ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ನವೆಂಬರ್ 19, 2011

ವಿಶಿಷ್ಟ ಉಡುಗೆ - ಪಿಂಗಾಣಿ ಡ್ರೆಸ್


ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ ನಿರ್ಮಿಸುವ ಉಡುಗೆಗಳಿಗೆ ಚೀನಾದ ಪಿಂಗಾಣಿ ಬಟ್ಟಲುಗಳೇ ಬಟ್ಟೆ! ಈ ಉಡುಗೆಗಳು ಕೇವಲ ತೋರಿಕೆಗಾಗಿ ಅಲ್ಲ, ಇವನ್ನು ಉಟ್ಟು ನಡೆದಾಡಲೂಬಹುದು! ಆದರೆ ಸ್ವಲ್ಪ ಭಾರ ಅಷ್ಟೇ.










ಚೀನಾದ ಉತ್ಖತನ ಸ್ಥಳಗಳಲ್ಲಿ ಸಾವಿರಾರು ಪಿಂಗಾಣಿ ಬಟ್ಟಲುಗಳು, ತಟ್ಟೆಗಳು ದೊರಕಿವೆ. ಆದರೆ ಬಹಳಷ್ಟು ಕಾಲದ ಹೊಡೆತಕ್ಕೆ ಅಥವಾ ಅಗೆಯುವವರ ನಿರ್ಲಕ್ಷ್ಯದಿಂದಾಗಿ ತುಂಡುತುಂಡಾಗಿವೆ. ಸ್ವಲ್ಪ ಪ್ರಮಾಣದಲ್ಲಿದ್ದರೆ ಅವನ್ನು ಎಸೆದು ಕೈ ತೊಳೆದುಕೊಳ್ಳಬಹುದಾಗಿತ್ತು. ಆದರೆ ಆಗಾಧ ಪ್ರಮಾಣದಲ್ಲಿ ದೊರಕಿದ್ದ ಈ ಚೂರುಗಳನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕ್ಸಿಯಾವೋಫೆಂಗ್ ಯೋಚಿಸಿದಾಗ ಹೊಳೆದದ್ದೇ ಉಡುಪುಗಳ ಪರಿಕಲ್ಪನೆ.
ಸುಮಾರು ಸಾವಿರ ವರ್ಷಗಳ ಹಿಂದಿನ ಮಿಂಗ್ ರಾಜವಂಶದ ಕಾಲದಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೆ ನಿರ್ಮಿತವಾದ ಪಿಂಗಾಣಿ ಬಟ್ಟಲುಗಳ ಚೂರುಗಳು ಇವರ ಉಡುಪುಗಳಿಗೆ ಬೇಕಾದ ಪ್ರಮುಖ ಪರಿಕರಗಳು. ಈ ಚೂರುಗಳಲ್ಲಿ ತಮಗೆ ಅಗತ್ಯವಾಗಿರುವ ಉಡುಪಿಗೆ ತಕ್ಕ ಚೂರುಗಳನ್ನು ಆಯ್ದು ಸೂಕ್ತ ಅಳತೆಯಲ್ಲಿ ಕತ್ತರಿಸಿ, ಪ್ರತಿ ಚೂರು ಪಕ್ಕದ ಚೂರಿನೊಂದಿಗೆ ಕನಿಷ್ಟ ಅಂತರವಿರುವಂತೆ ಸವೆಸಿ ಚಿಕ್ಕ ತೂತುಗಳನ್ನು ಕೊರೆದು ಬೆಳ್ಳಿಯ ದಾರಗಳಿಂದ ಒಂದನ್ನೊಂದು ಬೆಸೆಯುತ್ತಾರೆ. ಅತ್ಯಂತ ಹೆಚ್ಚಿನ ಕಾಳಜಿ ಹಾಗೂ ತಾಳ್ಮೆ ಬೇಡುವ ಈ ಕಾರ್ಯ ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಸವೆಸುವುದು ಒಂದಿಷ್ಟು ಹೆಚ್ಚು ಕಡಿಮೆಯಾದರೂ ಆ ಚೂರುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಗಾಜು, ಪಿಂಗಾಣಿ ಮೊದಲಾದ ವಸ್ತುಗಳಲ್ಲಿ ತೂರು ಕೊರೆಯುವುದು ಅಷ್ಟು ಸುಲಭವಾದ ಕೆಲಸವಲ್ಲ. ತುಂಬಾ ಬಿಧುರ (brittle) ಗುಣವುಳ್ಳ ಪಿಂಗಾಣಿ, ಗಾಜು ಮೊದಲದವುಗಳನ್ನು ಬಗ್ಗಿಸುವುದು ಸಾಧ್ಯವೇ ಇಲ್ಲ. ಸ್ವಲ್ಪ ಬಗ್ಗಿಸಿದರೂ ಇವು ಚೂರುಚೂರಾಗುತ್ತವೆ. ಹಾಗಾಗಿ ದಾರ ತೂರುವಷ್ಟು ಸೂಕ್ಷ್ಮವಾದ ತೂತು ಕೊರೆಯಲು ಅಪಾರ ತಾಳ್ಮೆ ಅಗತ್ಯ.



ವಿಭಿನ್ನ ಪರಿಕಲ್ಪನೆಯ ಈ ಉಡುಗೆಗಳು ಶೀಘ್ರವೇ ಹಲವರ ಮನಸೆಳೆದವು. ಅದರಲ್ಲಿ ಪ್ರಮುಖವಾದುದು ವಿಖ್ಯಾತ ಪೋಲೋ ಟೀ. ಶರ್ಟ್ ತರ್ಯಾರಿಕಾ ಸಂಸ್ಥೆಯಾದ ಫ್ರಾನ್ಸಿನ ಲಾಕೋಸ್ಟೆ. ೨೦೧೦ ರ ಕ್ರಿಸ್ಮಸ್ ಗಾಗಿ ವಿಶೇಷ ಟೀ ಶರ್ಟ್ ನಿರ್ಮಿಸಿಕೊಡುವಂತೆ ಅದು ಲೀ ಯವರನ್ನು ಕೇಳಿಕೊಂಡಿತು. ಚೀನಾ ಸರ್ಕಾರದ ಕಾನೂನಿನ ಪ್ರಕಾರ ಪ್ರಾಚೀನ ಕಲಾಕೃತಿಗಳನಾಗಲೀ ಅದರ ಯಾವುದೇ ಚೂರುಗಳನ್ನಾಗಲೀ ವಿದೇಶಗಳಿಗೆ ರಫ್ತು ಮಾಡುವಂತಿಲ್ಲ. ಆಗ ಅವರಿಗೆ ಅನಿವಾರ್ಯವಾಗಿ ಪ್ರತ್ಯೇಕ ಪಿಂಗಾಣಿ ಬಟ್ಟಲುಗಳನ್ನು ನಿರ್ಮಿಸಿ ಲಾಕೋಸ್ಟೆ ಸಂಸ್ಥೆಯ ಲಾಂಛನವಾದ ಮೊಸಳೆಯ ಚಿತ್ರವನ್ನು ಬಿಡಿಸಬೇಕಾಯ್ತು. ಬಳಿಕ ಆ ಬಟ್ಟಲುಗಳನ್ನು ಬೇಕಾದ ಆಕೃತಿಗಳಲ್ಲಿ ಕತ್ತರಿಸಿ ನೂಲಿನಿಂದ ಒಂದಕ್ಕೊಂದು ಜೋಡಿಸಿ ಯಥಾತ್ ಲಾಕೋಸ್ಟೆ ಪೋಲೋ ಟೀ ಶರ್ಟ್ ನಿರ್ಮಿಸಿದರು. ತಲಾ ೩೧೭ ಚೂರುಗಳನ್ನು ಒಳಗೊಂಡ ಎರಡು ಟೀ ಶರ್ಟ್ ಗಳನ್ನು ಈಗ ಪ್ಯಾರಿಸ್ ನ Musee Des Arts et Metiers ಹಾಗೂ ಬೀಜಿಂಗ್ ನ Red Gate Gallery ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. 




ಹಲವು ವರ್ಷಗಳಿಂದ ನೂರಾರು ಪಿಂಗಾಣಿ ಉಡುಪುಗಳನ್ನು ನಿರ್ಮಿಸುತ್ತಿರುವ ಲೀ ಇದುವರೆಗೆ ಪುರುಷರ, ಮಹಿಳೆಯರ ಮೇಲ್ವಸ್ತ್ರ ಮಾತ್ರವಲ್ಲದೇ ಸೈನಿಕರು ಯುದ್ಧದಲ್ಲಿ ಉಡುವ ಉಡುಗೆ, ಚೀನಾದ ಸಾಂಪ್ರಾದಾಯಿಕ ಉಡುಗೆಗಳ ರೂಪವನ್ನೂ ಪಡೆದಿವೆ.

ವ್ಯರ್ಥವಾಗಿ ಬಿದ್ದಿರುವ ಕಸವೂ ಕಲಾವಿದನ ಕೈಗಳ ಮೂಲಕ ಮನಸೆಳೆಯುವ ಕಲಾಕೃತಿಯಾಗಬಲ್ಲದು ಎಂಬುದಕ್ಕೆ ಈ ಪಿಂಗಾಣಿ ಉಡುಗೆಗಳೇ ಸಾಕ್ಷಿ.


ಶುಕ್ರವಾರ, ಆಗಸ್ಟ್ 19, 2011

ಅನಾಥ ಶ್ವಾನಗಳಿಗೆ ಬ್ರೆಜಿಲ್ ದೇಶದಲ್ಲೊಂದು ವಿಶೇಷ ನಗರ

ಬೀದಿನಾಯಿಗಳ ಕಾಟ ಬಹುತೇಕ ಎಲ್ಲಾ ನಗರಗಳಲ್ಲಿ ಇರುವ ಒಂದು ಸಾಮಾನ್ಯ ಪಿಡುಗು. ಇವುಗಳ ನಿರ್ವಹಣೆ ಸಾಧ್ಯವಾಗದೇ ಬೀದಿನಾಯಿಗಳನ್ನು ಹಿಡಿಸಿ ಬೇರೆಡೆ ಸಾಗಿಸಿಯೋ, ಕೊಂದೋ ಹೆಚ್ಚಿನ ನಗರಪಾಲಿಕೆಗಳು ಕೈತೊಳೆದುಕೊಳ್ಳುತ್ತವೆ. ಆದರೆ ಬ್ರೆಜಿಲ್ ದೇಶದ ಕಾಕ್ಸಿಯಾಸ್ ಡೋ ಸುಲ್ (Caxias do Sul) ಎಂಬ ನಗರದಲ್ಲಿ ಈ ಬೀದಿನಾಯಿಗಳಿಗೆಂದೇ ಪ್ರತ್ಯೇಕವಾದ ನಗರವೊಂದನ್ನು ಅಲ್ಲಿನ ಸರ್ಕಾರೇತರ ದತ್ತಕ ಸಂಸ್ಥೆಯಾದ (NGO) ಸೋಸಿಯಾಡೇಡ್ ಅಮಿಗಾ ಡಾಸ್ ಅನಿಮಿಯಾಸ್(Sociedade ‍Amiga dos Animais (Friend of Animals Society)) ನಿರ್ಮಿಸಿ ಸುಮಾರು ಸಾವಿರದ ಆರುನೂರು ಪರಿತ್ಯಕ್ತ ಶ್ವಾನಗಳನ್ನು ಸಾಕುತ್ತಿದೆ. ಅಲ್ಲದೇ ಸುಮಾರು ಇನ್ನೂರು ಬೆಕ್ಕುಗಳೂ ಇಲ್ಲಿ ಆಶ್ರಯ ಪಡೆದಿವೆ.










ಒಟ್ಟು ಮೂರು ಎಕರೆ ವಿಸ್ತೀರ್ಣವಿರುವ ಈ ನಗರದಲ್ಲಿ (ಶ್ವಾನಗೇರಿ ಎನ್ನೋಣವೇ) ಪ್ರತಿ ನಾಯಿಗೊಂದು ಪ್ರತ್ಯೇಕ ಗೂಡು ಒದಗಿಸಲಾಗಿದ್ದು, ಪ್ರತಿದಿನ ಊಟ, ವೈದ್ಯಕೀಯ ಉಪಚಾರ ಹಾಗೂ ಸ್ನಾನ ಮಾಡಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅನಾಥಾಶ್ರಮದಂತೆಯೇ ಇಲ್ಲಿಯೂ ಪ್ರತಿದಿನ ಜನರು ಬಂದು ತಮಗೆ ಇಷ್ಟವಾದ ನಾಯಿಯನ್ನು ದತ್ತು ಪಡೆದುಕೊಂಡು ಹಿಂದಿರುಗುತ್ತಾರೆ. ೧೯೯೮ ರಲ್ಲಿ ಪ್ರಾರಂಭವಾದ ಈ ಶ್ವಾನಗೇರಿಯಲ್ಲಿ ಈಗ ಶ್ವಾನಗಳು ಕಿಕ್ಕಿರಿದಿವೆ. ಒಂದು ತಿಂಗಳಿಗೆ ಇವುಗಳಿಗೆ ಸುಮಾರು ಹನ್ನೆರಡು ಟನ್ ಆಹಾರದ ಅವಶ್ಯಕತೆ ಇದೆ. ಈ ವೆಚ್ಚವನ್ನು ದಾನಿಗಳ ನೆರವಿನಿಂದ ದತ್ತಕ ಸಂಸ್ಥೆಯೇ ಭರಿಸುತ್ತಿದೆ.

ಉತ್ತಮ ಕಾರ್ಯ ನಡೆಸುತ್ತಿರುವ ದತ್ತಕ ಸಂಸ್ಥೆಗಳು ನಾಯಿಗಳ ಬಗ್ಗೆ ತಳೆದಿರುವ ಕಾಳಜಿ ನಿಜವಾಗಿ ಮೆಚ್ಚಬೇಕಾದದ್ದೇ. 

ಶುಕ್ರವಾರ, ಮಾರ್ಚ್ 25, 2011

ಬಜೆಟ್ ಏರ್‌ಲೈನ್ಸ್-ಕೆಲವು ಮಾಹಿತಿಗಳು


ವಿಮಾನಯಾನ, ಒಂದು ಕಾಲಕ್ಕೆ ಅತಿಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಸಾರಿಗೆ ಸೌಲಭ್ಯ ಇಂದು ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಷ್ಟು ಬೆಳವಣಿಗೆ ಕಂಡಿದೆ. ವಿಮಾನಯಾನದ ಎಲ್ಲಾ ಧನಾತ್ಮಕ ಅಂಶಗಳು ಅತೀವ ದುಬಾರಿ ಸಾರಿಗೆ ವೆಚ್ಚದ ಒಂದು ಋಣಾತ್ಮಕ ಅಂಶದಿಂದ ಜನಸಾಮಾನ್ಯನಿಗೆ ಗಗನಕುಸುಮವೇ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿರುವ ಬಜೆಟ್ ಏರ್‌ಲೈನ್ಸ್ ಅಥವಾ ಕಡಿಮೆಬೆಲೆಯ ವಿಮಾನಯಾನದ ಸೌಲಭ್ಯ ಜನಸಾಮಾನ್ಯನೂ ವಿಮಾನ ಪ್ರಯಾಣದ ಬಗ್ಗೆ ಯೋಚಿಸುವಂತೆ ಮಾಡಿವೆ.


ಬಜೆಟ್ ಏರ್‌ಲೈನ್ಸ್ ಬರುವ ಮುನ್ನ ಲಭ್ಯವಿದ್ದ ಇತರ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳಿಗೆ ವಿಧಿಸುತ್ತಿದ್ದ ಶುಲ್ಕ ದುಬಾರಿಯಾದರೂ ಪ್ರಯಾಣಿಕರ ನಿಬಿಡತೆ ಅವಲಂಭಿಸಿ ದರಗಳಲ್ಲಿ ಏರುಪೇರಾಗುವುದು ಸಹಜ. ಆದರೆ ವರ್ಷದ ಅತಿ ಕಡಿಮೆ ದರ ಇರುವ ಸಮಯದಲ್ಲೂ ಬಜೆಟ್ ಏರ್‌ಲೈನ್ಸ್ ಸರಿಸುಮಾರು ಇವುಗಳ ಅರ್ಧಕ್ಕಿಂತಲೂ ಕಡಿಮೆ ದರಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಇದು ಹೇಗೆ ಸಾಧ್ಯ?

ಬಜೆಟ್ ಏರ್‌ಲೈನ್ಸ್‌ನ ಪರಿಕಲ್ಪನೆ ಹೊಸತೇನಲ್ಲ. ಸರಿಸುಮಾರು ೧೯೪೯ನೆಯ ಇಸವಿಯಲ್ಲಿ ಎರಡನೆಯ ಮಹಾಯುದ್ಧ ಮುಗಿದ ಬಳಿಕ ಸೈನಿಕರು ತಮ್ಮ ತಮ್ಮ ದೇಶಗಳಿಗೆ ಮರಳಲು ಅಮೇರಿಕನ್ ಏರ್‌ಲೈನ್ಸ್ ಮತ್ತು ಪೆಸಿಫಿಕ್ ಸೌಥ್‌ವೆಸ್ಟ್ ಏರ್‌ಲೈನ್ಸ್ ಕಡಿಮೆ ದರದಲ್ಲಿ ತಮ್ಮ ಯಾನಗಳನ್ನು ನಡೆಸಿದ್ದವು. ಅಂದಿನಿಂದಲೂ ಹಲವಾರು ವಿಮಾನ ಸಂಸ್ಥೆಗಳು ಈ ಪರಿಕಲ್ಪನೆಯನ್ನು ತಮ್ಮ ಇಲಾಖೆಗಳಿಗೆ ಅಳವಡಿಸಿಕೊಳ್ಳುತ್ತಲೇ ಬಂದಿವೆ.

ಗಲ್ಫ್ ರಾಷ್ಟ್ರಗಳಲ್ಲಿ ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಸಾಧಿಸಿ ತೋರಿಸಿದ್ದು ಶಾರ್ಜಾದ ಏರ್ ಅರೇಬಿಯಾ ಸಂಸ್ಥೆ. ೨೦೦೩ ಅಕ್ಟೋಬರಿನಲ್ಲಿ ತೊಡಗಿದಾಗ ಶಾರ್ಜಾದಿಂದ ಮುಂಬೈಗೆ ಏಕಮುಖ ಪ್ರಯಾಣಕ್ಕೆ (ಒನ್ ವೇ) ಕೇವಲ ಮುನ್ನೂರು ದಿರ್ಹಾಂ (ತೆರಿಗೆಗಳು ಪ್ರತ್ಯೇಕ)ದ ಮೂಲಬೆಲೆಯೊಂದಿಗೆ ಗ್ರಾಹಕರನ್ನು ಸೆಳೆದಿತ್ತು. ಕ್ಷಿಪ್ರಗತಿಯಲ್ಲಿ ಜಯಪ್ರಿಯತೆಗನ್ನು ಗಳಿಸಿಕೊಂಡ ಈ ಸಂಸ್ಥೆ ಭಾರತದ ಇನ್ನಿತರ ನಗರಗಳಿಗೂ, ಪಾಕಿಸ್ತಾನ, ಈಜಿಪ್ಟ್ ಇನ್ನಿತರ ನೆರೆರಾಷ್ಟ್ರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಇದೇ ಜಾಡಿನಲ್ಲಿ ಭಾರತದ ರಾಷ್ಟ್ರೀಯ ವಾಯುಮಾರ್ಗ ಸಂಸ್ಥೆ ಏರ್ ಇಂಡಿಯಾ ಕೂಡಾ ತನ್ನ ಬಜೆಟ್ ಏರ್‌ಲೈನ್ಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಿ ಜನಪ್ರಿಯವಾಗಿದೆ. ಮೊದಲು ಕೇರಳದಿಂದ ತೊಡಗಿದ ವ್ಯಾಪ್ತಿ ಇಂದು ಇತರ ನಗರಗಳಿಗೂ, ನಮ್ಮ ಮಂಗಳೂರಿಗೂ ವಿಸ್ತರಿಸಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಗಳೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯವಾಗಲು ಸಾಧ್ಯವಾಗಿದ್ದು ಬಜೆಟ್ ಏರ್‌ಲೈನ್ಸ್‌ನ ಪರೋಕ್ಷ ಉಪಕಾರ. ಇಂದು ಕುವೈಟಿನ ಜಜ಼ೀರಾ ಏರ್‌ವೇಸ್, ಪಾಕಿಸ್ತಾನದ ಏರ್ ಏಶಿಯಾ, ಶಾಹೀನ್ ಏರ್‌ವೇಸ್, ಸೌದಿ ಅರೇಬಿಯಾದ ನಾಸ್ ಏರ್ ಮತ್ತು ಸಾಮಾ ಏರ್‌ಲೈನ್ಸ್ ಮೊದಲಾದವು ಕೊಲ್ಲಿ ರಾಷ್ಟ್ರಗಳಿಗೆ ಸೇವೆಯನ್ನು ಒದಗಿಸಿದರೆ ಭಾರತದ ರಾಷ್ಟ್ರೀಯ ಜಾಲದಲ್ಲಿ ಕಿಂಗ್‌ಫ಼ಿಷರ್, ಏರ್ ಡೆಕ್ಕನ್, ಗೋ ಏರ್ ಮೊದಲಾದವು ಜನಪ್ರಿಯಗೊಳ್ಳುತ್ತಿವೆ.

ಬಜೆಟ್ ಏರ್‌ಲೈನ್ಸ್ ದರಗಳು ಅಗ್ಗವೇಕೆ ಎಂದು ತಿಳಿದುಕೊಳ್ಳುವ ಮುನ್ನ ಪೂರ್ಣಪ್ರಮಾಣದ ಏರ್‌ಲೈನ್ಸ್ ದರಗಳು ದುಬಾರಿಯೇಕೆ ಎಂದು ತಿಳಿದುಕೊಳ್ಳುವುದು ಉಚಿತ. ಪ್ರಯಾಣಿಕರು ಪ್ರಯಾಣಿಸುವ ಮಾರ್ಗಗಳ ದಟ್ಟಣೆಯನ್ನು ಅವಲಂಬಿಸಿ ಕಲೆಹಾಕಿದ ಅಂಕಿ ಅಂಶಗಳನ್ನು ಆಧರಿಸಿ ಆಯಾ ಮಾರ್ಗಗಳಿಗೆ ಅನುಗುಣವಾಗಿ ವಿಮಾನಗಳ ವಿಂಗಡಣೆಯಾಗುತ್ತದೆ. ಮುಖ್ಯ ಮಾರ್ಗಗಳಿಗೆ ದೊಡ್ಡ ವಿಮಾನಗಳನ್ನೂ ನಂತರದ ಮಾರ್ಗಗಳಿಗೆ ಚಿಕ್ಕ ವಿಮಾನಗಳನ್ನೂ ಬಳಸಲಾಗುತ್ತದೆ. ಉದಾಹರಣೆಗೆ ಒಬ್ಬ ಪ್ರಯಾಣಿಕ ಲಂಡನ್ನಿನಿಂದ ಮಂಗಳೂರಿಗೆ ಬರಬೇಕಾದರೆ ಲಂಡನ್ನಿನಿಂದ ಮೊದಲು ಮುಂಬೈಗೆ ಬಂದು ನಂತರ ಮಂಗಳೂರಿಗೆ ಬರಬೇಕಾಗುತ್ತದೆ. ಅಂದು ಲಂಡನ್ನಿನಿಂದ ಮುಂಬೈಗೆ ಬರುವವರ ಸಂಖ್ಯೆ ಅಂದಾಜು ಮುನ್ನೂರಿದ್ದರೆ ಮುಂಬೈಯಿಂದ ಮಂಗಳೂರಿಗೆ ಬರುವವರ ಸಂಖ್ಯೆ ಐವತ್ತಿರಬಹುದು, ಇನ್ನೈವತ್ತು ಜನರು ದೆಹಲಿಗೂ, ಮತ್ತೈವತ್ತು ಜನರು ಮದರಾಸಿಗೂ ಹೋಗುವವರಿರಬಹುದು. ಹೀಗೆ ಪ್ರಯಾಣಿಕರ ಸಂಖ್ಯೆ ಮಾರ್ಗದಿಂದ ಮಾರ್ಗಕ್ಕೆ ಅಸಮಾನ ಅನುಪಾತದಲ್ಲಿ ಹಂಚಿಹೋಗುವುದರಿಂದ ಸಂಸ್ಥೆಗೆ ಆಯಾ ಅನುಪಾತಕ್ಕನುಗುಣವಾಗಿ ವಿಮಾನದ ಗಾತ್ರ ಹಾಗೂ ಸಂಖ್ಯೆಗಳನ್ನು ನಿರ್ಧರಿಸಬೇಕಾಗುತ್ತದೆ. ಕೆಲವೆಡೆ ಮುಂದಿನ ಯಾನ ಎರೆಡು ಮೂರು ದಿನ ತಡವಾಗಿಯೂ ಆಗಬಹುದು. ಹಾಗಾಗಿ ಈ ಸಂಸ್ಥೆಗಳಿಗೆ ವಿವಿಧ ಮಾದರಿಯ, ವಿವಿಧ ಸಾಮರ್ಥ್ಯದ ವಿಮಾನಗಳನ್ನೂ, ಅವುಗಳಿಗನುಗುಣವಾಗಿ ಚಾಲಕ ಸಿಬ್ಬಂದಿ (ಪೈಲಟ್), ಇತರ ಸಿಬ್ಬಂದಿ, ವಿಮಾನಗಳ ಬಿಡಿಭಾಗಗಳು, ತಂತ್ರಜ್ಞರು, ತರಬೇತಿ ವೆಚ್ಚ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಪ್ರಯಾಣಿಕರ ಟಿಕೇಟಿನ ಮೇಲೆ ಹೇರಲಾಗುತ್ತದೆ. ಈ ದರದಲ್ಲಿ ಇಂಧನ ಸಹಿತ ಇತರ ಮೂಲದರದ ಹೊರತಾಗಿ ವಿಮಾನದಲ್ಲಿ ಒದಗಿಸಲಾಗುವ ಊಟ, ಪಾನೀಯ, ವೃತ್ತಪತ್ರಿಕೆ, ಮನರಂಜನೆ ಇತ್ಯಾದಿಗಳ ಹೊರತಾಗಿ ತೆರಿಗೆಯೂ ಒಳಗೊಂಡಿರುತ್ತವೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೆ ಆ ನಿರ್ಧಾರಿತ ಯಾನವನ್ನು ರದ್ದುಪಡಿಸುವ ಅಧಿಕಾರ ಸಂಸ್ಥೆಗಿಲ್ಲ. ಏಕೆಂದರೆ ಪ್ರತಿ ನಿರ್ಧಾರಿತ ಯಾನವೂ ಏರ್ ಟ್ರಾಫ಼ಿಕ್ ಕಂಟ್ರೋಲ್‌ನವರು ನಿರ್ಧರಿಸಿದಂತೆಯೇ ನಡೆದುಕೊಳ್ಳಬೇಕಾಗುತ್ತದೆ. ಯಾವ ವಿಮಾನ, ಎಷ್ಟು ಎತ್ತರದಲ್ಲಿ, ಯಾವ ಅಕ್ಷಾಂಶ ರೇಖಾಂಶಗಳನ್ನು ದಾಟಿ ಬರಬೇಕೆಂದು ಏಟಿಸಿ ನಿರ್ಧರಿಸುತ್ತದೆಯೇ ಹೊರತು ವಿಮಾನ ಸಂಸ್ಥೆ ನಮ್ಮ ಪ್ರೈವೇಟ್ ಬಸ್ಸುಗಳ ತರಹ ’ಬಸ್ಸು ಫ಼ುಲ್ಲಾದ ಮೇಲೆ’ ಹೊರಡುವಂತಿಲ್ಲ. ಇಡೀ ವಿಮಾನದಲ್ಲಿ ಕೆಲವೇ ಪ್ರಯಾಣಿಕರಿದ್ದರೂ ಅದು ತನ್ನ ನಿಯಮಿತ ಹಾರಾಟವನ್ನು ನಡೆಸಲೇಬೇಕು. ಏಟಿಸಿ ತೆಗೆದುಕೊಳ್ಳುವ ನಿರ್ಧಾರ ಕೊಂಚ ಏರುಪೇರಾದರೂ ಆಗಬಹುದಾದ ಅನಾಹುತ ಊಹಿಸಲಸಾಧ್ಯ. (ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ದೆಹಲಿಯ ಸಮೀಪ ಚಾಕಿ ದಾದ್ರಿ ಎಂಬ ಗ್ರಾಮದ ಆಕಾಶದಲ್ಲಿ ಸೌದಿ ಏರ್‌ಲೈನ್ಸ್ ಮತ್ತು ಕಜ಼ಾಕಿಸ್ತಾನ್ ಕಾರ್ಗೋ ವಿಮಾನಗಳ ಢಿಕ್ಕಿಯಾಗಿ ಹಲವಾರು ಮಂದಿ ಸತ್ತ ದುರಂತ ನೆನೆಪಿರಬಹುದು) ಹಾಗಾಗಿಯೇ ಇಂದೂ ನಮಗೆ ವಿಮಾನಗಳ ಉಡಾವಣಾ ಸಮಯ ಮಧ್ಯರಾತ್ರಿ, ಅಪರಾತ್ರಿಗಳಲ್ಲಿ ಲಭ್ಯವಿರುವುದು. ಹಾಗಾಗಿ ಖಾಲಿ ಸೀಟುಗಳಿಂದ ಬರದ ವೆಚ್ಚವನ್ನು ಅನಿವಾರ್ಯವಾಗಿ ಆದಾಯ ಬರುವ ಇತರ ಮಾರ್ಗಗಳ ಮೇಲೆ ಹೇರಬೇಕಾಗುತ್ತದೆ. ಅಂತೆಯೇ ಎಲ್ಲಾ ವೆಚ್ಚಗಳನ್ನೊಳಗೊಂಡ ದರ ದುಬಾರಿಯೇ ಆಗಿರುತ್ತದೆ.

ಈಗ ಬಜೆಟ್ ಏರ್‌ಲೈನ್ಸ್‌ನ ದರಗಳೇಕೆ ಕಡಿಮೆಯೆಂದು ನೊಡೋಣ.

ಮೊದಲೆನೆಯದಾಗಿ: ಈ ಸಂಸ್ಥೆಗಳು ಮೊದಲು ಅತಿನಿಬಿಡ ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಅಂದರೆ ಪ್ರತಿ ಮಾರ್ಗದಲ್ಲೂ ಹೋಗಿ ಬರುವ ಎರೆಡೂ ಕಡೆಗಳಿಂದ ಇಡೀ ವಿಮಾನ ಭರ್ತಿಯಾಗುವಷ್ಟು ಪ್ರಯಾಣಿಕರಿರಬೇಕು, ಆ ಸಮಯದಲ್ಲಿ ಬೇರೆ ವಿಮಾನಸಂಸ್ಥೆಗಳ ಯಾನವಿರಬಾರದು, ಇಂತಹ ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದ ಖಾಲಿ ಸೀಟುಗಳ ಲೆಕ್ಕಾಚಾರ ಕಳೆದು ಲಾಭ ಎಲ್ಲಾ ಪ್ರಯಾಣಿಕರಲ್ಲಿ ಹಂಚಿಹೋಗುತ್ತದೆ.

ಎರಡನೆಯದಾಗಿ: ಈ ಸಂಸ್ಥೆ ಆಯ್ಕೆ ಮಾಡಿಕೊಳ್ಳುವ ವಿಮಾನದ ಮಾದರಿ ಒಂದೇ ಆಗಿರುತ್ತದೆ. ಹಾಗಾಗಿ ಆ ವಿಮಾನದ ನಿರ್ವಹಣೆಗಾಗಿ ತಗಲುವ ವೆಚ್ಚ, ಪೈಲಟ್‌ಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ ನೀಡಬೇಕಾದ ತರಬೇತಿ, ಬಿಡಿಭಾಗಳು, ತಂತ್ರಜ್ಞರು ಈ ಎಲ್ಲವನ್ನೂ ಆ ಮಾದರಿಯ ವಿಮಾನಕ್ಕೆ ಸೀಮಿತಗೊಳಿಸಿದರೆ ಸಾಕಾಗುತ್ತದೆ. ವಿಮಾನದ ಬಿಡಿಭಾಗಳೂ, ಹೊಸವಿಮಾನ, ಇನ್ನಿತರ ವಸ್ತುಗಳನ್ನು ಹೆಚ್ಚುವರಿಯಾಗಿ (ಹೋಲ್ ಸೇಲ್) ಕೊಂಡುಕೊಳ್ಳುವುದರಿಂದ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಒಂದೇ ಮಾದರಿಯ ವಿಮಾನಗಳನ್ನು ಅಗತ್ಯವಿದ್ದಷ್ಟು ಮಾತ್ರ ಖರೀದಿಸುವುದರಿಂದ ಕಡಿಮೆ ಮೂಲಧನ ಹಾಗೂ ಅದರ ಮೇಲೆ ನಿರ್ಧಾರವಾಗುವ ಸಾಲ ಹಾಗೂ ಬಡ್ಡಿ ಕೂಡಾ ಕಡಿಮೆಯಾಗುತ್ತದೆ. ಕೇವಲ ಜನನಿಬಿಡ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದಲೂ, ಪ್ರತಿ ವಿಮಾನವೂ ತನ್ನ ಪೂರ್ಣಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯುವುದರಿಂದಲೂ ಪ್ರತಿ ಪ್ರಯಾಣಿಕನ ಮೇಲೆ ಬೀಳುವ ಖರ್ಚು ಹಂಚಿ ಹೋಗುತ್ತದೆ.

ಮೂರನೆಯದಾಗಿ: ಸರಳಗೊಳಿಸಿದ ಸೌಲಭ್ಯಗಳು: ಪ್ರತಿ ವಿಮಾನಯಾನದಲ್ಲಿ ಒದಗಿಸಿದ ಆಹಾರಕ್ಕೆ ತಕ್ಕ ವೆಚ್ಚವನ್ನು ಪ್ರಯಾಣಿಕರ ಟಿಕೇಟ್ ದರ ಒಳಗೊಂಡಿರುತ್ತದೆ. ಊಟ ಬೇಡ, ಅದರ ಹಣ ಟಿಕೇಟಿನಲ್ಲಿ ಕಟ್ ಮಾಡಿಕೊಳ್ಳಿ ಎಂದು ಹೇಳುವ ಹಾಗಿಲ್ಲ. ಅದೇ ಬಜೆಟ್ ಏರ್‌ಲೈನ್ಸ್‌ನಲ್ಲಿ ಆಹಾರ ವ್ಯವಸ್ಥೆ ಟಿಕೇಟಿನ ದರದಲ್ಲಿ ಮಿಳಿತಗೊಳಿಸಿಲ್ಲ. ಆದರೆ ಪ್ರಯಾಣಿಕರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಹಣ ಕೊಟ್ಟು ಖರೀದಿಸುವ ಅವಕಾಶ ಕಲ್ಪಸಲಾಗಿದೆ. ಬೇಕಿದ್ದವರು ಏನು ಬೇಕೋ ಅದನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು. ನೆಲದ ಮೇಲೆ ಸಿಗುವ ಬೆಲೆಗಿಂತ ತುಸುವೇ ದುಬಾರಿಯಾದ ಬೆಲೆಯಲ್ಲಿ ಉತ್ತಮ ಆಹಾರ ಲಭ್ಯ. ಹೀಗೆ ಪ್ರಯಾಣಿಕರು ಕೊಂಡ ವಸ್ತುಗಳಿಂದ ಬಂದ ಲಾಭ ಸಂಸ್ಥೆಗೆ ಪರೋಕ್ಷ ಆದಾಯ.

ನಾಲ್ಕನೆಯದಾಗಿ: ವಜಾಮಾಡಿದ ಮಧ್ಯಂತರ ವ್ಯವಸ್ಥೆ: ಈ ಶತಮಾನದ ಅದ್ಭುತ ಕೊಡುಗೆಗಳಲ್ಲೊಂದಾದ ಇಂಟರ್ನೆಟ್ ಮುಖಾಂತರ ಪ್ರಯಾಣಿಕರು ತಮ್ಮ ಪ್ರಯಾಣವನ್ನು ತಾವೇ ನಿರ್ಧರಿಸಿ ತಮ್ಮ ಕ್ರೆಡಿಟ್ ಕಾರ್ಡುಗಳ ಮುಖಾಂತರ ಪಾವತಿಸುವ ಸೌಲಭ್ಯದಿಂದ ಮಧ್ಯೆ ಬರುವ ಏಜೆಂಟರ ಪಾತ್ರ ಇಲ್ಲವೇ ಇಲ್ಲ. ಹಾಗಾಗಿ ಏಜೆಂಟರಿಗೆ ನೀಡಬೇಕಾದ ಪ್ರತಿ ಟಿಕೇಟಿನ ಮೇಲಿನ ಕಮೀಶನ್ ಪ್ರಯಾಣಿಕರಿಗೆ ಉಳಿತಾಯ. ಸಂಸ್ಥೆಗಳೂ ತಮ್ಮ ಜಾಹೀರಾತಿನಲ್ಲಿ ನಿಮ್ಮ ಟಿಕೇಟನ್ನು ನೀವೇ ಪ್ರತಿ ತೆಗೆದುಕೊಳ್ಳುವುದರಿಂದ ಕಾಗದದ ಉಳಿತಾಯ ಎಂದು ಸ್ಪಷ್ಟವಾಗಿ ಪ್ರಚಾರ ಮಾಡಿರುತ್ತಾರೆ. ಒಂದು ಕಾಗದದ ಚೂರಿನಿಂದ ಏನು ಮಹಾ ಉಳಿತಾಯವಾಗಬಹುದು ಎಂದು ಅಸಡ್ಡೆಯಿಂದ ಈ ವಿಷಯ ತೆಗೆದುಹಾಕುವಹಾಗಿಲ್ಲ. ಏಕೆಂದರೆ ಏಜೆಂಟರು ನಮಗೆ ಕೊಡುವ ಸುಂದರ ಟಿಕೇಟಿಗೆ ಬಳಸಲಾದ ವಿಶೇಷ ಕಾಗದ ಕಾರ್ಬನ್ ಕೋಟಿಂಗ್ ಸಹಿತ ಮುದ್ರಿತವಾಗಿರುತ್ತದೆ. ಅದೂ ಅಲ್ಲದೆ ಈ ಟಿಕೇಟಿನ ಮೇಲೆ ಪ್ರಯಾಣಿಕರ ವಿವರಗಳನ್ನು ತುಂಬಲು ವಿಶೇಷ ಪ್ರಿಂಟರುಗಳು ಬೇಕಾಗುತ್ತವೆ. ಹಾಗಾಗಿ ಈ ಕಾಗದದ ಬೆಲೆ ನಾವು ಇ-ಟಿಕೆಟ್ ಕೊಂಡ ಮೇಲೆ ಮುದ್ರಿಸಲು ಬೇಕಾಗುವ ಅರ್ಧ ಹಾಳೆಯ ಬೆಲೆಗಿಂತಲೂ ನಾನ್ನೂರು ಐನೂರು ಪಟ್ಟು ಹೆಚ್ಚಾಗಿರುತ್ತದೆ.

ಐದನೆಯದಾಗಿ: ಏಕಪ್ರಕಾರ ಆಸನ ವ್ಯವಸ್ಥೆ: ಇತರ ವಿಮಾನಗಳಲ್ಲಿ ಆಸನಗಳು ಮೊದಲ, ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್ ಎಂದು ವಿಂಗಡಣೆಯಾಗಿರುತ್ತವೆ. ಅದಕ್ಕನುಗುಣವಾಗಿ ಸೌಲಭ್ಯಗಳಲ್ಲೂ, ಟಿಕೇಟಿನ ಬೆಲೆಗಳಲ್ಲೂ ವ್ಯತ್ಯಾಸವಿರುತ್ತದೆ. ಬಜೆಟ್ ಏರ್‌ಲೈನ್ಸ್‌ಗಳಲ್ಲಿ ಈ ತಾರತಮ್ಯವಿಲ್ಲ. ಪೈಲಟಿನ ಹಿಂಬದಿಯ ಸೀಟು ಹಿಡಿದು ವಿಮಾನದ ಕಟ್ಟಕಡೆಯ ಆಸನದವರೆಗೂ ಒಂದೇ - ಎಕಾನಮಿ ಕ್ಲಾಸ್. ಇದರಿಂದಾಗಿ ಏಕಪ್ರಕಾರ ದರವನ್ನು ಹೆಚ್ಚಿನ ಪ್ರಯಾಣಿಕರ ಮೇಲೆ ಹೇರಲು ಅನುಕೂಲವಾಗುತ್ತದೆ.

ಆರನೆಯದಾಗಿ: ನಾನ್ ಸ್ಟಾಪ್ ಆಪರೇಶನ್ (ನಿಲುಗಡೆರಹಿತ ನಿರ್ವಹಣೆ): ನಾನ್‌ಸ್ಟಾಪ್ ಉಡುಪಿ, ನಾನ್‌ಸ್ಟಾಪ್ ಉಡುಪಿ, ನೆನಪಿಗೆ ಬಂತೇ? ಇಲ್ಲಿ ಆ ತರಹದ ನಾನ್ ಸ್ಟಾಪ್ ಅನ್ವಯವಾಗುವುದಿಲ್ಲ. ಯಾವುದೇ ವಿಮಾನಕ್ಕೂ ವಿಮಾನ ನಿಲ್ದಾಣದ ನಿಲುಗಡೆಯಲ್ಲಿ ನಿಲ್ದಾಣಶುಲ್ಕವಿರುತ್ತದೆ. ಅದು ನಿಂತ ಅವಧಿಗೆ ಅನುಸಾರವಾಗಿ ಶುಲ್ಕವೂ ನಿರ್ಧಾರವಾಗುತ್ತದೆ. ಉದಾಹರಣೆಗೆ ಒಂದು ವಿಮಾನ ಇಂದು ಲಂಡನ್ನಿನಿಂದ ಮುಂಬೈಗೆ ಬಂದು ನಾಳೆ ವಾಪಾಸು ಹೋಗುವುದಿದ್ದರೆ ಸಂಸ್ಥೆ ಆ ವಿಮಾನದ ಪ್ರತಿ ಸಿಬ್ಬಂದಿಗೂ ಪಂಚತಾರಾ ಹೋಟೆಲ್ ಅಥವಾ ತನ್ನ ಸ್ವಂತ ಗೆಸ್ಟ್ ಹೌಸ್ ನಲ್ಲಿ ವಸತಿ ಊಟ ಕಲ್ಪಿಸಿಕೊಡಬೇಕಾಗುತ್ತದೆ. ಅಂತೆಯೇ ಪ್ರಯಾಣಿಕರ ಮರುಪ್ರಯಾಣದ ಅಂತರ ಹೆಚ್ಚಾಗಿದ್ದರೆ ಅವರಿಗೂ ಹೋಟೆಲ್, ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳು ಇತರ ಪ್ರಯಾಣಿಕರ ಟಿಕೇಟಿಗೆ ವರ್ಗಾವಣೆಯಾಗುತ್ತವೆ. ಬಜೆಟ್ ಏರ್‌ಲೈನ್ಸ್‌ನಲ್ಲಿ ಒಂದು ವಿಮಾನ ಒಂದು ನಿಲ್ದಾಣದಲ್ಲಿಳಿದ ಮೇಲೆ ಅಲ್ಲೇ ಉಳಿಯುವ ಮಾತಿಲ್ಲ. ಅದೇ ಪೈಲಟ್, ಅದೇ ಸಿಬ್ಬಂದಿ ಅಲ್ಪವಿರಾಮದ ಬಳಿಕ ಹಿಂದಿರುಗಿ ತಮ್ಮ ಮೂಲ ಸ್ಥಾನಕ್ಕೆ ಹಾರಾಟ ನಡೆಸುತ್ತದೆ. ಹಾಗಾಗಿ ವಸತಿ ಖರ್ಚುಗಳಿಗೆ ಟಾಟಾ.

ಏಳನೆಯದು: ಕಡಿಮೆಗೊಳಿಸಿದ ಲಗೇಜ್: ಇತರ ವಿಮಾನಗಳಲ್ಲಿ ಭಾರತಕ್ಕೆ ಹೋಗುವ ಯಾನಗಳಲ್ಲಿ ಸುಮಾರು ನಲವತ್ತು ಪ್ಲಸ್ ಹ್ಯಾಂಡ್ ಕ್ಯಾರಿ ಹತ್ತು ಒಟ್ಟು ಐವತ್ತು ಕೇಜಿ ಒಯ್ಯಬಹುದಾದರೆ ಹಿಂತಿರುಗಿ ಬರುವಾಗ ಬರೆಯ ಇಪ್ಪತ್ತು ಕೇಜಿ. ಏಕೆಂದರೆ ಭಾರತದಿಂದ ರಫ಼್ತಾಗುವ ವಸ್ತುಗಳು ಲಗೇಜ್ ಸ್ಥಳವನ್ನು ಆಕ್ರಮಿಸಿಕೊಂಡು ಬಿಟ್ಟಿರುತ್ತವೆ. ಇದನ್ನು ಪ್ರಯಾಣಿಕರ ಪಾಲಿಗೆ ಖೋತಾ ಮಾಡುತ್ತಾರೆ. ಬಜೆಟ್ ಏರ್‌ಲೈನ್ಸ್‌ನಲ್ಲಿ ಲಗೇಜ್ ಕಡಿಮೆಮಾಡಲು ಕಾರಣ ಇಡಿಯ ವಿಮಾನಕ್ಕೆ ತಗಲುವ ಪೇ ಲೋಡ್. ವಿಮಾನದ ಇಡಿಯ ಭಾರದ ಮೇಲೆ ಇಂಧನದ ಖರ್ಚು ನಿರ್ಧಾರವಾಗುವುದರಿಂದ ಲಗೇಜು ಕಡಿತಗೊಳಿಸಿ ಪೇ ಲೋಡ್ ಕಡಿಮೆ ಮಾಡಲಾಗುತ್ತದೆ.

ಎಲ್ಲಾ ರೀತಿಯಲ್ಲಿ ಅನುಕೂಲಕರವೆಂದು ಕಂಡುಬರುವ ಬಜೆಟ್ ಏರಲೈನ್ಸಿನಲ್ಲಿಯೂ ಕೆಲವು ಅನಾನುಕೂಲತೆಗಳಿವೆ. ಮುಖ್ಯವಾಗಿ ಪ್ರಯಾಣಿಕರಿಗೆ ತಾವು ಹೋಗಬೇಕಾದ ಮಾರ್ಗದ ಟಿಕೇಟನ್ನು ಒಮ್ಮೆ ಕೊಂಡರೆ ನಂತರ ದಿನಾಂಕ
ಬದಲಿಸಬೇಕಾದಲ್ಲಿ ದುಬಾರಿ ವೆಚ್ಚ ನೀಡಬೇಕಾಗುತ್ತದೆ. ಅದೂ ಸಂಸ್ಥೆ ನಿಯಮಿಸಿದ ನಿಗದಿತ ಏಜೆಂಟುಗಳಲ್ಲಿ ಮಾತ್ರ ಸಾಧ್ಯ. ಏಜೆಂಟು ಹತ್ತಿರವಿದ್ದರೆ ಸರಿ, ಇಲ್ಲದಿದ್ದರೆ ಅವರಿದ್ದಲ್ಲಿ ಹೋಗಿ ಕೆಲಸ ಸಾಧಿಸಲು ಸಮಯ ಮತ್ತು ಹಣ ಹೆಚ್ಚಾಗಿಯೇ ಖರ್ಚಾಗುತ್ತದೆ. ಏಕೆಂದರೆ ಇಂಟರ್ನೆಟ್ ಮುಖಾಂತರ ಖರೀದಿಸಿದ ಟಿಕೇಟುಗಳನ್ನು ಸಂಸ್ಥೆ ಖಚಿತವೆಂದೇ ಪರಿಗಣಿಸುತ್ತದೆ. ಪ್ರಯಾಣದ ದಿನಾಂಕದ ಹಿಂದಿನ ಇಪ್ಪತ್ತನಾಲ್ಕು ಘಂಟೆಗಳ ವರೆಗೂ ಟಿಕೇಟ್ ರದ್ದುಪಡಿಸುವ ಸೌಲಭ್ಯವಿರುತ್ತದೆ. ದಿನಾಂಕ ಮುಂದುವರಿಸುವುದಕ್ಕಾಗಲೀ ರದ್ದುಪಡಿಸುವುದಕ್ಕಾಗಲೀ ಪ್ರತ್ಯೆಕ ವೆಚ್ಚವಿದೆ. ಬೇರೆ ಪ್ರಯಾಣಿಕರಿಗೆ ವರ್ಗಾವಣೆ ಸಾಧ್ಯವಿದ್ದರೂ ಅದಕ್ಕೂ ತಕ್ಕ ಶುಲ್ಕವಿದೆ. ಶುಲ್ಕವೂ ಕೊಂಚ ದುಬಾರಿಯೇ. ಹಾಗಾಗಿ ತನ್ನ ಪ್ರಯಾಣದ ದಿನಾಂಕಗಳ ಖಚಿತ
ಕಾರ್ಯಕ್ರಮವಿರುವವರಿಗೆ ಮಾತ್ರ ಇದು ಉತ್ತಮ. ಯಾವುದೇ ಕಾರಣಗಳಿಂದಾಗಿ ದಿನಾಂಕ ಬದಲಿಸಬೇಕಾದರೆ ತಕ್ಕ ದಂಡವನ್ನು ತೆರಬೇಕಾಗುತ್ತದೆ. ಅದೇ ಪೂರ್ಣಪ್ರಮಾಣದ ಏರ್ ಲೈನುಗಳಲ್ಲಿ ರೀಕನ್ಫರ್ಮ್(ಮರುಧೃಢೀಕರಣ) ಮಾಡಬೇಕೆಂಬ ವಿಧಿಯಿರುತ್ತದೆ. ತಾವು ಹಿಂತಿರುಗುವ ದಿನಾಂಕವನ್ನು ಬೇಕಿದ್ದರೆ ಯಾವುದೇ ಏಜೆಂಟರಲ್ಲಿ ಹೋಗಿ ಹೆಚ್ಚಿನ ಬೆಲೆ ಕೊಡದೇ ಬದಲಿಸಕೊಳ್ಳಬಹುದು ಅಥವಾ ಫ಼ೋನ್ ಮುಖಾಂತರ ತನ್ನ ಪ್ರಯಾಣದ ದಿನಾಂಕವನ್ನು ಸ್ಪಷ್ಟಪಡಿಸಬಹುದು.
ಬಜೆಟ್ ಏರ್‌ಲೈನ್ಸ್ ಸಂಸ್ಥೆಗಳು ಕೇವಲ ಜನನಿಬಿಡ ಮಾರ್ಗಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದರಿಂದ ಅಲ್ಲಿಂದ ಮುಂದೆ ಪ್ರಯಾಣಿಸುವವರು ಇತರ ಡೊಮೆಸ್ಟಿಕ್ ಅಥವಾ ಸ್ಥಳೀಯ ವಿಮಾನಯಾನವನ್ನು ಅವಲಂಬಿಸಬೇಕಾಗುತ್ತದೆ. ಈ ಪ್ರಯಾಣಕ್ಕೆ ತಗಲುವ ವೆಚ್ಚ ಹೆಚ್ಚಾಗಿರಬಹುದು. ಅದರ ಬದಲಿಗೆ ಮೂಲ ಸ್ಥಾನದಿಂದ ಕೊನೆಯ ನಿಲ್ದಾಣದವರೆಗೂ ಒಂದೇ ಸಂಸ್ಥೆಯ ಟಿಕೇಟನ್ನು ಕೊಂಡರೆ ಮಾರ್ಗಮಧ್ಯೆ ವಿಮಾನ ಬದಲಿಸಿ ಮುಂದುವರೆಯುವಾಗ ಹೆಚ್ಚಿನ ಬೆಲೆ ವ್ಯತ್ಯಾಸವಿಲ್ಲದೆ ಗುರಿ ತಲುಪಬಹುದು. ಇದರ ಒಟ್ಟು ಮೌಲ್ಯ ಬಜೆಟ್ ಏರ್ ಲೈನ್ಸ್ ಮುಖಾಂತರ ಬಂದು ಮಾರ್ಗಮಧ್ಯೆ ಬೇರೆ ವಿಮಾನದ ಮುಖಾಂತರ ಮುಂದುವರೆದು ಗುರಿ ತಲುಪಿದಾಗ ತಗಲುವ ವೆಚ್ಚಕ್ಕಿಂತ ಕಡಿಮೆ ಇರಬಹುದು. ಇದಕ್ಕೆ ಮುಖ್ಯ ಕಾರಣ ತೆರಿಗೆ. ತೆರಿಗೆ ಪ್ರತಿ ಪ್ರಯಾಣದ ಪ್ರತಿ ಸೀಟಿಗೆ ಎಂದು ನಿಗದಿಪಡಿಸಿರುವುದರಿಂದ ಹಾಗೂ ಬಜೆಟ್ ಏರ್‌ಲೈನ್ಸ್ ಮತ್ತು ಬೇರೆ ಏರ್‌ಲೈನ್ಸಿನ ವಿಮಾನಕ್ಕೆ ಎರೆಡೆರೆಡು ಟಿಕೇಟುಗಳನ್ನು ಕೊಳ್ಳಬೇಕಾಗುವುದರಿಂದ ಎರೆಡು ತೆರಿಗೆ ಕಟ್ಟಬೇಕಾಗುತ್ತದೆ. ಅದೇ ಪೂರ್ಣಪ್ರಮಾಣದ ವಿಮಾನಗಳಲ್ಲಿ ಒಂದೇ ಟಿಕೇಟಿನಲ್ಲಿ ಮೂಲಪ್ರಯಾಣ, ಅದರ ಮುಂದಿನ ಪ್ರಯಾಣ, ಅದರ ಮುಂದಿನ ಪ್ರಯಾಣ ಎಲ್ಲವೂ ಒಂದೇ ಟಿಕೇಟಿನಲ್ಲಿದ್ದು ಪ್ರತಿ ಪ್ರಯಾಣಕ್ಕೂ ಒಂದೊಂದು ಕಾರ್ಬನ್ ಪ್ರತಿಯಿರುವುದರಿಂದ ಇಡಿಯ ಪ್ರಯಾಣಕ್ಕೆ ಒಂದೇ ಬಾರಿ ತೆರಿಗೆ ಕಟ್ಟಿದರೆ ಸಾಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಜೆಟ್ ಏರ್‌ಲೈನ್ಸ್ ಉಚಿತವಾಗುವುದಿಲ್ಲ.
ಬೆಲೆ ಕಡಿಮೆ ಎಂದು ಪ್ರಚಾರ ಪಡಿಸುವ ಈ ಸಂಸ್ಥೆಗಳು ಹೆಚ್ಚು ಜನರು ಆಯ್ಕೆಮಾಡಿಕೊಳ್ಳುವ ದಿನಗಳಂದು ಹೆಚ್ಚಿನ ಬೆಲೆ ವಿಧಿಸುತ್ತವೆ. ಉದಾಹರಣೆಗೆ ರಜೆಯ ಸಮಯದಲ್ಲಿ ಹೆಚ್ಚಿನ ಜನರು ಊರಿಗೆ ಹೋಗುವವರಿದ್ದಾಗ ಈ ಬಜೆಟ್ ಏರ್‌ಲೈನ್ಸ್ ವಿಧಿಸುವ ದರಕ್ಕೂ ಪೂರ್ಣಪ್ರಮಾಣದ ವಿಮಾನದರಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಅದೂ ಅಲ್ಲದೆ ಇಂಟರ್ನೆಟ್ ನಲ್ಲಿ ಈ ಸಂಸ್ಥೆಗಳು ನಿಗದಿಪಡಿಸುವ ಒಂದು ಮಾರ್ಗದ ದರ ನಿಮಿಷ ನಿಮಿಷಕ್ಕೂ ಬದಲಾಗುತ್ತಾ ಇರುತ್ತದೆ. ಈ ಸೌಲಭ್ಯ ಪಡೆಯಬಯಸುವವರು ಪ್ರತಿದಿನ ಬೆಲೆಗಳನ್ನು ತುಲನೆ ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ. ಕೆಲವಾರು ದಿನಗಳಲ್ಲಿ ಯಾವ ದಿನಗಳಂದು ಬೆಲೆ ಕಡಿಮೆಯಿರುತ್ತದೆ ಎಂಬ ಅಂದಾಜು ಸಿಗುತ್ತದೆ. ಹಾಗಾಗಿ ಉತ್ತಮ ಬೆಲೆಗಳು ಇಂಟರ್ನೆಟ್ ಸತತವಾಗಿ ಬಳಸುತ್ತಿರುವವರಿಗೆ ಮಾತ್ರ ಲಭ್ಯವಾಗುತ್ತವೆ. ಹಾಗಾಗಿ ಒಂದೇ ವಿಮಾನದಲ್ಲಿ ಬೇರೆಬೇರೆ ಬೆಲೆಯ ಟಿಕೇಟ್ ಕೊಂಡವರು ಪ್ರಯಾಣಿಸುತ್ತಿರುತ್ತಾರೆ. ರಜೆಯ ಸಮಯದಲ್ಲಿ ಬೆಲೆ ವಿಪರೀತ ಏರಿ ಇತರ ವಿಮಾನದರಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲದಂತಾದಾಗ ಗೊಂದಲಗೊಂಡ ಶ್ರೀಸಾಮಾನ್ಯ ’ಇದೆಂತಹಾ ಬಜೆಟ್ ಏರ್ ಲೈನ್ಸ್’ ಎಂದು ಪ್ರಶ್ನಿಸುವಂತಾಗುತ್ತದೆ.

ಒಟ್ಟಾರೆ ಬಜೆಟ್ ಏರ್‌ಲೈನ್ಸ್ ಮಧ್ಯಮವರ್ಗದವರಿಗೆ ಒಂದು ವರವಾಗಿ ಪರಿಣಮಿಸಿರುವುದರಲ್ಲಿ ಎರೆಡು ಮಾತಿಲ್ಲ. ಈ ಅನಾನುಕೂಲತೆಗಳು ಬರುವ ದಿನಗಳಲ್ಲಿ ಬಜೆಟ್ ಏರ್‌ಲೈನ್ಸ್ ತನ್ನ ವ್ಯಾಪ್ತಿ ಹೆಚ್ಚಿಸುವುದರ ಮೂಲಕ ಹಾಗೂ ಇನ್ನೂ ಉತ್ತಮ ಸೇವೆ ಒದಗಿಸುವ ಮೂಲಕ ಕೊನೆಗಾಣಿಸಬಹುದೇನೋ, ಕಾದು ನೋಡಬೇಕು. 

ಶುಕ್ರವಾರ, ಮಾರ್ಚ್ 11, 2011

ಬೆಂಗಳೂರು: ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಲೋಕಾರ್ಪಣೆ- ಅಧ್ಯಕ್ಷತೆ ವಹಿಸಿದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ


ಮುನ್ನುಡಿ ಬರೆದ ಡಾ. ನಾ ಸೋಮೇಶ್ವರ, ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಉಪಸ್ಥಿತಿ














ಬೆಂಗಳೂರು, ಮಾರ್ಚ್ 8: ಅನಿವಾಸಿ ಕನ್ನಡಿಗ ಶ್ರೀ ಅರ್ಶದ್ ಹುಸೇನ್ ಅವರು ಬರೆದಿರುವ ವಿಸ್ಮಯ ಪ್ಲಸ್ ಕೃತಿ ಕಳೆದ ಮಾರ್ಚ್ ರ ಸೋಮವಾರ ಸಂಜೆ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಿಲಾಯೆನ್ಸ್ ಟೈಮ್ ಔಟ್ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆಗೊಂಡಿತು.
 

ಶನಿವಾರ, ಫೆಬ್ರವರಿ 26, 2011

ಬೆಂಗಳೂರು: ಅರ್ಶದ್ ಹುಸೇನ್ ರವರ 'ವಿಸ್ಮಯ ಪ್ಲಸ್' ಕೃತಿ ಬಿಡುಗಡೆ - ಬೆಂಗಳೂರಿನಲ್ಲಿ ಮಾರ್ಚ್ 7 ರಂದು.


ಸ್ಥಳ: ರಿಲಾಯನ್ಸ್ ಟೈಮ್ ಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸಮಯ: ಸಂಜೆ 6 ಘಂಟೆಗೆ

ಬೆಂಗಳೂರು: ಮುಂದಿನ ಸೋಮವಾರ (ಮಾರ್ಚ್ 7) ಸಂಜೆ ಆರು ಘಂಟೆಗೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ಸಭಾಂಗಣದಲ್ಲಿ ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಬಿಡುಗಡೆಯಾಗಲಿದೆ.

ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ಬಿ.ಎಂ.ಹನೀಫ್, ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ ಮತ್ತು ಖ್ಯಾತ ಲೇಖಕಿ ಶ್ರೀಮತಿ ನೇಮಿಚಂದ್ರ ಅವರು ಉಪಸ್ಥಿತರಿರುತ್ತಾರೆ.

ವಿಶ್ವದ ಹಲವು ವಿಸ್ಮಯಗಳನ್ನು ಬಣ್ಣದ ಚಿತ್ರ ಹಾಗೂ ಹೆಚ್ಚಿನ ಮಾಹಿತಿಗಳನ್ನು ಸೀಡಿಯ ಮೂಲಕ ನೀಡುವ ವಿಸ್ಮಯ ಪ್ಲಸ್ ಒಂದು ನೂತನ ಪ್ರಯೋಗವಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.































































ಎಲ್ಲರಿಗೂ ಸ್ವಾಗತ ಬಯಸುವ
ಅರ್ಶದ್ ಹುಸೇನ್ ಎಂ.ಹೆಚ್,
ಕೊಪ್ಪ.

ಶನಿವಾರ, ಫೆಬ್ರವರಿ 19, 2011

ಚಿಲ್ಲರೆ ಮಿಲಿಯನೇರ್


ಎಲ್ಲರಿಗೂ ಚಿಕ್ಕಂದಿನಲ್ಲಿ ಏನಾದರೊಂದು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಆದರೆ ದಿನಕಳೆದಂತೆ ಆ ವಸ್ತುವಿನ ಬಗ್ಗೆ ಮೋಹ ಕಡಿಮೆಯಾಗಿ ಅಥವಾ ಸಂಗ್ರಹಿಸಿರುವ ಮೌಲ್ಯ ನಗಣ್ಯವೆಂದು ಅನಿಸತೊಡಗಿದನೆ ಸಂಗ್ರಹಭ್ಯಾಸ ನಿಲ್ಲುತ್ತದೆ. ಸಂಗ್ರಹಿಸಿದ ವಸ್ತುಗಳು ಅಟ್ಟಕ್ಕೂ ಕಸದಬುಟ್ಟಿಗೋ ಸೇರುತ್ತವೆ.

ರಷ್ಯಾದ ಸೈಬೀರಿಯಾ ಜಗತ್ತಿನ ಅತ್ಯಂತ ಶೀತಲ ಜನವಸತಿಯಿರುವ ಪ್ರದೇಶ. ಸೈಬೀರಿಯಾದ ಅತ್ಯಂತ ದೊಡ್ಡ ಮತ್ತು ರಷ್ಯಾದ ಮೂರನೆಯ ಅತಿದೊಡ್ಡ ನಗರ ನೋವೋಸಿಬಿರ್ಸ್ಕ್ (Novosibirsk). ಈ ನಗರದ ಯೂರಿ ಬಾಬಿನ್ ಎಂಬ ನಾಗರಿಕರು ಸುಮಾರು ಹದಿಮೂರು ವರ್ಷಗಳ ಹಿಂದೆ ರಷ್ಯಾದ ನಾಣ್ಯಗಳಾದ ಕೋಪೆಕ್ ಗಳನ್ನು ಸಂಗ್ರಹಿಸಲು ತೊಡಗಿದರು. 1998 ರಲ್ಲಿ ರಷ್ಯಾದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಕ್ರಾಂತಿಯಿಂದಾಗಿ ಈ ನಾಣ್ಯಗಳ ಮೌಲ್ಯ ನಗಣ್ಯವಾಗಲಿತ್ತು. ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ನಾಣ್ಯಗಳನ್ನು ಬದಲಿಸಿಕೊಳ್ಳುವ ಚಡಪಡಿಕೆಯಲ್ಲಿದ್ದರೆ ಯೂರಿ ಮಾತ್ರ ತದ್ವಿರುದ್ಧವಾಗಿ ಕೋಪೆಕ್ ನಾಣ್ಯಗಳನ್ನು ಸಂಗ್ರಹಿಸುತ್ತಾ ಹೋದರು. (ರಷ್ಯಾದ ಹಣ ರೂಬಲ್ - 1 ರೂಬಲ್ - 100 ಕೋಪೆಕ್). ಎಲ್ಲರೂ ನೋಟುಗಳನ್ನೇ ಕೇಳಿದರೆ ಇವರು ಮಾತ್ರ ಎಲ್ಲರಿಂದ ನಾಣ್ಯಗಳನ್ನೇ ಬಯಸತೊಡಗಿದರು.



















ಹೀಗೇ ನಾಣ್ಯಗಳನ್ನು ಕೂಡಿಡುವ ಗೀಳು ಹದಿಮೂರು ವರ್ಷಗಳ ಬಳಿಕ ಅವರನ್ನು ಓರ್ವ ಮಿಲಿಯನೇರ್ ನನ್ನಾಗಿಸಿದೆ. ಅಂದರೆ ಅವರ ಬಳಿ ಈಗ ಬರೋಬ್ಬರಿ ಐದು ಮಿಲಿಯನ್ (ಐವತ್ತು ಲಕ್ಷ) ಕೋಪೆಕ್ ನಾಣ್ಯಗಳಿವೆ! ಈ ನಾಣ್ಯಗಳ ಒಟ್ಟು ತೂಕ ಏಳುವರೆ ಟನ್. ವಿಪರ್ಯಾಸವೆಂದರೆ ಅಷ್ಟೂ ನಾಣ್ಯಗಳ ಇಂದಿನ ಬೆಲೆ ಕೇವಲ ಸಾವಿರದೈನೂರು ಡಾಲರ್ ಮಾತ್ರ (ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳು). ಆದರೆ ಯೂರಿ ಬಾಬಿನ್ ರವರಿಗೆ ಈ ನಾಣ್ಯಗಳನ್ನು ಹೊಂದಿರುವುದೇ ಒಂದು ಹೆಮ್ಮೆಯ ವಿಷಯ. ಈ ನಾಣ್ಯಗಳಿಂದ ಆವೃತವಾಗಿರುವಂತೆ ತಮ್ಮ ಓವರ್ ಕೋಟ್ ಒಂದನ್ನೂ ಹೊಸಿಕೊಂಡಿದ್ದಾರೆ. ಈ ನಾಣ್ಯಗಳಿಂದ ಸ್ನಾನ ಮಾಡುವುದು, ಸರ ಮಾಡಿಕೊಂಡು ಧರಿಸುವುದು ಅವರಿಗೆ ಸಂತೋಷ ಕೊಡುವ ಪ್ರಕ್ರಿಯೆಗಳು.

ಅಂದ ಹಾಗೆ ಈ ನಾಣ್ಯಗ ಗೀಳು ಅವರಿಗೆ 'ಕೋಪೆಕ್ ಕಿಂಗ್ 'ಎಂಬ ಅನ್ವರ್ಥನಾಮವನ್ನೂ ಗಳಿಸಿಕೊಟ್ಟಿದೆ. 

ಶನಿವಾರ, ಫೆಬ್ರವರಿ 5, 2011

ಆರು ವರ್ಷದ ಈ ಕಿಶೋರಿ ವಿಶ್ವದ ಅತಿ ಕಿರಿಯ ಯೋಗಶಿಕ್ಷಕಿ


ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಶಿಕ್ಷಕಿ ಎಂದು ಗಾದೆ ಹೇಳುತ್ತದೆ. ಮನೆ ಮತ್ತು ತಾಯಿಯಿಂದ ಶಿಕ್ಷಣ ಪಡೆದ ಮಗು ಸ್ವತಃ ಶಿಕ್ಷಕಿಯಾಗುವಾಗ ವರ್ಷಗಳೇ ಕಳೆದಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡೆ ಎಂಬ ಕಿಶೋರಿ ಕೇವಲ ಆರು ವರ್ಷದ ವಯಸ್ಸಿಯಲ್ಲಿಯೇ ಯೋಗಾಭ್ಯಾಸ ತರಬೇತಿ ನೀಡುವ ಶಿಕ್ಷಕಿಯಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.

ಸೋಮವಾರ, ಜನವರಿ 31, 2011

ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ

ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರದ ಜ್ವರ, ವಾಂತಿ, ಅತಿಸಾರ ಈ ರೋಗದ ಲಕ್ಷಣಗಳು. ಮಲೇರಿಯಾದಂತೆಯೇ ಈ ರೋಗವೂ ಸೊಳ್ಳೆಗಳಿಂದ ಹರಡುವ ವೈರಸ್ಸಿನಿಂದ ಬರುವ ರೋಗ. ಮಲೇರಿಯಾ ಹರಡಲು ಅನಾಫಿಲಿಸ್ ಸೊಳ್ಳೆ ಕಾರಣವಾದರೆ ಡೆಂಗ್ಯೂ ಹರಡಲು ಏಡೆಸ್ ಏಗೆಪ್ತಿ (Aedes aegypti ) ಎಂಬ ಸೊಳ್ಳೆ ಕಾರಣ. ಪ್ರತಿವರ್ಷ ಈ ಸುಮಾರು ಹತ್ತು ಕೋಟಿ ಜನರಿಗೆ ಈ ರೋಗ ಹಬ್ಬುತ್ತಿದೆ. ಅವರಲ್ಲಿ ಇಪ್ಪತ್ತೆರಡು ಸಾವಿರ ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಬಹುತೇಕರು ಮಕ್ಕಳೇ ಆಗಿದ್ದಾರೆ.


ಡೆಂಗ್ಯೂ ಜ್ವರಕ್ಕೆ ಔಷಧಿ ಇದೆಯಾದರೂ ಡೆಂಗ್ಯೂ ಸೊಳ್ಳೆಯನ್ನು ಸಮರ್ಥವಾಗಿ ನಿಗ್ರಹಿಸಬಲ್ಲ ಕ್ರಮ ಇದುವರೆಗೆ ಕಂಡುಹಿಡಿಯಲಾಗಿಲ್ಲ. ಈ ನಿಟ್ಟಿನಲ್ಲಿ ಬ್ರಿಟನ್ನಿನ ಆಕ್ಸಿಟೆಕ್ ಲಿಮಿಟೆಡ್ ಸಂಸ್ಥೆ (Oxitec Limited) ಡೆಂಗ್ಯೂ ಪೀಡಿತ ದೇಶಗಳಲ್ಲಿ ಸಂಶೋಧನೆ ನಡೆಸಿತು. ಈ ಸೊಳ್ಳೆ ಒಂದು ಬಹಳ ಜಾಣ ಸೊಳ್ಳೆ. ಇದನ್ನು ನಿಗ್ರಹಿಸಲು ಯಾವುದೇ ಕೀಟನಾಶಕ ಬಳಸಿದರೂ ಕೆಲವೇ ದಿನಗಳಲ್ಲಿ ಅದರ ದೇಹದೊಳಕ್ಕೆ ಆ ಕೀಟನಾಶಕ ಬಾಧಿಸದಂತೆ ಪ್ರತ್ಯೌಷಧವೊಂದು ತಯಾರಾಗುತ್ತಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಹೊಸ ಪೀಳಿಗೆಯೊಂದು ಹೊರಬರುತ್ತಿತ್ತು. ಹಲವು ವರ್ಷಗಳ ಕಾಲ ವಿಜ್ಞಾನಿಗಳಿಗೆ ಈ ಸೊಳ್ಳೆಗಳು ಸವಾಲಾಗಿ ಪರಿಣಮಿಸಿದ್ದವು.


ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದೊಂದು ಗಾದೆ. ಆ ಪ್ರಕಾರ ಸೊಳ್ಳೆಗಳೇ ಸೊಳ್ಳೆಗಳಿಗೆ ಮಾರಕವಾಗುವಂತೆ ಆಗುವ ಕ್ರಮದ ಬಗ್ಗೆ ಸುಮಾರು ಎರಡು ವರ್ಷಗಳಿಂದ ಆಕ್ಸಿಟೆಕ್ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಈ ಸೊಳ್ಳೆಗಳ ಒಂದು ಪ್ರತಿರೂಪಿ ಗಂಡು ಸೊಳ್ಳೆಗಳನ್ನು ಕೃತಕವಾಗಿ ಸೃಷ್ಟಿಸಿದ್ದಾರೆ. ಈ ಗಂಡು ಸೊಳ್ಳೆಗಳು ರೋಗ ಹರಡುವ ಹೆಣ್ಣು ಸೊಳ್ಳೆಗಳೊಂದಿಗೆ ಕೂಡಿ ಹೊಸ ಪೀಳಿಗೆಯ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಮರಿಗಳು ಯಥಾವತ್ತು ಸೊಳ್ಳೆಯಾಗಿದ್ದರೂ ಮನುಷ್ಯನನ್ನು ಕಚ್ಚುವ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಮನುಷ್ಯನನ್ನು ಕಚ್ಚದೇ ಇದ್ದಾಗ ಡೆಂಗ್ಯೂ ಹರಡುವ ಸಂಭವವೂ ಕಡಿಮೆಯಾಗುತ್ತದೆ. ಪ್ರಾಯೋಗಿಕವಾಗಿ ಮೇ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಕೇಯ್ಮನ್ ಐಲಾಂಡ್ ದ್ವೀಪಗಳ ಸುಮಾರು ನಲವತ್ತು ಎಕರೆ ಪ್ರದೇಶದಲ್ಲಿ ಈ ಸೊಳ್ಳೆಗಳನ್ನು ಬಿಡಲಾಗಿದೆ. ಅಕ್ಟೋಬರ್ ತಿಂಗಳವರೆಗಿನ ಸಮೀಕ್ಷೆಯಲ್ಲಿ ಆ ಪ್ರದೇಶದಲ್ಲಿ ಕಂಡುಬಂದ ಹೊಸ ಡೆಂಗ್ಯೂ ಪೀಡಿತರ ಸಂಖ್ಯೆ ಶೇಖಡಾ ಎಂಭತ್ತರಷ್ಟು ಕಡಿಮೆಯಾಗಿದೆ. ಇತ್ತ ಮನುಷ್ಯನನ್ನು ಕಚ್ಚದ ಸೊಳ್ಳೆಮರಿಗಳು ದೊಡ್ಡವಾಗಿ ತಮ್ಮದೇ ಗುಣಲಕ್ಷಣಗಳನ್ನು ಹೊಂದಿರುವ ಮರಿಗಳನ್ನು ಉತ್ಪಾದಿಸುತ್ತವೆ. ಆದುದರಿಂದ ಈ ಸೊಳ್ಳೆಗಳನ್ನು ಅವಲಂಬಿಸಿರುವ ಜೀವಜಾಲವೂ ಉಳಿಯುತ್ತದೆ. ದಿನಕಳೆದಂತೆ ರೋಗ ಹರಡುವ ಸಾಮರ್ಥ್ಯವಿರುವ ಸೊಳ್ಳೆಗಳು ನಿರ್ನಾಮವಾಗುತ್ತವೆ.



ಈ ವರದಿಯನ್ನು ಪ್ರಕಟಿಸುತ್ತಿದ್ದಂತೆಯೇ ವಿಶ್ವದೆಲ್ಲೆಡೆಯಿಂದ ಆಕ್ಸಿಟೆಕ್ ಸಂಸ್ಥೆಗೆ ಬೇಡಿಕೆ ಬರಲಾರಂಭಿಸಿದೆ. ಫ್ಲೋರಿಡಾ, ಬ್ರೆಜಿಲ್, ಪನಾಮಾ ದೇಶಗಳು ಆದಷ್ಟು ಬೇಗನೇ ತಮ್ಮ ದೇಶದಲ್ಲಿ ಈ ಕ್ರಮವನ್ನು ಅಳವಡಿಸಿಕೊಳ್ಳುವ ಆತುರ ತೋರಿವೆ.