ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 4, 2009

ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ

ಉತ್ತಮ ದೇಹದಾರ್ಢ್ಯತೆ ಹೊಂದಿರುವ ಪುರುಷರು ಈ ಲೋಕದಲ್ಲಿ 
ಬೇಕಾದಷ್ಟಿದ್ದಾರೆ.  ಆದರೆ ಮಹಿಳೆಯರಲ್ಲಿ ಇದು ಕಡಿಮೆ. 
ಅದರಲ್ಲೂ ಕೋಮಲಾಂಗವೇ ಸ್ತ್ರೀಲಕ್ಷಣವಾಗಿರುವಾಗ ಬಲಿಷ್ಠ ತನುವನ್ನು ಹೊಂದುವುದು ಹೆಚ್ಚಿನವರ ಅಪೇಕ್ಷೆಗೆ ದೂರ.  

ಇದಕ್ಕೆ ಅಪವಾದವೆನ್ನುವಂತೆ ಕೆಲವು ಮಹಿಳೆಯರು ಕಸರತ್ತು ಮಾಡಿ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿ 
ತಾವೂ ಪುರುಷರಿಗೆ ಕಡಿಮೆಯಿಲ್ಲ ಎಂದು ತೋರುವುದು ಹಲವೆಡೆ ಕಂಡುಬರುತ್ತಿದೆ. ನಿಧಾನವಾಗಿ ಸ್ತ್ರೀ ಬಲಪ್ರಧಾನ ಹಾಗೂ ಪುರುಷಪ್ರಧಾನ ಕ್ಷೇತ್ರಗಳಲ್ಲೂ ಲಗ್ಗೆಯಿಡುತ್ತಿದ್ದಾಳೆ.
ಆದರೆ ಸಾಮಾನ್ಯ ಮೈಕಟ್ಟನ್ನು ಹೊಂದಿ ತನ್ನ ತೂಕದ ಸುಮಾರು ಒಂಭತ್ತುಪಟ್ಟು ತೂಕವನ್ನು ಹೊರಬಲ್ಲ ಬಾಲಕಿಯೊಬ್ಬಳು ಈಗ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.  ಉಕ್ರೇನ್ ದೇಶದ ಕ್ರಿವೋಯ್ ರೋಗ್ ಎಂಬ ಗಣಿಗಾರಿಕೆ ಮುಖ್ಯವಾಗಿರುವ ಪುಟ್ಟ ಪಟ್ಟಣದಲ್ಲಿ ವಾಸಿಸುವ ಯೂರಿ ಅಕುಲೋವ್ ಹಾಗೂ ಲಾರಿಸಾ ಅಕುಲೋವ್ ದಂಪತಿಗಳಿಗೆ ೧೯೯೨ರಲ್ಲಿ ಹುಟ್ಟಿದ ವಾರ್ಯಾ ಅಕುಲೋವ್ ಎಂಬ ಹದಿಹರೆಯದ ಹುಡುಗಿ ತನ್ನ ತೂಕದ (ನಲವತ್ತು ಕೇಜಿ) ಸುಮಾರು ಒಂಭತ್ತು ಪಟ್ಟು ಹೆಚ್ಚು ತೂಕ (ಮುನ್ನೂರೈವತ್ತು ಕೇಜಿ) ಎತ್ತಬಲ್ಲ ಕ್ಷಮತೆ ತೋರಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.  ಪ್ರಸ್ತುತ ಅತ್ಯಂತ ಹೆಚ್ಚಿನ ಭಾರ ಎತ್ತುವ ಮಹಿಳೆಯಾಗಿ ಗಿನ್ನೆಸ್ ದಾಖಲೆ ಸ್ಥಾಪಿಸಿ ವಿಶ್ವವಿಖ್ಯಾತಳಾಗಿದ್ದಾಳೆ.

ಆದರೆ ಈ ಬಾಲಕಿಯ ವಿಸ್ಮಯಶಕ್ತಿಯ ಪರಿಚಯವಾಗಿದ್ದೂ ಒಂದು ಆಕಸ್ಮಿಕ.  ಆಕೆಯು ಚಿಕ್ಕವಳಿದ್ದಾಗ ಕಡುಬಡತನದಲ್ಲಿ ಬಳಲುತ್ತಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಸರ್ಕಸ್ ಒಂದರಲ್ಲಿ ಪ್ರದರ್ಶನ ನೀಡುವುದು ಅನಿವಾರ್ಯವಾಯಿತು.  ತಂದೆ ತಾಯಿ ಮಗಳ ತಂಡ ಅಕ್ರೋಬ್ಯಾಟಿಕ್ ಪ್ರದರ್ಶನ ನೀಡಿ ಜೀವನ ನಿರ್ವಹಿಸುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ ಅವರಿಗೆ ಸಂದಾಯವಾಗುತ್ತಿದ್ದ ವೇತನ ಕೇವಲ ಹತ್ತು ಡಾಲರ್.  ಗಣಿಕಾರ್ಮಿಕರ ಶಿಬಿರದಲ್ಲಿದ್ದ ಒಂದು ಎಂಟು ಮೀಟರ್ ಅಗಲದ ಕೋಣೆಯೇ ಅವರ ವಾಸಗೃಹ.  ಆದರೆ ತನ್ನ ಮಗಳು ಅತ್ಯುತ್ತಮ ಅಥ್ಲೀಟ್ ಆಗಬೇಕೆಂದು ಅಪೇಕ್ಷಿಸಿದ ಆಕೆಯ ತಂದೆ ಹಾಗೂ ತರಬೇತುದಾರ ಯೂರಿಯವರು ಪಕ್ಕದ ಒಂದು ಕೋಣೆಯಲ್ಲಿ ನಿಯಮಿತವಾಗಿ ತರಬೇತಿ ನೀಡಲು ಪ್ರಾರಂಭಿಸಿದರು.  ಕೊಂಚ ಕಾಲದ ಬಳಿಕ ತೂಕಗಳನ್ನು ಎತ್ತಿ ವ್ಯಾಯಾಮ ಮಾಡಲು ಪ್ರಾರಂಭಿಸಿದರು.  ನಿಧಾನಕ್ಕೆ ಹೆಚ್ಚು ಹೆಚ್ಚು ತೂಕಗಳನ್ನು ಎತ್ತುತ್ತಾ ಹೋದ ವಾರ್ಯಾ ಅದ್ಯಾವುದೋ ಶಕ್ತಿ ಆವರಿಸಿಕೊಂಡಂತೆ ದೊಡ್ಡ ಪಹಿಲ್ವಾನರಿಗೂ ಕಷ್ಟಕರವಾದ ತೂಕಗಳನ್ನು ಲೀಲಾಜಾಲವಾಗಿ ಎತ್ತಲು ಪ್ರಾರಂಭಿಸಿದಳು. ನಿಧಾನಕ್ಕೆ ಏರಿಸಿಕೊಳ್ಳುತ್ತಾ ಹೋದ ತೂಕ ಈಗ ಮುನ್ನೂರೈವತ್ತು ಕೇಜಿಗಳಿಗೆ ತಲುಪಿದೆ.
ಈಕೆಯ ಕ್ಷಮತೆಯನ್ನು ಎರೆಡು ಬಾರಿ ಪರಾಮರ್ಶಿಸಿದ ಗಿನ್ನಿಸ್ ದಾಖಲೆ ತಂಡ ಈಕೆಯೇ ವಿಶ್ವದ ಅತ್ಯಂತ ಬಲಿಷ್ಠ ಬಾಲಕಿಯೆಂದು ದಾಖಲೆ ಧೃಢೀಕರಣ ಪತ್ರ ನೀಡಿದೆ.  ಆದರೆ ಈಕೆ ನಿಜವಾಗಿಯೂ ಹೊರಬಲ್ಲ ಕ್ಷಮತೆಯ ಇದು ಕೇವಲ ಮುಕ್ಕಾಲು ಪಾಲು ಮಾತ್ರ, ನಿಜವಾಗಿ ಆಕೆ ಇನ್ನೂ ಹೆಚ್ಚು ಭಾರ ಹೊರಬಲ್ಲವಳಾಗಿದ್ದಾಳೆ, ಆದರೆ ಆಕೆಯ ಆರೋಗ್ಯದ ದೃಷ್ಟಿಯಿಂದ ರಿಸ್ಕ್ ತೆಗೆದುಕೊಳ್ಳಲಾರೆ ಎಂದು ಆಕೆಯ ತಂದೆ ಹೆಮ್ಮೆಯಿಂದ ನುಡಿಯುತ್ತಾರೆ.

ಭಾರ ಎತ್ತುವಿಕೆಯಲ್ಲಿ ಅಪ್ರತಿಮ ಸಾಮರ್ಥ್ಯ ಹೊಂದಿರುವ ಈಕೆ ಶಾಲೆಯ ಪಾಠಗಳಲ್ಲೂ ಮುಂದೆ.  ಭವಿಷ್ಯದಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ಹಾಗೂ ಕೀರ್ತಿ ತರುವ ದಿಸೆಯಲ್ಲಿ ವಾರ್ಯಾ ಹಾಗೂ ಆಕೆಯ ಕುಟುಂಬ ಕಾರ್ಯನಿರತವಾಗಿದೆ. ಅವರಿಗೆ ಶುಭ ಹಾರೈಸೋಣವೇ

ಕೃಪೆ: http://www.varyaakulova.com/



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ