ಜಾರ್ಜಿಯಾ, ಮಾರ್ಚ್ 10: ಜೈಲಿನಲ್ಲಿ ಕೊಳೆಯುತ್ತಿರುವವರು ತಾವು ಯಾವಾಗ ಜೈಲಿನಿಂದ ಪಾರಾಗುತ್ತೇವೆಯೋ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಆದರೆ ಅಮೇರಿಕಾದ ಜಾರ್ಜಿಯಾ ರಾಜ್ಯದ ವುಡ್ ಬೈನ್ ಎಂಬ ಪಟ್ಟಣದ ಜೈಲೊಂದರಲ್ಲಿ ಕೈದಿಯಾಗಿದ್ದ ಹ್ಯಾರಿ ಜಾಕ್ಸನ್ ಎಂಬ ಇಪ್ಪತ್ತೈದು ವರ್ಷದ ತರುಣನೊಬ್ಬನಿಗೆ ಸಿಗರೇಟು ಸೇದುವ ಹಂಬಲ ತಡೆಯಲಾಗದೇ ಹೇಗೋ ಜೈಲಿನ ಬಂಧನವನ್ನು ಪಾರಾಗಿ ಹೊರಬಂದಿದ್ದ. ಬಂದವ ಸುಮ್ಮನೇ ಪರಾರಿಯಾಗಬಾರದೇ, ಅದುಬಿಟ್ಟು ಸಮೀಪದ ಅಂಗಡಿಗೆ ನುಗ್ಗಿ ಹದಿನಾಲ್ಕು ಪ್ಯಾಕೆಟ್ ಸಿಗರೇಟುಗಳನ್ನು ಕದ್ದು ಮತ್ತೆ ಜೈಲಿಗೇ ವಾಪಸಾದ.
ಆದರೆ ವಾಪಸ್ಸು ಬರುವಾಗ ಯಾವುದೋ ಘಳಿಗೆಯಲ್ಲಿ ಅಲಾರಾಂ ಹೊಡೆದು ಸುರಕ್ಷಾ ತಂಡದವರ ಕೈಗೆ ಸಿಕ್ಕಿಬಿದ್ದ. ಈತ ಪರಾರಿಯಾಗಿದ್ದು ಹೇಗೆ ಎಂದು ತಲೆಕೆಡಿಸಿಕೊಂಡ ಜೈಲಿನ ಷೆರೀಫ್ ಟಾಮಿ ಗ್ರೆಗರಿ ಈತ ವ್ಯಾಯಾಮಶಾಲೆಯ ಗೋಡೆ ಹತ್ತಿ ಅಲ್ಲಿಂದ ಜೈಲಿನ ಬೇಲಿಯನ್ನು ಹಾರಿ ಬಂದಿದ್ದ ಎಂದು ತಿಳಿಸಿದ್ದಾರೆ. ಈಗ ಹಿಂದಿನ ಶಿಕ್ಷೆಯ ಜೊತೆಗೆ ಜೈಲು ಪಾರಾಗಿ ಹೋದ ಮತ್ತು ಕಳ್ಳತನದ ಅಪಾದನೆಯನ್ನೂ ಜಾಕ್ಸನ್ ಎದುರಿಸಬೇಕಾಗಿದೆ. ಇದಕ್ಕೂ ಮೊದಲು ನಿಯಂತ್ರಿತ ವಸ್ತುವೊಂದನ್ನು ಹೊಂದಿದ್ದ ಮತ್ತು ತರಬೇತಿಯ ಅವಧಿಗೂ ಮುನ್ನ ಓಡಿಹೋದ ಆರೋಪದ ಮೇಲೆ ಜೈಲುಶಿಕ್ಷೆ ಅನುಭವಿಸುತ್ತಿದ್ದ. ಈಗ ಹದಿನಾಲ್ಕು ಪ್ಯಾಕೆಟ್ ಸಿಗರೇಟು ಸೇದಲು ಹೆಚ್ಚು ಸಮಯ ಸಿಗುತ್ತದಂತಾಯಿತು.
ಕೃಪೆ: ಬಿಬಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ