ನಿಯೋಪಾಲಿಟನ್ ಪ್ರಿಂಟಿಂಗ್ ಅಂಡ್ ಕಂಪನಿ - ಹೆಸರು ಕೇಳಿದರೆ ಏನೆನ್ನಿಸುತ್ತದೆ? ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಈ ಸಂಸ್ಥೆ ವಿಶೇಷ ಚಾಕಲೇಟುಗಳನ್ನು ತಯಾರಿಸಿ ನೀಡುವ ಕೆಲಸವನ್ನೂ ಮಾಡುತ್ತದೆ. ಕಳೆದ ವಾರ ಅಧ್ಯಕ್ಷರ ಪದವಿಗೇರಿದ ಬರಾಕ್ ಹುಸೇನ್ ಒಬಾಮಾರವರ ಪದವಿಗ್ರಹಣ ಸಂದರ್ಭದಲ್ಲಿ ಸಂಸ್ಥೆ ಅವರ ಮುಖದ ಪಡಿಯಚ್ಚಿರುವ ಚಾಕಲೇಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ಹೆಸರೇ ಚಾಕ್-ಒ-ಬಾಮಾ. ಪ್ರತಿ ಉತ್ಪನ್ನಕ್ಕೂ ಒಂದು ವಿಶೇಷ ವಾಕ್ಯ ಇರಬೇಕಲ್ಲ, ಹಾಗೇ ಇದಕ್ಕೂ ಇದೆ, "ಎಸ್-ವಿ-ಕ್ಯಾನ್" (ನಾವು ಸಾಧಿಸಬಲ್ಲೆವು) ಎಂಬ ಅಧ್ಯಕ್ಷರ ನುಡಿಯೇ ಚಾಕಲೇಟಿನ ಧ್ಯೇಯವಾಕ್ಯವೂ ಆಗಿದೆ.
ಮೂರುವರೆ ಇಂಚು ಎತ್ತರ, ಎರೆಡೂವರೆ ಇಂಚು ಅಗಲದ ಚಿಕ್ಕ ಪೆಟ್ಟಿಗೆಯಲ್ಲಿಈ ಚಾಕಲೇಟನ್ನು ಪ್ಯಾಕ್ ಮಾಡಲಾಗಿದ್ದು ಹಿಂಭಾಗದಲ್ಲಿ ಅಧ್ಯಕ್ಷರು ಪ್ರಮಾಣವಚನದ ದಿನ ನೀಡಿದ ಭಾಷಣದ ಪ್ರಮುಖ ಅಂಶಗಳನ್ನು ಮುದ್ರಿಸಲಾಗಿದೆ. ಈ ಚಾಕಲೇಟು ತಯಾರಿಗೆ ಬಳಸಲಾದ ವಸ್ತುಗಳ ವಿವರಗಳನ್ನು ಸಂಸ್ಥೆ ಗೋಪ್ಯವಾಗಿರಿಸಿದೆ. ಆದರೆ ಈ ಉತ್ಪನ್ನ ಅತ್ಯುನ್ನತ ಗುಣಮಟ್ಟದಿಂದ ಕೂಡಿದೆ ಎಂದು ಸಂಸ್ಥೆ ಪ್ರಚಾರ ಪಡಿಸಿದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ರುಚಿಯಿರುವ ಈ ಚಾಕಲೇಟು ಅಪ್ಪಟ ಕಂದುಬಣ್ಣದ್ದಾದೆ. ವಿಶೇಷ ಮೆರುಗು ತರಲು ಅರಗಿಸಿಕೊಳ್ಳಬಹುದಾದ ಕಂಚಿನ ಪುಡಿಯನ್ನೂ ಉದುರಿಸಲಾಗಿದೆಯಂತೆ.
ಒಂದು ಚಾಕಲೇಟಿನ ಬೆಲೆ ಇಪ್ಪತ್ತು ಡಾಲರ್ (ಸುಮಾರು ಒಂಭೈನೂರು ರೂಪಾಯಿ) ಇದ್ದು ಅಮೇರಿಕಾದಲ್ಲಿ ಎಲ್ಲಿ ಬೇಕಿದ್ದರೂ ಅಂಚೆ ಮೂಲಕ ಕಳುಹಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಅದರಲ್ಲಿ ಒಂದು ಡಾಲರ್ ದತ್ತಕ ನಿಧಿಗೂ ಅರ್ಪಿಸಲಾಗುವುದು. ಈ ನಿಧಿ ಯಾವ ದತ್ತಕ ಸಂಸ್ಥೆಗೆ ಹೋಗಬೇಕೆಂದು ಬಯಸುವಿರೋ ಆ ಸಂಸ್ಥೆಗೆ ಮತ ನೀಡಿ ಆಯ್ಕೆಯನ್ನೂ ಮಾಡಿಕೊಳ್ಳಬಹುದಾಗಿದೆ.
ಸಂಸ್ಥೆ 2009 ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ಚಾಕಲೇಟುಗಳಲ್ಲಿ ಚಾಕ್ ಒ ಬಾಮಾ ಮಾತ್ರವಲ್ಲದೇ ಮುಸ್ಟೇಶ್ ಆನ್ ಅ ಸ್ಟಿಕ್ (ಕೋಲಿನಲ್ಲೊಂದು ಮೀಸೆ), ದ ಆಕ್ಸ್ ಬಾಕ್ಸ್ (ಚೀನಾದ ಹೊಸವರ್ಷದ ಪ್ರತೀಕವಾದ ಎತ್ತಿನ ಚಾಕಲೇಟು) ಮೊದಲಾದವು ಗಮನ ಸೆಳೆಯುತ್ತಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ