ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 7, 2018

ಮರುಬಿಸಿ ಮಾಡಲೇಬಾರದ, ಮಾಡಿದರೆ ವಿಷವಾಗುವ ಏಳು ಆಹಾರಗಳು

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/9i7Q3M


ಇಂದು ಮನೆಮನೆಯಲ್ಲಿರುವ ಫ್ರಿಜ್ ಗೆ ತಂಗಳುಪೆಟ್ಟಿಗೆ ಎಂಬ ಅನ್ವರ್ಥನಾಮವಿದೆ. ಏಕಾಗಿ ತಂಗಳು ಈ ಫ್ರಿಜ್ಜಿಗೆ ಅಂಟಿಕೊಂಡಿತು? ನಮ್ಮ ಹಿರಿಯರ ಕಾಲದಲ್ಲಿ ಫ್ರಿಜ್ ಇಲ್ಲದಿದ್ದುದರಿಂದ ಇಂದು ಮಾಡಿದ ಅಡುಗೆಯನ್ನು ನಾಳೆಗಾಗಿ ಇಡುವ ಪದ್ದತಿ ಇರಲಿಲ್ಲ. ಮರುದಿನಕ್ಕೆ ಅದು ಕೊಂಚ ಹಾಳಾಗುವ ಹಂತದಲ್ಲಿರುತ್ತಿತ್ತು. ಇದನ್ನು ತಿಂದರೆ ಆರೋಗ್ಯ ಕೆಡುವ ಸಂಭವಿದ್ದುದರಿಂದ ಎಸೆದುಬಿಡುತ್ತಿದ್ದರು. ಆದರೆ ಒಪ್ಪೊತ್ತು ಊಟಕ್ಕೂ ಗತಿಯಿಲ್ಲದ ಬಡವರು ಈ ಊಟವನ್ನು ಸೇವಿಸಲು ಸಿದ್ಧರಿಸುತ್ತಿದ್ದರು. ಇದಕ್ಕಾಗಿಯೇ ಇದಕ್ಕೆ ತಂಗಳು ಎಂಬ ಹೆಸರು ಬಂದಿದೆ. ಇಂದು ಫ್ರಿಜ್ ನಲ್ಲಿಟ್ಟ ಆಹಾರವನ್ನು ಮರುದಿನವೂ ಬಳಸಬಹುದಾದುದರಿಂದ ಇದಕ್ಕೆ ತಂಗಳುಪೆಟ್ಟಿಗೆ ಎನ್ನುತ್ತಾರೆ.

ಆದರೆ ಎಲ್ಲಾ ಆಹಾರಗಳೂ ಫ್ರಿಜ್ಜಿನಲ್ಲಿಟ್ಟರೂ ಮರುದಿನದ ಬಳಕೆಗೆ ಯೋಗ್ಯವಲ್ಲ. ಆಹಾರತಜ್ಞರು ಈ ಬಗ್ಗೆ ನಡೆಸಿದ ಸಂಶೋಧನೆಗಳಿಂದ ಕೆಲವು ಆಹಾರಗಳು ಫ್ರಿಜ್ಜಿನಲ್ಲಿಟ್ಟರೂ ಒಳಗೇ ಕೆಲವು ರಾಸಾಯನಿಕಗಳ ಉತ್ಪತ್ತಿಯಿಂದ ವಿಷಕರವಾಗುವುದನ್ನು ಪ್ರಕಟಿಸಿದ್ದಾರೆ. ಈ ಆಹಾರಗಳನ್ನು ಮತ್ತೊಮ್ಮೆ ಬಿಸಿ ಮಾಡಿದರೆ ಈ ರಾಸಾಯನಿಕಗಳು ಆಹಾರದಲ್ಲಿದ್ದ ಪೋಷಕಾಂಶಗಳ ಗುಣವನ್ನು ಕೆಡಿಸಿ ಆರೋಗ್ಯಕ್ಕೆ ಮಾರಕವಾದ ವಿಷವನ್ನಾಗಿ ಪರಿವರ್ತಿಸಿಬಿಡುತ್ತವೆ. ಈ ಬಗ್ಗೆ ಅರಿವಿರದೇ ತಂಗಳನ್ನು ಬಿಸಿಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಮುನ್ನ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಅರಿವು ಅಗತ್ಯವಾಗಿದೆ. ಇದರಲ್ಲಿ ಪ್ರಮುಖವಾದ ಏಳು ಆಹಾರಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ.

೧) ಆಲುಗಡ್ಡೆ
ಆಲುಗಡ್ಡೆ
ಐರ್ಲೆಂಡ್, ಈಜಿಪ್ಟ್, ಕೀನ್ಯಾ, ಸೋಮಾಲಿಯಾ ಮೊದಲಾದ ಆಫ್ರಿಕದ ದೇಶಗಳಿಗೆ ಆಲುಗಡ್ಡೆಯೇ ಪ್ರಮುಖ ಆಹಾರ. ಆದರೆ ಇವರಾರೂ ಇಂದು ಬೇಯಿಸಿದ ಆಲುಗಡ್ಡೆಯನ್ನು ನಾಳೆ ತಿನ್ನುವುದಿಲ್ಲ. ಏಕೆಂದು ಕೇಳಿದರೆ ಇಂದಿನ ಆಲುಗಡ್ಡೆ ನಾಳೆಯ ವಿಷ ಎಂಬ ಉತ್ತರ ದೊರಕುತ್ತದೆ. ಆಲುಗಡ್ಡೆ ಬೇಯಿಸುವ ಮುನ್ನ ಹಲವು ದಿನಗಳವರೆಗೆ ಕಾಪಾಡಿ ಇಡಬಹುದಾದರೂ ಒಮ್ಮೆ ಬೇಯಿಸಿ ತಣಿಸಿದ ಬಳಿಕ ಮತ್ತೊಮ್ಮೆ ಬೇಯಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಹಾಗಾಗಿ ಆಲುಗಡ್ಡೆ ಉಪಯೋಗಿಸಿ ತಯಾರಿಸಿದ ಖಾದ್ಯಗಳನ್ನು ಅಂದೇ ಬಳಸಿ, ಮರುದಿನಕ್ಕೆ ಇಟ್ಟುಕೊಳ್ಳಬೇಡಿ. 

೨) ಕೋಳಿಮಾಂಸ
ಕೋಳಿಮಾಂಸ
ಕೋಳಿಮಾಂಸದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಇದೆ. ಇದು ಆರೋಗ್ಯಕರ ಆಹಾರವಾಗಿದ್ದರೂ ಮರುದಿನಕ್ಕೆ ಉಳಿಸಿ ಮತ್ತೊಮ್ಮೆ ಬಿಸಿಮಾಡಿದರೆ ಈ ಪ್ರೋಟೀನ್ ನ ಕೆಲವು ಅಂಶಗಳು ವಿಷವಾಗಿ ಪರಿವರ್ತಿತವಾಗುತ್ತವೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಗಳ ಮೂಲಕ Campylobacter ಮತ್ತು
Salmonella ಎಂಬ ಹೆಸರಿನ ಎರಡು ಬ್ಯಾಕ್ಟೀರಿಯಾಗಳು ಮರುಬಿಸಿ ಮಾಡಿದ ಈ ಪ್ರೋಟೀನ್ ನಲ್ಲಿ ಕಂಡುಬಂದಿವೆ. (ಹಸಿ ಹಾಲು, ಬೇಯಿಸದ ಮಾಂಸದಲ್ಲಿಯೂ ಈ ಬ್ಯಾಕ್ಟೀರಿಯಾಗಳಿರುತ್ತವೆ). ಈ ಜೋಡಿ ಜಠರದಲ್ಲಿ ಅಜೀರ್ಣತೆ, ಆಮ್ಲೀಯತೆ ಹೆಚ್ಚಿಸುವುದು ಮೊದಲಾದ ತೊಂದರೆಗಳನ್ನು ಒಡ್ಡುತ್ತವೆ. ಅಚ್ಚರಿ ಎಂದರೆ ಇಂದಿನ ಕೋಳಿಮಾಂಸದ ಖಾದ್ಯವನ್ನು ಮರುದಿನ ಬಿಸಿಮಾಡದೇ ತಣ್ಣಗೇ ಇದ್ದಾಗ ಇರದ ಈ ಬ್ಯಾಕ್ಟೀರಿಯಾಗಳು ಬಿಸಿಮಾಡಿದಾಕ್ಷಣ ಪ್ರತ್ಯಕ್ಷವಾಗುತ್ತವೆ. ವಾತಾಪಿ ಜೀರ್ಣೋಭವ ಕಥೆ ನೆನಪಾಯಿತೇ? ಆದ್ದರಿಂದ ಅನಿವಾರ್ಯವಾದರೆ ಬಿಸಿಮಾಡದೇ ಕೋಳಿಮಾಂಸವನ್ನು ಸೇವಿಸಬಹುದು, ಆದರೆ ಬಳಸದಿರುವುದೇ ಒಳಿತು ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ.

೩) ಅಣಬೆ
ಅಣಬೆ
ಅಣಬೆಗಳಲ್ಲೂ ತಿನ್ನಬಾರದ ಪ್ರಬೇಧಗಳಿವೆ. ಆದರೆ ತಿನ್ನಬಹುದಾದ ಅಣಬೆಯ ಖಾದ್ಯವನ್ನು ಸಿದ್ಧಪಡಿಸಿ ಕೂಡಲೇ ತಿಂದರೆ ಮಾತ್ರ ಕ್ಷೇಮ. ಒಮ್ಮೆ ತಣಿದರೆ ಇದರ ರಾಸಾಯನಿಕ ಸಂಯೋಜನೆಗಳೆಲ್ಲಾ ಕಲಸುಮೇಲೋಗರವಾಗಿ ವಿಷವಾಗಿ ಪರಿವರ್ತಿತವಾಗಿಬಿಡುತ್ತದೆ.

೪) ಬೀಟ್ ರೂಟ್
ಬೀಟ್‌ರೂಟ್
ಬೀಟ್ ರೂಟ್ ಪೋಷಕಾಂಶಗಳ ಆಗರವಾಗಿದ್ದರೂ ನೈಟ್ರೇಟ್ ಅಂಶವೂ ಹೆಚ್ಚಾಗಿಯೇ ಇದೆ. ಮರುಬಿಸಿ ಮಾಡಿದರೆ ಈ ನೈಟ್ರೇಟುಗಳೂ ವಿಷವಾಗಿ ಪರಿಣಮಿಸುವುದರಿಂದ ತಾಜಾ ಖಾದ್ಯವನ್ನು ಮಾತ್ರ ಸೇವಿಸುವುದು ಆರೋಗ್ಯಕರವಾಗಿದೆ.

೫) ಪಾಲಕ್ ಸೊಪ್ಪು
ಪಾಲಕ್ ಸೊಪ್ಪು
ಕಬ್ಬಿಣದ ಅಂಶ ಹೇರಳವಾಗಿರುವ ಪಾಲಕ್ ಮತ್ತು ಬಸಲೆ ಸೊಪ್ಪುಗಳ ಸಾರು ಮತ್ತು ಖಾದ್ಯಗಳನ್ನೂ ಮರುಬಿಸಿಮಾಡುವುದು ಒಳಿತಲ್ಲ. ಏಕೆಂದರೆ ಇದರಲ್ಲೂ ನೈಟ್ರೇಟುಗಳ ಅಂಶ ಹೆಚ್ಚಿದ್ದು ಬಿಸಿಮಾಡಿದಾಕ್ಷಣ ರಾಸಾಯನಿಕ ಬದಲಾವಣೆಗೆ ಒಳಗಾಗಿ ವಿಷಕಾರಿಯಾಗುತ್ತದೆ.

೬) ಮೊಟ್ಟೆಗಳು
ಮೊಟ್ಟೆಗಳು
ಮೊಟ್ಟೆಗಳನ್ನು ಬೇಯಿಸುವಾಗ ಒಳಗಣ ಹಳದಿ ಅಂಚಿನಲ್ಲಿ ಕಪ್ಪಾದಷ್ಟೂ ಹೆಚ್ಚು ವಿಷಕಾರಿಯಾಗಿದೆ ಎಂದರ್ಥ. ಹಾಗಾಗಿ ಆಹಾರತಜ್ಞರು ಮೊಟ್ಟೆಯನ್ನು ಕೇವಲ ಒಂದು ನಿಮಿಷದ ಅವಧಿಗೆ ಮಾತ್ರ ಬೇಯಿಸಲು ಸಲಹೆ ನೀಡುತ್ತಾರೆ. ಅಲ್ಲದೇ ಮೊಟ್ಟೆಯನ್ನು ಇನ್ನಾವ ರೂಪದಲ್ಲಿ ಅಡುಗೆ ಮಾಡಿದರೂ, ಅಂದರೆ ಆಮ್ಲೆಟ್, ಎಗ್ ಬುರ್ಜಿ, ಎಗ್ ಮಸಾಲಾ ಮೊದಲಾದವುಗಳನ್ನು ಬಿಸಿಯಿದ್ದಂತೆಯೇ ಸೇವಿಸಬೇಕು. ಒಮ್ಮೆ ತಣಿದ ಬಳಿಕ ಮರುಬಿಸಿ ಮಾಡಲೇಬಾರದು. ಏಕೆಂದರೆ ಮರುಬಿಸಿ ಮಾಡಿದಾಗ ಇದರಲ್ಲಿ ಹಲವು ವಿಷಕಾರಿ ವಸ್ತುಗಳು ಉತ್ಪನ್ನವಾಗಿ ಹೊಟ್ಟೆಯನ್ನು ಕೆಡಿಸುತ್ತವೆ.

೭) ಸೆಲೆರಿ ಸೊಪ್ಪು
ಸೆಲೆರಿ ಸೊಪ್ಪು
ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುವ ಸೆಲೆರಿ ಸೊಪ್ಪು ಸಹಾ ನೈಟ್ರೇಟುಗಳನ್ನು ಹೊಂದಿದೆ. ಸಾಮಾನ್ಯವಾಗಿ ಸೂಪ್ ಮಾಡಲು ಈ ಸೊಪ್ಪನ್ನು ಉಪಯೋಗಿಸಲಾಗುತ್ತದೆ. ಹೆಚ್ಚುವರಿ ಸೂಪ್ ಫ್ರಿಜ್ಜಿನೊಳಗಿರಿಸಿ ನಾಳೆಗಾಗಿ ಇಡುತ್ತಾರೆ. ಆದರೆ ಮರುಬಿಸಿ ಮಾಡಿದ ಸೂಪ್ ವಿಷಯುಕ್ತವಾಗಿರುವುದರಿಂದ ಇದನ್ನು ಸೇವಿಸದಿರುವುದು ಉತ್ತಮ. 

1 ಕಾಮೆಂಟ್‌: