ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 24, 2010

ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ

ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ?


ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ ಹೊಸ ಉದ್ಯೋಗವನ್ನು ಸೃಷ್ಟಿಸಿವೆ.  ಉದ್ಯೋಗದ ಹೆಸರು - ಬೆಡ್ ವಾರ್ಮರ್.

ವಾಸ್ತವವಾಗಿ ಇದೊಂದು ಕೋರಿಕೆಯ ಸೇವೆ.  ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ಆತನ ಬೇಕುಬೇಡಗಳೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸ್ನಾನದ ನೀರು ಇಷ್ಟೇ ಬಿಸಿ ಇರಬೇಕು, ಇಷ್ಟೇ ಹೊತ್ತಿಗೆ ಸ್ನಾನ ಮಾಡಬೇಕು, ಚಹಾದಲ್ಲಿ ಸಕ್ಕರೆ ಇಷ್ಟೇ ಇರಬೇಕು, ಇದೇ ಬ್ರಾಂಡಿನ ಉತ್ಪನ್ನವಾಗಬೇಕು, ಇಷ್ಟೇ ಘಂಟೆಗೆ ತಲುಪಬೇಕು, ತಾನು ಕೊಠಡಿ ತಲುಪುವ ಮೊದಲು ಕೊಠಡಿಯ ಏಸಿ ಚಾಲೂ ಇರಬೇಕು ಇತ್ಯಾದಿ ಇತ್ಯಾದಿ. ಇದಕ್ಕೊಂದು ಹೊಸ ಸೇರ್ಪಡೆ ತಾವು ಮಲಗುವ ಹಾಸಿಗೆ ಅಹ್ಲಾದಕರವಾಗಿ ಬೆಚ್ಚಗಿರಬೇಕು, ಅಂದರೆ ಬರೋಬ್ಬರಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರಬೇಕು.

ಬೇರೆ ವಿಧಾನಗಳಿಂದ ಈ ತಾಪಮಾನವನ್ನು ಪಡೆಯಬಹುದಾದರೂ ಸ್ವಾಭಾವಿಕವಾಗಿ ವ್ಯಕ್ತಿಯೊಬ್ಬ ಮಲಗಿ ಹೊರಬಂದ ಹಾಸಿಗೆ ಅತ್ಯಂತ ಕರಾರುವಕ್ಕಾಗಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರುತ್ತದೆಂದು ಸಂಶೋಧನೆಗಳಿಂದ ಧೃಢಪಟ್ಟಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಗ್ರಾಹಕ ಬಯಸಿದರೆ ಆತ ಬರುವ ಮೊದಲು ತನ್ನ ದೇಹದ ಬಿಸಿಯನ್ನು ಹಾಸಿಗೆಗೆ ವರ್ಗಾಯಿಸುವ ಸೇವೆಗೆ ಮುಡಿಪಾದ ವ್ಯಕ್ತಿ ಒಂದು ನಿಗದಿತ ಅವಧಿಯಲ್ಲಿ ಗ್ರಾಹಕನ ಹಾಸಿಗೆಯಲ್ಲಿ ಮಲಗಿ ಗ್ರಾಹಕ ಬರುವ ಕೊಂಚ ಹೊತ್ತಿನ ಮೊದಲು ಹಾಸಿಗೆ ಖಾಲಿ ಮಾಡುತ್ತಾನೆ. ಗ್ರಾಹಕ ಬಂದ ಕೂಡಲೇ ಅತ್ಯಂತ ಆಹ್ಲಾದಕರವಾದ ಬೆಚ್ಚನೆಯ ಹಾಸಿಗೆ ಲಭ್ಯ. ಈ ಸೇವೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಗ್ರಾಹಕ ಹೊರಗೆ ಕೊರೆಯುವ ಚಳಿಯಿಂದ ಥಂಡಿಯಾಗಿ ಬಂದಾಗ ಆಹ್ಲಾದಕರ ತಾಪಮಾನ ತಲುಪಲು ಹೆಚ್ಚಿನ ಸಮಯ ಬೇಕಾಗುವುದರಿಂದ ತಕ್ಷಣ ಬೆಚ್ಚಗಿರುವ ಹಾಸಿಗೆಗೆ ಹೆಚ್ಚಿನ ಬೇಡಿಕೆ.

ಸೋಮಾರಿಯಾಗಿ ಮಲಗುವವರಿಗೆ ಭಲೇ ಅದೃಷ್ಟ ಕಾದಿದೆ ಎನ್ನೋಣವೇ?

ಕೃಪೆ: ದ ಟೆಲಿಗ್ರಾಫ್.

ಗುರುವಾರ, ಜನವರಿ 21, 2010

ಮೊರೊಕ್ಕೋದ ಮರ ಹತ್ತುವ ಕುರಿಗಳು

ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.



ಹೇಳಿ ಕೇಳಿ ಮೊರೊಕ್ಕೋ ಒಂದು ಮರುಭೂಮಿ ದೇಶ. ಸುಡುವ ನೆಲದ ಮೇಲೆ ಹುಲ್ಲು ಬೆಳೆಯುವುದು ದುಸ್ತರ. ಅಂದ ಮೇಲೆ ಜೀವನಕ್ಕೆ ಅಗತ್ಯವಾಗಿರುವ ಕುರಿಗಳಿಗೆ ಮೇವು ಎಲ್ಲಿಂದ ಬರಬೇಕು?



ಮರುಭೂಮಿಯಲ್ಲಿ ವ್ಯಾಪಕವಾಗಿ ಬೆಳೆಯುವ ಸಸ್ಯಗಳ ಸಂಕುಲವೇ ಬೇರೆ ಇವೆ. ಹೆಚ್ಚಿನವು ಮುಳ್ಳುಗಳಿಂದ ಕೂಡಿರುವುವು ಅಥವಾ ವರ್ಷಕ್ಕೊಂದು ಬಾರಿ ಬೀಳುವ ಮಳೆನೀರನ್ನು ಹೀರಿ ಅಲ್ಪಕಾಲ ಜೀವಿಸಿ ಒಣಗುವಂಥವು. ಮರ ಎಂದು ಏನಾದರೂ ಇದ್ದರೆ ಅದು ಮುಳ್ಳುಗಳಿರುವ ಕುಬ್ಜ ಅರ್ಗಾನ್ ಮರ (ಆಲಿವ್ ಜಾತಿಯ ಒಂದು ಮರ) ಮಾತ್ರ. ಇಲ್ಲಿರುವ ಕುರಿಗಳಿಗೆ ಮರವೇರಿ ಸೊಪ್ಪು ತಿನ್ನದೇ ಅನ್ಯಮಾರ್ಗವಿಲ್ಲವಾದುದರಿಂದ ಕುರಿ ಮರಿಯಾಗಿದ್ದಾಗಿನಿಂದಲೇ ಕುರಿಗಾಹಿಗಳು ಮರಏರಿಸುವ ತರಬೇತಿ ನೀಡುತ್ತಾರೆ. ಚಿಕ್ಕಮರಿಯಾಗಿದ್ದಿಂದಿನಿಂದಲೇ ಮರಹತ್ತಿ ಅಭ್ಯಾಸವಾಗುವ ಕುರಿ ಪ್ರೌಢಾವಸ್ಥೆಯಲ್ಲಿ ಮರದ ಮೇಲೆ ಮಂಗ ಜಿಗಿದಷ್ಟೇ ಸಲೀಸಾಗಿ ಸುಮಾರು ಮೂವತ್ತು ಅಡಿ ಎತ್ತರವಿರುವ ಮರದ ಕೊಂಬೆಯಿಂದ ಕೊಂಬೆಗೆ ಜಿಗಿಯುವ ನಿಪುಣತೆ ಪಡಿದಿರುತ್ತದೆ.


ಈ ತರಬೇತಿಯಲ್ಲಿ ಕುರಿಗಾಹಿಗಳ ಸ್ವಾರ್ಥವೂ ಇದೆ. ಅರ್ಗಾನ್ ಮರದ ಹಣ್ಣುಗಳಲ್ಲಿ ಒಂದರಿಂದ ಮೂರು ಬೀಜಗಳಿರುತ್ತವೆ. ಈ ಬೀಜಗಳು ಧೃಢವಾಗಿರುವುದರಿಂದ ಕುರಿಗಳು ಅವನ್ನು ತಿನ್ನದೇ ಕೇವಲ ಹಣ್ಣಿನ ಮೃದುಭಾಗವನ್ನು ತಿಂದು ಬೀಜಗಳನ್ನು ಉಗುಳುತ್ತವೆ. ದಿನವಿಡೀ ಹೀಗೆ ಉಗುಳಿದ ಬೀಜಗಳನ್ನು ಕುರಿಗಾಹಿಗಳು ಸಂಜೆ ಸಂಗ್ರಹಿಸುತ್ತಾರೆ. ಈ ಬೀಜಗಳನ್ನು ತೊಳೆದು ಒಣಗಿಸಿ ಬಳಿಕ ಇದರಿಂದ ಎಣ್ಣೆ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಅಡುಗೆಗೂ, ಮೈಕೈಗೆ ಮಾಲಿಷ್ ಮಾಡಲೂ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.


ಈ ಪ್ರಕ್ರಿಯೆ ನೂರಾರು ವರ್ಷಗಳಿಂದ ನೆಡೆದು ಬರುತ್ತಿದ್ದು ಇತ್ತೀಚೆಗೆ ಕುರಿಗಳ ಪ್ರಮಾಣ ತೀರಾ ಹೆಚ್ಚಾಗಿರುವುದರಿಂದ ಅರ್ಗಾನ್ ಮರಗಳು ಅಳಿವಿನಂಚಿನಲ್ಲಿವೆ.



http://www.youtube.com/watch?v=oQev3UoGp2M



ಮೇಲಿನ ಲಿಂಕ್ ಮೂಲಕ ಮರವೇರುವ ಕುರಿಗಳ ವೀಡಿಯೋದೃಶ್ಯವನ್ನು ವೀಕ್ಷಿಸಬಹುದು.

ಅರ್ಶದ್ ಹುಸೇನ್ ದುಬೈ.

ಶುಕ್ರವಾರ, ಜನವರಿ 15, 2010

ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ


ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ
ಕ್ರೀಡಾಂಗಣವೊಂದು ತೈವಾನಿನ ಕಾವೋಸ್ಯಿಯಂಗ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ.






















ವರ್ಲ್ಡ್ ಗೇಮ್ಸ್ ಸ್ಟೇಡಿಯಮ್ ಎಂಬ ಹೆಸರಿನ ಈ ಕ್ರೀಡಾಂಗಣದಲ್ಲಿ ಒಟ್ಟು ಐವತ್ತು ಸಾವಿರ ಜನರಿಗೆ ಸ್ಥಳಾವಕಾಶ ಒದಗಿಸಲಾಗಿದೆ. ಕ್ರೀಡಾಂಗಣದ ಸಂಪೂರ್ಣ ಮೇಲ್ಛಾವಣಿಯನ್ನು ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಒಟ್ಟು 8,844 ಫೋಟೋವೋಲ್ಟಾಯಿಕ್ ಸೆಲ್ಲುಗಳ ಸಮುಚ್ಛಯದಿಂದ ಆವರಿಸಲಾಗಿದ್ದು ಈ ಕಾರ್ಯವನ್ನು ಜಪಾನಿನ ಟೋಯೋ ಇಟೋ ಸಂಸ್ಥೆ ಪೂರ್ಣಗೊಳಿಸಿದೆ.ಈ ರೀತಿ ಉತ್ಪತ್ತಿಯಾದ ವಿದ್ಯುತ್ ಕ್ರೀಡಾಂಗಣದ 3,300 ವಿದ್ಯುತ್ ದೀಪಗಳಿಗೆ ಹಾಗೂ ಎರೆಡು ಬೃಹತ್ ಗಾತ್ರದ ಟೀವಿ ಪರದೆಗಳಿಗೆ ಜೀವ ನೀಡುತ್ತದೆ. ಕ್ರೀಡಾಂಗಣದ ಇನ್ನುಳಿದ ಬಳಕೆಗೂ ಉಪಯೋಗಿಸಿ ಮಿಗುವ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳಲು ಬೃಹತ್ ಬ್ಯಾಟರಿಗಳ ಸಮೂಹವನ್ನೂ ಕ್ರೀಡಾಂಗಣ ಹೊಂದಿದೆ. ಈ ಹೆಚ್ಚುವರಿ ವಿದ್ಯುತ್ತನ್ನು ಮಾರುವ ಬಗ್ಗೆಯೂ ತೈವಾನ್ ಸರ್ಕಾರ ಯೋಚಿಸುತ್ತಿದೆ.





























ಈ ಕ್ರೀಡಾಂಗಣದಲ್ಲಿ 2009 ರ ವರ್ಲ್ಡ್ ಗೇಮ್ಸ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಈ ವರ್ಷ ತೈವಾನಿನ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನೂ ಈ ಕ್ರೀಡಾಂಗಣದಲ್ಲಿ ಆಡಿಸಲು ಯೋಜಿಸಲಾಗಿದೆ. ಇನ್ನುಳಿದಂತೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಒಲಿಂಪಿಕ್ಸ್ ನಲ್ಲಿ ಒಳಗೊಳ್ಳದ ಕ್ರೀಡೆಗಳಾ ಪ್ಯಾರಾಟ್ರೂಪಿಂಗ್, ಟೆಂಪಿನ್ ಬೌಲಿಂಗ್, ರಗ್ಬಿ ಸೆವೆನ್ ಮೊದಲಾದ ಕ್ರೀಡೆಗಳನ್ನೂ ಆಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕ್ರೀಡಾಂಗಣ ಒಂದು ವೃತ್ತಾಕಾರದಲ್ಲಿದ್ದು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸ್ವಾಗತ ಬಯಸುತ್ತಿರುವ ಸ್ನೇಹಪರ ಡ್ರಾಗನ್ ನಿಂತಿರುವ ಶೈಲಿಯನ್ನು ಅನುಸರಿಸುತ್ತದೆ.

ಈ ಕೀಡಾಂಗಣ ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಪ್ರಮಾಣ ವಾರ್ಷಿಕ 1.14 ಮಿಲಿಯನ್ ಕಿ.ವ್ಯಾ.ಘಂಟೆಗಳು. (1140 ಮೆಗಾವ್ಯಾಟ್). ಈ ಉತ್ಪಾದನೆಯ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗದ ಇಂಗಾಲದ ಪ್ರಮಾಣ ವಾರ್ಷಿಕ 660 ಟನ್.

ವಿದ್ಯುತ್ ಉತ್ಪಾದನೆಯ ತೀವ್ರ ಅಗತ್ಯವಿರುವ ಭಾರತಕ್ಕೆ ಈ ಕ್ರೀಡಾಂಗಣವೊಂದು ಮಾದರಿಯಾಗಬಹುದೇ, ಕಾದು ನೋಡಬೇಕು.

ಅರ್ಶದ್ ಹುಸೇನ್, ದುಬೈ.


ಗುರುವಾರ, ಜನವರಿ 14, 2010

ಕೊಳಕು ನೀರು ಶುದ್ಧೀಕರಿಸಲು ’ಒಸಾರ್ಬ್’ ಸ್ಪಂಜು - ಹೊಸವರ್ಷದ ಕೊಡುಗೆ


ನೀರನ್ನು ಶುದ್ಧೀಕರಿಸಲು ಇಂದು ಹತ್ತು ಹಲವು ತಂತ್ರಜ್ಞಾನಗಳು ಲಭ್ಯವಿವೆ. ಸರಳ ಮಡಕೆ-ಮರಳು ಸೋಸುಕುಡಿಕೆಯಿಂದ ಹಿಡಿದು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ಬೃಹತ್ ಕಾರ್ಯಗಾರಗಳು ಇಂದು ಲಭ್ಯವಿದೆ.

ಜನಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಅಗತ್ಯತೆಯೂ ಹೆಚ್ಚುತ್ತಾ ಶುದ್ಧನೀರಿನ ಕೊರತೆಯನ್ನು ಪ್ರತಿನಗರಗಳು ಎದುರಿಸುತ್ತವೆ. ಹೆಚ್ಚುವರಿ ನೀರನ್ನು ಹೊರಗಿನಿಂದ ಪಡೆಯುವುದರ ಜೊತೆಗೆ ವ್ಯರ್ಥನೀರನ್ನು ಮರುಬಳಕೆಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಅಮೇರಿಕಾದ ಓಹಿಯೋ ಸಂಸ್ಥಾನದ ವೂಸ್ಟರ್ ವಿಶ್ವವಿದ್ಯಾಲಯದ ಡಾ. ಪೌಲ್ ಎಡ್ಮಿನ್ಸ್ಟನ್ ರವರು ನೂತನ ಸ್ಪಂಜ್ ಒಂದನ್ನು ಸಾದರಪಡಿಸಿದ್ದಾರೆ. ’ಒಸಾರ್ಬ್’ ಎಂಬ ಹೆಸರಿನ ಈ ಸ್ಪಂಜು ನೀರಿನ ಕಲ್ಮಶಗಳನ್ನು ಮಾತ್ರ ಹೀರಿ ಶುದ್ಧ ನೀರನ್ನು ಪ್ರತ್ಯೇಕಗೊಳಿಸುತ್ತದೆ. ಮಲಿನ ನೀರಿನಿಂದ ಶುದ್ಧ ನೀರನ್ನು ಪಡೆಯಲು ’ಒಸಾರ್ಬ್’ ಅತ್ಯಂತ ಸರಳ, ಸುಲಭ ಹಾಗೂ ಕಡಿಮೆಬೆಲೆಯ ವಸ್ತುವಾಗಿದೆ.

ವಾಸ್ತವವಾಗಿ ಒಸಾರ್ಬ್ ಗಾಜಿನ ಒಂದು ರೂಪ. ಒಸಾರ್ಬ್ ಸಂಪರ್ಕಕ್ಕೆ ಬರುವ ಎಣ್ಣೆ, ಜಿಡ್ಡು, ಮತ್ತಿತರ ನೀರಿನಲ್ಲಿ ಕರಗಿರುವ ಕಲ್ಮಶಗಳು ಅದಕ್ಕೆ ಅಂಟಿಕೊಂಡು ಬಿಡುತ್ತವೆ. ಆದರೆ ನೀರು ಮಾತ್ರ ಒಸಾರ್ಬ್ ಗೆ ಅಂಟಿಕೊಳ್ಳದೇ ಹೋಗುತ್ತದೆ. (ತಾವರೆ ಎಲೆಯ ಮೇಲೆ ನೀರಿನ ಹನಿ ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ). ಕಲ್ಮಶಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದ್ದಂತೆ ಉಬ್ಬಿಕೊಳ್ಳುತ್ತಾ ಹೋಗುವ ಒಸಾರ್ಬ್ ಮೂಲಗಾತ್ರದ ಎಂಟು ಪಟ್ಟು ಕಲ್ಮಶಗಳನ್ನು ಅಂಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಂಟು ಪಟ್ಟು ಕಲ್ಮಶಗಳನ್ನು ಹೀರಿದ ಒಸಾರ್ಬ್ ಬಳಿಕ ನೀರಿನ ಮೇಲೆ ತೇಲುತ್ತದೆ. ಬಳಿಕ ನೀರಿನಿಂದ ಹೊರತೆಗೆದ ಒಸಾರ್ಬ್ ಸ್ಪಂಜನ್ನು ಹಿಸುಕುವ ಮೂಲಕ ಎಲ್ಲಾ ಕಲ್ಮಶಗಳನ್ನು ಹೊರತೆಗೆದು ಮರುಬಳಕೆ ಮಾಡಬಹುದು.

ಹೊಸವರ್ಷದ ಪ್ರಥಮ ಕೊಡುಗೆಯಾಗಿ ಪ್ರಸ್ತುತಪಡಿಸಿದ ಡಾ. ಎಡ್ಮಿನ್ಸ್ಟನ್ ರವರ ಈ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಯಶಸ್ವಿಯಾಗಿ ಪ್ರಸ್ತುತಪಡಿಸಲು ಜಂಪ್ ಸ್ಟಾರ್ಟ್ ಇಂಕಾರ್ಪೋರೇಶನ್ ಸಂಸ್ಥೆ ಇನ್ನೂರೈವತ್ತು ಸಾವಿರ ಡಾಲರುಗಳ ಸಹಾಯಧನವನ್ನು ಘೋಷಿಸಿದೆ.

ಇದುವರೆಗಿನ ಸಂಶೋಧನೆಗಳ ಮೂಲಕ ಐದು ಪ್ರಕಾರದ ಒಸಾರ್ಬ್ ಗಳನ್ನು ಪ್ರಸ್ತುತಪಡಿಸಲಾಗಿದೆ. ಇವುಗಳಲ್ಲಿ ಎರೆಡು ಪ್ರಕಾರಗಳು ನೀರನ್ನು ಸೋಸುತ್ತವೆ. ಒಂದು ಮಣ್ಣನ್ನೂ, ಇನ್ನೊಂದು ಮರಳನ್ನೂ ಹಾಗೂ ಕೊನೆಯದು ಗಾಳಿಯನ್ನೂ ಸೋಸುತ್ತದೆ.

ಸುಲಭವಸ್ತುಗಳಿಂದ ತಯಾರಾದ ಒಸಾರ್ಬ್ ಕಡಿಮೆವೆಚ್ಚದಲ್ಲಿ ಉತ್ಪಾದಿಸಬಹುದಾದುದರಿಂದ ಇದರಿಂದಾಗುವ ಉಪಯೋಗಗಳು ಅನೇಕ. ಮೊದಲನೆಯದಾಗಿ ನೀರಿನ ಅಗತ್ಯ ಎಲ್ಲಿದೆಯೋ ಅಲ್ಲೆಲ್ಲಾ ಒಸಾರ್ಬ್ ಹೊಂದಿರುವ ನೀರಿನ ಸೋಸುಉಪಕರಣಗಳನ್ನು ಸ್ಥಾಪಿಸಿ ನೀರನ್ನು ಸ್ಥಳೀಯವಾಗಿಯೇ ಮರುಬಳಕೆಮಾಡಿಕೊಳ್ಳುವುದರ ಮೂಲಕ ಶುದ್ಧ ನೀರಿನ ಕೊರತೆಯನ್ನು ನೀಗಿಸಬಹುದು. ಎರಡನೆಯದಾಗಿ ನೀರಿನೊಂದಿಗೆ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಕಶ್ಮಲಗಳಲ್ಲಿರುವ ಕೆಲವು ತೈಲವಸ್ತುಗಳನ್ನು ಮತ್ತೆ ಪಡೆದು ಮರುಬಳಕೆ ಮಾಡಿಕೊಳ್ಳಬಹುದು.

ಶೀಘ್ರದಲ್ಲಿಯೇ ಒಸಾರ್ಬ್ ನಮ್ಮ ಊರಿಗೂ ಬರುವಂತಾಗಲಿ ಎಂದು ಆಶಿಸೋಣ

ಅರ್ಶದ್ ಹುಸೇನ್ ದುಬೈ.

ಗುರುವಾರ, ಜನವರಿ 7, 2010

ಎರೆಡು ರೂಪಾಯಿ ಡಾಕ್ಟ್ರು


ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಪ್ರಥಮ ಭೇಟಿಗೆ ಈ ಡಾಕ್ಟ್ರು ವಿಧಿಸುವುದು ಎರೆಡು ರೂಪಾಯಿ, ಎರಡನೆಯ ಭೇಟಿಗೆ?…. ಒಂದು ರೂಪಾಯಿ


ಲಕ್ಷಗಟ್ಟಲೇ ಡೊನೇಶನ್ ನೀಡಿ ಎಂಬಿಬಿಎಸ್ ಮಾಡಿ ಲಕ್ಷಗಟ್ಟಲೇ ಕಮಾಯಿಸುವ ನಿಟ್ಟಿನಲ್ಲಿ ವೈದ್ಯರಾಗುವವರ ಇಂದಿನ ದಿನಗಳಲ್ಲಿ ಯಾರಾದರೂ ಬಡವರ ಸೇವೆ ಮಾಡುತ್ತೇನೆ, ಹಳ್ಳಿಗೆ ಹೋಗುತ್ತೇನೆ ಎಂದರೆ ನಗುವವರ ಸಂಖ್ಯೆಯೇ ಹೆಚ್ಚು.

ಆದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಪ್ರದೇಶವಾದ ಮೇಲ್ಘಾಟ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರವೀಂದ್ರ ಕೊಯ್ಲೆ ನಿಜಕ್ಕೂ ಅಭಿನಂದನಾರ್ಹರು.

ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪದವಿಗಳನ್ನು ಪಡೆದ ಡಾ. ರವೀಂದ್ರ ಮನಸ್ಸು ಮಾಡಿದ್ದರೆ ನಗರದಲ್ಲಿದ್ದು ಲಕ್ಷಗಟ್ಟಲೇ ದುಡಿಯಬಹುದಿತ್ತು. ಆದರೆ ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಅಪ್ಪಟ ಅಭಿಮಾನಿಯಾದ ಅವರು ವಿದ್ಯಾರ್ಥಿದೆಸೆಯಲ್ಲಿದ್ದಾಗ ಓದಿದ್ದ ರಸ್ಕಿನ್ ಬಾಂಡ್ ರವರ ವಾಕ್ಯಗಳು ಅವರ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದವು. ’ನಿಮಗೆ ನಿಜವಾಗಿಯೂ ಜನಸೇವೆ ಮಾಡಬೇಕೆಂದಿದ್ದರೆ ಮೊದಲು ಅತ್ಯಂತ ಬಡವರಿಗೆ ಹಾಗೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದವವ ನಡುವೆ ಕಾರ್ಯನಿರ್ವಹಿಸಿ’ ಎಂದು ರಸ್ಕಿನ್ ಬಾಂಡ್ ಕರೆಯಿತ್ತಿದ್ದರು. ಆಗ ನಾಗಪುರ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಡಾ. ರವೀಂದ್ರ ಪದವಿ ಪಡೆದ ಬಳಿಕ ವೈದ್ಯಕೀಯ ಸೇವೆ ಅತ್ಯಂತ ದುರ್ಲಭವಾದೆಡೆ ತನ್ನ ಸೇವೆ ಮುಡಿಪು ಎಂದು ಸಂಕಲ್ಪಮಾಡಿಕೊಂಡಿಟ್ಟು ಬಿಟ್ಟಿದ್ದರು.

ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಅವರು ಮಹಾರಾಷ್ಟ್ರ್‍ಅ, ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮಪ್ರದೇಶಗಳಿಗೆ ಭೇಟಿ ನೀಡಿ ಕಡೆಗೆ ಮಹಾರಾಷ್ಟ್ರದ ಗಾದ್ರಿಚೋಲಿ ಎಂಬ ಪ್ರದೇಶದಲ್ಲಿ ತಮ್ಮ ಸೇವೆ ಆರಂಭಿಸಿದರು. ಆದರೆ ಆ ಪ್ರದೇಶದಲ್ಲಿ ನಕ್ಸಲರ ಕಾಟ ಅತಿಯಾಗಿದ್ದು ತನ್ನ ಮಗನ ಕ್ಷೇಮದ ಕಾಳಜಿ ವಹಿಸಿದ ಅವರ ತಾಯಿ ಅಷ್ಟೇ ಹಿಂದುಳಿದ ಪ್ರದೇಶವಾದ ಆದರೆ ಸುರಕ್ಷಿತವಾದ ಮೇಲ್ಘಾಟ್ ಎಂಬಲ್ಲಿ ಅವರ ಸೇವೆ ನೀಡಲು ಆಗ್ರಹಿಸಿದ್ದರು. ತಮ್ಮ ತಾಯಿಯ ಹಿತವಚನಗಳನ್ನು ಶಿರಾವಹಿಸಿದ ಡಾ. ರವೀಂದ್ರ ಮೇಲ್ಘಾಟಿನಲ್ಲಿ ತಮ್ಮ ಸೇವೆ ಆರಂಭಿಸಿದರು.

ಸುಮಾರು ಒಂದೂವರೆ ವರ್ಷ ತನ್ನ ಸೇವೆಯನ್ನು ಅಲ್ಲಿನ ಜನತೆಗೆ ನೀಡಿದ ಡಾ. ರವೀಂದ್ರರಿಗೆ ಅಲ್ಲಿನ ಜನಗಳಿಗೆ ಕೇವಲ ಮಾತ್ರೆ, ಇಂಜೆಕ್ಷನ್ನುಗಳ ವೈದ್ಯಕೀಯ ಸೇವೆ ಮಾತ್ರವಲ್ಲದೇ ಸಾಮಾಜಿಕ ಕಾಳಜಿಯ ಸಾಂತ್ವಾನವೂ ಅವಶ್ಯಕವಿದೆ ಎಂದು ಮನಗಂಡಿತ್ತು. ನಂತರ ನಾಗಪುರಕ್ಕೆ ಹಿಂದಿರುಗಿ ’ರಕ್ಷಣಾತ್ಮಕ ಮತ್ತು ಸಾಮಾಜಿಕ ವೈದ್ಯಶಾಸ್ತ್ರ’ ಎಂಬ ವಿಷಯದಲ್ಲಿ (MD in preventive and social medicine) ಎಂ.ಡಿ. ಪದವಿಯನ್ನು ಪಡೆದು ಮೇಲ್ಘಾಟಿಗೆ ಹಿಂದಿರುಗಿದರು.

ಅಂದಿನಿಂದ ಸತತವಾಗಿ ಹಿಂದುಳಿದ ಜನರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅವರು ಈ ಸೇವೆ ಪ್ರಾರಂಭಿಸಿ ಇಂದಿಗೆ ಇಪ್ಪತ್ತನಾಲ್ಕು ವರ್ಷ ಕಳೆದವು. ಇಂದಿಗೂ ಅವರು ತಮ್ಮ ರೋಗಿಗಳಿಂದ ವಸೂಲು ಮಾಡುವ ಮೊತ್ತ ಮೊದಲನೆಯ ಭೇಟಿಗೆ ಎರೆಡು ರೂ ! ಹಾಗೂ ಮುಂದಿನ ಭೇಟಿಗೆ ಒಂದು ರೂ ! ಆರಂಭಿಕ ದಿನಗಳಲ್ಲಿ ಧರ್ನಿಯಿಂದ ನಲವತ್ತು ಕಿ.ಮೀ. ದೂರವಿರುವ ಬೈರಗಡ ಎಂಬಲ್ಲಿ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದ ಅವರಿಗೆ ದಾರಿಯಲ್ಲಿ ತಿಂಗಳಿಗೆ ಕನಿಷ್ಟ ಒಂದಾದರೂ ಹುಲಿಯ ದರ್ಶನವಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಒಂದೂ ಹುಲಿಯನ್ನು ತಾನು ಕಂಡಿಲ್ಲ ಎಂದು ಡಾ. ರವೀಂದ್ರ ತಿಳಿಸುತ್ತಾರೆ.

ಆ ಪ್ರದೇಶದಲ್ಲಿ ವಾಸವಾಗಿರುವ ಕೋರ್ಕು ಎಂಬ ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ಒಮ್ಮೆ ಕೋರ್ಟು ಮೆಟ್ಟಿಲನ್ನೂ ಹತ್ತಿದ್ದರು.

ಡಾ. ರವೀಂದ್ರರಿಗೆ ಜೈ ಹೋ! ಎನ್ನೋಣವೇ