ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಮಾರ್ಚ್ 27, 2010

ವಿಶ್ವದ ಏಕಮಾತ್ರ ಅಮರಜೀವಿ

ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು ಪಡೆದುಕೊಳ್ಳುವ ಸಲುವಾಗಿ ನಡೆಸಿದ ಪ್ರಯತ್ನಗಳು ನಮ್ಮ ಪುರಾಣಗಳಲ್ಲಿವೆ, ಹಲವು ಥ್ರಿಲ್ಲರ್ ಕಥೆಗಳಿಗೆ ಜೀವಾಳವಾಗಿವೆ.

ವಿಶ್ವದ ಅಸಂಖ್ಯ ಜೀವಿಗಳಲ್ಲಿ ಇನ್ನೂ ಎಷ್ಟೊ ಜೀವಿಗಳು ಇನ್ನೂ ಮಾನವನಿಗೆ ಅಪರಿಚಿತವಾಗಿಯೇ ಉಳಿದಿವೆ. ನಿರಂತರವಾಗಿ ಜರುಗುತ್ತಿರುವ ಸಂಶೋಧನೆಗಳಿಂದ ಆಗಾಗ ಹೊಸಜೀವಿಗಳ ಅಸ್ತಿತ್ವದ ಬಗ್ಗೆ ಹಾಗೂ ಜೀವನಕ್ರಮಗಳ ಬಗ್ಗೆ ವಿವರಗಳು ದೊರಕಿ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಿವೆ. ಇತ್ತೀಚೆಗೆ ದೊರಕಿರುವ ಮಾಹಿತಿಗಳ ಪ್ರಕಾರ ಸಾಗರಜೀವಿಯಾದ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ (turritopsis nutricula) ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿಫಿಶ್) ವಿಶ್ವದ ಏಕಮಾತ್ರ ಅಮರಜೀವಿಯಾಗಿದೆ. ಅಂದರೆ ಅದಕ್ಕೆ ಸಹಜವಾದ ಸಾವೇ ಇಲ್ಲ. ಸಾವು ಬರುದೇನಿದ್ದರೂ ಅದು ಬೇರೆ ಜೀವಿಗೆ ಆಹಾರವಾದಾಗ ಮಾತ್ರ.
ಈ ಲೋಳೆಮೀನು ಹ್ರೈಡ್ರೊಜೋವಾ ಅಕಶೇರುಕ ವರ್ಗಕ್ಕೆ ಸೇರಿದ್ದು (ಬೆನ್ನುಮೂಳೆ ಇಲ್ಲದ ಪ್ರಜಾತಿ) ಸಾವು ಹತ್ತಿರ ಬರುತ್ತಿದ್ದಂತೆ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಮರಳುತ್ತದೆ.ಅಂದರೆ ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ (transdifferentiation) ಎಂಬ ಹೆಸರನ್ನು ನೀಡಲಾಗಿದ್ದು ಈ ಮೂಲಕ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವವನ್ನು ಪಡೆಯುತ್ತದೆ. ಈ ಅಮರತ್ವದ ಗುಣ ಹೊಂದಿರುವ ಜೀವಿ ಇದುವರೆಗೆ ಇದೊಂದೇ ಪತ್ತೆಯಾಗಿದ್ದು ಸಧ್ಯಕ್ಕೆ ಏಕಮಾತ್ರ ಜೀವಿಯಾಗಿದೆ. ಭೂಮಧ್ಯರೇಖೆಯ ಸಮಶೀತೋಷ್ಣವಲಯದ ಸಾಗರದಲ್ಲಿ ಕಂಡುಬರುವ ಈ ಲೋಳೆಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸ ಹೊಂದಿದೆ. ಹೆಚ್ಚಾಗಿ ಈ ಲೋಳೆಮೀನು ಆಸ್ಟ್ರೇಲಿಯಾ ಬಳಿ ಪತ್ತೆಯಾಗಿವೆ.
ಈ ಗುಣ ಹಲ್ಲಿ ಮತ್ತು ಸರೀಸೃಪ ಮೊದಲಾದವುಗಳಲ್ಲಿ ಕೊಂಚ ಮಟ್ಟಿಗೆ ಇರುವುದನ್ನು ನಾವೆಲ್ಲಾ ಗಮನಿಸಿಯೇ ಇದ್ದೇವೆ. ಹಲ್ಲಿ ಓತಿಕೇತಗಳು ಅಪಾಯ ಕಂಡುಬಂದಾಗ ತಮ್ಮ ಬಾಲವನ್ನು ಉದುರಿಸಿ ಓಡುತ್ತವೆ. ವೈರಿ ಉದುರಿದ ಬಾಲ ಎಗರಾಡುವುದನ್ನೇ ನೋಡಿ ಇದನ್ನೂ ಒಂದು ಜೀವಿ ಎಂದೇ ತಿಳಿದುಕೊಂಡು ಅದರ ಮೇಲೆ ದಾಳಿ ಎಸಗುತ್ತವೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲಸಮಯದಲ್ಲಿಯೇ ಹೊಸಬಾಲ ಬೆಳೆಯುತ್ತದೆ. ಆದರೆ ಇವು ಕೇವಲ ಒಂದು ಅಂಗವನ್ನು ಮಾತ್ರ ಮರುಬೆಳೆಸಬಲ್ಲವೇ ಹೊರತು ಲೋಳೆಮೀನಿನ ತಹರ ಮತ್ತೆ ಹೊಸಜನ್ಮವನ್ನು ಪಡೆಯಲಾರವು.
ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಲೋಳೇಮೀನಿನ ರಹಸ್ಯ ಕಂಡುಹಿಡಿಯಲು ಪ್ರಯತ್ನಗಳು ಸಾಗುತ್ತಿವೆ.
-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಶುಕ್ರವಾರ, ಮಾರ್ಚ್ 19, 2010

ಭವಿಷ್ಯದ ಮೊಬೈಲ್ ವಿನ್ಯಾಸಗೊಳಿಸಿ - ಹತ್ತು ಲಕ್ಷ ರೂ. ಬಹುಮಾನ ಗೆಲ್ಲಿರಿ

ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು ಗ್ರಾಹಕನನ್ನು ತಬ್ಬಿಬ್ಬುಗೊಳಿಸುತ್ತವೆ. ಒಂದು ಮೊಬೈಲಿನಲ್ಲಿರುವ ವೈಶಿಷ್ಟ್ಯ ಇನ್ನೊಂದರಲ್ಲಿ ಇರುವುದಿಲ್ಲ. ನೂತನ ಮೊಬೈಲುಗಳಲ್ಲಿ ಅಡಕವಾಗಿರುವ ಎಷ್ಟೋ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕನಿಗೆ ಅರಿವೇ ಇರುವುದಿಲ್ಲ. ಹಾಗಾಗಿ ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಕೊಂಚ ಹಿಂದಿನ ದಿನ ಬಿಡುಗಡೆಯಾದ ಮೊಬೈಲ್ ಮಾರಾಟವಾಗದೇ ಉಳಿದು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.
 


ಈ ನಿಟ್ಟಿನಲ್ಲಿ ಗ್ರಾಹಕರೇ ತಮಗೆ ಸೂಕ್ತವೆಸಿನಿದ ವಿನ್ಯಾಸವನ್ನು ರಚಿಸಿ ಬೇಕಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ಕೇವಲ ಅತ್ಯುತ್ತಮ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಖ್ಯಾತ ಸಂಸ್ಥೆ ಎಲ್.ಜಿ. ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಹಕರೇ ಮೊಬೈಲ್ ಫೋನ್ ವಿನ್ಯಾಸಗೊಳಿಸುವ ಸ್ಪರ್ಧೆಯೊಂದನ್ನು ಸಂಸ್ಥೆ ಏರ್ಪಡಿಸಿದೆ. ಎಲ್.ಜಿ. ಡಿಸೈನ್ ದ ಫ್ಯೂಚರ್ ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಒಟ್ಟು ನಲವತ್ತು ಬಹುಮಾನಗಳಿದ್ದು ಅತ್ಯುತ್ತಮ ಮಾದರಿಯ ಮೊಬೈಲ್ ಫೋನ್ ವಿನ್ಯಾಸಕ್ಕೆ ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂಪಾಯಿ) ಬಹುಮಾನವನ್ನು ಘೋಷಿಸಲಾಗಿದೆ.


ಬಹುಮಾನದ ವಿವರಗಳು ಈ ಕೆಳಗಿನಂತಿವೆ:
ಪ್ರಥಮ ಬಹುಮಾನ : ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂ) + ನಲವತ್ತೆರೆಡು ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಸಾಫ್ಟ್ ವೇರ್ (ಆಟೋಡೆಸ್ಕ್ ಇಂಡಸ್ಟ್ರಿಯಲ್ ಡಿಸೈನ್)
ಎರಡನೆಯ ಬಹುಮಾನ: ಹತ್ತು ಸಾವಿರ ಡಾಲರ್ (ಸುಮಾರು ಐದು ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)
ಮೂರನೆಯ ಬಹುಮಾನ : ಐದು ಸಾವಿರ ಡಾಲರ್ (ಸುಮಾರು ಎರೆಡೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)
ವಿಮರ್ಶಕರ ಮೆಚ್ಚುಗೆ ಗಳಿಸಿದ ಅತ್ಯುತ್ತಮ ವಿನ್ಯಾಸಕ್ಕೆ : ಮೂರು ಸಾವಿರ ಡಾಲರ್ (ಸುಮಾರು ಒಂದೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ) + ನಾಲ್ಕು ಸಾವಿರ ಡಾಲರ್ (ಸುಮಾರು ಎರಡು ಲಕ್ಷ ರೂ) ಮೌಲ್ಯದ ಉಪಕರಣ
ಮೂವತ್ತೇಳು ಸಮಾಧಾನಕರ ಬಹುಮಾನಗಳು: ತಲಾ ಒಂದು ಸಾವಿರ ಡಾಲರ್ (ಸುಮಾರು ಐವತ್ತು ಸಾವಿರ ರೂ)

ಮೊಬೈಲು ವಿನ್ಯಾಸಗೊಳಿಸಲು ಹೆಚ್ಚು ಹೆಣಗಬೇಕಾದ ಅವಶ್ಯಕತೆಯಿಲ್ಲ. ಎಲ್.ಜಿ. ಸಂಸ್ಥೆಯ ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ ಹೊಸ ವಿನ್ಯಾಸ ರಚನೆಯನ್ನು ಕ್ರಮಾಂತರವಾಗಿ (ಸ್ಟೆಪ್ ಬೈ ಸ್ಟೆಪ್) ರಚಿಸಿಕೊಳ್ಳಬಹುದು.

http://www.crowdspring.com/project/2283311_lg-design-the-future-competition/access/

ಸ್ಪರ್ಧೆಗೆ ಪ್ರವೇಶಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ ಏಪ್ರಿಲ್ ೨೬, ೨೦೧೦. ವಿಜೇತರ ಪ್ರಕಟಣೆ ಮೇ ೧೪ ರಂದು. ವಿಜೇತರ ಪಟ್ಟಿಯನ್ನು ಈ ಕೆಳಗಿನ ತಾಣದಲ್ಲಿ ಪ್ರಕಟಿಸಲಾಗುವುದು:

 www.crowdspring.com/LG/winners.

ಮತ್ತೇಕೆ ತಡ, ನಿಮ್ಮ ಮೆದುಳಿಗೆ ಕೊಂಚ ಕೆಲಸ ನೀಡಿ. ಭವಿಷ್ಯದಲ್ಲಿ ನಮ್ಮ ಕೈಗಳಲ್ಲಿ ಬರುವ ಮೊಬೈಲ್ ನಿಮ್ಮದೇ ವಿನ್ಯಾಸವಾಗಿರವಬಹುದು. ಒಂದು ವೇಲೆ ಬಹುಮಾನ ಗೆದ್ದರೆ ಮಾತ್ರ ನನಗೊಂದು ಪಾರ್ಟಿ ಕೊಡಲು ಮರೆಯದಿರಿ.

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.