ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಮಾರ್ಚ್ 6, 2009

ಬರಲಿದೆ - ಅರೆಪಾರದರ್ಶಕ ಕಾಂಕ್ರೀಟ್


ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್.  ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು.  ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?

ಹಂಗರಿ ದೇಶದ ಆರನ್ ಲೊಸೊನ್ಸ್ಕಿ ಎಂಬುವರು ಸಿಮೆಂಟಿಗೆ ಹಾಗೂ ಜಲ್ಲಿಕಲ್ಲಿಗೆ ಪರ್ಯಾಯವಾದ ಆದರೆ ಅವುಗಳಷ್ಟೇ ಸುದೃಢವಾದ ಸಾಮಾಗ್ರಿಗಳಿಂದ ಅರೆಪಾರದರ್ಶಕ ಕಾಂಕ್ರೀಟನ್ನು ಸಿದ್ಧಪಡಿಸಿದ್ದಾರೆ. ಲಿಟ್ರಾಕಾನ್ (LiTraCon - light transmitting concrete) ಎಂಬ ಹೆಸರಿನ ಈ ಸಾಮಾಗ್ರಿ ಹೊರಗಿನ ಬೆಳಕಿನ ಅರ್ಧದಷ್ಟನ್ನು ತನ್ಮೂಲಕ ಹಾಯಲು ಸಾಧ್ಯವಾಗುವಂತೆ ನಿರ್ಮಿತವಾಗಿದೆ. ಈ ಕಾಂಕ್ರಿಟನ್ನು ಅವರು ಸುಮಾರು ೨೦೦೧ ರಲ್ಲಿಯೇ ಸಿದ್ಧಪಡಿಸಿದ್ದರೂ ಇನ್ನೂ ಹತ್ತು ಹಲವು ಪರೀಕ್ಷೆಗಳ ಕಾರಣದಿಂದಾಗಿ ಮಾರುಕಟ್ಟೆಗೆ ತರುವಲ್ಲಿ ವಿಳಂಬವಾಗಿದೆ.  ಜರ್ಮನಿಯ ಲಿಟ್ರಾಕಾನ್ ಸಂಸ್ಥೆ ಈ ವರ್ಷ ಈ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಅಷ್ಟಕ್ಕೂ ಪಾರದರ್ಶಕ ಕಾಂಕ್ರೀಟ್ ಆಗಿದ್ದರೆ ಪ್ರಯೋಜನವೇನು ಎಂದು ಎಲ್ಲರೂ ಕೇಳುವ ಮೊದಲ ಪ್ರಶ್ನೆ.  ಕಟ್ಟಡ ನಿರ್ಮಾಣದಲ್ಲಿ ಬೆಳಕಿಗೆ ಬಹುಮಹತ್ವ ನೀಡಲಾಗುತ್ತದೆ.  ಬೆಳಕು ಎಲ್ಲೆಡೆ ಸಮಾನವಾಗಿ ಲಭ್ಯವಾಗುವಂತೆ ಕಟ್ಟಡವಿನ್ಯಾಸಕಾರರು ಕಟ್ಟಡಗಳಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕಾಗುತ್ತದೆ.  ಪರಿಣಾಮವಾಗಿ ಕಟ್ಟಡ ಹೆಚ್ಚಿನ ಸ್ಥಳದ ಕಾರಣ ತುಸು ದುಬಾರಿಯಾಗುತ್ತದೆ.  ದೊಡ್ಡ ದೊಡ್ಡ ಕಿಟಕಿಗಳನ್ನು ನೀಡಬೇಕಾಗುತ್ತದೆ.  ಬೆಳಕು ಲಭ್ಯವಿಲ್ಲದೆಡೆ ವಿದ್ಯುತ್ ದೀಪಗಳನ್ನು ಅಳವಡಿಸಿ ಹಗಲಿನಲ್ಲಿಯೂ ವಿದ್ಯುತ್ ಬಳಸಬೇಕಾಗುತ್ತದೆ. 

ಅರೆಪಾರದರ್ಶಕ ಕಾಂಕ್ರೀಟ್ ಬಳಸಿ ನಿರ್ಮಿಸಿದ ಕಟ್ಟಡಗಳಲ್ಲಿ ಸಾಕಷ್ಟು ಮಟ್ಟಿನ ಬೆಳಕು ಗೋಡೆಯಿಂದಲೇ ಲಭ್ಯವಾಗುವುದರಿಂದ ವಿದ್ಯುತ್ ದೀಪ ಉರಿಸುವ ಅಗತ್ಯವಿಲ್ಲ. ಪರಿಣಾಮ ಪೋಲಾಗುತ್ತಿದ್ದ ವಿದ್ಯುತ್ ಗೆ ಶಾಶ್ವತ ಕಡಿವಾಣ.  ದೊಡ್ಡ ದೊಡ್ಡ ಕಿಟಕಿ ರಚಿಸಬೇಕಾಗಿಲ್ಲ. ಬಿಸಿಲನ್ನು ಹೀರದ ಕಾಂಕ್ರೀಟು ಒಳಗಿನ ವಾತಾವರಣವನ್ನು ತಂಪಾಗಿಸಿರುವುದರಿಂದ ಹವಾನಿಯಂತ್ರಣ ಖರ್ಚಿನಲ್ಲೂ ಉಳಿತಾಯ. 

ಕಳೆದ ಸುಮಾರು ಎಂಟು ವರ್ಷಗಳಲ್ಲಿ ಹಲವು ಮಾರ್ಪಾಡುಗಳನ್ನು ಮೂಡಿಸಿಕೊಂಡು ವಿವಿಧ ಬಗೆಗಳಲ್ಲಿ ಲಿಟ್ರಾಕಾನ್ ಈಗ ಅಮೇರಿಕಾದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.  ಕಳೆದ ಜನವರಿ ನ್ಯೂಯಾರ್ಕಿನಲ್ಲಿ ನಡೆದ  ಯುವ ಸಂಶೋಧಕರಿಗೆ ನೀಡಲಾಗುವ Ernst & Young "Innovator" award, 2008 ಪ್ರಶಸ್ತಿಗೂ ಪಾತ್ರರಾಗಿದ್ದಾರೆ.


ಇವರ ಪಾರದರ್ಶಕ ಉತ್ಪನ್ನಗಳ ಪ್ರದರ್ಶನ ನ್ಯೂಯಾರ್ಕ್ ನಗರದ AIA Center for Architecture on exhibition ಸಭಾಂಗಣದಲ್ಲಿ ಜನವರಿ ೨೨ ರಿಂದ ಪ್ರಾರಂಭವಾಗಿದ್ದು ಏಪ್ರಿಲ್ ೨೫ ರ ವರೆಗೂ ನಡೆಯಲಿದೆ.  ಮೇಕ್ ಇಟ್ ವರ್ಕ್ ಎಂಬ ಈ ಅಭಿಯಾನದಲ್ಲಿ ವಿಶ್ವದ ಹಲವು ಇಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲಾತ್ತಿದ್ದು ಪಾರದರ್ಶಕ ಕಾಂಕ್ರೀಟ್ ಗಮನ ಸೆಳೆಯುತ್ತಿದೆ.

1 ಕಾಮೆಂಟ್‌: