ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಡಿಸೆಂಬರ್ 25, 2009

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ ಹೆಚ್ಚು ಬಾಳಿಕೆ ಬರುತ್ತವೆಂದೂ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆದರೆ ಈ ಸಿ.ಎಫ್. ಎಲ್ ಗಳು ನಮ್ಮ ಹಳೆಯ ಟ್ಯೂಬ್ ಲೈಟಿನ ಹೃಸ್ವಸ್ವರೂಪವೇ ಹೊರತು ತಂತ್ರಜ್ಞಾನದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ನಿಜಕ್ಕೂ ಈ ಟ್ಯೂಬ್ ಲೈಟ್ ಹಾಗೂ ಸಿ.ಎಫ್.ಎಲ್ ಗಳು ನೀಡುವ ಬೆಳಕು ಕಂಪಿಸುವ ಬೆಳಕು (ಅಂದರೆ ಪ್ರಖರತೆಯಲ್ಲಿ ಏರುಪೇರು). ಆದರೆ ಈ ಕಂಪನ ನಮ್ಮ ವಿದ್ಯುತ್ ಸರಬರಾಜಿನ ಫ್ರೀಕ್ವೆನ್ಸಿ (೫೦ ಹರ್ಟ್ಸ್) ಅಂದರೆ ಸೆಕೆಂಡಿಗೆ ಐವತ್ತು ಬಾರಿ ಇರುವುದರಿಂದ ನಮ್ಮ ಕಣ್ಣು ಅದನ್ನು ಗುರುತಿಸಲು ಅಸಮರ್ಥವಾಗುತ್ತದೆ. ಹಾಗಾಗಿ ನಮಗೆ ಏರುಪೇರಿಲ್ಲದ ಬೆಳಕಿನಂತೆ ಕಂಡುಬರುತ್ತದೆ. ಆದರೆ ಕಾಲಕ್ರಮೇಣ ಸಿ.ಎಫ್. ಅಲ್ ಅಥವಾ ಟ್ಯೂಬ್ ಲೈಟ್ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ, ಬಳಿಕ ಏರುಪೇರು ಇನ್ನಷ್ಟು ಹೆಚ್ಚಾಗುತ್ತದೆ (ಫ್ಲಿಕರಿಂಗ್).


ಇದಕ್ಕೆ ಪರ್ಯಾಯವಾಗಿ ಬೆಳಕನ್ನು ಸೂಸುವ ಇನ್ನೊಂದು ವಸ್ತು ನಮ್ಮ ಜೀವನದಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ, ಅದೇ ಎಲ್.ಇ.ಡಿ. (ಲೈಟ್ ಎಮಿಟಿಂಗ್ ಡಯೋಡ್). ಈ ಎಲ್.ಇ.ಡಿ. ಗೂ ಸುಮಾರು ಮೂವತ್ತು ವರ್ಷವೇ ಆಯಿತು. ಇದು ಸೂಸುವ ಬೆಳಕು ಅಪ್ಪಟವಾದದ್ದು, ಅಂದರೆ ಯಾವುದೇ ಏರುಪೇರಿಲ್ಲದಿರುವುದು. ಇದು ಮೊಬೈಲ್, ಸೈಕಲ್ ಲೈಟ್, ಟಾರ್ಚ್ ಮೊದಲಾದ ದಿನಬಳಕೆಯ ವಸ್ತುಗಳಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹಲವು ಬಸ್ಸುಗಳ ದೇವರ ಫೋಟೋಗಳ ಮುಂದೆ ಕೆಂಪು ಮತ್ತು ಹಸಿರು ಬಣ್ಣಗಳ ಬದಲಾಗುತ್ತಿರುವ ಫ್ಲಿಪ್ ಫ್ಲಾಪ್ ರೂಪದಲ್ಲಿ ಸೇವೆ ನೀಡುತ್ತಾ ಬಂದು ದಶಕಗಳೇ ಕಳೆದಿವೆ.

ಈಗ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಎಲ್.ಇ.ಡಿ.ಗೆ ಹೆಚ್ಚಿನ ಸಾಮರ್ಥ್ಯ ಒದಗಿಸುವತ್ತ ತಮ್ಮ ಗಮನ ಹರಿಸಿದ್ದಾರೆ. ಹಿಂದಿನ ಎಲ್.ಇ.ಡಿ.ಯಲ್ಲಿ ಗ್ಯಾಲಿಯಂ ನೈಟ್ರೈಡ್ ಎಂಬ ಸೆಮಿಕಂಡಕ್ಟರ್ ಮುಖ್ಯ ವಸ್ತುವಾಗಿತ್ತು. ದುಬಾರಿಯಾದ ಈ ವಸ್ತುವನ್ನು ಉಪಯೋಗಿಸಿ ಸುಮಾರು ನೂರು ವ್ಯಾಟ್ ಬಲ್ಬ್ ನೀಡುವ ಬೆಳಕನ್ನು ಸೂಸುವ ಸಾಮರ್ಥ್ಯಕ್ಕೆ ಸಿದ್ಧಪಡಿಸಬೇಕಾದರೆ ಪ್ರತಿ ಬಲ್ಬ್ ಗೆ ಸುಮಾರು ಮೂವತ್ತು ಡಾಲರ್ (ಸುಮಾರು ಸಾವಿರದ ಮುನ್ನೂರೈವತ್ತು ರೂಪಾಯಿ) ಬೆಲೆಯಾಗುತ್ತಿತ್ತು. (ಇದು ಉತ್ಪಾದನಾ ವೆಚ್ಚ, ಮಾರುಕಟ್ಟೆಗೆ ಬರಬೇಕಾದರೆ ಎರೆಡು ಸಾವಿರವಾಗಬಹುದು).

ಈ ನಿಟ್ಟಿನಲ್ಲಿ ಹೊಸ ಎಲ್.ಇ.ಡಿ ಯನ್ನು ಅವರು ಪ್ರಸ್ತುತಪಡಿಸಿದ್ದು ಅದರಲ್ಲಿ ಅತಿ ಕಡಿಮೆ ವೆಚ್ಚದ ಸಫೈರ್ ಹಾಳೆಗಳನ್ನು ಬಳಸಲಾಗಿದೆ. ಈ ಸಫೈರ್ ಹಾಳೆಗಳನ್ನು ಬಳಸಿ ಉತ್ಪಾದಿಸಲಾದ ಸೆಮಿಕಂಡಕ್ಟರ್ ಎಲ್.ಇ.ಡಿ. ಹಿಂದಿನ ಗ್ಯಾಲಿಯಂ ನೈಟ್ರೈಡ್ ಎಲ್.ಇ.ಡಿ ಗಿಂತಲೂ ಹೆಚ್ಚು ಸಾಮರ್ಥ್ಯ ಹಾಗೂ ಅದಕ್ಕಿಂತಲೂ ೭೫ % ಕಡಿಮೆ ಬೆಲೆ ಹೊಂದಿದೆ. ಅಂದರೆ ಸುಮಾರು ಮುನ್ನೂರೈವತ್ತು ರೂಪಾಯಿಗೆ ನೂರು ವ್ಯಾಟ್ ಬೆಳಕು ಸೂಸುವ ಬಲ್ಬಿನ ಬಾಳಿಕೆ ಒಂದು ಲಕ್ಷ ಘಂಟೆಗಳು! ಅಂದರೆ ಸುಮಾರು ಅರವತ್ತು ವರ್ಷಗಳು. ಅಪ್ಪಟ ಬಿಳಿಯ ಬೆಳಕು ನೀಡುವ ಬಲ್ಬ್ ಉಪಯೋಗಿಸುವ ವಿದ್ಯುತ್ ಸಹಾ ಒಂದು ಟ್ಯೂಬ್ ಲೈಟ್ ಉಪಯೋಗಿಸುವ ೧೦% ಅಂದರೆ ವಿದ್ಯುತ್ ಬಿಲ್ ನಲ್ಲಿ ಶೇಖಡಾ ೯೦ ನೇರ ಉಳಿತಾಯ. ಒಮ್ಮೆ ಬಲ್ಬ್ ಅಳವಡಿಸಿದರೆ ಮುಂದಿನ ಅರವತ್ತು ವರ್ಷ ಬದಲಿಸಬೇಕಾದ ಅಗತ್ಯವಿಲ್ಲವಾದ್ದರಿಂದ ಪ್ರತಿವರ್ಷದ ಟ್ಯೂಬ್ ಲೈಟ್ ಗೆ ಗುಡ್ ಬೈ. ಅಂದರೆ ಅರವತ್ತು ವರ್ಷಗಳಲ್ಲಿ ಎಷ್ಟು ಟ್ಯೂಬ್ ಲೈಟ್ ಹಣ ಉಳಿತಾಯವಾಗಬಹುದು ಲೆಕ್ಕ ಹಾಕಿ. ಹೆಚ್ಚೂಕಡಿಮೆ ಶಾಖರಹಿತವಾದ ಬೆಳಕು, ಚಿಕ್ಕದಾದ ಗಾತ್ರ ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾದ ಸ್ವಾತಂತ್ಯ ನೀಡುತ್ತದೆ. ಒಮ್ಮೆ ಮಾರುಕಟ್ಟೆಗೆ ಬಂದರೆ ಇದು ಇಂದು ನಮ್ಮ ಮನೆ, ಕಛೇರಿಗಳಲ್ಲಿ ಹಾಸುಹೊಕ್ಕಾಗಿರುವ ಟ್ಯೂಬ್ ಲೈಟ್, ಬಲ್ಬ್, ಹ್ಯಾಲೋಜನ್ ಲೈಟ್ ಮೊದಲಾದವುಗಳನ್ನು ನೇಪಥ್ಯಕ್ಕೆ ಸರಿಸುವುದರಲ್ಲಿ ಅನುಮಾನವಿಲ್ಲ.


ಈ ವಿಷಯವನ್ನು ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನಡೆಯುವ ಸಂಸ್ಥೆ-ಆರ್.ಎಫ್.ಎಮ್.ಡಿ. - ಯ ನಿರ್ದೇಶಕರಾದ ಪ್ರೊಫೆಸರ್ ಕಾಲಿನ್ ಹಂಫ್ರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಲ್ಲರ ಕುತೂಹಲ ಕೆರಳಿಸಿರುವ ಅರವತ್ತು ವರ್ಷ ಬಾಳಿಕೆ ಬಾಳುವ ಬಲ್ಬ್ ಆದಷ್ಟು ಶೀಘ್ರ ನಮ್ಮ ಮನೆಗಳಲ್ಲೂ ಬರುವಂತಾಗಲಿ ಎಂದು ಹಾರೈಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ