ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಡಿಸೆಂಬರ್ 28, 2009

ಚಾಣಕ್ಯನ ಹದಿನಾರು ಉಕ್ತಿಗಳು


ಚಾಣಕ್ಯ ಕ್ರಿಸ್ತಪೂರ್ವ ೩೫೦ ರಲ್ಲಿ ಉತ್ತರಭಾರತದ (ಈಗಿನ ಬಿಹಾರ) ಪಾಟಲಿಪುತ್ರ ನಗರದಲ್ಲಿ ಜೀವಿಸಿದ್ದ ಮಹಾನ್ ಮೇಧಾವಿ. ಆ ಕಾಲದಲ್ಲಿಯೇ ಹಲವು ಉಕ್ತಿಗಳನ್ನು ಆತ ಪ್ರಸ್ತುತಪಡಿಸಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ. ಚಾಣಕ್ಯನ ಹಲವಾರು ಉಕ್ತಿಗಳಲ್ಲಿ ಹದಿನಾರನ್ನು ಆರಿಸಿ ಕೆಳಗೆ ವಿವರಿಸಲಾಗಿದೆ.


೧)ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ, ಎಲ್ಲಾ ತಪ್ಪುಗಳನ್ನು ನೀವೊಬ್ಬರೇ ಮಾಡಲು ನಿಮ್ಮ ಆಯಸ್ಸು ಸಾಲದು

೨)ಅತಿಪ್ರಾಮಾಣಿಕರಾಗದಿರಿ. ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ. ಆ ಬಳಿಕ ಡೊಂಕಮರದ ಸರದಿ

೩)ಒಂದು ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡಬೇಕು

೪)ಅತ್ಯಂತ ದೊಡ್ಡ ಗುರುಮಂತ್ರ : ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ.

೫)ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥರಹಿರ ಸ್ನೇಹವೇ ಇಲ್ಲ. ಇದೊಂದು ಕಹಿಸತ್ಯ

೬)ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ? ಈ ಕಾರ್ಯದ ಫಲಗಳೇನು ಮತ್ತು ಈ ಕಾರ್ಯದಲ್ಲಿ ನಾನು ಸಫಲನಾಗುತ್ತೇನೆಯೇ? ಈ ಮೂರೂ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಆ ಪ್ರಯತ್ನ ವ್ಯರ್ಥ

೭)ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಅಕ್ರಮಣ ಮಾಡಿ ಅದನ್ನು ವಿನಾಶಗೊಳಿಸಿಬಿಡಿ

೮)ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ

೯)ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯದಿಂದ ಮಧ್ಯಕ್ಕೆ ನಿಲ್ಲಿಸಬೇಡಿ. ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೆ ಅತ್ಯಂತ ಸುಖಿಗಳು

೧೦)ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಓರ್ವ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿ ಪಸರಿಸುತ್ತದೆ.

೧೧)ದೇವರು ವಿಗ್ರಹದೊಳಗಿಲ್ಲ. ನಿಮ್ಮ ಭಾವನೆಗಳೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಸ್ಥಾನ

೧೨)ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡಮನುಷ್ಯನಾಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲ

೧೩)ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ

೧೪)ನಿಮ್ಮ ಮಗುವನ್ನು ಮೊದಲ ಐದು ವರ್ಷಗಳವರೆಗೆ ಮುದ್ದಾಗಿ ಸಾಕಿರಿ. ಆ ಬಳಿಕ ಐದು ವರ್ಷಗಳಲ್ಲಿ ಮಗು ಎಸಗುವ ತಪ್ಪುಗಳನ್ನು ಬೆದರಿಸಿ ತಿದ್ದಿರಿ. ಹದಿನಾರಾಯಿತೋ, ಸ್ನೇಹಿತನಂತೆ ಕಾಣಿ. ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗುತ್ತಾರೆ.

೧೫)ಮೂರ್ಖ ವ್ಯಕ್ತಿಗೆ ಪುಸ್ತಕಗಳು ಅಂಧ ವ್ಯಕ್ತಿಗೆ ಕನ್ನಡಿಗಿರುವಷ್ಟೇ ನಿರುಪಯೋಗಿ

೧೬)ವಿದ್ಯೆಯೇ ನಿಜವಾದ ಸ್ನೇಹಿತ. ವಿದ್ಯಾವಂತನಿಗೆ ಎಲ್ಲೂ ಮನ್ನಣೆಯಿದೆ. ವಿದ್ಯೆಯೇ ನಿಜವಾದ ಭೂಷಣ, ವಿದ್ಯೆ ಎಂದಿಗೂ ಯೌವನ.

ಶನಿವಾರ, ಡಿಸೆಂಬರ್ 26, 2009

ವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ


ವಿಶ್ವದೆಲ್ಲೆಡೆ ಪರ್ಯಾಯ ಇಂಧನಕ್ಕೆ ಹೆಚ್ಚಿನ ಕಾಳಜಿ ವ್ಯಕ್ತವಾಗುತ್ತಿದೆ. ಸೂರ್ಯಶಕ್ತಿ, ಪವನಶಕ್ತಿ ಮೊದಲಾದ ಶಕ್ತಿಮೂಲಗಳ ಸಮರ್ಥ ಬಳಕೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಸೋಲಾರ್ ಪ್ಯಾನೆಲ್ ಅಳವಡಿಸಿದ ದಾರಿದೀಪಗಳು ಬಳಕೆಯಾಗುತ್ತಿವೆ.

ಈ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ವಿದ್ಯುತ್ ಚಾಲಿತ ವಿಮಾನ. ಇದು ಯಾವುದೇ ಸಂಸ್ಥೆ ನಿರ್ಮಿಸಿದ್ದಲ್ಲ, ಬದಲಿಗೆ ರಾಂಡೆಲ್ ಫಿಶರ್ ಮ್ಯಾನ್ ಎಂಬ ಸಾಮಾನ್ಯ ಹವ್ಯಾಸಿ ಹಾರಾಟಗಾರ ನಿರ್ಮಿಸಿದ್ದು. ಎಲೆಕ್ಟ್ರಾಫ್ಲೈಯರ್-ಸಿ ಎಂಬ ಹೆಸರಿನ ಈ ವಿಮಾನದ ನಿರ್ಮಾಣವೂ ಒಂದು ಆಕಸ್ಮಿಕ. ಸುಮಾರು ಹತ್ತು ವರ್ಷಗಳ ಹಿಂದೆ ಸ್ವತಃ ಜೋಡಿಸಬಹುದಾದ ಚಿಕ್ಕ ಒಬ್ಬರು ಕುಳಿತುಕೊಳ್ಳಬಹುದಾದ ವಿಮಾನವೊಂದನ್ನು ಫಿಶರ್ ಮ್ಯಾನ್ ಕೊಂಡು ತಂದಿದ್ದರು. ಆದರೆ ಅದರ ಇಂಜಿನ್ ವಿಪರೀತ ಸದ್ದು ಮಾಡುತ್ತಿದ್ದು ಹಾರಾಟವೂ ಅಷ್ಟೊಂದು ಆಹ್ಲಾದಕರವಾಗಿರಲಿಲ್ಲ. ಕಿಟ್ ಕೊಂಡು ತಂದಾಗಿದೆ, ಸುಮ್ಮನೇ ಬಿಟ್ಟರೆ ಹಾಕಿದ ಹಣ ದಂಡ, ಹಾರಾಡೋಣವೆಂದರೆ ಕರ್ಕಶ ಸದ್ದು. ಏನು ಮಾಡಬಹುದೆಂದು ಯೋಚಿಸಿದವರಿಗೆ ಸೂಕ್ತವಾಗಿ ಕಂಡದ್ದು ಇದರ ಪೆಟ್ರೋಲ್ ಇಂಜಿನ್ ತೆಗೆದು ವಿದ್ಯುತ್ ಆಧಾರಿತ ಇಂಜಿನ್ ಬಳಕೆ.

ಆ ಬಳಿಕ ಮುಂದಿನ ಹತ್ತು ವರ್ಷಗಳ ಕಾಲ ಅವರು ತಮ್ಮ ವಿಮಾನಕ್ಕೆ ಬೇಕಾದ ಎಲೆಕ್ಟ್ರ್‍ಇಕ್ ಮೋಟಾರ್ ಹೊಂದಿಸುವಲ್ಲಿ ಕಳೆದರು. ಹದಿನೆಂಟು ಅಶ್ವಶಕ್ತಿಯ ಮೋಟಾರ್ ಒಂದನ್ನು ವಿಮಾನದಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದೊಂಗಿದೆ ಅಳವಡಿಸಲಾಯ್ತು. ವಿದ್ಯುತ್ ಒದಗಿಸಲು ತಲಾ ಎಪ್ಪತ್ತೈದು ವೋಲ್ಟುಗಳ ಎರೆಡು ಲಿಥಿಯಂ ಐಯಾನ್ ಬ್ಯಾಟರಿಗಳ ವ್ಯವಸ್ಥೆಯೂ ಆಯಿತು. ಹೆಚ್ಚಿದ ವಿಮಾನದ ಭಾರವನ್ನು ಹೊರಲು ಸಾಧ್ಯವಾಗುವಂತೆ ವಿಮಾನದ ಪ್ರೊಪೆಲ್ಲರ್ ರೆಕ್ಕೆಗಳ ಉದ್ದವನ್ನು ನಲವತ್ತೈದು ಇಂಚುಗಳಿಗೆ ಹೆಚ್ಚಿಸಲಾಯಿತು. ಒಂದೂವರೆ ಪಟ್ಟು ಹೆಚ್ಚಿನ ಪ್ರೊಪೆಲ್ಲರ್ ಶಕ್ತಿಗೆ ಅನುಗುಣವಾಗಿ ವಿಮಾನದ ಎತ್ತರವನ್ನೂ ಎಂಟು ಇಂಚುಗಳಷ್ಟು ಹೆಚ್ಚಿಸಲಾಯಿತು.

ಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಗಳ ಸಹಾಯದಿಂದ ಈ ವಿಮಾನ ಪ್ರತಿ ಘಂಟೆಗೆ ಎಪ್ಪತ್ತು ಕಿ.ಮೀ. ವೇಗದಲ್ಲಿ ಒಟ್ಟು ಒಂದೂವರೆ ಘಂಟೆ ಹಾರಾಟ ನಡೆಸಬಲ್ಲ ಕ್ಷಮತೆ ಹೊಂದಿದೆ. ಒಮ್ಮೆ ವಿಮಾನ ತನ್ನ ನಿರ್ಧರಿತ ಎತ್ತರವನ್ನು ತಲುಪಿದ ಬಳಿಕ ಮೋಟಾರನ್ನು ಸ್ಥಗಿತಗೊಳಿಸಿ ಗ್ಲೈಡರಿನಂತೆ ಚಲಿಸಬಹುದಾಗಿದೆ. ವಿಮಾನ ಮುಂದುವರೆಯುವಾಗ ಪ್ರೊಪೆಲ್ಲರ್ ವಿರುದ್ಧ ದಿಕ್ಕಿಗೆ ತಿರುಗುವ ಶಕ್ತಿಯನ್ನು ಬ್ಯಾಟರಿ ಚಾರ್ಚ್ ಮಾಡಲು ಬಳಸಬಹುದಾಗಿದೆ. ಪ್ರತಿ ಬ್ಯಾಟರಿಯನ್ನೂ ಸೆರಾಮಿಕ್ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಕವಚದೊಳಗೆ ಭದ್ರವಾಗಿರಿಸಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.

ಸಾಮಾನ್ಯ ಅಂತರ್ದಹನ ಇಂಜಿನ್ ಕೇವಲ ೧೫% ಕಾರ್ಯಕ್ಷಮತೆ ನೀಡಿದರೆ ವಿದ್ಯುತ್ ಬ್ಯಾಟರಿ ಮೋಟಾರ್ ೮೮% ಕಾರ್ಯಕ್ಷಮತೆ ನೀಡುತ್ತದೆ ಎಂದು ಫಿಶರ್ ಮ್ಯಾನ್ ಹೆಮ್ಮೆಯಿಂದ ನುಡಿಯುತ್ತಾರೆ. ಹೆಚ್ಚಿನ ಬ್ಯಾಟರಿಗಳನ್ನು ಹೊಂದಿಸಿ ಪೂರ್ಣವಾಗಿ ಚಾರ್ಚ್ ಮಾಡಿ ಹೊರಟರೆ ಆರು ಘಂಟೆ ಸತತವಾದ ಹಾರಾಟ ನಡೆಸಬಹುದೆಂದು ಅವರು ತಿಳಿಸುತ್ತಾರೆ.

ಸರಳವಾದ ವಿನ್ಯಾಸ ಸಾಮಾನ್ಯ ವಿಮಾನದಲ್ಲಿರುವ ಹೆಚ್ಚಿನ ಸಂಖ್ಯೆಯ ನಿಯಂತ್ರಣಗಳನ್ನು ಕಡಿತಗೊಳಿಸಿದೆ. ಕಾಕ್ ಪಿಟ್ ಒಳಗಿರುವುದು ಒಂದು ವೋಲ್ಟ್ ಮೀಟರ್. ಇದು ಬ್ಯಾಟರಿಗಳಲ್ಲಿರುವ ಚಾರ್ಜ್ ಅನ್ನು ತೋರಿಸುತ್ತದೆ. ಪರ್ಯಾಯವಾಗಿ ಇದೇ ವಿಮಾನದ ಇಂಧನ ಗೇಜ್ ಸಹಾ ಆಗಿದೆ. ಒಂದು ಆಂ ಮೀಟರ್ ಬ್ಯಾಟರಿಯಿಂದ ವ್ಯಯವಾಗುತ್ತಿರುವ ವಿದ್ಯುತ್ (ಕರೆಂಟ್) ಅನ್ನು ತೋರಿಸುತ್ತದೆ. ಇದು ಯಾವ ವೇಗದಲ್ಲಿ ವಿದ್ಯುತ್ ವ್ಯಯವಾಗಿರುತ್ತದೆ ಎಂದು ತೋಸಿಸುವುದಲ್ಲದೇ ವಿಮಾನ ಗ್ಲೈಡರಿನಂತೆ ಹಾರುತ್ತಿರುವಾಗ ಬ್ಯಾಟರಿ ಚಾರ್ಜ್ ಆಗುತ್ತಿರುವುದನ್ನೂ ತೋರಿಸುತ್ತದೆ.

ಪ್ರತಿಬಾರಿ ಬ್ಯಾಟರಿ ಚಾರ್ಚ್ ಮಾಡಲು ಕೇವಲ ಎಪ್ಪತ್ತು ಸೆಂಟ್ (ಸುಮಾರು ಮೂವತ್ತು ರೂಪಾಯಿಗಳು) ಖರ್ಚಾಗುತ್ತದೆ.

ಈ ವಿಮಾನ ಸುಲಭಬೆಲಯಲ್ಲಿ ಮಾರಾಟಕ್ಕಿದ್ದು ೨೦೧೦ರ ಮಧ್ಯಭಾಗದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಅವರ ಅಂತರ್ಜಾಲ ತಾಣಕ್ಕೆ www.ElectraFlyer.com ಭೇಟಿ ನೀಡಬಹುದಾಗಿದೆ.


ಕೃಪೆ: ಇನ್ವೆಂಟರ್ ಸ್ಪಾಟ್

ಶುಕ್ರವಾರ, ಡಿಸೆಂಬರ್ 25, 2009

ನೀರನ್ನೇ ಉಪಯೋಗಿಸದ ವಾಶಿಂಗ್ ಮಶೀನ್


ಬಟ್ಟೆ ಒಗೆಯುವುದೆಂದರೆ ಕಲ್ಲಿಗೆ ಬಡಿಯುವ ಶಿಕ್ಷೆ ಎನ್ನುವ ಕಾಲ ಹೋಯಿತು. ಈಗ ಏನಿದ್ದರೂ ಸೆಮಿ ಆಟೋಮ್ಯಾಟಿಕ್, ಫುಲ್ಲೀ ಆಟೋಮ್ಯಾಟಿಕ್ ವಾಶಿಂಗ್ ಮಶೀನುಗಳ ಕಾಲ. ದಿನೇ ದಿನೇ ಹೊರಬರುತ್ತಿರುವ ಆವಿಶ್ಕಾರಗಳಲ್ಲಿ ಬ್ರಿಟನ್ನಿನ ನೀರಿಲ್ಲದ ಒಗೆತ ಹೊಸ ಆಯಾಮವನ್ನೇ ಉಪಯೋಗಿಸಿದೆ.


ಬಟ್ಟೆ ಒಗೆಯುವುದೆಂದರೆ ನೀರಿಲ್ಲದ ಅಥವಾ ನೀರಿನ ಅಭಾವವಿರುವ ನಗರಗಳಿಗೆ ಒಂದು ಶಿಕ್ಷೆಯೇ ಸರಿ. ಅಂತಹವರಿಗೆ ವರದಾನವಾಗಲಿದೆ ಬ್ರಿಟನ್ನಿನ ಕ್ಸೆರೋಸ್ ಸಂಸ್ಥೆ ಪರಿಚಯಿಸಿರುವ ಹೊಸ ನೀರಿಲ್ಲದ ವಾಶಿಂಗ್ ಮಶೀನ್. ಕೇವಲ ೨ ಶೇಖಡಾ ನೀರನ್ನು ಬಳಸಿ ಬಟ್ಟೆಗಳನ್ನು ಒಗೆಯುವ ಹೊಸ ವಾಶಿಂಗ್ ಮಷೀನನ್ನು ಮಾಮೂಲಿ ವಾಷಿಂಗ್ ಮಷೀನುಗಳ ಹತ್ತು ಶೇಖಡಾ ವಿದ್ಯುತ್ ಬಳಸುವುದರಿಂದ ಅತ್ಯಂತ ಪರಿಸರಸ್ನೇಹಿಯಾಗಿದೆ. ಬ್ರಿಟನ್ನಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಾಯೋಗಿಕವಾಗಿ ಪ್ರದರ್ಶನವನ್ನು ನೀಡಿ ಎಲ್ಲರ ಮನಗೆದ್ದಿರುವ ಈ ವಾಶಿಂಗ್ ಮೆಶೀನ್ ೨೦೦೯ ರಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲಿದೆ.

ನೀರಿಲ್ಲದೆ ಈ ಯಂತ್ರ ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ತರ್ಕ ಸುಲಭವಾಗಿದೆ. ನೀರು ಮಾಡುವ ಕೆಲಸವನ್ನು ಇಲ್ಲಿ ಪ್ಲಾಸ್ಟಿಕ್ಕಿನ ಚಿಕ್ಕ ಚಿಕ್ಕ ಗೋಳಗಳು ನಿರ್ವಹಿಸಲಿವೆ. ಮಾಮೂಲಿ ಒಗೆತದಲ್ಲಿ ಬಟ್ಟೆಯಲ್ಲಿರುವ ಕೊಳೆಯ ಋಣ ಚಾರ್ಜ್ ಅನ್ನು ಸೋಪಿನಲ್ಲಿರುವ ಧನಾಂಶ ಕಿತ್ತುಕೊಳ್ಳುತ್ತದೆ. ಇಲ್ಲಿ ನೀರು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತದೆ. ಹೊಸ ತಂತ್ರಜ್ಞಾನದಲ್ಲಿ ನೀರಿನ ಕೆಲಸವನ್ನು ವಿಶೇಷ ಪ್ಲಾಸ್ಟಿಕ್ ನಿರ್ವಹಿಸುತ್ತದೆ. ಮೊದಲಿಗೆ ಒಂದು ಕಪ್ ನೀರು ಹಾಗೂ ಡಿಟರ್ಜೆಂಟುಗಳ ಮಿಶ್ರಣವನ್ನು ಯಂತ್ರದೊಳಕ್ಕೆ ಸೇರಿಸಬೇಕಾಗುತ್ತದೆ. ಆ ಬಳಿಕ ನೀರು ಹಾಗೂ ಡಿಟರ್ಜೆಂಟ್ ಮಿಶ್ರಣ ಪ್ಲಾಸ್ಟಿಕ್ ಗೋಳಗಳ ಮೂಲಕ ಬಟ್ಟೆಗಳ ನಡುವೆ ಹಾದುಹೋಗುತ್ತದೆ. ಈ ಗೋಳಗಳು ಡಿಟರ್ಜೆಂಟ್ ಹಾಗೂ ಕೊಳೆಯ ನಡುವೆ ಮಧ್ಯವರ್ತಿಯಾಗಿ ವರ್ತಿಸಿ ಕೊಳೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಬಟ್ಟೆ ಸರಿಸುಮಾರಾಗಿ ನೂರು ಪ್ರತಿಶತ ಒಣಗಿಯೇ ಹೊರಬರುತ್ತದೆ.

ವಿಶಿಷ್ಟ ಬಗೆಯ ಈ ಪ್ಲಾಸ್ಟಿಕ್ ತುಣುಕುಗಳನು ಅತಿನುಣುಪಾಗಿದ್ದು ಬಟ್ಟೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಹಾಗೂ ಕನಿಷ್ಟ ನೂರು ಬಾರಿಯಾದರೂ ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ ಎಂದು ಕ್ಸಿರೋಸ್ ಸಂಸ್ಥೆ ಹೇಳಿಕೊಂಡಿದೆ.

ನೀರು ಬಳಸದಿರುವ , ಒಣಗಿಸುವ ಅಗತ್ಯವಿಲ್ಲದ ಈ ವಾಶಿಂಗ್ ಮಶೀನ್ ನಮ್ಮೂರಿಗೂ ಬೇಗನೇ ಬರಲಿ ಎಂದು ಹಾರೈಸೋಣ.

ಬರಲಿದೆ ಬಿದಿರಿನ ಹೆಲ್ಮೆಟ್


ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.


ಈ ನಿಟ್ಟಿನಲ್ಲಿ ಬ್ರಿಟನ್ನಿನ ರೂಫ್ ಸಂಸ್ಥೆ ಸಂಪೂರ್ಣ ಪರಿಸರಸ್ನೇಹಿ ಹೆಲ್ಮೆಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದ ರೂಫ್ ಆರ್.ಒ.ಸಿಕ್ಸ್ ಎಂಬ ಹೆಸರಿನ ಈ ಹೆಲ್ಮೆಟ್ಟನ್ನು ಬಿದಿರಿನಿಂದ ತಯಾರಿಸಿದ್ದು ಒಳಭಾಗವನ್ನು ಹತ್ತಿಯಿಂದ ನಿರ್ಮಿಸಲಾಗಿದೆ. ಈ ಹತ್ತಿಯ ವಿಶೇಷ ವಿನ್ಯಾಸದಿಂದ ತಲೆಬುರುಡೆಗೆ ಅಗತ್ಯವಾದ ಗಾಳಿ ಲಭಿಸಲಿದ್ದು ಹೆಚ್ಚಿನ ಆರಾಮ ನೀಡಲಿದೆ.

ತಲೆಬುರುಡೆಯ ಮೇಲೆ ಹೆಲ್ಮೆಟ್ ಧೃಢವಾಗಿ ಕೂರಲು ಅನುಕೂಲವಾಗುವಂತೆ ಇದರ ಪಟ್ಟಿಯನ್ನೂ ಸೀಟ್ ಬೆಲ್ಟ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣವಾಗಿ ತಿರುಗಬಲ್ಲ ಬೈಫೋಕಲ್ ಮಸೂರ ಯಾವುದೇ ಋತುಮಾನದಲ್ಲಿಯೂ ಚಾಲಕನಿಗೆ ಸ್ಪಷ್ಟದರ್ಶನ ನೀಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಮಾದರಿಗಿಂತಲೂ ಈ ಮಾದರಿ ಚಾಲಕನಿಗೆ ಹೆಚ್ಚಿನ ಆರಾಮ ಹಾಗೂ ಸುರಕ್ಷತೆ ನೀಡುತ್ತದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.

ಬ್ರಿಟನ್ನಿನ ಉತ್ಕೃಷ್ಟತಾ ಪರೀಕ್ಷೆಯಾದ ಇ-22-05 ಪರೀಕ್ಷೆಯನ್ನೂ ಈ ಹೆಲ್ಮೆಟ್ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಹೊಸತಾಗಿ ಬರುತ್ತಿರುವುದರಿಂದ ಬೆಲೆ ಕೊಂಚ ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪಾದನೆ ಬೆಲೆಯನ್ನು ಕಡಿಮೆಗೊಳಿಸಲೂ ಬಹುದು

ಅಂದ ಹಾಗೆ ನಮ್ಮ ಮಲೆನಾಡಿನಲ್ಲಿ ಅಡಿಕೆ ಹಾಳೆಯ ಹೆಲ್ಮೆಟ್ ಒಂದು ಶತಮಾನಗಳಿಂದ ತಲೆಗಳನ್ನು ರಕ್ಷಿಸುತ್ತಾ ಬಂದಿದ್ದು ಈ ಸಂಸ್ಥೆಗೆ ತಿಳಿಯಲಿಲ್ಲವೇನೋ, ಗೊತ್ತಿದ್ದಿದ್ದರೆ ಬಿದಿರಿನ ಬದಲಿಗೆ ಅಡಿಕೆ ಹಾಳೆಗೂ ಕಾಯಕಲ್ಪ ಒದಗುತ್ತಿತ್ತು.

ಗಾಳಿ, ಜಲ, ಸೌರ ವಿದ್ಯುತ್ ಆಯಿತು. ಈಗ ತೇವಮಣ್ಣಿನ ಸರದಿ


ನಮ್ಮ ಊರುಗಳಲ್ಲಿ ಪವರ್ ಕಟ್ ಎಂದು ನಾವು ಗೊಣಗಾಡುತ್ತಿರುತ್ತೇವೆ. ನಮಗೆ ಪವರ್ ಕಟ್ ಇದ್ದರೂ ದಿನದ ಕೆಲವಾರು ಘಂಟೆಗಳಾದರೂ ವಿದ್ಯುತ್ ಸಿಗುತ್ತದೆ. ಅದೇ ಆಫ್ರಿಕಾದ ಇನ್ನೂರೈವತ್ತು ಮಿಲಿಯನ್ ಜನರಿಗೆ ವಿದ್ಯುತ್ ಭಾಗ್ಯವೇ ಇಲ್ಲ. ಇಂದಿಗೂ ಅವರು ಕತ್ತಲೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಉಣ್ಣುವ ಊಟಕ್ಕೇ ತಾತ್ವಾರ ಬಂದಿರುವಾಗ ವಿದ್ಯುತ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದು ಆ ರಾಷ್ಟ್ರಗಳ ಸರಕಾರಗಳಿಗೆ ಗಗನದ ಮರೀಚಿಕೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಸ್ಥಳೀಯವಾಗಿ ತಯಾರಿಸಿ ನೀಡಬಹುದಾದ ವಿದ್ಯುತ್ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಕರೆ ನೀಡಿತ್ತು. ಇದು ಸುಮಾರು ಮೂರು ವರ್ಷ ಹಳೆಯ ಕಥೆ. ಹೆಚ್ಚಿನವರು ತಮ್ಮ ಪಾಲಿಗೆ ಲಭಿಸಿದ ಐಶಾರಾಮವನ್ನು ಅನುಭವಿಸುತ್ತಾ ಕುಳಿತಿದ್ದರೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಆರು ವಿದ್ಯಾರ್ಥಿಗಳು ಆಫ್ರಿಕಾದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ತಾವೇನಾದರು ಮಾಡಬಹುದೇ ಎಂದು ಪ್ರಯತ್ನಪಟ್ಟರು. ಇವರ ಪ್ರಯತ್ನಗಳಿಗೆ ಈಗ ಸಂಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿನ ಜಯ ದೊರಕಿದೆ.



ಸಾಮಾನ್ಯ ಬ್ಯಾಟರಿಗಳಲ್ಲಿ ಧನ ಮತ್ತು ಋಣ ಧೃವಗಳಿದ್ದು ಬ್ಯಾಟರಿಯೊಳಗಿನ ರಾಸಾಯನಿಕಗಳ ಪ್ರಕ್ರಿಯೆಯಿಂದ ಧನ ಮತ್ತು ಋಣಧಾತುಗಳ ನಡುವೆ ಚಿಕ್ಕ ವಿದ್ಯುದಾವೇಶ (ವೋಲ್ಟೇಜ್) ಕಂಡುಬರುತ್ತದೆ. ಸಾಮಾನ್ಯವಾಗಿ ಎಲ್ಲಾ ನೆಲದಲ್ಲಿ ಕೊಂಚ ಪ್ರಮಾಣದ ಆರ್ದ್ರತೆ ಇದ್ದೇ ಇರುತ್ತದೆ. ನೆಲದಲ್ಲಿರುವ ಮಣ್ಣಿನ ಆಲ್ಗೇ ಮತ್ತು ಬ್ಯಾಕ್ಟೀರಿಯಾಗಳನ್ನು ಆಧರಿಸಿ ಆ ಮಣ್ಣಿನ ಎರೆಡು ಸ್ತರಗಳಲ್ಲಿ ಎರೆಡು ಬಗೆಯ ಲೋಹಗಳನ್ನು ಹುಗಿಯುವುದರ ಮೂಲಕ ಚಿಕ್ಕ ಪ್ರಮಾಣದ ವೋಲ್ಟೇಜ್ ಪಡೆಯಬಹುದಾಗಿದೆ. ಹೀಗೆ ಒಂದರ ಪಕ್ಕ ಒಂದರಂತೆ ಹಲವಾರು ಗುಂಡಿಗಳನ್ನು ತೋಡಿ ಸೀರೀಸ್ ಜೋಡಣೆಯಿಂದ ಬ್ಯಾಟರಿಯೊಂದನ್ನು ಚಾರ್ಜ್ ಮಾಡಬಹುದಾಗಿದೆ. ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳು ನಿರಂತವಾಗಿ ವೃದ್ಧಿಹೊಂದಿ ಸತತವಾಗಿ ವಿದ್ಯುತ್ ಉತ್ಪಾದಿಸುತ್ತಿರುತ್ತದೆ.

ಸುಮಾರು ಒಂದು ಘನ ಮೀಟರ್ ಮಣ್ಣಿನಿಂದ ಒಂದು ಚಿಕ್ಕ ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪವನ್ನು ಹತ್ತಿಸಬಹುದಾಗಿದೆ. ಅಗತ್ಯತೆಗೆ ತೀರಾ ಅಲ್ಪವೆನ್ನಿಸುವ ಈ ಪ್ರಮಾಣ ಏನೂ ಇಲ್ಲದವರಿಗೊಂದು ಆಶಾಕಿರಣ. ಈ ಸಂಶೋಧನೆಗಾಗಿ ಆ ಆರು ವಿದ್ಯಾರ್ಥಿಗಳಿಗೆ ವಿಶ್ವಬ್ಯಾಂಕಿನ ಎರೆಡು ಲಕ್ಷ ಡಾಲರ್ ಸಹಾಯಧನ ದೊರಕಿದೆ.

ಈ ಪ್ರಯೋಗ ಘಾನಾ ಹಾಗೂ ನಮೀಬಿಯಾ ದೇಶಗಳ ಹಲವು ಹಳ್ಳಿಗಳಲ್ಲಿ ನಡೆಸಲಾಗಿದ್ದು ಸ್ಥಳೀಯರಿಗೆ ತಮಗೆ ಬೇಕಾದ ವಿದ್ಯುತ್ತನ್ನು ತಾವೇ ತಯಾರಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಟಾಂಜಾನಿಯಾದಲ್ಲಿ ಒಂದು ಘಟಕವನ್ನು ಸಂಪೂರ್ಣಗೊಳಿಸಲಾಗಿದ್ದು ಸ್ಥಳೀಯರು ಅತೀವ ಆಸಕ್ತಿ ವಹಿಸಿದ್ದಾರೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಲೆಬೋನ್ ಸೊಲ್ಯೂಶನ್ಸ್ ಇನ್ಕ್. ಹೆಚ್ಚಿನ ಸಂಶೋಧನೆಗೆ ಅಣಿಯಾಗುತ್ತಿದೆ.

ಇವರ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಆಶಿಸೋಣ ಅಲ್ಲವೇ.

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ ಹೆಚ್ಚು ಬಾಳಿಕೆ ಬರುತ್ತವೆಂದೂ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆದರೆ ಈ ಸಿ.ಎಫ್. ಎಲ್ ಗಳು ನಮ್ಮ ಹಳೆಯ ಟ್ಯೂಬ್ ಲೈಟಿನ ಹೃಸ್ವಸ್ವರೂಪವೇ ಹೊರತು ತಂತ್ರಜ್ಞಾನದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ನಿಜಕ್ಕೂ ಈ ಟ್ಯೂಬ್ ಲೈಟ್ ಹಾಗೂ ಸಿ.ಎಫ್.ಎಲ್ ಗಳು ನೀಡುವ ಬೆಳಕು ಕಂಪಿಸುವ ಬೆಳಕು (ಅಂದರೆ ಪ್ರಖರತೆಯಲ್ಲಿ ಏರುಪೇರು). ಆದರೆ ಈ ಕಂಪನ ನಮ್ಮ ವಿದ್ಯುತ್ ಸರಬರಾಜಿನ ಫ್ರೀಕ್ವೆನ್ಸಿ (೫೦ ಹರ್ಟ್ಸ್) ಅಂದರೆ ಸೆಕೆಂಡಿಗೆ ಐವತ್ತು ಬಾರಿ ಇರುವುದರಿಂದ ನಮ್ಮ ಕಣ್ಣು ಅದನ್ನು ಗುರುತಿಸಲು ಅಸಮರ್ಥವಾಗುತ್ತದೆ. ಹಾಗಾಗಿ ನಮಗೆ ಏರುಪೇರಿಲ್ಲದ ಬೆಳಕಿನಂತೆ ಕಂಡುಬರುತ್ತದೆ. ಆದರೆ ಕಾಲಕ್ರಮೇಣ ಸಿ.ಎಫ್. ಅಲ್ ಅಥವಾ ಟ್ಯೂಬ್ ಲೈಟ್ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ, ಬಳಿಕ ಏರುಪೇರು ಇನ್ನಷ್ಟು ಹೆಚ್ಚಾಗುತ್ತದೆ (ಫ್ಲಿಕರಿಂಗ್).


ಇದಕ್ಕೆ ಪರ್ಯಾಯವಾಗಿ ಬೆಳಕನ್ನು ಸೂಸುವ ಇನ್ನೊಂದು ವಸ್ತು ನಮ್ಮ ಜೀವನದಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ, ಅದೇ ಎಲ್.ಇ.ಡಿ. (ಲೈಟ್ ಎಮಿಟಿಂಗ್ ಡಯೋಡ್). ಈ ಎಲ್.ಇ.ಡಿ. ಗೂ ಸುಮಾರು ಮೂವತ್ತು ವರ್ಷವೇ ಆಯಿತು. ಇದು ಸೂಸುವ ಬೆಳಕು ಅಪ್ಪಟವಾದದ್ದು, ಅಂದರೆ ಯಾವುದೇ ಏರುಪೇರಿಲ್ಲದಿರುವುದು. ಇದು ಮೊಬೈಲ್, ಸೈಕಲ್ ಲೈಟ್, ಟಾರ್ಚ್ ಮೊದಲಾದ ದಿನಬಳಕೆಯ ವಸ್ತುಗಳಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹಲವು ಬಸ್ಸುಗಳ ದೇವರ ಫೋಟೋಗಳ ಮುಂದೆ ಕೆಂಪು ಮತ್ತು ಹಸಿರು ಬಣ್ಣಗಳ ಬದಲಾಗುತ್ತಿರುವ ಫ್ಲಿಪ್ ಫ್ಲಾಪ್ ರೂಪದಲ್ಲಿ ಸೇವೆ ನೀಡುತ್ತಾ ಬಂದು ದಶಕಗಳೇ ಕಳೆದಿವೆ.

ಈಗ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಎಲ್.ಇ.ಡಿ.ಗೆ ಹೆಚ್ಚಿನ ಸಾಮರ್ಥ್ಯ ಒದಗಿಸುವತ್ತ ತಮ್ಮ ಗಮನ ಹರಿಸಿದ್ದಾರೆ. ಹಿಂದಿನ ಎಲ್.ಇ.ಡಿ.ಯಲ್ಲಿ ಗ್ಯಾಲಿಯಂ ನೈಟ್ರೈಡ್ ಎಂಬ ಸೆಮಿಕಂಡಕ್ಟರ್ ಮುಖ್ಯ ವಸ್ತುವಾಗಿತ್ತು. ದುಬಾರಿಯಾದ ಈ ವಸ್ತುವನ್ನು ಉಪಯೋಗಿಸಿ ಸುಮಾರು ನೂರು ವ್ಯಾಟ್ ಬಲ್ಬ್ ನೀಡುವ ಬೆಳಕನ್ನು ಸೂಸುವ ಸಾಮರ್ಥ್ಯಕ್ಕೆ ಸಿದ್ಧಪಡಿಸಬೇಕಾದರೆ ಪ್ರತಿ ಬಲ್ಬ್ ಗೆ ಸುಮಾರು ಮೂವತ್ತು ಡಾಲರ್ (ಸುಮಾರು ಸಾವಿರದ ಮುನ್ನೂರೈವತ್ತು ರೂಪಾಯಿ) ಬೆಲೆಯಾಗುತ್ತಿತ್ತು. (ಇದು ಉತ್ಪಾದನಾ ವೆಚ್ಚ, ಮಾರುಕಟ್ಟೆಗೆ ಬರಬೇಕಾದರೆ ಎರೆಡು ಸಾವಿರವಾಗಬಹುದು).

ಈ ನಿಟ್ಟಿನಲ್ಲಿ ಹೊಸ ಎಲ್.ಇ.ಡಿ ಯನ್ನು ಅವರು ಪ್ರಸ್ತುತಪಡಿಸಿದ್ದು ಅದರಲ್ಲಿ ಅತಿ ಕಡಿಮೆ ವೆಚ್ಚದ ಸಫೈರ್ ಹಾಳೆಗಳನ್ನು ಬಳಸಲಾಗಿದೆ. ಈ ಸಫೈರ್ ಹಾಳೆಗಳನ್ನು ಬಳಸಿ ಉತ್ಪಾದಿಸಲಾದ ಸೆಮಿಕಂಡಕ್ಟರ್ ಎಲ್.ಇ.ಡಿ. ಹಿಂದಿನ ಗ್ಯಾಲಿಯಂ ನೈಟ್ರೈಡ್ ಎಲ್.ಇ.ಡಿ ಗಿಂತಲೂ ಹೆಚ್ಚು ಸಾಮರ್ಥ್ಯ ಹಾಗೂ ಅದಕ್ಕಿಂತಲೂ ೭೫ % ಕಡಿಮೆ ಬೆಲೆ ಹೊಂದಿದೆ. ಅಂದರೆ ಸುಮಾರು ಮುನ್ನೂರೈವತ್ತು ರೂಪಾಯಿಗೆ ನೂರು ವ್ಯಾಟ್ ಬೆಳಕು ಸೂಸುವ ಬಲ್ಬಿನ ಬಾಳಿಕೆ ಒಂದು ಲಕ್ಷ ಘಂಟೆಗಳು! ಅಂದರೆ ಸುಮಾರು ಅರವತ್ತು ವರ್ಷಗಳು. ಅಪ್ಪಟ ಬಿಳಿಯ ಬೆಳಕು ನೀಡುವ ಬಲ್ಬ್ ಉಪಯೋಗಿಸುವ ವಿದ್ಯುತ್ ಸಹಾ ಒಂದು ಟ್ಯೂಬ್ ಲೈಟ್ ಉಪಯೋಗಿಸುವ ೧೦% ಅಂದರೆ ವಿದ್ಯುತ್ ಬಿಲ್ ನಲ್ಲಿ ಶೇಖಡಾ ೯೦ ನೇರ ಉಳಿತಾಯ. ಒಮ್ಮೆ ಬಲ್ಬ್ ಅಳವಡಿಸಿದರೆ ಮುಂದಿನ ಅರವತ್ತು ವರ್ಷ ಬದಲಿಸಬೇಕಾದ ಅಗತ್ಯವಿಲ್ಲವಾದ್ದರಿಂದ ಪ್ರತಿವರ್ಷದ ಟ್ಯೂಬ್ ಲೈಟ್ ಗೆ ಗುಡ್ ಬೈ. ಅಂದರೆ ಅರವತ್ತು ವರ್ಷಗಳಲ್ಲಿ ಎಷ್ಟು ಟ್ಯೂಬ್ ಲೈಟ್ ಹಣ ಉಳಿತಾಯವಾಗಬಹುದು ಲೆಕ್ಕ ಹಾಕಿ. ಹೆಚ್ಚೂಕಡಿಮೆ ಶಾಖರಹಿತವಾದ ಬೆಳಕು, ಚಿಕ್ಕದಾದ ಗಾತ್ರ ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾದ ಸ್ವಾತಂತ್ಯ ನೀಡುತ್ತದೆ. ಒಮ್ಮೆ ಮಾರುಕಟ್ಟೆಗೆ ಬಂದರೆ ಇದು ಇಂದು ನಮ್ಮ ಮನೆ, ಕಛೇರಿಗಳಲ್ಲಿ ಹಾಸುಹೊಕ್ಕಾಗಿರುವ ಟ್ಯೂಬ್ ಲೈಟ್, ಬಲ್ಬ್, ಹ್ಯಾಲೋಜನ್ ಲೈಟ್ ಮೊದಲಾದವುಗಳನ್ನು ನೇಪಥ್ಯಕ್ಕೆ ಸರಿಸುವುದರಲ್ಲಿ ಅನುಮಾನವಿಲ್ಲ.


ಈ ವಿಷಯವನ್ನು ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನಡೆಯುವ ಸಂಸ್ಥೆ-ಆರ್.ಎಫ್.ಎಮ್.ಡಿ. - ಯ ನಿರ್ದೇಶಕರಾದ ಪ್ರೊಫೆಸರ್ ಕಾಲಿನ್ ಹಂಫ್ರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಲ್ಲರ ಕುತೂಹಲ ಕೆರಳಿಸಿರುವ ಅರವತ್ತು ವರ್ಷ ಬಾಳಿಕೆ ಬಾಳುವ ಬಲ್ಬ್ ಆದಷ್ಟು ಶೀಘ್ರ ನಮ್ಮ ಮನೆಗಳಲ್ಲೂ ಬರುವಂತಾಗಲಿ ಎಂದು ಹಾರೈಸೋಣ.