ನೀರನ್ನು ಶುದ್ಧೀಕರಿಸಲು ಇಂದು ಹತ್ತು ಹಲವು ತಂತ್ರಜ್ಞಾನಗಳು ಲಭ್ಯವಿವೆ. ಸರಳ ಮಡಕೆ-ಮರಳು ಸೋಸುಕುಡಿಕೆಯಿಂದ ಹಿಡಿದು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ಬೃಹತ್ ಕಾರ್ಯಗಾರಗಳು ಇಂದು ಲಭ್ಯವಿದೆ.
ಜನಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಅಗತ್ಯತೆಯೂ ಹೆಚ್ಚುತ್ತಾ ಶುದ್ಧನೀರಿನ ಕೊರತೆಯನ್ನು ಪ್ರತಿನಗರಗಳು ಎದುರಿಸುತ್ತವೆ. ಹೆಚ್ಚುವರಿ ನೀರನ್ನು ಹೊರಗಿನಿಂದ ಪಡೆಯುವುದರ ಜೊತೆಗೆ ವ್ಯರ್ಥನೀರನ್ನು ಮರುಬಳಕೆಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಅಮೇರಿಕಾದ ಓಹಿಯೋ ಸಂಸ್ಥಾನದ ವೂಸ್ಟರ್ ವಿಶ್ವವಿದ್ಯಾಲಯದ ಡಾ. ಪೌಲ್ ಎಡ್ಮಿನ್ಸ್ಟನ್ ರವರು ನೂತನ ಸ್ಪಂಜ್ ಒಂದನ್ನು ಸಾದರಪಡಿಸಿದ್ದಾರೆ. ’ಒಸಾರ್ಬ್’ ಎಂಬ ಹೆಸರಿನ ಈ ಸ್ಪಂಜು ನೀರಿನ ಕಲ್ಮಶಗಳನ್ನು ಮಾತ್ರ ಹೀರಿ ಶುದ್ಧ ನೀರನ್ನು ಪ್ರತ್ಯೇಕಗೊಳಿಸುತ್ತದೆ. ಮಲಿನ ನೀರಿನಿಂದ ಶುದ್ಧ ನೀರನ್ನು ಪಡೆಯಲು ’ಒಸಾರ್ಬ್’ ಅತ್ಯಂತ ಸರಳ, ಸುಲಭ ಹಾಗೂ ಕಡಿಮೆಬೆಲೆಯ ವಸ್ತುವಾಗಿದೆ.
ವಾಸ್ತವವಾಗಿ ಒಸಾರ್ಬ್ ಗಾಜಿನ ಒಂದು ರೂಪ. ಒಸಾರ್ಬ್ ಸಂಪರ್ಕಕ್ಕೆ ಬರುವ ಎಣ್ಣೆ, ಜಿಡ್ಡು, ಮತ್ತಿತರ ನೀರಿನಲ್ಲಿ ಕರಗಿರುವ ಕಲ್ಮಶಗಳು ಅದಕ್ಕೆ ಅಂಟಿಕೊಂಡು ಬಿಡುತ್ತವೆ. ಆದರೆ ನೀರು ಮಾತ್ರ ಒಸಾರ್ಬ್ ಗೆ ಅಂಟಿಕೊಳ್ಳದೇ ಹೋಗುತ್ತದೆ. (ತಾವರೆ ಎಲೆಯ ಮೇಲೆ ನೀರಿನ ಹನಿ ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ). ಕಲ್ಮಶಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದ್ದಂತೆ ಉಬ್ಬಿಕೊಳ್ಳುತ್ತಾ ಹೋಗುವ ಒಸಾರ್ಬ್ ಮೂಲಗಾತ್ರದ ಎಂಟು ಪಟ್ಟು ಕಲ್ಮಶಗಳನ್ನು ಅಂಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಂಟು ಪಟ್ಟು ಕಲ್ಮಶಗಳನ್ನು ಹೀರಿದ ಒಸಾರ್ಬ್ ಬಳಿಕ ನೀರಿನ ಮೇಲೆ ತೇಲುತ್ತದೆ. ಬಳಿಕ ನೀರಿನಿಂದ ಹೊರತೆಗೆದ ಒಸಾರ್ಬ್ ಸ್ಪಂಜನ್ನು ಹಿಸುಕುವ ಮೂಲಕ ಎಲ್ಲಾ ಕಲ್ಮಶಗಳನ್ನು ಹೊರತೆಗೆದು ಮರುಬಳಕೆ ಮಾಡಬಹುದು.
ಹೊಸವರ್ಷದ ಪ್ರಥಮ ಕೊಡುಗೆಯಾಗಿ ಪ್ರಸ್ತುತಪಡಿಸಿದ ಡಾ. ಎಡ್ಮಿನ್ಸ್ಟನ್ ರವರ ಈ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಯಶಸ್ವಿಯಾಗಿ ಪ್ರಸ್ತುತಪಡಿಸಲು ಜಂಪ್ ಸ್ಟಾರ್ಟ್ ಇಂಕಾರ್ಪೋರೇಶನ್ ಸಂಸ್ಥೆ ಇನ್ನೂರೈವತ್ತು ಸಾವಿರ ಡಾಲರುಗಳ ಸಹಾಯಧನವನ್ನು ಘೋಷಿಸಿದೆ.
ಇದುವರೆಗಿನ ಸಂಶೋಧನೆಗಳ ಮೂಲಕ ಐದು ಪ್ರಕಾರದ ಒಸಾರ್ಬ್ ಗಳನ್ನು ಪ್ರಸ್ತುತಪಡಿಸಲಾಗಿದೆ. ಇವುಗಳಲ್ಲಿ ಎರೆಡು ಪ್ರಕಾರಗಳು ನೀರನ್ನು ಸೋಸುತ್ತವೆ. ಒಂದು ಮಣ್ಣನ್ನೂ, ಇನ್ನೊಂದು ಮರಳನ್ನೂ ಹಾಗೂ ಕೊನೆಯದು ಗಾಳಿಯನ್ನೂ ಸೋಸುತ್ತದೆ.
ಸುಲಭವಸ್ತುಗಳಿಂದ ತಯಾರಾದ ಒಸಾರ್ಬ್ ಕಡಿಮೆವೆಚ್ಚದಲ್ಲಿ ಉತ್ಪಾದಿಸಬಹುದಾದುದರಿಂದ ಇದರಿಂದಾಗುವ ಉಪಯೋಗಗಳು ಅನೇಕ. ಮೊದಲನೆಯದಾಗಿ ನೀರಿನ ಅಗತ್ಯ ಎಲ್ಲಿದೆಯೋ ಅಲ್ಲೆಲ್ಲಾ ಒಸಾರ್ಬ್ ಹೊಂದಿರುವ ನೀರಿನ ಸೋಸುಉಪಕರಣಗಳನ್ನು ಸ್ಥಾಪಿಸಿ ನೀರನ್ನು ಸ್ಥಳೀಯವಾಗಿಯೇ ಮರುಬಳಕೆಮಾಡಿಕೊಳ್ಳುವುದರ ಮೂಲಕ ಶುದ್ಧ ನೀರಿನ ಕೊರತೆಯನ್ನು ನೀಗಿಸಬಹುದು. ಎರಡನೆಯದಾಗಿ ನೀರಿನೊಂದಿಗೆ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಕಶ್ಮಲಗಳಲ್ಲಿರುವ ಕೆಲವು ತೈಲವಸ್ತುಗಳನ್ನು ಮತ್ತೆ ಪಡೆದು ಮರುಬಳಕೆ ಮಾಡಿಕೊಳ್ಳಬಹುದು.
ಶೀಘ್ರದಲ್ಲಿಯೇ ಒಸಾರ್ಬ್ ನಮ್ಮ ಊರಿಗೂ ಬರುವಂತಾಗಲಿ ಎಂದು ಆಶಿಸೋಣ
ಅರ್ಶದ್ ಹುಸೇನ್ ದುಬೈ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ