ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜನವರಿ 27, 2018

ಕೊಲೆಸ್ಟ್ರಾಲ್ ಬಗ್ಗೆ ನಿಮಗೆ ತಿಳಿದಿರದಿದ್ದ ಅಚ್ಚರಿಯ ಮಾಹಿತಿಗಳು

ಕನ್ನಡ.ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/vVuSSh

ಕೊಲೆಸ್ಟ್ರಾಲ್ ಬಗ್ಗೆ ನಾವೆಲ್ಲಾ ಕೆಟ್ಟ ಅಭಿಪ್ರಾಯವನ್ನೇ ಹೊಂದಿದ್ದೇವೆ. ಏಕೆಂದರೆ ಅಕ್ಕಪಕ್ಕದವರ ವೈದ್ಯಕೀಯ ತಪಾಸಣಾ ವಿವರಗಳನ್ನು ನೋಡಿದಾದ ಕೊಲೆಸ್ಟ್ರಾಲ್ ಉಂಟಂತೆ, ಮಾತ್ರೆ ಕೊಟ್ಟಿದ್ದಾರೆ ಎಂಬ ಮಾತುಗಳನ್ನೇ ಕೇಳುತ್ತೇವೆ. ಆದರೆ ವರದಿಯಲ್ಲಿ ಕೊಲೆಸ್ಟಾಲ್ ಮಟ್ಟ ಇಷ್ಟಿರಬೇಕಿದ್ದುದು ಇದಕ್ಕಿಂತ ಹೆಚ್ಚಾಗಿದೆ ಎಂದೇ ಇರುತ್ತದೆ. ಇದನ್ನು ಸರಿಯಾಗಿ ನೋಡದೇ ನಾವು ಕೊಲೆಸ್ಟ್ರಾಲ್ ಇರುವುದೇ ಕೆಟ್ಟದು ಎಂದು ತಿಳಿದುಕೊಂಡುಬಿಟ್ಟಿದ್ದೇವೆ.
Surprising Facts About Cholesterol


ವಾಸ್ತವವಾಗಿ ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಜಿಡ್ಡು. ಕಾರಿಗೆ ಇಂಜಿನ್ ಆಯಿಲ್ ಇದ್ದಾ ಹಾಗೆ ನಮ್ಮ ರಕ್ತದ ಹರಿವಿಗೂ ಕೊಲೆಸ್ಟಾಲ್ ಅಗತ್ಯವಿದೆ. ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸಿ ಎಲ್ಲೆಡೆ ಪಸರಿಸಲೂ ಕೊಲೆಸ್ಟ್ರಾಲ್ ಅಗತ್ಯವಿದೆ. ಆದರೆ ಇದು ಎಷ್ಟು ಅಗತ್ಯವಿದೆ ಎಂಬುವುದರ ಮೇಲೆ ಆರೋಗ್ಯಕರವೋ ಅನಾರೋಗ್ಯಕರವೋ ಎಂದು ತಿಳಿದುಬರುತ್ತದೆ.

ಸರಿಸುಮಾರು ಎಲ್ಲಾ ಆಹಾರಗಳಲ್ಲಿ ಕೊಲೆಸ್ಟಾಲ್ ಇದೆ. ಎಣ್ಣೆಯಲ್ಲಿ ಇದು ಹೆಚ್ಚಿರುತ್ತದೆ ಅಷ್ಟೇ. ಆದ್ದರಿಂದ ನಮಗೆ ಲಭ್ಯವಾದ ಕೊಲೆಸ್ಟಾಲ್ ನಲ್ಲಿ ಸಿಂಹಪಾಲು ಎಣ್ಣೆ, ಕೊಬ್ಬು ಪ್ರೋಟೀನುಗಳಿಂದ ದೊರಕುತ್ತದೆ. ಇದರಲ್ಲೂ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇದೆ. HDL-(High density lipoproteins) ಎಂಬುದು ಉತ್ತಮ ಕೊಲೆಸ್ಟ್ರಾಲ್ ಎಂದೂ LDL-(Low density lipoproteins) ಕೆಟ್ಟ ಕೊಲೆಸ್ಟಾಲ್ ಎಂದೂ ಪರಿಗಣಿಸಲ್ಪಟ್ಟಿದೆ. ಹೆಸರೇ ಸೂಚಿಸುವಂತೆ ಮೊದಲಿನದು ಹೆಚ್ಚಿನ ಸಾಂದ್ರತೆಯುಳ್ಳದ್ದಾಗಿದ್ದು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಆದರೆ ಎರಡನೆಯದು ಅಂಟಿಕೊಳ್ಳುತ್ತದೆ. ಇದೇ ಇದಕ್ಕೆ ಕೆಟ್ಟದೆಂಬ ಹೆಸರು ಬರಲಿಕ್ಕೆ ಕಾರಣ. ಮಿತಿ ಹೆಚ್ಚಾದರೆ ಈ ಕೊಲೆಸ್ಟಾಲ್ ನಮ್ಮ ನರನರಗಳ ಒಳಭಾಗದಲ್ಲೆಲ್ಲಾ, ಕವಲೊಡೆದಿರುವಲ್ಲಿ, ತಿರುವುಗಳಿರುವಲ್ಲೆಲ್ಲಾ ಅಂಟಿಕೊಂಡು ರಕ್ತದ ಪರಿಚಲನೆಗೆ ಅಡ್ಡಿಯುಂಟುಮಾಡುತ್ತವೆ. ಇದು ಹೃದಯದೊತ್ತಡಕ್ಕೆ ಮತ್ತು ಸ್ತಂಭನದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಆದ್ದರಿಂದ ಕೊಲೆಸ್ಟಾಲ್ ಹೆಚ್ಚು ಇರುವ ಆಹಾರಗಳನ್ನು ತ್ಯಜಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸಲು ಪರಿಣಿತರು ಸಲಹೆ ಮಾಡುತ್ತಾರೆ. ನಾರಿನ ಪ್ರಮಾಣ ಹೆಚ್ಚಿರುವಮ್ ಆಹಾರಗಳು ಇರುವ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಹಕಾರಿ. ಕೊಲೆಸ್ಟ್ರಾಲ್ ಬಗ್ಗೆ ಇನ್ನೂ ಹಲವು ಅಚ್ಚರಿಯ ಮಾಹಿತಿಗಳನ್ನುಇಲ್ಲಿ ನೀಡಲಾಗಿದೆ.

ಕೊಲೆಸ್ಟಾಲ್ ಆಹಾರದಿಂದ ಬರಬೇಕಾಗಿಲ್ಲ, ದೇಹವೇ ಉತ್ಪಾದಿಸಿಕೊಳ್ಳುತ್ತದೆ.
ದೇಹಕ್ಕೆ ಅಗತ್ಯವಾದ ಕೊಲೆಸ್ಟಾಲ್ ಅನ್ನು ಆಹಾರದ ಮೂಲಕ ನಾವು ಬಲವಂತವಾಗಿ ದೇಹಕ್ಕೆ ಉಣಿಸುತ್ತಿದ್ದೇವೆಯೇ ವಿನಃ ದೇಹ ಅಗತ್ಯವಿರುವ ಕೊಲೆಸ್ಟ್ರಾಲ್ ಅನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಫಲಾಹಾರಿಗಳು ಕೆಲವೇ ದಿನಗಳಲ್ಲಿ ಭಾರೀ ತೊಂದರೆ ಅನುಭವಿಸಬೇಕಾಗಿತ್ತು. ಆದ್ದರಿಂದ ನಿಮ್ಮ ಆಹಾರ ಸಾಧ್ಯವಾದಷ್ಟು ಕೊಲೆಸ್ಟಾಲ್ ರಹಿತವಾಗಿರಲಿ.
Surprising Facts About Cholesterol
ನಿಮ್ಮ ಕೊಲೆಸ್ಟ್ರಾಲ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿಮ್ಮ ವಂಶವಾಹಿನಿ ನಿರ್ಧರಿಸುತ್ತದೆ
ಕೊಲೆಸ್ಟಾಲ್ ಬಳಕೆಯಲ್ಲಿ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದನ್ನು ಅವರ ವಂಶವಾಹಿಸಿ ನಿರ್ಧರಿಸುತ್ತದೆ. ಅಂದರೆ ನಿಮ್ಮ ವಂಶವಾಹಿನಿಯಲ್ಲಿ ಕೊಲೆಸ್ಟ್ರಾಲ್ ತೊಂದರೆ ಇದ್ದರೆ ನಿಮಗೂ ಇರುವ ಸಾಧ್ಯತೆ ಹೆಚ್ಚು.

ಕೊಲೆಸ್ಟ್ರಾಲ್ ತೊಂದರೆ ಯಾವುದೇ ವಯಸ್ಸಿನಲ್ಲಿ ಬರಬಹುದು
ಕೊಲೆಸ್ಟ್ರಾಲ್ ತೊಂದರೆಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ, ಇದು ಯಾವುದೇ ವಯಸ್ಸಿನಲ್ಲಿ ಬರಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳ ರಕ್ತದಲ್ಲಿಯೂ ಅಘಾತಕಾರಿ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರುವುದು ಕಂಡುಬಂದಿದೆ. ಇನ್ನೂ ಕೆಲವು ನರಪೇತಲರು ದಪ್ಪನಾಗಬೇಕೆಂದು ಕೇಜಿಗಟ್ಟಲೆ ತಿಂದರೂ ಅವರ ರಕ್ತದಲ್ಲಿ ಕೊಲೆಸ್ಟಾಲ್ ಶೇಖರವಾಗದೇ ಇರುವುದು ಇನ್ನಷ್ಟು ಅಚ್ಚರಿ ತರಿಸುತ್ತದೆ.
Surprising Facts About Cholesterol
ತೂಕ ಇಳಿಸಿದರೆ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಾಧ್ಯ
ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗಿದ್ದು ಕಡಿಮೆಗೊಳಿಸಲು ತೂಕ ಕಳೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಸ್ಥೂಲಕಾಯಕ್ಕೂ ಕೊಲೆಸ್ಟಾಲ್ ಪ್ರಮಾಣಕ್ಕೂ ನಿಕಟ ಸಂಬಂಧವಿರುವುದನ್ನು ವೈದ್ಯಕೀಯ ವರದಿಗಳು ಸಾಬೀತುಪಡಿಸುತ್ತವೆ. ಆದ್ದರಿಂದ ಕೊಲೆಸ್ಟಾಲ್ ಇದೆ ಎಂದು ನಿಮ್ಮ ವೈದ್ಯಕೀಯ ವರದಿ ತಿಳಿಸಿದರೆ ನಿಮ್ಮ ಜಿಹ್ವೆಗೆ ಸಲಾಂ ಹೇಳಿ ತೂಕ ಕಳೆದುಕೊಳ್ಳಲು ಮನಸ್ಸು ಮಾಡಿ.


ಬುಧವಾರ, ಜನವರಿ 17, 2018

ಯು.ಎ.ಇ. ಕಾರು ಮಾಲಿಕರಿಗೆ ಶುಭಸುದ್ದಿ-ಹೊಸ ಟೈರುಗಳನ್ನು ಐದು ವರ್ಷ ಬಳಸಬಹುದು

-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.

ಯು.ಎ.ಇ.ಯಲ್ಲಿರುವ ಕಾರುಗಳನ್ನು ವರ್ಷಕ್ಕೊಂದು ಬಾರಿ ಪಾಸಿಂಗ್ ಮಾಡಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಸರ್ಕಾರದ ಅಧಿಕೃತ ಟೆಸ್ಟಿಂಗ್ ಸೆಂಟರ್ ನಲ್ಲಿ ಮಾತ್ರವೇ ವಾಹನಗಳನ್ನು ಪಾಸಿಂಗ್ ಮಾಡಿಸಬಹುದು. ಕಳೆದ ವರ್ಷ ಆರ್.ಟಿ.ಏ (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ) ಸಂಸ್ಥೆ ಹೊರಡಿಸಿದ ಕಟ್ಟಳೆಯ ಪ್ರಕಾರ ಕಾರಿಗೆ ಅಳವಡಿಸಿರುವ ಟೈರು ಮೂರು ವರ್ಷ ಮಾತ್ರವೇ ಹಳೆಯದಾಗಿರಬಹುದು. ಆರ್ ಟಿ. ಎ. ದೂರವಾಣಿ ಸಂಖ್ಯೆ 8009090 ಗೆ ಕರೆ ಮಾಡಿ ಈ ವಿಷಯ ವಿಚಾರಿಸಿದರೂ (ವಿಚಾರಿಸಲು ಅತ್ತ ಕಡೆ ಯಾರಾದರೂ ಉತ್ತರಿಸಬೇಕಾದರೆ ಸುಮಾರು ಇಪ್ಪತ್ತರಿಂದ ನಲವತ್ತು ನಿಮಿಷವಾದರೂ ತಾಳ್ಮೆಯಿಂದ ಕಾಯಬೇಕಾಗುತ್ತದೆ) ಟೈರು ಮೂರು ವರ್ಷ ಎಂದೇ ಉತ್ತರ ಸಿಗುತ್ತದೆ.

ನನ್ನ ಕಾರಿನ ಟೈರು 2015ರಲ್ಲಿ ತಯಾರಾಗಿದ್ದು 2018ರಲ್ಲಿ ಪಾಸ್ ಮಾಡಲಾರರು ಎಂಬ ಎಂದು ಟೈರು ಮಾರುವ ಅಂಗಡಿಗಳಲ್ಲಿ ಮಾಹಿತಿ ಸಿಕ್ಕಿದ್ದರಿಂದ ಹೊಸ ಟೈರುಗಳನ್ನು ಅನಿವಾರ್ಯವಾಗಿ ಹಾಕಿಸಬೇಕಾಗಿತ್ತು. ಹಾಗಾಗಿ ಕೊಂಚ ಹುಡುಕಾಟ ನಡೆಸಿದಾಗ ಟೈರ್ ಪ್ಲಸ್ ಎಂಬ ಸಂಸ್ಥೆ ಎರಡು ಹೊಸ ಟೈರುಗಳನ್ನು ಕೊಂಡರೆ ಎರಡು ಉಚಿತ ಎಂಬ ಪ್ರಲೋಭನೆ ಒಡ್ಡಿತ್ತು. ಅದೂ ಮಿಶೆಲಿನ್ ಸಂಸ್ಥೆಯ ಟಿಗಾರ್ ಎಂಬ ಸರ್ಬಿಯಾ ದೇಶದ ನಿರ್ಮಿತ ಉತ್ತಮ ಟೈರು. ನಾಲ್ಕು ಟೈರುಗಳನ್ನು ಒಟ್ಟಿಗೇ ಕೊಂಡರೆ ಚೀನಾದ ಟೈರಿನ ಬೆಲೆಯಲ್ಲಿಯೇ ಸಿಗುವುದಾದರೆ ಏಕೆ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ಟೈರ್ ಪ್ಲಸ್ ಅಂಗಡಿಗೆ ನಾನು ಮತ್ತು ಸ್ನೇಹಿತರಾದ ಬಸವರಾಜು ಲಗ್ಗೆಯಿಟ್ಟೆವು.

ಆದರೆ ಇವರು ಮಾರುವ ಟೈರುಗಳು ಏಪ್ರಿಲ್ 21016 ರಲ್ಲಿ ತಯಾರಾದವು. ಇವುಗಳನ್ನು ಹಾಕಿಸಿದರೆ ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು ಇನ್ನೂ ಒಂದೂವರೆ ವರ್ಷ ಮಾತ್ರವೇ ಸಿಗುತ್ತದಲ್ಲಾ ಎಂದು ಟೈರ್ ಪ್ಲಸ್ ವ್ಯಕ್ತಿಯಲ್ಲಿ ವಿಚಾರಿಸಿದರೆ ಅವರು ’ನಮ್ಮ ಟೈರುಗಳನ್ನು ಆರ್ ಟಿ. ಎ ಐದು ವರ್ಷಗಳ ಕಾಲ ಬಳಸಲು ಅನುಮೋದಿಸಿದೆ’ ಎಂದು ಕೆಳಗಿನ ಬ್ರೋಷರ್ ನೀಡಿದರು.


ಅನುಮಾನದಿಂದ ನಾವು ಆರ್ ಟಿ. ಎ ಗೆ ಕರೆ ಮಾಡಿ ವಿಚಾರಿಸಿದರೂ ’ಮೂರು ವರ್ಷವೇ’ ಎಂಬ ಉತ್ತರ ಸಿಕ್ಕಿತು. ಒಂದೂವರೆ ವರ್ಷಕ್ಕೇ ಆದರೂ ಚಿಂತೆಯಿಲ್ಲ ಟೈರು ಅತ್ಯುತ್ತಮ ಗುಣಮಟ್ಟ ಹೊಂದಿದ್ದರಿಂದ ಇರಲಿ ಎಂದು ಹೊಸ ಟೈರುಗಳನ್ನು ಹಾಕಿಸಿಕೊಂಡು ಬಂದೆವು. ಆದರೆ ಬಸವರಾಜು ಮಾತ್ರ ಸುಲಭಕ್ಕೆ ಒಪ್ಪದೇ ಆರ್ ಟಿ.ಎ ಗೆ ಮತ್ತೊಮ್ಮೆ ಕರೆ ಮಾಡಿ ತಮ್ಮ ಐವತ್ತು ನಿಮಿಷಗಳನ್ನು ವ್ಯಯಿಸಿ ನಾಲ್ಕಾರು ಪ್ರತಿನಿಧಿಗಳೊಂದಿಗೆ ಮಾತನಾಡಿ ’ಮೂರು ವರ್ಷದ’ ಹಳೆರಾಗವನ್ನು ಮತ್ತೊಮ್ಮೆ ಹಾಡಿಸಿಕೊಂಡರು. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಲಹಾ ತಾಣಕ್ಕೆ ಈಮೇಲ್ ಮಾಡಿ ಎಂದು ಆ ಪ್ರತಿನಿಧಿ ಹೇಳಿ ತಮ್ಮ ಮೇಲೆ ಎರಗಿದ್ದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು.

ಆದರೂ, ಈ ಟೈರ್ ಪ್ಲಸ್ ಸಂಸ್ಥೆ ಯು.ಎ.ಇ.ಯ ಹೆಸರಾಂತ ಸಂಸ್ಥೆಯಾಗಿದ್ದು ಸುಮ್ಮಸುಮ್ಮನೇ ಸುಳ್ಳು ಹೇಳಲಾರದು ಎನ್ನಿಸಿತು. ಅಲ್ಲದೇ ಇಲ್ಲದ ಅನುಮೋದನೆಯನ್ನು ಇದೆ ಎಂದು ತಿಳಿಸಿದರೆ ಇವರನ್ನು ಇಲ್ಲಿನ ಕಾನೂನು ಬಿಡುತ್ತದೆಯೇ ಅಂಬ ಅನುಮಾನವೂ ಬರತೊಡಗಿತು. ಯಾವುದಕ್ಕೂ ಇರಲಿ, ಎಂದು ಆ ಪ್ರತಿನಿಧಿ ತಿಳಿಸಿದಂತೆ ಆರ್ ಟಿ ಎ ಸಲಹಾ ಈಮೇಲ್ ವಿಳಾಸಕ್ಕೆ ಎಲ್ಲಾ ವಿಷಯವನ್ನು ತಿಳಿಸಿ ಈಮೇಲ್ ಬರೆದೆ. ಇದರ ಸಾರಾಂಶವೆಂದರೆ ಕಾರಿಗೆ ಹೊಸ ಟೈರು ಹಾಕಿಸಿದರೆ ಆರ್.ಟಿ.ಎ. ಪ್ರಕಾರ ಮೂರು ವರ್ಷ, ಆದರೆ ಟೈರ್ ಪ್ಲಸ್ ಪ್ರಕಾರ ಐದು ವರ್ಷ ಮಾತ್ರ ಬಳಸಬಹುದು, ಯಾರು ಸರಿ? ನಾವು ಯಾರನ್ನು ನಂಬಬಹುದು? ಒಂದು ವೇಳೆ ಮೂರು ವರ್ಷ ಸರಿಯಾದ ಮಾಹಿತಿಯಾದರೆ ಐದು ವರ್ಷ ಎಂದು ಟೈರ್ ಪ್ಲಸ್ ಜಾಹೀರಾತು ನೀಡಿ ಟೈರುಗಳನ್ನು ಮಾರುವುದು ವಂಚನೆಯಲ್ಲವೇ?

ಮೊದಲ ಉತ್ತರ ಮಾಮೂಲಿಯಂತೆ "ಮೂರು ವರ್ಷ" ದ ಅದೇ ರಾಗ ಅದೇ ಹಾಡೇ ಆಗಿತ್ತು. ಮತ್ತೊಮ್ಮೆ ಈ ವಿವರಗಳನ್ನು ನಿಮ್ಮ ತಾಂತ್ರಿಕ ವಿಭಾಗಕ್ಕೆ ಕಳುಹಿಸಿ ಅವರಿಂದ ಸ್ಪಷ್ಟನೆ ಬರಲಿ ಎಂದು ಮರುತ್ತರ ಬರೆದೆ. ಮರುದಿನವೇ ತಾಂತ್ರಿಕ ವಿಭಾಗದಿಂದ ಸ್ಪಷ್ಟವಾದ ಉತ್ತರ ಬಂದಿದೆ. ಈಮೇಲ್ ನ ಯಥಾವತ್ ಪ್ರತಿ ಇಲ್ಲಿದೆ:


ಈ ಈಮೇಲ್ ಪ್ರಕಾರ ಪಾಸಿಂಗ್ ಪರೀಕ್ಷೆಯಲ್ಲಿ ಕಾರು ತೇರ್ಗಡೆಯಾಗಲು ಟೈರುಗಳು ನಿರ್ಮಾಣ ದಿನಾಂಕದಿಂದ ಐದು ವರ್ಷಗಳು ಹಾಗೂ ಟೈರುಗಳ ಸವೆತದ ಬಳಿಕವೂ ಕನಿಷ್ಟ 1.6 ಮಿಮಿ ನಷ್ಟು ರಬ್ಬರ್ ಉಳಿದುಕೊಂಡಿರಬೇಕು ಹಾಗೂ ಇವುಗಳು ಯಾವುದೇ ನ್ಯೂನ್ಯತೆಯನ್ನು ಹೊಂದಿರಬಾರದು. ಒಂದು ವೇಳೆ ಪರೀಕ್ಷಿಸುವ ಇನ್ಸ್ ಪೆಕ್ಟರುಗಳಿಗೆ ಯಾವುದೋ ನ್ಯೂನ್ಯತೆ ಕಂಡುಬಂದರೂ ಅವರು ಈ ಅರ್ಹತೆಗಳಿದ್ದರೂ ಟೈರುಗಳನ್ನು ಸುರಕ್ಷಿತವಲ್ಲ ಎಂಬ ಕಾರಣದಿಂದ ನಾಪಾಸು ಮಾಡಬಹುದು.

ಟೈರು ಯಾವ ದಿನಾಂಕದಂದು ನಿರ್ಮಾಣವಾಗಿದೆ ಎಂದು ಕಂಡುಕೊಳ್ಳುವ ವಿಧಾನ ಹೀಗಿದೆ:


ಟೈರಿನ ಒಂದು ಭಾಗದಲ್ಲಿ ಈ ದಿನಾಂಕವನ್ನು ನಾಲ್ಕು ಅಂಕೆಗಳಲ್ಲಿ ಮುದ್ರಿಸಿರುತ್ತಾರೆ. ಮೊದಲ ಎರಡು ಅಂಕೆಗಳು ಆ ವರ್ಷದ ವಾರವನ್ನೂ, ನಂತರದ ಎರಡು ಅಂಕೆಗಳು ಇಸವಿಯನ್ನೂ ತಿಳಿಸುತ್ತದೆ. ಕೆಳಗಿನ ಚಿತ್ರದಲ್ಲಿ ವಿವರಿಸುವಂತೆ ಈ ಟೈರು 4708 ಎಂಬ ನಾಲ್ಕಂಕಿ ಹೊಂದಿದೆ. ಅದರ ಪ್ರಕಾರ 47 ಅಂದರೆ 47ನೇ ವಾರ. ಇದನ್ನು ನಾಲ್ಕರಿಂದ ಭಾಗಿಸಿದರೆ ತಿಂಗಳು ಸಿಗುತ್ತದೆ. 47/4=11.75 ಅಂದರೆ ನವೆಂಬರ್ ತಿಂಗಳ ಮೂರನೆಯ ವಾರ, 2008ನೆಯ ಇಸವಿಯಲ್ಲಿ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರ ನಿಮ್ಮ ಕಾರಿನ ಟೈರು ಯಾವ ವರ್ಷ ತಯಾರಾಗಿದೆ ಎಂದು ಕಂಡುಕೊಳ್ಳಬಹುದು. ಆರ್.ಟಿ. ಎ ಪ್ರಕಾರ ಈ ದಿನಾಂಕದಿಂದ ಐದುವರ್ಷದವರೆಗೆ ಈ ಟೈರುಗಳನ್ನು ಉಪಯೋಗಿಸಬಹುದು. ಒಂದು ವೇಳೆ ಪಾಸಿಂಗ್ ಆದ ಬಳಿಕ ಈ ಟೈರು ಮುಂದಿನ ಪಾಸಿಂಗಿಗೂ ಮೊದಲೇ ಅಂತಿಮ ದಿನಾಂಕ ದಾಟವುದಿದ್ದರೆ ಹಾಗೂ ಆ ದಿನಾಂಕ ದಾಟಿದರೂ ಟೈರು ಬದಲಿಸದೇ ಇದ್ದರೆ ಹಾಗೂ ಒಂದು ವೇಳೆ ಅಪಘಾತ ಅಥವಾ ಇನ್ನಾವುದೋ ಕಾರಣಕ್ಕೆ ಕಾರಿನ ತಪಾಸಣೆ ನಡೆದು ಟೈರಿನ ಅವಧಿ ಮುಗಿದಿರುವುದು ತಿಳಿದುಬಂದರೆ ಕಾರಿನ ಮಾಲಿಕ ತಪ್ಪಿತಸ್ಥನಾಗಬೇಕಾಗುತ್ತದೆ. ಬಳಿಕ ಏನಾಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ.

ಟೈರಿನಲ್ಲಿ ಸವೆತದ ಬಳಿಕವೂ 1.6mm ನಷ್ಟು ರಬ್ಬರ್ ಉಳಿದಿರಬೇಕು ಎಂಬ ಇನ್ನೊಂದು ಕಟ್ಟಳೆ ಇದೆ. 1.6mm ಕಂಡುಕೊಳ್ಳುವುದು ಹೇಗೆ? ಟೈರಿನ ಚಪ್ಪಟೆ ಭಾಗದ ನಡುವೆ ಇರುವ ಜಾಗದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಉಬ್ಬುಗಳಿರುತ್ತವೆ. ಇವಕ್ಕೆ ಟೈರ್ ವೇರ್ ಇಂಡಿಕೇಟರ್ಸ್ ಎಂದು ಕರೆಯುತ್ತಾರೆ.

ಈ ಭಾಗವನ್ನು ತಳವೆಂದು ಪರಿಗಣಿಸಿ ಅಲ್ಲಿಂದ ಎಷ್ಟು ದಪ್ಪಕ್ಕೆ ಟೈರಿನ ರಬ್ಬರ್ ಉಳಿದಿದೆ ಎಂದು ಅಳೆಯಬೇಕು. ಇದನ್ನು ಅಳೆಯಲು ಟೈರ್ ಡೆಪ್ತ್ ಗೇಜ್ ಎಂಬ ಉಪಕರಣವನ್ನು ಎಲ್ಲಾ ಟೈರು ಅಂಗಡಿಯವರು ಕಡ್ಡಾಯವಾಗಿ ಇರಿಸಿರಬೇಕು ಹಾಗೂ ಗ್ರಾಹಕರು ಕೇಳಿದಾಗ ಇಲ್ಲವೆನ್ನದೇ ಕೊಡಬೇಕು. ಇದರ ಮೂಲಕ ಟೈರಿನಲ್ಲಿ ಉಳಿದಿರುವ ರಬ್ಬರ್ 1.6mm ಗಿಂತಲೂ ಹೆಚ್ಚಿದ್ದರೆ ಟೈರು ಪಾಸ್ ಆಗುತ್ತದೆ. ಪಾಸ್ ಮಾಡಬೇಕೆಂದೇ  ನಾವು ಅಳೆಯಬೇಕಿಲ್ಲ, ನಮ್ಮ ಸುರಕ್ಷತೆಗಾಗಿ ಆಗಾಗ ನಾವೇ ಒಂದು ಅಳತೆಪಟ್ಟಿ ಉಪಯೋಗಿಸಿ ಅಂದಾಜು ಒಂದೂವರೆ ಮಿಮಿ ಇದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು.

ಹಾಗಾಗಿ ನಿಮ್ಮ ಕಾರಿಗೆ ಹೊಸ ಟೈರು ಹಾಕಿಸುವುದಾದರೆ ನಿರ್ಮಾಣ ವರ್ಷದಿಂದ ಐದು ವರ್ಷಗಳ ಕಾಲ ಖಂಡಿತವಾಗಿಯೂ ಉಪಯೋಗಿಸಬಹುದು.

ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ನಿಮ್ಮ ಸ್ನೇಹಿತರು ಹಾಗೂ ಆಪ್ತರಿಗೆ ತಿಳಿಸಿ ಈ ಮಾಹಿತಿಯ ಪ್ರಯೋಜನ ಪಡೆಯುವಂತಾಗಲಿ.
ಇಂತಿ ವಂದನೆಗಳು
'ಸರ್ವೇಜನ ಸುಖಿನೋಭವಂತು'
-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.

ಭಾನುವಾರ, ಜನವರಿ 14, 2018

ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ


ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://tinyurl.com/ycu6blrs

ಟೀವಿಯಲ್ಲಿ ಬರುವ ಹಲವು ಜಾಹೀರಾತುಗಲ್ಲಿ ಕೆಲವು ಆಹಾರವಸ್ತುಗಳನ್ನು ಹೃದಯವನ್ನು ರಕ್ಷಿಸುವ ರಾಯಭಾರಿಗಳಂತೆ ಕೆಲವೊಮ್ಮೆ ಬಿಂಬಿಸಲಾಗುತ್ತದೆ. ತಮ್ಮ ಉತ್ಪನ್ನ ಬಳಸಿದರೆ ಮಾತ್ರ ಹೃದಯಕ್ಕೆ ಒಳ್ಳೆಯದೆಂದೂ ಬೇರಾವ ಉತ್ಪನ್ನ ಕೊಂಡರೆ ಕೆಲವು ದಿನಗಳಲ್ಲಿಯೇ ಗೊಟಕ್ ಅನ್ನುತ್ತೀರೆಂದೂ ಉತ್ಪ್ರೇಕ್ಷ್ಸಿಸಲಾಗುತ್ತದೆ. ಅಂದಹಾಗೆ ಜಾಹೀರಾತು ಎಂದರೆ ಉತ್ಪ್ರೇಕ್ಷೆಯೇ ಅಲ್ಲವೇ? ಇದಕ್ಕೆ ಮರುಳಾಗದವರು ಯಾರು!

ವಾಸ್ತವವಾಗಿ ಈ ಜಾಹೀರಾತುಗಳು ಎದೆ ತಟ್ಟಿ  ಹೇಳಿಕೊಳ್ಳುವ ಮತ್ತು ಹೃದಯಕ್ಕೆ ಉತ್ತಮವಾದ ಪೋಷಕಾಂಶಗಳಿದ್ದರೂ ಈ ಉತ್ಪನ್ನಗಳ ಬೆಲೆ ಮಾತ್ರ ಕಡಿಮೆ ಇರುವುದಿಲ್ಲ. ಜಾಹೀರಾತಿಗೆ ಸುರಿದ ಲಕ್ಷಾಂತರ ರೂಪಾಯಿ ಆ ಸಂಸ್ಥೆ ವಸೂಲಿ ಮಾಡಿಕೊಳ್ಳುವುದಾದರೂ ಹೇಗೆ? ಯಾವುದೋ ರೂಪದರ್ಶಿ ದುಡ್ಡು ಪಡೆದ ಮುಲಾಜಿಗೆ ತಾನೆಂದೂ ಬಳಸದೇ ಬೇರೆಯವರಿಗೆ ಬಳಸಲು ಹೇಳಿದ ಉತ್ಪನ್ನವನ್ನು ಕೋಲೆಬಸವನಂತೆ ದುಬಾರಿ ಬೆಲೆ ಕೊಟ್ಟು ಮನೆಗೆ ತರುವ ಬದಲು ಇದಕ್ಕೂ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲ ಮತ್ತ್ತು ಹೃದಯಕ್ಕೆ ಅತ್ಯುತ್ತಮವಾಗ ಆಹಾರಗಳನ್ನು ಮನೆಯಲ್ಲಿಯೇ ಪಡೆಯಬಹುದು. ಅಷ್ಟಕ್ಕೂ ನಮ್ಮ ಹಿರಿಯರು ಇಂತಹ ದುಬಾರಿ ಆಹಾರಗಳನ್ನು ಸೇವಿಸದೇ ಉತ್ತಮ ಆಯಸ್ಸು ಹೊಂದಿರಲಿಲ್ಲವೇ? ಕೆಳಗಿನ ಸ್ಲೈಡ್ ಷೋ ನಿಮಗೆ ಸೂಕ್ತವಾದ ಆಹಾರಗಳ ಆಯ್ಕೆಯನ್ನು ಸುಲಭಗೊಳಿಸಬಲ್ಲದು.

೧) ತಾಜಾ ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ
ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ
ಉಪ್ಪಿಗಿಂತ ರುಚಿಯಿಲ್ಲ ಸರಿ, ಆದರೆ ಹೃದಯಕ್ಕೆ ಒಳ್ಳೆಯದಲ್ಲವಲ್ಲಾ? ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬು ಹೆಚ್ಚಿದ್ದಷ್ಟೂ ಹೃದಯಕ್ಕೆ ಕೆಟ್ಟದು. ಆದ್ದರಿಂದ ನಿಮ್ಮ ಅಡುಗೆಗೆ ಉಪ್ಪಿನ ಬದಲು ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪುಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು. ನಿಮ್ಮ ಆಹಾರದಲ್ಲಿ ಅಡುಗೆ ಎಣ್ಣೆಯ ಬದಲು ಆಲಿವ್ ಎಣ್ಣೆಯನ್ನು ಬಳಸುವುದು ಹೃದಯಕ್ಕೆ ಅತ್ಯುತ್ತಮವಾಗಿದೆ.

೨) ಕಪ್ಪು ಬೀನ್ಸ್ ಕಾಳುಗಳು
ಕಪ್ಪು ಬೀನ್ಸ್ ಕಾಳುಗಳು
ಹೃದಯಕ್ಕೆ ಪೋಷಣೆ ನೀಡುವ ಪೋಷಕಾಂಶಗಳು ಕಪ್ಪು ಬೀನ್ಸ್ ಕಾಳುಗಳಲ್ಲಿ ಹೇರಳವಾಗಿರುತ್ತವೆ. ಫೋಲೇಟ್, ಮೆಗ್ನೀಶಿಯಂ ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುವುವು. ಇದರಲ್ಲಿನ ಉತ್ತಮ ಪ್ರಮಾಣದ ಕರಗುವ ನಾರು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಸಹಕರಿಸುವುವು. ಕಪ್ಪು ಬೀನ್ಸ್ ಕಾಳುಗಳನ್ನು ನೆನೆಸಿ ಮೊಳಗೆ ಬರಿಸಿ ಸಾಲಾಡ್ ಗಳೊಂದಿಗೆ ಹಸಿಯಾಗಿಯೂ ಬೇಯಿಸಿ ತರಕಾರಿಯಂತೆ ಅಥವಾ ಸೂಪ್ ಮಾಡಿಕೊಂಡು ಸಹಾ ಸೇವಿಸಬಹುದು.
ಅಗತ್ಯ ಸೂಚನೆ: ಒಂದು ವೇಳೆ ಸಿದ್ದ ರೂಪದಲ್ಲಿರುವ ಕ್ಯಾನ್ ನಲ್ಲಿರುವ ಕಾಳನ್ನು ಕೊಂಡರೆ ಇದರಲ್ಲಿ ಉಪ್ಪು ಅಧಿಕ ಪ್ರಮಾಣದಲ್ಲಿರುವುದರಿಂದ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ ಬಳಿಕ ಕೆಲವು ಬಾರಿ ತೊಳೆದುಕೊಳ್ಳುವ ಮೂಲಕ ಉಪ್ಪನ್ನು ನಿವಾರಿಸಬಹುದು.

೩) ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ
ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ
ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಸಾಲ್ಮನ್ ಮೀನು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಒಮೆಗಾ - 3 ಕೊಬ್ಬಿನ ತೈಲವೇ ಇದಕ್ಕೆ ಕಾರಣ. ಈ ತೈಲ ಹೃದಯದೊತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನೆಯ ಏರುಪೇರುಗಳನ್ನು ಸರಿಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಮಾರಕವಾಗಿರುವ ಟ್ರೈಗ್ಲಿಸರೈಡ್ ಗಳೆಂಬ ಕಣಗಳನ್ನೂ ನಿವಾರಿಸಿ ಹೃದಯದ ಉರಿಯನ್ನು ಶಮನಗೊಳಿಸುತ್ತದೆ. ವಾರಕ್ಕೆ ಕನಿಷ್ಟ ಎರಡು ತುಂಡು ಸಾಲ್ಮನ್ ಮೀನಿನ್ನು ಸೇವಿಸಲು ಅಮೇರಿಕಾದ ಹೃದಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ.
ಅಡುಗೆಗೆ ಸೂಚನೆ: ಸಾಲ್ಮನ್ ಮೀನಿನ ತುಂಡಿಗೆ ವಿವಿಧ ತರಕಾರಿ ಮತ್ತು ಮಸಾಲೆಗಳನ್ನುಸವರಿ ಅಲ್ಯೂಮಿನಿಯಂ ಫಾಯಿಲ್ ನಿಂದ ಆವರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ ತಿನ್ನುವುದರಿಂದ ಅತ್ಯಧಿಕ ಪೋಷಕಾಂಶಗಳನ್ನು ಪಡೆಯಬಹುದು. ಹುರಿಯುವುದರಿಂದ ಹೆಚ್ಚು ಪೋಷಕಾಂಶಗಳು ನಷ್ಟವಾಗುವುವು. ಬೆಂದ ಮೀನನ್ನು ಬಿಡಿಬಿಡಿಯಾಗಿಸಿ ನಿಮ್ಮ ನೆಚ್ಚಿನ ಸಾಲಾಡ್ ನೊಂದಿಗೂ ಸೇವಿಸಬಹುದು. 

೪) ಆಲಿವ್ ಎಣ್ಣೆ
ಆಲಿವ್ ಎಣ್ಣೆ
ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದನ್ನು ಹಸಿಯಾಗಿ ತಿಂದಷ್ಟೂ ಆರೋಗ್ಯಕ್ಕೆ ಉತ್ತಮವಾಗಿದೆ. ಅಡುಗೆಗೂ ಬಳಸಬಹುದು. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಚಪಾತಿಗಳ ಮೇಲೆ ಸವರಿ ತಿನ್ನುವುದು ಸಹಾ ಉತ್ತಮವಾಗಿದೆ. ರುಚಿಯಲ್ಲಿ ನಮ್ಮ ಸಾಮಾನ್ಯ ಎಣ್ಣೆಗಳಿಗೆ ಸಾಟಿಯಾಗದ ಈ ಎಣ್ಣೆ ಕೊಂಚ ದುಬಾರಿಯೂ ಆಗಿರುವುದರಿಂದ ಇನ್ನೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ರುಚಿ ಮತ್ತು ಬೆಲೆಯಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳುವುದು ಬುದ್ದಿವಂತರ ಲಕ್ಷಣ. ಆದರೆ ಈ ಎಣ್ಣೆಯನ್ನು ಪ್ಯಾಕ್ ಮಾಡಿದ ಆರು ತಿಂಗಳ ಒಳಗೆ ಬಳಸುವುದರಿಂದ ಪೋಷಕಾಂಶಗಳ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಆ ಬಳಿಕವೂ ಉಪಯೋಗಿಸಬಹುದಾದರೂ ಪೋಷಕಾಂಶಗಳ ಪ್ರಮಾಣ ಕೊಂಚ ಕಡಿಮೆಯಾಗುತ್ತಾ ಹೋಗುತ್ತದೆ.

೫) ಬಾದಾಮಿಗಳು
ಬಾದಾಮಿಗಳು
ಹೃದಯಕ್ಕೆ ವಿವಿಧ ಒಣಫಲಗಳು ಉತ್ತಮವಾಗಿವೆ. ಒಣಫಲಗಳಲ್ಲಿ ಬಾದಾಮಿ ಉತ್ತಮವಾಗಿದೆ. ಇದನ್ನು ಹಸಿಯಾಗಿಯೂ, ನಿಮ್ಮ ನಿತ್ಯದ ಆಹಾರಗಳಲ್ಲಿ ಒಂದು ಭಾಗವಾಗಿಯೂ, ಚಿಕ್ಕದಾಗಿ ಕತ್ತರಿಸಿ ಸಿಹಿಪದಾರ್ಥಗಳಲ್ಲಿಯೂ ಬಳಸಬಹುದು. ಬಾದಾಮಿಯಲ್ಲಿ ಸಸ್ಯಜನ್ಯ ಸ್ಟೆರಾಲ್, ಕರಗುವ ನಾರು ಮತ್ತು ಹೃದಯಕ್ಕೆ ಪೂರಕವಾದ ಕೊಬ್ಬುಗಳಿವೆ. ಇವೆಲ್ಲವೂ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ. ಆದರೆ ಮಾರುಕಟ್ಟೆಯಲ್ಲಿ ಉಪ್ಪು ಸವರಿದ ಬಾದಾಮಿ ಇದ್ದರೆ ಅದನ್ನು ಬಳಸಬೇಡಿ. ಅಂತೆಯೇ ಹುರಿದದ್ದು ಸಿಕ್ಕರೂ ಕೊಳ್ಳಬೇಡಿ. ಏಕೆಂದರೆ ಅವಧಿ ಮುಗಿಯುತ್ತಾ ಬಂದಿರುವ ಬಾದಾಮಿಗಳನ್ನು ಹುರಿದ ರೂಪದಲ್ಲಿ ಮಾರಲಾಗುತ್ತದೆ. ಇವುಗಳಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಉತ್ತಮವೆಂದರೆ ತಾಜಾ ಫಲಗಳನ್ನು ಕೊಂಡು ಕಡಿಮೆ ಉರಿಯಲ್ಲಿ ಕೊಂಚವೇ ಕೊಂಚ ಬಿಸಿಮಾಡುವುದರಿಂದ ಇದರಲ್ಲಿರುವ ಕೊಬ್ಬು ಕರಗಿ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ಸುಲಭವಾಗಿ ರಕ್ತವನ್ನು ಸೇರುತ್ತದೆ.

೬) ಸಿಹಿಗೆಣಸು
ಸಿಹಿಗೆಣಸು
ಸಿಹಿಗೆಣಸು ಸಹಾ ಹೃದಯಕ್ಕೆ ಒಂದು ಉತ್ತಮವಾದ ಆಹಾರವಾಗಿದೆ. ರಕ್ತದಲ್ಲಿ ಸಕ್ಕರೆಯನ್ನು ಸೇರಿಸುವ ಕ್ಷಮತೆಯನ್ನು ಮಾಪನ ಮಾಡುವ ಗ್ಲೈಸೆಮಿಕ್ ಕೋಷ್ಟಕದಲ್ಲಿ (glycemic index) ಸಿಹಿಗೆಣಸು ಕೆಳಗಿನ ಸ್ಥಾನದಲ್ಲಿ (ಅಂದರೆ ಕಡಿಮೆ ಸಕ್ಕರೆಯನ್ನು ನೀಡುವ) ಬರುವುದರಿಂದ ನಿಮ್ಮ ಆಹಾರದಲ್ಲಿ ಆಲುಗಡ್ಡೆಗೆ ಬದಲಾಗಿ ಬಳಸಬಹುದಾದ ಎಲ್ಲಾ ಅರ್ಹತೆಯನ್ನು ಪಡೆದಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ಮತ್ತು ಕರಗುವ ನಾರು, ವಿಟಮಿನ್ ಎ, ಲೈಕೋಪೀನ್ ಎಂಬ ಪೋಷಕಾಂಶಗಳು ಹೃದಯಕ್ಕೆ ಉತ್ತಮವಾಗಿದ್ದು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನವಾಗಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ.  ಸಿಹಿಗೆಣಸನ್ನು ಹಸಿಯಾಗಿ ಸೇವಿಸುವುದು ಉತ್ತಮ. ಚಿಕ್ಕದಾಗಿ ತುಂಡು ಮಾಡಿದ ಗೆಣಸನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ಲಿಂಬೆರಸವನ್ನು ಚಿಮುಕಿಸಿ ಸೇವಿಸುವುದರಿಂದ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

೭) ಬಾರ್ಲಿ
ಬಾರ್ಲಿ
ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

೮) ಕಡಿಮೆ ಕೊಬ್ಬಿನ ಮೊಸರು
ಕಡಿಮೆ ಕೊಬ್ಬಿನ ಮೊಸರು
ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.

೯) ಚೆರ್ರಿ ಹಣ್ಣುಗಳು
ಚೆರ್ರಿ ಹಣ್ಣುಗಳು
ಸಿಹಿಹುಳಿ ಸ್ವಾದದ ಚೆರ್ರಿ ಹಣ್ಣುಗಳು ತಾಜಾ ರೂಪದಲ್ಲಿ ಕೆಲವೊಮ್ಮೆ ಲಭ್ಯವಿದ್ದರೂ ಒಣರೂಪದಲ್ಲಿ ವರ್ಷವಿಡೀ ಲಭ್ಯವಾಗುತ್ತದೆ. ಜೊತೆಗೇ ಜ್ಯೂಸ್ ರೂಪದಲ್ಲಿಯೂ ಸಿಗುತ್ತದೆ. ಚೆರ್ರಿಹಣ್ಣುಗಳು ಹೃದಯಕ್ಕೆ ಉತ್ತಮವಾದ ಹಣ್ಣುಗಳಾಗಿವೆ. ಇದರಲ್ಲಿರುವ ಆಂಥೋಸಯಾನಿನ್ (anthocyanin) ಎಂಬ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳ ದೃಢತೆಯನ್ನು ಹೆಚ್ಚಿಸುವ ಗುಣ ಹೊಂದಿವೆ. ಯಾವುದೇ ರೂಪದಲ್ಲಿ ಲಭ್ಯವಾದ ಚೆರ್ರಿ ಹಣ್ಣುಗಳನ್ನು ನಿಮ್ಮ ಆಹಾರದ ಒಂದು ಭಾಗವಾಗಿಸಿಕೊಂಡರೆ ಹೃದಯಕ್ಕೆ ಉತ್ತಮ ಪೋಷಣೆ ದೊರಕುತ್ತದೆ. ಒಣಫಲವನ್ನು ಪುಡಿಗೊಳಿಸಿ ನಿಮ್ಮ ನೆಚ್ಚಿನ ಸಾಲಾಡ್, ಅನ್ನ ಮತ್ತು ಇತರ ಖಾದ್ಯಗಳೊಡನೆ ಬೆರೆಸಿ ತಿನ್ನುವುದರಿಂದ ರುಚಿ ಹೆಚ್ಚುವುದರ ಜೊತೆಗೇ ಆರೋಗ್ಯವೂ ವೃದ್ದ್ದಿಸುತ್ತದೆ.

೧೦) ಓಟ್ಸ್
ಓಟ್ಸ್
ಓಟ್ಸ್ ಅಥವಾ ತೋಕೆಗೋಧಿಯಲ್ಲಿ ವಿವಿಧ ಪೋಷಕಾಂಶಗಳಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಬಹುಕಾಲ ಏಕಪ್ರಮಾಣದಲ್ಲಿಸುವ ಗುಣ ಹೊಂದಿದೆ. ಈ ಗುಣ ಮಧುಮೇಹಿಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ.  ಪರಿಣಾಮವಾಗಿ ಹೃದಯದ ಆರೋಗ್ಯ ವೃದ್ಧಿಸುತ್ತದೆ. ಓಟ್ಸ್ ಬಳಸಿ ಸೇವಿಸಿದ ಆಹಾರ ಜೀರ್ಣಗೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಸಮಯ ಆಹಾರವಿಲ್ಲದೇ ಇರುವ ಸಂದರ್ಭಕ್ಕೆ ಸೂಕ್ತವೂ ಆರೋಗ್ಯಕರವೂ ಆಗಿದೆ. ಆದರೆ ಪುಡಿರೂಪದ ಓಟ್ಸ್ ಗಿಂತ ಕಾಳು ರೂಪದಲ್ಲಿ (ಕುಚ್ಚಿಗೆಯ ನುಚ್ಚಿನ ರೂಪದಲ್ಲಿ) ಸಿಗುವ ಓಟ್ಸ್ ಉತ್ತಮವಾಗಿದೆ.

ಶುಕ್ರವಾರ, ಜನವರಿ 12, 2018

ಆಲುಗಡ್ಡೆಯಿಂದ ಇಷ್ಟೆಲ್ಲಾ ಉಪಯೋಗಗಳಿವೆ ಎಂದು ನಿಮಗೆ ಈ ಮೊದಲು ಗೊತ್ತಿತ್ತೇ?

ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://tinyurl.com/yc3sv8sp

ಹೆಚ್ಚು ಕಾಲ ಕೆಡದೇ ಇರುವ, ಅಗ್ಗವಾದ, ವರ್ಷದ ಎಲ್ಲಾ ಋತುಗಳಲ್ಲೂ ಲಭ್ಯವಿರುವ ತರಕಾರಿಗಳೆಂದರೆ ಆಲುಗಡ್ಡೆ ಮತ್ತು ನೀರುಳ್ಳಿ. ಬಡವರ ನೆಚ್ಚಿನ ಈ ಆಲುಗಡ್ಡೆಯನ್ನು ಉದ್ದದ ಬೆರಳುಗಳಂತೆ ಚೌಕಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಚೆಂದದ ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಟ್ಟರೆ ಶ್ರೀಮಂತರಿಗೆ ಅದು ದುಬಾರಿಬೆಲೆಯ ಸ್ವಾದಿಷ್ಟ ಖಾದ್ಯ. ರೆಸಿಪಿಗಳಲ್ಲಿ ಹುಡುಕಹೊರಟರೆ ಆಲು ಜೊತೆಗಿನ ಇತರ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳ ಪಟ್ಟಿ ನೂರಕ್ಕೂ ಹೆಚ್ಚಿವೆ. ಇದರಲ್ಲಿರುವ ವಿಟಮಿನ್ ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಕೊಬ್ಬನ್ನು ಕರಗಿಸುವ ಮೂಲಕ ತೂಕ ಇಳಿಯಲೂ ನೆರವಾಗುತ್ತವೆ. ಆಲುಗಡ್ಡೆಯನ್ನು ಚೆನ್ನಾಗಿ ಹುರಿದು ತಿನ್ನುವುದರಿಂದ ಕೊಬ್ಬು ಕಡಿಮೆಯಾಗುತ್ತದೆ.
ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ

ಆದರೆ ಆಲುಗಡ್ಡೆಯ ಉಪಯೋಗ ಅಡುಗೆಗೆ ಹೊರತಾಗಿಯೂ ಬಹಳಷ್ಟಿದೆ. ಇದರ ಪರ್ಯಾಯ ಉಪಯೋಗಗಳಲ್ಲಿ ಪ್ರಮುಖವಾದುವನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ:

ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
೧) ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಉಳಿದ ನೀರನ್ನು ಚೆಲ್ಲಬೇಡಿ, ಬದಲಿಗೆ ತಣಿದ ಬಳಿಕ ಇದೇ ನೀರಿಗೆ ಒಂದು ಬೆಂದಿರುವ ಆಲುಗಡ್ಡೆಯನ್ನು ಚೆನ್ನಾಗಿ ಕಿವುಚಿ ನೀರನ್ನು ಗಾಢವಾಗಿಸಿ. ಈ ನೀರಿನಿಂದ ಕೂದಲನ್ನು ತೊಳೆದುಕೊಂಡರೆ ಕೂದಲಿಗೆ ಅಪ್ರತಿಮ ಕಾಂತಿ ದೊರಕುತ್ತದೆ. ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಉದುರುವುದನ್ನು ನಿಯಂತ್ರಿಸುತ್ತದೆ ಅಲ್ಲದೇ ತಲೆಹೊಟ್ಟನ್ನೂ ನಿವಾರಿಸುತ್ತದೆ.
ರಕ್ತದೊತ್ತಡ ಕಡಿಮೆಗೊಳಿಸುತ್ತದೆ
೨) ರಕ್ತದೊತ್ತಡ ಕಡಿಮೆಗೊಳಿಸುತ್ತದೆ.
ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆಯಿದ್ದಲ್ಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಆಲುಗಡ್ಡೆಗಳಿರುವಂತೆ ನೋಡಿಕೊಳ್ಳುವುದರಿಂದ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
೩) ಮಲಬದ್ದತೆ ನಿವಾರಿಸುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
ಒಂದು ವೇಳೆ ಮಲಬದ್ದತೆಯ ತೊಂದರೆ ಇದ್ದರೆ ಒಂದೆರಡು ಆಲುಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಲವಣ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುವ ದ್ರವಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹೊಟ್ಟೆಯುರಿ ಮೊದಲಾದ ತೊಂದರೆಗಳಿಂದ ತಪ್ಪಿಸುತ್ತದೆ.

೪) ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ
ನಿಯಮಿತವಾಗಿ ಮುಖದ ಚರ್ಮವನ್ನು ಆಲುಗಡ್ಡೆಯ ಚಿಕ್ಕದಾಗಿ ತುರಿದ ಪುಡಿಯಿಂದ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿಕೊಳ್ಳುವ ಮೂಲಕ ಸಹಜವಾದ ಕಾಂತಿಯನ್ನು ಪಡೆಯಬಹುದು.

೫) ಮೊಡವೆಗಳನ್ನು ನಿವಾರಿಸುತ್ತದೆ.
ಮೊಡವೆಗಳನ್ನು ನಿವಾರಿಸುತ್ತದೆ
ಮೊಡವೆಗಳ ತೊಂದರೆಯಿದ್ದರೆ ಒಂದು ಚಮಚ ಆಲುಗಡ್ಡೆಯ ರಸಕ್ಕೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮತ್ತೆ ಬರದಂತೆಯೂ ತಡೆಯಬಹುದು. 


೬) ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ.
ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ
ಕೆಲವೊಮ್ಮೆ ಚರ್ಮದಡಿಯಲ್ಲಿ ಕೆಲವು ಗ್ರಂಥಿಗಳು ಸ್ರವಿತವಾಗಿ ಗಂಟುಗಳು ಉಂಟಾಗುತ್ತವೆ. ಇದಕ್ಕೆ ಒಂದು ಉದಾಹರಣೆ ಮಣಿಕಟ್ಟಿನಲ್ಲಿ ಉಂಟಾಗುವ ಗ್ಯಾಂಗ್ಲಿಯಾನ್ ಎಂಬ ಗಂಟು. ಇದನ್ನು ನಿವಾರಿಸಲು ಸುಮಾರು ಮೂರು ಅಥವಾ ನಾಲ್ಕು ಆಲುಗಡ್ದೆಗಳನ್ನು ನೇರವಾಗಿ ಬೆಂಕಿಯ ಮೇಲಿಟ್ಟು ಸುಡಬೇಕು. ಬಳಿಕ ಸಿಪ್ಪೆ ಸುಲಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂದು ಬಿಸಿಬಿಸಿಯಾಗಿಯೇ ತಿನ್ನಬೇಕು. ಇದರಿಂದ ಗಂಟುಗಳು ಕರಗತೊಡಗುತ್ತವೆ.

೭) ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ.

ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚದಷ್ಟು ಹಸಿ ಆಲುಗಡ್ಡೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹರಿಗೆಯ ರೇಖೆಗಳ ಮೇಲೆ ಮತ್ತು ಮುಖದ ನೆರಿಗೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಈ ಸ್ಥಳಗಳೂ ಅಕ್ಕಪಕ್ಕದ ಚರ್ಮದ ಬಣ್ಣವನ್ನೇ ಪಡೆದು ರೇಖೆಗಳು ಮಾಯವಾಗುತ್ತವೆ.

೮) ಬಿಸಿಲಿನ ಝಳಕ್ಕೆ ಒಣಗಿದ ಬಣ್ಣವನ್ನು ನಿವಾರಿಸುತ್ತದೆ.
ಊತವನ್ನು ನಿವಾರಿಸುತ್ತದೆ
ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗದ ಬಣ್ಣ ಬದಲಾಗಿದ್ದು ಇದನ್ನು ನಿಜವರ್ಣಕ್ಕೆ ತರಲು ಹಸಿ ಆಲುಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿ ಅದರಿಂದ ಬಿಸಿಲಿಗೆ ಒಡ್ಡಿ ಬಣ್ಣಬದಲಾದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಧಾನವಾಗಿ ಚರ್ಮ ಸಹಜವರ್ಣದತ್ತ ಬದಲಾಗುತ್ತದೆ.

೯) ಊತವನ್ನು ನಿವಾರಿಸುತ್ತದೆ.
ಅಲರ್ಜಿಗಳಿಗೆ ಉತ್ತಮವಾಗಿದೆ
ಕೆಲವೊಮ್ಮೆ ಪೆಟ್ಟು ಬಿದ್ದು ಅಥವಾ ಬೇರಾವುದೋ ಕಾರಣದಿಂದ ದೇಹದ ಯಾವುದಾದರೂ ಭಾಗಕ್ಕೆ ಬಾವು ಅಥವಾ ಊತ ಬಂದಿದ್ದರೆ ಆ ಸ್ಥಳಕ್ಕೆ ಆಲುಗಡ್ಡೆ ಬೇಯಿಸಿದ್ದ ನೀರಿನಿಂದ ಅದ್ದಿದ ಬಟ್ಟೆಯನ್ನು ಕಟ್ಟುವ ಮೂಲಕ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಅಥವಾ ಎರಡು ಆಲುಗಡ್ಡೆಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿ ಹಾಕಿ. ಈ ತುಂಡುಗಳ ಒಟ್ಟು ತೂಕದ ಎರಡರಷ್ಟು ತೂಕದ ನೀರನ್ನು ಸೇರಿಸಿ. ಉದಾಹರಣೆಗೆ ಐವತ್ತು ಗ್ರಾಂ ಆಲುಗಡ್ಡೆಯಿದ್ದರೆ ನೀರು ನೂರು ಗ್ರಾಂ ಇರಬೇಕು. ಹೆಚ್ಚು ಕಡಿಮೆ ಆಗಬಾರದು. ಈ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ. ತಣಿದ ನೀರನ್ನು ಸ್ವಚ್ಛವಾದ ಬಟ್ಟೆಯಲ್ಲಿ ಅದ್ದಿ ಬಾವು ಬಂದ ಸ್ಥಳದ ಮೇಲೆ ಇಡಿಯ ರಾತ್ರಿ ಕಟ್ಟುವುದರಿಂದ ಬಾವು ಕಡಿಮೆಯಾಗುತ್ತದೆ.

೧೦) ಅಲರ್ಜಿಗಳಿಗೆ ಉತ್ತಮವಾಗಿದೆ
ಮೂಲವ್ಯಾಧಿಯನ್ನು ಗುಣಪಡಿಸುತ್ತದೆ
ಹಸಿ ಆಲುಗಡ್ಡೆಯ ರಸವನ್ನು ಸೇವಿಸುವುದರಿಂದ ಹಲವು ವಿಧದ ಅಲರ್ಜಿಗಳು ದೂರವಾಗುತ್ತವೆ.

೧೧) ಮೂಲವ್ಯಾಧಿಯನ್ನು ಗುಣಪಡಿಸುತ್ತದೆ.
ನೆರಿಗೆಗಳನ್ನು ನಿವಾರಿಸುತ್ತದೆ
ಮೂಲವ್ಯಾಧಿಯ ರೋಗಿಗಳು ಆಲುಗಡ್ಡೆಯನ್ನು ಚೆನ್ನಾಗಿ ಬೇಯಿಸಿ ತಯಾರಿಸಿದ ಸೂಪ್ ಕುಡಿಯುವ ಮೂಲಕ ಶಮನ ಪಡೆಯಬಹುದು. 

೧೨) ನೆರಿಗೆಗಳನ್ನು ನಿವಾರಿಸುತ್ತದೆ.
ಚರ್ಮದ ಕಾಂತಿ ಹೆಚ್ಚಲು
ಹಸಿ ಆಲುಗಡ್ಡೆಯ ರಸದಿಂದ ನೆರಿಗೆಗಳಿರುವ ಭಾಗದಲ್ಲಿ ನಯವಾಗಿ ಮಸಾಜ್ ಮಾಡಿದರೆ ನೆರಿಗೆಗಳು ದೂರವಾಗುತ್ತವೆ.

೧೩) ಚರ್ಮದ ಕಾಂತಿ ಹೆಚ್ಚಲು
ಆಲುಗಡ್ಡೆ ಬೇಯಿಸಿದ್ದ ನೀರನ್ನು ಚೆಲ್ಲದೇ ಸ್ನಾನ ಮಾಡಲು ತೆಗೆದಿರಿಸಿದ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ. 

ಭಾನುವಾರ, ಜನವರಿ 7, 2018

ಮರುಬಿಸಿ ಮಾಡಲೇಬಾರದ, ಮಾಡಿದರೆ ವಿಷವಾಗುವ ಏಳು ಆಹಾರಗಳು

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/9i7Q3M


ಇಂದು ಮನೆಮನೆಯಲ್ಲಿರುವ ಫ್ರಿಜ್ ಗೆ ತಂಗಳುಪೆಟ್ಟಿಗೆ ಎಂಬ ಅನ್ವರ್ಥನಾಮವಿದೆ. ಏಕಾಗಿ ತಂಗಳು ಈ ಫ್ರಿಜ್ಜಿಗೆ ಅಂಟಿಕೊಂಡಿತು? ನಮ್ಮ ಹಿರಿಯರ ಕಾಲದಲ್ಲಿ ಫ್ರಿಜ್ ಇಲ್ಲದಿದ್ದುದರಿಂದ ಇಂದು ಮಾಡಿದ ಅಡುಗೆಯನ್ನು ನಾಳೆಗಾಗಿ ಇಡುವ ಪದ್ದತಿ ಇರಲಿಲ್ಲ. ಮರುದಿನಕ್ಕೆ ಅದು ಕೊಂಚ ಹಾಳಾಗುವ ಹಂತದಲ್ಲಿರುತ್ತಿತ್ತು. ಇದನ್ನು ತಿಂದರೆ ಆರೋಗ್ಯ ಕೆಡುವ ಸಂಭವಿದ್ದುದರಿಂದ ಎಸೆದುಬಿಡುತ್ತಿದ್ದರು. ಆದರೆ ಒಪ್ಪೊತ್ತು ಊಟಕ್ಕೂ ಗತಿಯಿಲ್ಲದ ಬಡವರು ಈ ಊಟವನ್ನು ಸೇವಿಸಲು ಸಿದ್ಧರಿಸುತ್ತಿದ್ದರು. ಇದಕ್ಕಾಗಿಯೇ ಇದಕ್ಕೆ ತಂಗಳು ಎಂಬ ಹೆಸರು ಬಂದಿದೆ. ಇಂದು ಫ್ರಿಜ್ ನಲ್ಲಿಟ್ಟ ಆಹಾರವನ್ನು ಮರುದಿನವೂ ಬಳಸಬಹುದಾದುದರಿಂದ ಇದಕ್ಕೆ ತಂಗಳುಪೆಟ್ಟಿಗೆ ಎನ್ನುತ್ತಾರೆ.

ಆದರೆ ಎಲ್ಲಾ ಆಹಾರಗಳೂ ಫ್ರಿಜ್ಜಿನಲ್ಲಿಟ್ಟರೂ ಮರುದಿನದ ಬಳಕೆಗೆ ಯೋಗ್ಯವಲ್ಲ. ಆಹಾರತಜ್ಞರು ಈ ಬಗ್ಗೆ ನಡೆಸಿದ ಸಂಶೋಧನೆಗಳಿಂದ ಕೆಲವು ಆಹಾರಗಳು ಫ್ರಿಜ್ಜಿನಲ್ಲಿಟ್ಟರೂ ಒಳಗೇ ಕೆಲವು ರಾಸಾಯನಿಕಗಳ ಉತ್ಪತ್ತಿಯಿಂದ ವಿಷಕರವಾಗುವುದನ್ನು ಪ್ರಕಟಿಸಿದ್ದಾರೆ. ಈ ಆಹಾರಗಳನ್ನು ಮತ್ತೊಮ್ಮೆ ಬಿಸಿ ಮಾಡಿದರೆ ಈ ರಾಸಾಯನಿಕಗಳು ಆಹಾರದಲ್ಲಿದ್ದ ಪೋಷಕಾಂಶಗಳ ಗುಣವನ್ನು ಕೆಡಿಸಿ ಆರೋಗ್ಯಕ್ಕೆ ಮಾರಕವಾದ ವಿಷವನ್ನಾಗಿ ಪರಿವರ್ತಿಸಿಬಿಡುತ್ತವೆ. ಈ ಬಗ್ಗೆ ಅರಿವಿರದೇ ತಂಗಳನ್ನು ಬಿಸಿಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಮುನ್ನ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಅರಿವು ಅಗತ್ಯವಾಗಿದೆ. ಇದರಲ್ಲಿ ಪ್ರಮುಖವಾದ ಏಳು ಆಹಾರಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ.

೧) ಆಲುಗಡ್ಡೆ
ಆಲುಗಡ್ಡೆ
ಐರ್ಲೆಂಡ್, ಈಜಿಪ್ಟ್, ಕೀನ್ಯಾ, ಸೋಮಾಲಿಯಾ ಮೊದಲಾದ ಆಫ್ರಿಕದ ದೇಶಗಳಿಗೆ ಆಲುಗಡ್ಡೆಯೇ ಪ್ರಮುಖ ಆಹಾರ. ಆದರೆ ಇವರಾರೂ ಇಂದು ಬೇಯಿಸಿದ ಆಲುಗಡ್ಡೆಯನ್ನು ನಾಳೆ ತಿನ್ನುವುದಿಲ್ಲ. ಏಕೆಂದು ಕೇಳಿದರೆ ಇಂದಿನ ಆಲುಗಡ್ಡೆ ನಾಳೆಯ ವಿಷ ಎಂಬ ಉತ್ತರ ದೊರಕುತ್ತದೆ. ಆಲುಗಡ್ಡೆ ಬೇಯಿಸುವ ಮುನ್ನ ಹಲವು ದಿನಗಳವರೆಗೆ ಕಾಪಾಡಿ ಇಡಬಹುದಾದರೂ ಒಮ್ಮೆ ಬೇಯಿಸಿ ತಣಿಸಿದ ಬಳಿಕ ಮತ್ತೊಮ್ಮೆ ಬೇಯಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಹಾಗಾಗಿ ಆಲುಗಡ್ಡೆ ಉಪಯೋಗಿಸಿ ತಯಾರಿಸಿದ ಖಾದ್ಯಗಳನ್ನು ಅಂದೇ ಬಳಸಿ, ಮರುದಿನಕ್ಕೆ ಇಟ್ಟುಕೊಳ್ಳಬೇಡಿ. 

೨) ಕೋಳಿಮಾಂಸ
ಕೋಳಿಮಾಂಸ
ಕೋಳಿಮಾಂಸದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಇದೆ. ಇದು ಆರೋಗ್ಯಕರ ಆಹಾರವಾಗಿದ್ದರೂ ಮರುದಿನಕ್ಕೆ ಉಳಿಸಿ ಮತ್ತೊಮ್ಮೆ ಬಿಸಿಮಾಡಿದರೆ ಈ ಪ್ರೋಟೀನ್ ನ ಕೆಲವು ಅಂಶಗಳು ವಿಷವಾಗಿ ಪರಿವರ್ತಿತವಾಗುತ್ತವೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಗಳ ಮೂಲಕ Campylobacter ಮತ್ತು
Salmonella ಎಂಬ ಹೆಸರಿನ ಎರಡು ಬ್ಯಾಕ್ಟೀರಿಯಾಗಳು ಮರುಬಿಸಿ ಮಾಡಿದ ಈ ಪ್ರೋಟೀನ್ ನಲ್ಲಿ ಕಂಡುಬಂದಿವೆ. (ಹಸಿ ಹಾಲು, ಬೇಯಿಸದ ಮಾಂಸದಲ್ಲಿಯೂ ಈ ಬ್ಯಾಕ್ಟೀರಿಯಾಗಳಿರುತ್ತವೆ). ಈ ಜೋಡಿ ಜಠರದಲ್ಲಿ ಅಜೀರ್ಣತೆ, ಆಮ್ಲೀಯತೆ ಹೆಚ್ಚಿಸುವುದು ಮೊದಲಾದ ತೊಂದರೆಗಳನ್ನು ಒಡ್ಡುತ್ತವೆ. ಅಚ್ಚರಿ ಎಂದರೆ ಇಂದಿನ ಕೋಳಿಮಾಂಸದ ಖಾದ್ಯವನ್ನು ಮರುದಿನ ಬಿಸಿಮಾಡದೇ ತಣ್ಣಗೇ ಇದ್ದಾಗ ಇರದ ಈ ಬ್ಯಾಕ್ಟೀರಿಯಾಗಳು ಬಿಸಿಮಾಡಿದಾಕ್ಷಣ ಪ್ರತ್ಯಕ್ಷವಾಗುತ್ತವೆ. ವಾತಾಪಿ ಜೀರ್ಣೋಭವ ಕಥೆ ನೆನಪಾಯಿತೇ? ಆದ್ದರಿಂದ ಅನಿವಾರ್ಯವಾದರೆ ಬಿಸಿಮಾಡದೇ ಕೋಳಿಮಾಂಸವನ್ನು ಸೇವಿಸಬಹುದು, ಆದರೆ ಬಳಸದಿರುವುದೇ ಒಳಿತು ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ.

೩) ಅಣಬೆ
ಅಣಬೆ
ಅಣಬೆಗಳಲ್ಲೂ ತಿನ್ನಬಾರದ ಪ್ರಬೇಧಗಳಿವೆ. ಆದರೆ ತಿನ್ನಬಹುದಾದ ಅಣಬೆಯ ಖಾದ್ಯವನ್ನು ಸಿದ್ಧಪಡಿಸಿ ಕೂಡಲೇ ತಿಂದರೆ ಮಾತ್ರ ಕ್ಷೇಮ. ಒಮ್ಮೆ ತಣಿದರೆ ಇದರ ರಾಸಾಯನಿಕ ಸಂಯೋಜನೆಗಳೆಲ್ಲಾ ಕಲಸುಮೇಲೋಗರವಾಗಿ ವಿಷವಾಗಿ ಪರಿವರ್ತಿತವಾಗಿಬಿಡುತ್ತದೆ.

೪) ಬೀಟ್ ರೂಟ್
ಬೀಟ್‌ರೂಟ್
ಬೀಟ್ ರೂಟ್ ಪೋಷಕಾಂಶಗಳ ಆಗರವಾಗಿದ್ದರೂ ನೈಟ್ರೇಟ್ ಅಂಶವೂ ಹೆಚ್ಚಾಗಿಯೇ ಇದೆ. ಮರುಬಿಸಿ ಮಾಡಿದರೆ ಈ ನೈಟ್ರೇಟುಗಳೂ ವಿಷವಾಗಿ ಪರಿಣಮಿಸುವುದರಿಂದ ತಾಜಾ ಖಾದ್ಯವನ್ನು ಮಾತ್ರ ಸೇವಿಸುವುದು ಆರೋಗ್ಯಕರವಾಗಿದೆ.

೫) ಪಾಲಕ್ ಸೊಪ್ಪು
ಪಾಲಕ್ ಸೊಪ್ಪು
ಕಬ್ಬಿಣದ ಅಂಶ ಹೇರಳವಾಗಿರುವ ಪಾಲಕ್ ಮತ್ತು ಬಸಲೆ ಸೊಪ್ಪುಗಳ ಸಾರು ಮತ್ತು ಖಾದ್ಯಗಳನ್ನೂ ಮರುಬಿಸಿಮಾಡುವುದು ಒಳಿತಲ್ಲ. ಏಕೆಂದರೆ ಇದರಲ್ಲೂ ನೈಟ್ರೇಟುಗಳ ಅಂಶ ಹೆಚ್ಚಿದ್ದು ಬಿಸಿಮಾಡಿದಾಕ್ಷಣ ರಾಸಾಯನಿಕ ಬದಲಾವಣೆಗೆ ಒಳಗಾಗಿ ವಿಷಕಾರಿಯಾಗುತ್ತದೆ.

೬) ಮೊಟ್ಟೆಗಳು
ಮೊಟ್ಟೆಗಳು
ಮೊಟ್ಟೆಗಳನ್ನು ಬೇಯಿಸುವಾಗ ಒಳಗಣ ಹಳದಿ ಅಂಚಿನಲ್ಲಿ ಕಪ್ಪಾದಷ್ಟೂ ಹೆಚ್ಚು ವಿಷಕಾರಿಯಾಗಿದೆ ಎಂದರ್ಥ. ಹಾಗಾಗಿ ಆಹಾರತಜ್ಞರು ಮೊಟ್ಟೆಯನ್ನು ಕೇವಲ ಒಂದು ನಿಮಿಷದ ಅವಧಿಗೆ ಮಾತ್ರ ಬೇಯಿಸಲು ಸಲಹೆ ನೀಡುತ್ತಾರೆ. ಅಲ್ಲದೇ ಮೊಟ್ಟೆಯನ್ನು ಇನ್ನಾವ ರೂಪದಲ್ಲಿ ಅಡುಗೆ ಮಾಡಿದರೂ, ಅಂದರೆ ಆಮ್ಲೆಟ್, ಎಗ್ ಬುರ್ಜಿ, ಎಗ್ ಮಸಾಲಾ ಮೊದಲಾದವುಗಳನ್ನು ಬಿಸಿಯಿದ್ದಂತೆಯೇ ಸೇವಿಸಬೇಕು. ಒಮ್ಮೆ ತಣಿದ ಬಳಿಕ ಮರುಬಿಸಿ ಮಾಡಲೇಬಾರದು. ಏಕೆಂದರೆ ಮರುಬಿಸಿ ಮಾಡಿದಾಗ ಇದರಲ್ಲಿ ಹಲವು ವಿಷಕಾರಿ ವಸ್ತುಗಳು ಉತ್ಪನ್ನವಾಗಿ ಹೊಟ್ಟೆಯನ್ನು ಕೆಡಿಸುತ್ತವೆ.

೭) ಸೆಲೆರಿ ಸೊಪ್ಪು
ಸೆಲೆರಿ ಸೊಪ್ಪು
ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುವ ಸೆಲೆರಿ ಸೊಪ್ಪು ಸಹಾ ನೈಟ್ರೇಟುಗಳನ್ನು ಹೊಂದಿದೆ. ಸಾಮಾನ್ಯವಾಗಿ ಸೂಪ್ ಮಾಡಲು ಈ ಸೊಪ್ಪನ್ನು ಉಪಯೋಗಿಸಲಾಗುತ್ತದೆ. ಹೆಚ್ಚುವರಿ ಸೂಪ್ ಫ್ರಿಜ್ಜಿನೊಳಗಿರಿಸಿ ನಾಳೆಗಾಗಿ ಇಡುತ್ತಾರೆ. ಆದರೆ ಮರುಬಿಸಿ ಮಾಡಿದ ಸೂಪ್ ವಿಷಯುಕ್ತವಾಗಿರುವುದರಿಂದ ಇದನ್ನು ಸೇವಿಸದಿರುವುದು ಉತ್ತಮ.