ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಡಿಸೆಂಬರ್ 25, 2009

ಗಾಳಿ, ಜಲ, ಸೌರ ವಿದ್ಯುತ್ ಆಯಿತು. ಈಗ ತೇವಮಣ್ಣಿನ ಸರದಿ


ನಮ್ಮ ಊರುಗಳಲ್ಲಿ ಪವರ್ ಕಟ್ ಎಂದು ನಾವು ಗೊಣಗಾಡುತ್ತಿರುತ್ತೇವೆ. ನಮಗೆ ಪವರ್ ಕಟ್ ಇದ್ದರೂ ದಿನದ ಕೆಲವಾರು ಘಂಟೆಗಳಾದರೂ ವಿದ್ಯುತ್ ಸಿಗುತ್ತದೆ. ಅದೇ ಆಫ್ರಿಕಾದ ಇನ್ನೂರೈವತ್ತು ಮಿಲಿಯನ್ ಜನರಿಗೆ ವಿದ್ಯುತ್ ಭಾಗ್ಯವೇ ಇಲ್ಲ. ಇಂದಿಗೂ ಅವರು ಕತ್ತಲೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಉಣ್ಣುವ ಊಟಕ್ಕೇ ತಾತ್ವಾರ ಬಂದಿರುವಾಗ ವಿದ್ಯುತ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದು ಆ ರಾಷ್ಟ್ರಗಳ ಸರಕಾರಗಳಿಗೆ ಗಗನದ ಮರೀಚಿಕೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಸ್ಥಳೀಯವಾಗಿ ತಯಾರಿಸಿ ನೀಡಬಹುದಾದ ವಿದ್ಯುತ್ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಕರೆ ನೀಡಿತ್ತು. ಇದು ಸುಮಾರು ಮೂರು ವರ್ಷ ಹಳೆಯ ಕಥೆ. ಹೆಚ್ಚಿನವರು ತಮ್ಮ ಪಾಲಿಗೆ ಲಭಿಸಿದ ಐಶಾರಾಮವನ್ನು ಅನುಭವಿಸುತ್ತಾ ಕುಳಿತಿದ್ದರೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಆರು ವಿದ್ಯಾರ್ಥಿಗಳು ಆಫ್ರಿಕಾದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ತಾವೇನಾದರು ಮಾಡಬಹುದೇ ಎಂದು ಪ್ರಯತ್ನಪಟ್ಟರು. ಇವರ ಪ್ರಯತ್ನಗಳಿಗೆ ಈಗ ಸಂಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿನ ಜಯ ದೊರಕಿದೆ.ಸಾಮಾನ್ಯ ಬ್ಯಾಟರಿಗಳಲ್ಲಿ ಧನ ಮತ್ತು ಋಣ ಧೃವಗಳಿದ್ದು ಬ್ಯಾಟರಿಯೊಳಗಿನ ರಾಸಾಯನಿಕಗಳ ಪ್ರಕ್ರಿಯೆಯಿಂದ ಧನ ಮತ್ತು ಋಣಧಾತುಗಳ ನಡುವೆ ಚಿಕ್ಕ ವಿದ್ಯುದಾವೇಶ (ವೋಲ್ಟೇಜ್) ಕಂಡುಬರುತ್ತದೆ. ಸಾಮಾನ್ಯವಾಗಿ ಎಲ್ಲಾ ನೆಲದಲ್ಲಿ ಕೊಂಚ ಪ್ರಮಾಣದ ಆರ್ದ್ರತೆ ಇದ್ದೇ ಇರುತ್ತದೆ. ನೆಲದಲ್ಲಿರುವ ಮಣ್ಣಿನ ಆಲ್ಗೇ ಮತ್ತು ಬ್ಯಾಕ್ಟೀರಿಯಾಗಳನ್ನು ಆಧರಿಸಿ ಆ ಮಣ್ಣಿನ ಎರೆಡು ಸ್ತರಗಳಲ್ಲಿ ಎರೆಡು ಬಗೆಯ ಲೋಹಗಳನ್ನು ಹುಗಿಯುವುದರ ಮೂಲಕ ಚಿಕ್ಕ ಪ್ರಮಾಣದ ವೋಲ್ಟೇಜ್ ಪಡೆಯಬಹುದಾಗಿದೆ. ಹೀಗೆ ಒಂದರ ಪಕ್ಕ ಒಂದರಂತೆ ಹಲವಾರು ಗುಂಡಿಗಳನ್ನು ತೋಡಿ ಸೀರೀಸ್ ಜೋಡಣೆಯಿಂದ ಬ್ಯಾಟರಿಯೊಂದನ್ನು ಚಾರ್ಜ್ ಮಾಡಬಹುದಾಗಿದೆ. ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳು ನಿರಂತವಾಗಿ ವೃದ್ಧಿಹೊಂದಿ ಸತತವಾಗಿ ವಿದ್ಯುತ್ ಉತ್ಪಾದಿಸುತ್ತಿರುತ್ತದೆ.

ಸುಮಾರು ಒಂದು ಘನ ಮೀಟರ್ ಮಣ್ಣಿನಿಂದ ಒಂದು ಚಿಕ್ಕ ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪವನ್ನು ಹತ್ತಿಸಬಹುದಾಗಿದೆ. ಅಗತ್ಯತೆಗೆ ತೀರಾ ಅಲ್ಪವೆನ್ನಿಸುವ ಈ ಪ್ರಮಾಣ ಏನೂ ಇಲ್ಲದವರಿಗೊಂದು ಆಶಾಕಿರಣ. ಈ ಸಂಶೋಧನೆಗಾಗಿ ಆ ಆರು ವಿದ್ಯಾರ್ಥಿಗಳಿಗೆ ವಿಶ್ವಬ್ಯಾಂಕಿನ ಎರೆಡು ಲಕ್ಷ ಡಾಲರ್ ಸಹಾಯಧನ ದೊರಕಿದೆ.

ಈ ಪ್ರಯೋಗ ಘಾನಾ ಹಾಗೂ ನಮೀಬಿಯಾ ದೇಶಗಳ ಹಲವು ಹಳ್ಳಿಗಳಲ್ಲಿ ನಡೆಸಲಾಗಿದ್ದು ಸ್ಥಳೀಯರಿಗೆ ತಮಗೆ ಬೇಕಾದ ವಿದ್ಯುತ್ತನ್ನು ತಾವೇ ತಯಾರಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಟಾಂಜಾನಿಯಾದಲ್ಲಿ ಒಂದು ಘಟಕವನ್ನು ಸಂಪೂರ್ಣಗೊಳಿಸಲಾಗಿದ್ದು ಸ್ಥಳೀಯರು ಅತೀವ ಆಸಕ್ತಿ ವಹಿಸಿದ್ದಾರೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಲೆಬೋನ್ ಸೊಲ್ಯೂಶನ್ಸ್ ಇನ್ಕ್. ಹೆಚ್ಚಿನ ಸಂಶೋಧನೆಗೆ ಅಣಿಯಾಗುತ್ತಿದೆ.

ಇವರ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಆಶಿಸೋಣ ಅಲ್ಲವೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ