ಈ ಬ್ಲಾಗ್ ಅನ್ನು ಹುಡುಕಿ
ಭಾನುವಾರ, ಡಿಸೆಂಬರ್ 21, 2008
ಈಗ ಉಗುರಿಗೂ ವಾಚಿನ ಸೌಭಾಗ್ಯ - ಟೈಮೆಕ್ಸ್ ಹೊರತಂದಿದೆ ಹೊಸ ಉಗುರುಗಡಿಯಾರ
ಶನಿವಾರ, ಡಿಸೆಂಬರ್ 20, 2008
ವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ
ಶುಕ್ರವಾರ, ಡಿಸೆಂಬರ್ 19, 2008
ಸೇಬಿನ ಸಿಪ್ಪೆಯ ಬಣ್ಣದಲ್ಲಿಯೇ ಸಂಸ್ಥೆಯ ಲಾಂಛನ : ಜಪಾನ್ ಸಾಧನೆ
ಭಾನುವಾರ, ಡಿಸೆಂಬರ್ 14, 2008
ಅರವತ್ತು ವರ್ಷ ಲೋಹದ ಕಪಾಟಿನಲ್ಲಿ ಜೀವನ ಸವೆಸಿದ ಡಿಯೇನ್ ಓಡೆಲ್
ತಮ್ಮ ಮಗು ಉತ್ತಮ ಜೀವನ ನಡೆಸಬೇಕೆಂದು ಬಯಸುವ ಪಾಲಕರು ಅದಕ್ಕೋಸ್ಕರ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅಮೇರಿಕಾದ ಟೆನೆಸ್ಸೀ ಪ್ರಾಂತದ ಮೆಂಫಿಸ್ ನಗರದ ಓಡೆಲ್ ದಂಪತಿಗಳಿಗೆ 1948 ರಲ್ಲಿ ಡಿಯೇನ್ ಓಡೆಲ್ ಎಂಬ ಸುಂದರ ಹೆಣ್ಣುಮಗು ಜನಿಸಿತ್ತು. ಆದರೆ ಮಗುವಿಗೆ ಕೇವಲ ಮೂರು ವರ್ಷವಾದಾಗ ಉಸಿರಾಟ ತೊಂದರೆ ಕಂಡುಬಂದಿತ್ತು. ವೈದ್ಯಕೀಯ ತಪಾಸಣೆಯ ಬಳಿಕ ಇದೊಂದು ಅತ್ಯಪರೂಪದ ಶ್ವಾಸಕೋಶದ ಬುಲ್ಬೋ ಸ್ಪೈನಲ್ (bulbo-spinal) ಪೋಲಿಯೋ ಎಂದು ತಿಳಿದುಬಂದಿತ್ತು. ಸ್ವಾಭಾವಿಕವಾಗಿ ಉಸಿರಾಡಲು ಕುಂಠಿತಗೊಂಡ ಶ್ವಾಸಕೋಶದ ಸಾಮರ್ಥ್ಯ ಮುಖ್ಯ ಲಕ್ಷಣ. ಆಗ ಲಭ್ಯವಿದ್ದ ಉಪಕರಣವೆಂದರೆ1920ರಲ್ಲಿ ಅಭಿವೃದ್ಧಿ ಪಡಿಸಿದ್ದ ಕೃತಕ ಶ್ವಾಸಕೋಣೆ (negative pressure ventilator).
ಮಗುವನ್ನುಳಿಸಿಕೊಳ್ಳಬೇಕೆಂದರೆ ಕೃತಕ ಕೋಣೆಯ ವಿನಃ ಬೇರೆ ಮಾರ್ಗವಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಆಕೆಯ ಪಾಲಕರು ಒಂದು ಲೋಹದ ಉಸಿರಾಟದ ಉಪಕರಣವನ್ನು ಕೊಂಡು ತಂದರು. ಚಿಕ್ಕವಳಿದ್ದಾಗ ಪ್ರತಿದಿನ ಕೆಲವು ಘಂಟೆಗಳಷ್ಟು ಕಾಲ ಕೃತಕ ಉಸಿರಾಟ ನೀಡಬೇಕಾದ ಅವಶ್ಯಕತೆ ದಿನಕಳೆದಂತೆ ಹೆಚ್ಚಿನ ಘಂಟೆಗಳಿಗೆ ಹೆಚ್ಚುತ್ತಾ ಬಂದಿತು. ಡಿಯೇನ್ ಅವರಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾದಾಗ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಕೃತಕ ಉಸಿರಾಟದ ಕೋಣೆಯಲ್ಲಿರುವುದು ಅನಿವಾರ್ಯವಾಯಿತು.
ಸುಮಾರು ಏಳು ಅಡಿ ಉದ್ದದ ಏಳುನೂರಾ ಐವತ್ತು ಪೌಂಟು ತೂಕದ ಲೋಹಕ ಕಪಾಟೊಂದನ್ನು ಅಡ್ಡ ಮಲಗಿಸಿದಂತೆ ಕಾಣುವ ಈ ಉಪಕರಣ ರೋಗಿಯ ತಲೆಯನ್ನು ಬಿಟ್ಟು ಇಡಿಯ ದೇಹವನ್ನು ತನ್ನೊಳಗಿರಿಸಿಕೊಳ್ಳುತ್ತದೆ. ಕೇವಲ ಹಸ್ತವನ್ನು ಮಾತ್ರ ಉಪಕರಣದಿಂದ ಹೊರಚಾಚಬಹುದು. ಈ ಸ್ಥಿತಿಯಲ್ಲಿಯೇ ಇಡಿಯ ಜೀವನ ಕಳೆಯುವುದು ಹೇಗೆಂಬ ಚಿಂತೆಯಿಂದ ಸಾಮಾನ್ಯದವರು ಕೊರಗಿಯೇ ಸಾಯಬೇಕಾಗಿತ್ತು. ಆದರೆ ಡಿಯೇನ್ ಅವರ ಮನೆಯವರು ತೋರಿದ ಪ್ರೀತಿ, ಸಹಕಾರ, ಬಾಳುವ ಹುಮ್ಮಸ್ಸು ಅವರಿಗೆ ಜೀವಿಸಲು ಪ್ರೇರಣೆ ನೀಡಿತು. ಲೋಹದ ಕಪಾಟು ಬಿಟ್ಟು ಕದಲಲೂ ಸಾಧ್ಯವಿಲ್ಲದ ಆಕೆ ಶಾಲೆಗೆ ಹೋಗುವುದಂತೂ ದೂರದ ಮಾತು. ಶಾಲೆಗೆ ಹೋಗದಿದ್ದರೇನಾಯಿತು? ಶಾಲೆಯನ್ನೇ ಮನೆಗೆ ಕರೆಸಬಹದಲ್ಲಾ, ಆಕೆಯ ಶಿಕ್ಷಕರು ಹಾಗೂ ಸಹಪಾಠಿಗಳು ಆಕೆಯ ಮನೆಗೇ ಬಂದು ಪಾಠ ಹೇಳಿಕೊಟ್ಟು ಹೋಗುತ್ತಿದ್ದರು. ಬರೆಯಲು ಅಸಾಧ್ಯವಾದ ಆಕೆ ಮಾತಿನಲ್ಲಿ ನೀಡಿದ ಉತ್ತರಗಳನ್ನು ಅವರ ಸಹಪಾಠಿಗಳು ಬರೆದುಕೊಳ್ಳುತ್ತಿದ್ದರು. 1965 ರಲ್ಲಿ ಆಕೆ ಹೈಸ್ಕೂಲ್ ಪಾಸಾದರು. ಆ ಬಳಿಕ ಫ್ರೀಡ್-ಹರ್ಡೆಮಾನ್ ವಿಶ್ವವಿದ್ಯಾಲಯದ ಅಂಚೆತೆರಪಿನ ಶಿಕ್ಷಣ ಮೂಲಕ ಪದವಿ ಪಡೆಯಲು ಯತ್ನಿಸಿದರು. ಆದರೆ ಪದವಿ ಪಡೆಯಲು ಅಸಮರ್ಥರಾದರು. ಆದರೆ ಅವರ ಪ್ರಯತ್ನವನ್ನು ಗಮನಿಸಿದ ವಿಶ್ವವಿದ್ಯಾಲಯ 1987 ರಲ್ಲಿ ಆಕೆಗೆ ಗೌರವ ಪದವಿಯನ್ನು ನೀಡಿ ಸನ್ಮಾನಿಸಿತು. ಆ ಪದವಿಯ ಬಳಿಕ ವಿಶ್ವದ ಹಲವು ಸಂಘಟನೆಗಳು ಅವರನ್ನು ಗುರುತಿಸಿದವು. 1992 ರಲ್ಲಿ ವಿಶ್ವ ಮಹಿಳಾ ಪತ್ರಿಕೆ (ವುಮನ್ಸ್ ವರ್ಲ್ಡ್ ಮ್ಯಾಗಜಿನ್) ಪತ್ರಿಕೆಯಲ್ಲಿ ಅವರ ಸವಿಸ್ತಾರ ವರದಿ ಪ್ರಕಟವಾಯಿತು. ಆ ಬಳಿಕ ನಗರದ ಜಾಕ್ಸನ್ ರ್ಓಟರಿ ಕ್ಲಬ್ ಸಂಘಟನೆಯ ಅತ್ಯುನ್ನತ ಗೌರವವಾದ ಪೌಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು.
1991 ರಲ್ಲಿ ಧ್ವನಿ ಅನುಸರಿಸಿ ಸಂದೇಶಗಳನ್ನು ಸ್ವೀಕರಿಸುವ ಕಂಪ್ಯೂಟರ್ ಮುಖಾಂತರ ಆಕೆ ಪುಸ್ತಕವೊಂದನ್ನು ಬರೆಯಲು ಪ್ರಾರಂಭಿಸಿದರು.ಸುಮಾರು ಹತ್ತು ವರ್ಷಗಳ ಸತತ ಪರಿಶ್ರಮದ ಬಳಿಕ ಪ್ರಕಟವಾದ ಆಕೆಯ ಪುಸ್ತಕ - Blinky, Less Light ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡು ದಾಖಲೆ ನಿರ್ಮಿಸಿತು. ಆಗಿನ ಅಮೇರಿಕಾದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆಯವರು ಈ ಪುಸ್ತಕದಿಂದ ಪ್ರಭಾವಿತರಾಗಿ ಆಕೆಯನ್ನು 2001ರ ಕ್ರಿಸ್ಮಸ್ ಗಾಲಾ ಕೂಟದಲ್ಲಿ ವಿಶೇಷ ಅತಿಥಿಯಾಗಿ ಆಹ್ವಾನಿಸಿದರು. ಕೂಟದಲ್ಲಿ ಖ್ಯಾತ ಚಿತ್ರನಟಿ ಜೇನ್ ಸೇಮೂರ್ ಅವರು ಈ ಕೃತಿಯನ್ನು ಉದ್ದೇಶಿಸಿ ಜೀವನದ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಿಸುವ ಕೃತಿ ಎಂದು ಬಣ್ಣಿಸಿದರು.
ಜಗತ್ತಿಗೇ ಮಾದರಿಯಾಗಿ ಸುಮಾರು ಅರವತ್ತೊಂದು ವರ್ಷ ಜೀವಿಸಿದ್ದ ಡಿಯೇನ್ ಕಳೆದ 28 ಮೇ 2008 ರಲ್ಲಿ ನಿಧನರಾದರು. ಮೇ ತಿಂಗಳ ಚಂಡಮಾರುತದಲ್ಲಿ ನಗರದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸರಬರಾಜು ನಿಂತ ಕಾರಣ ಅವರ ಚೇಂಬರ್ ಸಹಾ ಸ್ಥಗಿತಗೊಂಡಿತ್ತು. ಅವರ ಮನೆಯವರು ಯಾವುದೋ ಕಾರಣದಿಂದ ಮನೆಯ ಹೊರಗಿದ್ದು ಸುದ್ದಿ ತಿಳಿದು ಮನೆಗೆ ಕೂಡಲೇ ಬಂದು ಜನರೇಟರ್ ಪ್ರಾರಂಭಿಸಿ
ಉಪಕರಣವನ್ನು ಮರುಪ್ರಾರಂಭಿಸಿದರಾದರೂ ಅಷ್ಟರಲ್ಲಾಗಲೇ ಡಿಯೇನ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 1957 ಹಾಗೂ 1974 ರಲ್ಲಿ ಸಹಾ ವಿದ್ಯುತ್ ವೈಫಲ್ಯದಿಂದ ಅವರ ಉಪಕರಣ ಸ್ಥಗಿತಗೊಂಡಿದ್ದರೂ ಆಗ ಅವರ ಮನೆಯವರು ಜೊತೆಯಲ್ಲಿದ್ದು ಕೃತಕ ಉಸಿರಾಟ ನೀಡಿ ಅವರಿಗೆ ಪ್ರಾಣಾಪಾಯವಾಗದಂತೆ ರಕ್ಷಿಸಿದ್ದರು. ಆದರೆ ಈ ಬಾರಿ ಮಾತ್ರ ಮೂರಕ್ಕೆ ಮುಕ್ತಾಯವಾದ ಡಿಯೇನ್ ಅವರಿಗೆ ಇಡಿಯ ಅಮೇರಿಕಾವೇ ಅಶ್ರುತರ್ಪಣ ನೀಡಿತು.
ಶನಿವಾರ, ಡಿಸೆಂಬರ್ 13, 2008
ಮೈಲೇಜ್ ಹೆಚ್ಚಿಸಲು ಹೆಚ್ಚಿಸಲು ಹೊಸ ತಂತ್ರಜ್ಞಾನ - ಆಶಾಕಿರಣವಾಗಿ ಕಂಡುಬಂದಿರುವ ವಾಪ್ಸ್ಟರ್
ಇಂಧನರಹಿತ ಆಧುನಿಕ ಜಗತ್ತನ್ನು ಊಹಿಸಿಕೊಳ್ಳುವುದು ಕಷ್ಟ. ಇಂದು ಜಗತ್ತಿನಲ್ಲಿ ಲಭ್ಯವಿರುವ ತೈಲನಿಕ್ಷೇಪ ಅಕ್ಷಯಪಾತ್ರೆಯಲ್ಲ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಅದರಂತೆ ಜಗತ್ತಿನಾದ್ಯಂತ ಇಂಧನಕ್ಕೆ ಪರ್ಯಾಯವಾದ ಇತರ ಶಕ್ತಿಮೂಲಗಳನ್ನು ಬಳಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. ಆದರೂ ತೈಲಕ್ಕೆ ಸಮನಾದ ಪರ್ಯಾಯ ಶಕ್ತಿಮೂಲ ಇದುವರೆಗೆ ದಕ್ಕಿಲ್ಲ. ಹಾಗಾಗಿ ಕಡಿಮೆ ಇಂಧನವನ್ನು ಬಳಸುವ ತಂತ್ರಜ್ಞಾನಗಳಿಗೂ ಹೆಚ್ಚಿನ ಮಹತ್ವವಿದೆ. ಹಿಂದಿನ ದಶಕಗಳಲ್ಲಿ ಸರ್ವವ್ಯಾಪಿಯಾಗಿದ್ದ 2-ಸ್ಟ್ರೋಕ್ ಇಂಜಿನ್ ಉಳ್ಳ ವಾಹಗಳು ಇಂದು ಮೂಲೆಗುಂಪಾಗಿ 4-ಸ್ಟ್ರೋಕ್ ಇಂಜಿನ್ ಉಳ್ಳ ವಾಹನಗಳು ಮುಂದೆ ಬಂದಿರುವುದು ಈ ನಿಟ್ಟಿನಲ್ಲಿ ಯಶಸ್ವಿಯಾದ ಒಂದು ಬೆಳವಣಿಗೆ.
ಅಮೇರಿಕಾದ ಫ್ಲೋರಿಡಾದಲ್ಲಿರುವ ಜೆರಾಲ್ಡ್ ರೋವ್ಲೀಯವರು ಈ ನಿಟ್ಟಿನಲ್ಲಿ ಸಾಮಾನ್ಯ 4-ಸ್ಟ್ರೋಕ್ ಇಂಜಿನ್ನುಗಳಿಗೆ ಅಳವಡಿಸಬಹುದಾದ ವಾಪ್ಸ್ಟರ್ (V.A.P.S.T.E.R. -Vaporizing Accessory Producing Superior Tuned Engine Response) ಎಂಬ ಹೆಸರಿನ ಉಪಕರಣವನ್ನು ಸಿದ್ಧಪಡಿಸಿದ್ದಾರೆ. ಈ ಉಪಕರಣ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವ ಮುನ್ನ ಸಾಮಾನ್ಯ ಇಂಜಿನ್ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ಪೆಟ್ರೋಲ್ ಆಧಾರಿತ ಇಂಜಿನ್ನುಗಳಲ್ಲಿ ನಿಜವಾಗಿ ಹೊತ್ತಿ ಉರಿಯುವುದು ಪೆಟ್ರೋಲಿನ ಆವಿ. ಇಂಜಿನ್ನಿನಲ್ಲಿ ಉರಿಯುವ ಪೆಟ್ರೋಲ್ ಆವಿ ಹಾಗೂ ಗಾಳಿಯ ಮಿಶ್ರಣದ ಪ್ರಮಾಣ ಒಂದು ನಿರ್ದಿಷ್ಟ ಮಟ್ಟದಲ್ಲಿದ್ದಾಗ ಮಾತ್ರ ಸ್ಪಾರ್ಕ್ ಪ್ಲಗ್ ನಿಂದ ಹತ್ತಿದ ಕಿಡಿ ಈ ಮಿಶ್ರಣವನ್ನು ಹೊತ್ತಿಸಲು ಸಾಧ್ಯ. ಈ ಕೆಲಸವನ್ನು ಕಾರ್ಬೋರೇಟರ್ ಎಂಬ ಉಪಕರಣದಿಂದ ನಡೆಸಲಾಗುತ್ತದೆ. ಕಾರ್ಬೋರೇಟರ್ ಇಂಜಿನ್ನಿಗೆ ಅಗತ್ಯವಾದ ಪ್ರಮಾಣದ ಪೆಟ್ರೋಲ್ ಹಾಗೂ ಗಾಳಿಯ ಮಿಶ್ರಣವನ್ನು ನೀಡುತ್ತದೆ. ವೇಗ ಹೆಚ್ಚಿಸಬೇಕಾದಾಗ ಕಾರ್ಬೋರೇಟರ್ನ ಕವಾm (ವಾಲ್ವ್)ವನ್ನು ಹೆಚ್ಚಾಗಿ ತೆರೆಯುವುದರಿಂದ ಹೆಚ್ಚಿನ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣ ಇಂಜಿನ್ನಿಗೆ ತಲುಪಿ ಹೆಚ್ಚಿನ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ಕವಾಟದ ಗಾತ್ರವನ್ನು ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಕಾರ್ಯವನ್ನು ವೇಗೋತ್ಕರ್ಷಕ (ಆಕ್ಸಲರೇಟರ್) ಮೂಲಕ ನಿರ್ವಹಿಸಲಾಗುತ್ತದೆ.
ಆದರೆ ಈ ಸಂದರ್ಭದಲ್ಲಿ ಕಾರ್ಬೋರೇಟರಿನಿಂದ ಹೊರಟ ಎಲ್ಲಾ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣ ದಹನವಾಗುವುದಿಲ್ಲ. ಒಂದಿಷ್ಟು ಪ್ರಮಾಣ ದಹನವಾಗದೇ ಹಾಗೇ ಸೈಲೆನ್ಸರ್ ಮೂಲಕ ಹೊರಟು ಹೋಗುತ್ತದೆ. ಆಗ ಇಂಧನ ಕ್ಷಮತೆ ಕಡಿಮೆಯಾಗುತ್ತದೆ. ಕಾರ್ಬೋರೇಟರಿನಿಂದ ಹೊರಟ ಎಲ್ಲಾ ಮಿಶ್ರಣ ದಹನವಾದಾಗ ಮಾತ್ರ ಅತ್ಯಧಿಕ ಇಂಧನ ಕ್ಷಮತೆ ದೊರಕಲು ಸಾಧ್ಯ. ಸಾಮಾನ್ಯವಾಗಿ ಒಂದು ಮೋಟಾರ್ ಬೈಕ್ ನಲವತ್ತು ಕಿ.ಮೀ. ವೇಗದಲ್ಲಿ ಏರಿಳಿತಗಳಿಲ್ಲದೇ ಹೋಗುತ್ತಿದ್ದಾಗ ಮಾತ್ರ ಈ ಕ್ಷಮತೆ ದೊರಕಲು ಸಾಧ್ಯ. ಇದನ್ನೇ ವಾಹನ ಮಾರಾಟಗಾರರು ಲೀಟರಿಗೆ ನೂರು ಕಿ.ಮೀ. ಎಂದು ಪ್ರಚಾರ ಮಾಡಿ ಒಂದು ಮೂಲೆಯಲ್ಲಿ (under standard test conditions) ಎಂದು ಚಿಕ್ಕದಾಗಿ ಬರೆದಿರುತ್ತಾರೆ. ಸ್ಟ್ಯಾಂಡರ್ಡ್ ಟೆಸ್ಟ್ ಕಂಡೀಷನ್ಸ್ ಎಂದರೆ ಅತ್ಯಂತ ಹೆಚ್ಚಿನ ಇಂಧನ ಕ್ಷಮತೆ ಪಡೆಯಬಹುದಾದ ವೇಗ ಹಾಗೂ ಭಾರದ ಸ್ಥಿತಿ. ಆದರೆ ಇದೇ ಸ್ಥಿತಿಗತಿಗಳನ್ನು ಸಾಮಾನ್ಯವಾಗಿ ನಿಜಜೀವನದ ಉಪಯೋಗದಲ್ಲಿ ಪಡೆಯಲು ಸಾಧ್ಯವಿಲ್ಲ. ಆಗ ಇಂಧನ ವ್ಯರ್ಥವಾಗಿ ಹರಿದು ಮೈಲೇಜ್ ಮರೀಚಿಕೆಯಾಗಿಯೇ ಉಳಿಯುತ್ತದೆ.
ಜೆರಾಲ್ಡ್ ರೋವ್ಲೀಯವರ ವಾಪ್ಸ್ಟರ್ ತಂತ್ರಜ್ಞಾನ ಅನಾವಶ್ಯಕವಾಗಿ ದಹಿಸದೇ ಹೊರಹೋಗುವ ಇಂಧನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೂಪಿತವಾಗಿದೆ.
ಈ ತಂತ್ರಜ್ಞಾನದಲ್ಲಿ ಕಾರ್ಬೋರೇಟರಿನಿಂದ ಹೊರm ಇಂಧನ-ಗಾಳಿ ಮಿಶ್ರಣವನ್ನು ಇಂಜಿನ್ನಿಗೆ ತಲುಪುವ ಮೊದಲು ಪ್ರಿಹೀಟ್ (ಮೊದಲೇ ಬಿಸಿಮಾಡಲಾಗುವ) ಮಾಡಲಾಗುತ್ತದೆ. ಇದರಿಂದಾಗಿ ಮಿಶ್ರಣದಲ್ಲಿರುವ ಜಲಜನಕ ಮತ್ತು ಇಂಗಾಲದ ಅಣುಗಳು ಹೆಚ್ಚಿನ ಕೈನೆಟಿಕ್ ಶಕ್ತಿಯನ್ನು ಪಡೆದು ಇಂಜಿನ್ನಿನ ಒಳಗೆ ಶೀಘ್ರವಾಗಿ ದಹ್ಯಗೊಳ್ಳಲು ಅನುವಾಗುತ್ತವೆ. ಪ್ರಿಹೀಟ್ ಮಾಡುವುದರಿಂದ ಇಂಧನದ ಉದ್ದನೆಯ ಸರಪಳಿ (ಮೊಲಿಕ್ಯುಲಾರ್ ಚೈನ್) ತುಂಡಾಗಿ ಸುಲಭವಾಗಿ ದಹ್ಯಗೊಳ್ಳಲು ಸಹಕಾರಿಯಾಗುತ್ತದೆ. ಇದನ್ನೇ ವೇಪರೈಸಿಂಗ್ ಎಂದು ಕರೆಯುತ್ತಾರೆ.
ಆದರೆ ಇಂಧನವನ್ನು ಪ್ರಿಹೀಟ್ ಮಾಡುವುದು ಹೇಗೆ? ಇದರಲ್ಲಿ ಎರೆಡು ವಿಧಾನಗಳಿವೆ. ಮೊದಲನೆಯದು ಇಲೆಕ್ಟ್ರಿಕ್ ಹೀಟರುಗಳನ್ನು ಬಳಸಿ ಬಿಸಿ ಮಾಡುವುದು, ಎರಡನೆಯದು ಇಂಧನ ದಹ್ಯವಾದಾಗ ಉತ್ಪನ್ನವಾಗುವ ಶಾಖವನ್ನು ಉಪಯೋಗಿಸಿಕೊಳ್ಳುವುದು. ಎರೆಡೂ ವಿಧಾನದಲ್ಲಿ ಕೆಲವು ತೊಡಕುಗಳಿವೆ. ಮೊದಲನೆಯದು ಎಲೆಕ್ಟ್ರಿಕ್ ಹೀಟರ್ ಹೆಚ್ಚಿನ ಶಕ್ತಿಯನ್ನು ಬಳಸುವುದರಿಂದ ದೊಡ್ಡ ಬ್ಯಾಟರಿ ಬೇಕಾಗುತ್ತದೆ. ಇದು ಬೇರೆ ರೀತಿಯ ತೊಡಕುಗಳಿಗೆ ಕಾರಣವಾಗುತ್ತದೆ. ಎರಡನೆಯ ವಿಧಾನದಲ್ಲಿ ಕೊಂಚ ಇಂಧನ ದಹ್ಯವಾದ ಬಳಿಕ ಮಾತ್ರ ಶಾಖ ಲಭ್ಯವಾಗುವುದರಿಂದ ವಾಹನದ ಸ್ಟಾರ್ಟಿಂಗ್ ವೇಳೆ ಈ ವಿಧಾನ ಸೂಕ್ತವಲ್ಲ. ಹಾಗಾಗಿ ಎರೆಡೂ ವಿಧಾನಗಳನ್ನು ಬಳಸಿ ಪ್ರಿಹೀಟ್ ಮಾಡಲಾಗುವ ವಿಧಾನ ಅತ್ಯಂತ ಸಮರ್ಪಕ.
ವಾಪ್ಸ್ಟರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಇಂಜಿನ್ನಿನಲ್ಲಿ ಉತ್ಪನ್ನವಾದ ಶಾಖದ ಮರುಬಳಕೆಯಾಗಿ ಹೆಚ್ಚಿನ ಕ್ಷಮತೆ ಪರೋಕ್ಷವಾಗಿ ದಕ್ಕುತ್ತದೆ. ವ್ಯರ್ಥವಾಗಿ ಹೋಗುತ್ತಿದ್ದ ಇಂಧನ ಸಂಪೂರ್ಣವಾಗಿ ದಹಿಸಿ ಹೆಚ್ಚಿನ ಮೈಲೇಜ್ ಪಡೆಯಲು ಸಾಧ್ಯವಾಗುತ್ತದೆ. ಇಂಧನ ಸಂಪೂರ್ಣವಾಗಿ ಉರಿದಿರುವುದರಿಂದ ವಾತಾವರಣಕ್ಕೂ ಅನುಕೂಲಕರ.
ಕಳೆದ ಸುಮಾರು ಎರೆದು ವರ್ಷಗಳಿಂದ ಹಲವಾರು ಮಾದರಿಯ ಕಾರುಗಳಲ್ಲಿ ಈ ವಿಧಾನ ಅಳವಡಿಸಿ ರೋವ್ಲೀಯವರು 40 ರಿಂದ ೫೦ % ಇಂಧನ ಕ್ಷಮತೆ ಹೆಚ್ಚಿರುವುದನ್ನು ನಿರೂಪಿಸಿದ್ದಾರೆ. ಪ್ರಯೋಗಾಲಯದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಈ ತಂತ್ರಜ್ಞಾನ ಕನಿಷ್ಟ ೨೮.೭೧ % ಇಂಧನ ಕ್ಷಮತೆಯನ್ನು ಹೆಚ್ಚಿಸಿರುವುದನ್ನು ಧೃಢೀಕರಿಸಿ ಪ್ರಮಾಣಪತ್ರ ನೀಡಿದೆ. ಆ ಬಳಿಕ ರೋವ್ಲೀಯವರು ಈ ತಂತ್ರಜ್ಞಾನದ ಪೇಟೆಂಟ್ ಸಹಾ ಪಡೆದುಕೊಂಡಿದ್ದಾರೆ.
ಪೆಟ್ರೋಲ್ ಇಂಜಿನ್ನುಗಳಿಗೆ ಸಮರ್ಪಕವೆಂದು ಸಾಬೀತಾಗಿರುವ ಈ ತಂತ್ರಜ್ಞಾನ ಡೀಸೆಲ್ ಇಂಜಿನ್ನುಗಳಿಗೆ ಸಾಧ್ಯವೇ ಎಂದು ಈಗ ರೋವ್ಲೀಯವರು ಸಂಶೋಧನೆ ನಡೆಸುತ್ತಿದ್ದಾರೆ (ಡೀಸೆಲ್ ಇಂಜಿನ್ನುಗಳಲ್ಲಿ ಪೆಟ್ರೋಲ್ ಇಂಜಿನ್ನುಗಳಂತೆ ಸ್ಪಾರ್ಕ್ ಪ್ಲಗ್ ಇರುವುದಿಲ್ಲ, ಬದಲಿಗೆ ಫ್ಯೂಯೆಲ್ ಇಂಜೆಕ್ಟರ್ ಇರುತ್ತದೆ. ಇಲ್ಲಿ ಡೀಸೆಲ್ ಹಾಗೂ ಗಾಳಿಯಮಿಶ್ರಣ ಒತ್ತಡಕ್ಕೆ ಒಳಗಾದಾಗ ಹತ್ತಿ ಉರಿಯುತ್ತದೆ)
ಅತ್ಯಂತ ಸುಲಭ ಹಾಗೂ ದಕ್ಷವಾಗಿ ಕಂಡು ಬರುವ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಮ್ಮ ತಂತ್ರಜ್ಞರು ಮನಸ್ಸು ಮಾಡುವರೇ? ಕಾದು ನೋಡಬೇಕು.