ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 24, 2010

ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ

ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ?


ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ ಹೊಸ ಉದ್ಯೋಗವನ್ನು ಸೃಷ್ಟಿಸಿವೆ.  ಉದ್ಯೋಗದ ಹೆಸರು - ಬೆಡ್ ವಾರ್ಮರ್.

ವಾಸ್ತವವಾಗಿ ಇದೊಂದು ಕೋರಿಕೆಯ ಸೇವೆ.  ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ಆತನ ಬೇಕುಬೇಡಗಳೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸ್ನಾನದ ನೀರು ಇಷ್ಟೇ ಬಿಸಿ ಇರಬೇಕು, ಇಷ್ಟೇ ಹೊತ್ತಿಗೆ ಸ್ನಾನ ಮಾಡಬೇಕು, ಚಹಾದಲ್ಲಿ ಸಕ್ಕರೆ ಇಷ್ಟೇ ಇರಬೇಕು, ಇದೇ ಬ್ರಾಂಡಿನ ಉತ್ಪನ್ನವಾಗಬೇಕು, ಇಷ್ಟೇ ಘಂಟೆಗೆ ತಲುಪಬೇಕು, ತಾನು ಕೊಠಡಿ ತಲುಪುವ ಮೊದಲು ಕೊಠಡಿಯ ಏಸಿ ಚಾಲೂ ಇರಬೇಕು ಇತ್ಯಾದಿ ಇತ್ಯಾದಿ. ಇದಕ್ಕೊಂದು ಹೊಸ ಸೇರ್ಪಡೆ ತಾವು ಮಲಗುವ ಹಾಸಿಗೆ ಅಹ್ಲಾದಕರವಾಗಿ ಬೆಚ್ಚಗಿರಬೇಕು, ಅಂದರೆ ಬರೋಬ್ಬರಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರಬೇಕು.

ಬೇರೆ ವಿಧಾನಗಳಿಂದ ಈ ತಾಪಮಾನವನ್ನು ಪಡೆಯಬಹುದಾದರೂ ಸ್ವಾಭಾವಿಕವಾಗಿ ವ್ಯಕ್ತಿಯೊಬ್ಬ ಮಲಗಿ ಹೊರಬಂದ ಹಾಸಿಗೆ ಅತ್ಯಂತ ಕರಾರುವಕ್ಕಾಗಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರುತ್ತದೆಂದು ಸಂಶೋಧನೆಗಳಿಂದ ಧೃಢಪಟ್ಟಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಗ್ರಾಹಕ ಬಯಸಿದರೆ ಆತ ಬರುವ ಮೊದಲು ತನ್ನ ದೇಹದ ಬಿಸಿಯನ್ನು ಹಾಸಿಗೆಗೆ ವರ್ಗಾಯಿಸುವ ಸೇವೆಗೆ ಮುಡಿಪಾದ ವ್ಯಕ್ತಿ ಒಂದು ನಿಗದಿತ ಅವಧಿಯಲ್ಲಿ ಗ್ರಾಹಕನ ಹಾಸಿಗೆಯಲ್ಲಿ ಮಲಗಿ ಗ್ರಾಹಕ ಬರುವ ಕೊಂಚ ಹೊತ್ತಿನ ಮೊದಲು ಹಾಸಿಗೆ ಖಾಲಿ ಮಾಡುತ್ತಾನೆ. ಗ್ರಾಹಕ ಬಂದ ಕೂಡಲೇ ಅತ್ಯಂತ ಆಹ್ಲಾದಕರವಾದ ಬೆಚ್ಚನೆಯ ಹಾಸಿಗೆ ಲಭ್ಯ. ಈ ಸೇವೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಗ್ರಾಹಕ ಹೊರಗೆ ಕೊರೆಯುವ ಚಳಿಯಿಂದ ಥಂಡಿಯಾಗಿ ಬಂದಾಗ ಆಹ್ಲಾದಕರ ತಾಪಮಾನ ತಲುಪಲು ಹೆಚ್ಚಿನ ಸಮಯ ಬೇಕಾಗುವುದರಿಂದ ತಕ್ಷಣ ಬೆಚ್ಚಗಿರುವ ಹಾಸಿಗೆಗೆ ಹೆಚ್ಚಿನ ಬೇಡಿಕೆ.

ಸೋಮಾರಿಯಾಗಿ ಮಲಗುವವರಿಗೆ ಭಲೇ ಅದೃಷ್ಟ ಕಾದಿದೆ ಎನ್ನೋಣವೇ?

ಕೃಪೆ: ದ ಟೆಲಿಗ್ರಾಫ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ