ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಸೆಪ್ಟೆಂಬರ್ 14, 2012


ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿಸಂಗ್ರಹಾಲಯ - ಲುಜಾನ್ ಝೂ

- ಅರ್ಶದ್ ಹುಸೇನ್ ಎಂ.ಹೆಚ್., ಕೊಪ್ಪ

ಈ ವರ್ಷದ ರಜೆಗಾಗಿ ಊರಿಗೆ ಬರುವ ಮೊದಲೇ ಮೈಸೂರಿನ ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಬೇಕೆಂದು ಮಕ್ಕಳು ಬೇಡಿಕೆಯಿಟ್ಟಿದ್ದರು. ನಾನೂ ಮೈಸೂರು ಪ್ರಾಣಿಸಂಗ್ರಹಾಲಯವನ್ನು ನೋಡಿ ಇಪ್ಪತ್ತೈದು ವರ್ಷಗಳೇ ಕಳೆದಿದ್ದವು. ಈಗ ಇಲ್ಲಿ ಹಲವಾರು ಬದಲಾವಣೆಗಳಾಗಿವೆ, ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ, ನೋಡಲು ಚೆನ್ನಾಗಿದೆ ಎಂದು ಇತ್ತೀಚೆಗೆ ಭೇಟಿ ನೀಡಿದ್ದ ಹಲವು ಸ್ನೇಹಿತರು ತಿಳಿಸಿದ್ದರು. ಅಂತೆಯೇ ಮೈಸೂರು ತಲುಪಿದ ಮರುದಿನ ಬೆಳಿಗ್ಗೆ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಅಡಿಯಿಟ್ಟಿದ್ದೆ. ಸ್ನೇಹಿತರು ತಿಳಿಸಿದಂತೆ ಇಪ್ಪತ್ತೈದು ವರ್ಷ ಹಿಂದೆ ನೋಡಿದ್ದ ಮೈಸೂರು ಪ್ರಾಣಿಸಂಗ್ರಹಾಲಯಕ್ಕೂ ಇಂದಿನದಕ್ಕೂ ಎಷ್ಟೋ ವ್ಯತ್ಯಾಸವಿತ್ತು. ಎಲ್ಲೆಲ್ಲೂ ಅಚ್ಚುಕಟ್ಟು, ಸ್ವಚ್ಛತೆ, ಮಾಹಿತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಶಕರಿಗೆ ಒದಗಿಸಲಾದ ಸುರಕ್ಷತೆ. ಪ್ರಾಣಿಗಳಿಗೆ ಆಹಾರ ನೀಡುವುದಾಗಲೀ ಅಣಕಿಸುವುದಾಗಲೀ ಇಲ್ಲಿ ನಿಷಿದ್ಧ. ಹುಲಿ ಸಿಂಹಗಳಂತಹ ವನ್ಯಮೃಗಗಳ ಬೋನುಗಳ ದಪ್ಪನೆಯ ಕಬ್ಬಿಣದ ಸರಳುಗಳಂತೂ ಪ್ರಾಣಿಗಳ ಅರ್ಧಭಾಗ ಕಾಣದಿರುವಷ್ಟು ಮರೆಮಾಚುತ್ತವೆ. ಪ್ರಾಣಿಗಳೊಂದಿಗೆ ಮುಖಾಮುಖಿಯಾದರೆ ಅಪಾಯ ತಪ್ಪಿದ್ದಲ್ಲ ಎಂಬ ರೇಖಾಚಿತ್ರಗಳನ್ನು ಎಲ್ಲೆಲ್ಲೂ ಅಳವಡಿಸಲಾಗಿದೆ. ಅಂತೆಯೇ ಆಯಾ ಪ್ರಾಣಿಗಳ ವಿವರಗಳನ್ನು ಸಹಾ ಸ್ಪಷ್ಟವಾಗಿ ನೀಡಲಾಗಿದೆ. ಆದರೆ ಪ್ರಾಣಿಗಳನ್ನು ಸಾಕುವ ಖರ್ಚು ವಿಪರೀತವಾಗಿರುವುದರಿಂದ ಹಾಗೂ ಕೇವಲ ಪ್ರವೇಶಧನದಿಂದ ಈ ಖರ್ಚುಗಳನ್ನು ಭರಿಸಲಸಾಧ್ಯವಾದುದರಿಂದ ಇತ್ತೀಚೆಗೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಒಂದು ಹೊಸ ಪ್ರಯೋಗವನ್ನು ಪ್ರಾರಂಭಿಸಲಾಯಿತು. ಈ ಕರೆಗೆ ಸ್ಪಂದಿಸಿದ ನಾಡಿನ ಹಲವಾರು ಗಣ್ಯರು ಹಾಗೂ ಸಂಸ್ಥೆಗಳು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿವೆ. ಕೆಲವು ಸಂಸ್ಥೆಗಳು ಒಂದು ನಿರ್ದಿಷ್ಟ ಅವಧಿಗಾಗಿ ಪ್ರಾಣಿಯೊಂದನ್ನು ದತ್ತು ತೆಗೆದುಕೊಂಡರೆ ಕೆಲವು ಸಂಸ್ಥೆಗಳು ಜೀವಾವಧಿಗೆ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿವೆ. ದತ್ತು ಯೋಜನೆ ಯಶಸ್ವಿಯಾಗಿರುವುದರಿಂದ ಮೈಸೂರು ಪ್ರಾಣಿಸಂಗ್ರಹಾಲಯ ಇನ್ನಷ್ಟು ಸೌಲಭ್ಯಗಳೊಂದಿಗೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಆದರೆ ಸುರಕ್ಷತೆಯ ವಿಷಯದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಾಣಿಸಂಗ್ರಹಾಲಯವೊಂದು ಅರ್ಜೆಂಟೀನಾ ದೇಶದ ರಾಜಧಾನಿ ಬ್ಯೂನಸ್ ಐರಸ್ ನಗರದಿಂದ ಐವತ್ತು ಮೈಲಿ ದೂರದಲ್ಲಿರುವ ಲುಜಾನ್ ಎಂಬ ನಗರದಲ್ಲಿದೆ.  ಮೈಸೂರಿನಂತೆಯೇ ಅಲ್ಲಿಯೂ ಪ್ರಾಣಿಗಳನ್ನು ಸಾಕಲು ಧನದ ಆಭಾವ. ೧೯೯೪ ರಲ್ಲಿ ಪ್ರಾರಂಭವಾದ  ಲುಜಾನ್ ಜೂ ಎಂಬ ಹೆಸರಿನ ಈ ಪ್ರಾಣಿಸಂಗ್ರಹಾಲಯದಲ್ಲಿ ಮನುಷ್ಯರನ್ನು ವನ್ಯಪ್ರಾಣಿಗಳಿಂದ ರಕ್ಷಣೆ ನೀಡಲು ಮಾಡಿರುವ ವ್ಯವಸ್ಥೆಯ ನಡುವೆಯೇ ಸರ್ಕಾರವೇ ವನ್ಯಮೃಗಗಳೊಂದಿಗೆ ಮುಖಾಮುಖಿಯಾಗಲೂ, ಪ್ರಾಣಿಗಳ ಮೇಲೆ ಸವಾರಿ ಮಾಡಲೂ ಅನುಕೂಲ ಮಾಡಿಕೊಡುತ್ತದೆ. ಅಲ್ಲದೇ ಪ್ರಾಣಿಗಳಿಗೆ ಆಹಾರ ನೀಡಲು, ಹಾಲು ಕುಡಿಸಲು ಅನುವುಮಾಡಿಕೊಡುತ್ತದೆ.   ಆದರೆ ಈ ಸೇವೆಗಾಗಿ ಗ್ರಾಹಕ ಐವತ್ತು ಡಾಲರುಗಳನ್ನು (ಸುಮಾರು ಎರಡೂವರೆ ಸಾವಿರ ರೂಪಾಯಿಗಳು) ನೀಡಬೇಕು.
ಅಲ್ಲದೇ ಒಂದು ವೇಳೆ ಯಾವುದೇ ವನ್ಯಮೃಗ ಧಾಳಿ ಎಸಗಿದರೆ ಆಗುವ ಪ್ರಮಾದಗಳಿಗೆ ತಾನೇ ಹೊಣೆ, ಪ್ರಾಣಿಸಂಗ್ರಹಾಲಯದ ಸಿಬ್ಬಂದಿಯನ್ನು ಹೊಣೆಯಾಗಿಸಲಾರೆ ಎಂದು ಮುಚ್ಚಳಿಕೆ ಬರೆದು ಕೊಡಬೇಕು.  ಆದರೆ ಪ್ರವೇಶಧನ  ಐದು ಪೌಂಡುಗಳು (ಸುಮಾರು ಮುನ್ನೂರಾ ಅರವತ್ತೈದು ರೂಪಾಯಿಗಳು) ಮಾತ್ರ. ಆದರೆ ಹೆಚ್ಚಿನ ಮೊತ್ತ ಕೊಟ್ಟು ವನ್ಯಪ್ರಾಣಿಗಳ ಹತ್ತಿರ ಬರಲು ಇಚ್ಛಿಸುವ ಸಾರ್ವಜನಿಕರೂ ಬೇಕಾದಷ್ಟು ಸಂಖ್ಯೆಯಲಿದ್ದಾರೆ. ಸಿಂಹ, ಕರಡಿ ಮೊದಲಾದ ದೊಡ್ಡ ಪ್ರಾಣಿಗಳ ಬೆನ್ನ ಮೇಲೆ ಕುದುರೆಯಂತೆ ಸವಾರಿ ಮಾಡಿದರೆ ಮಕ್ಕಳು ಪ್ರಾಣಿಗಳ ಮರಿಗಳನ್ನು ಎತ್ತಿಕೊಂಡು ಅಪ್ಪಿ ಮುದ್ದಾಡುತ್ತಾರೆ. ಅಂಗಾತ ಬಿದ್ದಿರುವ ಪ್ರಾಣಿಯ ಹೊಟ್ಟೆಯನ್ನು ನೇವರಿಸಿ ಪುಳಕಿತರಾಗುತ್ತಾರೆ. ಕರಡಿ, ಚಿರತೆ ಮೊದಲಾದವುಗಳ ಬಾಯಿಯಲ್ಲಿ ಕೈಗಳನ್ನಿರಿಸಿ ಹುಸಿ ಹುಸಿ ಕಚ್ಚಿಸಿಕೊಳ್ಳುತ್ತಾರೆ. ಚಿಕ್ಕ ಪ್ರಾಣಿಗಳನ್ನು ಬೆನ್ನ ಮೇಲೆ, ತಲೆಯ ಮೇಲೆ ಎತ್ತಿ ಕೂರಿಸುತ್ತಾರೆ, ತಳ್ಳುಗಾಡಿಯಲ್ಲಿ ಕುಳ್ಳಿರಿಸಿ ಸವಾರಿ ಮಾಡಿಸಿ ಸಂಭ್ರಮಿಸುತ್ತಾರೆ. 
 ಅಷ್ಟಕ್ಕೂ ಈ ಪ್ರಾಣಿಗಳು ಜನರಿಗೇನೂ ಅಪಾಯ ಎಸಗುವುದಿಲ್ಲವೇ? ಸ್ವಾರಸ್ಯ ಇರುವುದು ಇಲ್ಲಿ.  ಈ ಪ್ರಾಣಿಗಳ ಮೇಲೆ ಸವಾರಿ ಮಾಡಲು, ಬಳಿ ನಿಂತುಕೊಳ್ಳಲು, ಮೈ ನೇವರಿಸಲು, ಆಹಾರ ನೀಡಲು ಒಂದು ನಿರ್ದಿಷ್ಟ ಸಮಯವಿದೆ. ಆ ಸಮಯಕ್ಕೂ ಮೊದಲು ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ಎಲ್ಲಾ ಪ್ರಾಣಿಗಳಿಗೆ ಹೊಟ್ಟೆ ಬಿರಿಯುವಷ್ಟು ತಿನ್ನಿಸಿರುತ್ತಾರೆ. ಆ ಬಳಿಕ ಬಳಿಬರುವ ಮನುಷ್ಯರನ್ನು ತಿನ್ನುವ ಯೋಚನೆಯೇ ಅವುಗಳಿಗೆ ಬಾರದಿರುವುದರಿಂದ ಧಾಳಿ ಮಾಡುವ ಸಂಭವ ತೀರಾ ಕಡಿಮೆ.  ಅಲ್ಲದೇ ಹೆಚ್ಚಿನ ಪ್ರಾಣಿಗಳು ಇಲ್ಲಿಯೇ ಹುಟ್ಟಿ ಬೆಳೆದವುಗಳು, ಚಿಕ್ಕಂದಿನಿಂದಲೂ ಅವುಗಳಿಗೆ ಮನುಷ್ಯರ ಒಡನಾಟ ಅಭ್ಯಾಸವಾಗಿದ್ದು ಮನುಷ್ಯನೆಂದರೆ ತಿನ್ನಬಹುದಾದ ವಸ್ತು ಎಂಬ ವಿಚಾರವೇ ಅವುಗಳ ಮನಸ್ಸಿನಲ್ಲಿ ಸುಳಿಯುವುದಿಲ್ಲ, ಹಾಗಾಗಿ ಯಾರೂ ಈ ಪ್ರಾಣಿಗಳ ಬಳಿ ನಿರ್ಭಯವಾಗಿ ಹೋಗಬಹುದು, ಸವಾರಿ ಮಾಡಬಹುದು, ಹಾಲು ಕುಡಿಸಬಹುದು, ಮೈ ನೇವರಿಸಬಹುದು, ಎತ್ತಿ ಮುದ್ದಾಡಬಹುದು - ಇದು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ನೀಡುವ ಸಮರ್ಥನೆ.


ಅಂದಹಾಗೆ ಥಾಯ್ಲೆಂಡಿನ ಬ್ಯಾಂಕಾಕ್ ನಗರದ ವಾಟ್ ಪಾ ಲುವಾಂಗ್ ಟಾ ಬುವಾ (Wat Pa Luang Ta Bua) ಎಂಬ ಹೆಸರಿನ  ಒಂದು ಬೌದ್ಧ ದೇವಾಲಯದಲ್ಲಿಯೂ ಹುಲಿಗಳನ್ನು ಸಾಕುಮೃಗಗಳಂತೆ ಸಾಕಲಾಗಿದೆ. ಇಲ್ಲಿಯೂ ಸಹಾ ಈ ಹುಲಿಗಳನ್ನು ನೇವರಿಸಲು ಮತ್ತು ಫೋಟೋ ತೆಗೆಸಿಕೊಳ್ಳಲೂ ದರ ತೆರಬೇಕು.(ಸುಮಾರು ಎರಡೂವರೆ ಸಾವಿರ ರೂಪಾಯಿಗಳು) ಈ ಹುಲಿಗಳು ಮಾತ್ರ ಅಪ್ಪಟ ಬೌದ್ಧಮುನಿಗಳಂತೆಯೇ ಸದಾ ಶಾಂತವಾಗಿರುತ್ತವೆ. ಹುಲಿಗಳಿರುವ ಕಾರಣ ಈ ದೇವಲಯಕ್ಕೆ ಹುಲಿಗಳ ದೇವಾಲಯ (Temple of Tigers) ಎಂಬ ಅನ್ವರ್ಥನಾಮವೂ ಒದಗಿದೆ. ಕೆಲವು ವರ್ಷಗಳ ಹಿಂದೆ ಕಳ್ಳಸಾಗಣೆದಾರರು ಹುಲಿಮರಿಯೊಂದನ್ನು ಎಲ್ಲಿಯೋ ಕದ್ದೊಯ್ಯುತ್ತಿದ್ದುದನ್ನು ಹಿಡಿದ ಅರಣ್ಯ ರಕ್ಷಣಾದಳ ಬಳಿಕ ಸಾಕಲೆಂದು ಈ ಬೌದ್ಧಭಿಕ್ಷುಗಳಿಗೆ ನೀಡಿತ್ತು. ಮನೆಯ ಹಸುವಿನಂತೆಯೇ ಹುಲಿ ಬೆಳೆಯುತ್ತಿದ್ದುದನ್ನು ಗಮನಿಸಿದ ಜನರು ಕಳ್ಳಸಾಗಣೆದಾರರಿಂದ ಹಿಡಿದ ಇನ್ನಷ್ಟು ಹುಲಿಮರಿಗಳನ್ನು ದೇವಾಲಯದ ಬಾಗಿಲ ಬಳಿ ಬಿಟ್ಟು ಬರಲು ತೊಡಗಿದರು. ಆ ಮರಿಗಳು ದೊಡ್ಡವಾಗಿ ಅವುಗಳ ಸಂತತಿ ಬೆಳೆದು ಇಂದು ಒಟ್ಟು ಮೂವತ್ತ ನಾಲ್ಕುಹುಲಿಗಳು ದೇವಾಲಯದ ಆವರಣದಲ್ಲಿ ಜೀವಿಸುತ್ತಿವೆ.ಎಷ್ಟಾದರೂ ವನ್ಯಮೃಗಗಳು  ತಮ್ಮ ಕ್ರೂರತ್ವವನ್ನು ಮರೆತಾವೆಯೇ? ಎಂದಾದರೊಮ್ಮೆ ತಮಾಷೆಗೆಂದು ಹುಲಿಯೋ ಸಿಂಹವೋ ಬರೆ ತನ್ನ ಪಂಜವನ್ನು ಬೀಸಿದರೆ ಓರ್ವ ಮನುಷ್ಯನನ್ನು ಪರಂಧಾಮಕ್ಕೆ ಅಟ್ಟಲು ಸಾಕು. ಇದೇ ಅನುಮಾನವನ್ನು ವ್ಯಕ್ತಪಡಿಸಿದ ಅರ್ಜೆಂಟೀನಾದ ಪ್ರಾಣಿರಕ್ಷಾ ಸಂಸ್ಥೆಯಾದ ಬಾರ್ನ್ ಫ್ರೀ ಫೌಂಡೇಶನ್ ವನ್ಯಮೃಗಗಳೊಂದಿಗೆ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಖಂಡಿಸಿ 2009 ರಿಂದಲೂ ಪ್ರತಿಭಟನೆ ನಡೆಸುತ್ತಾ ಬಂದಿದೆ. ಈ ರೀತಿಯಾಗಿ ಅಪಾಯಕಾರಿಯಾದ ವನ್ಯಮೃಗಗಳೊಂದಿಗೆ ಸಾರ್ವಜನಿಕರ ಮುಖಾಮುಖಿಯಾಗುವುದು ಅಪಾಯಕ್ಕೆ ಒಂದು ತೆರೆದ ಆಹ್ವಾನ, ಪ್ರಾಣಿಗಳ ನಡವಳಿಕೆ ಯಾವಾಗ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಬಾರ್ನ್ ಫ್ರೀ ಸಂಸ್ಥೆಯ ನಿರ್ದೇಶಕರಾದ ವಿಲ್ ಟ್ರಾವೆರ್ಸ್ ತಿಳಿಸುತ್ತಾರೆ. ಆದರೆ ಲಾಭ ಪಡೆಯುತ್ತಿರುವ ಸರ್ಕಾರ ಈ ಮನವಿಗಳಿಗೆ ಜಪ್ಪೆನ್ನದೇ ವನ್ಯಪ್ರಾಣಿಗಳೊಂದಿಗೆ ಸಾರ್ವಜನಿಕರ ಒಡನಾಟದ ವ್ಯಾಪಾರವನ್ನು ಮುಂದುವರೆಸಿಕೊಂಡು ಬಂದಿದೆ. ಯಾವುದಾದರೂ ಅಪಾಯ ಸಂಭವಿಸುವ ಮೊದಲೇ ಯಾವುದಾದರೂ ಕ್ರಮ ಕೈಗೊಳ್ಳಲಾಗುತ್ತದೆಯೋ ಎಂದು ಕಾದು ನೋಡಬೇಕು.

(ಈ ಲೇಖನ ಸಂಯುಕ್ತ ಕರ್ನಾಟಕದ 'ಭಿನ್ನ ವಿಭಿನ್ನ'ವಿಭಾಗದಲ್ಲಿ ಜೂನ್ 20, 2012 ರಂದು ಪ್ರಕಟವಾಗಿದೆ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ