ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ನವೆಂಬರ್ 19, 2011

ವಿಶಿಷ್ಟ ಉಡುಗೆ - ಪಿಂಗಾಣಿ ಡ್ರೆಸ್


ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ ನಿರ್ಮಿಸುವ ಉಡುಗೆಗಳಿಗೆ ಚೀನಾದ ಪಿಂಗಾಣಿ ಬಟ್ಟಲುಗಳೇ ಬಟ್ಟೆ! ಈ ಉಡುಗೆಗಳು ಕೇವಲ ತೋರಿಕೆಗಾಗಿ ಅಲ್ಲ, ಇವನ್ನು ಉಟ್ಟು ನಡೆದಾಡಲೂಬಹುದು! ಆದರೆ ಸ್ವಲ್ಪ ಭಾರ ಅಷ್ಟೇ.


ಚೀನಾದ ಉತ್ಖತನ ಸ್ಥಳಗಳಲ್ಲಿ ಸಾವಿರಾರು ಪಿಂಗಾಣಿ ಬಟ್ಟಲುಗಳು, ತಟ್ಟೆಗಳು ದೊರಕಿವೆ. ಆದರೆ ಬಹಳಷ್ಟು ಕಾಲದ ಹೊಡೆತಕ್ಕೆ ಅಥವಾ ಅಗೆಯುವವರ ನಿರ್ಲಕ್ಷ್ಯದಿಂದಾಗಿ ತುಂಡುತುಂಡಾಗಿವೆ. ಸ್ವಲ್ಪ ಪ್ರಮಾಣದಲ್ಲಿದ್ದರೆ ಅವನ್ನು ಎಸೆದು ಕೈ ತೊಳೆದುಕೊಳ್ಳಬಹುದಾಗಿತ್ತು. ಆದರೆ ಆಗಾಧ ಪ್ರಮಾಣದಲ್ಲಿ ದೊರಕಿದ್ದ ಈ ಚೂರುಗಳನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕ್ಸಿಯಾವೋಫೆಂಗ್ ಯೋಚಿಸಿದಾಗ ಹೊಳೆದದ್ದೇ ಉಡುಪುಗಳ ಪರಿಕಲ್ಪನೆ.
ಸುಮಾರು ಸಾವಿರ ವರ್ಷಗಳ ಹಿಂದಿನ ಮಿಂಗ್ ರಾಜವಂಶದ ಕಾಲದಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೆ ನಿರ್ಮಿತವಾದ ಪಿಂಗಾಣಿ ಬಟ್ಟಲುಗಳ ಚೂರುಗಳು ಇವರ ಉಡುಪುಗಳಿಗೆ ಬೇಕಾದ ಪ್ರಮುಖ ಪರಿಕರಗಳು. ಈ ಚೂರುಗಳಲ್ಲಿ ತಮಗೆ ಅಗತ್ಯವಾಗಿರುವ ಉಡುಪಿಗೆ ತಕ್ಕ ಚೂರುಗಳನ್ನು ಆಯ್ದು ಸೂಕ್ತ ಅಳತೆಯಲ್ಲಿ ಕತ್ತರಿಸಿ, ಪ್ರತಿ ಚೂರು ಪಕ್ಕದ ಚೂರಿನೊಂದಿಗೆ ಕನಿಷ್ಟ ಅಂತರವಿರುವಂತೆ ಸವೆಸಿ ಚಿಕ್ಕ ತೂತುಗಳನ್ನು ಕೊರೆದು ಬೆಳ್ಳಿಯ ದಾರಗಳಿಂದ ಒಂದನ್ನೊಂದು ಬೆಸೆಯುತ್ತಾರೆ. ಅತ್ಯಂತ ಹೆಚ್ಚಿನ ಕಾಳಜಿ ಹಾಗೂ ತಾಳ್ಮೆ ಬೇಡುವ ಈ ಕಾರ್ಯ ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಸವೆಸುವುದು ಒಂದಿಷ್ಟು ಹೆಚ್ಚು ಕಡಿಮೆಯಾದರೂ ಆ ಚೂರುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಗಾಜು, ಪಿಂಗಾಣಿ ಮೊದಲಾದ ವಸ್ತುಗಳಲ್ಲಿ ತೂರು ಕೊರೆಯುವುದು ಅಷ್ಟು ಸುಲಭವಾದ ಕೆಲಸವಲ್ಲ. ತುಂಬಾ ಬಿಧುರ (brittle) ಗುಣವುಳ್ಳ ಪಿಂಗಾಣಿ, ಗಾಜು ಮೊದಲದವುಗಳನ್ನು ಬಗ್ಗಿಸುವುದು ಸಾಧ್ಯವೇ ಇಲ್ಲ. ಸ್ವಲ್ಪ ಬಗ್ಗಿಸಿದರೂ ಇವು ಚೂರುಚೂರಾಗುತ್ತವೆ. ಹಾಗಾಗಿ ದಾರ ತೂರುವಷ್ಟು ಸೂಕ್ಷ್ಮವಾದ ತೂತು ಕೊರೆಯಲು ಅಪಾರ ತಾಳ್ಮೆ ಅಗತ್ಯ.ವಿಭಿನ್ನ ಪರಿಕಲ್ಪನೆಯ ಈ ಉಡುಗೆಗಳು ಶೀಘ್ರವೇ ಹಲವರ ಮನಸೆಳೆದವು. ಅದರಲ್ಲಿ ಪ್ರಮುಖವಾದುದು ವಿಖ್ಯಾತ ಪೋಲೋ ಟೀ. ಶರ್ಟ್ ತರ್ಯಾರಿಕಾ ಸಂಸ್ಥೆಯಾದ ಫ್ರಾನ್ಸಿನ ಲಾಕೋಸ್ಟೆ. ೨೦೧೦ ರ ಕ್ರಿಸ್ಮಸ್ ಗಾಗಿ ವಿಶೇಷ ಟೀ ಶರ್ಟ್ ನಿರ್ಮಿಸಿಕೊಡುವಂತೆ ಅದು ಲೀ ಯವರನ್ನು ಕೇಳಿಕೊಂಡಿತು. ಚೀನಾ ಸರ್ಕಾರದ ಕಾನೂನಿನ ಪ್ರಕಾರ ಪ್ರಾಚೀನ ಕಲಾಕೃತಿಗಳನಾಗಲೀ ಅದರ ಯಾವುದೇ ಚೂರುಗಳನ್ನಾಗಲೀ ವಿದೇಶಗಳಿಗೆ ರಫ್ತು ಮಾಡುವಂತಿಲ್ಲ. ಆಗ ಅವರಿಗೆ ಅನಿವಾರ್ಯವಾಗಿ ಪ್ರತ್ಯೇಕ ಪಿಂಗಾಣಿ ಬಟ್ಟಲುಗಳನ್ನು ನಿರ್ಮಿಸಿ ಲಾಕೋಸ್ಟೆ ಸಂಸ್ಥೆಯ ಲಾಂಛನವಾದ ಮೊಸಳೆಯ ಚಿತ್ರವನ್ನು ಬಿಡಿಸಬೇಕಾಯ್ತು. ಬಳಿಕ ಆ ಬಟ್ಟಲುಗಳನ್ನು ಬೇಕಾದ ಆಕೃತಿಗಳಲ್ಲಿ ಕತ್ತರಿಸಿ ನೂಲಿನಿಂದ ಒಂದಕ್ಕೊಂದು ಜೋಡಿಸಿ ಯಥಾತ್ ಲಾಕೋಸ್ಟೆ ಪೋಲೋ ಟೀ ಶರ್ಟ್ ನಿರ್ಮಿಸಿದರು. ತಲಾ ೩೧೭ ಚೂರುಗಳನ್ನು ಒಳಗೊಂಡ ಎರಡು ಟೀ ಶರ್ಟ್ ಗಳನ್ನು ಈಗ ಪ್ಯಾರಿಸ್ ನ Musee Des Arts et Metiers ಹಾಗೂ ಬೀಜಿಂಗ್ ನ Red Gate Gallery ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. 
ಹಲವು ವರ್ಷಗಳಿಂದ ನೂರಾರು ಪಿಂಗಾಣಿ ಉಡುಪುಗಳನ್ನು ನಿರ್ಮಿಸುತ್ತಿರುವ ಲೀ ಇದುವರೆಗೆ ಪುರುಷರ, ಮಹಿಳೆಯರ ಮೇಲ್ವಸ್ತ್ರ ಮಾತ್ರವಲ್ಲದೇ ಸೈನಿಕರು ಯುದ್ಧದಲ್ಲಿ ಉಡುವ ಉಡುಗೆ, ಚೀನಾದ ಸಾಂಪ್ರಾದಾಯಿಕ ಉಡುಗೆಗಳ ರೂಪವನ್ನೂ ಪಡೆದಿವೆ.

ವ್ಯರ್ಥವಾಗಿ ಬಿದ್ದಿರುವ ಕಸವೂ ಕಲಾವಿದನ ಕೈಗಳ ಮೂಲಕ ಮನಸೆಳೆಯುವ ಕಲಾಕೃತಿಯಾಗಬಲ್ಲದು ಎಂಬುದಕ್ಕೆ ಈ ಪಿಂಗಾಣಿ ಉಡುಗೆಗಳೇ ಸಾಕ್ಷಿ.


2 ಕಾಮೆಂಟ್‌ಗಳು: