ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಫೆಬ್ರವರಿ 26, 2010

ಪಾಕಿಸ್ತಾನದ ದೇವಾಲಯಗಳು - ಇನ್ನಷ್ಟು ಮಾಹಿತಿಗಳು

ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವಂತೆ ಕೇಳಿಕೊಂಡಿದ್ದರು. ಆದರೆ ಹೆಚ್ಚಿನ ಮಾಹಿತಿ ಹೊಂದಿಸಲು ಸ್ವಲ್ವ ವಿಳಂಬವಾಯಿತು (ಹೆಚ್ಚಿನ ಪಕ್ಷ ನಾನು ಸೋಮಾರಿಯಾಗಿರುವುದು ಕಾರಣ)


ಪೆಜತ್ತಾಯರ ಮನವಿಯ ಬಳಿಕ ನನ್ನ ಭಾವನವರನ್ನು (ನನ್ನ ಅಕ್ಕ 1988 ರಲ್ಲಿ ಮದುವೆಯಾಗಿ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ) ಫೋನ್ ಮೂಲಕ ಸಂಪರ್ಕಿಸಿ ಕೆಲ ಮಾಹಿತಿಗಳನ್ನು ಪಡೆದುಕೊಂಡೆ. ಅವರ ಪ್ರಕಾರ ದೇಶ ವಿಭಜನೆಗೂ ಮುನ್ನ ಅಖಂಡ ರಾಷ್ಟ್ರವಾಗಿದ್ದ ಭಾರತದಲ್ಲಿ ಎಲ್ಲೆಡೆ ಸಮಾನವಾಗಿ ದೇವಾಲಯಗಳೂ, ಮಸೀದಿಗಳೂ ಗುರುದ್ವಾಗಳೂ ಇದ್ದವು. ಒಮ್ಮೆ ಪಾಕಿಸ್ತಾನವೆಂಬ ರಾಷ್ಟ್ರ ಉದಿಸಿತೋ ಆಗ ಇಸ್ಲಾಮಿ ವಿರೋಧಿಯಾಗಿರುವ ಎಲ್ಲಾ ಪ್ರಕ್ರಿಯೆಗಳಿವೂ ವಿರೋಧ ತೋರಿಬಂದಿತ್ತು. ಹಿಂದೂ ಧರ್ಮದ ವಿಗ್ರಹಾರಾಧನೆಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಬಹುದೇವಾರಾಧನೆಗೂ ಸ್ಥಾನವಿಲ್ಲ. ಆದರೆ ಕೇವಲ ಇಸ್ಲಾಂ ಮಾತ್ರ ಉಳಿಯಬೇಕು ಬೇರೆ ಧರ್ಮಗಳಿಗೆ ಈ ಜಾಗದಲ್ಲಿ ಅವಕಾಶ ಕೊಡಬಾರದು ಎಂಬ ಮನೋಭಾವನೆಯುಳ್ಳ ಧರ್ಮಾಂದರೂ ಆ ಸಮಯದಲ್ಲಿದ್ದರು. ದೇಶ ವಿಭಜನೆಯಾಗಿ ಭಾರತಕ್ಕೆ ಗುಳೆ ಹೊರಟ ಹಲವು ಹಿಂದೂ ಕುಟುಂಬಗಳು ತಮ್ಮ ಕುಟುಂಬದ ಆಧೀನದಲ್ಲಿದ್ದ ದೇವಾಲಯಗಳ ಮೂರ್ತಿಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ಆಗ ಖಾಲಿ ಉಳಿದ ದೇವಾಲಯದ ಕಟ್ಟಡವನ್ನು ಆಯಾ ಜಮೀನಿನ ಒಡೆಯರು, ಜಮೀನುದಾದರು ಆಕ್ರಮಿಸಿಕೊಂಡರು. ಖಾಲಿಯಾಗಿದ್ದ ಕಟ್ಟಡಗಳನ್ನು ಸರ್ಕಾರಿ ಕಚೇರಿಗಳನ್ನಾಗಿಯೋ ಅಥವಾ ಕೆಡವಿ ಬೇರೆ ಕಟ್ಟಡವನ್ನೋ ಕಟ್ಟಲಾಯ್ತು. ಇವೆಲ್ಲಾ ಚಿಕ್ಕ ಚಿಕ್ಕ ದೇವಾಲಯಗಳಿಗೆ ಅನ್ವಯವಾದರೆ ದೊಡ್ಡ ಹಾಗೂ ಪ್ರಮುಖ ದೇವಾಲಯಗಳು ಹಾಗೇ ಉಳಿದವು. ದೇಶ ತೊರೆಯಲು ಸಿದ್ಧರಿರದಿದ್ದ ಹಿಂದೂ ಹಾಗೂ ಸಿಖ್ ಕುಟುಂಬಗಳು ಯಥಾಪ್ರಕಾರ ತಮ್ಮ ಪೂಜೆ ಪುನಸ್ಕಾರಗಳನ್ನು ಮುಂದುವರೆಸಿಕೊಂಡು ಬಂದರು. ಆದರೆ ಅವರಿಗೆ ಸ್ಥಳೀಯರಿಂದ ವಿರೋಧ ಕಂಡುಬಂದಿತ್ತು. ಸುಮಾರು ಒಂದು ದಶಕದವರೆಗೂ ಈ ಬಗೆ ಯಾವುದೇ ಸ್ಪಷ್ಟ ಕಾನುನು ಅಥವಾ ಕಟ್ಟಳೆ ಇರಲಿಲ್ಲ. ಬಳಿಕ ಸುಮಾರು ಐವತ್ತರ ದಶಕದ ಕೊನೆಯಲ್ಲಿ ಪಾಕಿಸ್ತಾನ ಸರ್ಕಾರ ಅಲ್ಪಸಂಖ್ಯಾತರಾದ ಹಿಂದೂ ಹಾಗೂ ಸಿಖ್ ಕುಟುಂಬಗಳ ರಕ್ಷಣೆಗಾಗಿ ಸೂಕ್ತ ಕಾನೂನನ್ನು ಅಳವಡಿಸಿತ್ತು. ಆ ಪ್ರಕಾರ ಪ್ರಮುಖ ದೇವಾಲಯಗಳ ಒಳಭಾಗದಲ್ಲಿ ಮಾತ್ರ ಪೂಜೆ ಪುನಸ್ಕಾರಗಳಿಗೆ ಅವಕಾಶವಿದ್ದು ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ವಿಗ್ರಹ ಪ್ರದರ್ಶನ ಮೊದಲಾದವುಗಳಿಗೆ ನಿಷೇಧ ಹೇರಲಾಯಿತು. ಆ ದಿನಗಳಲ್ಲಿ ಪಾಕಿಸ್ತಾನದ ಉತ್ತರ ಭಾಗದಲ್ಲಿ ಹಲವಾರು ಬುದ್ಧನ ವಿಗ್ರಹಗಳಿದ್ದವು. ಆ ವಿಗ್ರಹಗಳಲ್ಲಿ ಹಲವಾರನ್ನು ಧರ್ಮಾಂಧರು ಧ್ವಂಸಗೊಳಿಸಿದ್ದರು. ಬಳಿಕ ಪಾಕಿಸ್ತಾನ ಸರ್ಕಾರ ಸಾಧವಾದಷ್ಟು ವಿಗ್ರಹಗಳನ್ನು ಒಂದಾದ ಮೇಲೊಂದರಂತೆ ಬುದ್ಧ ಧರ್ಮಿಯ ರಾಷ್ಟ್ರಗಳಿಗೆ ರವಾನಿಸಿತು. ಬಹುಪಾಲು ವಿಗ್ರಹಗಳನ್ನು ಸಾಗಿಸಲಾಯಿತಾದರೂ ಈಗಲೂ ಕೆಲವು ವಿಗ್ರಹಗಳು ಉಳಿದುಕೊಂಡಿವೆಯಂತೆ.

ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಕೇವಲ ೧.೬%. ಪಾಕಿಸ್ತಾನದ ಉತ್ತರ ಭಾಗಗಳಲ್ಲಿ ಹಿಂದೂ ಹಾಗೂ ಸಿಖ್ ಕುಟುಂಬಗಳು ಉಳಿದುಕೊಂಡಿದ್ದರೂ ಸ್ಥಳೀಯರು ನೀಡುವ ಕಿರುಕುಳ ಹಾಗೂ ಭಾರತಕ್ಕೆ ವಲಸೆಬಂದ ಅವರ ಸಂಬಂಧಿಕರ ಉತ್ತಮ ಜೀವನಗಳನ್ನು ಕಂಡ ಹಲವು ಕುಟುಂಬಗಳು ನಿಧಾನವಾಗಿ ಭಾರತಕ್ಕೆ ವಲಸೆ ಬಂದ ಪರಿಣಾಮವಾಗಿ ಉತ್ತರ ಭಾಗದಲ್ಲಿ ಅತ್ಯಲ್ಪ ಪ್ರಮಾಣದ ಹಿಂದೂ ಹಾಗೂ ಸಿಖ್ ಕುಟುಂಬಗಳು ಈಗ ಉಳಿದುಕೊಂಡಿವೆ. ಆದರೆ ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ (ಅಂದರೆ ಸಿಂಧ್ ರಾಜ್ಯ, ಕರಾಚಿ ನಗರ) ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮದ ಉಳಿವಿಗಾಗಿ ಶ್ರಮವಹಿಸಿದ್ದ ಪರಿಣಾಮವಾಗಿ ಇನ್ನೂ ಹಲವು ದೇವಾಲಯಗಳು ಸುರಕ್ಷಿತವಾಗಿ ಉಳಿದುಕೊಂಡಿವೆ. ಸುಮಾರು ಐದು ವರ್ಷಗಳ ಹಿಂದೆ ಪಾಕಿಸ್ತಾನ್ ಹಿಂದೂ ಕೌಂಸಿಲ್ ಎಂಬ ಸಂಘಟನೆ ಸ್ಥಾಪಿತವಾಗಿದೆ (http://www.pakistanhinducouncil.org/). ಪಾಕಿಸ್ತಾನದ ಹಿಂದೂಗಳ ಐಕ್ಯತೆ, ದೇವಾಲಯಗಳ ರಕ್ಷಣೆ, ಹಿಂದೂ ಸಂಸ್ಕೃತಿ ಯನ್ನು ಮುಂದಿನ ಜನಾಂಗದ ಮಕ್ಕಳಲ್ಲಿ ಮೂಡಿಸುವುದು ಮೊದಲಾದವು ಈ ಸಂಘಟನೆಯ ಉದ್ದೇಶಗಳು. ಪಾಕಿಸ್ತಾನದ ಸರ್ಕಾರದಲ್ಲಿಯೂ ಒಂದು ಸಚಿವಾಲಯವಿದ್ದು ಅಲ್ಪಸಂಖ್ಯಾತರಾದ ಹಿಂದೂ ಹಾಗೂ ಸಿಖ್ ಸಮುದಾಯದ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತದೆ. ಈಗ ಸುಸ್ಥಿತಿಯಲ್ಲಿರುವ ಬಹುತೇಕ ದೇವಾಲಯಗಳಲ್ಲಿ ಆಯಾ ಪ್ರದೇಶದ ಹಿಂದೂ ಜನಸಂಖ್ಯೆಯ ಬಾಹುಳ್ಯವನ್ನು ಅನುಸರಿಸಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಆದರೆ ಹೆಚ್ಚಿನ ಜನಸಂಖ್ಯೆ ಇಲ್ಲದ ಕಡೆಯ ದೇವಾಲಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದೆಯಾದರೂ ವಿಶೇಷ ದಿನ ಹಾಗೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾತ್ರ ಪೂಜೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಕ್ರಿಕೆಟ್ ಆಟಗಾರ ದಾನಿಶ್ ಕನೇರಿಯಾ ಕರಾಚಿಯ ಹಿಂದೂ ಕುಟುಂಬದಿಂದ ಬಂದವರು.

ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕ್ರೈಸ್ತರೂ ಇದ್ದಾರೆ. ಆದರೆ ಉತ್ತರ ಭಾಗದಲ್ಲಿ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ದಕ್ಷಿಣ ಭಾಗದಲ್ಲಿಯೂ ಬಹುತೇಕರು ಕರಾಚಿ ನಗರದಲ್ಲಿಯೇ ನೆಲೆಸಿದ್ದಾರೆ. ನಗರದ ಹಲವೆಡೆ ಇಗರ್ಜಿಗಳಿವೆ. ಆದರೆ ದೇವಾಲಯಗಳಿಗೆ ಅನ್ವಯವಾಗುವ ಕಾನೂನುಗಳು ಇಗರ್ಜಿಗೂ ಅನ್ವಯಿಸುತ್ತವೆ. ಪಾಕಿಸ್ತಾನದ ಉತ್ತರ ಭಾಗದಲ್ಲಿ ಹಲವು ಸಿಖ್ ಗುರುದ್ವಾರಗಳಲ್ಲಿ ಇಂದಿಗೂ ಪೂಜೆ ಪುನಸ್ಕಾರಗಳು ನಡೆಯುತ್ತಾ ಬಂದಿವೆ. (ವಾಜಪೇಯಿಯವರು ಪ್ರಧಾನಿಗಳಾಗಿದ್ದಾಗ ದೆಹಲಿ ಲಾಹೋರ್ ನಡುವೆ ಬಸ್ ಸಂಚಾರಕ್ಕೆ ಹೆಚ್ಚಿನ ಮಹತ್ವ ನೀಡಿದ್ದೂ ಇದೇ ಕಾರಣಕ್ಕಾಗಿ). ರಾವಲ್ಪಿಂಡಿ ಬಳಿಯ (ನಗರದಿಂದ ನಲವತ್ತೆಂಟು ಕಿ.ಮೀ ದೂರ) ಪಂಜಾ ಸಾಹಿಬ್ ಗುರುದ್ವಾರದಲ್ಲಿರುವ ಒಂದು ಕಲ್ಲಿನ ಮೇಲೆ ಗುರು ನಾನಕ್ ರವರ ಹಸ್ತದ ಪಡಿಯಚ್ಚಿರುವುದೆಂದು ನಂಬಲಾಗಿದ್ದು ಈ ಗುರುದ್ವಾರಕ್ಕೆ ಪ್ರತಿವರ್ಷ ಎರೆಡು ಬಾರಿ ಸಿಖ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.



ಕರಾಚಿ ನಗರದಲ್ಲಿ ಸುಮಾರು ಹದಿನೈದು ದೇವಾಲಯಗಳು ಹಾಗೂ ಹಿಂದೂ ರುದ್ರಭೂಮಿ ಗಳಿವೆ. ಈ ದೇವಾಲಯಗಳಲ್ಲಿ ಪ್ರತಿದಿನ ಪೂಜೆ ನಡೆಯುತ್ತಿವೆ. ದೇಶದಲ್ಲಿ ಇನ್ನೂ ಹೆಚ್ಚು ಕಡಿಮೆ ಸುಸ್ಥಿತಿಯಲ್ಲಿರುವ ಅಥವಾ ಕೊಂಚ ಪಾಳುಬಿದ್ದು ಸುಸ್ಥಿತಿಗೆ ತರಬಹುದಾದ ದೇವಾಲಯಗಳ ಬಗ್ಗೆ ಮಾಹಿತಿ ಪಡೆದು ಪುನಃ ಮೊದಲಿನಂತಾಗಿಸುವ ಪ್ರಕ್ರಿಯೆಗೆ ಈಗ ಚಾಲನೆ ದೊರಕಿದೆ. ಹಲವು ಕಟ್ಟಡಗಳನ್ನು ಜಮೀನುದಾರರು ಆಕ್ರಮಿಸಿಕೊಂಡಿದ್ದನ್ನು ಪಾಕಿಸ್ತಾನ ಸರ್ಕಾರ ಹಿಂಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಾಚ್ಯವಸ್ತು ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ಉತ್ತರ ಪಾಕಿಸ್ತಾನದಾದ್ಯಂತ ಹಲವು ಹಿಂದಿನ ನಾಗರಿಕತೆಯ ಕುರುಹುಗಳು ಉಳಿದಿದ್ದು ಈ ಇಲಾಖೆ ಆ ಪ್ರದೇಶಗಳಲ್ಲಿ ಉತ್ಖತನ ನಡೆಸುತ್ತಿದೆ. ಮೊಹಿಂಜೋದಾರೋ, ಹರಪ್ಪಾ ಗಳು ಈ ನಿಟ್ಟಿನಲ್ಲಿ ಪ್ರಮುಖವಾದವು. ನೌಶಾರೋ, ಕೋಟ್ ಅಲ್ಲಾ ದಾದ್, ಪಿರಾಕ್, ಗುಜೋ, ಥಾರೋ ಬೆಟ್ಟಗಳು, ಕಹೂ ಜೋ ದಾರೋ (ಬುದ್ಧನ ಪ್ರತಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕ ಸ್ಥಳ) ಸಿರಾಜ್ -ಎ- ತಕ್ರೀ ಮೊದಲಾದ ಸ್ಥಳಗಳು ಪ್ರಾಕ್ತನಶಾಸ್ತ್ರ ವಿಷಯದ ಪ್ರಮುಖ ತಾಣಗಳು.

ಸಧ್ಯಕ್ಕೆ ಇಷ್ಟು ವಿಷಯಗಳು ಸಾಕು. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಇನ್ನಷ್ಟು ವಿಷಯಗಳನ್ನು ನೀಡಲು ಪ್ರಯತ್ನಿಸುವೆ.

-ಅರ್ಶದ್ ಹುಸೇನ್ ಎಂ.ಹೆಚ್,
ದುಬೈ.

4 ಕಾಮೆಂಟ್‌ಗಳು:

  1. ಪಾಕಿಸ್ತಾನದ ದೇವಾಲಯಗಳ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಿ ನಾಡಿನ ಕನ್ನಡಿಗರಿಗೆ ತಲುಪಿಸಿದ ಶ್ರೀ.ಅರ್ಶದ್ ಹುಸೇನ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಕೃತಜ್ಞತೆಗಳು.

    ಪ.ರಾಮಚಂದ್ರ
    ರಾಸ್ ಲಫ್ಫಾನ್, ಕತಾರ್

    ಪ್ರತ್ಯುತ್ತರಅಳಿಸಿ
  2. ಪಾಕಿಸ್ಥಾನದಲ್ಲಿಯ ಹಿಂದೂ ದೇವಾಲಯಗಳ ಬಗ್ಗೆ ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಕೃತಜ್ಞತೆಗಳು. ನನಗೆ ಇನ್ನೊಂದು ವಿಷಯದ ಬಗ್ಗೆ ಕುತೂಹಲ ಇದೆ. ಅಲ್ಲಿ ಹಿಂದುಸ್ತಾನಿ ಸಂಗೀತ, ಗಜಲ್ ಮುಂತಾದ ಲಘು ಸಂಗೀತ ಮತ್ತು ಸಿನೆಮಾ ಸಂಗೀತಗಳ ಪರಿಸ್ಥಿತಿ ಅಲ್ಲಿ ಈಗ ಹೇಗಿದೆ ಅನ್ನುವ ಮಾಹಿತಿ ಸಿಗಬಹುದೇ?

    ಪ್ರತ್ಯುತ್ತರಅಳಿಸಿ
  3. ಪಾಕಿಸ್ತಾನದಲ್ಲಿ ಹಿ೦ದೂ ದೇವಾಲಯಗಳ ಬಗ್ಗೆ,ಸಿಕ್ಕರ ಗುರುದ್ವಾರ ಹಾಗೂ ಕ್ರಿಸ್ತಾನರ ಇಗರ್ಜಿಗಳ ಬಗ್ಗೆ ಚೆನ್ನಾಗಿ ವಿಚರಣೆ ನೀಡಿದ್ದೀರಿ. ಧನ್ಯವಾದಗಳು. ಆರ್.ಜಿ.ಭಟ್, ಬೆ೦ಗಳುರು

    ಪ್ರತ್ಯುತ್ತರಅಳಿಸಿ
  4. ಸರ್ ನಿಮ್ಮ ಲೇಖನಗಳು ತುಂಬಾ ಚೆನ್ನಾಗಿದೆ. ಪತ್ರಿಕೆಗಳಿಗೆ ಬಳಸಬಹುದಾ

    ಪ್ರತ್ಯುತ್ತರಅಳಿಸಿ