ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಫೆಬ್ರವರಿ 22, 2009

ಪವಿತ್ರ ನೀರು: ಇನ್ನು ಮೇಲೆ ಬಾಟಲಿಗಳಲ್ಲಿ ಲಭ್ಯ



ಹಿಂದೂಗಳಿಗೆ ಗಂಗಾಜಲವಿದೆ, ಮುಸ್ಲಿಮರಿಗೆ ಜಮ್ ಜಮ್ ಜಲವಿದೆ. ಅದೇ ಕ್ರಿಶ್ಚಿಯನರಿಗೆ? ಏನೂ ಇಲ್ಲವೆಂದು ಇನ್ನು ಕೊರಗಬೇಕಾಗಿಲ್ಲ. ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಈ ಕೊರಗನ್ನು ನೀಗಿಸಿದೆ. ಮಿನರಲ್ ನೀರು ಅಥವಾ ವಿಟಾಮಿನ್ ನೀರನನ್ನು ಇನ್ನು ಮೇಲೆ ಮರೆತುಬಿಡಿ, -ಪವಿತ್ರ ನೀರು - (Holy Water) ಮಾತ್ರ ಕುಡಿಯಿರಿ ಎಂದು ತನ್ನ ಜಾಹೀರಾತುಗಳಲ್ಲಿ ಪ್ರಚಾರ ನೀಡುತ್ತಿದೆ.


ಬೈಬಲ್ ಹೊಸ ಟೆಸ್ಟಮೆಂಟ್ ಪ್ರಕಾರ ಜಾನ್ ಅವರು ಯೇಸುಕ್ರಿಸ್ತನನ್ನು ಜೋರ್ಡಾನ್ ನದಿಯ ನೀರಿನಿಂದ ದೀಕ್ಷಾಸ್ನಾನ ಮಾಡಿಸಿದ್ದರು. ಬೈಬಲ್ ನಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ  ಪವಿತ್ರ ನೀರನ್ನು ಬಳಸಿದ ಉಲ್ಲೇಖವಿದೆ. ದೀಕ್ಷೆ ಪಡೆದ ಈ ನೀರಿನಿಂದ ಬಳಕೆದಾರನಿಗೆ ನೀರಿನ ಪೂರೈಕೆ ಮಾತ್ರವಲ್ಲ, ಪವಿತ್ರತೆಯ ಅನುಭೂತಿಯನ್ನೂ, ಆರೋಗ್ಯಕ್ಕೆ ಬೇಕಾದ ಲವಣಗಳನ್ನೂ ನೀಡುವುದರಿಂದ ಸಾಧಾರಣ ನೀರಿಗಿಂತ ಭಿನ್ನವಾಗಿದೆ ಎಂದು ಮಾರುಕಟ್ಟೆಯಲ್ಲಿ ಈ ಸಂಸ್ಥೆಗಳು ಪ್ರಚಾರ ನಡೆಸುತ್ತಿವೆ.

ಕ್ಯಾಲಿಫೋರ್ನಿಯಾ ಮೂಲದ ವೇಯ್ನ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯು ಪವಿತ್ರ ಕುಡಿಯುವ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈ ನೀರು ಆಂಗ್ಲಿಕನ್ ಅಥವಾ ರೋಮನ್ ಕ್ಯಾಥೋಲಿಕ್ ಪಾದ್ರಿಯವರಿಂದ ದೀಕ್ಷೆಪಡೆದೆ ಎಂದು ತನ್ನ ಪ್ರಚಾರದಲ್ಲಿ ವಿವರಿಸಿದೆ. ಬೇಕಾದರೆ ಇದನ್ನು ಪರಿಶೀಲಿಸಲೂ ಬಹುದೆಂದು ವಿವರಿಸಿದೆ. ಈ ನೀರನ್ನು ಪ್ರತಿದಿನ ಕುಡಿಯುವುದರಿಂದ ಇತರರಿಗೆ ದಯೆ ಮನ್ನು ಅನುಕಂಪ ತೋರಿಸಲು ಅನುವುಮಾಡಿಕೊಡುತ್ತದೆ ಎಂದು ವೇಯ್ನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಬ್ರಿಯಾನ್ ಜರ್ಮನ್ನ್ ಅವರು ತಿಳಿಸಿದ್ದಾರೆ.


ಲಿಕ್ವಿಡ್ ಓ.ಎಂ. ಎಂಬ ಹೆಸರಿನ ಇನ್ನೊಂದು ಪವಿತ್ರ ನೀರನ್ನು ಮಾರಾಟ ಮಾಡುತ್ತಿರುವ ಸಂಸ್ಥೆಯು ಈ ನೀರಿನಲ್ಲಿ ಧನಾತ್ಮಕ  ದೃಷ್ಟಿಕೋನವನ್ನು ಬಿಂಬಿಸುವ ಕಂಪನಗಳನ್ನು ಹೊಂದಿರುವುದೆಂದು ಪ್ರತಿಪಾದಿಸುತ್ತಿದೆ.  ಈ ನೀರನ್ನು ಚಿಕಾಗೋದ ಶ್ರವಣ ಚಿಕಿತ್ಸಾಕಾರರಾದ ಕೆನ್ನಿ ಮಜ್ರೂಸ್ಕಿ ಎಂಬುವರು ಅಭಿವೃದ್ಧಿಪಡಿಸಿದ್ದಾರೆ.  ಈ ನೀರನ್ನು ಕುಡಿಯುವುದರಿಂದ ಟಿಬೆಟ್ಟಿನಲ್ಲಿ ದೊಡ್ಡ ಘಂಟೆ ಬಾರಿಸಿದಾಗ ಕಂಪನಗಳಿಂದ ಆಗುವ ಅನುಭೂತಿಯೇ ಆಗುವುದೆಂದು ವಿವರಿಸುತ್ತಾರೆ. ಈ ಅನುಭೂತಿಯನ್ನು ಪಡೆಯಲು ನೀರನ್ನು ಕುಡಿಯಲೇ ಬೇಕಾಗಿಲ್ಲ, ಕೇವಲ ಕೈಯಲ್ಲಿ ಹಿಡಿದುಕೊಂಡರೂ ಈ ಕಂಪನಗಳ ಸ್ಪರ್ಶಜ್ಞಾನವನ್ನು ಪಡೆಯಬಹುದಾಗಿದೆ ಎಂದು ಈ ನೀರಿನ ಮಹತ್ವವನ್ನು ವಿವರಿಸುತ್ತಾರೆ.

ಈ ನೀರು ಹತ್ತು ಕ್ರಿಶ್ಚಿಯನ್ ಲೇಬಲ್ಲುಗಳ ಮೂಲಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಉದಾಹರಣೆಗೆ ವರ್ಜಿನ್ ಮೇರಿ ಚಿತ್ರವಿರುವ ನೀರು ನಿಮ್ಮಲ್ಲಿ ನೀವು ಕೇಂದ್ರೀಕೃತವಾಗಿರಿ, ನಿಮ್ಮನ್ನು ನೀವು ಬಲವಾಗಿ ನಂಬಿರಿ, ಮತ್ತು ದೇವರಲ್ಲಿ ನಂಬಿಕೆಯಿಡಿ ಎಂಬ ಹಣೆಪಟ್ಟಿ ಹೊಂದಿದೆ. ಸಧ್ಯಕ್ಕೆ ಮೂರು ಕಂಪನಿಗಳು ಈ ಪವಿತ್ರ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬರುವ ಲಾಭದಲ್ಲಿ ಒಂದು ಅಂಶವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ನೀಡುತ್ತಿವೆ.

ಆದರೆ ಮತವನ್ನಾಧರಿಸಿ ನೀರನ್ನು ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಕ್ರಿಶ್ಚಿಯನ್ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ