ಹೆಲಿಕಾಪ್ಟರು ನಡೆಸುವಾಗ ಎಸ್ಸೆಮ್ಮೆಸ್ ಕಳಿಸುವುದೇ? ಕೆರೆಯೇ ಗತಿ
ವಾಹನ ಚಲಾಯಿಸುವಾಗ ಮೊಬೈಲ್ ಫೋನು ಬಳಸಬೇಡಿ, ಎಸ್ಸೆಮ್ಮೆಸ್ ಕಳಿಸಬೇಡಿ, ನಿಮ್ಮ ಏಕಾಗ್ರತೆ ಭಂಗಗೊಂಡು ಅಪಘಾತಗಳಾಗುವ ಸಾಧ್ಯತೆಗಳಿವೆ, ಚಾಲಕನ ಏಕಾಗ್ರತೆಯನ್ನು ಕೆಡಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲು ಬಳಸಲೇಬೇಕಾದ ಸಂದರ್ಭ ಬಂದರೆ ವಾಹನ ನಿಲ್ಲಿಸಿ ಬಿಡಿ ಎಂದೆಲ್ಲಾ ಎಲ್ಲಾ ದೇಶಗಳ ಕಾನೂನುಗಳು ಸಾರಿ ಸಾರಿ ಹೇಳುತ್ತವೆ. ವಾಹನ ಚಲಾಯಿಸುವಾಗ ಮೊಬೈಲ್ ಫೋನನ್ನು ಹೆಡ್ ಫೋನ್ ಇಲ್ಲದೆ ಬಳಸುವುದು ಯು.ಎ.ಇ. ಸಹಿತ ಹಲವು ರಾಷ್ಟ್ರಗಳಲ್ಲಿ ದಂಡನಾರ್ಹ ಅಪರಾಧ.
ಇಷ್ಟೆಲ್ಲಾ ಕಟ್ಟಳೆಗಳಿದ್ದರೂ ಚಲಿಸುವ ನೂರು ಕಾರುಗಳಲ್ಲಿ ಇಪ್ಪತ್ತು ಮೂವತ್ತರ ಚಾಲಕರಾದರೂ ತಮ್ಮ ಮೊಬೈಲುಗಳನ್ನು ಒಂದು ಕಿವಿಯ ಮೇಲಿರಿಸಿಕೊಂಡೇ ಇರುತ್ತಾರೆ. ಇನ್ನೂ ಕೆಲವರು ಎಸ್ಸೆಮ್ಮೆಸ್ ಕಳಿಸುವುದೂ ಉಂಟು.
ವಾಹನ ಚಲಾಯಿಸುವಾಗ ಎಸ್ಸೆಮ್ಮೆಸ್ ಕಳುಹಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂಬುದು ಗೊತ್ತಿದ್ದರೂ ಎಸ್ಸೆಮ್ಮೆಸ್ ಕಳುಹಿಸುವ ವೀರಾಗ್ರಣಿಗಳಿಗೇನೂ ಕೊರತೆಯಿಲ್ಲ. ಆದರೆ ಹೆಲಿಕಾಪ್ಟರೊಂದನ್ನು ಚಲಾಯಿಸುತ್ತಿರುವಾಗ ಎಸ್ಸೆಮ್ಮೆಸ್ ಕಳುಹಿಸುವಲ್ಲಿ ಮಗ್ನರಾದರೆ?
ಕಳೆದ ನವೆಂಬರ್ ನಲ್ಲಿ ನ್ಯೂಜಿಲ್ಯಾಂಡಿನ ವನಾಕಾ ಎಂಬ ಸರೋವರದ ಮೇಲೆ ಎರೆಡು ಹೆಲಿಕಾಪ್ಟರುಗಳಲ್ಲಿ ಡೇವಿಡ್ ಸಾಕ್ಸ್ಟನ್ ಎಂಬುವರು ಒಂದು ಹೆಲಿಕಾಪ್ಟರಿನಲ್ಲಿ ಹಾಗೂ ಅವರನ್ನು ಹಿಂಬಾಲಿಸಿಕೊಂಡು ಅವರ ಪುತ್ರ ಮೋರ್ಗನ್ ಸಾಕ್ಸ್ಟನ್ ಅವರು ಇನ್ನೊಂದು ಹೆಲಿಕಾಪ್ಟರಿನಲ್ಲಿ ಸರೋವರದ ಇನ್ನೊಂದು ತೀರದಲ್ಲಿದ್ದ ವನಾಕಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು. ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಹಿಂಭಾಗದಲ್ಲಿ ಬರುತ್ತಿರುವ ವಾಹನಗಳನ್ನು ಗಮನಿಸಲು ರಿಯರ್ ವ್ಯೂ ಕನ್ನಡಿ ಲಭ್ಯವಿದೆ. ಆದರೆ ಆ ಸೌಲಭ್ಯ ಹೆಲಿಕಾಪ್ಟರಿನಲ್ಲಿ ಇದ್ದಿರಲಿಕ್ಕಿಲ್ಲ. ಹಾಗಾಗಿ ಡೇವಿಡ್ ಅವರಿಗೆ ತಮ್ಮ ಹಿಂದೆ ಮಗರಾಯ ಹಿಂಬಾಲಿಸುತ್ತಿಲ್ಲವೆನ್ನುವುದು ವಿಮಾನ ನಿಲ್ದಾಣ ತಲುಪುವವರೆಗೂ ತಿಳಿಯಲೇ ಇಲ್ಲ. ಒಂದು ಹೆಲಿಕಾಪ್ಟರಿನಿಂದ ಇನ್ನೊಂದಕ್ಕೆ ರೇಡಿಯೋ ಮೂಲಕ ಮಾತನಾಡುವ ಸೌಲಭ್ಯವಿದ್ದರೂ ಅದೇಕೆ ಮೌನವಾಗಿದ್ದರೋ, ದೇವರೇ ಬಲ್ಲ. ಮನೆಯ ಜಗಳ ಆಕಾಶಕ್ಕೆ ತಲುಪಿರಲಿಕ್ಕೂ ಸಾಕು.
ಏನಾದರಾಗಲಿ, ತಮ್ಮ ಮಗ ತಲುಪಲಿಲ್ಲವೆಂದು ಡೇವಿಡ್ ಅವರು ಹುಯಿಲಿಟ್ಟೊಡನೆಯೇ ಮೋರ್ಗನ್ ಅವರ ಹೆಲಿಕಾಪ್ಟರ್ ಹುಡುಕಾಟ ಶುರುವಾಯಿತು. ಶೀಘ್ರದಲ್ಲಿಯೇ ಅವರ ಹೆಲಿಕಾಪ್ಟರ್ ಸರೋವರದ ನಡುವಿನಲ್ಲಿ ಅಪಘಾತಕ್ಕೀಡಾಗಿದ್ದುದು ಕಂಡುಬಂದಿತ್ತು. ರಕ್ಷಣಾ ಸಿಬ್ಬಂದಿ ಕೂಡಲೇ ನೀರಿಗೆ ಜಿಗಿದು ಮೋರ್ಗನ್ ಅವರನ್ನು ಸುರಕ್ಷಿತವಾಗಿ ಕರೆದುತಂದರು.
ಆ ಸಮಯದಲ್ಲಿ ಆಗಿದ್ದಿಷ್ಟೇ. ಹೆಲಿಕಾಪ್ಟರ್ ನಡುಆಗಸದಲ್ಲಿ ಚಲಿಸುತ್ತಿದ್ದಾಗ ಬೇಜಾರಾಗಿ ಒಂದು ಎಸ್ಸೆಮ್ಮೆಸ್ ಕಳುಹಿಸೋಣವೆಂದು ತಮ್ಮ ಮೊಬೈಲ್ ತೆಗೆದುಕೊಂಡು ಒಂದಾದ ಮೇಲೊಂದರಂತೆ ತಮ್ಮ ಸ್ನೇಹಿತರಿಗೆ ಎಸ್ಸೆಮ್ಮೆಸ್ ಕಳುಹಿಸುತ್ತಾ ಹೋದರು. ಎಸ್ಸೆಮ್ಮೆಸ್ ಲೋಕದಲ್ಲಿ ಮುಳುಗಿದ್ದ ಅವರಿಗೆ ತಮ್ಮ ನಿಯಂತ್ರಣದಿಂದ ಯಾವಾಗ ಹೆಲಿಕಾಪ್ಟರು ನೀರಿನೆಡೆ ಚಲಿಸಿತ್ತೋ ಗೊತ್ತೇ ಅಗಲಿಲ್ಲ. ಇನ್ನೇನಾಗಬೇಕು, ರಭಸದಲ್ಲಿ ನೀರಿಗೆ ಅಪ್ಪಳಿಸಿದ ಹೆಲಿಕಾಪ್ಟರು ಚಕನಾ ಚೂರು.
ಈ ಘಟನೆಯ ಬಳಿಕ ಎಲ್ಲಾ ಪೈಲಟುಗಳಿಗೆ ಮೊಬೈಲು ಫೋನ್ ಬಳಸದಂತೆ ಕಟ್ಟೆಚ್ಚರ ನೀಡಲಾಗಿದೆಯಂತೆ. ಹಾರಾಟದಲ್ಲಿರುವಾಗ ತಾವೂ ಎಸ್ಸೆಮ್ಮೆಸ್ ಕಳುಸುತ್ತಿದ್ದೇವೆಂದೂ ಆದರೆ ಅದರಿಂದ ಹಾರಾಟವೇ ಭಗ್ನಗೊಳ್ಳುವಷ್ಟು ಮಗ್ನರಾಗುತ್ತಿದ್ದಿಲ್ಲವೆಂದೂ, ಇನ್ನು ಮುಂದಕ್ಕೆ ಹುಷಾರಾಗಿರುತ್ತೇವೆಂದು ಉಳಿದ ಪೈಲಟುಗಳು ಭಾಷೆ ನೀಡಿದ್ದಾರೆ.
ಅಂದ ಹಾಗೆ ಅವರು ಕಳುಹಿಸಿದ ಸಂದೇಶ ಏನು ಎಂಬುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಕೃಪೆ: www.nzherald.co.nz
ಚಿತ್ರ: ಎಸ್ಸೆಮ್ಮೆಸ್ ಅಪಘಾತ ವೀರ ಮೋರ್ಗನ್ ಸಾಕ್ಸ್ಟನ್
ಹೆಲಿಕಾಪ್ಟರು ge Kannadali Ananthare?
ಪ್ರತ್ಯುತ್ತರಅಳಿಸಿ