ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಫೆಬ್ರವರಿ 4, 2018

ಸಕ್ಕರೆ-ಒಂದು ಸುಂದರ ವಿಷ: ಇಲ್ಲಿವೆ ಹತ್ತು ಪುರಾವೆಗಳು

ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
http://tinyurl.com/z6r69mf
ಆಯಸ್ಸು ಕಡಿಮೆಯಾಗುತ್ತದೆ

ನಾವು ಸೇವಿಸುವ ಆಹಾರಗಳಲ್ಲಿ ಹಲವು ನೋಡಲು ಸುಂದರವಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಿವೆ. ಉದಾಹರಣೆಗೆ ಮೈದಾಹಿಟ್ಟು. ಗೋಧಿಯ ನಾರಿನಂಶವನ್ನು ನಿವಾರಿಸಿ ಕೇವಲ ಬಿಳಿಯ ಭಾಗವನ್ನು ಹೊಂದಿರುವ ಮೈದಾ ಮಲಬದ್ದತೆಗೆ ಮೂಲ. ಆದರೆ ನೋಡಲು? ಅಪ್ಪಟ ಬಿಳಿಯ ಬಣ್ಣದ ಅಪ್ಸರೆ, ಇದಕ್ಕೆ ಅಥವಾ ಇದರಿಂದ ತಯಾರಾದ ಖಾದ್ಯಗಳಿಗೆ ಮರುಳಾಗದವರೇ ಇಲ್ಲ. ಅಂತೆಯೇ ಸಕ್ಕರೆ, ಅಜಿನೋಮೋಟೋ, ಅಡುಗೆ ಸೋಡಾ, ಡಬ್ಬಿಯಲ್ಲಿ ಸಿಗುವ ಸಂಸ್ಕರಿತ ಆಹಾರಗಳು, ಮಾರ್ಜಾರಿನ್ ಎಂಬ ಬೆಣ್ಣೆ ಮೊದಲಾದವು ಸಹಾ ನೋಡಲು  ಸುಂದರವಾದ ವಿಷಗಳಾಗಿವೆ.

ಇಂದು ಬಿಳಿಯ ಈ ಸಕ್ಕರೆ ಎಂಬ ವಿಷದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ. ಇದು ಏಕೆ ವಿಷವಾಗಿದೆ ಎಂದರೆ ಇದರಲ್ಲಿರುವ ಸಕ್ಕರೆಯ ಅಂಶ ಹೆಚ್ಚು. ಅರೆ, ಸಕ್ಕರೆಯಲ್ಲಿ ಸಕ್ಕರೆ ಅಂಶ ಇಲ್ಲದೇ ಇನ್ನೇನು ಉಪ್ಪಿನಂಶ ಇರುತ್ತೆಯೇ? ಇಲ್ಲಿ ಸಕ್ಕರೆ ಎಂದರೆ ಇದನ್ನು ಸೇವಿಸಿದ ಬಳಿಕ ನಮ್ಮ ರಕ್ತಕ್ಕೆ ಸೇರುವ ಗ್ಲುಕೋಸ್ ಪ್ರಮಾಣ. ಇದು ನಮಗೆ ಅಗತ್ಯವಿರುವುದಕ್ಕಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದೇ ನಿಜವಾದ ತೊಂದರೆ. ಇದು ಅನಗತ್ಯವಾದ ಕ್ಯಾಲೋರಿಗಳನ್ನು ತುಂಬಿಸುವ ಮೂಲಕ ನಮ್ಮ ದೇಹದ ವಿವಿಧ ವ್ಯವಸ್ಥೆಗಳನ್ನು ಏರುಪೇರುಗೊಳಿಸುತ್ತದೆ. ಪ್ರಮುಖವಾಗಿ ಮಧುಮೇಹ ಇದ್ದವರಿಗೆ ತಾಳಲು ಸಾಧ್ಯವೇ ಇಲ್ಲದಷ್ಟು ಹೆಚ್ಚಿನ ಗ್ಲುಕೋಸ್ ಸೇರಿಸುವುದರಿಂದ ಮಧುಮೇಹಿಗಳು ಸಕ್ಕರೆಯನ್ನೇ ತಿನ್ನಬಾರದು ಎಂದು ವೈದ್ಯರು ಕಟ್ಟಪ್ಪಣೆ ಮಾಡುತ್ತಾರೆ. ಆದರೆ ಮಧುಮೇಹಿಗಳು ತಿನ್ನಬಹುದಾದ ಅಂದರೆ ರಕ್ತದಲ್ಲಿ ನಿಧಾನವಾಗಿ ಮಿಳಿತವಾಗುವ ಇತರ ಸಿಹಿಗಳನ್ನು ತಿನ್ನಬಹುದು. ಸಕ್ಕರೆಯಲ್ಲಿನ ಗ್ಲೂಕೋಸ್ ಅಪಾರವಾಗಿದ್ದರೆ ಅದು ಹೆಚ್ಚಾಗಿ ಬಾಧಿಸುವುದು ನಮ್ಮ ಯಕೃತ್ ಅನ್ನು. ಇದರಿಂದ ಕ್ಯಾನ್ಸರ್, ಹೃದಯದ ತೊಂದರೆ, ಸ್ಥೂಲಕಾಯ ಮೊದಲಾದ ತೊಂದರೆಗಳು ನಿಧಾನವಾಗಿ ಎದುರಾಗುತ್ತವೆ.
 
ಸಕ್ಕರೆ ಸೇರಿಸಿ ತಯಾರಾದ ಸಿಹಿತಿಂಡಿಗಳಲ್ಲಿ ಅಪಾರವಾದ ಗ್ಲೂಕೋಸ್ ಇರುತ್ತದೆ. ಗಾಬರಿಪಡಿಸುವ ಅಂಶವೆಂದರೆ ಕೋಲಾಗಳಂತಹ ಲಘುಪಾನೀಯಗಳಲ್ಲಿ ಸಾಮಾನ್ಯ ಸಕ್ಕರೆಯ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ. ಹೌದು, ಇರಬಹುದು, ಸಕ್ಕರೆ ಸಿಹಿಯೇ, ತಿಂದರೇನೀಗ? ನಾವೆಲ್ಲಾ ಚಿಕ್ಕಂದಿನಿಂದ ತಿನ್ನುತ್ತಾ ಬಂದಿಲ್ಲವೇ? ನಮಗೇನು ರೋಗ ಬಡಿದಿದೆ? ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾದ ಹತ್ತು ಉತ್ತರಗಳು ನಿಮ್ಮ ಇದುವರೆಗಿನ ನಂಬಿಕೆಯನ್ನೇ ಅಲ್ಲಾಡಿಸುತ್ತವೆ. ಕುತೂಹಲ ಮೂಡಿತೇ? ಕೊನೆಯವರೆಗೆ ನೋಡುತ್ತಾ ಹೋಗಿ:
ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು
೧) ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು.
ಸಕ್ಕರೆಯಲ್ಲಿ ಬೀಟಾ ಕ್ಯಾಟೆನಿನ್ (β-catenin) ಎಂಬ ಪೋಷಕಾಂಶವಿದೆ. ಇದು ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡದು. ಆದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯಲ್ಲಿರುವ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಈ ಕಣ ಶಕ್ತಿಹೀನಗೊಳಿಸುತ್ತಾ ಬರುತ್ತದೆ. ಅಂದರೆ ಯಾವುದಾದರೂ ಜೀವಕೋಶ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಸಕ್ಕರೆ ಕಡಿಮೆ ತಿನ್ನುವವರಿಗಿಂತ ಹೆಚ್ಚಿರುತ್ತದೆ. ಒಂದು ವೇಳೆ ಕ್ಯಾನ್ಸರ್ ಈಗಾಗಲೇ ಆವರಿಸಿದ್ದರೆ ಜೀವಂತವಿರುವ ದಿನಗಳನ್ನು ಲೆಕ್ಕ ಹಾಕಿ ಜೀವಿಸುತ್ತಿರುವವರ ಲೆಕ್ಕವನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ.
ಸ್ಥೂಲಕಾಯ ಎದುರಾಗುತ್ತದೆ
೨) ಸ್ಥೂಲಕಾಯ ಎದುರಾಗುತ್ತದೆ.
ಸಕ್ಕರೆಯ ಸಿಹಿ ಯಾರಿಗೆ ಇಷ್ಟವಿಲ್ಲ? ಆದರೆ ಈ ಸಿಹಿಯೇ ಸ್ಥೂಲಕಾಯಕ್ಕೂ ಮೂಲವಾಗಿದೆ. ಮಕ್ಕಳಿಂದ ಹಿರಿಯರವರೆಗೆ ಸಕ್ಕರೆಯನ್ನು ಬೆಳಗ್ಗಿನಿಂದ ರಾತ್ರಿಯವರೆಗಿನ ವಿವಿಧ ಭಕ್ಷ್ಯ, ಪಾನೀಯಗಳ ಮೂಲಕ ಸೇವಿಸಿರುವ ಪರಿಣಾಮದಿಂದ ದೇಹದಲ್ಲಿ ಆಗಾಧ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿ ಸ್ಥೂಲಕಾಯ ಆವರಿಸಿರುತ್ತದೆ. ಅದರಲ್ಲೂ ಕೊಬ್ಬು ಇಡಿಯ ದೇಹ ತುಂಬಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸುವಲ್ಲಿ ಸಕ್ಕರೆಯ ದೇಣಿಗೆ ಬಹಳ ಹೆಚ್ಚು.
ಮಧುಮೇಹ ಆವರಿಸುತ್ತದೆ
೩) ಮಧುಮೇಹ ಆವರಿಸುತ್ತದೆ
ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮುಂದೆ ಯಾವುದೋ ವಯಸ್ಸಿನಲ್ಲಿ ಬರಬೇಕಾಗಿದ್ದ ಮಧುಮೇಹ ಚಿಕ್ಕವಯಸ್ಸಿಗೇ ವಕ್ಕರಿಸುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಹೆಚ್ಚಿರುತ್ತದೆ ಎಂದರೆ ಅದನ್ನು ಕೊಳೆಸಿದರೆ ವಿಸ್ಕಿ ಎಂಬ ಮದ್ಯವಾಗಿ ಪರಿವರ್ತಿತವಾಗುತ್ತದೆ.
ಸಕ್ಕರೆಗೆ ದಾಸರನ್ನಾಗಿಸುತ್ತದೆ
೪) ಸಕ್ಕರೆಗೆ ದಾಸರನ್ನಾಗಿಸುತ್ತದೆ.
ಸಕ್ಕರೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಂತೆ ಸಕ್ಕರೆಗೆ ದಾಸರಾಗುವ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚು ಕಡಿಮೆ ನಾವೆಲ್ಲಾ ಈ ಬಿಳಿಯ ಸಕ್ಕರೆಗೆ ಈಗಾಗಲೇ ದಾಸರಾಗಿರಲೂ ಬಹುದು. ಏಕೆಂದರೆ ನಮಗೆ ಸಕ್ಕರೆ ಅಥವಾ ಸಿಹಿ ಇಲ್ಲದ ಊಟ ಸೇರುವುದೇ ಇಲ್ಲ. ಈ ದಾಸ್ಯ ಹೆಚ್ಚಾದರೆ ಕೊಕೇಯ್ನ್, ಗಾಂಜಾ, ಮಾರಿಯುವಾನಾ (marijuana) ಮೊದಲಾದವುಗಳಿಗೆ ದಾಸರಾದಷ್ಟೇ ಮಾರಕವಾಗಿ ಪರಿಣಮಿಸಬಹುದು.
ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ
೫) ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ.
2012ರಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಸಕ್ಕರೆಯನ್ನು ಸೇವಿಸುತ್ತಾ ಬಂದವರಲ್ಲಿ ಸ್ಮರಣಶಕ್ತಿ ಕುಂದುತ್ತಾ ಬಂದಿದೆ. ಅಲ್ಲದೇ ಒಟ್ಟಾರೆ ಆರೋಗ್ಯವೂ ಬಾಧೆಗೊಳಗಾಗಿದೆ.
ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ
೬) ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ.
ದೇಹದಲ್ಲಿರುವ ಸಕ್ಕರೆ ಮಾರಕ ಏಡ್ಸ್ ರೋಗಕ್ಕೆ ಕಾರಣವಾಗುವ ಹೆಚ್ ಐ ವಿ ವೈರಸ್ಸುಗಳ ಪತ್ತೆಗೆ ಅಡ್ಡಿಪಡಿಸುತ್ತದೆ. ಏಕೆಂದರೆ ಈ ವೈರಸ್ಸುಗಳ ಸುತ್ತಾ ಸಕ್ಕರೆಯ ಕಣಗಳು ಸುತ್ತವರೆದಿದ್ದು ಪರೀಕ್ಷೆ ಇದನ್ನು ಸಕ್ಕರೆಯ ಕಣ ಎಂದೇ ಪರಿಗಣಿಸುತ್ತದೆ. ಪರಿಣಾಮವಾಗಿ ಹೆಚ್ ಐ ವಿ ಸೋಂಕು ಹರಡುವುದನ್ನು ತಡೆಯದೇ ಮಾರಕ ರೋಗ ಉಲ್ಬಣಾವಸ್ಥೆ ತಲುಪಲು ಪರೋಕ್ಷವಾಗಿ ನೆರವಾಗುತ್ತದೆ.
ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ
೭) ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
2013ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೇಹದಲ್ಲಿ ಸಕ್ಕರೆಯ ಅಂದರೆ ಸಕ್ಕರೆಯ ಮೂಲಕ ಆಗಮನವಾದ ಗ್ಲುಕೋಸ್ ಪ್ರಮಾಣ ಹೆಚ್ಚಿದಷ್ಟೂ ಹೃದಯದ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆಗಾಧವಾದ ಪ್ರಮಾಣದ ಗ್ಲುಕೋಸ್ ಬಂದರೆ ಅದಕ್ಕೊಂದು ಗತಿಗಾಣಿಸಬೇಕಲ್ಲ, ಈ ಆಗಾಧ ಪ್ರಮಾಣವನ್ನು ಎಲ್ಲೆಡೆ ಸಾಗಿಸಲು ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ದೇಹದ ತುದಿತುದಿಗಳಿಗೆ ರಕ್ತದ ಮೂಲಕ ಕಳುಹಿಸಬೇಕಾಗುತ್ತದೆ. ಹೀಗೆ ಅತಿ ಭಾರ ಅಥವಾ ಓವರ್ ಲೋಡ್ ಆದ ಹೃದಯ ಆಯಸ್ಸಿಗೂ ಮುನ್ನವೇ ಶಿಥಿಲಗೊಳ್ಳುತ್ತದೆ.
ಯಕೃತ್ ಹಾನಿಗೊಳಗಾಗುತ್ತದೆ
೮) ಯಕೃತ್ ಹಾನಿಗೊಳಗಾಗುತ್ತದೆ.
ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.
ಹೆಚ್ಚಿನ ಸಕ್ಕರೆ?
೯) ಹೆಚ್ಚಿನ ಸಕ್ಕರೆ?
ಕೆಲವೊಮ್ಮೆ ಮಕ್ಕಳನ್ನು ಮತ್ತು ಕೆಲವು ವಯಸ್ಕರನ್ನು ತಪಾಸಣೆಗೊಳಿಸಿದ ವೈದ್ಯರು 'sugar high’ ಎಂಬ ಪದವನ್ನು ಉಪಯೋಗಿಸುವುದನ್ನು ಗಮನಿಸಿರಬಹುದು. ಏಕೆಂದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಆತಂಕವನ್ನೇ ವೈದ್ಯರು ಶುಗರ್ ಹೈ ಎಂದು ಕರೆಯುತ್ತಾರೆ. ಈಗ ಕೆಲವು ಔಷಧಿಗಳ ಮೂಲಕ ಅಪಾರವಾದ ಈ ಗ್ಲೂಕೋಸ್ ಗೆ ಒಂದು ದಾರಿ ಕಾಣಿಸಲು ಪ್ರಯತ್ನಿಸಬೇಕಾಗುತ್ತದೆ.

೧೦) ಆಯಸ್ಸು ಕಡಿಮೆಯಾಗುತ್ತದೆ.
ಸಕ್ಕರೆಯ ಅಪಾರ ಪ್ರಮಾಣದ ಸೇವನೆಯಿಂದ ದೇಹದ ವಿವಿಧ ಭಾಗಗಳು ಬಾಧೆಗೊಳಗಾಗಿ ತಮ್ಮ ಕ್ಷಮತೆಯನ್ನು ಕುಗ್ಗಿಸಿಕೊಳ್ಳುವ ಪರಿಣಾಮವಾಗಿ ಒಟ್ಟಾರೆ ಆರೋಗ್ಯ ಮತ್ತು ತನ್ಮೂಲಕ ಆಯಸ್ಸು ಕಡಿಮೆಯಾಗುತ್ತದೆ.

ಈ ವಿಷದಿಂದ ಪಾರಾಗಲು ಏನು ಮಾಡಬೇಕು:
* ಬಿಳಿ ಸಕ್ಕರೆಯ ಬದಲು ಕಂದು ಸಕ್ಕರೆ ಅಥವಾ ಬೆಲ್ಲ ಉಪಯೋಗಿಸಿ. ಬೆಲ್ಲವೂ ಕಪ್ಪು ಅಥವಾ ಕೆಂಪಗಿದ್ದಷ್ಟೂ ಉತ್ತಮ
* ಮಾರುಕಟ್ಟೆಯಲ್ಲಿ ದೊರಕುವ ಸಿಹಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ
* ಶುಭಸಂದರ್ಭಗಳಲ್ಲಿ ನೀಡಲಾಗುವ ಸಿಹಿಗಳು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಂದು ತುಂಡಿನಲ್ಲಿ ಅರ್ಧವನ್ನು ಮಾತ್ರ ತಿನ್ನಿ, ಮತ್ತೆ ಅದರ ಕಡೆಗೆ ನೋಡಲೇಬೇಡಿ.
* ಅಮೇರಿಕ ಹಾರ್ಟ್ ಅಸೋಸಿಯೇಷನ್ ಸಂಸ್ಥೆ ಸೂಚಿಸುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಗರಿಷ್ಟ 6 ಚಿಕ್ಕ ಚಮಚ ಅಥವಾ 100 ಕ್ಯಾಲೋರಿಗಳವರೆಗೆ ಸುರಕ್ಷಿತವಾಗಿ ಸೇವಿಸಬಹುದು. ಅದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ. 
* ಬೇಕರಿಯ ಮೈದಾ ಆಧಾರಿತ ತಿಂಡಿಗಳನ್ನು ಆದಷ್ಟೂ ದೂರ ಮಾಡಿ. ಏಕೆಂದರೆ ಇದರಲ್ಲಿ ನಾರು ಇಲ್ಲದೇ ಇರುವುದು ಮತ್ತು ರುಚಿಗಾಗಿ ಸಕ್ಕರೆ ಹಾಕಿರುವುದು ಅರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ. 
* ಸಾಂಪ್ರಾದಾಯಿಕ ವಿಧಾನದ ಜೋನಿ ಬೆಲ್ಲ, ತಟ್ಟೆ ಬೆಲ್ಲ, ಜೇನು ಮೊದಲಾದವು ಬಿಳಿ ಸಕ್ಕರೆಯ ಬದಲಿಗೆ ಉಪಯೋಗಿಸಬಹುದಾದ ಸಿಹಿಗಳು.
* ಲೋ ಕ್ಯಾಲೋರಿ ಸ್ವೀಟ್ನರ್ ಎಂದು ಮಧುಮೇಹಿಗಳಿಗೆ ಸಿಗುವ ಸಕ್ಕರೆಯಲ್ಲಿ aspertame ಎಂಬ ಹೆಸರಿದೆಯೇ ಗಮನಿಸಿ. ಇದ್ದರೆ ಖಂಡಿತಾ ಕೊಳ್ಳಬೇಡಿ, ಏಕೆಂದರೆ ಇದು ಸಕ್ಕರೆಗಿಂತಲೂ ದೊಡ್ಡ ವಿಷವಾಗಿದೆ. 
* artificial sweetner ಎಂಬ ಹೆಸರು ಹೊತ್ತ ಪೊಟ್ಟಣದ ಸಕ್ಕರೆ ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಅಪಾಯಕಾರಿ.
* ಕೋಲಾ ಮೊದಲಾದ ಲಘುಪಾನೀಯಗಳ ಬದಲು ಲಿಂಬೆರಸ, ಮಜ್ಜಿಗೆ ಸೇವಿಸಿ
* ಪೊಟ್ಟಣಗಳಲ್ಲಿ ಸಿಗುತ್ತಿರುವ ಹಣ್ಣಿನ ರಸಗಳ ಬದಲಿಗೆ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. (ಇವುಗಳನ್ನು ಗುರುತಿಸುವುದು ಸುಲಭ, ಕೃತಕ ಸವಿ ಇರುವ ಪೇಯ ಡ್ರಿಂಕ್ ಎಂಬ ಹೆಸರಿನಲ್ಲಿ ಸಿಗುತ್ತದೆ. ಉದಾಹರಣೆಗೆ ಮ್ಯಾಂಗೋ ಡ್ರಿಂಕ್. ಅದೇ ಮಾನಿನ ರಸ ಮ್ಯಾಂಗೋ ಜ್ಯೂಸ್ ಎಂಬ ಹೆಸರಿನಲ್ಲಿ ಸಿಗುತ್ತದೆ ಹಾಗೂ ಕೊಂಚ ದುಬಾರಿಯಾಗಿರುತ್ತದೆ. ಆರೋಗ್ಯ ಉಳಿಸಿಕೊಳ್ಳಬೇಕು ಎನಿಸಿದರೆ ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ತಾಜಾ ಹಣ್ಣಿನ ರಸವನ್ನೇ ಕೊಳ್ಳಿ. 
* ಬೆಳಗ್ಗಿನ ಉಪಾಹಾರದಲ್ಲಿ ಸಕ್ಕರೆ ಚಿಮುಕಿಸಿ ತಿನ್ನುವ ಅಭ್ಯಾಸ ಕೊನೆಗೊಳಿಸಿ. (ಕೆಲವರಿಗೆ ದೋಸೆ, ಉಪ್ಪಿಟ್ಟು ಮೊದಲಾದವುಗಳನ್ನು ಸಕ್ಕರೆಯ ಜೊತೆ ಸೇವಿಸುವ ಅಭ್ಯಾಸವಿರುತ್ತದೆ)
* ಟೀ ಕಾಫಿ ಮೊದಲಾದ ನಿಮ್ಮ ನೆಚ್ಚಿನ ಪೇಯಗಳಲ್ಲಿ ಸಕ್ಕರೆ ಬದಲಿಗೆ ಕೊಂಚವೇ ಜೇನು ಸೇರಿಸಿ ಕುಡಿಯಬಹುದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ