1948 ರಲ್ಲಿ ಗರ್ಭದಲ್ಲಿಯೇ ಸತ್ತ ಭ್ರೂಣವೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ವರ್ಷದ ಚೀನೀ ವೃದ್ಧೆಯೊಬ್ಬರ ಕಥೆ ಬೆಳಕಿಗೆ ಬಂದಿದೆ.
ಲಂಡನ್ನಿನ ಕಿಂಗ್ಸ್‍ಟನ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಲಿಯು ಅನ್ಬಿನ್ ಅವರ ಕ್ಲಿನಿಕ್ಕಿಗೆ ಜನವರಿ ಮೊದಲ ವಾರದಲ್ಲಿ ಹುವಾಂಗ್ ಯಿಜುನ್ ಹುವಾಂಗ್ಜಿಯೋಟನ್ ಎಂಬ 92 ವರ್ಷದ ಚೀನೀ ವೃದ್ಧೆಯೊಬ್ಬರು ಹೊಟ್ಟೆನೋವು ಎಂದು ಹೇಳಿಕೊಂಡು ಚಿಕಿತ್ಸೆಗಾಗಿ ಬಂದಿದ್ದರು. ಮನೆಗೆಲಸದ ಯಾವುದೋ ಘಳಿಗೆಯಲ್ಲಿ ಪೆಟ್ಟಾಗಿ ನೋವು ತಡೆಯಲಾಗದೇ ಆಕೆ ವೈದ್ಯರಲ್ಲಿ ಬಂದಿದ್ದರು. ಆಕೆಯ ಉಬ್ಬಿದ್ದ ಹೊಟ್ಟೆಯನ್ನು ವೈದ್ಯರು ಸ್ಕ್ಯಾನ್ ಉಪಕರಣದಿಂದ ಪರಿಶೀಲಿಸಿದ ವೈದ್ಯರು ಅವಾಕ್ಕಾದರು. ಆಕೆಯ ಹೊಟ್ಟೆಯಲ್ಲಿ ಸಂಪೂರ್ಣವಾಗಿ ಬೆಳೆದ ಆದರೆ ಸತ್ತ ಭ್ರೂಣವಿತ್ತು. ತಮ್ಮ ಕಣ್ಣನ್ನು ನಂಬಲಾಗದೇ ಡಾ. ಅನ್ಬಿನ್ ಎರೆಡು ಮೂರು ಸಲ ಸ್ಕ್ಯಾನ್ ಮಾಡಿ ತಮ್ಮ ಸಹೋದ್ಯೋಗಿಗಳೊಂದಿಗೆ ಪರಾಮರ್ಶಿಸಿ ತಮ್ಮ ತಪಾಸಣೆಯನ್ನು ಖಚಿತಪಡಿಸಿಕೊಂಡರು.
ಆ ಬಳಿಕ ಆಕೆಯನ್ನು ಪ್ರಶ್ನಿಸಿದವರಿಗೆ ಆಕೆ ಹೇಳಿದ ಕಥೆ ಹೃದಯ ವಿದ್ರಾವಕವಾಗಿತ್ತು. ಸುಮಾರು ಅರವತ್ತು ವರ್ಷಗಳ ಹಿಂದೆ ಉತ್ತಮ ಜೀವನ ಅರಸಿ ಲಂಡನ್ನಿಗೆ ಬಂದು ಅಲ್ಲಿನ ನಿವಾಸಿಗಳಾದ ಆಕೆಯ ಜೀವನ ಕಷ್ಟಕರವಾಗಿಯೇ ಸಾಗಿತ್ತು. 1948ರಲ್ಲಿ ಆಕೆ ಗರ್ಭ ಧರಿಸಿದ ಸುಮಾರು ಎಂಟು ತಿಂಗಳಿಗೇ ಗರ್ಭದೊಳಗಿನ ಮಗು ಸತ್ತಿತ್ತು. ಆದರೆ ಶಸ್ತ್ರಕ್ರಿಯೆ ನಡೆಸಿ ಸತ್ತಭ್ರೂಣವನ್ನು ಹೊರತೆಗೆಯಲು ವೈದ್ಯರು ನೂರು ಪೌಂಡ್ (ಸುಮಾರು ಏಳು ಸಾವಿರ ರೂಪಾಯಿ) ಚಿಕಿತ್ಸಾವೆಚ್ಚವನ್ನು ಕೇಳಿದ್ದರು. ಆಗಿನ ಕಾಲಕ್ಕೆ ನೂರು ಪೌಂಡ್ ಎಂದರೆ ಇಡಿಯ ಕುಟುಂಬ ಹಲವು ವರ್ಷಗಳ ಕಾಲ ಕೆಲಸ ಮಾಡಿದರೂ ಒಟ್ಟು ಮಾಡಲಸಾಧ್ಯವಾದ ಮೊತ್ತವಾಗಿತ್ತು. ಆದ್ದರಿಂದ ನಿರ್ವಾಹವಿಲ್ಲದೇ ಅದನ್ನು ತೆಗೆಸದೇ ದೇವರ ಮೇಲೆ ಭಾರ ಹಾಕಿ ಹಾಗೆಯೇ ಬಿಟ್ಟರು. ಸುಮಾರು ನಲವತ್ತು ವರ್ಷದವರೆಗೂ ಯಾರಿಗೂ ಈ ವಿಷಯ ಹೇಳದ ಆಕೆಯ ಹೊಟ್ಟೆಯಲ್ಲಿ ಯಾವುದೋ ಗಡ್ಡೆಯಿದೆ ಎಂದೇ ಎಲ್ಲರೂ ನಂಬಿದ್ದರು.
ಆದರೆ ಕಳೆದ ವಾರದ ಸ್ಕ್ಯಾನ್ ಬಳಿಕ ನಿಜವಿಷಯವನ್ನು ಆಕೆ ಸನ್ ಪತ್ರಿಕೆಯ ವರದಿಗಾರರಿಗೆ ತಿಳಿಸಿದ್ದಾರೆ. ಸಾಧಾರಣವಾಗಿ ಭ್ರೂಣ ಹೊಟ್ಟೆಯಲ್ಲಿಯೇ ಸತ್ತರೆ ಕಾಲಕ್ರಮೇಣ ಕರಗಿ ಹೋಗುತ್ತದೆ. ಆದರೆ ನಲವತ್ತು ವರ್ಷಗಳ ಬಳಿಕವೂ ಅದೇ ಅವಸ್ಥೆಯಲ್ಲಿರುವುದು ಒಂದು ವಿಚಿತ್ರವಾಗಿದೆ ಎಂದು ಕಿಂಗ್ಸ್ ಟನ್ ಆಸ್ಪತ್ರೆಯ ಗೈನಕಾಲಜಿ ವಿಭಾಗದ ನಿರ್ದೇಶಕರಾಗಿರುವ ಡಾ. ಕ್ಸು. ಕ್ಸಿಯಾಮಿಂಗ್ ತಿಳಿಸಿದ್ದಾರೆ. ಈ ಗರ್ಭವನ್ನು ಹೇಗೆ ಮತ್ತು ಯಾವಾಗ ತೆಗೆಯಬೇಕೆಂದು ನಿಪುಣ ವೈದ್ಯರ ತಂಡ ಸಮಾಲೋಚಿಸುತ್ತಿದೆ. ಶೀಘ್ರದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಯಲಿದೆ.
ಅರವತ್ತು ವರ್ಷಗಳ ಕಾಲ ಗರ್ಭಿಣಿಯಾಗಿದ್ದ 92 ರ ವೃದ್ಧೆ ಹುವಾಂಗ್ ಯಿಜುನ್ ಹುವಾಂಗ್ಜಿಯೋಟನ್