾವುದಾದರೂ ತೊಂದರೆ ಎದುರಾದರೂ ಅದು ನೀವು ಒಂದು ವರ್ಷದಿಂದ ನೂಡಲ್ಸ್ ತಿಂದಿದ್ದಕ್ಕೇ ಬಂದಿರುವುದು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ಇವನ್ನು ನಿಷೇಧಿಸಲು ಸರ್ಕಾರಕ್ಕೂ ಸ್ಪಷ್ಟ ಕಾರಣ ದೊರಕುವುದಿಲ್ಲ. ಹಾಗಾಗಿ ಇವು ಎಗ್ಗಿಲ್ಲದೇ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಆದರೆ ಬಳಕೆದಾರರಾದ ನಾವೇ ಎಚ್ಚೆತ್ತು ಸ್ವತಃ ಈ ಉತ್ಪನ್ನಗಳನ್ನು ಕೊಳ್ಳದೇ ಇರುವ ಮೂಲಕ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವುದೇ ಜಾಣತನ.

ಮಂಗಳವಾರ, ನವೆಂಬರ್ 28, 2017

ನೆಮ್ಮದಿಯ ಆರ್ಥಿಕ ದಿನಗಳಿಗಾಗಿ ಇಂದಿನಿಂದೇ ಈ ಆರು ಸೂತ್ರಗಳನ್ನು ಪಾಲಿಸಲು ಪ್ರಾರಂಭಿಸಿ

ಬೋಲ್ಡ್ ಸ್ಕೈ .ಕಾಂ ತಾಣದಲ್ಲಿ ಪ್ರಕಟವಾಗಿರುವ ಲೇಖನ
https://goo.gl/RfXJnT


ಬಾಳಿನಲ್ಲಿ ಏನೇ ಸಾಧಿಸಿದರೂ ನೆಮ್ಮದಿಯ ನಾಳೆಗಾಗಿ ಮಾತ್ರ ಆರ್ಥಿಕ ಸುದೃಢತೆ ತುಂಬಾ ಅಗತ್ಯ. ಬಾಳಿನ ಸಂಜೆ ಸುಖಕರವಾಗಿರಬೇಕೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಆರ್ಥಿಕ ಹವ್ಯಾಸಗಳನ್ನು ಅನುಸರಿಸುತ್ತಾ ಬರಬೇಕು. ನಿಮ್ಮ ವೈಯಕ್ತಿಕ ಖರ್ಚುಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಈ ಆರ್ಥಿಕ ಸ್ಥಿರತೆ ಹಾಗೂ ಸುರಕ್ಷತೆ ಅವಲಂಬಿಸಿದೆ.

ನಮಗೆ ಮೊದಲ ಕೆಲಸ ಸಿಕ್ಕಾಗ ಹೊರಜಗತ್ತಿನಲ್ಲಿ ನಮ್ಮ ವೈಯಕ್ತಿಕ ಖರ್ಚುಗಳು ಇಷ್ಟಾಗಬಹುದೆಂಬ ಅಂದಾಜು ನಮಗಾಗುವುದಿಲ್ಲ. ನಿಧಾನವಾಗಿ, ಈ ಖರ್ಚುಗಳು ಒಂದಾದ ಮೇಲೊಂದರಂತೆ ಆವರಿಸುತ್ತಾ ಬರುತ್ತವೆ ಹಾಗೂ ಹೊರಜಗತ್ತಿನ ಆಕರ್ಷಣೆಗಳಿಗೆ ಬಲಿಯಾಗುತ್ತೇವೆ. ಆದರೆ ಚಿಕ್ಕ ವಯಸ್ಸಿನಿಂದಲೇ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದರೆ ನಮ್ಮ ಭವಿಶ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಅಥವಾ ಅವಕಾಶಗಳನ್ನು ಎದುರಿಸಲು ಸಾಮರ್ಥ್ಯ ದೊರಕುವುದು ಮಾತ್ರವಲ್ಲ, ಮಾನಸಿಕವಾದ ಬೆಂಬಲವೂ ದೊರಕುತ್ತದೆ.

ಇದಕ್ಕೆ ಜಾದೂದಂಡ ಅಥವಾ ಅಲ್ಲಾವುದ್ದೀನನ ಮಾಯಾದೀಪವೇನೂ ಬೇಕಾಗಿಲ್ಲ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವ ಜಾಣ್ಮೆ ಹಾಗೂ ಅನವಾಶ್ಯಕ ಖರ್ಚುಗಳಿಗೆ ಬೇಡ ಎನ್ನಲು ಅಗತ್ಯವಿರುವ ಮನೋಬಲ ಇಷ್ಟೇ ಸಾಕು, ನಿಮ್ಮ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಸುಖಕರವಾಗಿಸಲು.

ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು ನೀಡುವ ಆರು ಸೂತ್ರಗಳನ್ನು ಒಂದು ನಿಯಮದಂತೆ ಪಾಲಿಸಿಕೊಂಡು ಬರುತ್ತಿದ್ದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಯೋಜನೆಗಳು ಸಫಲವೂ ಆಗುತ್ತವೆ.
1. ಬಜೆಟ್ ರೂಪಿಸಿ ಮತ್ತು ಅದಕ್ಕೆ ಬದ್ದರಾಗಿರಿ
1. ಒಂದು ಆಯವ್ಯಯದ ಲೆಕ್ಕಾಚಾರವಿರಲಿ, ಇದಕ್ಕೆ ಬದ್ದರಾಗಿರಿ:
ನೀವು ಬದ್ದರಾಗಬೇಕಾಗಿರುವ ಆರ್ಥಿಕ ಸೂತ್ರಗಳಲ್ಲಿ ಇದು ಪ್ರಥಮ ಆದ್ಯತೆಯ ಸೂತ್ರವಾಗಿದೆ. ಅರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಆಯವ್ಯಯದ ಲೆಕ್ಕಾಚಾರ ಅಥವಾ ಬಜೆಟ್ ಒಂದನ್ನು ಹಮ್ಮಿಕೊಳ್ಳುವುದು ಅಡಿಪಾಯವಾಗಿದೆ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಪರಿಗಣಿಸಿ ಇದರ ಸಾಧಕ ಬಾಧಕಗಳ ರೂಪುರೇಶೆಗಳನ್ನು ಹಾಕಿಕೊಳ್ಳುವುದು. ಒಂದು ಬಜೆಟ್ ಇದ್ದು ಆ ಪ್ರಕಾರವೇ ನಡೆದುಕೊಳ್ಳುತ್ತಾ ಬಂದರೆ ನಿಮ್ಮ ಅರ್ಥಿಕ ಗುರಿಗಳನ್ನು ಸುಲಭವಾಗಿ ಮುಟ್ಟಬಹುದು.

ನಿಮ್ಮ ಬಜೆಟ್ ಈ ವಿಷಯಗಳನ್ನು ಅವಲಂಬಿಸಿರುತ್ತದೆ:
ಮಾಸಿಕ ಆದಾಯ: ನಿಮ್ಮ ನಿಯಮಿತವಾದ ಮಾಸಿಕ ವೇತನವೆಷ್ಟು? ನಿಮಗೆ ಇನ್ನೂ ಯಾವುದಾದರೂ ಪರ್ಯಾಯ ಆದಾಯ ಅಥವಾ ಪರೋಕ್ಷ ಗಳಿಕೆ ಇದೆಯೇ?
ಮಾಸಿಕ ಖರ್ಚು: ಬಾಡಿಗೆ, ಮೊಬೈಲ್ ವೆಚ್ಚ, ವಿದ್ಯುತ್, ಸಾಲದ ಮಾಸಿಕ ಕಂತು, ದಿನಸಿ, ಬಟ್ಟೆಬರೆ, ಮನರಂಜನೆ ಇತ್ಯಾದಿಗಳು.
ಮಾಸಿಕ ಉಳಿತಾಯ: ಒಂದು ಸಾಮಾನ್ಯವಾದ ತಿಂಗಳಲ್ಲಿ ನಿಮ್ಮ ಉಳಿತಾಯ ಎಷ್ಟು?
ಯಾವುದೇ ಕುಟುಂಬಕ್ಕೆ ಮೇಲಿನ ಖರ್ಚುಗಳು ಎಲ್ಲಾ ತಿಂಗಳಲ್ಲಿ ಸರಿಸಮನಾಗಿರಲು ಸಾಧ್ಯವೇ ಇಲ್ಲ. ಕೊಂಚ ಹೆಚ್ಚು ಕಡಿಮೆ ಅನುಸರಿಸಿ, ವಾರ್ಷಿಕ ಸರಾಸರಿಯನ್ನು ಪರಿಗಣಿಸುವ ಮೂಲಕ ಈ ಲೆಕ್ಕಗಳನ್ನು ಒಂದು ಹಂತದಲ್ಲಿರುವಂತೆ ನೋಡಿಕೊಳ್ಳಬೇಕು. ಆ ಪ್ರಕಾರ ನಿಮ್ಮ ಬಜೆಟ್ ನಿಗದಿಪಡಿಸಬೇಕು. ಆದರೆ ಬಜೆಟ್ ಇಲ್ಲದೇ ಇರುವುದು ಮಾತ್ರ ಸಲ್ಲದು.

2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು
2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು:
ಇದು ನಮ್ಮ ಹಿರಿಯರು ಸದಾ ಹೇಳುತ್ತಾ ಬಂದಿರುವ ಸೂತ್ರವಾಗಿದ್ದು ಇದನ್ನು ಕಡೆಗಣಿಸುವ ಮೂಲಕ ಭಾರಿ ಆರ್ಥಿಕ ಗಂಡಾಂತರವೇ ಎದುರಾಗಬಹುದು. ಇದರ ಪರಿಣಾಮ ಪ್ರಾರಂಭದಲ್ಲಿ ಚಿಕ್ಕದಾಗಿ ತೋರಿದ್ದು ಹೆಚ್ಚಿನವರು ಕಡೆಗಣಿಸುತ್ತಾರೆ. ಆದರೆ ಮುಂದೊಂದು ದಿನ ಇದು ಬುಡವನ್ನೇ ಕಡಿದು ಬಿಡುವಷ್ಟು ಭಾರಿಯಾದ ಭಾರವಾಗಿ ಪರಿಗಣಿಸಬಹುದು. ಹಿರಿಯರ ಈ ಮಾತನ್ನು ನಾವು ಎಷ್ಟು ಬೇಗ ಕಲಿತು ಮನಗಾಣುತ್ತೇವೋ ಅಷ್ಟೇ ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸಬಹುದು.

ಈ ಬಗ್ಗೆ ಬೆಂಜಮಿನ್ ಫ್ರಾಂಕ್ಲಿನ್ ರವರು ಹೀಗೆ ಹೇಳುತ್ತಾರೆ: "ನಿಮ್ಮ ಚಿಕ್ಕ ಚಿಕ್ಕ ಖರ್ಚುಗಳ ಬಗ್ಗೆಯೂ ಕಾಳಜಿ ಇರಲಿ. ನೆನಪಿರಲಿ, ಒಂದು ಚಿಕ್ಕ ತೂತು ಸಹಾ ದೊಡ್ಡ ಹಡಗನ್ನೇ ಮುಳುಗಿಸಿಬಿಡಬಲ್ಲುದು"

ಈ ಮಾತನ್ನು ಸಮರ್ಥಿಸಲು ಕೆಲವು ಉದಾಹರಣೆಗಳನ್ನು ನೋಡೋಣ:
* ಮಾರುಕಟ್ಟೆಯಲ್ಲಿ ಅಥವಾ ಜಾಹೀರಾತುಗಳಲ್ಲಿ ಕಂಡ ಯಾವುದೇ ವಸ್ತು ನಮಗೆ ಬೇಕೆನಿಸುತ್ತದೆ. ಹೀಗೆ ಅನ್ನಿಸುವಂತೆಯೇ ಈ ಜಾಹೀರಾತುಗಳಲ್ಲಿ ಭಾರೀ ಸುಳ್ಳನ್ನು ಸೇರಿಸಿರುತ್ತಾರೆ. ಆದರೆ ಈ ಸುಳ್ಳುಗಳಿಗೆ ನಿಮ್ಮ ಭಾವನೆಯನ್ನು ಬಲಿಗೊಡದೇ ನಿಮಗೆ ಅಗತ್ಯವಿದ್ದರೆ ಮಾತ್ರ, ಉತ್ತಮ ಗುಣಮಟ್ಟದ್ದನ್ನು ಕೊಳ್ಳಿ. ಅಗತ್ಯವಿಲ್ಲದೇ ಇದ್ದರೆ, ಆಫರ್ ಇದ್ದರೂ ಸಹಾ, ಕೊಳ್ಳಲೇಬೇಡಿ. (ಮಹಿಳೆಯರಿಗೆ ಹೆಚ್ಚು ಅನ್ವಯ)
* ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಕೊಳ್ಳುವಾಗ ನಿಮ್ಮ ಮಿತಿಗಳನ್ನು ಅರಿತೇ ಮುಂದುವರೆಯಿರಿ.
* ನಿಯಮಿತವಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನ ಹರಿಸಿ.
* ಯಾವಾಗ ನಿಮ್ಮ ಆದಾಯದ ಮಿತಿಯೊಳಗೇ ಖರ್ಚು ಮಾಡಲು ಕಲಿತಿರೋ, ಆಗ ಉಳಿತಾಯದ ಕೆಲವಾರು ದಾರಿಗಳು ತೆರೆದುಕೊಳ್ಳುತ್ತವೆ. ಈ ಉಳಿತಾಯ ಭವಿಷ್ಯದಲ್ಲಿ ನಿಮ್ಮ ಕೈಹಿಡಿಯುತ್ತದೆ.
3. ಬಿಲ್ ಗಳನ್ನು ದಿನಾಂಕ ಮೀರುವ ಮುನ್ನ ಪಾವತಿಸಿ
3. ಪಾವತಿಗಳನ್ನು ದಿನಾಂಕ ಮೀರುವ ಮುನ್ನವೇ ಪಾವತಿಸಿಬಿಡಿ
ನಿಮ್ಮ ಆರ್ಥಿಕ ಬದ್ದತೆಗೆ ಇದು ತುಂಬಾ ಅಗತ್ಯವಾಗಿದೆ. ನಿತ್ಯ ಜೀವನದ ಅಗತ್ಯಗಳಾದ ವಿದ್ಯುತ್, ನೀರು, ಮೊಬೈಲ್ ಮೊದಲಾದ ಕೆಲವಾರು ಸೇವೆಗಳಿಗೆ ನಾವು ಪಾವತಿಸಬೇಕಾದ ಬಿಲ್ಲುಗಳಿಗೆ ಕಡೆಯ ದಿನಾಂಕ ಎಂದೊಂದಿರುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಈ ಕಡೆಯ ದಿನಾಂಕಕ್ಕೆ ಮುನ್ನ ಕಟ್ಟಿಬಿಟ್ಟರೆ ಸಾಕಲ್ಲ, ಅರ್ಜೆಂಟ್ ಏನಿದೆ ಎಂದೇ ಪ್ರತಿಕ್ರಿಯಿಸುತ್ತೇವೆ. ಆದರೆ ಈ ಕಡೆಗಣನೆ ನಮಗೆ ಭಾರಿಯಾಗಬಹುದು, ಅಂತಿಮ ದಿನಾಂಕ ದಾಟಿ ಹೋದರೂ ಈ ಬಿಲ್ಲು ಪಾವತಿಯಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ನಿಲುಗಡೆ, ಪರಿಣಾಮವಾಗಿ ಸುತ್ತಮುತ್ತಲಿನವರಿಂದ ಭಾರೀ ಮುಜುಗರಕ್ಕೆ ಒಳಗಾಗಬಹುದು. ತಡವಾಗಿ ಹಣ ಕಟ್ಟಿದರೂ ದಂಡ ಕಟ್ಟಬೇಕಾಗಿ ಬಂದು ಹೆಚ್ಚು ಹಣ ತೆರಬೇಕಾಗಿಬರಬಹುದು. ಆದ್ದರಿಂದ ಅಂತಿಮ ದಿನಾಂಕ ಎಂದು ಕಾಯದೇ ಯಾವಾಗ ಸಾಧ್ಯವೋ ಅಷ್ಟು ಬೇಗನೇ ಕಟ್ಟಿಬಿಡುವುದೇ ಮೇಲು. ಅಷ್ಟಿಲ್ಲದೇ ನಮ್ಮ ಹಿರಿಯರು "ಸುಡಬೇಕಾದ ಹೆಣ, ಕೊಡಬೇಕಾದ ಹಣ ಎಷ್ಟು ಬೇಗ ಮುಗಿಸಿದರೆ ಅಷ್ಟೂ ಒಳ್ಳೆಯದು" ಎಂದು ಹೇಳಿಲ್ಲವೇ!

ಈ ಬದ್ದತೆಯನ್ನು ಸಾಧಿಸುವುದೇನೂ ಕಷ್ಟಕರವಾದ ವಿಷಯವಲ್ಲ. ಇಂದಿನ ದಿನಗಳಲ್ಲಿ ಇದು ತುಂಬಾ ಸುಲಭ.
ನಿಮ್ಮ ಮೊಬೈಲಿನಲ್ಲಿ ರಿಮೈಂಡರ್ ಇರಿಸುವುದು
ಬ್ಯಾಂಕ್ ನ ಖಾತೆಯಿಂದ ನೇರವಾಗಿ ಪಾವತಿಸುವ ಸೌಲಭ್ಯವಿದ್ದರೆ ’ಆಟೋ ಪೇಮೆಂಟ್’ ಸೌಲಭ್ಯವನ್ನು ಪಡೆದುಕೊಳ್ಳುವುದು.
ನಿಮ್ಮ ಬಿಲ್ಲುಗಳನ್ನು ಕಾಲಕಾಲಕ್ಕೆ ಸರಿಯಾಗಿ ಪರೀಕ್ಷಿಸಿ ಸರಿಯಾಗಿ ಪಾವತಿಸುತ್ತಾ ಬಂದಿದ್ದೀರೋ ಎಂದು ಪರಿಶೀಲಿಸುವುದು.
4. ಸಾಲ ಪಡೆಯದಿರುವುದು ಅಥವಾ ಸಾಲ ನೀಡದಿರುವುದು
4. ಸಾಲ ಪಡೆಯದೇ ಇರುವುದು ಅಥವಾ ಸಾಲ ನೀಡದೇ ಇರುವುದು
ಸಾಲ ಪಡೆದಾಗ ಮೇಲೋಗರವುಂಡಂತೆ ಸಾಲಿಗರು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾನೆ. ನಿಮ್ಮ ಆದಾಯಕ್ಕೆ ಮೀರಿದ ಖರ್ಚು ನಿಮ್ಮದಾಗಿದ್ದರೆ ಇದನ್ನು ಸರಿದೂಗಿಸಲು ಸಾಲ ಮಾಡದೇ ನಿರ್ವಾಹವಿಲ್ಲ. ಪ್ರಾರಂಭದಲ್ಲಿ ಆತ್ಮೀಯರ, ಸ್ನೇಹಿತರ ಹತ್ತಿರ ಪಡೆಯುವ ಕೈಸಾಲ ಬರುತ್ತಾ ಬರುತ್ತಾ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಸಾಲಕ್ಕೆ ನಾಂದಿಯಾಗುತ್ತದೆ. ಮೇಲೆ ಹೇಳಿದಂತೆ ಹಾಸಿಗೆ ಇದ್ದಷ್ಟು ಕಾಲು ಚಾಚದೇ ಇದ್ದರೆ ಈ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅನಿವಾರ್ಯ ಕಾರಣಗಳ ಹೊರತಾಗಿ ಸಾಲ ಪಡೆಯದಿರುವುದೇ ಒಳ್ಳೆಯದು. ಒಂದು ವೇಳೆ ಕೈಸಾಲ ಪಡೆದರೂ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಹಿಂದಿರುಗಿಸಿಬಿಡಬೇಕು. ಇಲ್ಲದಿದ್ದರೆ ಸ್ನೇಹ, ಆತ್ಮೀಯತೆಯನ್ನೂ ಈ ಪುಡಿಗಾಸಿಗೆ ಕಳೆದುಕೊಳ್ಳಬೇಕಾಗಬಹುದು.

ಸಾಲ ನೀಡದೇ ಇರುವುದು ಸಹಾ ಆರ್ಥಿಕ ಬದ್ದತೆಗೆ ಇನ್ನೊಂದು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ನೂರಾರು ನಯವಂಚಕರಿರುತ್ತಾರೆ. ಇವರಿಗೆ ಸಾಲ ಪಡೆಯುವ ವಿದ್ಯೆ ಕರತಲಾಮಲಕವಾಗಿರುತ್ತದೆ. ಇವರು ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ನಿಮ್ಮಿಂದ ಸಾಲ ಪಡೆಯುತ್ತಾರೆ. ಇದರಲ್ಲಿ ಪ್ರಮುಖವಾದ ಅಸ್ತ್ರವೆಂದರೆ "ಯಾವುದೋ ಕೆಲಸಕ್ಕೆ ಕೊಂಚ ಹಣ ಕಡಿಮೆಯಾಗಿದೆ, ಅರ್ಜೆಂಟಾಗಿ ಹಣ ಬೇಕು, ನಾಳೆ ನಾಡಿದ್ದಿರಲ್ಲಿ ನನಗೆ ಇನ್ನೊಂದು ಕಡೆಯಿಂದ ಹಣ ಬರಲಿಕ್ಕಿದೆ, ತಕ್ಷಣ ಕೊಟ್ಟು ಬಿಡುತ್ತೇನೆ" ಈ ನಾಳೆ ನಾಡಿದ್ದು ಎನ್ನುವುದು ಎಷ್ಟು ವರ್ಷಗಳ ಬಳಿಕ ಬರುತ್ತದೆ ಎಂದು ಅವರಿಗೇ ಗೊತ್ತಿಲ್ಲ, ಇನ್ನು ನಿಮಗೆ ಎಲ್ಲಿಂದ ಗೊತ್ತಾಗಬೇಕು?


5. ಆಪತ್ಕಾಲಕ್ಕೊಂದು ನಿಧಿ ಕೂಡಿಡುವುದು
ಇದನ್ನೊಂದು ಆರ್ಥಿಕ ಅಭ್ಯಾಸವೆಂದು ಮಾತ್ರ ಪರಿಗಣಿಸಬೇಡಿ, ಇದು ನಿಮ್ಮ ತುರ್ತು ಅಗತ್ಯಕ್ಕಿರುವ ಅನಿವಾರ್ಯತೆ ಎಂದೇ ಪರಿಗಣಿಸಿ ಪ್ರಥಮ ಆದ್ಯತೆ ನೀಡಬೇಕು. ಯಾರಿಗೂ, ಯಾವುದೋ ಕ್ಷಣದಲ್ಲಿ ತಕ್ಷಣ ಹಣದ ಅಗತ್ಯ ಒದಗಿಬರಬಹುದು. ಆ ಸಮಯದಲ್ಲಿ ಈ ಆಪತ್ಕಾಲದ ನಿಧಿ ನೀಡುವಷ್ಟು ಮಾನಸಿಕ ಸ್ಥೈರ್ಯವನ್ನು ಯಾರೂ ನೀಡಲಾರರು. ಆ ಅಗತ್ಯಕ್ಕೆ ಸಾಲ ದೊರಕುವುದಾದರೂ, ಇದು ಸಾಲವೇ ಹೊರತು ನೆರವಲ್ಲ. ಅಷ್ಟೇ ಅಲ್ಲ, ಈ ಸಮಯಕ್ಕೆ ಸಾಲ ನೀಡಿದವರು ಇದೇ ವಿಷಯವನ್ನು ನಿಮ್ಮನ್ನು ಮಣಿಸಲು ಮುಂದೊಂದು ದಿನ ಅಸ್ತ್ರವಾಗಿಯೂ ಪರಿಗಣಿಸುತ್ತಾರೆ. ’ನಾನು ಅಂದು ಅವನಿಗೆ ಹಣ ಕೊಟ್ಟಿರದೇ ಹೋಗಿದ್ದರೆ ನೇಣು ಹಾಕಿಕೊಳ್ತಾ ಇದ್ದ’ ಎಂಬ ಮಾತುಗಳು ನಿಮ್ಮನ್ನು ನೇಣು ಹಾಕಿಕೊಳ್ಳಲೂ ಪ್ರೇರೇಪಿಸಬಹುದು! ಆದ್ದರಿಂದ ಆಪತ್ಕಾಲದ ನಿಧಿಯನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾಪಿಸಿಕೊಳ್ಳುವುದು ನಿಮಗೇ ಒಳ್ಳೆಯದು.

ಹೆಚ್ಚಿನ ಸಂದರ್ಭಗಳಲ್ಲಿ ಈ ನಿಧಿ ವೈದ್ಯಕೀಯ ತುರ್ತು ಸಂದರ್ಭ, ಯಾವುದಾದರೊಂದು ಅಮೂಲ್ಯ ವಸ್ತು ಕೈಗೆ ಸಿಗುವ ಅವಕಾಶ ಮೊದಲಾದ ಕಡೆಗಳಲ್ಲಿ ಬಳಕೆಯಾಗುತ್ತದೆ.

ಇದನ್ನು ಸಾಧಿಸಲು ಮನೆಯಲ್ಲಿಯೇ ಹಣವನ್ನು ಕೂಡಿಡುವ ಬದಲು ಬ್ಯಾಂಕಿನ ಫಿಕ್ಸೆಡ್ ಡಿಪಾಸಿಟ್ ಅಥವಾ ಲಿಕ್ವಿಡ್ ಡೆಬ್ಟ್ ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳಬಹುದು.

ಕನಿಷ್ಟ ಆರು ತಿಂಗಳಾದರೂ ಈ ನಿಧಿಯಲ್ಲಿ ನಿಯಮಿತವಾಗಿ ಹಣ ಹೂಡಬೇಕು. ಬಳಿಕ ಈ ಮೊತ್ತವನ್ನು ಹಾಗೇ ಬೆಳೆಯಲು ಬಿಡುವುದು ಹಾಗೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಚಿಂತಿಸಲು ಸಾಧ್ಯವಾಗುತ್ತದೆ.
6. ನಿವೃತ್ತಿಯ ಬಗ್ಗೆ ಯೋಜನೆ
6. ನಿವೃತ್ತಿಯ ಬಗ್ಗೆ ಯೋಜನೆ:
ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖವಾದ ಘಟ್ಟವೆಂದರೆ ನಿವೃತ್ತಿಯ ಬಗ್ಗೆ ಯೋಜನೆ ರೂಪಿಸುವುದು. ಇದು ಕೇವಲ ಶಿಸ್ತು ಮಾತ್ರವಲ್ಲ, ಬದಲಿಗೆ ಜೀವಮಾನದ ಆರ್ಥಿಕ ವ್ಯವಸ್ಥೆಯ ನಿರ್ಣಾಯಕ ಸ್ಥಂಭವೂ ಆಗಿದೆ. ನಿವೃತ್ತಿ ಯೋಜನೆ ಯಾವಾಗಲೂ ದೀರ್ಘಾವಧಿಯದ್ದಾಗಿರಬೇಕು ಹಾಗೂ ಇದನ್ನು ನಿಮ್ಮ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕು. ಈಗಾಗಲೇ ನಡುವಯಸ್ಸು ದಾಟಿರುವವರಿಗೆ ಈ ಮಾತನ್ನು ಅವರ ತಾರುಣ್ಯದಲ್ಲಿ ಯಾರೂ ಹೇಳಿರದೇ ಇದ್ದ ಕಾರಣ ಇಂದು ಇವರಿಗೆ ನಿವೃತ್ತಿಯ ಬಗ್ಗೆ ಯೋಚನೆ ಪ್ರಾರಂಭವಾಗುತ್ತದೆ. ಈಗಲೂ ತಡವಾಗಿಲ್ಲ, ನಿವೃತ್ತಿಗೆ ಉಳಿದಿರುವ ವರ್ಷಗಳಲ್ಲಿ ಸಾಧ್ಯವಾದಷ್ಟು ನಿವೃತ್ತಿಗಾಗಿ ನಿಯೋಜಿಸುವುದೂ ಅಸಾಧ್ಯವೇನಲ್ಲ. ಆದರೂ, ಚಿಕ್ಕವಯಸ್ಸಿನಿಂದ ಯೋಜನೆ ಪ್ರಾರಂಭಿಸಿದರೆ ನಿವೃತ್ತಿಯ ಸಮಯದಲ್ಲಿ ನಿರಾಳವಾದ ಜೀವನ ಪಡೆಯಬಹುದು.

ಪ್ರತಿತಿಂಗಳೂ ಚಿಕ್ಕದಾದ ಮೊತ್ತವನ್ನು ನಿವೃತ್ತಿಗಾಗಿ ಮೀಸಲಿಡುವುದು ಇದರ ಪ್ರಮುಖ ಅಂಗವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಈ ಹೂಡಿಕೆಯನ್ನು ನಡುವಿನಲ್ಲಿ ತುಂಡರಿಸದೇ ಇರುವುದು. ನೀವೇ ನಿಮ್ಮ ಸ್ವಂತ ಯೋಜನೆಯಿಂದ ನಿವೃತ್ತಿಗಾಗಿ ಆರ್ಡಿ ಖಾತೆಯೊಂದನ್ನು ತೆರೆದು (ರಿಕರೆಂಟ್ ಡಿಪಾಸಿಟ್) ನಿಮ್ಮ  ಖಾತೆಯ ಮೂಲಕ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಸೇರುವಂತೆ ಮಾಡಬಹುದು. ಅಥವಾ ಆರ್ಥಿಕ ತಜ್ಞರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬಹುದು. ಸಾಮಾನ್ಯವಾಗಿ ಆರ್ಥಿಕ ತಜ್ಞರ ಅನುಭವ ನಿಮಗೆ ಹೆಚ್ಚು ಲಾಭಕರವಾಗಿರುತ್ತದೆ. ಯೋಜನೆ ಯಾವುದಾದರೂ ಸರಿ, ನಿವೃತ್ತಿಯವರೆಗೂ ಈ ಮೊತ್ತವನ್ನು ನಗದೀಕರಿಸುವ ಕುರಿತು ಯೋಚಿಸಲೇ ಬಾರದು.
ಕೊನೆ ಮಾತು

ಅಂತಿಮವಾಗಿ:
ಆರ್ಥಿಕವಾಗಿ ಸಬಲರಾಗುವುದು ಇಂದಿನ ಎಲ್ಲರ ಕನಸಾಗಿದೆ. ಆದರೆ ಇದನ್ನು ಸಾಧ್ಯವಾಗಿಸುವುದು ಮಾರ್ತ ಆರ್ಥಿಕ ಶಿಸ್ತು. ಇದು ದೂರದಿಂದ ನೋಡಲು ಕೊಂಚ ಕಷ್ಟಕರ ಎಂದು ಕಂಡುಬಂದರೂ ಸತತವಾಗಿ ಅನುಸರಿಸುವುದನ್ನು ಪ್ರಾರಂಭಿಸಿದರೆ ಮತ್ತೇನೂ ಕಷ್ಟವಾಗಲಾರದು. ಇದಕ್ಕೆ ಅಗತ್ಯವಿರುವುದು ದೃಢವಾದ ಮನೋಬಲ ಹಾಗೂ ಯೋಜನೆಯನ್ನು ಸರಿಯಾಗಿ, ಎಲ್ಲಿಯೂ ನಿಲ್ಲಿಸದೇ, ಯಾವ ತಿಂಗಳೂ ತಪ್ಪದೇ ಅನುಸರಿಸಿಕೊಂಡು ಹೋಗುವ ಬದ್ದತೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ನಿಮಗೀಗ ಯಾವುದೇ ವಯಸ್ಸಾಗಿದ್ದು ನಿಮ್ಮ ಆರ್ಥಿಕ ಸ್ಥಿತಿ ಏನೇ ಇರಲಿ, ಆರ್ಥಿಕ ಶಿಸ್ತನ್ನು ಪ್ರಾರಂಭಿಸಲು ಎಂದೂ ತಡವಾಗುವುದಿಲ್ಲ. ಇದುವರೆಗೆ ನೀವು ಸಾಧಿಸದೇ ಹೋದ ಎಷ್ಟೋ ವಿಷಯಗಳನ್ನು ಆರ್ಥಿಕ ಶಿಸ್ತಿನ ಮೂಲಕ ಸಾಧಿಸಬಹುದು ಹಾಗೂ ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಆರ್ಥಿಕ ಸ್ವಾತಂತ್ರ್ಯದೆಡೆಗೆ ಸುಲಲಿತವಾಗಿ ಸಾಗಿ ಗಮ್ಯಸ್ಥಾನ ತಲುಪಬಹುದು.

ಶನಿವಾರ, ನವೆಂಬರ್ 25, 2017

ಸಂಧಿವಾತ ಹಾಗೂ ಇತರ ತೊಂದರೆಗಳಿಗೆ ತಕ್ಷಣ ಪರಿಹಾರ ಪಡೆಯಲು ಹರಳೆಣ್ಣೆಯೇ ಸಾಕು

ಬೋಲ್ಡ್ ಸ್ಕೈ.ಕಾಂ ನಲ್ಲಿ ಪ್ರಕಟವಾದ ಲೇಖನ
https://kannada.boldsky.com/health/wellness/2017/castor-oil-benefits-for-arthritis-skin-menstrual-disorder/articlecontent-pf71885-015925.html

ಅಡುಗೆಗೆ ಬಳಸುವ ಎಣ್ಣೆಗಳಲ್ಲಿಯೇ ಅತಿ ಹೆಚ್ಚು ಸ್ನಿಗ್ಧವಾದ ಹರಳೆಣ್ಣೆ ಹಿಂದಿನ ದಿನಗಳಲ್ಲಿ ಅಡುಗೆ, ಸೌಂದರ್ಯ ಹಾಗೂ ಔಷಧಿಯ

ರೂಪದ ಜೊತೆಗೇ ಬಂಡಿಗಳ ಗಾಲಿಗಳಿಗೆ ಗ್ರೀಸ್ ಬದಲಿಗೆ ಉಪಯೋಗಿಸಲಾಗುತ್ತಿತ್ತು. ಹರಳೆಣ್ಣೆ ಹಲವಾರು ತೊಂದರೆಗಳಿಗೆ

ಔಷಧಿಯಾಗಿದೆ. ಇದು ಚರ್ಮ ಕೂದಲುಗಳ ಜೊತೆಗೇ ಹೊಟ್ಟೆಯ ತೊಂದರೆಗಳು, ವಿವಿಧ ನೋವುಗಳಿಗೂ ಉತ್ತಮ ಪರಿಹಾರ

ಒದಗಿಸುತ್ತದೆ. ಈ ಎಣ್ಣೆಯಲ್ಲಿ ಪ್ರಮುಖವಾಗಿ ರಿಸಿನೋಲಿಕ್ ಆಮ್ಲ ಎಂಬ ಪೋಷಕಾಂಶವಾಗಿದ್ದು ಎಣ್ಣೆಯ 85%-95%ರಷ್ಟು ಭಾಗವನ್ನು

ಆಕ್ರಮಿಸಿಕೊಂಡಿದೆ. ಉಳಿದಂತೆ ಇದರಲ್ಲಿ ಓಲಿಕ್ ಆಮ್ಲ, ಲಿನೋಲಿ ಆಮ್ಲ ಮೊದಲಾದ ಪೋಷಕಾಂಶಗಳಿವೆ.

ಈ ಅಮ್ಲ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಈ ಎಣ್ಣೆಯ ಪ್ರಾಮುಖ್ಯತೆಯಾಗಿದೆ. ಇದು ಸುಲಭವಾಗಿ ಬೆಳೆಯಲಾಗುವ ಮರಗಳ

ಬೀಜದಿಂದ ಸಾಂಪ್ರಾದಾಯಿಕ ವಿಧಾನದಲ್ಲಿಯೂ ಹಿಂಡಿ ತೆಗೆಯಬಹುದಾದುದರಿಂದ ಅಗ್ಗವೂ ಆಗಿದೆ. ಆದರೆ ಈ ಎಣ್ಣೆಯ ಬಳಕೆಯಿಂದ

ಪಡೆಯಬಹುದಾದ ಲಾಭವನ್ನು ಪರಿಗಣಿಸಿದರೆ ಈ ಎಣ್ಣೆಗೆ ನೀಡುವ ಬೆಲೆ ಅತ್ಯಲ್ಪ ಎಂದು ಮನವರಿಕೆಯಾಗುತ್ತದೆ. ಇದು ತ್ವಚೆಯ

ಹೊಳಪಿಗೆ, ಕೂದಲ ಕಾಂತಿಗೆ ಮಾತ್ರವಲ್ಲ ಮೂಳೆಗಳ ಸಂದುಗಳಲ್ಲಿ ನೋವು ಅಥವಾ ಸಂಧಿವಾತಕ್ಕೂ ಉತ್ತಮ ಔಷಧಿಯಾಗಿದೆ. ಬನ್ನಿ,

ಈ ಅದ್ಭುತ ಎಣ್ಣೆಯ ಕೆಲವು ಪ್ರಯೋಜನಗಳ ಬಗ್ಗೆ ಅರಿಯೋಣ:
ಸಂಧಿವಾತ ಗುಣಪಡಿಸಲು ನೆರವಾಗುತ್ತದೆc

1. ಸಂಧಿವಾತ ಗುಣಪಡಿಸಲು ನೆರವಾಗುತ್ತದೆ.
ಈ ಎಣ್ಣೆಯಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿರುವ ರಿಸಿನೋಲಿಕ್ ಆಮ್ಲ, ಓಲಿಕ್, ಲಿನೋಲಿಕ್ ಆಮ್ಲಗಳು ಹಾಗೂ ಇತರ ಕೊಬ್ಬಿನ ಆಮ್ಲಗಳು

ಸಂಧಿವಾತ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲರೆ ರ್‍ಯೂಮಾಟಿಕ್ ನೋವು ಹಾಗೂ ಗಂಟುಗಳು ಊದಿಕೊಳ್ಳುವುದನ್ನೂ

ಕಡಿಮೆ ಮಾಡುತ್ತದೆ. ಈ ತೊಂದರೆಗಳು ಇರುವ ಯಾವುದೇ ವಯೋಮಾನದ ವ್ಯಕ್ತಿಗಳಿಗೂ ಹರಳೆಣ್ಣೆಯನ್ನು ಸುರಕ್ಷಿತವಾಗಿ

ಬಳಸಬಹುದು. ಹರಳೆಣ್ಣೆಯನ್ನು ಕೊಂಚವೇ ಬಿಸಿಮಾಡಿ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡರೆ ಇದು ಚರ್ಮದ

ಸೂಕ್ಷ್ಮರಂಧ್ರಗಳ ಮೂಲಕ ಇಳಿದು ನೋವಿಗೆ ಕಾರಣವಾದ ಅಂಶಗಳನ್ನು ನಿವಾರಿಸಿ ನೋವು ಕಡಿಮೆ ಮಾಡುತ್ತದೆ. ಇನ್ನೂ ಉತ್ತಮ

ಪರಿಣಾಮ ಪಡೆಯಲು ಹರಳೆಣ್ಣೆಯೊಂದಿಗೆ ಬೇರೆ ಔಷಧಿಗಳನ್ನು ಬೆರೆಸಿಯೂ ಬಳಸಬಹುದು.
ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

2. ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ
ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಹಲವು ಮಹಿಳೆಯರು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು

ಅಡ್ಡಪರಿಣಾಮದಿಂದ ಹೊರತಾಗಿರದ ಕಾರಣ ಬೇರೆ ತೊಂದರೆ ಎದುರಾಗುತ್ತದೆ. ಆದ್ದರಿಂದ ಮಹಿಳೆಯರು ಈ ಮಾತ್ರೆಗಳ ಬದಲಿಗೆ

ಹರಳೆಣ್ಣೆಯನ್ನು ಬಳಸಬಹುದು. ಈ ಎಣ್ಣೆಯಲ್ಲಿರುವ ರಿಸಿನ್ ಎಂಬ ಪ್ರೋಟೀನುಗಳು, ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ

ಬಳಕೆಯಾದರೆ ಇದು ರೋಗಾಣುಹಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದೇಕಾರಣಕ್ಕೆ ಕೆಲವಾರು ಗರ್ಭನಿರೋಧಕ ಜೆಲ್ ಹಾಗೂ

ಲೋಷನ್ ಗಳಲ್ಲಿ ಬಳಸಲಾಗುತ್ತದೆ. ಒಂದು ವೇಳೆ ಪ್ರಾರಂಭಿಕ ಹಂತದ ಗರ್ಭವತಿಯಾಗಿರುವ ಮಹಿಳೆ ಹರಳೆಣ್ಣೆಯನ್ನು ಅಧಿಕ

ಪ್ರಮಾಣದಲ್ಲಿ ಸೇವಿಸಿದರೆ ಇದು ಬಲವಂತವಾಗಿ ಗರ್ಭಪಾತಕ್ಕೆ ಕಾರಣವಾಗುತ್ತದೆ. ಆದರೆ ಇದು ಅಪಾಯಕಾರಿಯಾದ ಕ್ರಮವಾಗಿದೆ

ಹಾಗೂ ಇನ್ನೂ ಹುಟ್ಟದೇ ಇರುವ ಜೀವವೊಂದನ್ನು ಭೂಮಿಗೆ ಬರುವ ಮುನ್ನವೇ ಕೊಂದ ಪಾಪಭಾವನೆಯೂ ಎದುರಾಗುತ್ತದೆ.
ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ
3. ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ.
ಇಂದು ಎಷ್ಟೋ ಮಹಿಳೆಯರು ತಮ್ಮ ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲ ಎಂಬ ತೊಂದರೆಯನ್ನು ಹೇಳಿಕೊಳ್ಳುತ್ತಾರೆ. ಇದರಿಂದ

ಮನೋಭಾವನೆಯಲ್ಲಿ ಏರುಪೇರು, ಅನಿಯಂತ್ರಿತ ರಕ್ತಸ್ರಾವ ಹಾಗೂ ಕೆಳಹೊಟ್ಟೆಯಲ್ಲಿ ನೋವು ಹಾಗೂ ಸೆಡೆತ ಕಾಣಿಸಿಕೊಳ್ಳುತ್ತದೆ. ಈ

ತೊಂದರೆಗಳನ್ನು ನಿವಾರಿಸಲು ಹರಳೆಣ್ಣೆ ನೆರವಾಗುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲ ಮಾಸಿಕ ಸ್ರಾವದ ಪ್ರಮಾಣವನ್ನು

ಹೆಚ್ಚಿಸುವ ಗುಣ ಹೊಂದಿದೆ. ಈ ಸ್ರಾವ ಹೊರಬರದೇ ಸಂಗ್ರಹವಾಗಿರುವ ಮೂಲಕವೇ ಹೊಟ್ಟೆನೋವಿನ ಸಹಿತ ಇತರ ತೊಂದರೆಗಳು

ಎದುರಾಗಿರುತ್ತವೆ. ಯಾವಾಗ ಈ ಸ್ರಾವ ಹೊರಹೋಯಿತೋ ಈ ಮೂಲಕ ಎದುರಾಗಿದ್ದ ತೊಂದರೆಗಳೆಲ್ಲಾ ಸರಿಯಾಗುತ್ತವೆ.

4.ತ್ವಚೆಯ ಆರೈಕೆಗೆ ನೆರವಾಗುತ್ತದೆ.
ಹೊಳಪುಳ್ಳ, ಕಲೆಯಿಲ್ಲದ ಹಾಗೂ ನುಣುಪಾದ ತ್ವಚೆಗಾಗಿ ಹರಳೆಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ.

ಇದರಲ್ಲಿರುವ ಅಂಡಿಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಚರ್ಮದಲ್ಲಿ

ಉಂಟಾಗಿರುವ ಕೀವು ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರ ನಿವಾರಕ

ಗುಣಗಳು ತ್ವಚೆಯ ಆರೈಕೆಯಲ್ಲಿ ನೆರವಾಗುತ್ತವೆ.

5.ಮಲಬದ್ದತೆಯಿಂದ ರಕ್ಷಿಸುತ್ತದೆ.
’ಹರಳೆಣ್ಣೆ ಕುಡಿದವರಂತೆ ಆಡುತ್ತಾನೆ’ ಎಂಬ ಕನ್ನಡದ ನುಡಿಗಟ್ಟಿಗೆ ಇದರ ವಿರೇಚಲ ಗುಣವೇ ಕಾರಣವಾಗಿದೆ. ಹರಳೆಣ್ಣೆಯನ್ನು

ನೇರವಾಗಿ ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿದ್ದ ಕಲ್ಮಶಗಳನ್ನು ಬಲವಂತವಾಗಿ ಹೊರಹಾಕಲು ಸಾಧ್ಯವಾಗುವ ಮೂಲಕ

ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಲಬದ್ದತೆಯಿಂದ ನರಳುತ್ತಿರುವ ರೋಗಿಗಳಿಗೆ ದುಬಾರಿ

ಔಷಧಿಯಿಂದಲೂ ಆಗದೇ ಇರುವ ಕಾರ್ಯ ಹರಳೆಣ್ಣೆ ಸುಲಭವಾಗಿ ನಿರ್ವಹಿಸುತ್ತದೆ.
ಎದೆಹಾಲನ್ನು ಹೆಚ್ಚಿಸುತ್ತದೆ
6. ಎದೆಹಾಲನ್ನು ಹೆಚ್ಚಿಸುತ್ತದೆ:
ಬಾಣಂತಿಯರ ದೇಹದಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗಲು ಹರಳೆಣ್ಣೆ ಸಹಕರಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದ ಹಾಲು

ಸುಲಭವಾಗಿ ಮಗುವಿಗೆ ಲಭ್ಯವಾಗುವ ಮೂಲಕ ಮಗುವಿನ ಆರೋಗ್ಯವೂ ಉತ್ತಮವಾಗಲು ನೆರವಾಗುತ್ತದೆ. ಆದರೆ ಹರಳೆಣ್ಣೆಯನ್ನು

ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಏಕೆಂದರೆ ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ಹಾಲಿನ ಗುಣಮಟ್ಟವೂ ಕೊಂಚ

ಬದಲಾಗಬಹುದು ಹಾಗೂ ಮಗುವಿನ ಆರೋಗ್ಯವನ್ನು ಬಾಧಿಸಬಹುದು.

ಇದುವರೆಗೆ ಹರಳೆಣ್ಣೆಯ ಪ್ರಯೋಜನಗಳ ಬಗ್ಗೆ ಅರಿತೆವು. ಈಗ ಸಂಧಿವಾತಕ್ಕೆ ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂಬುದನ್ನು

ನೋಡೋಣ:

ಈ ಎಣ್ಣೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯವಿರುವ ಸಾಮಾಗ್ರಿಗಳೆಂದರೆ:
* ಸಾಂಪ್ರಾದಾಯಿಕ ವಿಧಾನದಲ್ಲಿ ಹಿಂಡಿ ತಗೆದ ಹರಳೆಣ್ಣೆ (ಅಥವಾ ತಣ್ಣನೆಯ ವಿಧಾನ)
* ಎಣ್ಣೆ ಬಿಸಿಮಾಡಲು ದಪ್ಪತಳದ ಪಾತ್ರೆ
* ಗಂಟುಗಳಿಗೆ ಸುತ್ತಲು ಪ್ಲಾಸ್ಟಿಕ್ ಹಾಳೆ
* ಒಂದು ದೊಡ್ಡ ಸ್ನಾನದ ಟವೆಲ್
* ಉಣ್ಣೆಯ ಬಟ್ಟೆ, ಅಥವಾ ಹತ್ತಿಯ ದಪ್ಪನೆಯ ಬಟ್ಟೆ ಸುಮಾರು ಒಂದು ಚದರಡಿಯಷ್ಟು.

ವಿಧಾನ:
ಪಾತ್ರೆಯಲ್ಲಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಉಣ್ಣೆಯ ಅಥವಾ ಹತ್ತಿಯ ಬಟ್ಟೆಯನ್ನು ಇದರಲ್ಲಿ ಮುಳುಗಿಸಿ ಚೆನ್ನಾಗಿ

ಹೀರಿಕೊಳ್ಳುವಂತೆ ಮಾಡಿ.
ನೋವಿರುವ ಭಾಗಕ್ಕೆ ಬೆಚ್ಚನೆಯ ಎಣ್ಣೆಯಿಂದ ಕೊಂಚ ಹೊತ್ತು ಮಸಾಜ್ ಮಾಡಿ
ಬಳಿಕ ಎಣ್ಣೆಯಲ್ಲಿ ತೋಯ್ದಿರುವ ಬಟ್ಟೆಯನ್ನು ಗಂಟು ಆವರಿಸುವಂತೆ ಇರಿಸಿ ಪ್ಲಾಸ್ಟಿಕ್ ಹಾಳೆಯನ್ನು ಸುತ್ತಿಬಿಗಿಯಾಗಿಸಿ.
ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಈ ಭಾಗದ ಮೇಲೆ ದಪ್ಪನೆಯ ಟವೆಲ್ ಹಾಕಿ ರಾತ್ರಿಯಿಡೀ ಹಾಗೇ ಇರಿಸಿ.
ಮರುದಿನ ಬೆಳಿಗ್ಗೆ ಎಲ್ಲವನ್ನೂ ಬಿಚ್ಚಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.
ನೋವಿನ ಪ್ರಮಾಣವನ್ನು ಅನುಸರಿಸಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪುನರಾವರ್ತಿಸಬೇಕು.

ಶುಕ್ರವಾರ, ನವೆಂಬರ್ 24, 2017

ಆಲುಗಡ್ಡೆ ರಸದ ಹತ್ತು ಅದ್ಭುತ ಪ್ರಯೋಜನಗಳು

(ಬೋಲ್ಡ್ ಸ್ಕೈ. ಕಾಂ ನಲ್ಲಿ ಪ್ರಕಟವಾಗಿರುವ ಲೇಖನ)
https://goo.gl/kKLouv

ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ

ನಿಸರ್ಗದ ವಿಸ್ಮಯಗಳು ಅಗಣಿತ. ಪ್ರತಿ ಜೀವಿಯ ಆಹಾರಕ್ಕಾಗಿ ನೀಡಿರುವ ವ್ಯವಸ್ಥೆಯೂ ಅದ್ಭುತ. ಅದರಲ್ಲೂ ಅತಿ ಹೆಚ್ಚು ವೈವಿಧ್ಯತೆಯ ಆಹಾರ ಸೇವಿಸುವ ಮನುಷ್ಯರಿಗೆ ಲಭ್ಯವಿರುವ ತರಕಾರಿ ಹಾಗೂ ಹಣ್ಣುಗಳು ದೇವರ ಅಮೂಲ್ಯ ಕೊಡುಗೆ. ಪ್ರತಿ ಹಣ್ಣು ಮತ್ತು ತರಕಾರಿಯಲ್ಲಿಯೂ ತನ್ನದೇ ಆದ ಪೋಷಕಾಂಶಗಳ ಭಂಡಾರವಿದ್ದು ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ.

ಇಂತಹ ಒಂದು ಅದ್ಭುತ ತರಕಾರಿಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರದ ತರಕಾರಿ ಎಂದರೆ ಎಲ್ಲರ ಮನೆಯಲ್ಲಿ ಸದ ಇರುವ ಆಲುಗಡ್ಡೆ. ಇದರ ಪೋಷಕಾಂಶಗಳ ಪಟ್ಟಿಯನ್ನು ಗಮನಿಸಿದರೆ ಇದನ್ನು ಅತಿ ಆರೋಗ್ಯಕರ ಎಂದು ನಾವು ಪರಿಗಣಿಸಿ ಮಹತ್ವ ನೀಡುವ ತರಕಾರಿಗಳಲ್ಲಿ ಆಲುಗಡ್ಡೆಯನ್ನೂ ಸೇರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಆಲುಗಡ್ಡೆಯನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಏಕೆಂದರೆ ಹಸಿಯಾಗಿ ತಿನ್ನಲು ಸಾಧ್ಯವಿಲ್ಲ, ರುಚಿಯೂ ಅಲ್ಲ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಹಸಿಯಾಗಿಯೂ ಆಲುಗಡ್ಡೆಯಲ್ಲಿ ಹಲವಾರು ಅವಶ್ಯ  ಪೋಷಕಾಂಶಗಳನ್ನು ಹೊಂದಿರುತ್ತದೆ.

ಆಲುಗಡ್ಡೆಯಲ್ಲಿ ಕಡಿಮೆ ಕ್ಯಾಲೋರಿಗಳಿದ್ದು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಇದರ ಪೋಷಕಾಂಶಗಳಲ್ಲಿ ಪ್ರಮುಖವಾಗಿ ವಿಟಮಿನ್ B6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಇವೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಫೈಟೋ ನ್ಯೂಟ್ರಿಯೆಂಟ್ಸ್ (ಹೋರಡುವ ಗುಣವುಳ್ಳ ಪೋಷಕಾಂಶಗಳು) ಹಾಗೂ ಫ್ಲೇವನಾಯ್ಡುಗಳಿವೆ. ಇದರ ಆಂಟಿ ಆಕ್ಸಿಡೆಂಟ್ ಗುಣ ದೇಹದಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಆಲುಗಡ್ಡೆಯನ್ನು ಹಸಿಯಾಗಿ ತಿಂದರೆ ಇದರ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸುವುದಿಲ್ಲವಾದುದರಿಂದ ಇದರನ್ನು ಹಸಿಯಾಗಿ ತುರಿದು ರುಬ್ಬಿ  ಹಿಂಡಿ ತೆಗೆದ ರಸವನ್ನು ಕುಡಿಯುವ ಮೂಲಕ ಪಡೆಯಬಹುದು. ಅಲುಗಡ್ಡೆ ರಸದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದು ಹೊಟ್ಟೆಯಲ್ಲಿನ ಆಮ್ಲೀಯತೆಗೆ ಅತ್ಯುತ್ತಮವಾದ ಪ್ರತ್ಯಾಮ್ಲದಂತೆ ಕೆಲಸ ಮಾಡುತ್ತದೆ. ಅಲ್ಲದೇ  ಹೊಟ್ಟೆಹುಣ್ಣು, ಹೊಟ್ಟೆಯಲ್ಲಿ ಉರಿ, ವಾಯುಪ್ರಕೋಪ ಮೊದಲಾದ ತೊಂದರೆಗಳಿಗೆ ಸಿದ್ಧೌಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ರಸ ಕೊಂಚ ಕ್ಷಾರೀಯವಾಗಿದ್ದು ಜಠರ ಹಾಗೂ ಕರುಳುಗಳಲ್ಲಿ ಉಂಟಾಗಿರುವ ಆಮ್ಲೀಯತೆಯನ್ನು ಶಮನಗೊಳಿಸಲು ನೆರವಾಗುತ್ತದೆ. ಆಲುಗಡ್ಡೆಯನ್ನು ತಿಂದ ಬಳಿಕ ಹೊಟ್ಟೆ ಕೆಡದೇ ಇರಲು ಹಾಗೂ ಹೆಚ್ಚು ಹೊತ್ತು ಹಸಿವಾಗದಂತಿರುವ ಕಾರಣಕ್ಕೆ ಪ್ರಥಮ ವಿಶ್ವಯುದ್ದದ ಸಮಯದಲ್ಲಿ ಯೋಧರಿಗೆ ಹಸಿ ಆಲುಗಡ್ಡೆಯನ್ನೇ ಪ್ರಮುಖ ಆಹಾರವಾಗಿ ನೀಡಲಾಗುತ್ತಿತ್ತು. ಇದನ್ನು ತಿನ್ನುವ ಯೋಧರಿಗೆಂದೂ ವಾಯುಪ್ರಕೋಪದ ತೊಂದರೆ ಕಂಡುಬಂದಿರಲಿಲ್ಲ. ಬಳಿಕ ಆಲುಗಡ್ಡೆಯ ಈ ಮಹತ್ವವನ್ನು ಅರಿತ ಜಗತ್ತು ಅಂದಿನಿಂದಲೂ ಆಲುಗಡ್ಡೆಯನ್ನು ರಸದ ರೂಪದಲ್ಲಿ ಸೇವಿಸಲು ಪ್ರಾರಂಭಿಸಿತು.

ಬನ್ನಿ, ಆಲುಗಡ್ಡೆ ರಸದ ಸೇವನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:

1) ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ:
ಇದರಲ್ಲಿ ಕರಗುವ ನಾರು ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೆಚ್ಚಿನ್ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಅಂದರೆ ಆಲುಗಡ್ಡೆಯನ್ನು ಜೀರ್ಣಗೊಳಿಸಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ಬೇಕು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರದೇ ನಿಧಾನವಾಗಿ ಏರುತ್ತದೆ. ಇದು ಮಧುಮೇಹಿಗಳಿಗೆ ವರದಾನವಾಗಿದ್ದು ತಮ್ಮ ನಿತ್ಯದ ಕೆಲಸಗಳನ್ನು ಯಾವುದೇ ತೊಂದರೆ ಇಲ್ಲದೇ ನಿರ್ವಹಿಸಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ.
ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ


2) ಶ್ವಾಸಕೋಶದ ಕಾಯಿಲೆಗಳನ್ನುಕಡಿಮೆ ಮಾಡಲು ನೆರವಾಗುತ್ತದೆ:
ಆಲುಗಡ್ಡೆಯಲ್ಲಿರುವ ಕೆಲವು ಪೋಷಕಾಂಶಗಳು ಕೆಲವಾರು ಬಗೆಯ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಗಟ್ಟಿ ಇನ್ನಷ್ಟು ಬೆಳೆಯುವುದರ ವಿರುದ್ದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಹಾಗೂ ಶ್ವಾಸಕೋಶ ಸಂಬಂಧಿತ ರೋಗಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.
ಶ್ವಾಸಕೋಶದ ಕಾಯಿಲೆಗಳನ್ನುಕಡಿಮೆ ಮಾಡಲು ನೆರವಾಗುತ್ತದೆ

3) ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ:
ಆಲುಗಡ್ಡೆಯ ರಸದ ಸೇವನೆಯಿಂದ ಉಸಿರಾಟಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿಸುವ ಮೂಲಕ ಶ್ವಾಸಕೋಶಗಳು ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.

4) ಯೂರಿಕ್ ಆಮ್ಲ ಹಾಗೂ ಸಂಧಿವಾತಕ್ಕೆ ಉಪಶಮನ ನೀಡುತ್ತದೆ.
ಆಲುಗಡ್ಡೆಯಲ್ಲಿರುವ ಉರಿಯೂತ ನಿವಾರಕ ಗುಣ ಮೂಳೆಗಂಟುಗಳು ಊದಿಕೊಂಡು ಎದುರಾಗಿದ್ದ ಸಂಧಿವಾತದಿಂದ ಉಪಶಮನ ನೀಡುತ್ತದೆ. ತನ್ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಯೂರಿಕ್ ಆಮ್ಲವನ್ನು ವಿಸರ್ಜಿಸಲು ನೆರವಾಗುತ್ತದೆ. ವಿಶೇಷವಾಗಿ, ಆಲುಗಡ್ಡೆ ರಸ ಯೂರಿಕ್ ಆಮ್ಲದೊಡನೆ ಸಂಯೋಜನೆಗೊಂಡು ತಟಸ್ಥಗೊಳಿಸಲು ನೆರವಾಗುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಸಂಧಿವಾತವೂ ಕಡಿಮೆಯಾಗುತ್ತದೆ.
ಯೂರಿಕ್ ಆಮ್ಲ ಹಾಗೂ ಸಂಧಿವಾತಕ್ಕೆ ಉಪಶಮನ ನೀಡುತ್ತದೆ

5) ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ
ಇದರಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್ ರಕ್ತಕಣಗಳು ಆಮ್ಲಜನಕವನ್ನು ಕೊಂಡೊಯ್ಯುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಹೆಚ್ಚುವರಿ ಆಮ್ಲಜನಕ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುವ ಮೂಲಕ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ.
ಕೀಲುನೋವನ್ನು ಗುಣಪಡಿಸಲು ನೆರವಾಗುತ್ತದೆ

6) ಕೀಲುನೋವನ್ನು ಗುಣಪಡಿಸಲು ನೆರವಾಗುತ್ತದೆ:
ಇದರಲ್ಲಿರುವ ಪ್ರಬಲ ಉರಿಯೂತ ನಿವಾರಕ ಗುಣ ಕೀಲುನೋವು ಹಾಗೂ ಗಂಟುಗಳನ್ನು ಮಡಚುವಾಗ ಆಗುವ ಉರಿಯನ್ನು ಕಡಿಮೆಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಕೀಲುನೋವು ಕಡಿಮೆಯಾಗುತ್ತದೆ ಹಾಗೂ ಸಂಧಿವಾತವನ್ನೂ ಗುಣಪಡಿಸುತ್ತದೆ.

7) ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ:
ಬೆನ್ನುನೋವು ಸಹಾ ಸಂಧಿವಾತದಂತೆಯೇ ನೋವು ಕೊಡುವ ತೊಂದರೆಯಾಗಿದ್ದು ನಿಯಮಿತವಾಗಿ ಆಲುಗಡ್ಡೆ ರಸ ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಬೆನ್ನುನೋವಿಗೆ ಆಲುಗಡ್ಡೆಯನ್ನು ದಪ್ಪನೆಯ ಬಿಲ್ಲೆಗಳಾಗಿ ಕತ್ತರಿಸಿ ನೋವಿರುವ ಭಾಗದ ಮೇಲೆ ಇರಿಸುವುದರಿಂದಲೂ ತಕ್ಷಣ ಪರಿಹಾರ ಪಡೆಯಬಹುದು. ವಿಶೇಷವಾಗಿ ನೋವಿರುವ ಭಾಗದಲ್ಲಿ ಊದಿಕೊಂಡಿದ್ದು ಚರ್ಮ ಕೆಂಪಗಾಗಿದ್ದರೆ ಈ ವಿಧಾನ ತುಂಬಾ ಉಪಯುಕ್ತವಾಗಿದೆ.
 ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ

8) ತೂಕ ಇಳಿಸಲು ನೆರವಾಗುತ್ತದೆ:
ಇದರಲ್ಲಿರುವ ವಿಟಮಿನ್ ಸಿ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ನಿತ್ಯವೂ ಕೊಂಚ ಆಲುಗಡ್ಡೆಯ ರಸವನ್ನು ಸೇವಿಸುವ ಮೂಲಕ ದೇಹದಲ್ಲಿ ಹಸಿವಾಗುವುದನ್ನು ಕಡಿಮೆಗೊಳಿಸಿ ಅನಗತ್ಯವಾಗಿ ಹೆಚ್ಚುವರಿ ಆಹಾರವನ್ನು ತಿನ್ನುವುದರಿಂದ ತಡೆಯಬಹುದು. ಪರಿಣಾಮವಾಗಿ ತೂಕ ಇಳಿಕೆಯ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುತ್ತವೆ.
ತೂಕ ಇಳಿಸಲು ನೆರವಾಗುತ್ತದೆ
9)  ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ:
ದೇಹದ ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಆಲುಗಡ್ಡೆಯ ರಸ ಉತ್ತಮ  ಆಯ್ಕೆಯಾಗಿದೆ. ಇದು ದೇಹದಿಂದ ಅನಗತ್ಯ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಯಕೃತ್ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಿ ಇವುಗಳ ಆರೋಗ್ಯವನ್ನೂ ವೃದ್ದಿಸುತ್ತದೆ.
ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ

10) ವಾಯುಪ್ರಕೋಪ ಗುಣಪಡಿಸಲು ನೆರವಾಗುತ್ತದೆ.
ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ನಿಷ್ಫಲಗೊಳಿಸುವ ಮೂಲಕ ಆಲುಗಡ್ಡೆಯ ರಸ ಹಲವಾರು ವಾಯುಪ್ರಕೋಪ ಆಧಾರಿತ ತೊಂದರೆಗಳನ್ನು ಗುಣಪಡಿಸುತ್ತದೆ. ಇದರ ಕ್ಷಾರೀಯ ಗುಣ ಜಠರರಸದ ಆಮ್ಲೀಯತೆಯನ್ನು ಸೌಮ್ಯಗೊಳಿಸಿ ಜೀರ್ಣಕ್ರಿಯೆ ಸುಲಭಗೊಳಿಸಲು ನೆರವಾಗುತ್ತದೆ.  ಹಸಿ ಆಲುಗಡ್ಡೆಯಂತೆಯೇ ಆಲುಗಡ್ಡೆಯ ರಸವೂ ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಇದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಇದಕ್ಕೊಂದು ಸುಲಭ ಉಪಾಯವಿದೆ. ನಿಮ್ಮ ನೆಚ್ಚಿನ ಹಣ್ಣಿನ ರಸದೊಂದಿಗೆ ಬೆರೆಸಿ ಕುಡಿಯುವುದು. ಇದರಿಂದ ಎರಡೂ ಫಲಗಳ ಪ್ರಯೋಜನವನ್ನು ಪಡೆಯಬಹುದು. ಆಲುಗಡ್ಡೆಯ ರಸವನ್ನು ಹಿಂಡುವ ಮೊದಲು ಆಲುಗಡ್ಡೆ ತಾಜಾ ಇದೆ ಹಾಗೂ ಮೊಳಕೆಯೊಡೆದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ.

ಮಂಗಳವಾರ, ನವೆಂಬರ್ 21, 2017

ಸೀತಾಫಲದ ನೀವು ಅರಿತಿರಲೇಬೇಕಾದ ಪ್ರಮುಖ ಆರೋಗ್ಯಕರ ಪ್ರಯೋಜನಗಳು

ಒನ್ ಇಂಡಿಯಾ.ಕಾಂ ನಲ್ಲಿ ಪ್ರಕಟವಾಗಿರುವ ಲೇಖನ
https://goo.gl/d9NRvv

ಅಸ್ತಮಾ ರೋಗ ಬರದಂತೆ ತಡೆಯುತ್ತದೆ

ಸೀತಾಫಲ ಒಂದು ಅದ್ಭುತವಾದ ಫಲವಾಗಿದ್ದು ಬಹುತೇಕ ಜನರ ನೆಚ್ಚಿನ ಹಣ್ಣೂ ಆಗಿದೆ. ಸಸ್ಯಶಾಸ್ತ್ರದಲ್ಲಿ ಆನೋನಾಸಿಯಾ (Annonacea) ಎಂಬ ವರ್ಗಕ್ಕೆ ಸೇರಿರುವ ಈ ಫಲವನ್ನು ಭಾರತದೆಲ್ಲೆಡೆ ಬೆಳೆಯಲಾಗುತ್ತಿದ್ದು ಎಲ್ಲೆಡೂ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಉಷ್ಣವಲಯದಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಈ ಮರದ ಕಾಂಡ ಅಷ್ಟೇನೂ ದೃಢವಲ್ಲ. ಅಲ್ಲದೇ ಆಲುಗಡ್ಡೆಯಂತೆಯೇ ಈ ಹಣ್ಣಿನ ಆಕೃತಿಯೂ ಒಂದೇ ರೀತಿಯಾಗಿಲ್ಲ. ಕೆಲವು ದುಂಡಗಿದ್ದರೆ ಕೆಲವು ಮೊಟ್ಟೆಯಾಕಾರ, ಕೆಲವು ಮಾವಿನಂತೆ ಒಟ್ಟಾರೆ ಬೇರೆಬೇರೆಯಾಗಿರುತ್ತದೆ. ಆದರೆ ಹೊರಭಾಗ ನಸು ಹಸಿರು ಬಣ್ಣದ ಮೇಲೆ ಬೂದಿ ಎರಚಿದಂತಹ ಬಣ್ಣ ಪಡೆದಿದ್ದು ಒಳಭಾಗದಲ್ಲಿ ನೂರಾರು ಬೀಜಗಳಿರುತ್ತವೆ. ಪ್ರತಿ ಬೀಜವನ್ನೂ, ಅತಿ ಸಿಹಿಯಾದ ಹಣ್ಣಿನ ತಿರುಳು ಆವರಿಸಿಕೊಂಡಿರುತ್ತದೆ. ಈ ಬೀಜಗಳು ಗಟ್ಟಿಯಾಗಿದ್ದು ಕೊಂಚ ವಿಷಕಾರಿಯೂ ಆಗಿರುವ ಕಾರಣ ಬೀಜಗಳನ್ನು ತಿನ್ನಬಾರದು. ತಿರುಳಿನ ಭಾಗ ಹಾಗೂ ಸಿಪ್ಪೆಯ ಒಳಭಾಗವನ್ನೂ ಕೆರೆದು ಸೇವಿಸಬಹುದು. ಈ ತಿರುಳಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ನೆರವಾಗುತ್ತವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ, ಕರಗುವ ನಾರು ಹಾಗೂ ಮೆಗ್ನೇಶಿಯಂ ಸಹಾ ಇವೆ.

ಅಲ್ಲದೇ ಈ ಹಣ್ಣಿನ ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳೂ ದೊರಕುತ್ತವೆ ಹಾಗೂ ನೈಸರ್ಗಿಕ ಸಕ್ಕರೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಸೀತಾಫಲವನ್ನು ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಇದರ ತಿರುಳನ್ನು ನೇರವಾಗಿಯೂ ಸೇವಿಸಬಹುದು ಅಥವಾ ಸ್ಮೂಥಿ, ಜ್ಯೂಸ್, ರಾಸಾಯನ, ಐಸ್ ಕ್ರೀಂ ಗಳ ರೂಪದಲ್ಲಿಯೂ ಸೇವಿಸಬಹುದು. ಇದರ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಿದ್ದು ನಿಮ್ಮನ್ನು ಚಕಿತಗೊಳಿಸಬಹುದು. ಇದು ಕೇವಲ ಉತ್ತಮ ಆರೋಗ್ಯ ಮಾತ್ರವಲ್ಲ, ತ್ವಚೆ, ಕೂದಲು, ರಕ್ತದೊತ್ತಡ ನಿರ್ವಹಣೆ, ಆರೋಗ್ಯಕರ ಮೂಳೆಗಳು ಮೊದಲಾದ ಹಲವು ಪ್ರಯೋಜನಗಳನ್ನೂ ಒದಗಿಸುತ್ತದೆ. ಈ ಮರದ ಎಲೆಗಳಲ್ಲಿ ಸಹಾ ಔಷಧೀಯ ಗುಣವಿದ್ದು ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತದೆ. ಮರದ ಕಾಂಡದ ತೊಗಟೆಯನ್ನು ಹಲ್ಲುನೋವು ಮತ್ತು ಒಸಡುಗಳ ನೋವಿನ ಶಮನಕ್ಕಾಗಿ ಬಳಸಲಾಗುತ್ತದೆ. ಇಂದಿನ ಲೇಖನದಲ್ಲಿ ಸೀತಾಫಲದ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ:

೧) ಅಸ್ತಮಾ ರೋಗ ಬರದಂತೆ ತಡೆಯುತ್ತದೆ:
ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ B6 ವಿಶೇಷವಾಗಿ ಶ್ವಾಸನಾಳಗಳ ಉರಿಯೂತವನ್ನು ತಡೆಯುವ ಕ್ಷಮತೆ ಹೊಂದಿದ್ದು ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸಿ ಅಸ್ತಮಾಘಾತ ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೨) ಹೃದಯಾಘಾತದಿಂದ ರಕ್ಷಿಸುತ್ತದೆ:
ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರಗಳು ನಮ್ಮ ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲ, ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಗೂ ಆಹ್ವಾನ ನೀಡುತ್ತಿವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೃದಯದ  ಕ್ಷಮತೆಗೆ ಅಗತ್ಯವಾಗಿದೆ. ಸೀತಾಫಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಲು ಪೂರಕವಾದ ಹಲವು ಪೋಷಕಾಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ಮೆಗ್ನೇಶಿಯಂ ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಸ್ನಾಯುಗಳ ಸೆಡೆತವನ್ನು ಕಡಿಮೆಗೊಳಿಸಿ ರಕ್ತಸಂಚಾರ ಸುಗಮಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್ B6 ರಕ್ತದಲ್ಲಿ ಹೀಮೋಸಿಸ್ಟೈನ್ (homocystein)(ಅಥವಾ ಪ್ರೋಟೀನುಗಳಲ್ಲಿರುವ ಗಂಧಕ ಆಧಾರಿತ ಅಮೈನೋ ಆಮ್ಲ ಹಾಗೂ ಸಿಸ್ಟೈನ್ ಎಂಬ ಕಿಣ್ವಗಳ ನಡುವಣ ಜೀವರಾಸಾಯನಿಕ ಕ್ರಿಯೆಗೆ ಸಹಕರಿಸುವ ಕಿಣ್ವ) ಸಂಗ್ರಹವನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗಬಹುದಾಗಿದ್ದ ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೩) ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ
ಮಧುಮೇಹ ಇಂದು ಹೆಚ್ಚು ಹೆಚ್ಚು ಜನರಲ್ಲಿ ಕಂಡುಬರುತ್ತಿದ್ದು ವಿಶ್ವದಾದ್ಯಂತ ಪ್ರಮುಖ ಕೊಲೆಗಾರ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಾಲ ಮುಂದೂಡಬಹುದು. ಇದರಲ್ಲಿರುವ ಕರಗುವ ನಾರು ಆಹಾರದಲ್ಲಿರುವ ಸಕ್ಕರೆಯನ್ನು ಕರುಳುಗಳು ಹೀರಿಕೊಳ್ಳಲು ನೆರವಾಗುತ್ತದೆ, ತನ್ಮೂಲಕ ಟೈಪ್ ೨ ವಿಧದ ಮಧುಮೇಹದ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಮಧುಮೇಹದ ವಿರುದ್ದ ಇನ್ನಷ್ಟು ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ.  ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತವೆ. ಇವೆಲ್ಲಾ ಕಾರಣಗಳಿಂದ ಮಧುಮೇಹಿಗಳು ಹಾಗೂ ಮಧುಮೇಹದ ಅನುವಂಶಿಕ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಸೀತಾಫಲ ಸೂಕ್ತ ಫಲವಾಗಿದೆ.

೪) ಜೀರ್ಣಕ್ರಿಯೆಗೆ ಸಹಕರಿಸುತ್ತದೆ:
ಇದರ ತಿರುಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲ, ಜಠರ ಹಾಗೂ ಕರುಳುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಇಲ್ಲವಾಗಿಸುತ್ತದೆ. ವಿಶೇಷವಾಗಿ ಕರುಳುಗಳಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಅಜೀರ್ಣತೆಯಿಂದ ಎದುರಾಗುವ ಹೊಟ್ಟೆಯುರಿ, ಕರುಳಿನ ಹುಣ್ಣು, ಆಮ್ಲೀಯತೆ, ಹುಳಿತೇಗು ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ. ಒಂದು ಮಧ್ಯಮ ಗಾತ್ರದ ಸೀತಾಫಲದಲ್ಲಿ ಆರು ಗ್ರಾಂಗಳಷ್ಟು ಕರಗುವ ನಾರು ಇದ್ದು ಈ ಪ್ರಮಾಣ ಮಲಬದ್ದತೆಯಿಂದ ರಕ್ಷಿಸಲು ಸೂಕ್ತವಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ದೊರೆತಾಗ ತಿರುಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿಟ್ಟು ಪುಡಿಯಾಗಿಸಿದರೆ ಈ ಪುಡಿಯನ್ನು ವರ್ಷವಿಡೀ ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ಅತಿಸಾರ ಹಾಗೂ ಬೇಧಿಗೆ ಔಷಧಿಯಾಗಿ ಬಳಸಬಹುದು.

೫) ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ:
ಇದರಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಹಾಗೂ ಒಳ್ಳೆಯ ಕೊಲೆಸ್ಟಾರ್ ಅನ್ನು ಹೆಚ್ಚು ಮಾಡುತ್ತವೆ. ಅಲ್ಲದೇ ಆಹಾರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕರುಳುಗಳು ಹೀರಿಕೊಳ್ಳುವುದರಿಂದ ರಕ್ಷಿಸುತ್ತವೆ. ಅಲ್ಲದೇ ನಮ್ಮ ದೇಹದಲ್ಲಿರುವ ಕಿಣ್ವಗಳ ಮೇಲೆ ಆಕ್ರಮಣ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

೬) ಹೃದಯದ ಒತ್ತಡ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ:
ಇದರಲ್ಲಿ ಸಮತೋಲನದ ಪ್ರಮಾಣದಲ್ಲಿ ಸೋಡಿಯಂ ಹಾಗೂ ಪೊಟ್ಯಾಶಿಯಂ ಲವಣಗಳಿವೆ. ಇವು ರಕ್ತದ ಒತ್ತಡದ ಏರುಪೇರನ್ನು ನಿಯಂತ್ರಿಸಲು ಅಗತ್ಯವಾಗಿದೆ. ಮೆಗ್ನೀಶಿಯಂ ಪ್ರಮಾಣ ಕೊಂಚ ಹೆಚ್ಚಿರುವ ಕಾರಣ ಹೃದಯದ ಸ್ನಾಯುಗಳನ್ನು ನಿರಾಳಗೊಳಿಸಿ ಈ ಮೂಲಕ ಎದುರಾಗುವ ಸೆಳೆತ ಹಾಗೂ ನಡುನಡುವೆ ಎದುರಾಗುವ ನೂಕಲುಗಳಿಂದ ರಕ್ಷಿಸುತ್ತದೆ. ತನ್ಮೂಲಕ ಹೃದಯಾಘಾತ ಹಾಗೂ ಸ್ತಂಭನಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೭) ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತದೆ:
ಸೀತಾಫಲದಲ್ಲಿ ಪ್ರಚೋದಕ, ಕಫ ನಿವಾರಕ, ದೇಹವನ್ನು ತಂಪುಮಾಡುವ ಹಾಗೂ ಅಸ್ತಿಮಜ್ಜೆಗಳಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣಗಳೂ ಇದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತವೆ. ಈ ಗುಣಗಳು ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉತ್ತಮವಾಗಿವೆ.

೮) ಗರ್ಭಿಣಿಯರಿಗೂ ಸೂಕ್ತವಾಗಿದೆ:
ಇದರಲ್ಲಿರುವ ತಾಮ್ರ ಮತ್ತು ಕಬ್ಬಿಣ ರಕ್ತದ ಹೀಮೋಗ್ಲೋಬಿನ್ ನಲ್ಲಿರುವ ಪ್ರಮುಖ ಘಟಕಗಳಾಗಿರುವ ಕಾರಣದಿಂದ ವಿಶೇಷವಾಗಿ ಗರ್ಭಿಣಿಯರು ಈ ಫಲವನ್ನು ಹೆಚ್ಚಾಗಿ ಸೇವಿಸಲು ಸಲಹೆ ಮಾಡಲಾಗುತ್ತದೆ.

೯) ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಆಂಟಿ ಆಕ್ಸಿಡೆಂಟು ಅಥವಾ ವಿಟಮಿನ್ ಸಿ ಇದೆ. ವಿಟಮಿನ್ ಸಿ ಅತ್ಯುತ್ತಮವಾದ ಉರಿಯೂತ ನಿವಾರಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶವಾಗಿದೆ. ನಿತ್ಯವೂ ಒಂದು ಪ್ರಮಾಣದ ಸೀತಾಫಲವನ್ನು ಸೇವಿಸುವ ಮೂಲಕ ದೇಹ ಚಿಕ್ಕಪುಟ್ಟ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ದೇಹಕ್ಕೆ ಹಾನಿಕರವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದವೂ ಈ ಪೋಷಕಾಂಶ ಹೋರಾಡುವ ಮೂಲಕ ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

೧೦) ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ತೂಕವನ್ನು ನೀಡುತ್ತದೆ:
ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ದೈಹಿಕ ಚಟುವಟಿಕೆಯಿಂದ ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ. ಅಲ್ಲದೇ ಸ್ನಾಯುಗಳು ಬೇಗನೇ ದಣಿಯಲು ಬಿಡದೇ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಕಡಿಮೆಯಿದ್ದು ತೂಕ ಹೆಚ್ಚಿಸಿಕೊಳ್ಳಬಯಸುವ ವ್ಯಕ್ತಿಗಳಿಗೂ ಈ ಫಲ ಅತ್ಯಂತ ಸೂಕ್ತವಾಗಿದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವ ಕಾರಣ ಹಸಿವೂ ಹೆಚ್ಚಾಗುತ್ತದೆ. ಆದರೆ ಇದೇ ಗುಣ ಸ್ಥೂಲದೇಹವನ್ನು ಇನ್ನಷ್ಟು ಸ್ಥೂಲವಾಗಿಸುವ ಕಾರಣ ಸ್ಥೂಲದೇಹಿಗಳು ಈ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಬೇಕು.