ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಮಾರ್ಚ್ 13, 2009

ಥಾಯ್ಲೆಂಡ್: ತೆಂಗಿನಕಾಯಿ ಕೀಳುವ ಮಂಗನಿಂದ ಮಾಲೀಕನ ಕೊಲೆ


ಥಾಲ್ಲೆಂಡ್, ಮಾರ್ಚ್ 13:  ಭಾರತದ ಕೇರಳದಲ್ಲಿ ಹಾಗೂ ಇನ್ನೂ ಹಲವೆಡೆ ತೆಂಗಿನಮರದಿಂದ ತೆಂಗಿನಕಾಯಿಗಳನ್ನು ಉದುರಿಸಲು ಮಂಗಗಳಿಗೆ ತರಬೇತಿ ನೀಡಲಾಗಿರುತ್ತದೆ. ಈ ಮಂಗಗಳು ಲೀಲಾಜಾಲವಾಗಿ ಮರಹತ್ತಿ ಪಕ್ವವಾದ ತೆಂಗಿನಕಾಯಿಗಳನ್ನು ಗುರುತಿಸಿ ಅವುಗಳನ್ನು ತಿರುಚಿ ಕೆಳಕ್ಕೆಸೆಯುವ ಅಧ್ಬುತ ಸಾಮರ್ಥ್ಯ ಪಡೆದಿರುತ್ತವೆ.

ತೆಂಗಿನ ಕಾಯಿ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ನಿತ್ಯಾಧಾರವಾಗಿರುವಂತೆಯೇ ಪೂರ್ವದ ಥಾಯ್ಲೆಂಡಿಗೂ ಸಹಾ.  ಅಲ್ಲಿಯೂ ತೆಂಗಿನಕಾಯಿ ಕೀಳುವವರಿಗೆ ಬರ. ಆದ್ದರಿಂದ ತೆಂಗಿನ ಕಾಯಿ ಕೀಳುವ ಮಂಗಗಳಿಗೆ ಭಾರೀ ಬೇಡಿಕೆ. ಈ ಬೇಡಿಕೆಯ ಮೂಲಕ ಮಂಗಗಳಿಗೂ ದುಬಾರಿ ಬೆಲೆ.

ಕಳೆದ ವರ್ಷ ಥಾಯ್ಲೆಂಡಿನ ನಾಕೋರಾನ್ ಶ್ರೀ ಥಮಾರಾಟ್ ಎಂಬಲ್ಲಿ ವಾಸವಾಗಿದ್ದ ಲೀಲಿಟ್ ಜಾಂಛೂಮ್ ಎಂಬ ನಲವತ್ತೆಂಟು ವರ್ಷದ ಕೃಷಿಕರೊಬ್ಬರು ನೂರಾಮೂವತ್ತು ಡಾಲರ್ ತೆತ್ತು ತರಬೇತುಗೊಂಡ ಮಂಗವೊಂದನ್ನು ಖರೀದಿಸಿ ಬ್ರದರ್ ಕ್ವಾನ್ ಎಂದು ಹೆಸರಿಟ್ಟಿದ್ದರು. ತಮ್ಮ ತೋಟಗಳ ತೆಂಗಿನಕಾಯಿಗಳನ್ನು ಕೀಳುವುದು ಮಾತ್ರವಲ್ಲದೇ ಅಕ್ಕಪಕ್ಕದ ತೋಟಗಳಿಂದ ಕಾಯಿ ಕೀಳಲು ಪ್ರತಿ ಕಾಯಿಗೆ ನಾಲ್ಕು ಪೆನ್ನಿಯಂತೆ ಬಾಡಿಗೆಗೂ ದುಡಿಸಿಕೊಳ್ಳುತ್ತಿದ್ದರು.

ಸುಮಾರು ಒಂದು ವರ್ಷ ಯಾವುದೇ ತಕರಾರಿಲ್ಲದೆ ಕೆಲಸ ಮಾಡಿದ ಮಾರುತಿಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತೇನೋ, ಆದರೆ ಹಣ ಎಣಿಸುತ್ತಿದ್ದ ಮಾಲಿಕನಿಗೆ ಅದರ ಅಳಲು ಅರ್ಥವಾಗಬೇಕಲ್ಲ, ಇನ್ನಷ್ಟು ಕಾಯಿಗಳನ್ನು ಉದುರಿಸುವಂತೆ ಮಾರುತಿಯನ್ನು ಹುರಿದುಂಬಿಸುತ್ತಿದ್ದರು. ಅಲ್ಲದೇ ಮರವನ್ನೇರಲು ನಿರಾಕರಿಸಿದರೆ ಏಟುಗಳ ಶಿಕ್ಷೆಯನ್ನೂ ನೀಡಲಾಗುತ್ತಿತ್ತು. 

ಕಳೆದ ಮಾರ್ಚ್ ಹನ್ನೊಂದನೇ ತಾರೀಖಿಗೆ ಅದೇ ಪ್ರಕಾರ ಕಾಯಿ ಕೀಳೆಂದು ಪೀಡಿಸಿದ ಮಾಲಿಕನ ಮೇಲೆ ಮಾರುತಿ ದಪ್ಪನಾದ ತೆಂಗಿನಕಾಯಿಯೊಂದನ್ನು ನೇರ ತಲೆಯ ಮೇಲೆ ಬೀಳುವಂತೆ ಎಸೆದಿತ್ತು.  ನೇರವಾಗಿ ಆಗಸದಿಂದ ನೆತ್ತಿಗೆ ಬಿದ್ದ ಹೊಡೆತಕ್ಕೆ ಕಿಮಕ್ ಕಮ್ಮಕ್ ಎನ್ನದೇ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  

ಸ್ಥಳದಲ್ಲಿಯೇ ಉಪಸ್ಥಿತರಿದ್ದವರು ಮಂಗ ಉದ್ದೇಶಪೂರ್ವಕವಾಗಿಯೇ ಮಾಲಿಕನ ತಲೆಯ ಮೇಲೆ ತೆಂಗಿನ ಕಾಯಿ ಎಸೆದು ಕೊಲೆ ಮಾಡಿದೆ ಎಂದು ಆರೋಪಿಸಿದ್ದಾರೆ.  ಮೃತನ ಪತ್ನಿ ಮಂಗ ತಮ್ಮೊಂದಿಗೆ ಕಳೆದವರ್ಷದಿಂದಲೂ ಸ್ನೇಹದಿಂದಿದ್ದು ಈಗ ಕೆಲಸದ ಒತ್ತಡ ಅದಕ್ಕೆ ಈರೀತಿ ಮಾಡಲು ಪ್ರೇರೇಪಿಸಿರಬಹುದೆಂದು ತಿಳಿಸಿದ್ದಾರೆ.

ಮಂಗನಿಗೆ ಕೊಲೆ ಆರೋಪ ಹೊರಿಸಲಾಗುತ್ತದೆಯೇ? ಹೊರಿಸಿದರೂ ಯಾವ ಸೆಕ್ಷನ್ ಹಾಕಲಾಗುತ್ತದೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ. ಆದರೆ ಕೊಲೆ ಮಾಡಿದ ಮಾರುತಿ ನಿರಾಳವಾಗಿ ಕುಳಿತಿದೆ.

1 ಕಾಮೆಂಟ್‌: