ವಿದೇಶದಿಂದ ಆಮದಾಗುವ ಹಣ್ಣುಗಳ ಮೇಲೆ ಸಂಸ್ಥೆಯ ಹೆಸರಿನ ಚಿಕ್ಕ ಸ್ಟಿಕ್ಕರ್ ಇರುವುದನ್ನು ನೀವು ಗಮನಿಸಿರಬಹುದು. ಚಿಕ್ಕದೊಂದು ಕಾಗದದ ಸ್ಟಿಕ್ಕರ್ ಚೀಟಿಯಿಂದ ಆ ಫಲ ಯಾವ ದೇಶದಿಂದ ಬಂದಿದ್ದೆಂದು ಸ್ಥೂಲವಾಗಿ ಊಹಿಸಿಕೊಳ್ಳಬಹುದು. ಆದರೆ ಕಾಳಸಂತೆಯವರು ನಕಲಿ ಮಾಲನ್ನು ಅಸಲಿ ದರದಲ್ಲಿ ಮಾರಾಟಮಾಡಲು ಈ ಸ್ಟಿಕ್ಕರ್ ಚೀಟಿಯನ್ನು ನಕಲು ಮಾಡಿದರೆ ಸಾಕು. ಚಿಕ್ಕ ಸ್ಟಿಕ್ಕರ್ ಚೀಟಿಯನ್ನು ಕಡಿಮೆ ಬೆಲೆಯಲ್ಲಿ ಯಾವುದೇ ಪ್ರಿಂಟಿಂಗ್ ಪ್ರೆಸ್ ತಯಾರಿಸಿಕೊಡುತ್ತದೆ.
ಜಪಾನಿನ ನೋಬಾನ್ ಎಂಬ ಸಂಸ್ಥೆ ಪ್ರಾರಂಭಿಸಿರುವ ಈ ವಿಧಾನ ಅತಿ ಕ್ಲಿಷ್ಟವಾದುದೇನೂ ಆಲ್ಲ. ಯಾವ ಸಂಸ್ಥೆಯ ಲಾಂಛನವನ್ನು ಮುದ್ರಿಸಬೇಕೋ ಅದರ ಅರೆಪಾರದರ್ಶಕ ಪ್ಲಾಸ್ಟಿಕ್ ಹಾಳೆಯನ್ನು ಆ ಆಕಾರದಲ್ಲಿ ಕತ್ತರಿಸಿ ಫಲ ಕಾಯಿಯಾಗಿರುವಾಗಲೇ ಅಂಟಿಸಿಬಿಟ್ಟರಾಯಿತು. ಫಲ ಹಣ್ಣಾದಾಗ ಲಾಂಛನವಿರುವ ಸ್ಥಳ ಕೊಂಚ ಕಡಿಮೆ ಸೂರ್ಯನ ಬೆಳಕನ್ನು ಪಡೆದು ಕೊಂಚ ಪೇಲವವಾಗಿರುತ್ತದೆ. ಉಳಿದ ಭಾಗಗಳು ತಮ್ಮ ಸಾಮಾನ್ಯ ಬಣ್ಣವನ್ನು ಹೊಂದಿರುತ್ತವೆ. ಪೂರ್ಣವಾಗಿ ಹಣ್ಣಾದ ಫಲ ಲಾಂಛನವನ್ನು ಸ್ವಾಭಾವಿಕವಾಗಿಯೇ ಹೊಂದಿದ್ದೋ ಎಂಬಂತೆ ತೋರುತ್ತದೆ.
ಈಗಾಗಲೇ ಅಮೇರಿಕಾದ ಆಪಲ್ ಸಂಸ್ಥೆ ತನ್ನ ಲಾಂಛನವನ್ನು ಹೊತ್ತ ಹಣ್ಣುಗಳ ಬೇಡಿಕೆಯಿರಿಸಿದೆ. ನಾಳೆ ವಿಧಾನಸೌಧದ ಲಾಂಛನವುಳ್ಳ ಮಾವಿನಹಣ್ಣು ಮಾರುಕಟ್ಟೆಗೆ ಬಂದರೂ ಬರಬಹುದು. ಶುಭಾಶಯ ಹೇಳುವ ಹಣ್ಣನ್ನು ನಾವೇ ಆರ್ಡರ್ ಕೊಟ್ಟು ತರಿಸಲೂಬಹುದೇನೋ. ಕಾದು ನೋಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ