ಈ ಬ್ಲಾಗ್ ಅನ್ನು ಹುಡುಕಿ

ವಿಸ್ಮಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಸ್ಮಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜನವರಿ 16, 2012

ಗಾಳಿಯೇ ಇಲ್ಲದ ಟೈರ್ - ಬ್ರಿಡ್ಜ್ ಸ್ಟೋನ್ ಸಂಸ್ಥೆಯ ನೂತನ ಬಿಡುಗಡೆ


ಗಾಳಿಯೇ ಬೇಕಿಲ್ಲದ ಹೊಸ ಟೈರ್ ನ ಅವಿಷ್ಕಾರದ ವಿಷಯವನ್ನು ಖ್ಯಾತ ಟೈರ್ ನಿರ್ಮಾಣ ಸಂಸ್ಥೆಯಾದ ಬ್ರಿಡ್ಜ್ ಸ್ಟೋನ್ ಕಳೆದ ತಿಂಗಳು ಪ್ರಕಟಿಸಿದೆ. ನಾನ್ ನ್ಯೂಮಾಟಿಕ್ (non-pneumatic) ಅಥವಾ ವಾಯುರಹಿತ ಟೈರುಗಳ ತಂತ್ರಜ್ಞಾನದ ಪರಿಕಲ್ಪನೆ ಬೆನ್ನು ಹತ್ತಿರುವ ಹಲವು ಸಂಸ್ಥೆಗಳ ಪೈಕಿ ಬ್ರಿಡ್ಜ್ ಸ್ಟೋನ್ ಸಹಾ ಒಂದು. ಈಗ ಬಳಸಲ್ಪಡುತ್ತಿರುವ ಟೈರುಗಳ ಬದಲಿಗೆ ನೇರವಾಗಿ ಬಳಸಬಹುದಾದ ವಾಯುರಹಿತ ಟೈರಿನ ಆವಿಷ್ಕಾರ ಈಗ ನನಸಾಗಿದೆ.

ಅತಿ ಕಡಿಮೆ ಪ್ರದೂಷಣೆ ಇರುವ, ಪರಿಸರಕ್ಕೆ ಹಾನಿಮಾಡದ, ವಾತಾವರಣಕ್ಕೆ ಅತಿಕಡಿಮೆ ಪ್ರಮಾಣದಲ್ಲಿ ಇಂಗಾಲವನ್ನು ಬಿಡುಗಡೆಮಾಡುವ ಲಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಟೈರನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಇದಕ್ಕೆ ಬಳಸಲಾಗುವ ಕಚ್ಚಾವಸ್ತುಗಳನ್ನು ಹೆಚ್ಚೂಕಡಿಮೆ ಸಂಪೂರ್ಣವಾಗಿ ಮರುಬಳಕೆ ಮಾಡಬಹುದು. ಮಧ್ಯಭಾಗದ ರಿಮ್ ಹಗುರವಾದ ಆದರೆ ಧೃಡವಾದ ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ. ಟೈರಿನ ಉಳಿದ ಭಾಗದಲ್ಲಿ ನಮ್ಮ ಬೈಕ್ ಚಕ್ರದಲ್ಲಿರುವಂತಹ ಕಡ್ದಿಗಳ ಬದಲಿಗೆ ವಿಶೇಷ ಥರ್ಮೋಪ್ಲಾಸ್ಟಿಕ್ ರೆಸಿನ್ ವಸ್ತುವಿನ ಅಗಲ ಪಟ್ಟಿಗಳು ಒಂದು ವಿಶೇಷ ವಿನ್ಯಾಸದಲ್ಲಿ ಅಚ್ಚುಹಾಕಲ್ಪಟ್ಟಿದೆ. ಈ ವಿನ್ಯಾಸದಿಂದ ಸಾಮಾನ್ಯ ಟೈರು ಹೊರಬಲ್ಲಕ್ಕಿಂತಲೂ ಮೂರು ಪಟ್ಟು
 ಹೆಚ್ಚಿನ ಭಾರವನ್ನು ಈ ಟೈರು ಹೊರಬಲ್ಲದು. ಆಯಾ ಕಾರಿಗೆ ಅಗತ್ಯವಿರುವ ಗಾಳಿಯ ಒತ್ತಡಕ್ಕೆ ಅನುಗುಣವಾಗಿ ಈ ಟೈರನ್ನು ನಿರ್ಮಿಸಲಾಗಿದ್ದು ಪರಿಧಿಯಲ್ಲಿರುವ ರಬ್ಬರ್ ಸಾಮಾನ್ಯ ಟೈರಿಗೆ ಬಳಸುವ ರಬ್ಬರೇ ಆಗಿದೆ. ಈ ರಬ್ಬರ್ ಸವೆದ ಬಳಿಕ ಸುಲಭವಾಗಿ ಹೊಸ ರಬ್ಬರ್ ಕವಚವನ್ನು ಬದಲಿಸಿಕೊಳ್ಳಬಹುದು.




ಈಗ ಬಳಕೆಯಲ್ಲಿರುವ ವಾಯು ತುಂಬಿಸುವ ಟೈರುಗಳಿಗೆ ಹೋಲಿಸಿದರೆ ವಾಯುರಹಿತ ಟೈರುಗಳಿಂದ ಹಲವು ಅನುಕೂಲತೆಗಳಿವೆ. ಮೊದಲನೆಯದಾಗಿ ವೇಗದಲ್ಲಿರುವ ಕಾರಿನ ಟೈರ್ ಸ್ಪೋಟಗೊಂಡು ಆಗುವ ಅನಾಹುತಕ್ಕೆ ಕಡಿವಾಣ. ಎರಡನೆಯದಾಗಿ ಗಾಳಿಯೇ ಇಲ್ಲದಿರುವುದರಿಂದ ಟೈರಿನ ವಾಯು ಒತ್ತಡ ಅವಲಂಬಿಸಿ ಏರುಪೇರಾಗುವ ಮೈಲೇಜ್ ಪ್ರಶ್ನೆಯೇ ಇಲ್ಲ. ಒಂದು ವೇಳೆ ಮೊಳೆ ಮುಂತಾದ ಮೊನಚಾದ ವಸ್ತುಗಳು ಚುಚ್ಚಿಕೊಂಡರೂ ಪಂಚರ್ ಆಗುವ ಮಾತೇ ಇಲ್ಲ. ಅಲ್ಲೇ ಚುಚ್ಚಿಕೊಂಡಿರುವ ಮೊಳೆಯನ್ನು ಬಳಿಕ ಯಾವಾಗಲಾದರೂ ಕಿತ್ತು ಹಾಕಿದರಾಯಿತು. ಸಾಮಾನ್ಯ ಟೈರಿನ ಕಾಲುಭಾಗದಷ್ಟು ಭಾರವಿರುವ ಈ ಟೈರುಗಳಿಂದ ಹೆಚ್ಚಿನ ಮೈಲೇಜ್ ಸಿಗುತ್ತದೆ. ವಾಹನ ಚಾಲನೆಯಲ್ಲಿರುವಾಗ ವಿಶೇಷ ವಿನ್ಯಾಸದ ಪಟ್ಟಿಗಳ ಮೂಲಕ ಗಾಳಿ ಹಾಯುವುದರಿಂದ ಟೈರು ಬಿಸಿಯಾಗುವುದೇ ಇಲ್ಲ.





ಈ ಹಿಂದೆಯೂ ಗಾಳಿ ಇಲ್ಲದ ಟೈರ್ ನಿರ್ಮಿಸಲು ಖ್ಯಾತ ಟೈರು ಸಂಸ್ಥೆಗಳಾದ ಮಿಶೆಲಿನ್ ಹಾಗೂ ರೆಸಿಲಿಯೆಂಟ್ ಟೆಕ್ನಾಲಜೀಸ್ ಪ್ರಯತ್ನಿಸಿ ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದ್ದವು. ಆದರೆ ಈ ಟೈರುಗಳು ವಿಪರೀತ ದುಬಾರಿಯಾದವೂ, ಅಳವಡಿಸಲು ವಾಹನದ ವಿನ್ಯಾಸದಲ್ಲಿ ಬದಲಾವಣೆ ಬೇಡುವಂತಹವೂ, ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ಉತ್ಪಾದಿಸಲು ಆಗದಂತಹವೂ ಆಗಿದ್ದರಿಂದ ಹೆಚ್ಚಿನ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಬ್ರಿಡ್ಜ್ ಸ್ಟೋನ್ ಟೈರು ಮಾತ್ರ ಈ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಭವಿಷ್ಯದಲ್ಲಿ ಜನರ ಮೆಚ್ಚುಗೆ ಗಳಿಸುವ ಭರವಸೆ ಮೂಡಿಸಿದೆ.
ಮಿಶೆಲಿನ್

ರೆಸಿಲಿಯೆಂಟ್ ಟೆಕ್ನಾಲಜೀಸ್


ಈಗಿನ್ನೂ ಪ್ರಾರಂಭದ ಹಂತದಲ್ಲಿರುವ ಈ ತಂತ್ರಜ್ಞಾನ ಟೈರು ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಹುದು. ಥರ್ಮೋಪ್ಲಾಸ್ಟಿಕ್ ರೆಸಿನ್ ಸಹಾ ಲೋಹಕ್ಕಿಂತ ತುಂಬಾ ಕಡಿಮೆ ಬೆಲೆಯುಳ್ಳದ್ದದುದರಿಂದ ಹಾಗೂ ರಬ್ಬರ್ ಸಹಾ ಕಡಿಮೆ ಪ್ರಮಾಣದಲ್ಲಿ ಉಪಯೋಗವಾಗುವುದರಿಂದ ಪ್ರತಿ ಟೈರಿನ ಬೆಲೆಯೂ ಕಡಿಮೆಯಾಗಬಹುದು. ಆದರೆ ಆ ಹಂತ ತಲುಪಿ ಜನಸಾಮಾನ್ಯರಿಗೆ ಲಭ್ಯವಾಗಬೇಕಾದರೆ ಎಷ್ಟು ವರ್ಷ ಬೇಕಾಗಬಹುದೋ ಕಾದು ನೋಡಬೇಕು. 

ಶನಿವಾರ, ನವೆಂಬರ್ 19, 2011

ವಿಶಿಷ್ಟ ಉಡುಗೆ - ಪಿಂಗಾಣಿ ಡ್ರೆಸ್


ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ ನಿರ್ಮಿಸುವ ಉಡುಗೆಗಳಿಗೆ ಚೀನಾದ ಪಿಂಗಾಣಿ ಬಟ್ಟಲುಗಳೇ ಬಟ್ಟೆ! ಈ ಉಡುಗೆಗಳು ಕೇವಲ ತೋರಿಕೆಗಾಗಿ ಅಲ್ಲ, ಇವನ್ನು ಉಟ್ಟು ನಡೆದಾಡಲೂಬಹುದು! ಆದರೆ ಸ್ವಲ್ಪ ಭಾರ ಅಷ್ಟೇ.










ಚೀನಾದ ಉತ್ಖತನ ಸ್ಥಳಗಳಲ್ಲಿ ಸಾವಿರಾರು ಪಿಂಗಾಣಿ ಬಟ್ಟಲುಗಳು, ತಟ್ಟೆಗಳು ದೊರಕಿವೆ. ಆದರೆ ಬಹಳಷ್ಟು ಕಾಲದ ಹೊಡೆತಕ್ಕೆ ಅಥವಾ ಅಗೆಯುವವರ ನಿರ್ಲಕ್ಷ್ಯದಿಂದಾಗಿ ತುಂಡುತುಂಡಾಗಿವೆ. ಸ್ವಲ್ಪ ಪ್ರಮಾಣದಲ್ಲಿದ್ದರೆ ಅವನ್ನು ಎಸೆದು ಕೈ ತೊಳೆದುಕೊಳ್ಳಬಹುದಾಗಿತ್ತು. ಆದರೆ ಆಗಾಧ ಪ್ರಮಾಣದಲ್ಲಿ ದೊರಕಿದ್ದ ಈ ಚೂರುಗಳನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕ್ಸಿಯಾವೋಫೆಂಗ್ ಯೋಚಿಸಿದಾಗ ಹೊಳೆದದ್ದೇ ಉಡುಪುಗಳ ಪರಿಕಲ್ಪನೆ.
ಸುಮಾರು ಸಾವಿರ ವರ್ಷಗಳ ಹಿಂದಿನ ಮಿಂಗ್ ರಾಜವಂಶದ ಕಾಲದಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೆ ನಿರ್ಮಿತವಾದ ಪಿಂಗಾಣಿ ಬಟ್ಟಲುಗಳ ಚೂರುಗಳು ಇವರ ಉಡುಪುಗಳಿಗೆ ಬೇಕಾದ ಪ್ರಮುಖ ಪರಿಕರಗಳು. ಈ ಚೂರುಗಳಲ್ಲಿ ತಮಗೆ ಅಗತ್ಯವಾಗಿರುವ ಉಡುಪಿಗೆ ತಕ್ಕ ಚೂರುಗಳನ್ನು ಆಯ್ದು ಸೂಕ್ತ ಅಳತೆಯಲ್ಲಿ ಕತ್ತರಿಸಿ, ಪ್ರತಿ ಚೂರು ಪಕ್ಕದ ಚೂರಿನೊಂದಿಗೆ ಕನಿಷ್ಟ ಅಂತರವಿರುವಂತೆ ಸವೆಸಿ ಚಿಕ್ಕ ತೂತುಗಳನ್ನು ಕೊರೆದು ಬೆಳ್ಳಿಯ ದಾರಗಳಿಂದ ಒಂದನ್ನೊಂದು ಬೆಸೆಯುತ್ತಾರೆ. ಅತ್ಯಂತ ಹೆಚ್ಚಿನ ಕಾಳಜಿ ಹಾಗೂ ತಾಳ್ಮೆ ಬೇಡುವ ಈ ಕಾರ್ಯ ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಸವೆಸುವುದು ಒಂದಿಷ್ಟು ಹೆಚ್ಚು ಕಡಿಮೆಯಾದರೂ ಆ ಚೂರುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಗಾಜು, ಪಿಂಗಾಣಿ ಮೊದಲಾದ ವಸ್ತುಗಳಲ್ಲಿ ತೂರು ಕೊರೆಯುವುದು ಅಷ್ಟು ಸುಲಭವಾದ ಕೆಲಸವಲ್ಲ. ತುಂಬಾ ಬಿಧುರ (brittle) ಗುಣವುಳ್ಳ ಪಿಂಗಾಣಿ, ಗಾಜು ಮೊದಲದವುಗಳನ್ನು ಬಗ್ಗಿಸುವುದು ಸಾಧ್ಯವೇ ಇಲ್ಲ. ಸ್ವಲ್ಪ ಬಗ್ಗಿಸಿದರೂ ಇವು ಚೂರುಚೂರಾಗುತ್ತವೆ. ಹಾಗಾಗಿ ದಾರ ತೂರುವಷ್ಟು ಸೂಕ್ಷ್ಮವಾದ ತೂತು ಕೊರೆಯಲು ಅಪಾರ ತಾಳ್ಮೆ ಅಗತ್ಯ.



ವಿಭಿನ್ನ ಪರಿಕಲ್ಪನೆಯ ಈ ಉಡುಗೆಗಳು ಶೀಘ್ರವೇ ಹಲವರ ಮನಸೆಳೆದವು. ಅದರಲ್ಲಿ ಪ್ರಮುಖವಾದುದು ವಿಖ್ಯಾತ ಪೋಲೋ ಟೀ. ಶರ್ಟ್ ತರ್ಯಾರಿಕಾ ಸಂಸ್ಥೆಯಾದ ಫ್ರಾನ್ಸಿನ ಲಾಕೋಸ್ಟೆ. ೨೦೧೦ ರ ಕ್ರಿಸ್ಮಸ್ ಗಾಗಿ ವಿಶೇಷ ಟೀ ಶರ್ಟ್ ನಿರ್ಮಿಸಿಕೊಡುವಂತೆ ಅದು ಲೀ ಯವರನ್ನು ಕೇಳಿಕೊಂಡಿತು. ಚೀನಾ ಸರ್ಕಾರದ ಕಾನೂನಿನ ಪ್ರಕಾರ ಪ್ರಾಚೀನ ಕಲಾಕೃತಿಗಳನಾಗಲೀ ಅದರ ಯಾವುದೇ ಚೂರುಗಳನ್ನಾಗಲೀ ವಿದೇಶಗಳಿಗೆ ರಫ್ತು ಮಾಡುವಂತಿಲ್ಲ. ಆಗ ಅವರಿಗೆ ಅನಿವಾರ್ಯವಾಗಿ ಪ್ರತ್ಯೇಕ ಪಿಂಗಾಣಿ ಬಟ್ಟಲುಗಳನ್ನು ನಿರ್ಮಿಸಿ ಲಾಕೋಸ್ಟೆ ಸಂಸ್ಥೆಯ ಲಾಂಛನವಾದ ಮೊಸಳೆಯ ಚಿತ್ರವನ್ನು ಬಿಡಿಸಬೇಕಾಯ್ತು. ಬಳಿಕ ಆ ಬಟ್ಟಲುಗಳನ್ನು ಬೇಕಾದ ಆಕೃತಿಗಳಲ್ಲಿ ಕತ್ತರಿಸಿ ನೂಲಿನಿಂದ ಒಂದಕ್ಕೊಂದು ಜೋಡಿಸಿ ಯಥಾತ್ ಲಾಕೋಸ್ಟೆ ಪೋಲೋ ಟೀ ಶರ್ಟ್ ನಿರ್ಮಿಸಿದರು. ತಲಾ ೩೧೭ ಚೂರುಗಳನ್ನು ಒಳಗೊಂಡ ಎರಡು ಟೀ ಶರ್ಟ್ ಗಳನ್ನು ಈಗ ಪ್ಯಾರಿಸ್ ನ Musee Des Arts et Metiers ಹಾಗೂ ಬೀಜಿಂಗ್ ನ Red Gate Gallery ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. 




ಹಲವು ವರ್ಷಗಳಿಂದ ನೂರಾರು ಪಿಂಗಾಣಿ ಉಡುಪುಗಳನ್ನು ನಿರ್ಮಿಸುತ್ತಿರುವ ಲೀ ಇದುವರೆಗೆ ಪುರುಷರ, ಮಹಿಳೆಯರ ಮೇಲ್ವಸ್ತ್ರ ಮಾತ್ರವಲ್ಲದೇ ಸೈನಿಕರು ಯುದ್ಧದಲ್ಲಿ ಉಡುವ ಉಡುಗೆ, ಚೀನಾದ ಸಾಂಪ್ರಾದಾಯಿಕ ಉಡುಗೆಗಳ ರೂಪವನ್ನೂ ಪಡೆದಿವೆ.

ವ್ಯರ್ಥವಾಗಿ ಬಿದ್ದಿರುವ ಕಸವೂ ಕಲಾವಿದನ ಕೈಗಳ ಮೂಲಕ ಮನಸೆಳೆಯುವ ಕಲಾಕೃತಿಯಾಗಬಲ್ಲದು ಎಂಬುದಕ್ಕೆ ಈ ಪಿಂಗಾಣಿ ಉಡುಗೆಗಳೇ ಸಾಕ್ಷಿ.