ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಡಿಸೆಂಬರ್ 20, 2008

ವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ






ವಿಶ್ವದೆಲ್ಲೆಡೆ ಪರ್ಯಾಯ ಇಂಧನಕ್ಕೆ ಹೆಚ್ಚಿನ ಕಾಳಜಿ ವ್ಯಕ್ತವಾಗುತ್ತಿದೆ. ಸೂರ್ಯಶಕ್ತಿ, ಪವನಶಕ್ತಿ ಮೊದಲಾದ ಶಕ್ತಿಮೂಲಗಳ ಸಮರ್ಥ ಬಳಕೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಸೋಲಾರ್ ಪ್ಯಾನೆಲ್ ಅಳವಡಿಸಿದ ದಾರಿದೀಪಗಳು ಬಳಕೆಯಾಗುತ್ತಿವೆ.  

ಈ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ವಿದ್ಯುತ್ ಚಾಲಿತ ವಿಮಾನ.  ಇದು ಯಾವುದೇ ಸಂಸ್ಥೆ ನಿರ್ಮಿಸಿದ್ದಲ್ಲ, ಬದಲಿಗೆ ರಾಂಡೆಲ್ ಫಿಶರ್ ಮ್ಯಾನ್ ಎಂಬ ಸಾಮಾನ್ಯ ಹವ್ಯಾಸಿ ಹಾರಾಟಗಾರ ನಿರ್ಮಿಸಿದ್ದು. ಎಲೆಕ್ಟ್ರಾಫ್ಲೈಯರ್-ಸಿ ಎಂಬ ಹೆಸರಿನ ಈ ವಿಮಾನದ ನಿರ್ಮಾಣವೂ ಒಂದು ಆಕಸ್ಮಿಕ.  ಸುಮಾರು ಹತ್ತು ವರ್ಷಗಳ ಹಿಂದೆ ಸ್ವತಃ ಜೋಡಿಸಬಹುದಾದ ಚಿಕ್ಕ ಒಬ್ಬರು ಕುಳಿತುಕೊಳ್ಳಬಹುದಾದ ವಿಮಾನವೊಂದನ್ನು ಫಿಶರ್ ಮ್ಯಾನ್ ಕೊಂಡು ತಂದಿದ್ದರು.  ಆದರೆ ಅದರ ಇಂಜಿನ್ ವಿಪರೀತ ಸದ್ದು ಮಾಡುತ್ತಿದ್ದು ಹಾರಾಟವೂ ಅಷ್ಟೊಂದು ಆಹ್ಲಾದಕರವಾಗಿರಲಿಲ್ಲ.  ಕಿಟ್ ಕೊಂಡು ತಂದಾಗಿದೆ, ಸುಮ್ಮನೇ ಬಿಟ್ಟರೆ ಹಾಕಿದ ಹಣ ದಂಡ, ಹಾರಾಡೋಣವೆಂದರೆ ಕರ್ಕಶ ಸದ್ದು.  ಏನು ಮಾಡಬಹುದೆಂದು ಯೋಚಿಸಿದವರಿಗೆ ಸೂಕ್ತವಾಗಿ ಕಂಡದ್ದು ಇದರ ಪೆಟ್ರೋಲ್ ಇಂಜಿನ್ ತೆಗೆದು ವಿದ್ಯುತ್ ಆಧಾರಿತ ಇಂಜಿನ್ ಬಳಕೆ.  

ಆ ಬಳಿಕ ಮುಂದಿನ ಹತ್ತು ವರ್ಷಗಳ ಕಾಲ ಅವರು ತಮ್ಮ ವಿಮಾನಕ್ಕೆ ಬೇಕಾದ ಎಲೆಕ್ಟ್ರ್‍ಇಕ್ ಮೋಟಾರ್ ಹೊಂದಿಸುವಲ್ಲಿ ಕಳೆದರು.  ಹದಿನೆಂಟು ಅಶ್ವಶಕ್ತಿಯ ಮೋಟಾರ್ ಒಂದನ್ನು ವಿಮಾನದಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದೊಂಗಿದೆ ಅಳವಡಿಸಲಾಯ್ತು.  ವಿದ್ಯುತ್ ಒದಗಿಸಲು ತಲಾ ಎಪ್ಪತ್ತೈದು ವೋಲ್ಟುಗಳ ಎರೆಡು ಲಿಥಿಯಂ ಐಯಾನ್ ಬ್ಯಾಟರಿಗಳ ವ್ಯವಸ್ಥೆಯೂ ಆಯಿತು.  ಹೆಚ್ಚಿದ ವಿಮಾನದ ಭಾರವನ್ನು ಹೊರಲು ಸಾಧ್ಯವಾಗುವಂತೆ ವಿಮಾನದ ಪ್ರೊಪೆಲ್ಲರ್ ರೆಕ್ಕೆಗಳ ಉದ್ದವನ್ನು ನಲವತ್ತೈದು ಇಂಚುಗಳಿಗೆ ಹೆಚ್ಚಿಸಲಾಯಿತು.  ಒಂದೂವರೆ ಪಟ್ಟು ಹೆಚ್ಚಿನ ಪ್ರೊಪೆಲ್ಲರ್ ಶಕ್ತಿಗೆ ಅನುಗುಣವಾಗಿ ವಿಮಾನದ ಎತ್ತರವನ್ನೂ ಎಂಟು ಇಂಚುಗಳಷ್ಟು ಹೆಚ್ಚಿಸಲಾಯಿತು.


ಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಗಳ ಸಹಾಯದಿಂದ ಈ ವಿಮಾನ ಪ್ರತಿ ಘಂಟೆಗೆ ಎಪ್ಪತ್ತು ಕಿ.ಮೀ. ವೇಗದಲ್ಲಿ  ಒಟ್ಟು ಒಂದೂವರೆ ಘಂಟೆ ಹಾರಾಟ ನಡೆಸಬಲ್ಲ ಕ್ಷಮತೆ ಹೊಂದಿದೆ.  ಒಮ್ಮೆ ವಿಮಾನ ತನ್ನ ನಿರ್ಧರಿತ ಎತ್ತರವನ್ನು ತಲುಪಿದ ಬಳಿಕ ಮೋಟಾರನ್ನು ಸ್ಥಗಿತಗೊಳಿಸಿ ಗ್ಲೈಡರಿನಂತೆ ಚಲಿಸಬಹುದಾಗಿದೆ. ವಿಮಾನ ಮುಂದುವರೆಯುವಾಗ ಪ್ರೊಪೆಲ್ಲರ್ ವಿರುದ್ಧ ದಿಕ್ಕಿಗೆ ತಿರುಗುವ ಶಕ್ತಿಯನ್ನು ಬ್ಯಾಟರಿ ಚಾರ್ಚ್ ಮಾಡಲು ಬಳಸಬಹುದಾಗಿದೆ.   ಪ್ರತಿ ಬ್ಯಾಟರಿಯನ್ನೂ ಸೆರಾಮಿಕ್ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಕವಚದೊಳಗೆ ಭದ್ರವಾಗಿರಿಸಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.

ಸಾಮಾನ್ಯ ಅಂತರ್ದಹನ ಇಂಜಿನ್ ಕೇವಲ ೧೫% ಕಾರ್ಯಕ್ಷಮತೆ ನೀಡಿದರೆ ವಿದ್ಯುತ್ ಬ್ಯಾಟರಿ ಮೋಟಾರ್ ೮೮% ಕಾರ್ಯಕ್ಷಮತೆ ನೀಡುತ್ತದೆ ಎಂದು ಫಿಶರ್ ಮ್ಯಾನ್ ಹೆಮ್ಮೆಯಿಂದ ನುಡಿಯುತ್ತಾರೆ.  ಹೆಚ್ಚಿನ ಬ್ಯಾಟರಿಗಳನ್ನು ಹೊಂದಿಸಿ ಪೂರ್ಣವಾಗಿ ಚಾರ್ಚ್ ಮಾಡಿ ಹೊರಟರೆ ಆರು ಘಂಟೆ ಸತತವಾದ ಹಾರಾಟ ನಡೆಸಬಹುದೆಂದು ಅವರು ತಿಳಿಸುತ್ತಾರೆ.

ಸರಳವಾದ ವಿನ್ಯಾಸ ಸಾಮಾನ್ಯ ವಿಮಾನದಲ್ಲಿರುವ ಹೆಚ್ಚಿನ ಸಂಖ್ಯೆಯ ನಿಯಂತ್ರಣಗಳನ್ನು ಕಡಿತಗೊಳಿಸಿದೆ.  ಕಾಕ್ ಪಿಟ್ ಒಳಗಿರುವುದು ಒಂದು ವೋಲ್ಟ್ ಮೀಟರ್. ಇದು ಬ್ಯಾಟರಿಗಳಲ್ಲಿರುವ ಚಾರ್ಜ್ ಅನ್ನು ತೋರಿಸುತ್ತದೆ. ಪರ್ಯಾಯವಾಗಿ ಇದೇ ವಿಮಾನದ ಇಂಧನ ಗೇಜ್ ಸಹಾ ಆಗಿದೆ.  ಒಂದು ಆಂ ಮೀಟರ್ ಬ್ಯಾಟರಿಯಿಂದ ವ್ಯಯವಾಗುತ್ತಿರುವ ವಿದ್ಯುತ್  (ಕರೆಂಟ್) ಅನ್ನು ತೋರಿಸುತ್ತದೆ.  ಇದು ಯಾವ ವೇಗದಲ್ಲಿ ವಿದ್ಯುತ್ ವ್ಯಯವಾಗಿರುತ್ತದೆ ಎಂದು ತೋಸಿಸುವುದಲ್ಲದೇ ವಿಮಾನ ಗ್ಲೈಡರಿನಂತೆ ಹಾರುತ್ತಿರುವಾಗ ಬ್ಯಾಟರಿ ಚಾರ್ಜ್ ಆಗುತ್ತಿರುವುದನ್ನೂ ತೋರಿಸುತ್ತದೆ.  

ಪ್ರತಿಬಾರಿ ಬ್ಯಾಟರಿ ಚಾರ್ಚ್ ಮಾಡಲು ಕೇವಲ ಎಪ್ಪತ್ತು ಸೆಂಟ್ (ಸುಮಾರು ಮೂವತ್ತು ರೂಪಾಯಿಗಳು) ಖರ್ಚಾಗುತ್ತದೆ.

ಈ ವಿಮಾನ ಸುಲಭಬೆಲಯಲ್ಲಿ ಮಾರಾಟಕ್ಕಿದ್ದು 2010 ರ ಮಧ್ಯಭಾಗದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಅವರ ಅಂತರ್ಜಾಲ ತಾಣಕ್ಕೆ www.ElectraFlyer.com ಭೇಟಿ ನೀಡಬಹುದಾಗಿದೆ.


ಕೃಪೆ: ಇನ್ವೆಂಟರ್ ಸ್ಪಾಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ