ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಜನವರಿ 30, 2009

ಮನಃಶಕ್ತಿಯಿಂದ ವಸ್ತುಗಳನ್ನೆತ್ತಬಲ್ಲ ಮಿರೋಸ್ಲಾವ್ ಮಗೋಲಾ

ಮನಃಶಕ್ತಿ, ಅಥವಾ ಮನಸ್ಸಿನ ಶಕ್ತಿಯಿಂದ ವಸ್ತುಗಳನ್ನು ಚಲಿಸಲು ಸಾಧ್ಯವೇ?  ಪುರಾಣಗಳಲ್ಲಿ ಮಾತ್ರ ಕೇಳಿದ್ದ ಈ ವಿದ್ಯಮಾನ ಈಗ ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವವರಿಗೆ ಸಿದ್ದಿಸಿದೆ.  
ಪೋಲ್ಯಾಂಡಿನ ಐವತ್ತು ವರ್ಷ ವಯಸ್ಸಿನ ಮಿರೋಸ್ಲಾವ್ ಅವರು ಕೇವಲ ಮನಸ್ಸಿನ ಶಕ್ತಿಯಿಂದಲೇ ವಸ್ತುಗಳನ್ನು ಮೇಲೆತ್ತಬಲ್ಲರು. ಅವರು ಮುಟ್ಟಿದ ವಸ್ತು ಆಯಸ್ಕಾಂತಕ್ಕೆ ಅಂಟಿಕೊಂಡು ಬರುವಂತಹ ಕಬ್ಬಿಣದ ತುಂಡಿನಂತೆಯೇ ಸರಾಗವಾಗಿ ಮೇಲೆದ್ದು ಬರಬಲ್ಲದು.  ಈ ಕಾರಣದಿಂದಾಗಿಯೇ ಅವರಿಗೆ ಮ್ಯಾಗ್ನೆಟಿಕ್ ಮ್ಯಾನ್ ಅಥವಾ ಆಯಸ್ಕಾಂತ ಮನುಷ್ಯ ಎಂಬ ಅನ್ವರ್ಥನಾಮವೂ ಬಂದಿದೆ.
ಪ್ರತಿ ಮನುಷ್ಯನಲ್ಲಿಯೂ ಒಂದು ವಿಧವಾದ ಆಯಸ್ಕಾಂತೀಯ ಶಕ್ತಿಯಿದೆ ಆದರೆ ಅದು ಒಂದೆಡೆ ಕೇಂದ್ರ್‍ಈಕೃತವಾಗದೆ ಹರಡಿ ಹೋಗಿರುವುದರಿಂದ ನಾವು ಅದರ ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಆದರೆ ಕೊಂಚ ಪ್ರಯತ್ನದ ಬಳಿಕ ಈ ಶಕ್ತಿಯನ್ನು ಕೇಂದ್ರ್‍ಈಕರಿಸಲು ಸಾಧ್ಯವಾದರೆ ಪವಾಡಗಳನ್ನೇ ಸೃಷ್ಟಿಸಬಹುದು ಎಂದು ಮಿರೋಸ್ಲಾವ್ ಹೇಳುತ್ತಾರೆ.

ಇವರ ಶಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ ಹಲವಾರು ವೈದ್ಯರು, ಮನಃಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಇದರಲ್ಲಿ ಯಾವುದೇ ಬೂಟಾಟಿಕೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.  ಇವರು ಬಳಸುವ ಶಕ್ತಿಗೆ ಸೈಕೋ ಕೈನೆಸಿಸ್ psycho kinesis ಎಂಬ ಕರೆಯಲಾಗುತ್ತದೆ.  

ತಮ್ಮ ಶಕ್ತಿಯಿಂದ ಅವರು ಕಬ್ಬಿಣ, ಮಾರ್ಬಲ್, ಸೆರಾಮಿಕ್, ಮೊದಲಾದವುಗಳಿಂದ ತಯಾರಿಸಿದ ವಸ್ತುಗಳನ್ನು ಆಯಸ್ಕಾಂತದಂತೆ ಮೇಲೆತ್ತಬಲ್ಲರು.  ತಮ್ಮ ತಲೆಯ ಮೇಲೆ ಅಂಟಿಕೊಂಡಂತೆ ಇರಿಸಬಲ್ಲರು. 

ಈಗ ಈ ವಸ್ತುಗಳನ್ನು ಗಾಳಿಯಲ್ಲಿ ತೇಲುವಂತೆ ಮಾಡುವತ್ತ ಅವರ ಗಮನ ಹರಿದಿದೆ.  ಈ ವಿದ್ಯೆಯನ್ನು ಸಾಧಿಸಲು ಅವರು ಆಫ್ರಿಕಾ, ಚೀನಾ, ಮಧ್ಯಪ್ರಾಚ್ಯ ದೇಶಗಳು ಹಾಗೂ ಭಾರತಕ್ಕೂ ಬಂದಿದ್ದರು.  ತಮ್ಮ ಸಾಧನೆಗೆ ಅತಿಹೆಚ್ಚಿನ ಮಾಹಿತಿ ತನಗೆ ಭಾರತ ಹಾಗೂ ಚೀನಾದಲ್ಲಿ ದೊರಕಿತು ಎಂದು ಅವರು ಹೇಳುತ್ತಾರೆ.   

ಸುಮ್ಮನೆ ವಸ್ತುವನ್ನು ಮುಟ್ಟಿ ಆಯಸ್ಕಾಂತದಂತೆ ಮೇಲೆತ್ತಿದರೆ ಏನು ಮಹಾ? ಅದರಿಂದ ಏನು ಉಪಯೋಗ ಎಂದು ಹಲವರ ಅನುಮಾನ.  ಆದರೆ ಮನಃಶಾಸ್ತ್ರಜ್ಞರ ಪ್ರಕಾರ ಇವರೊಂದು ಅಪರೂಪದ ಮಾಂತ್ರಿಕ.  ಮನುಷ್ಯನ ಮಾನಸಿಕ ಲೋಕ ಇನ್ನೂ ಅರ್ಥವಾಗದ ಆಗರ.  ಒಂದು ವೇಳೆ ಈ ವಿದ್ಯೆಯಿಂದ ಮನುಷ್ಯನ ಮಾನಸಿಕ ಲೋಕವನ್ನು ಪ್ರವೇಶಿಸಲು ಸಾಧ್ಯವಾದರೆ ಅಥವಾ ಈ ವಿದ್ಯೆಯಿಂದ ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ಸಾಧ್ಯವಾದರೆ ಮನುಕುಲಕ್ಕೆ ಲಭಿಸಬಹುದಾದ ಉಪಯೋಗ ಅಸದಳ. 

ಆದ್ದರಿಂದ ಪೋಲ್ಯಂಡಿನ ಹಲವು ಮನಃಶಾಸ್ತ್ರಜ್ಞರು ಇವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.  ಮನುಕುಲಕ್ಕೆ ಉಪಯೋಗವಾಗುವುದಾದರೆ ತಾನು ಯಾವುದೇ ತ್ಯಾಗಕ್ಕೆ ಸಿದ್ಧ ಎಂದು ಮಿರೋಸ್ಲಾವ್ ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ Power of the Brain (ಮೆದುಳಿನ ಸಾಮರ್ಥ್ಯ) ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಈಗ ಎರಡನೆಯ ಪುಸ್ತಕ ಬರೆಯುವ ಹುನ್ನಾರದಲ್ಲಿದ್ದಾರೆ. ಈ ವರೆಗೆ ಹಲವಾರು ಉಪನ್ಯಾಸಗಳನ್ನು ನೀಡಿ ಹಲವಾರು ಮಾನಸಿಕ ಕಾಯಿಲೆಗಳಿಂದ ಹೊರಬರಲು ಜನರಿಗೆ ಪ್ರೋತ್ಸಾಹ ನೀಡಿದ್ದಾರೆ. 

ಇವರ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸೋಣವೇ.

ಕೃಪೆ: www.magneticman.org

ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.


cucumber-hearts-2.jpg

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ, ಬಿರಿಯಾನಿಯಂತಹ ಭಾರೀ ಊಟವೇ ಆಗಲಿ, ಸೌತೆಕಾಯಿ ಹೋಳು ಪಕ್ಕದಲ್ಲಿದ್ದರೆ ಊಟಕ್ಕೊಂದು ಕಳೆ.

ಒಂದು ವೇಳೆ ಇದೇ ಸೌತೆಕಾಯಿಯನ್ನು ಅಡ್ಡಡ್ಡಲಾಗಿ ಕತ್ತರಿಸಿದಾಗ ಮೂಡುವ ಹೋಳುಗಳು ವೃತ್ತಾಕಾರದಲ್ಲಿಲ್ಲದೆ ಹೃದಯಾಕಾರ, ನಕ್ಷತ್ರಾಕಾರ ಅಥವಾ ನಮಗೆ ಬೇಕಾದ ಇನ್ಯಾವುದೇ ಆಕಾರದಲ್ಲಿದ್ದರೆ?ಇದರಲ್ಲೆಲ್ಲಾ ತಲೆ ಓಡುವುದು ಜಪಾನೀಯರದ್ದೇ ಅಂತ ಅವರು ಮತ್ತೊಮ್ಮೆ ಪುರಾವೆ ಸಮೇತ ಸಾಧಿಸಿತೋರಿಸಿದ್ದಾರೆ.ಜಪಾನಿನ ಹಲವಾರು ತರಕಾರಿ ಬೆಳೆಸುವ ತೋಟಗಳು ವಿವಿಧ ರೂಪದಲ್ಲಿ ಬೆಳೆಸಲಾದ ಸೌತೆಕಾಯಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದಕ್ಕಾಗಿ ಅವು ಹೆಚ್ಚೇನೂ ಕಷ್ಟಪಡುವುದಿಲ್ಲ. ತಮಗೆ ಬೇಕಾದ ಆಕೃತಿಯಿರುವ ಸಂಪೂರ್ಣ ಪಾರದರ್ಶಕವಾದ ಆದರೆ ಅಷ್ಟೇ ಧೃಢವಾದ ಪ್ಲಾಸ್ಟಿಕ್ ಕೊಳವೆಯೊಂದನ್ನು ಸೌತೆ ಇನ್ನೂ ಹೀಚಾಗಿರುವಾಗಲೇ ತೂರಿಸಿಬಿಟ್ಟರಾಯಿತು ಅಷ್ಟೇ. ಸೌತೆ ಬೆಳೆಯುತ್ತಾ ಹೋದಂತೆ ಪ್ಲಾಸ್ಟಿಕ್ ಒಳಗಣ ವಿಸ್ತಾರದ ಪ್ರಕಾರ ದೊಡ್ಡದಾಗುತ್ತಾ ಹೋಗಿ ಕಟಾವಿಗೆ ಬರುವ ವೇಳೆಗೆ ಕೊಳವೆಯನ್ನು ಆಕ್ರಮಿಸಿರುತ್ತದೆ. ಕಟಾವು ಮಾಡಿದ ಬಳಿಕ ಕೊಳವೆಯನ್ನು ಕಳಚಿದರೆ ಸಾಕು. ಯಥಾ ಆಕೃತಿಯ ಸೌತೇಕಾಯಿ ಲಭ್ಯ.

 

ಅಡ್ಡಡ್ಡಲಾಗಿ ಕತ್ತರಿಸಿದಾದ ಸುಂದರ ವಿನ್ಯಾಸದ ಹೋಳು ಊಟದ ಸೊಬಗನ್ನು ಹೆಚ್ಚಿಸಲೂ ಸಾಧ್ಯ.ಇದೇ ವಿಧಾನವನ್ನು ಅನುಸರಿಸಿ ಜಪಾನಿನ ತೋಟಗಳು ಚೌಕಾಕಾರದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನ ಸೆಳೆದಿದ್ದವು. ನಾಳೆ ಇನ್ನೇನು ಬರಬಹುದೋ ಗೊತ್ತಿಲ್ಲ. ಹೃದಯಾಕಾರದ ಮಾವಿನಕಾಯಿ, ವೃತ್ತಾಕಾರದ ಪಡವಲಕಾಯಿ..... ಇನ್ನೇನಾದರೂ ಹೊಳೆಯುತ್ತಿದೆಯೇ?

 

ಮಂಗಳವಾರ, ಜನವರಿ 27, 2009

ಬಂದಿದೆ ಬಿದಿರಿನ ಕಾರು - ಬಿದಿರ್ಕಾರು





ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ.  ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.  

ಕ್ಯೋಟೋ ವಿಶ್ವವಿದ್ಯಾಲಯದ ವೆಂಚರ್ ಬಿಸಿನೆಸ್ ಲ್ಯಾಬೋರೇಟರಿ ಪ್ರಸ್ತುತಪಡಿಸಿದ ಈ ಕಾರಿನ ಹೆಸರು ಬಾಂಬ್ಗೂ (Bambgoo). ಪ್ರತಿ ಬಾರಿ ಚಾರ್ಜ್ ಮಾಡಿದ ಬಳಿಕ ಸತತವಾಗಿ ಐವತ್ತು ಕಿ.ಮೀ ಓಡುವ ಸಾಮರ್ಥ್ಯವುಳ್ಳ ಈ ಬಿದಿರ್ಕಾರು ಕೇಲಲ 2.7 ಮೀ ಉದ್ದ, 1.3 ಮೀಟರ್ ಅಗಲ, 1.65 ಮೀಟರ್ ಎತ್ತರ ಹಾಗೂ ಕೇವಲ ಅರವತ್ತು ಕೇಜಿ ಭಾರವಿದೆ.  ಹೆಸರೇ ತಿಳಿಸುವಂತೆ ಇದರ ಸಂಪೂರ್ಣ ಹೊರಮೈ ತಯಾರಿಸಿದ್ದು ಕೇವಲ ಬಿದಿರಿನಿಂದ. 

ಒಂದು ವೇಳೆ ಈ ಕಾರು ಭಾರತದಲ್ಲಿ ಪ್ರಸ್ತುತಪಡಿಸಿದರೆ ನಮ್ಮ ಗ್ರಾಮೋದ್ಯೋಗಕ್ಕೆ ಒಂದು ಕಳೆ ಬರಬಹುದೇನೋ.  ಏಕೆಂದರೆ ಹೆಣೆದಿರುವ ಬಿದಿರು ಅಷ್ಟೊಂದು ಕಲಾತ್ಮಕವಾಗಿಲ್ಲ.  ನಮ್ಮ ಗ್ರಾಮಗಳಳಲ್ಲಿ ಇನ್ನಷ್ಟು ಚೆನ್ನಾಗಿ ಬುಟ್ಟಿ, ತಟ್ಟಿ ಹೆಣೆಯುವವರಿದ್ದಾರೆ.  ಚಾಸಿ ಜಪಾನಿದ್ದು ಬಾಡಿ ಕರ್ನಾಟಕದ್ದು ಮಾಡಿ ಒಂದು ಜಾಯಿಂಟ್ ವೆಂಚರ್ ತೆರೆದರೆ ಹೇಗೆ?

ಸೋಮವಾರ, ಜನವರಿ 26, 2009

ಚಾಕ್-ಓ-ಬಾಮಾ - ಹೊಸ ಅಧ್ಯಕ್ಷರ ಮುಖವಿರುವ ಹೊಸ ಚಾಕಲೇಟು

ನಿಯೋಪಾಲಿಟನ್  ಪ್ರಿಂಟಿಂಗ್ ಅಂಡ್ ಕಂಪನಿ - ಹೆಸರು ಕೇಳಿದರೆ ಏನೆನ್ನಿಸುತ್ತದೆ?  ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಈ ಸಂಸ್ಥೆ ವಿಶೇಷ ಚಾಕಲೇಟುಗಳನ್ನು ತಯಾರಿಸಿ ನೀಡುವ ಕೆಲಸವನ್ನೂ ಮಾಡುತ್ತದೆ.  ಕಳೆದ ವಾರ ಅಧ್ಯಕ್ಷರ ಪದವಿಗೇರಿದ ಬರಾಕ್ ಹುಸೇನ್ ಒಬಾಮಾರವರ ಪದವಿಗ್ರಹಣ ಸಂದರ್ಭದಲ್ಲಿ ಸಂಸ್ಥೆ ಅವರ ಮುಖದ ಪಡಿಯಚ್ಚಿರುವ ಚಾಕಲೇಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಅದರ ಹೆಸರೇ ಚಾಕ್-ಒ-ಬಾಮಾ. ಪ್ರತಿ ಉತ್ಪನ್ನಕ್ಕೂ ಒಂದು ವಿಶೇಷ ವಾಕ್ಯ ಇರಬೇಕಲ್ಲ, ಹಾಗೇ ಇದಕ್ಕೂ ಇದೆ, "ಎಸ್-ವಿ-ಕ್ಯಾನ್" (ನಾವು ಸಾಧಿಸಬಲ್ಲೆವು) ಎಂಬ ಅಧ್ಯಕ್ಷರ ನುಡಿಯೇ ಚಾಕಲೇಟಿನ ಧ್ಯೇಯವಾಕ್ಯವೂ ಆಗಿದೆ.






ಮೂರುವರೆ ಇಂಚು ಎತ್ತರ, ಎರೆಡೂವರೆ ಇಂಚು ಅಗಲದ ಚಿಕ್ಕ ಪೆಟ್ಟಿಗೆಯಲ್ಲಿಈ ಚಾಕಲೇಟನ್ನು ಪ್ಯಾಕ್ ಮಾಡಲಾಗಿದ್ದು ಹಿಂಭಾಗದಲ್ಲಿ ಅಧ್ಯಕ್ಷರು ಪ್ರಮಾಣವಚನದ ದಿನ ನೀಡಿದ ಭಾಷಣದ ಪ್ರಮುಖ ಅಂಶಗಳನ್ನು ಮುದ್ರಿಸಲಾಗಿದೆ. ಈ ಚಾಕಲೇಟು ತಯಾರಿಗೆ ಬಳಸಲಾದ ವಸ್ತುಗಳ ವಿವರಗಳನ್ನು ಸಂಸ್ಥೆ ಗೋಪ್ಯವಾಗಿರಿಸಿದೆ.  ಆದರೆ ಈ ಉತ್ಪನ್ನ ಅತ್ಯುನ್ನತ ಗುಣಮಟ್ಟದಿಂದ ಕೂಡಿದೆ ಎಂದು ಸಂಸ್ಥೆ ಪ್ರಚಾರ ಪಡಿಸಿದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ರುಚಿಯಿರುವ ಈ ಚಾಕಲೇಟು ಅಪ್ಪಟ ಕಂದುಬಣ್ಣದ್ದಾದೆ. ವಿಶೇಷ ಮೆರುಗು ತರಲು ಅರಗಿಸಿಕೊಳ್ಳಬಹುದಾದ ಕಂಚಿನ ಪುಡಿಯನ್ನೂ ಉದುರಿಸಲಾಗಿದೆಯಂತೆ.





ಒಂದು ಚಾಕಲೇಟಿನ ಬೆಲೆ ಇಪ್ಪತ್ತು ಡಾಲರ್ (ಸುಮಾರು ಒಂಭೈನೂರು ರೂಪಾಯಿ) ಇದ್ದು ಅಮೇರಿಕಾದಲ್ಲಿ ಎಲ್ಲಿ ಬೇಕಿದ್ದರೂ ಅಂಚೆ ಮೂಲಕ ಕಳುಹಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಅದರಲ್ಲಿ ಒಂದು ಡಾಲರ್ ದತ್ತಕ ನಿಧಿಗೂ ಅರ್ಪಿಸಲಾಗುವುದು.  ಈ ನಿಧಿ ಯಾವ ದತ್ತಕ ಸಂಸ್ಥೆಗೆ ಹೋಗಬೇಕೆಂದು ಬಯಸುವಿರೋ ಆ ಸಂಸ್ಥೆಗೆ ಮತ ನೀಡಿ ಆಯ್ಕೆಯನ್ನೂ ಮಾಡಿಕೊಳ್ಳಬಹುದಾಗಿದೆ.

ಸಂಸ್ಥೆ 2009 ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ಚಾಕಲೇಟುಗಳಲ್ಲಿ ಚಾಕ್ ಒ ಬಾಮಾ ಮಾತ್ರವಲ್ಲದೇ ಮುಸ್ಟೇಶ್ ಆನ್ ಅ ಸ್ಟಿಕ್ (ಕೋಲಿನಲ್ಲೊಂದು ಮೀಸೆ), ದ ಆಕ್ಸ್ ಬಾಕ್ಸ್ (ಚೀನಾದ ಹೊಸವರ್ಷದ ಪ್ರತೀಕವಾದ ಎತ್ತಿನ ಚಾಕಲೇಟು) ಮೊದಲಾದವು ಗಮನ ಸೆಳೆಯುತ್ತಿವೆ.

ಭಾನುವಾರ, ಜನವರಿ 25, 2009

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು






ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್ನಾಮಿನ ಜನಪ್ರಿಯ ಮಾದಕದ್ರವ್ಯ. ವಿಯೆಟ್ನಾಂ ನಲ್ಲಿ ಮದ್ಯ ತುಂಬಿದ ಒಂದು ಬಾಟಲಿಯಲ್ಲಿ ಇಡಿಯ ನಾಗರಹಾವನ್ನೇ ಮುಳುಗಿಸಿಟ್ಟಿರುವ ಪೇಯ ಸ್ನೇಕ್ ವೈನ್ (ಕನ್ನಡದಲ್ಲಿ ಹಾಮ್ವದ್ಯ ಎಂದು ಕರೆಯಬಹುದೇ???) ಎಂದೇ ಜನಪ್ರಿಯ. ಬರೆಯ ವಿಯೆಟ್ನಾಂ ಮಾತ್ರವಲ್ಲದೇ ಹಲವು ಆಗ್ನೇಯ ಏಷಿಯಾ ದೇಶಗಳಲ್ಲೂ ಹಲವು ಶತಮಾನಗಳಿಂದ ಈ ಪೇಯ ಜನರಿಗೆ ಕಿಕ್ ನೀಡುತ್ತಿದೆ. ಆದರೆ ನಾಗರ ಹಾವಿನ ವಿಷದಿಂದ ಸಾವು ಕಟ್ಟಿಟ್ಟ ಬುತ್ತಿಯಲ್ಲವೇ? ಅದು ಹೇಗೆ ಹಾವಿನ ವಿಷ ಸೇರಿದ ಮದ್ಯ ಮನುಷ್ಯರನ್ನು ಕೊಲ್ಲುವುದಿಲ್ಲ್? ನಿಜಕ್ಕೂ ಹಾವಿನ ವಿಷ ಒಂದು ಪ್ರೋಟೀನ್. ರಕ್ತದಲ್ಲಿ ಸೇರಿದೊಡನೇ ಅದು ರಕ್ತದಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ನರಮಂಡಲವನ್ನೇ ಘಾಸಿಗೊಳಿಸುವುದರಿಂದಲೇ ಸಾವು ಸಂಭವಿಸುತ್ತದೆ. ಆದರೆ ಮದ್ಯದಲ್ಲಿ ಮಿಶ್ರವಾದ ಹಾವಿನ ವಿಷ ಮದ್ಯ (ಇಥನಾಲ್) ಹುಳಿಬಂದಂತೆ (ಫರ್ಮೆಂಟ್) ಹಾವಿನ ವಿಷ ತನ್ನ ವಿಷಯುಕ್ತ ಗುಣವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಹಾಗಾಗಿ ಮದ್ಯದೊಳಗಿರುವ ಸತ್ತ ಹಾವಿನಷ್ಟೇ ಅದರ ವಿಷವೂ ನಿರಪಾಯಕಾರಿ. ಆದರೆ ಈ ಪ್ರಕ್ರಿಯೆಗೆ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕಾದುದರಿಂದ ಹಾವು ಮುಳುಗಿಸಿದ ಒಂದು ತಿಂಗಳ ಒಳಗೇ ಏನಾದರೂ ರುಚಿ ನೋಡಿದರೆ ಆತಂಕ ಕಟ್ಟಿಟ್ಟ ಬುತ್ತಿ. ಈ ಹಾವ್ಮದ್ಯದಲ್ಲಿ ಬರೆಯ ನಾಗರ ಹಾವಲ್ಲದೇ ಇತರ ಹಾವುಗಳು, ಚೇಳು, ಓತಿಕ್ಯಾತ, ಜಿರಳೆ, ಹಕ್ಕಿಗಳು, ಆಮೆ, ಅಥವಾ ಇವುಗಳಲ್ಲಿ ಒಂದೆರೆಡದ ಸಂಯೋಜನೆಯ ಮದ್ಯವೂ ದೊರಕುತ್ತದೆ. ಬಾಟಲಿಯಿಂದ ಚಿಕ್ಕ ಕಪ್ ಗಳಲ್ಲಿ ಮದ್ಯ ಸುರುವಿ ಗ್ರಾಹಕನಿಗೆ ನೀಡಲಾಗುತ್ತದೆ. ಹೆಚ್ಚಿಗೆ ಈ ಮದ್ಯವನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ. ಬೇರೆ ಧಾನ್ಯಗಳ ಮದ್ಯ ವಿಷವನ್ನು ಅಷ್ಟೊಂದು ಚೆನ್ನಾಗಿ ಹೀರಿಕೊಳ್ಳುವುದಿಲ್ಲ ಎಂದು ಅಕ್ಕಿಯ ಮದ್ಯವನ್ನೇ ಆರಿಸಿಕೊಳ್ಳಲಾಗುತ್ತದೆ. ಹಾವಿನ ವಿಷದಂತೆ ಹಾವಿನ ರಕ್ತಭರಿತ ಮದ್ಯವೂ ಚಲಾವಣೆಯಲ್ಲಿದೆ. ಹಾವಿನ ಮೈಗೆ ಹರಿತವಾದ ಚಾಕುವಿನಿಂದ ಗೆರೆಗಳನ್ನೆಳೆದು ರಕ್ತ ಮದ್ಯದಲ್ಲಿ ಸೇರುವಂತೆ ಮಾಡಲಾಗುತ್ತದೆ. ಹಾವಿನ ಯಕೃತ್ತು ಅಥವಾ ಪಿತ್ತರಸಬೆರೆತ ಮದ್ಯ ಇನ್ನೊಂದು ವಿಶೇಷ. ಅಲ್ಲದೇ ಹಾವಿನ ಇತರ ಅಂಗಗಳಾದ ಚರ್ಮ, ಮಾಂಸ, ಯಕೃತ್ತು ಮೊದಲಾದವುಗಳು ಸೈಡ್ ಡಿಶ್ ಆಗಿಯೂ ಲಭ್ಯ. ಮುಂದಿನ ಸಲ ವಿಯೆಟ್ನಾಂ ಅಥವಾ ಇತರ ಸುತ್ತಮುತ್ತಲ ದೇಶಗಳಿಗೆ ಪ್ರವಾಸ ಹೋದಾಗ ಚಿಕ್ಕ ಕಪ್ಪಿನಲ್ಲಿ ವಿಶೇಷ ಎಂದು ಮದ್ಯ ಕೊಟ್ಟರೆ ಕೊಂಚ ಜಾಗರೂಕರಾಗಿರಿ.

ಭಾನುವಾರ, ಜನವರಿ 18, 2009


ಹೆಲಿಕಾಪ್ಟರು ನಡೆಸುವಾಗ ಎಸ್ಸೆಮ್ಮೆಸ್ ಕಳಿಸುವುದೇ?  ಕೆರೆಯೇ ಗತಿ

ವಾಹನ ಚಲಾಯಿಸುವಾಗ ಮೊಬೈಲ್ ಫೋನು ಬಳಸಬೇಡಿ, ಎಸ್ಸೆಮ್ಮೆಸ್ ಕಳಿಸಬೇಡಿ, ನಿಮ್ಮ ಏಕಾಗ್ರತೆ ಭಂಗಗೊಂಡು ಅಪಘಾತಗಳಾಗುವ ಸಾಧ್ಯತೆಗಳಿವೆ, ಚಾಲಕನ ಏಕಾಗ್ರತೆಯನ್ನು ಕೆಡಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲು ಬಳಸಲೇಬೇಕಾದ ಸಂದರ್ಭ ಬಂದರೆ ವಾಹನ ನಿಲ್ಲಿಸಿ ಬಿಡಿ ಎಂದೆಲ್ಲಾ ಎಲ್ಲಾ ದೇಶಗಳ ಕಾನೂನುಗಳು ಸಾರಿ ಸಾರಿ ಹೇಳುತ್ತವೆ.  ವಾಹನ ಚಲಾಯಿಸುವಾಗ ಮೊಬೈಲ್ ಫೋನನ್ನು ಹೆಡ್ ಫೋನ್ ಇಲ್ಲದೆ  ಬಳಸುವುದು ಯು.ಎ.ಇ. ಸಹಿತ ಹಲವು ರಾಷ್ಟ್ರಗಳಲ್ಲಿ ದಂಡನಾರ್ಹ ಅಪರಾಧ.  

ಇಷ್ಟೆಲ್ಲಾ ಕಟ್ಟಳೆಗಳಿದ್ದರೂ ಚಲಿಸುವ ನೂರು ಕಾರುಗಳಲ್ಲಿ ಇಪ್ಪತ್ತು ಮೂವತ್ತರ ಚಾಲಕರಾದರೂ ತಮ್ಮ ಮೊಬೈಲುಗಳನ್ನು ಒಂದು ಕಿವಿಯ ಮೇಲಿರಿಸಿಕೊಂಡೇ ಇರುತ್ತಾರೆ.  ಇನ್ನೂ ಕೆಲವರು ಎಸ್ಸೆಮ್ಮೆಸ್ ಕಳಿಸುವುದೂ ಉಂಟು.

ವಾಹನ ಚಲಾಯಿಸುವಾಗ ಎಸ್ಸೆಮ್ಮೆಸ್ ಕಳುಹಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂಬುದು ಗೊತ್ತಿದ್ದರೂ ಎಸ್ಸೆಮ್ಮೆಸ್ ಕಳುಹಿಸುವ ವೀರಾಗ್ರಣಿಗಳಿಗೇನೂ ಕೊರತೆಯಿಲ್ಲ. ಆದರೆ ಹೆಲಿಕಾಪ್ಟರೊಂದನ್ನು ಚಲಾಯಿಸುತ್ತಿರುವಾಗ ಎಸ್ಸೆಮ್ಮೆಸ್ ಕಳುಹಿಸುವಲ್ಲಿ ಮಗ್ನರಾದರೆ?

ಕಳೆದ ನವೆಂಬರ್ ನಲ್ಲಿ ನ್ಯೂಜಿಲ್ಯಾಂಡಿನ ವನಾಕಾ ಎಂಬ ಸರೋವರದ ಮೇಲೆ ಎರೆಡು ಹೆಲಿಕಾಪ್ಟರುಗಳಲ್ಲಿ ಡೇವಿಡ್ ಸಾಕ್ಸ್ಟನ್ ಎಂಬುವರು ಒಂದು ಹೆಲಿಕಾಪ್ಟರಿನಲ್ಲಿ ಹಾಗೂ ಅವರನ್ನು ಹಿಂಬಾಲಿಸಿಕೊಂಡು ಅವರ ಪುತ್ರ ಮೋರ್ಗನ್ ಸಾಕ್ಸ್ಟನ್ ಅವರು ಇನ್ನೊಂದು ಹೆಲಿಕಾಪ್ಟರಿನಲ್ಲಿ ಸರೋವರದ ಇನ್ನೊಂದು ತೀರದಲ್ಲಿದ್ದ ವನಾಕಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು.  ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಹಿಂಭಾಗದಲ್ಲಿ ಬರುತ್ತಿರುವ ವಾಹನಗಳನ್ನು ಗಮನಿಸಲು ರಿಯರ್ ವ್ಯೂ ಕನ್ನಡಿ ಲಭ್ಯವಿದೆ. ಆದರೆ ಆ ಸೌಲಭ್ಯ ಹೆಲಿಕಾಪ್ಟರಿನಲ್ಲಿ ಇದ್ದಿರಲಿಕ್ಕಿಲ್ಲ.  ಹಾಗಾಗಿ ಡೇವಿಡ್ ಅವರಿಗೆ ತಮ್ಮ ಹಿಂದೆ ಮಗರಾಯ ಹಿಂಬಾಲಿಸುತ್ತಿಲ್ಲವೆನ್ನುವುದು ವಿಮಾನ ನಿಲ್ದಾಣ ತಲುಪುವವರೆಗೂ ತಿಳಿಯಲೇ ಇಲ್ಲ.  ಒಂದು ಹೆಲಿಕಾಪ್ಟರಿನಿಂದ ಇನ್ನೊಂದಕ್ಕೆ ರೇಡಿಯೋ ಮೂಲಕ ಮಾತನಾಡುವ ಸೌಲಭ್ಯವಿದ್ದರೂ ಅದೇಕೆ ಮೌನವಾಗಿದ್ದರೋ, ದೇವರೇ ಬಲ್ಲ. ಮನೆಯ ಜಗಳ ಆಕಾಶಕ್ಕೆ ತಲುಪಿರಲಿಕ್ಕೂ ಸಾಕು.

ಏನಾದರಾಗಲಿ, ತಮ್ಮ ಮಗ ತಲುಪಲಿಲ್ಲವೆಂದು ಡೇವಿಡ್ ಅವರು ಹುಯಿಲಿಟ್ಟೊಡನೆಯೇ ಮೋರ್ಗನ್ ಅವರ ಹೆಲಿಕಾಪ್ಟರ್ ಹುಡುಕಾಟ ಶುರುವಾಯಿತು.  ಶೀಘ್ರದಲ್ಲಿಯೇ ಅವರ ಹೆಲಿಕಾಪ್ಟರ್ ಸರೋವರದ ನಡುವಿನಲ್ಲಿ ಅಪಘಾತಕ್ಕೀಡಾಗಿದ್ದುದು ಕಂಡುಬಂದಿತ್ತು.  ರಕ್ಷಣಾ ಸಿಬ್ಬಂದಿ ಕೂಡಲೇ ನೀರಿಗೆ ಜಿಗಿದು ಮೋರ್ಗನ್ ಅವರನ್ನು ಸುರಕ್ಷಿತವಾಗಿ ಕರೆದುತಂದರು.

ಆ ಸಮಯದಲ್ಲಿ ಆಗಿದ್ದಿಷ್ಟೇ.  ಹೆಲಿಕಾಪ್ಟರ್ ನಡುಆಗಸದಲ್ಲಿ ಚಲಿಸುತ್ತಿದ್ದಾಗ ಬೇಜಾರಾಗಿ ಒಂದು ಎಸ್ಸೆಮ್ಮೆಸ್ ಕಳುಹಿಸೋಣವೆಂದು ತಮ್ಮ ಮೊಬೈಲ್ ತೆಗೆದುಕೊಂಡು ಒಂದಾದ ಮೇಲೊಂದರಂತೆ ತಮ್ಮ ಸ್ನೇಹಿತರಿಗೆ ಎಸ್ಸೆಮ್ಮೆಸ್ ಕಳುಹಿಸುತ್ತಾ ಹೋದರು.  ಎಸ್ಸೆಮ್ಮೆಸ್ ಲೋಕದಲ್ಲಿ ಮುಳುಗಿದ್ದ ಅವರಿಗೆ ತಮ್ಮ ನಿಯಂತ್ರಣದಿಂದ ಯಾವಾಗ ಹೆಲಿಕಾಪ್ಟರು ನೀರಿನೆಡೆ ಚಲಿಸಿತ್ತೋ ಗೊತ್ತೇ ಅಗಲಿಲ್ಲ.  ಇನ್ನೇನಾಗಬೇಕು, ರಭಸದಲ್ಲಿ ನೀರಿಗೆ ಅಪ್ಪಳಿಸಿದ ಹೆಲಿಕಾಪ್ಟರು ಚಕನಾ ಚೂರು.  

ಈ ಘಟನೆಯ ಬಳಿಕ ಎಲ್ಲಾ ಪೈಲಟುಗಳಿಗೆ ಮೊಬೈಲು ಫೋನ್ ಬಳಸದಂತೆ ಕಟ್ಟೆಚ್ಚರ ನೀಡಲಾಗಿದೆಯಂತೆ.  ಹಾರಾಟದಲ್ಲಿರುವಾಗ ತಾವೂ ಎಸ್ಸೆಮ್ಮೆಸ್ ಕಳುಸುತ್ತಿದ್ದೇವೆಂದೂ ಆದರೆ ಅದರಿಂದ ಹಾರಾಟವೇ ಭಗ್ನಗೊಳ್ಳುವಷ್ಟು ಮಗ್ನರಾಗುತ್ತಿದ್ದಿಲ್ಲವೆಂದೂ, ಇನ್ನು ಮುಂದಕ್ಕೆ ಹುಷಾರಾಗಿರುತ್ತೇವೆಂದು ಉಳಿದ ಪೈಲಟುಗಳು ಭಾಷೆ ನೀಡಿದ್ದಾರೆ. 

ಅಂದ ಹಾಗೆ ಅವರು ಕಳುಹಿಸಿದ ಸಂದೇಶ ಏನು ಎಂಬುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಕೃಪೆ: www.nzherald.co.nz

ಚಿತ್ರ: ಎಸ್ಸೆಮ್ಮೆಸ್ ಅಪಘಾತ ವೀರ ಮೋರ್ಗನ್ ಸಾಕ್ಸ್ಟನ್

ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?


ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀರಿನಾಳದಲ್ಲಿ ನಡೆಸಿದರೆ?


ಹುಚ್ಚುತನವೆಂದು ಅನ್ನಿಸುವ ಈ ಕಾರ್ಯಕ್ಕೂ ಒಂದು ಗಿನ್ನೆಸ್ ದಾಖಲೆಯಿದೆ. ಕಳೆದ ವರ್ಷ ಹತ್ತು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯಾದ ಎಪ್ಪತ್ತೆರೆಡು ಮುಳುಗುಗಾರರ ತಂಡ ಲಿನೆನ್ ಬಟ್ಟೆಯೊಂದನ್ನು ಇಸ್ತ್ರಿ ಮಾಡಿತ್ತು.

ಆದರೆ ಈ ವರ್ಷ ಬ್ರಿಟನ್ನಿನ ಎಂಭತ್ತಾರು ಮುಳುಗುಗಾರರ ತಂಡ ಆ ದಾಖಲೆಯನ್ನು ಮುರಿದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ತ್ಯಜಿಸಲಾಗಿರುವ ಗಣಿಯೊಂದರಲ್ಲಿ 173 ಅಡಿ ಆಳದದಲ್ಲಿ ಹತ್ತು ನಿಮಿಷದಲ್ಲಿ ಎಂಭತ್ತಾರು ಮುಳುಗುಗಾರರು ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿದ್ದಾರೆ.

ಬ್ರಿಟನ್ನಿನ ಸೌಥ್ ವೇಲ್ಸ್ ಎಂಬಲ್ಲಿ ನಡೆದ ಈ ಸಾಧನೆ ನಿಜಕ್ಕೂ ಲೈಫ್ ಬೋಟ್ ರಕ್ಷಣಾಗಾರರಿಗೆ ನೆರವು ನೀಡುವಲ್ಲಿ ಧನಸಂಗ್ರಹದ ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತೇ ವಿನಃ ದಾಖಲೆಗಾಗಿ ಅಲ್ಲ ಎಂದು ತಂಡದ ನಾಯಕ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಗಾರೆಥ್ ಲಾಕ್ ಅವರು ತಿಳಿಸಿದ್ದಾರೆ.

ಈ ಪ್ರಯತ್ನವನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಆಗಮಿಸಿದ್ದುದು ವಿಶೇಷವಾಗಿದೆ. ಹೊಸ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಇನ್ನು ಒಂದೆರೆಡು ವಾರದಲ್ಲಿ ಪ್ರಕಟಿಸಬಹುದು.

ಇಸ್ತ್ರಿ ಮಾಡಿದ ಬಟ್ಟೆ ಒದ್ದೆಯಾಗಿಯೇ ಇದ್ದರೆ ತೊಡುವುದು ಹೇಗೆ? ಈ ಮಾಹಿತಿಯನ್ನು ಅವರು ನೀಡಿಲ್ಲ.

ಕೃಪೆ: www.thesun.co.uk

ಶನಿವಾರ, ಜನವರಿ 17, 2009

ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ


ವೆಲ್ಷ್ ಪೂಲ್, ಇಂಗ್ಲೆಂಡ್: ಇಂಗ್ಲೆಂಡಿನ ವೇಲ್ಸ್ ಪ್ರಾಂತ್ರ್ಯಕ್ಕೆ ಸೇರಿದ ವೆಲ್ಷ್ ಪೂಲ್ ಎಂಬ ಪುಟ್ಟ ಪಟ್ಟಣದ ನಾಗರಿಕರಿಗೆ ಜನವರಿ ಹದಿನೈದನೆಯ ರಾತ್ರಿ ಶುಭರಾತ್ರಿಯಾಗಿ ಪರಿಣಮಿಸಿತ್ತು.  

ಶುಭರಾತ್ರಿಯೆಂದರೆ ಯಾವುದೋ ಹಬ್ಬ ಹರಿದಿನವೆಂದಲ್ಲ. ನಗರದ ಪ್ರಸಿದ್ಧ ಸೇಯ್ನ್ಸ್ ಬರಿ ಸುಪರ್ ಮಾರ್ಕೆಟ್ಟಿನ ಎ.ಟಿ.ಎಂ ಒಂದರಲ್ಲಿ ಏನೋ ಒಂದು ಪ್ರಮಾದವಾಗಿದೆ, ಅದರಲ್ಲಿ ಕಾರ್ಡು ಹಾಕಿ ನೂರು ಪೌಂಡ್ ಕೇಳಿದರೆ ಇನ್ನೂರು ಪೌಂಡ್ ನೀಡುತ್ತದೆ ಎಂದು ಸುದ್ದಿ ಹಬ್ಬಿದ್ದೇ ತಡ, ಜನ ತಾವುಟ್ಟುಕೊಂಡಿದ್ದ ಪೈಜಾಮಾ, ನೈಟ್ ಸೂಟುಗಳಲ್ಲಿಯೇ ತಮ್ಮ ತಮ್ಮ ಕ್ರೆಡಿಟ್ ಕಾರ್ಡು, ಡಿಬಿಟ್ ಕಾರ್ಡುಗಳೊಂದಿಗೆ ದೌಡಾಯಿಸಿದರು. ಹೇಗೂ ರಾತ್ರಿ ಹೊತ್ತು, ಏ.ಟಿ.ಎಮ್. ತಪ್ಪನ್ನು ಸರಿಪಡಿಸಲು ಬ್ಯಾಂಕಿನವರ ಬರುವುದು ನಾಳೆ ಬೆಳಿಗ್ಗೆ, ಅಷ್ಟರೊಳಗೆ ಸಾಧ್ಯವಾದಷ್ಟು ಹಣವನ್ನು ಪಡೆಯಬಹುದೆಂದು ಬಂದವರು ತಮ್ಮ ಬಂಧು ಬಾಂಧವ ಬಳಗ ಸ್ನೇಹಿತರಿಗೆ ಮೊಬೈಲ್ ಫೋನುಗಳಲ್ಲಿ ಸಂದೇಶ ರವಾನಿಸಿದರು. ಎ.ಟಿ.ಎಮ್. ಒಡಲಲ್ಲಿರುವ ಹಣ ಖಾಲಿಯಾಗುವ ಮುನ್ನವೇ ಬನ್ನಿರೆಂದು ಧಾವಂತಗೊಳಿಸಿದ್ದರಿಂದ ಅರ್ಧಘಂಟೆಯೊಳಕ್ಕೆ ನಗರದ ಮಧ್ಯಭಾಗದಲ್ಲಿ ರಾತ್ರಿಯುಡುಗೆ ತೊಟ್ಟ ನೂರಾರು ಮಂದಿಯ ಕ್ಯೂ ಜಮಾಯಿಸಿತ್ತು. 

ಇತ್ತ ಎ.ಟಿ.ಎಂ. ತನ್ನ ಪಾಡಿಗೆ ದ್ವಿಗುಣ ಹಣವನ್ನು ನೀಡುತ್ತಾ ಆರಾಮವಾಗಿತ್ತು. ಜನರು ತಮ್ಮ ಕಾರ್ಡುಗಳಿಗಿರುವ ಮಿತಿಯಷ್ಟೂ ಹಣವನ್ನು ಬಾಚಿದ್ದೂ ಬಾಚಿದ್ದೇ, ತಮ್ಮ ಬಾಂಧವರಿಗೆ ಫೋನ್ ಮಾಡಿದ್ದೂ ಮಾಡಿದ್ದೇ. ಅಂತೂ ಎ.ಟಿ.ಎಮ್. ಒಡಲು ಬರಿದಾಗುವವರೆಗೆ ಜನರು ಮನಸ್ಸೋ ಇಚ್ಛೆ ಲೂಟಿ ಮಾಡಿ ಸಂತೋಷದಿಂದ ಮನೆಗೆ ನಡೆದಿದ್ದಾರೆ. ಆ ಸುದ್ದಿ ಬ್ಯಾಂಕಿನವರಿಗೂ ಸಿಕ್ಕಿ ನಿರ್ವಹಣಾ ಘಟಕ ಎ.ಟಿ.ಎಮ್. ಬಳಿಗೆ ಬರುವಷ್ಟರಲ್ಲಿ ಏ.ಟಿ.ಎಮ್. ಖಾಲಿ. 

ನಿಜಕ್ಕೂ ಎ.ಟಿ.ಎಮ್. ಪ್ರೋಗ್ರಾಮಿಂಗ್ ನಲ್ಲಿ ಯಾವುದೋ ದೋಷ ನುಸುಳಿ ಕೇಳಿದ ಹಣದ ದ್ವಿಗುಣ ನೀಡುತ್ತಿತ್ತು. ಆದರೆ ಲೆಕ್ಕಾಚಾರ ಮಾತ್ರ ರಾಮನ ಲೆಕ್ಕ ತೋರಿಸುತ್ತಿತ್ತು. ಅಂತೂ ಮರುದಿನ ಬೆಳಿಗ್ಗೆ ಎ.ಟಿ.ಎಮ್. ಔಟ್ ಆಫ್ ಆರ್ಡರ್ ಎಂಬ ಪ್ರಿಂಟೌಟ್ ಪುಟವನ್ನು ತನ್ನ ಪರದೆಯ ಮೇಲೆ ಅಂಟಿಸಿಕೊಂಡು ನಿಂತಿತ್ತು. ಕಳೆದ ರಾತ್ರಿ ದ್ವಿಗುಣ ಹಣ ಪಡೆದವರ ದಾಖಲೆ ಬ್ಯಾಂಕಿನವರ ಹತ್ತಿರ ಇರಬೇಕಲ್ಲವೇ, ಆ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಗ್ರಾಹಕರು ಪಡೆದ ಹಣದ ಕ್ರೆಡಿಟ್ ನೋಟ್ ನೀಡಬಹುದಲ್ಲವೇ? ಈಗ ಬ್ಯಾಂಕ್ ಏನು ಮಾಡುತ್ತದೆ ಎಂದು ಕಾದು ನೋಡಬೇಕು.  
ಕೃಪೆ: www.countytimes.co.uk

ಶುಕ್ರವಾರ, ಜನವರಿ 16, 2009

ಮೈಲೇಜ್ ಹೆಚ್ಚಿಸಲು ಮತ್ತೊಮ್ಮೆ ನಿಸರ್ಗದ ಮೊರೆ - ನೆರವಿಗೆ ಬಂದ ಶಾರ್ಕ್



ಶಾರ್ಕ್ ಮೀನಿಗೂ ಮೈಲೇಜ್ ಹೆಚ್ಚಳಕ್ಕೂ ಯಾವ ಸಂಬಂಧ? 
ಇಮಾಂಸಾಬಿಗೂ ಗೋಕುಲಾಷ್ಟಮಿಗೆ 
ಇರುವಷ್ಟೇ ಸಂಬಂಧ ಎಂದು ಲೇವಡಿ ಮಾಡುವವರಿಗೆ ಒಂದು ಕುತೂಹಲಕಾರಿ ವಿಷಯ. ವಾಹನದ 
ಮೈಲೇಜ್ ಹೆಚ್ಚಿಸಲು ಶಾರ್ಕ್ ನಿಜಕ್ಕೂ ಪ್ರೇರಣೆ ನೀಡಿದೆ. ಕೆನಡಾದ ಸ್ಕಿನ್ಝ್ 
ರಾಪ್ಸ್ ಎನ್ನು ಸಂಸ್ಥೆ ವಾಹನದ ಮೇಲ್ಮೈಯನ್ನು ಶಾರ್ಕ್ ಮೀನಿಗಿರುವ ಮಾದರಿಯಲ್ಲಿ ನಿರ್ಮಿಸಿ ಮೈಲೇಜ್ ಹೆಚ್ಚಳವನ್ನು ಸಾಧಿಸಿ ತೋರಿಸಿದೆ.
 
ಶಾರ್ಕ್ ಮೀನು ಒಂದು ಅತಿವೇಗದಲ್ಲಿ ಸಾಗುವ ಜಲಚರ. ಆಹಾರದ ಬೇಟೆಯಾಡಲು ಅದಕ್ಕೆ ವೇಗ 
ಅತಿಮುಖ್ಯವಾಗಿದೆ. ನಿಜಕ್ಕೂ ಶಾರ್ಕ್ ಈಜುವುದಿಲ್ಲ, ವಿಮಾನ ಗಾಳಿಯಲ್ಲಿ 
ತೇಲುವಂತೆ ನೀರಿನಲ್ಲಿ ತೇಲುತ್ತದೆ. ವಿಮಾನಕ್ಕಿರುವ ರೆಕ್ಕೆಗಳಂತೆಯೇ 
ಇದಕ್ಕೂ ಎರೆಡು ರೆಕ್ಕೆಗಳಿದ್ದು ಬಾಲವನ್ನು ಅತ್ತಿತ್ತ ಆಡಿಸುವ ಮೂಲಕ 
ಚಾಲನೆ ಪಡೆಯುತ್ತದೆ. ಆದರೆ ನೀರೊಳಗಣ ಘರ್ಷಣೆ ಅದರ ವೇಗವನ್ನು 
ತಗ್ಗಿಸಬೇಕಲ್ಲವೇ, ಆದರೆ ಆಳದಲ್ಲಿಯೂ ಅದು ಸುಲಲಿತವಾಗಿ ವೇಗವಾಗಿ ಈಜುವುದು ಅದರ ಚರ್ಮದ ವಿಶೇಷ ರಚನೆ ಕಾರಣವಾಗಿದೆ. ಹತ್ತಿರದಿಂದ ಗಮನಿಸಿದರೆ ಅದರ ಚರ್ಮ ಚಿಕ್ಕ 
ಗೋಲಿಯೊಂದನ್ನು ಒಂದರ ಪಕ್ಕದಲ್ಲೊಂದು ಬರುವಂತೆ ಒತ್ತಿರುವ ಮಾದರಿಯಲ್ಲಿದೆ. ಗಾಲ್ಫ್ ಚೆಂಡಿನ ಮೇಲ್ಮೈ ಸಹಾ ಇದೇ ರೀತಿಯಲ್ಲಿದೆ. ಈ 
ರಚನೆ ಹೊಂದಿದ ವಸ್ತು (ಅಥವಾ ಜೀವಿ) ನಯವಾದ ಮೇಲ್ಮೈ ಹೊಂದಿರುವ ವಸ್ತುವಿಗಿಂತ (ಅಥವಾ ಜೀವಿಗಿಂತ) ಕಡಿಮೆ ಘರ್ಷಣೆ ಪಡೆಯುತ್ತದೆ. ಪರಿಣಾಮವಾಗಿ ಹೆಚ್ಚಿನ ದೂರಕ್ಕೆ ಸಾಗಲು ಸಾಧ್ಯವಾಗುತ್ತದೆ. ಕೆನಡಾದ ಸಂಸ್ಥೆ ಈ ನಿಟ್ಟಿನಲ್ಲಿ ವಾಹನವೊಂದರ ಮೇಲ್ಮೈಯನ್ನು ಶಾರ್ಕ್ ಮೀನಿನ ಚರ್ಮದ ಮಾದರಿಯಲ್ಲಿ ಚಿಕ್ಕ ಚಿಕ್ಕ ಗುಣಿಗಳಿರುವಂತೆ ರಚಿಸಿ ಪರೀಕ್ಷಾರ್ಥ ಓಡಾಟ ನಡೆಸಿದಾಗ ಅದರ ಮೈಲೇಜಿನಲ್ಲಿ ೧೮ ರಿಂದ ೨೦ ಶೇಖಡಾದಷ್ಟು ಗಮನಾರ್ಹ ಬದಲಾವಣೆ ಕಂಡುಬಂದಿದೆ. ನಿಜವಾಗಿ ನೋಡಿದರೆ ನಯವಾದ ಮೇಲ್ಮೈ ಕಡಿಮೆ ಪ್ರತಿರೋಧ ಹಾಗೂ ಗುಣಿಗಳುಳ್ಳ ಮೇಲ್ಮೈ ಹೆಚ್ಚಿನ ಪ್ರತಿರೋಧ ಒಡ್ಡಬೇಕು. ಆದರೆ ವಾಹನ ಹೆಚ್ಚಿನ ವೇಗದಲ್ಲಿದ್ದಾಗ ಗಾಳಿಯ ಕಣಗಳು ಏಕಪ್ರಕಾರವಾಗಿ ಒತ್ತಡವನ್ನು ಹೇರುತ್ತವೆ. ವಾಹನ ಮುಂದೆ ಸರಿದಾಗ ಹಿಂಬದಿಯಲ್ಲಿ ಸುರುಳಿಯಾಕಾರದಲ್ಲಿ ಸುತ್ತುವ ಗಾಳಿ ಕೊಂಚ ಒತ್ತಡದಲ್ಲಿ ವ್ಯಾತ್ಯಾಸವನ್ನು ತೋರಿ ವಾಹನವನ್ನು ಹಿಂದಕ್ಕೆಳೆಯುತ್ತದೆ. ಪರಿಣಾಮವಾಗಿ ವಾಹನ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅದೇ ಗುಣಿಗಳಿರುವ ಮೇಲ್ಮೈಯಲ್ಲಿ ಗಾಳಿ ಪ್ರತಿ ಗುಣಿಯಲ್ಲಿ ಹಾದು ಬರಬೇಕಾದುದರಿಂದ ಒತ್ತಡ ಅಸಮಾನವಾಗಿ ಹರಡಿ ವಾಹನದ ಮೇಲೆ ಬೀಳುವ ಒಟ್ಟಾರೆ ಒತ್ತಡ ಕಡಿಮೆಯಾಗುತ್ತದೆ. ಇದೇ ರೀತಿಯ ಮೇಲ್ಮೈ ಹೊಂದಿರುವ ಗಾಲ್ಫ್ ಚೆಂಡು ಸಹಾ ಗಾಳಿಯಲ್ಲಿ ಅತಿದೂರಕ್ಕೆ ಸಾಗುತ್ತದೆ. ಗುಣಿಗಳಿರುವ ಮೇಲ್ಮೈಯೊಂದಿಗೆ ಆಕರ್ಷಕ ವಿನ್ಯಾಸವನ್ನು ನೀಡುವ ಮೂಲಕ ವಾಹನಕ್ಕೆ ಹೆಚ್ಚಿನ ಸೌಂದರ್ಯವನ್ನೂ ನೀಡಬಹುದಾಗಿದೆ. ಅಮೇರಿಕಾದ ಸ್ಕಿನ್ ರಾಪ್ಸ್ ಸಂಸ್ಥೆ ಇದೇ ಕೆಲಸವನ್ನು ಮಾಡುತ್ತಿದೆ. ಸುಲಭ, ಸರಳವಾಗಿ ಕಂಡುಬರುವ ಈ ವಿಧಾನವನ್ನು ಅನುಸರಿಸಿ ಭಾರತದಲ್ಲಿಯೂ ಮೈಲೇಜು ಹೆಚ್ಚು ಪಡೆಯಬಹುದಲ್ಲವೇ?

ಗುರುವಾರ, ಜನವರಿ 15, 2009

ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು


ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು. ಈ ಭ್ರಮೆಯನ್ನು ಹೆಚ್ಚಿನವರು ಭೂತಕ್ಕೆ ಕಲ್ಪಿಸಿಕೊಂಡು ಭಯಭೀತರಾಗುತ್ತಾರೆಂದು ಒಂದು ಸಂಶೋಧನೆ ತಿಳಿಸಿದೆ.


ನಮ್ಮ ಶರೀರ ತಾಳಿಕೊಳ್ಳಬಹುದಾದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ರಕ್ತದಲ್ಲಿ ಸೇರಿದಾಗ ಈ ಪರಿಣಾಮಗಳಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ. ಹಾಗಾದರೆ ಯಾರಾದರೂ ಭೂತ ನೋಡಿದ್ದಾರೆಂದು ತಿಳಿಸಿದರೆ ಮೊದಲು ಎಷ್ಟು ಕಪ್ ಕಾಫಿ ಕುಡಿದಿದ್ದೀಯಾ ಎಂದು ಮೊದಲು ವಿಚಾರಿಸುವುದು ಒಳಿತು.

ಕೃಪೆ: http://www.thesun.co.uk

ಭಾನುವಾರ, ಜನವರಿ 11, 2009


ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಸಿಗಡಿಗೆ ಜೀವದಾನ: 

ಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು? ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ. ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲಾಬ್ಸ್ಟರ್ ಏಡಿ ಈಗ ಸುದ್ದಿಯಲ್ಲಿದೆ.  

ಎರೆಡು ವಾರಗಳ ಹಿಂದೆ ಹಿಡಿಯಲಾಗಿದ್ದ ಈ ಕಡಲ ಏಡಿಗೆ ನೂರು ಡಾಲರ್ ಬೆಲೆ ಕೊಟ್ಟು ಖರೀದಿಸಲಾಗಿದ್ದ ಈ ಕಡಲ ಏಡಿಯನ್ನು ಆಗಲೇ ಫ್ರೈ ಮಾಡಿ ಮಾರಿದ್ದರೆ ನೂರು ಡಾಲರ್ ಲಾಭ ಮಾಡಬಹುದಿತ್ತೇನೋ. ಆದರೆ ಜಾರ್ಜ್ ಎಂದು ನಾಮಕರಣ ಮಾಡಿ ಹೋಟೆಲ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹಲವು ಭಾವಚಿತ್ರಗಳನ್ನು ತೆಗೆದು ಪ್ರಕಟಿಸಿದ್ದೇ ತಡ ಪೀಟಾ ( PETA (People for the Ethical Treatment of Animals) ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. 

ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಕಡಲ ಏಡಿಯನ್ನು ಹಿಡಿಯುವುದು ಅಪರಾಧವೆಂದೂ ಆ ಏಡಿ ಹಿಡಿದ ಜಾಗವಾದ ಕೆನ್ನೆಬಂಕ್‍ಪೋರ್ಟ್ ನಲ್ಲಿ ಲಾಬ್ಸ್ಟರ್ ಹಿಡಿಯುವುದು ಕಾನೂನಿಗೆ ವಿರುದ್ಧವೆಂದೂ, ಅದನ್ನು ವಾಪಾಸು ಸಮುದ್ರಕ್ಕೆ ಬಿಡಬೇಕೆಂದೂ ಗಲಾಟೆ ಎಬ್ಬಿಸಿದರು. ಈ ಗಲಾಟೆಯ ಬಳಿಕ ನ್ಯೂಯಾರ್ಕ್ ನ್ಯಾಯಾಲಯ ಈ ಪ್ರಕರಣವನ್ನು ಕೈಗಿತ್ತಿಕೊಂಡು ಏಡಿಯನ್ನು ಅದರ ಮೂಲಸ್ಥಾನಕ್ಕೆ ಮರಳಿಸಬೇಕೆಂದು ತೀರ್ಪಿತ್ತ ಬಳಿಕ ಈಗ ಏಡಿಯನ್ನು ಮೈನೇ ಎಂಬ ಕಡಲತೀರದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.  

ಏಡಿ ಒಟ್ಟು ಹತ್ತು ದಿನಗಳ ಕಾಲ ಟ್ಯಾಂಕ್ ಒಂದರಲ್ಲಿ ಕಾಲ ಕಳೆದಿತ್ತು. ಈ ಕಡಲ ಏಡಿಗಳಲ್ಲಿ ಒಂದು ವಿಷೇಶವಿದೆ. ಬೇರೆ ಜೀವಿಗಳ ಬೆಳವಣಿಗೆ ಒಂದು ಹಂತ ತಲುಪಿದ ಬಳಿಕ ಗರಿಷ್ಟ ಮಟ್ಟ ತಲುಪಿದರೆ ಏಡಿಗಳ (ಕ್ರಸ್ಟೇಶಿಯನ್ಸ್) ಬೆಳವಣಿಗೆಗೆ ಕೊನೆಯೇ ಇಲ್ಲ. ವಯಸ್ಸಾದಂತೆ ಅವುಗಳ ತೂಕ ಮತ್ತು ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಆ ಏಡಿಯ ತೂಕದಿಂದ ಅದರ ಆಯಸ್ಸನ್ನು ಸ್ಥೂಲವಾಗಿ ಹೇಳಬಹುದಾಗಿದೆ. ಆ ಪ್ರಕಾರ ಜಾರ್ಜ್ ಏಡಿಯ ವಯಸ್ಸು ನೂರಾನಲವತ್ತು ವರ್ಷ!  
ಪೀಟಾ ಕಾರ್ಯಕರ್ತರ ಪ್ರಯತ್ನದಿಂದ ಜಾರ್ಜ್ ತನ್ನ ಸಮುದ್ರತಳದ ಸ್ವಸ್ಥಾನ ತಲುಪಿದೆ. ಈಗಾಗಲೇ ಶತಾಯುಶಿಯಾಗಿರುವ ಇದು ದ್ವಿಶತಕ ಬಾಳಲಿ ಎಂಬುದೇ ನಮ್ಮ ಹಾರೈಕೆ.

ಕೃಪೆ: ಬಿಬಿಸಿ.

ಶುಕ್ರವಾರ, ಜನವರಿ 9, 2009

ವಿಶ್ವದ ಅತಿದೊಡ್ಡ ಈಜುಕೊಳ

-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.





 
ಒಂದು ಈಜುಕೊಳ ಎಷ್ಟು ದೊಡ್ಡದಿರಬಹುದು? ಸಾಧಾರಣವಾಗಿ ಐವತ್ತು ಮೀಟರ್ ಉದ್ದ ಇಪ್ಪತ್ತೈದು ಮೀಟರ್ ಅಗಲ. ಬೆಂಗಳೂರಿನಲ್ಲಿರುವ ಹೆಚ್ಚಿನ ಸಾರ್ವಜನಿಕ ಈಜುಕೊಳಗಳು ಈ ಉದ್ದಗಳತೆಯವು. ಈಜು ಸ್ಪರ್ಧೆಗಳನ್ನು ನಡೆಸುವ ಕೊಳಗಲು ಇನ್ನಷ್ಟು ದೊಡ್ಡದಾಗಿರುತ್ತವೆ. ಆದರೆ ದಕ್ಷಿಣ ಅಮೇರಿಕಾದ ಚಿಲಿ ದೇಶದಲ್ಲಿರುವ ಸ್ಯಾನ್ ಅಲ್ಫೋನ್ಸೋ ಡೆಲ್ ಮಾರ್ ಎಂಬ ಅಮೇರಿಕನ್ ರೆಸಾರ್ಟ್ ಒಂದರಲ್ಲಿರುವ ಈಜುಕೊಳದ ವ್ಯಾಪ್ತಿ ಜಗತ್ತಿನ ಯಾವುದೇ ಕೃತಕ ಈಜುಕೊಳಕ್ಕೆ ಸ
ಮನಲ್ಲ.
ಚಿಲಿ ದೇಶದ ಭೂಪಟದಂತೆಯೇ ಒಂದು ಮೆಣಸಿನ ಆಕೃತಿಯಲ್ಲಿರುವ ಈಜುಕೊಳ ಎಂಟು ಹೆಕ್ಟೇರುಗಳಷ್ಟು ವಿಸ್ತಾರ ಹೊಂದಿದ್ದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಈಜುಕೊಳವೆನಿಸಿದೆ. ಈ ವಿಸ್ತಾರದಲ್ಲಿ ಸಾಮಾನ್ಯ ಅಳತೆಯ ಆರು ಸಾವಿರ 
ಗೃಹಬಳಕೆಯ ಈಜುಕೊಳಗಳನ್ನು ಅಳವಡಿಸಬಹುದಾಗಿದೆ. 
ಒಟ್ಟು 1.3 ಕಿ.ಮೀ ಉದ್ದ ಹಾಗೂ ಎಂಟು ನೂರು ಮೀಟರ್ ಅಗಲ ಹೊಂದಿರುವ ಈಜುಕೊಳದ ಕನಿಷ್ಟ ಆಳ ಆರು ಇಂಚಿದ್ದರೆ ಗರಿಷ್ಟ ಆಳ ಎಂಟು ಮೀಟರುಗಳಷ್ಟಿದ್ದು ಹೊಂದಿರುವ ನೀರಿನ ಪ್ರಮಾಣ ಇನ್ನೂರೈವತ್ತು ಸಾವಿರ ಘನ ಮೀಟರ್! ಅತ್ಯಂತ ಸ್ಪಷ್ಟ ಸ್ಫಟಿಕದಂತಿರುವ ನೀರು, ದ್ವೀಪಗಳು, ಕಾರಂಜಿಗಳು ಮೊದಲಾದವು ಈ ಈಜುಕೊಳವನ್ನು ವಿಶಿಷ್ಟವಾಗಿಸಿದೆ. ಚಿಲಿಯ ಖ್ಯಾತ ಉದ್ಯಮಿ 
ಹಾಗೂ ಕ್ರಿಸ್ಟಲ್ ಲಗೂನ್ಸ್ ಸಂಸ್ಥೆಯ ಸ್ಥಾಪಕರಾದ ಫೆರ್ನಾಂಡೋ ಫಿಶ್ಮಾನ್ ಅವರ ಕಲ್ಪನೆಯ ಕೂಸಾದ ಈ ಈಜುಕೊಳ ಈಗ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಈಜುಕೊಳವೆಂದು ಗಿನ್ನೆಸ್ ದಾಖಲೆ ಪಡೆದು ಗಮನ ಸೆಳೆದಿದೆ.  
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಈಜುಕೊಳದ ಪರಿಧಿಯಲ್ಲಿ ಒಟ್ಟು ನಲವತ್ತೊಂದು ಜೀವರಕ್ಷಕಾ ಸಿಬ್ಬಂದಿ ಕಟ್ಟೆಚ್ಚರದಲ್ಲಿ ಕಾಯುತ್ತಿರುತ್ತಾರೆ. ಏನಾದರೂ ಅವಘಡ ಸಂಭವಿಸಿದ ಪಕ್ಷ ಈಜುಕೊಳದ ತಳದಲ್ಲಿರುವ ಸುರಕ್ಷಾ ಉಪಕರಣ ಮೇಲೆದ್ದು ಅಮೂಲ್ಯ ಜೀವಗಳನ್ನುಳಿಸುವಲ್ಲಿ ನೆರವಾಗುತ್ತದೆ. ಈ ಈಜುಕೊಳವನ್ನು ನಿರ್ಮಿಸುವಲ್ಲಿ ಜಪಾನ್ ಹಾಗೂ 
ಕೊರಿಯಾದ ತಂತ್ರಜ್ಞಾನವನ್ನು ಬಳಸಲಾಗಿದ್ದು ಒಟ್ಟು ಹದಿನೈದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ.

ಭಾನುವಾರ, ಜನವರಿ 4, 2009

ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ

ಉತ್ತಮ ದೇಹದಾರ್ಢ್ಯತೆ ಹೊಂದಿರುವ ಪುರುಷರು ಈ ಲೋಕದಲ್ಲಿ 
ಬೇಕಾದಷ್ಟಿದ್ದಾರೆ.  ಆದರೆ ಮಹಿಳೆಯರಲ್ಲಿ ಇದು ಕಡಿಮೆ. 
ಅದರಲ್ಲೂ ಕೋಮಲಾಂಗವೇ ಸ್ತ್ರೀಲಕ್ಷಣವಾಗಿರುವಾಗ ಬಲಿಷ್ಠ ತನುವನ್ನು ಹೊಂದುವುದು ಹೆಚ್ಚಿನವರ ಅಪೇಕ್ಷೆಗೆ ದೂರ.  

ಇದಕ್ಕೆ ಅಪವಾದವೆನ್ನುವಂತೆ ಕೆಲವು ಮಹಿಳೆಯರು ಕಸರತ್ತು ಮಾಡಿ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿ 
ತಾವೂ ಪುರುಷರಿಗೆ ಕಡಿಮೆಯಿಲ್ಲ ಎಂದು ತೋರುವುದು ಹಲವೆಡೆ ಕಂಡುಬರುತ್ತಿದೆ. ನಿಧಾನವಾಗಿ ಸ್ತ್ರೀ ಬಲಪ್ರಧಾನ ಹಾಗೂ ಪುರುಷಪ್ರಧಾನ ಕ್ಷೇತ್ರಗಳಲ್ಲೂ ಲಗ್ಗೆಯಿಡುತ್ತಿದ್ದಾಳೆ.
ಆದರೆ ಸಾಮಾನ್ಯ ಮೈಕಟ್ಟನ್ನು ಹೊಂದಿ ತನ್ನ ತೂಕದ ಸುಮಾರು ಒಂಭತ್ತುಪಟ್ಟು ತೂಕವನ್ನು ಹೊರಬಲ್ಲ ಬಾಲಕಿಯೊಬ್ಬಳು ಈಗ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.  ಉಕ್ರೇನ್ ದೇಶದ ಕ್ರಿವೋಯ್ ರೋಗ್ ಎಂಬ ಗಣಿಗಾರಿಕೆ ಮುಖ್ಯವಾಗಿರುವ ಪುಟ್ಟ ಪಟ್ಟಣದಲ್ಲಿ ವಾಸಿಸುವ ಯೂರಿ ಅಕುಲೋವ್ ಹಾಗೂ ಲಾರಿಸಾ ಅಕುಲೋವ್ ದಂಪತಿಗಳಿಗೆ ೧೯೯೨ರಲ್ಲಿ ಹುಟ್ಟಿದ ವಾರ್ಯಾ ಅಕುಲೋವ್ ಎಂಬ ಹದಿಹರೆಯದ ಹುಡುಗಿ ತನ್ನ ತೂಕದ (ನಲವತ್ತು ಕೇಜಿ) ಸುಮಾರು ಒಂಭತ್ತು ಪಟ್ಟು ಹೆಚ್ಚು ತೂಕ (ಮುನ್ನೂರೈವತ್ತು ಕೇಜಿ) ಎತ್ತಬಲ್ಲ ಕ್ಷಮತೆ ತೋರಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.  ಪ್ರಸ್ತುತ ಅತ್ಯಂತ ಹೆಚ್ಚಿನ ಭಾರ ಎತ್ತುವ ಮಹಿಳೆಯಾಗಿ ಗಿನ್ನೆಸ್ ದಾಖಲೆ ಸ್ಥಾಪಿಸಿ ವಿಶ್ವವಿಖ್ಯಾತಳಾಗಿದ್ದಾಳೆ.

ಆದರೆ ಈ ಬಾಲಕಿಯ ವಿಸ್ಮಯಶಕ್ತಿಯ ಪರಿಚಯವಾಗಿದ್ದೂ ಒಂದು ಆಕಸ್ಮಿಕ.  ಆಕೆಯು ಚಿಕ್ಕವಳಿದ್ದಾಗ ಕಡುಬಡತನದಲ್ಲಿ ಬಳಲುತ್ತಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಸರ್ಕಸ್ ಒಂದರಲ್ಲಿ ಪ್ರದರ್ಶನ ನೀಡುವುದು ಅನಿವಾರ್ಯವಾಯಿತು.  ತಂದೆ ತಾಯಿ ಮಗಳ ತಂಡ ಅಕ್ರೋಬ್ಯಾಟಿಕ್ ಪ್ರದರ್ಶನ ನೀಡಿ ಜೀವನ ನಿರ್ವಹಿಸುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ ಅವರಿಗೆ ಸಂದಾಯವಾಗುತ್ತಿದ್ದ ವೇತನ ಕೇವಲ ಹತ್ತು ಡಾಲರ್.  ಗಣಿಕಾರ್ಮಿಕರ ಶಿಬಿರದಲ್ಲಿದ್ದ ಒಂದು ಎಂಟು ಮೀಟರ್ ಅಗಲದ ಕೋಣೆಯೇ ಅವರ ವಾಸಗೃಹ.  ಆದರೆ ತನ್ನ ಮಗಳು ಅತ್ಯುತ್ತಮ ಅಥ್ಲೀಟ್ ಆಗಬೇಕೆಂದು ಅಪೇಕ್ಷಿಸಿದ ಆಕೆಯ ತಂದೆ ಹಾಗೂ ತರಬೇತುದಾರ ಯೂರಿಯವರು ಪಕ್ಕದ ಒಂದು ಕೋಣೆಯಲ್ಲಿ ನಿಯಮಿತವಾಗಿ ತರಬೇತಿ ನೀಡಲು ಪ್ರಾರಂಭಿಸಿದರು.  ಕೊಂಚ ಕಾಲದ ಬಳಿಕ ತೂಕಗಳನ್ನು ಎತ್ತಿ ವ್ಯಾಯಾಮ ಮಾಡಲು ಪ್ರಾರಂಭಿಸಿದರು.  ನಿಧಾನಕ್ಕೆ ಹೆಚ್ಚು ಹೆಚ್ಚು ತೂಕಗಳನ್ನು ಎತ್ತುತ್ತಾ ಹೋದ ವಾರ್ಯಾ ಅದ್ಯಾವುದೋ ಶಕ್ತಿ ಆವರಿಸಿಕೊಂಡಂತೆ ದೊಡ್ಡ ಪಹಿಲ್ವಾನರಿಗೂ ಕಷ್ಟಕರವಾದ ತೂಕಗಳನ್ನು ಲೀಲಾಜಾಲವಾಗಿ ಎತ್ತಲು ಪ್ರಾರಂಭಿಸಿದಳು. ನಿಧಾನಕ್ಕೆ ಏರಿಸಿಕೊಳ್ಳುತ್ತಾ ಹೋದ ತೂಕ ಈಗ ಮುನ್ನೂರೈವತ್ತು ಕೇಜಿಗಳಿಗೆ ತಲುಪಿದೆ.
ಈಕೆಯ ಕ್ಷಮತೆಯನ್ನು ಎರೆಡು ಬಾರಿ ಪರಾಮರ್ಶಿಸಿದ ಗಿನ್ನಿಸ್ ದಾಖಲೆ ತಂಡ ಈಕೆಯೇ ವಿಶ್ವದ ಅತ್ಯಂತ ಬಲಿಷ್ಠ ಬಾಲಕಿಯೆಂದು ದಾಖಲೆ ಧೃಢೀಕರಣ ಪತ್ರ ನೀಡಿದೆ.  ಆದರೆ ಈಕೆ ನಿಜವಾಗಿಯೂ ಹೊರಬಲ್ಲ ಕ್ಷಮತೆಯ ಇದು ಕೇವಲ ಮುಕ್ಕಾಲು ಪಾಲು ಮಾತ್ರ, ನಿಜವಾಗಿ ಆಕೆ ಇನ್ನೂ ಹೆಚ್ಚು ಭಾರ ಹೊರಬಲ್ಲವಳಾಗಿದ್ದಾಳೆ, ಆದರೆ ಆಕೆಯ ಆರೋಗ್ಯದ ದೃಷ್ಟಿಯಿಂದ ರಿಸ್ಕ್ ತೆಗೆದುಕೊಳ್ಳಲಾರೆ ಎಂದು ಆಕೆಯ ತಂದೆ ಹೆಮ್ಮೆಯಿಂದ ನುಡಿಯುತ್ತಾರೆ.

ಭಾರ ಎತ್ತುವಿಕೆಯಲ್ಲಿ ಅಪ್ರತಿಮ ಸಾಮರ್ಥ್ಯ ಹೊಂದಿರುವ ಈಕೆ ಶಾಲೆಯ ಪಾಠಗಳಲ್ಲೂ ಮುಂದೆ.  ಭವಿಷ್ಯದಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ಹಾಗೂ ಕೀರ್ತಿ ತರುವ ದಿಸೆಯಲ್ಲಿ ವಾರ್ಯಾ ಹಾಗೂ ಆಕೆಯ ಕುಟುಂಬ ಕಾರ್ಯನಿರತವಾಗಿದೆ. ಅವರಿಗೆ ಶುಭ ಹಾರೈಸೋಣವೇ

ಕೃಪೆ: http://www.varyaakulova.com/



ಶುಕ್ರವಾರ, ಜನವರಿ 2, 2009

ಬೆಲ್ಜಿಯಂ ನ ವಿಶಿಷ್ಟ ಗಗನಭೋಜನ





ಗ್ರಾಹಕರನ್ನು ಸೆಳೆಯುವಲ್ಲಿ ಜಾಹೀರಾತು ಎಷ್ಟು ಮುಖ್ಯವೋ ಅಂತೆಯೇ ನೀಡುವ ಸೇವೆಯಲ್ಲಿರುವ ವೈವಿಧ್ಯತೆಯೂ ಅಷ್ಟೇ ಮುಖ್ಯ. ಉತ್ತಮ ಆಹಾರವನ್ನು ಬಡಿಸುವಲ್ಲಿ ತೋರುವ ವೈವಿಧ್ಯತೆ ಪ್ರಮುಖ ರೆಸ್ಟುರಾಗಳ ಪ್ರಮುಖ ಆಕರ್ಶಣೆ.  ಅದೇ ಬಡಿಸುವ ಊಟ ನೆಲದಿಂದ ಐವತ್ತು ಮೀಟರ್ ಮೇಲಿದ್ದರೆ?

ಬೆಲ್ಜಿಯಂ ದೇಶದ ಬೆಂಜಿ ಫನ್ ಕಂಪನಿಯ ವ್ಯವಸ್ಥಾಪಕರ ತಲೆಗೆ ಈ ಪರಿಯ ಯೋಚನೆ ಹೊಳೆದದ್ದೇ ತಡ ಒಂದು ಕ್ರ್‍ಏನ್ ಮುಖಾಂತರ ಊಟದ ಮೇಜೊಂದನ್ನು ಗಗನಕ್ಕೇರಿಸುವ ಪ್ರಯತ್ನ ನಡೆಸಿಯೇ ಬಿಟ್ಟರು.  ಕೆಲವು ಮಾರ್ಪಾಡುಗಳ ಬಳಿಕ ಪ್ರಾರಂಭವಾದ ಬೆಂಜಿ ಫನ್ ಗಗನಭೋಜನ ಈಗ ನಗರದ ಪ್ರಮುಖ ಆಕರ್ಶಣೆಯಾಗಿದೆ.

ಒಟ್ಟು ಇಪ್ಪತ್ತೆರೆಡು ಆಸನಗಳಿರುವ ಈ ಗಗನಮೇಜು ಸಂಪೂರ್ಣ ಸುರಕ್ಷಿತವಾಗಿದೆ ಎಂದು ವ್ಯವಸ್ಥಾಪಕರು ಖಚಿತಪಡಿಸುತ್ತಾರೆ.  ಸಾಕಷ್ಟು ಸ್ಥಳಾವಕಾಶವಿರುವ ಈ ಗಗನಮೇಜಿನ ಕೋಣೆಯಲ್ಲಿ ಇಪ್ಪತ್ತೆರೆದು ಅತಿಥಿಗಳ ಹೊರತಾಗಿ ಓರ್ವ ಬಾಣಸಿಗ, ಓರ್ವ ಪರಿಚಾರಕ, ಓರ್ವ ಸಂಗೀತಗಾರರೂ ಉಪಸ್ಥಿತರಿರುತ್ತಾರೆ.  














ಈ ಸ್ಥಳದಲ್ಲಿ ತಮ್ಮ ಪ್ರತ್ಯೇಕ ಕೂಟವನ್ನು ಏರ್ಪಡಿಸಿಕೊಳ್ಳಲು ಗ್ರಾಹಕ ಬಯಸಿದರೆ ಅದಕ್ಕೂ ಅವಕಾಶವಿದೆ.  ಆದರೆ ಬೆಲೆ ಎಷ್ಟಾಗಬಹುದೆಂದು ಇದುವರೆಗೆ ತಿಳಿಸಿಲ್ಲ.  ಗಗನಭೋಜನದ ಬೆಲೆಯೂ ಗಗನದ ಮಿತಿಯಲ್ಲಿಯೇ ಇರಬಹುದು ಅಲ್ಲವೇ!