ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜನವರಿ 17, 2018

ಯು.ಎ.ಇ. ಕಾರು ಮಾಲಿಕರಿಗೆ ಶುಭಸುದ್ದಿ-ಹೊಸ ಟೈರುಗಳನ್ನು ಐದು ವರ್ಷ ಬಳಸಬಹುದು

-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.

ಯು.ಎ.ಇ.ಯಲ್ಲಿರುವ ಕಾರುಗಳನ್ನು ವರ್ಷಕ್ಕೊಂದು ಬಾರಿ ಪಾಸಿಂಗ್ ಮಾಡಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಸರ್ಕಾರದ ಅಧಿಕೃತ ಟೆಸ್ಟಿಂಗ್ ಸೆಂಟರ್ ನಲ್ಲಿ ಮಾತ್ರವೇ ವಾಹನಗಳನ್ನು ಪಾಸಿಂಗ್ ಮಾಡಿಸಬಹುದು. ಕಳೆದ ವರ್ಷ ಆರ್.ಟಿ.ಏ (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ) ಸಂಸ್ಥೆ ಹೊರಡಿಸಿದ ಕಟ್ಟಳೆಯ ಪ್ರಕಾರ ಕಾರಿಗೆ ಅಳವಡಿಸಿರುವ ಟೈರು ಮೂರು ವರ್ಷ ಮಾತ್ರವೇ ಹಳೆಯದಾಗಿರಬಹುದು. ಆರ್ ಟಿ. ಎ. ದೂರವಾಣಿ ಸಂಖ್ಯೆ 8009090 ಗೆ ಕರೆ ಮಾಡಿ ಈ ವಿಷಯ ವಿಚಾರಿಸಿದರೂ (ವಿಚಾರಿಸಲು ಅತ್ತ ಕಡೆ ಯಾರಾದರೂ ಉತ್ತರಿಸಬೇಕಾದರೆ ಸುಮಾರು ಇಪ್ಪತ್ತರಿಂದ ನಲವತ್ತು ನಿಮಿಷವಾದರೂ ತಾಳ್ಮೆಯಿಂದ ಕಾಯಬೇಕಾಗುತ್ತದೆ) ಟೈರು ಮೂರು ವರ್ಷ ಎಂದೇ ಉತ್ತರ ಸಿಗುತ್ತದೆ.

ನನ್ನ ಕಾರಿನ ಟೈರು 2015ರಲ್ಲಿ ತಯಾರಾಗಿದ್ದು 2018ರಲ್ಲಿ ಪಾಸ್ ಮಾಡಲಾರರು ಎಂಬ ಎಂದು ಟೈರು ಮಾರುವ ಅಂಗಡಿಗಳಲ್ಲಿ ಮಾಹಿತಿ ಸಿಕ್ಕಿದ್ದರಿಂದ ಹೊಸ ಟೈರುಗಳನ್ನು ಅನಿವಾರ್ಯವಾಗಿ ಹಾಕಿಸಬೇಕಾಗಿತ್ತು. ಹಾಗಾಗಿ ಕೊಂಚ ಹುಡುಕಾಟ ನಡೆಸಿದಾಗ ಟೈರ್ ಪ್ಲಸ್ ಎಂಬ ಸಂಸ್ಥೆ ಎರಡು ಹೊಸ ಟೈರುಗಳನ್ನು ಕೊಂಡರೆ ಎರಡು ಉಚಿತ ಎಂಬ ಪ್ರಲೋಭನೆ ಒಡ್ಡಿತ್ತು. ಅದೂ ಮಿಶೆಲಿನ್ ಸಂಸ್ಥೆಯ ಟಿಗಾರ್ ಎಂಬ ಸರ್ಬಿಯಾ ದೇಶದ ನಿರ್ಮಿತ ಉತ್ತಮ ಟೈರು. ನಾಲ್ಕು ಟೈರುಗಳನ್ನು ಒಟ್ಟಿಗೇ ಕೊಂಡರೆ ಚೀನಾದ ಟೈರಿನ ಬೆಲೆಯಲ್ಲಿಯೇ ಸಿಗುವುದಾದರೆ ಏಕೆ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ಟೈರ್ ಪ್ಲಸ್ ಅಂಗಡಿಗೆ ನಾನು ಮತ್ತು ಸ್ನೇಹಿತರಾದ ಬಸವರಾಜು ಲಗ್ಗೆಯಿಟ್ಟೆವು.

ಆದರೆ ಇವರು ಮಾರುವ ಟೈರುಗಳು ಏಪ್ರಿಲ್ 21016 ರಲ್ಲಿ ತಯಾರಾದವು. ಇವುಗಳನ್ನು ಹಾಕಿಸಿದರೆ ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು ಇನ್ನೂ ಒಂದೂವರೆ ವರ್ಷ ಮಾತ್ರವೇ ಸಿಗುತ್ತದಲ್ಲಾ ಎಂದು ಟೈರ್ ಪ್ಲಸ್ ವ್ಯಕ್ತಿಯಲ್ಲಿ ವಿಚಾರಿಸಿದರೆ ಅವರು ’ನಮ್ಮ ಟೈರುಗಳನ್ನು ಆರ್ ಟಿ. ಎ ಐದು ವರ್ಷಗಳ ಕಾಲ ಬಳಸಲು ಅನುಮೋದಿಸಿದೆ’ ಎಂದು ಕೆಳಗಿನ ಬ್ರೋಷರ್ ನೀಡಿದರು.


ಅನುಮಾನದಿಂದ ನಾವು ಆರ್ ಟಿ. ಎ ಗೆ ಕರೆ ಮಾಡಿ ವಿಚಾರಿಸಿದರೂ ’ಮೂರು ವರ್ಷವೇ’ ಎಂಬ ಉತ್ತರ ಸಿಕ್ಕಿತು. ಒಂದೂವರೆ ವರ್ಷಕ್ಕೇ ಆದರೂ ಚಿಂತೆಯಿಲ್ಲ ಟೈರು ಅತ್ಯುತ್ತಮ ಗುಣಮಟ್ಟ ಹೊಂದಿದ್ದರಿಂದ ಇರಲಿ ಎಂದು ಹೊಸ ಟೈರುಗಳನ್ನು ಹಾಕಿಸಿಕೊಂಡು ಬಂದೆವು. ಆದರೆ ಬಸವರಾಜು ಮಾತ್ರ ಸುಲಭಕ್ಕೆ ಒಪ್ಪದೇ ಆರ್ ಟಿ.ಎ ಗೆ ಮತ್ತೊಮ್ಮೆ ಕರೆ ಮಾಡಿ ತಮ್ಮ ಐವತ್ತು ನಿಮಿಷಗಳನ್ನು ವ್ಯಯಿಸಿ ನಾಲ್ಕಾರು ಪ್ರತಿನಿಧಿಗಳೊಂದಿಗೆ ಮಾತನಾಡಿ ’ಮೂರು ವರ್ಷದ’ ಹಳೆರಾಗವನ್ನು ಮತ್ತೊಮ್ಮೆ ಹಾಡಿಸಿಕೊಂಡರು. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಲಹಾ ತಾಣಕ್ಕೆ ಈಮೇಲ್ ಮಾಡಿ ಎಂದು ಆ ಪ್ರತಿನಿಧಿ ಹೇಳಿ ತಮ್ಮ ಮೇಲೆ ಎರಗಿದ್ದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು.

ಆದರೂ, ಈ ಟೈರ್ ಪ್ಲಸ್ ಸಂಸ್ಥೆ ಯು.ಎ.ಇ.ಯ ಹೆಸರಾಂತ ಸಂಸ್ಥೆಯಾಗಿದ್ದು ಸುಮ್ಮಸುಮ್ಮನೇ ಸುಳ್ಳು ಹೇಳಲಾರದು ಎನ್ನಿಸಿತು. ಅಲ್ಲದೇ ಇಲ್ಲದ ಅನುಮೋದನೆಯನ್ನು ಇದೆ ಎಂದು ತಿಳಿಸಿದರೆ ಇವರನ್ನು ಇಲ್ಲಿನ ಕಾನೂನು ಬಿಡುತ್ತದೆಯೇ ಅಂಬ ಅನುಮಾನವೂ ಬರತೊಡಗಿತು. ಯಾವುದಕ್ಕೂ ಇರಲಿ, ಎಂದು ಆ ಪ್ರತಿನಿಧಿ ತಿಳಿಸಿದಂತೆ ಆರ್ ಟಿ ಎ ಸಲಹಾ ಈಮೇಲ್ ವಿಳಾಸಕ್ಕೆ ಎಲ್ಲಾ ವಿಷಯವನ್ನು ತಿಳಿಸಿ ಈಮೇಲ್ ಬರೆದೆ. ಇದರ ಸಾರಾಂಶವೆಂದರೆ ಕಾರಿಗೆ ಹೊಸ ಟೈರು ಹಾಕಿಸಿದರೆ ಆರ್.ಟಿ.ಎ. ಪ್ರಕಾರ ಮೂರು ವರ್ಷ, ಆದರೆ ಟೈರ್ ಪ್ಲಸ್ ಪ್ರಕಾರ ಐದು ವರ್ಷ ಮಾತ್ರ ಬಳಸಬಹುದು, ಯಾರು ಸರಿ? ನಾವು ಯಾರನ್ನು ನಂಬಬಹುದು? ಒಂದು ವೇಳೆ ಮೂರು ವರ್ಷ ಸರಿಯಾದ ಮಾಹಿತಿಯಾದರೆ ಐದು ವರ್ಷ ಎಂದು ಟೈರ್ ಪ್ಲಸ್ ಜಾಹೀರಾತು ನೀಡಿ ಟೈರುಗಳನ್ನು ಮಾರುವುದು ವಂಚನೆಯಲ್ಲವೇ?

ಮೊದಲ ಉತ್ತರ ಮಾಮೂಲಿಯಂತೆ "ಮೂರು ವರ್ಷ" ದ ಅದೇ ರಾಗ ಅದೇ ಹಾಡೇ ಆಗಿತ್ತು. ಮತ್ತೊಮ್ಮೆ ಈ ವಿವರಗಳನ್ನು ನಿಮ್ಮ ತಾಂತ್ರಿಕ ವಿಭಾಗಕ್ಕೆ ಕಳುಹಿಸಿ ಅವರಿಂದ ಸ್ಪಷ್ಟನೆ ಬರಲಿ ಎಂದು ಮರುತ್ತರ ಬರೆದೆ. ಮರುದಿನವೇ ತಾಂತ್ರಿಕ ವಿಭಾಗದಿಂದ ಸ್ಪಷ್ಟವಾದ ಉತ್ತರ ಬಂದಿದೆ. ಈಮೇಲ್ ನ ಯಥಾವತ್ ಪ್ರತಿ ಇಲ್ಲಿದೆ:


ಈ ಈಮೇಲ್ ಪ್ರಕಾರ ಪಾಸಿಂಗ್ ಪರೀಕ್ಷೆಯಲ್ಲಿ ಕಾರು ತೇರ್ಗಡೆಯಾಗಲು ಟೈರುಗಳು ನಿರ್ಮಾಣ ದಿನಾಂಕದಿಂದ ಐದು ವರ್ಷಗಳು ಹಾಗೂ ಟೈರುಗಳ ಸವೆತದ ಬಳಿಕವೂ ಕನಿಷ್ಟ 1.6 ಮಿಮಿ ನಷ್ಟು ರಬ್ಬರ್ ಉಳಿದುಕೊಂಡಿರಬೇಕು ಹಾಗೂ ಇವುಗಳು ಯಾವುದೇ ನ್ಯೂನ್ಯತೆಯನ್ನು ಹೊಂದಿರಬಾರದು. ಒಂದು ವೇಳೆ ಪರೀಕ್ಷಿಸುವ ಇನ್ಸ್ ಪೆಕ್ಟರುಗಳಿಗೆ ಯಾವುದೋ ನ್ಯೂನ್ಯತೆ ಕಂಡುಬಂದರೂ ಅವರು ಈ ಅರ್ಹತೆಗಳಿದ್ದರೂ ಟೈರುಗಳನ್ನು ಸುರಕ್ಷಿತವಲ್ಲ ಎಂಬ ಕಾರಣದಿಂದ ನಾಪಾಸು ಮಾಡಬಹುದು.

ಟೈರು ಯಾವ ದಿನಾಂಕದಂದು ನಿರ್ಮಾಣವಾಗಿದೆ ಎಂದು ಕಂಡುಕೊಳ್ಳುವ ವಿಧಾನ ಹೀಗಿದೆ:






ಟೈರಿನ ಒಂದು ಭಾಗದಲ್ಲಿ ಈ ದಿನಾಂಕವನ್ನು ನಾಲ್ಕು ಅಂಕೆಗಳಲ್ಲಿ ಮುದ್ರಿಸಿರುತ್ತಾರೆ. ಮೊದಲ ಎರಡು ಅಂಕೆಗಳು ಆ ವರ್ಷದ ವಾರವನ್ನೂ, ನಂತರದ ಎರಡು ಅಂಕೆಗಳು ಇಸವಿಯನ್ನೂ ತಿಳಿಸುತ್ತದೆ. ಕೆಳಗಿನ ಚಿತ್ರದಲ್ಲಿ ವಿವರಿಸುವಂತೆ ಈ ಟೈರು 4708 ಎಂಬ ನಾಲ್ಕಂಕಿ ಹೊಂದಿದೆ. ಅದರ ಪ್ರಕಾರ 47 ಅಂದರೆ 47ನೇ ವಾರ. ಇದನ್ನು ನಾಲ್ಕರಿಂದ ಭಾಗಿಸಿದರೆ ತಿಂಗಳು ಸಿಗುತ್ತದೆ. 47/4=11.75 ಅಂದರೆ ನವೆಂಬರ್ ತಿಂಗಳ ಮೂರನೆಯ ವಾರ, 2008ನೆಯ ಇಸವಿಯಲ್ಲಿ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರ ನಿಮ್ಮ ಕಾರಿನ ಟೈರು ಯಾವ ವರ್ಷ ತಯಾರಾಗಿದೆ ಎಂದು ಕಂಡುಕೊಳ್ಳಬಹುದು. ಆರ್.ಟಿ. ಎ ಪ್ರಕಾರ ಈ ದಿನಾಂಕದಿಂದ ಐದುವರ್ಷದವರೆಗೆ ಈ ಟೈರುಗಳನ್ನು ಉಪಯೋಗಿಸಬಹುದು. ಒಂದು ವೇಳೆ ಪಾಸಿಂಗ್ ಆದ ಬಳಿಕ ಈ ಟೈರು ಮುಂದಿನ ಪಾಸಿಂಗಿಗೂ ಮೊದಲೇ ಅಂತಿಮ ದಿನಾಂಕ ದಾಟವುದಿದ್ದರೆ ಹಾಗೂ ಆ ದಿನಾಂಕ ದಾಟಿದರೂ ಟೈರು ಬದಲಿಸದೇ ಇದ್ದರೆ ಹಾಗೂ ಒಂದು ವೇಳೆ ಅಪಘಾತ ಅಥವಾ ಇನ್ನಾವುದೋ ಕಾರಣಕ್ಕೆ ಕಾರಿನ ತಪಾಸಣೆ ನಡೆದು ಟೈರಿನ ಅವಧಿ ಮುಗಿದಿರುವುದು ತಿಳಿದುಬಂದರೆ ಕಾರಿನ ಮಾಲಿಕ ತಪ್ಪಿತಸ್ಥನಾಗಬೇಕಾಗುತ್ತದೆ. ಬಳಿಕ ಏನಾಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ.

ಟೈರಿನಲ್ಲಿ ಸವೆತದ ಬಳಿಕವೂ 1.6mm ನಷ್ಟು ರಬ್ಬರ್ ಉಳಿದಿರಬೇಕು ಎಂಬ ಇನ್ನೊಂದು ಕಟ್ಟಳೆ ಇದೆ. 1.6mm ಕಂಡುಕೊಳ್ಳುವುದು ಹೇಗೆ? ಟೈರಿನ ಚಪ್ಪಟೆ ಭಾಗದ ನಡುವೆ ಇರುವ ಜಾಗದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಉಬ್ಬುಗಳಿರುತ್ತವೆ. ಇವಕ್ಕೆ ಟೈರ್ ವೇರ್ ಇಂಡಿಕೇಟರ್ಸ್ ಎಂದು ಕರೆಯುತ್ತಾರೆ.

ಈ ಭಾಗವನ್ನು ತಳವೆಂದು ಪರಿಗಣಿಸಿ ಅಲ್ಲಿಂದ ಎಷ್ಟು ದಪ್ಪಕ್ಕೆ ಟೈರಿನ ರಬ್ಬರ್ ಉಳಿದಿದೆ ಎಂದು ಅಳೆಯಬೇಕು. ಇದನ್ನು ಅಳೆಯಲು ಟೈರ್ ಡೆಪ್ತ್ ಗೇಜ್ ಎಂಬ ಉಪಕರಣವನ್ನು ಎಲ್ಲಾ ಟೈರು ಅಂಗಡಿಯವರು ಕಡ್ಡಾಯವಾಗಿ ಇರಿಸಿರಬೇಕು ಹಾಗೂ ಗ್ರಾಹಕರು ಕೇಳಿದಾಗ ಇಲ್ಲವೆನ್ನದೇ ಕೊಡಬೇಕು. ಇದರ ಮೂಲಕ ಟೈರಿನಲ್ಲಿ ಉಳಿದಿರುವ ರಬ್ಬರ್ 1.6mm ಗಿಂತಲೂ ಹೆಚ್ಚಿದ್ದರೆ ಟೈರು ಪಾಸ್ ಆಗುತ್ತದೆ. ಪಾಸ್ ಮಾಡಬೇಕೆಂದೇ  ನಾವು ಅಳೆಯಬೇಕಿಲ್ಲ, ನಮ್ಮ ಸುರಕ್ಷತೆಗಾಗಿ ಆಗಾಗ ನಾವೇ ಒಂದು ಅಳತೆಪಟ್ಟಿ ಉಪಯೋಗಿಸಿ ಅಂದಾಜು ಒಂದೂವರೆ ಮಿಮಿ ಇದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು.

ಹಾಗಾಗಿ ನಿಮ್ಮ ಕಾರಿಗೆ ಹೊಸ ಟೈರು ಹಾಕಿಸುವುದಾದರೆ ನಿರ್ಮಾಣ ವರ್ಷದಿಂದ ಐದು ವರ್ಷಗಳ ಕಾಲ ಖಂಡಿತವಾಗಿಯೂ ಉಪಯೋಗಿಸಬಹುದು.

ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ನಿಮ್ಮ ಸ್ನೇಹಿತರು ಹಾಗೂ ಆಪ್ತರಿಗೆ ತಿಳಿಸಿ ಈ ಮಾಹಿತಿಯ ಪ್ರಯೋಜನ ಪಡೆಯುವಂತಾಗಲಿ.
ಇಂತಿ ವಂದನೆಗಳು
'ಸರ್ವೇಜನ ಸುಖಿನೋಭವಂತು'
-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ