ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಡಿಸೆಂಬರ್ 14, 2008

ಅರವತ್ತು ವರ್ಷ ಲೋಹದ ಕಪಾಟಿನಲ್ಲಿ ಜೀವನ ಸವೆಸಿದ ಡಿಯೇನ್ ಓಡೆಲ್


ತಮ್ಮ ಮಗು ಉತ್ತಮ ಜೀವನ ನಡೆಸಬೇಕೆಂದು ಬಯಸುವ ಪಾಲಕರು ಅದಕ್ಕೋಸ್ಕರ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅಮೇರಿಕಾದ ಟೆನೆಸ್ಸೀ ಪ್ರಾಂತದ ಮೆಂಫಿಸ್ ನಗರದ ಓಡೆಲ್ ದಂಪತಿಗಳಿಗೆ 1948 ರಲ್ಲಿ ಡಿಯೇನ್ ಓಡೆಲ್ ಎಂಬ ಸುಂದರ ಹೆಣ್ಣುಮಗು ಜನಿಸಿತ್ತು. ಆದರೆ ಮಗುವಿಗೆ ಕೇವಲ ಮೂರು ವರ್ಷವಾದಾಗ ಉಸಿರಾಟ ತೊಂದರೆ ಕಂಡುಬಂದಿತ್ತು. ವೈದ್ಯಕೀಯ ತಪಾಸಣೆಯ ಬಳಿಕ ಇದೊಂದು ಅತ್ಯಪರೂಪದ ಶ್ವಾಸಕೋಶದ ಬುಲ್ಬೋ ಸ್ಪೈನಲ್ (bulbo-spinal) ಪೋಲಿಯೋ ಎಂದು ತಿಳಿದುಬಂದಿತ್ತು. ಸ್ವಾಭಾವಿಕವಾಗಿ ಉಸಿರಾಡಲು ಕುಂಠಿತಗೊಂಡ ಶ್ವಾಸಕೋಶದ ಸಾಮರ್ಥ್ಯ ಮುಖ್ಯ ಲಕ್ಷಣ. ಆಗ ಲಭ್ಯವಿದ್ದ ಉಪಕರಣವೆಂದರೆ1920ರಲ್ಲಿ ಅಭಿವೃದ್ಧಿ ಪಡಿಸಿದ್ದ ಕೃತಕ ಶ್ವಾಸಕೋಣೆ (negative pressure ventilator).

ಮಗುವನ್ನುಳಿಸಿಕೊಳ್ಳಬೇಕೆಂದರೆ ಕೃತಕ ಕೋಣೆಯ ವಿನಃ ಬೇರೆ ಮಾರ್ಗವಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಆಕೆಯ ಪಾಲಕರು ಒಂದು ಲೋಹದ ಉಸಿರಾಟದ ಉಪಕರಣವನ್ನು ಕೊಂಡು ತಂದರು. ಚಿಕ್ಕವಳಿದ್ದಾಗ ಪ್ರತಿದಿನ ಕೆಲವು ಘಂಟೆಗಳಷ್ಟು ಕಾಲ ಕೃತಕ ಉಸಿರಾಟ ನೀಡಬೇಕಾದ ಅವಶ್ಯಕತೆ ದಿನಕಳೆದಂತೆ ಹೆಚ್ಚಿನ ಘಂಟೆಗಳಿಗೆ ಹೆಚ್ಚುತ್ತಾ ಬಂದಿತು. ಡಿಯೇನ್ ಅವರಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾದಾಗ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಕೃತಕ ಉಸಿರಾಟದ ಕೋಣೆಯಲ್ಲಿರುವುದು ಅನಿವಾರ್ಯವಾಯಿತು. 

 
 
ಸುಮಾರು ಏಳು ಅಡಿ ಉದ್ದದ ಏಳುನೂರಾ ಐವತ್ತು ಪೌಂಟು ತೂಕದ ಲೋಹಕ ಕಪಾಟೊಂದನ್ನು ಅಡ್ಡ ಮಲಗಿಸಿದಂತೆ ಕಾಣುವ ಈ ಉಪಕರಣ ರೋಗಿಯ ತಲೆಯನ್ನು ಬಿಟ್ಟು ಇಡಿಯ ದೇಹವನ್ನು ತನ್ನೊಳಗಿರಿಸಿಕೊಳ್ಳುತ್ತದೆ. ಕೇವಲ ಹಸ್ತವನ್ನು ಮಾತ್ರ ಉಪಕರಣದಿಂದ ಹೊರಚಾಚಬಹುದು. ಈ ಸ್ಥಿತಿಯಲ್ಲಿಯೇ ಇಡಿಯ ಜೀವನ ಕಳೆಯುವುದು ಹೇಗೆಂಬ ಚಿಂತೆಯಿಂದ ಸಾಮಾನ್ಯದವರು ಕೊರಗಿಯೇ ಸಾಯಬೇಕಾಗಿತ್ತು. ಆದರೆ ಡಿಯೇನ್ ಅವರ ಮನೆಯವರು ತೋರಿದ ಪ್ರೀತಿ, ಸಹಕಾರ, ಬಾಳುವ ಹುಮ್ಮಸ್ಸು ಅವರಿಗೆ ಜೀವಿಸಲು ಪ್ರೇರಣೆ ನೀಡಿತು. ಲೋಹದ ಕಪಾಟು ಬಿಟ್ಟು ಕದಲಲೂ ಸಾಧ್ಯವಿಲ್ಲದ ಆಕೆ ಶಾಲೆಗೆ ಹೋಗುವುದಂತೂ ದೂರದ ಮಾತು. ಶಾಲೆಗೆ ಹೋಗದಿದ್ದರೇನಾಯಿತು? ಶಾಲೆಯನ್ನೇ ಮನೆಗೆ ಕರೆಸಬಹದಲ್ಲಾ, ಆಕೆಯ ಶಿಕ್ಷಕರು ಹಾಗೂ ಸಹಪಾಠಿಗಳು ಆಕೆಯ ಮನೆಗೇ ಬಂದು ಪಾಠ ಹೇಳಿಕೊಟ್ಟು ಹೋಗುತ್ತಿದ್ದರು. ಬರೆಯಲು ಅಸಾಧ್ಯವಾದ ಆಕೆ ಮಾತಿನಲ್ಲಿ ನೀಡಿದ ಉತ್ತರಗಳನ್ನು ಅವರ ಸಹಪಾಠಿಗಳು ಬರೆದುಕೊಳ್ಳುತ್ತಿದ್ದರು. 1965 ರಲ್ಲಿ ಆಕೆ ಹೈಸ್ಕೂಲ್ ಪಾಸಾದರು. ಆ ಬಳಿಕ ಫ್ರೀಡ್-ಹರ್ಡೆಮಾನ್ ವಿಶ್ವವಿದ್ಯಾಲಯದ ಅಂಚೆತೆರಪಿನ ಶಿಕ್ಷಣ ಮೂಲಕ ಪದವಿ ಪಡೆಯಲು ಯತ್ನಿಸಿದರು. ಆದರೆ ಪದವಿ ಪಡೆಯಲು ಅಸಮರ್ಥರಾದರು. ಆದರೆ ಅವರ ಪ್ರಯತ್ನವನ್ನು ಗಮನಿಸಿದ ವಿಶ್ವವಿದ್ಯಾಲಯ 1987 ರಲ್ಲಿ ಆಕೆಗೆ ಗೌರವ ಪದವಿಯನ್ನು ನೀಡಿ ಸನ್ಮಾನಿಸಿತು. ಆ ಪದವಿಯ ಬಳಿಕ ವಿಶ್ವದ ಹಲವು ಸಂಘಟನೆಗಳು ಅವರನ್ನು ಗುರುತಿಸಿದವು. 1992 ರಲ್ಲಿ ವಿಶ್ವ ಮಹಿಳಾ ಪತ್ರಿಕೆ (ವುಮನ್ಸ್ ವರ್ಲ್ಡ್ ಮ್ಯಾಗಜಿನ್) ಪತ್ರಿಕೆಯಲ್ಲಿ ಅವರ ಸವಿಸ್ತಾರ ವರದಿ ಪ್ರಕಟವಾಯಿತು. ಆ ಬಳಿಕ ನಗರದ ಜಾಕ್ಸನ್ ರ್‍ಓಟರಿ ಕ್ಲಬ್ ಸಂಘಟನೆಯ ಅತ್ಯುನ್ನತ ಗೌರವವಾದ ಪೌಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು.  

1991 ರಲ್ಲಿ ಧ್ವನಿ ಅನುಸರಿಸಿ ಸಂದೇಶಗಳನ್ನು ಸ್ವೀಕರಿಸುವ ಕಂಪ್ಯೂಟರ್ ಮುಖಾಂತರ ಆಕೆ ಪುಸ್ತಕವೊಂದನ್ನು ಬರೆಯಲು ಪ್ರಾರಂಭಿಸಿದರು.ಸುಮಾರು ಹತ್ತು ವರ್ಷಗಳ ಸತತ ಪರಿಶ್ರಮದ ಬಳಿಕ ಪ್ರಕಟವಾದ ಆಕೆಯ ಪುಸ್ತಕ - Blinky, Less Light ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡು ದಾಖಲೆ ನಿರ್ಮಿಸಿತು. ಆಗಿನ ಅಮೇರಿಕಾದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆಯವರು ಈ ಪುಸ್ತಕದಿಂದ ಪ್ರಭಾವಿತರಾಗಿ ಆಕೆಯನ್ನು 2001ರ ಕ್ರಿಸ್ಮಸ್ ಗಾಲಾ ಕೂಟದಲ್ಲಿ ವಿಶೇಷ ಅತಿಥಿಯಾಗಿ ಆಹ್ವಾನಿಸಿದರು. ಕೂಟದಲ್ಲಿ ಖ್ಯಾತ ಚಿತ್ರನಟಿ ಜೇನ್ ಸೇಮೂರ್ ಅವರು ಈ ಕೃತಿಯನ್ನು ಉದ್ದೇಶಿಸಿ ಜೀವನದ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಿಸುವ ಕೃತಿ ಎಂದು ಬಣ್ಣಿಸಿದರು.  

ವರ್ಷಕ್ಕೆ ಸುಮಾರು ಅರವತ್ತು ಸಾವಿರ ಡಾಲರುಗಳ ದೊಡ್ಡ ಮೊತ್ತ ಆಕೆಯ ಚಿಕಿತ್ಸೆಗೆ ಖರ್ಚಾಗುತ್ತಿದ್ದರೂ ಆಕೆಯ ಮನೆಯವರು ಎಂದೂ ಹಣಕ್ಕಾಗಿ ಯಾರನ್ನೂ ಅವಲಂಬಿಸಿರಲಿಲ್ಲ, ಯಾವ ಸಂಘ-ಸಂಸ್ಥೆಗಳಿಗೂ ಕೇಳಿಕೊಂಡಿರಲಿಲ್ಲ. ಆದರೂ ಅವರ ಸ್ಥಿತಿಯನ್ನು ಗಮನಿಸಿದ ವೆಸ್ಟ್ ಟೆನೆಸ್ಸೀ ಹೆಲ್ತ್ ಕೇರ್ ಫೌಂಡೇಶನ್ ಸಂಸ್ಥೆ ಹಾಗೂ ಕ್ಯಾಂಪ್ ಬೆಲ್ ಸ್ಟ್ರೀಟ್ ಚರ್ಚ್ ಆಫ್ ಕ್ರೈಸ್ಟ್ ಸಂಘಟನೆಗಳು ಆಕೆಯ ನೆರವಿಗಾಗಿ ಡಿಯೇನ್ ಓಡೆಲ್ ಫಂಡ್ ಎಂಬ ದತ್ತಕನಿಧಿಯನ್ನು ಸ್ಥಾಪಿಸಿದವು. www.dianneodell.com ಎಂಬ ಅಂತರ್ಜಾಲ ತಾಣದ ಮೂಲಕ ಆಕೆಯ ವಿಸ್ತಾರವಾದ ಜೀವನಚರಿತ್ರೆಯನ್ನೂ ಪ್ರಕಟಿಸಿ ವಿಶ್ವದೆಲ್ಲೆಡೆಯಿಂದ ನೆರವನ್ನು ಕೋರಲಾಯ್ತು. ಆ ಬಳಿಕ ಖ್ಯಾತ ತಾರೆಯರೂ ಸೇರಿದಂತೆ ಸಹಸ್ರಾರು ಜನರು ಆಕೆಗೆ ಅವಶ್ಯವಾದ ನಿಧಿಯನ್ನು ಸಂಗ್ರಹಿಸಿ ನೀಡಿದರು. 

ಜಗತ್ತಿಗೇ ಮಾದರಿಯಾಗಿ ಸುಮಾರು ಅರವತ್ತೊಂದು ವರ್ಷ ಜೀವಿಸಿದ್ದ ಡಿಯೇನ್ ಕಳೆದ 28 ಮೇ 2008 ರಲ್ಲಿ ನಿಧನರಾದರು. ಮೇ ತಿಂಗಳ ಚಂಡಮಾರುತದಲ್ಲಿ ನಗರದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸರಬರಾಜು ನಿಂತ ಕಾರಣ ಅವರ ಚೇಂಬರ್ ಸಹಾ ಸ್ಥಗಿತಗೊಂಡಿತ್ತು. ಅವರ ಮನೆಯವರು ಯಾವುದೋ ಕಾರಣದಿಂದ ಮನೆಯ ಹೊರಗಿದ್ದು ಸುದ್ದಿ ತಿಳಿದು ಮನೆಗೆ ಕೂಡಲೇ ಬಂದು ಜನರೇಟರ್ ಪ್ರಾರಂಭಿಸಿ

ಉಪಕರಣವನ್ನು ಮರುಪ್ರಾರಂಭಿಸಿದರಾದರೂ ಅಷ್ಟರಲ್ಲಾಗಲೇ ಡಿಯೇನ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 1957 ಹಾಗೂ 1974 ರಲ್ಲಿ ಸಹಾ ವಿದ್ಯುತ್ ವೈಫಲ್ಯದಿಂದ ಅವರ ಉಪಕರಣ ಸ್ಥಗಿತಗೊಂಡಿದ್ದರೂ ಆಗ ಅವರ ಮನೆಯವರು ಜೊತೆಯಲ್ಲಿದ್ದು ಕೃತಕ ಉಸಿರಾಟ ನೀಡಿ ಅವರಿಗೆ ಪ್ರಾಣಾಪಾಯವಾಗದಂತೆ ರಕ್ಷಿಸಿದ್ದರು. ಆದರೆ ಈ ಬಾರಿ ಮಾತ್ರ ಮೂರಕ್ಕೆ ಮುಕ್ತಾಯವಾದ ಡಿಯೇನ್ ಅವರಿಗೆ ಇಡಿಯ ಅಮೇರಿಕಾವೇ ಅಶ್ರುತರ್ಪಣ ನೀಡಿತು.

1 ಕಾಮೆಂಟ್‌:

  1. ಅರ್ಶದ್,
    ಹೊಸದಾಗಿ ಬ್ಲಾಗ್ ಶುರು ಮಾಡಿದ್ದೀರಾ ಹೇಗೆ?
    ಎರಡೂ ಬರಹಗಳು ಚೆನ್ನಾಗಿವೆ.
    ನಿತ್ಯ ಬರೆಯುವ ಆಲೋಚನೆಯೇ?
    sampada.netನಲ್ಲಿಯೂ ಹಾಕಬಹುದು ಅಲ್ಲವೇ?

    ಪ್ರತ್ಯುತ್ತರಅಳಿಸಿ