ಈ ಬ್ಲಾಗ್ ಅನ್ನು ಹುಡುಕಿ

cucumber ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
cucumber ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 2, 2009

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?








ವಿಭಿನ್ನವಾಗಿ ಕಾಣುವ ಈ ವಾಹನವನ್ನು ವಿಶೇಷವಾಗಿ ಸೌತೆಕಾಯಿ ಕೊಯ್ಲಿಗೆಂದೇ ನಿರ್ಮಿಸಲಾಗಿದೆ.  












ಬೆಲಾರಸ್, ರಷ್ಯಾ ಹಾಗೂ ಪೂರ್ವ ಯೋರೋಪ್ ನಡುವಣ ಒಂದು ರಾಷ್ಟ್ರ. ಇಲ್ಲಿನ ಮರಳು ಮಿಶ್ರಿತ ಮಣ್ಣು ಸೌತೆಬೆಳೆಗೆ ಅತ್ಯಂತ ಸೂಕ್ತ. ಅಂತೆಯೇ ಬೆಳೆಯುವ ಬೆಳೆಯ ಪ್ರಮಾಣವೂ ಆಗಾಧ.  ಆದರೆ ಒಮ್ಮೆಲೇ ಕಟಾವಿಗೆ ಬರುವ ಬೆಳೆಯನ್ನು ಸೂಕ್ತಕಾಲದಲ್ಲಿ ಕೀಳದೇ ಇದ್ದರೆ ಸೌತೆಕಾಯಿ ಬಲಿತು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುವ ಸಾಧ್ಯತೆ.  ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡದ್ದೇ ಈ ಟ್ರಾಲಿ. 

ಸುಮಾರು ನೂರು ವರ್ಷಗಳ ಹಿಂದೆ ಮರದಲ್ಲಿ ಮಾಡಿದ ಟ್ರಾಲಿ ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಬಂದು ಇಂದು ಈ ರೂಪ ಪಡೆದಿದೆ.

ಸುಮಾರು ಹತ್ತರಿಂದ ಹನ್ನೆರೆಡು ಜನರು ತಮ್ಮ ಹೊಟ್ಟೆಯ ಮೇಲೆ ಮಲಗಿ ಸೌತೆಕಾಯಿ ಕಟಾವು ಮಾಡಬಹುದಾದ ಈ ಟ್ರಾಲಿಯನ್ನು ಒಂದು ಟ್ರಾಕ್ಟರ್  ನಿಧಾನಗತಿಯಲ್ಲಿ ಮುಂದೆ ಎಳೆಯುತ್ತದೆ. ಟ್ರಾಲಿಯ ಅಗತ್ಯವಿಲ್ಲದೇ ಕಟಾವು ನಡೆಸಬಹುದಾದರೂ  ಪ್ರತಿಬಾರಿಯೂ ಬಗ್ಗಿ ಕೆಲಸ ಮಾಡಬೇಕಾಗಿರುವುದರಿಂದ ಕೆಲಸವೂ ಹೆಚ್ಚು, ಆಯಾಸವೂ ಹೆಚ್ಚು.  ಅದೇ ಮಲಗಿಕೊಂಡು ಕೆಲಸ ಮಾಡುವುದರಿಂದ ಈ ಎರೆಡೂ ಕಷ್ಟಗಳಿಂದ ಬಿಡುಗಡೆ, ಶೀಘ್ರಕಾಲದಲ್ಲಿ ಹೆಚ್ಚಿನ ಕಟಾವು ಸಾಧ್ಯ.  ಕಿತ್ತ ಬೆಳೆಯನ್ನು ಮುಂದಿರುವ ಚಲಿಸುವ ಬೆಲ್ಟ್ ಮೇಲಿಟ್ಟರೆ ಸಾಕು ಅದು ಬೆಲ್ಟ್ ಮೇಲೆ ಸಾಗಿ ನಡುಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ.  

ಈ ರೀತಿಯಲ್ಲಿ ಸುಲಭವಾಗಿ, ಕ್ಷಿಪ್ರಸಮಯದಲ್ಲಿ ಹೆಚ್ಚಿನ ಬೆಳೆಯನ್ನು ಕಟಾವು ಮಾಡಬಹುದಾಗಿದೆ.  ಬೆಲಾರಸ್ ದೇಶದಲ್ಲಿ ಸೌತೆಕಾಯಿ ಮಾತ್ರವಲ್ಲದೇ ಶುಗರ್ ಬೀಟ್ (ಸಕ್ಕರೆ ತಯಾರಿಸಬಹುದಾದ ಬೀಟ್ ರೂಟ್ ಗಡ್ಡೆ), ಆಲುಗೆಡ್ಡೆ ಮೊದಲಾದ ಬೆಳೆಗಳನ್ನೂ ಕಟಾವು ಮಾಡಲಾಗುತ್ತದೆ.  

ಬೆಲಾರಸ್ ಬಿಟ್ಟರೆ ಈ ರೀತಿಯ ಕಟಾವು ಮಾಡುವ ಇನ್ನೊಂದು ರಾಷ್ಟ್ರವೆಂದರೆ ಕೆನಡಾ.  ಆದರೆ ಅಲ್ಲಿ ಯಾಂತ್ರೀಕೃತ ಕಟಾವು ವ್ಯವಸ್ಥೆ ಬಂದ ಮೇಲೆ ಸಾಂಪ್ರಾದಾಯಿಕ ವಿಧಾನ ಮೂಲೆಗುಂಪಾಗಿದೆ.

ಕೃಪೆ:  www.odditycentral.com


ಶುಕ್ರವಾರ, ಜನವರಿ 30, 2009

ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.


cucumber-hearts-2.jpg

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ, ಬಿರಿಯಾನಿಯಂತಹ ಭಾರೀ ಊಟವೇ ಆಗಲಿ, ಸೌತೆಕಾಯಿ ಹೋಳು ಪಕ್ಕದಲ್ಲಿದ್ದರೆ ಊಟಕ್ಕೊಂದು ಕಳೆ.

ಒಂದು ವೇಳೆ ಇದೇ ಸೌತೆಕಾಯಿಯನ್ನು ಅಡ್ಡಡ್ಡಲಾಗಿ ಕತ್ತರಿಸಿದಾಗ ಮೂಡುವ ಹೋಳುಗಳು ವೃತ್ತಾಕಾರದಲ್ಲಿಲ್ಲದೆ ಹೃದಯಾಕಾರ, ನಕ್ಷತ್ರಾಕಾರ ಅಥವಾ ನಮಗೆ ಬೇಕಾದ ಇನ್ಯಾವುದೇ ಆಕಾರದಲ್ಲಿದ್ದರೆ?ಇದರಲ್ಲೆಲ್ಲಾ ತಲೆ ಓಡುವುದು ಜಪಾನೀಯರದ್ದೇ ಅಂತ ಅವರು ಮತ್ತೊಮ್ಮೆ ಪುರಾವೆ ಸಮೇತ ಸಾಧಿಸಿತೋರಿಸಿದ್ದಾರೆ.ಜಪಾನಿನ ಹಲವಾರು ತರಕಾರಿ ಬೆಳೆಸುವ ತೋಟಗಳು ವಿವಿಧ ರೂಪದಲ್ಲಿ ಬೆಳೆಸಲಾದ ಸೌತೆಕಾಯಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದಕ್ಕಾಗಿ ಅವು ಹೆಚ್ಚೇನೂ ಕಷ್ಟಪಡುವುದಿಲ್ಲ. ತಮಗೆ ಬೇಕಾದ ಆಕೃತಿಯಿರುವ ಸಂಪೂರ್ಣ ಪಾರದರ್ಶಕವಾದ ಆದರೆ ಅಷ್ಟೇ ಧೃಢವಾದ ಪ್ಲಾಸ್ಟಿಕ್ ಕೊಳವೆಯೊಂದನ್ನು ಸೌತೆ ಇನ್ನೂ ಹೀಚಾಗಿರುವಾಗಲೇ ತೂರಿಸಿಬಿಟ್ಟರಾಯಿತು ಅಷ್ಟೇ. ಸೌತೆ ಬೆಳೆಯುತ್ತಾ ಹೋದಂತೆ ಪ್ಲಾಸ್ಟಿಕ್ ಒಳಗಣ ವಿಸ್ತಾರದ ಪ್ರಕಾರ ದೊಡ್ಡದಾಗುತ್ತಾ ಹೋಗಿ ಕಟಾವಿಗೆ ಬರುವ ವೇಳೆಗೆ ಕೊಳವೆಯನ್ನು ಆಕ್ರಮಿಸಿರುತ್ತದೆ. ಕಟಾವು ಮಾಡಿದ ಬಳಿಕ ಕೊಳವೆಯನ್ನು ಕಳಚಿದರೆ ಸಾಕು. ಯಥಾ ಆಕೃತಿಯ ಸೌತೇಕಾಯಿ ಲಭ್ಯ.

 

ಅಡ್ಡಡ್ಡಲಾಗಿ ಕತ್ತರಿಸಿದಾದ ಸುಂದರ ವಿನ್ಯಾಸದ ಹೋಳು ಊಟದ ಸೊಬಗನ್ನು ಹೆಚ್ಚಿಸಲೂ ಸಾಧ್ಯ.ಇದೇ ವಿಧಾನವನ್ನು ಅನುಸರಿಸಿ ಜಪಾನಿನ ತೋಟಗಳು ಚೌಕಾಕಾರದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನ ಸೆಳೆದಿದ್ದವು. ನಾಳೆ ಇನ್ನೇನು ಬರಬಹುದೋ ಗೊತ್ತಿಲ್ಲ. ಹೃದಯಾಕಾರದ ಮಾವಿನಕಾಯಿ, ವೃತ್ತಾಕಾರದ ಪಡವಲಕಾಯಿ..... ಇನ್ನೇನಾದರೂ ಹೊಳೆಯುತ್ತಿದೆಯೇ?