ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಫೆಬ್ರವರಿ 26, 2011

ಬೆಂಗಳೂರು: ಅರ್ಶದ್ ಹುಸೇನ್ ರವರ 'ವಿಸ್ಮಯ ಪ್ಲಸ್' ಕೃತಿ ಬಿಡುಗಡೆ - ಬೆಂಗಳೂರಿನಲ್ಲಿ ಮಾರ್ಚ್ 7 ರಂದು.


ಸ್ಥಳ: ರಿಲಾಯನ್ಸ್ ಟೈಮ್ ಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸಮಯ: ಸಂಜೆ 6 ಘಂಟೆಗೆ

ಬೆಂಗಳೂರು: ಮುಂದಿನ ಸೋಮವಾರ (ಮಾರ್ಚ್ 7) ಸಂಜೆ ಆರು ಘಂಟೆಗೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ಸಭಾಂಗಣದಲ್ಲಿ ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಬಿಡುಗಡೆಯಾಗಲಿದೆ.

ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ಬಿ.ಎಂ.ಹನೀಫ್, ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ ಮತ್ತು ಖ್ಯಾತ ಲೇಖಕಿ ಶ್ರೀಮತಿ ನೇಮಿಚಂದ್ರ ಅವರು ಉಪಸ್ಥಿತರಿರುತ್ತಾರೆ.

ವಿಶ್ವದ ಹಲವು ವಿಸ್ಮಯಗಳನ್ನು ಬಣ್ಣದ ಚಿತ್ರ ಹಾಗೂ ಹೆಚ್ಚಿನ ಮಾಹಿತಿಗಳನ್ನು ಸೀಡಿಯ ಮೂಲಕ ನೀಡುವ ವಿಸ್ಮಯ ಪ್ಲಸ್ ಒಂದು ನೂತನ ಪ್ರಯೋಗವಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.































































ಎಲ್ಲರಿಗೂ ಸ್ವಾಗತ ಬಯಸುವ
ಅರ್ಶದ್ ಹುಸೇನ್ ಎಂ.ಹೆಚ್,
ಕೊಪ್ಪ.

ಶನಿವಾರ, ಫೆಬ್ರವರಿ 19, 2011

ಚಿಲ್ಲರೆ ಮಿಲಿಯನೇರ್


ಎಲ್ಲರಿಗೂ ಚಿಕ್ಕಂದಿನಲ್ಲಿ ಏನಾದರೊಂದು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಆದರೆ ದಿನಕಳೆದಂತೆ ಆ ವಸ್ತುವಿನ ಬಗ್ಗೆ ಮೋಹ ಕಡಿಮೆಯಾಗಿ ಅಥವಾ ಸಂಗ್ರಹಿಸಿರುವ ಮೌಲ್ಯ ನಗಣ್ಯವೆಂದು ಅನಿಸತೊಡಗಿದನೆ ಸಂಗ್ರಹಭ್ಯಾಸ ನಿಲ್ಲುತ್ತದೆ. ಸಂಗ್ರಹಿಸಿದ ವಸ್ತುಗಳು ಅಟ್ಟಕ್ಕೂ ಕಸದಬುಟ್ಟಿಗೋ ಸೇರುತ್ತವೆ.

ರಷ್ಯಾದ ಸೈಬೀರಿಯಾ ಜಗತ್ತಿನ ಅತ್ಯಂತ ಶೀತಲ ಜನವಸತಿಯಿರುವ ಪ್ರದೇಶ. ಸೈಬೀರಿಯಾದ ಅತ್ಯಂತ ದೊಡ್ಡ ಮತ್ತು ರಷ್ಯಾದ ಮೂರನೆಯ ಅತಿದೊಡ್ಡ ನಗರ ನೋವೋಸಿಬಿರ್ಸ್ಕ್ (Novosibirsk). ಈ ನಗರದ ಯೂರಿ ಬಾಬಿನ್ ಎಂಬ ನಾಗರಿಕರು ಸುಮಾರು ಹದಿಮೂರು ವರ್ಷಗಳ ಹಿಂದೆ ರಷ್ಯಾದ ನಾಣ್ಯಗಳಾದ ಕೋಪೆಕ್ ಗಳನ್ನು ಸಂಗ್ರಹಿಸಲು ತೊಡಗಿದರು. 1998 ರಲ್ಲಿ ರಷ್ಯಾದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಕ್ರಾಂತಿಯಿಂದಾಗಿ ಈ ನಾಣ್ಯಗಳ ಮೌಲ್ಯ ನಗಣ್ಯವಾಗಲಿತ್ತು. ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ನಾಣ್ಯಗಳನ್ನು ಬದಲಿಸಿಕೊಳ್ಳುವ ಚಡಪಡಿಕೆಯಲ್ಲಿದ್ದರೆ ಯೂರಿ ಮಾತ್ರ ತದ್ವಿರುದ್ಧವಾಗಿ ಕೋಪೆಕ್ ನಾಣ್ಯಗಳನ್ನು ಸಂಗ್ರಹಿಸುತ್ತಾ ಹೋದರು. (ರಷ್ಯಾದ ಹಣ ರೂಬಲ್ - 1 ರೂಬಲ್ - 100 ಕೋಪೆಕ್). ಎಲ್ಲರೂ ನೋಟುಗಳನ್ನೇ ಕೇಳಿದರೆ ಇವರು ಮಾತ್ರ ಎಲ್ಲರಿಂದ ನಾಣ್ಯಗಳನ್ನೇ ಬಯಸತೊಡಗಿದರು.



















ಹೀಗೇ ನಾಣ್ಯಗಳನ್ನು ಕೂಡಿಡುವ ಗೀಳು ಹದಿಮೂರು ವರ್ಷಗಳ ಬಳಿಕ ಅವರನ್ನು ಓರ್ವ ಮಿಲಿಯನೇರ್ ನನ್ನಾಗಿಸಿದೆ. ಅಂದರೆ ಅವರ ಬಳಿ ಈಗ ಬರೋಬ್ಬರಿ ಐದು ಮಿಲಿಯನ್ (ಐವತ್ತು ಲಕ್ಷ) ಕೋಪೆಕ್ ನಾಣ್ಯಗಳಿವೆ! ಈ ನಾಣ್ಯಗಳ ಒಟ್ಟು ತೂಕ ಏಳುವರೆ ಟನ್. ವಿಪರ್ಯಾಸವೆಂದರೆ ಅಷ್ಟೂ ನಾಣ್ಯಗಳ ಇಂದಿನ ಬೆಲೆ ಕೇವಲ ಸಾವಿರದೈನೂರು ಡಾಲರ್ ಮಾತ್ರ (ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳು). ಆದರೆ ಯೂರಿ ಬಾಬಿನ್ ರವರಿಗೆ ಈ ನಾಣ್ಯಗಳನ್ನು ಹೊಂದಿರುವುದೇ ಒಂದು ಹೆಮ್ಮೆಯ ವಿಷಯ. ಈ ನಾಣ್ಯಗಳಿಂದ ಆವೃತವಾಗಿರುವಂತೆ ತಮ್ಮ ಓವರ್ ಕೋಟ್ ಒಂದನ್ನೂ ಹೊಸಿಕೊಂಡಿದ್ದಾರೆ. ಈ ನಾಣ್ಯಗಳಿಂದ ಸ್ನಾನ ಮಾಡುವುದು, ಸರ ಮಾಡಿಕೊಂಡು ಧರಿಸುವುದು ಅವರಿಗೆ ಸಂತೋಷ ಕೊಡುವ ಪ್ರಕ್ರಿಯೆಗಳು.

ಅಂದ ಹಾಗೆ ಈ ನಾಣ್ಯಗ ಗೀಳು ಅವರಿಗೆ 'ಕೋಪೆಕ್ ಕಿಂಗ್ 'ಎಂಬ ಅನ್ವರ್ಥನಾಮವನ್ನೂ ಗಳಿಸಿಕೊಟ್ಟಿದೆ. 

ಶನಿವಾರ, ಫೆಬ್ರವರಿ 5, 2011

ಆರು ವರ್ಷದ ಈ ಕಿಶೋರಿ ವಿಶ್ವದ ಅತಿ ಕಿರಿಯ ಯೋಗಶಿಕ್ಷಕಿ


ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಶಿಕ್ಷಕಿ ಎಂದು ಗಾದೆ ಹೇಳುತ್ತದೆ. ಮನೆ ಮತ್ತು ತಾಯಿಯಿಂದ ಶಿಕ್ಷಣ ಪಡೆದ ಮಗು ಸ್ವತಃ ಶಿಕ್ಷಕಿಯಾಗುವಾಗ ವರ್ಷಗಳೇ ಕಳೆದಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡೆ ಎಂಬ ಕಿಶೋರಿ ಕೇವಲ ಆರು ವರ್ಷದ ವಯಸ್ಸಿಯಲ್ಲಿಯೇ ಯೋಗಾಭ್ಯಾಸ ತರಬೇತಿ ನೀಡುವ ಶಿಕ್ಷಕಿಯಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.

ಸೋಮವಾರ, ಜನವರಿ 31, 2011

ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ

ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರದ ಜ್ವರ, ವಾಂತಿ, ಅತಿಸಾರ ಈ ರೋಗದ ಲಕ್ಷಣಗಳು. ಮಲೇರಿಯಾದಂತೆಯೇ ಈ ರೋಗವೂ ಸೊಳ್ಳೆಗಳಿಂದ ಹರಡುವ ವೈರಸ್ಸಿನಿಂದ ಬರುವ ರೋಗ. ಮಲೇರಿಯಾ ಹರಡಲು ಅನಾಫಿಲಿಸ್ ಸೊಳ್ಳೆ ಕಾರಣವಾದರೆ ಡೆಂಗ್ಯೂ ಹರಡಲು ಏಡೆಸ್ ಏಗೆಪ್ತಿ (Aedes aegypti ) ಎಂಬ ಸೊಳ್ಳೆ ಕಾರಣ. ಪ್ರತಿವರ್ಷ ಈ ಸುಮಾರು ಹತ್ತು ಕೋಟಿ ಜನರಿಗೆ ಈ ರೋಗ ಹಬ್ಬುತ್ತಿದೆ. ಅವರಲ್ಲಿ ಇಪ್ಪತ್ತೆರಡು ಸಾವಿರ ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಬಹುತೇಕರು ಮಕ್ಕಳೇ ಆಗಿದ್ದಾರೆ.


ಡೆಂಗ್ಯೂ ಜ್ವರಕ್ಕೆ ಔಷಧಿ ಇದೆಯಾದರೂ ಡೆಂಗ್ಯೂ ಸೊಳ್ಳೆಯನ್ನು ಸಮರ್ಥವಾಗಿ ನಿಗ್ರಹಿಸಬಲ್ಲ ಕ್ರಮ ಇದುವರೆಗೆ ಕಂಡುಹಿಡಿಯಲಾಗಿಲ್ಲ. ಈ ನಿಟ್ಟಿನಲ್ಲಿ ಬ್ರಿಟನ್ನಿನ ಆಕ್ಸಿಟೆಕ್ ಲಿಮಿಟೆಡ್ ಸಂಸ್ಥೆ (Oxitec Limited) ಡೆಂಗ್ಯೂ ಪೀಡಿತ ದೇಶಗಳಲ್ಲಿ ಸಂಶೋಧನೆ ನಡೆಸಿತು. ಈ ಸೊಳ್ಳೆ ಒಂದು ಬಹಳ ಜಾಣ ಸೊಳ್ಳೆ. ಇದನ್ನು ನಿಗ್ರಹಿಸಲು ಯಾವುದೇ ಕೀಟನಾಶಕ ಬಳಸಿದರೂ ಕೆಲವೇ ದಿನಗಳಲ್ಲಿ ಅದರ ದೇಹದೊಳಕ್ಕೆ ಆ ಕೀಟನಾಶಕ ಬಾಧಿಸದಂತೆ ಪ್ರತ್ಯೌಷಧವೊಂದು ತಯಾರಾಗುತ್ತಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಹೊಸ ಪೀಳಿಗೆಯೊಂದು ಹೊರಬರುತ್ತಿತ್ತು. ಹಲವು ವರ್ಷಗಳ ಕಾಲ ವಿಜ್ಞಾನಿಗಳಿಗೆ ಈ ಸೊಳ್ಳೆಗಳು ಸವಾಲಾಗಿ ಪರಿಣಮಿಸಿದ್ದವು.


ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದೊಂದು ಗಾದೆ. ಆ ಪ್ರಕಾರ ಸೊಳ್ಳೆಗಳೇ ಸೊಳ್ಳೆಗಳಿಗೆ ಮಾರಕವಾಗುವಂತೆ ಆಗುವ ಕ್ರಮದ ಬಗ್ಗೆ ಸುಮಾರು ಎರಡು ವರ್ಷಗಳಿಂದ ಆಕ್ಸಿಟೆಕ್ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಈ ಸೊಳ್ಳೆಗಳ ಒಂದು ಪ್ರತಿರೂಪಿ ಗಂಡು ಸೊಳ್ಳೆಗಳನ್ನು ಕೃತಕವಾಗಿ ಸೃಷ್ಟಿಸಿದ್ದಾರೆ. ಈ ಗಂಡು ಸೊಳ್ಳೆಗಳು ರೋಗ ಹರಡುವ ಹೆಣ್ಣು ಸೊಳ್ಳೆಗಳೊಂದಿಗೆ ಕೂಡಿ ಹೊಸ ಪೀಳಿಗೆಯ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಮರಿಗಳು ಯಥಾವತ್ತು ಸೊಳ್ಳೆಯಾಗಿದ್ದರೂ ಮನುಷ್ಯನನ್ನು ಕಚ್ಚುವ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಮನುಷ್ಯನನ್ನು ಕಚ್ಚದೇ ಇದ್ದಾಗ ಡೆಂಗ್ಯೂ ಹರಡುವ ಸಂಭವವೂ ಕಡಿಮೆಯಾಗುತ್ತದೆ. ಪ್ರಾಯೋಗಿಕವಾಗಿ ಮೇ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಕೇಯ್ಮನ್ ಐಲಾಂಡ್ ದ್ವೀಪಗಳ ಸುಮಾರು ನಲವತ್ತು ಎಕರೆ ಪ್ರದೇಶದಲ್ಲಿ ಈ ಸೊಳ್ಳೆಗಳನ್ನು ಬಿಡಲಾಗಿದೆ. ಅಕ್ಟೋಬರ್ ತಿಂಗಳವರೆಗಿನ ಸಮೀಕ್ಷೆಯಲ್ಲಿ ಆ ಪ್ರದೇಶದಲ್ಲಿ ಕಂಡುಬಂದ ಹೊಸ ಡೆಂಗ್ಯೂ ಪೀಡಿತರ ಸಂಖ್ಯೆ ಶೇಖಡಾ ಎಂಭತ್ತರಷ್ಟು ಕಡಿಮೆಯಾಗಿದೆ. ಇತ್ತ ಮನುಷ್ಯನನ್ನು ಕಚ್ಚದ ಸೊಳ್ಳೆಮರಿಗಳು ದೊಡ್ಡವಾಗಿ ತಮ್ಮದೇ ಗುಣಲಕ್ಷಣಗಳನ್ನು ಹೊಂದಿರುವ ಮರಿಗಳನ್ನು ಉತ್ಪಾದಿಸುತ್ತವೆ. ಆದುದರಿಂದ ಈ ಸೊಳ್ಳೆಗಳನ್ನು ಅವಲಂಬಿಸಿರುವ ಜೀವಜಾಲವೂ ಉಳಿಯುತ್ತದೆ. ದಿನಕಳೆದಂತೆ ರೋಗ ಹರಡುವ ಸಾಮರ್ಥ್ಯವಿರುವ ಸೊಳ್ಳೆಗಳು ನಿರ್ನಾಮವಾಗುತ್ತವೆ.



ಈ ವರದಿಯನ್ನು ಪ್ರಕಟಿಸುತ್ತಿದ್ದಂತೆಯೇ ವಿಶ್ವದೆಲ್ಲೆಡೆಯಿಂದ ಆಕ್ಸಿಟೆಕ್ ಸಂಸ್ಥೆಗೆ ಬೇಡಿಕೆ ಬರಲಾರಂಭಿಸಿದೆ. ಫ್ಲೋರಿಡಾ, ಬ್ರೆಜಿಲ್, ಪನಾಮಾ ದೇಶಗಳು ಆದಷ್ಟು ಬೇಗನೇ ತಮ್ಮ ದೇಶದಲ್ಲಿ ಈ ಕ್ರಮವನ್ನು ಅಳವಡಿಸಿಕೊಳ್ಳುವ ಆತುರ ತೋರಿವೆ.

ಶುಕ್ರವಾರ, ನವೆಂಬರ್ 19, 2010

ಚೀನಾದ ಬ್ರಾ ಕಳಚುವ ಸ್ಪರ್ಧೆ

ಜಗತ್ತಿನಲ್ಲಿ ಹಲವು ಚಿತ್ರವಿಚಿತ್ರ ಸ್ಪರ್ಧೆಗಳು ನಡೆಯುತ್ತವೆ. ಇಂತಹ ಒಂದು ಎಡಬಿಡಂಗಿ ಸ್ಪರ್ಧೆ ಚೀನಾದಲ್ಲೂ ನಡೆಯುತ್ತಿದೆ. ಸುಂದರಿಯರ ಕಂಚುಕ ಬಿಚ್ಚುವ ಸ್ಪರ್ಧೆಯೊಂದು ಚೀನಾದ ಗುಂಗ್ಜೋವ್ ನಗರದಲ್ಲಿ ಈಗ ಜನಪ್ರಿಯವಾಗುತ್ತಿದೆ.


ಸ್ಪರ್ಧೆ ಅಂದರೆ ಅಂತಹ ಕಷ್ಟದ್ದೇನಲ್ಲ. ವೇದಿಕೆಯ ಮೇಲೆ ನಿಂತಿರುವ ಮುಖವಾಡ ತೊಟ್ಟಿರುವ ಎಂಟು ಸುಂದರ ಲತಾಂಗಿಯರು ತೊಟ್ಟಿರುವ ಕಂಚುಕಗಳನ್ನು ಬಿಚ್ಚುವುದು ಅಷ್ಟೇ. ಅತಿ ಕಡಿಮೆ ಸಮಯದಲ್ಲಿ ಎಂಟೂ ಕಂಚುಕಗಳನ್ನು ಬಿಚ್ಚಿದವರಿಗೆ ಒಂದು ಸಾವಿರ ಯುವಾನ್ (ಸುಮಾರು ಏಳು ಸಾವಿರದ ಮುನ್ನೂರು ರೂಪಾಯಿಗಳು) ನಗದು ಬಹುಮಾನ.




ಇದೇನು ಮಹಾ ಎಂದು ಓಡಿ ಬರುವ ಪುರುಷರಿಗೆಲ್ಲಾ ಒಂದು ನಿಯಮ ತಡೆಯುತ್ತದೆ. ಅದೇನೆಂದರೆ ಕುಂಚುಕವನ್ನು ಬಿಚ್ಚಲು ಕೇವಲ ಒಂದು ಕೈಯನ್ನು ಮಾತ್ರ ಬಳಸಬೇಕು. ಈ ವರ್ಷದ ಈ ಸ್ಪರ್ಧೆಯಲ್ಲಿ ಗೆದ್ದಿದ್ದು ಮಾತ್ರ ಓರ್ವ ಮಹಿಳೆಯಂತೆ. ಕೇವಲ ಇಪ್ಪತ್ತೊಂದು ಸೆಕೆಂಡುಗಳಲ್ಲಿ ಎಂಟೂ ಲತಾಂಗಿಯರ ಕಂಚುಕಗಳನ್ನು ಬಿಚ್ಚಿ ಸಾವಿರ ಯುವಾನ್ ಜಾಕೆಟ್ಟಿಗಿಳಿಸಿದ್ದಾಳಂತೆ.
ಸೋತ ಪುರುಷರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದಂತೆ ಬ್ರಾ ಬಿಚ್ಚುವುದೇನು ನಮ್ಮ ದಿನನಿತ್ಯದ ಕೆಲಸವೇ, ಅವರಿಗಾದರೋ ದಿನಾ ಬಿಚ್ಚೀ ಬಿಚ್ಚೀ ಅಭ್ಯಾಸವಾಗಿರುತ್ತದೆ ಎಂದು ಅವಲತ್ತುಕೊಂಡರಂತೆ.








ಶುಕ್ರವಾರ, ಅಕ್ಟೋಬರ್ 8, 2010

ಐದೂವರೆ ಅಡಿ ಎತ್ತರದ ಸೌತೆಕಾಯಿ ಬೆಳೆದ ಚೀನಾ ರೈತ

ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ ಬೆಳೆಯುತ್ತವೆ.


ಆದರೆ ದಕ್ಷಿಣ ಚೀನಾದ ಹೇಫೈ ಪ್ರಾಂತದ ಅಕೇಲೇ ಹೈ ಎಂಬ ರೈತನ ಜಮೀನಿನಲ್ಲಿ ಬರೋಬ್ಬರಿ ಐದೂವರೆ ಅಡಿ ಎತ್ತರದ ಸೌತೆಕಾಯಿಯೊಂದು ಬೆಳೆದು ಅಚ್ಚರಿ ಮೂಡಿಸಿದೆ. ಇದಕ್ಕಿಂತ ಮುನ್ನ ಬ್ರಿಟನ್ನಿನ ಫ್ರಾಂಕ್ ಡಿಮ್ಮಾಕ್ ಎಂಬ ಕೃಷಿಕರು ಬೆಳೆದಿದ್ದ ಮೂರು ಅಡಿ ಐದಿಂಚು ಎತ್ತರದ ಸೌತೇಕಾಯಿಯೇ ವಿಶ್ವದ ಅತಿದೊಡ್ಡ ಸೌತೆಕಾಯಿ ಎಂಬ ದಾಖಲೆ ಪಡೆದಿತ್ತು.
ಇಂದು ಈ ದಾಖಲೆ ಅಕೇಲೇ ಪಾಲಾಗಿದೆ. ಇದು ಬೆಳೆಯಲು ಯಾವ ಗೊಬ್ಬರ ಬಳಸಿದ್ದಿರಿ ಎಂದು ಕೇಳಿದರೆ ಆತ ನಗುತ್ತಾ ನೀಡುವ ಉತ್ತರ 'ಕುದುರೆ ಲದ್ದಿ'. ಆದರೆ ಅದೇ ಗದ್ದೆಯಲ್ಲಿ ಅದೇ ಬಳ್ಳಿಯಲ್ಲಿ ಅದೇ ಗೊಬ್ಬರವುಂಡ ಇತರ ಸೌತೇಕಾಯಿಗಳು ಸಾಮಾನ್ಯಗಾತ್ರವನ್ನು ಪಡೆದಿವೆ. ಆದರೆ ಈ ಸೌತೇಕಾಯಿ ಮಾತ್ರ ದಿನೇ ದಿನೇ ದೊಡ್ಡದಾಗುತ್ತಾ ಹೋಗುತ್ತಿತ್ತು. ಕುತೂಹಲಕ್ಕೆ ಎಷ್ಟು ದೊಡ್ಡದಾಗಿ ಬೆಳೆಯುತ್ತದೆ ನೋಡೋಣ ಎಂದು ಕೊಯ್ಲು ಮಾಡದೇ ಹಾಗೇ ಬಿಟ್ಟೆ. ಕಡೆಗೆ ಐದಡಿ ಏಳು ಇಂಚು ಎತ್ತರವಾದ ಬಳಿಕ ಇದರ ಬೆಳೆಯುವಿಕೆ ನಿಂತಿತು. ಬೆಳೆಯುವಿಕೆ ನಿಂತಿತು ಎಂದು ಖಾತ್ರಿಯಾದ ಬಳಿಕವೇ ಇದನ್ನು ಕೊಯ್ದು ತಂದೆ ಎಂದು ವಿವರಿಸುತ್ತಾನೆ.

ಈಗ ಈ ಸೌತೆಕಾಯಿಯನ್ನು ದಾಖಲೆ ಬೆಲೆಕೊಟ್ಟು ಕೊಂಡುಕೊಳ್ಳಲು ಯಾರಾದರೂ ಮುಂದೆ ಬರುವವರಿಗಾಗಿ ಆತ ಕಾಯುತ್ತಿದ್ದಾನೆ. ಸೌತೇಕಾಯಿ ಬೇಕೇ ಸೌತೆಕಾಯಿ??

ಅರ್ಶದ್ ಹುಸೇನ್ ಎಂ.ಹೆಚ್, ದುಬೈ. 

ಶುಕ್ರವಾರ, ಆಗಸ್ಟ್ 27, 2010



ಭವಿಷ್ಯದ ಗಾಳಿಯಂತ್ರ - ವಿದ್ಯುತ್ ಕೊರತೆಗೆ ನೂತನ ಮಂತ್ರ



-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡಿಬರುವುದು ಚಿತ್ರದುರ್ಗದ ಕಲ್ಲಿನ ಕೋಟೆ, ಒನಕೆ ಓಬವ್ವ, ಡಾ. ವಿಷ್ಣುವರ್ಧನರ ಮೊದಲ ಚಿತ್ರ ನಾಗರಹಾವು ಮೊದಲಾದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗಕ್ಕೆ ಭೇಟಿನೀಡಿದವರಿಗೆ ಚಿತ್ರದುರ್ಗದ ಬೆಟ್ಟಗಳ ಮೇಲೆ ಸ್ಥಾಪಿಸಿರುವ ಬೃಹತ್ ಗಾಳಿಯಂತ್ರಗಳು ಕಲ್ಲಿನ ಕೋಟೆ ಗೋಚರಿಸುವ ಮೊದಲೇ ತಮ್ಮ ದರ್ಶನ ನೀಡುತ್ತವೆ.

ಏನೀ ಗಾಳಿಯಂತ್ರಗಳು? ನಾಗರಿಕತೆ ಬೆಳೆಯುತ್ತಿದ್ದಂತೆ ಪ್ರಸ್ತುತದಿನದ ಅಗತ್ಯವಾದ ವಿದ್ಯುತ್ತಿಗೂ ಬೇಡಿಕೆ ಹೆಚ್ಚುತ್ತಿದೆ. ಅಣೆಕಟ್ಟುಗಳ ಮುಖಾಂತರ ಹರಿಯುವ ನದಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದಿಸುವ ಮಾರ್ಗ ಬಹುತೇಕ ದುಬಾರಿಯೂ ಕಷ್ಟಕರವೂ ಆಗಿದೆ. ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕಿ ಸ್ವಾವಲಂಬಿಯಾಗುವುದು ಇಂದಿನ ಅಗತ್ಯವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕದ ಹಲವೆಡೆ ಗಾಳಿಯಂತ್ರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ. ಸೋಲಾರ್ ವಿದ್ಯುತ್ ದೀಪಗಳಿಗೂ ಮನ್ನಣೆ ದೊರಕುತ್ತಿದೆ.


ಗಾಳಿಯಂತ್ರಗಳೇಕೆ ಸರ್ವವ್ಯಾಪಿಯಾಗಿಲ್ಲ? ಒಂದು ವೇಳೆ ವಿದ್ಯುತ್ ಕೊರತೆಗೆ ಗಾಳಿಯಂತ್ರಗಳು ಸಮರ್ಪಕ ಉತ್ತರವಾದರೆ ಪ್ರತಿ ಊರಿನಲ್ಲೇಕೆ ಇವನ್ನು ಸ್ಥಾಪಿಸಲಾಗುತ್ತಿಲ್ಲ? ಇದಕ್ಕೆ ಕಾರಣ ಹಲವಾರು. ಗಾಳಿಯಂತ್ರಕ್ಕೆ ಅವಶ್ಯವಾಗಿರುವ ಹಲವು ಪರಿಸ್ಥಿತಿಗಳು ಎಲ್ಲಾ ಪರಿಸರದಲ್ಲಿ ಸಿಗಲು ಸಾಧ್ಯವಿಲ್ಲ. ಉದಾಹರಣೆಗೆ ಗಾಳಿಯಂತ್ರದ ಸ್ಥಾಪನೆಗೆ ದಿನದ ಎಲ್ಲಾ ಅವಧಿಗಳಲ್ಲೂ ಕನಿಷ್ಟ ೫ ಮೀ/ಸೆಕೆಂಡ್ ವೇಗದ ಗಾಳಿ ಬೀಸುತ್ತಿರುವ ಎತ್ತರದ ಜಾಗ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗದ ಬೆಟ್ಟಗಳ ಮೇಲೆ ಹಲವು ಗಾಳಿಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅತಿ‌ಎತ್ತರದ ಬೆಟ್ಟದ ಮೇಲೂ ಸಹಾ ಗಾಳಿಯ ವೇಗ ದಿನದ ಕೆಲವು ಘಂಟೆಗಳ ಕಾಲ ೫ ಮೀ/ಸೆಕೆಂಡ್ ಗಿಂತಲೂ ಕಡಿಮೆಯಿರುತ್ತವೆ. ಆಗ ಆ ಯಂತ್ರಗಳ ಬ್ಲೇಡುಗಳು ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ಕಾರಣದಿಂದ ಬೆಟ್ಟದ ಮೇಲೆ ಹಲವಾರು ಗಾಳಿಯಂತ್ರಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಅಲ್ಲದೇ ಪ್ರತಿ ಗಾಳಿಯಂತ್ರದ ಬೆಲೆ ಬಲುದುಬಾರಿ. ಸ್ಥಾಪನಾ ವೆಚ್ಚವೂ ಹೆಚ್ಚು. ನಿರ್ವಹಣೆಗಾಗಿ ಎತ್ತರದ ಕ್ರೇನುಗಳನ್ನು ಆ ಗಾಳಿಯಂತ್ರದ ಬಳಿಗೆ ಸಾಗಿಸುವ ಸಾಗಾಣಿಕಾ ವೆಚ್ಚವೇ ಕೆಲವೊಮ್ಮೆ ನಿರ್ವಹಣಾ ವೆಚ್ಚಕ್ಕೂ ಅಧಿಕವಾಗುವುದುಂಟು. ಎತ್ತರದ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸಬಹುದಾದ್ದರಿಂದ ಎಲ್ಲಾ ಊರುಗಳಿಗೆ ಈ ಯಂತ್ರಗಳ ಸೌಭಾಗ್ಯವಿಲ್ಲ.

ಹಾಗಾದರೆ ಬೇರೆ ಪರ್ಯಾಯ ಮಾರ್ಗಗಳೇ ಇಲ್ಲವೇ? ಇದೆ. ಕೆನಡಾದ ಮ್ಯಾಗೆನ್ನ್ ಪವರ್ ಸಂಸ್ಥೆ ಯಾವುದೇ ಸ್ಥಳದಲ್ಲಿ ಸ್ಥಾಪಿಸಬಹುದಾದ ಸರಳ ಗಾಳಿಯಂತ್ರದ ಕರಡುಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಮಾರ್ಸ್ ((Magenn Air Rotor System -M.A.R.S) ಎಂಬ ಹೆಸರಿನ ಈ ತ್ರಂತ್ರಜ್ಞಾನವನ್ನು ಸುಲಭವಾಗಿ ಹಾಗೂ ಅತಿಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದು ಎಂದು ಸಂಸ್ಥೆ ಪ್ರಕಟಿಸಿದೆ. ಈ ಉಪಕರಣದ ಕಾರ್ಯವೈಖರಿ ಹೇಗೆ ಎಂದು ತಿಳಿಯುವ ಮೊದಲು ಕೆಲವು ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.


ಗಾಳಿಪಟ: ಗಾಳಿಪಟವನ್ನು ನಾವೆಲ್ಲರೂ ಹಾರಿಸಿಯೇ ಇದ್ದೇವೆ. ಕಡಿಮೆ ಎತ್ತರದಲ್ಲಿದ್ದಾಗ ಗೋತಾ ಹೊಡೆಯುವ, ಕೆಳಕ್ಕಿಳಿಯುವ ಗಾಳಿಪಟ ಕೊಂಚ ಎತ್ತರ ಪಡೆದ ಬಳಿಕ ಸ್ಥಿರವಾಗಿರುವುದೇಕೆ? ಇದಕ್ಕೆ ಕಾರಣ ಎತ್ತರ ಹೆಚ್ಚಿದಂತೆ ಗಾಳಿಯ ವೇಗ ಹೆಚ್ಚು ಸ್ಥಿರವಾಗಿರುವುದೂ ಹಾಗೂ ಹೆಚ್ಚಿನದ್ದಾಗಿರುವುದೇ ಆಗಿದೆ. ಅದೂ ಅಲ್ಲದೇ ಒಂದು ಹಂತದಲ್ಲಿ ಗಾಳಿಪಟದ ದಾರವನ್ನು ಒಂದೆಡೆ ಕಟ್ಟಿಬಿಟ್ಟರೆ ಇಡಿಯದಿನ ಅದು ತನ್ನಷ್ಟಕ್ಕೆ ಹಾರಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ -ಮ್ಯಾಗ್ನಸ್ ಎಫೆಕ್ಟ್. ಸುಮ್ಮನೇ ಎಸೆದ ಕ್ರಿಕೆಟ್ ಚೆಂಡು ನೇರವಾಗಿ ಹೋಗುತ್ತದೆ. ಅದೇ ಕ್ರಿಕೆಟ್ ಚೆಂಡನ್ನು ತನ್ನ ಸುತ್ತ ತಿರುಗುವಂತೆ ಮಾಡಿ ಎಸೆದರೆ (ಸ್ಪಿನ್) ಚೆಂಡು ತ್ರಿಜ್ಯಾಕಾರದ ಮಾರ್ಗದಲ್ಲಿ ಮುನ್ನಡೆಯುತ್ತದೆ. ಫುಟ್ಬಾಲ್ ಆಟಗಾರ ವೇಗವಾಗಿ ತಿರುಗುವಂತೆ ಒದ್ದ ಚೆಂಡು ಸರಳ ರೇಖೆಯಲ್ಲಿ ಚಲಿಸದೇ ತ್ರಿಜ್ಯಾಕಾರದಲ್ಲಿ ಚಲಿಸಿ ಗೋಲ್ ಪಡೆಯುವುದಕ್ಕೂ ಇದೇ ಕಾರಣ. ವೃತ್ತಾಕಾರದ ವಸ್ತು ತನ್ನ ಸುತ್ತ ತಿರುಗುತ್ತಾ ಗಾಳಿಯಲ್ಲಿ ಚಲಿಸಿದರೆ ಒಂದು ಬದಿಯಲ್ಲಿ ಹೆಚ್ಚಿನ ಸಾಂದ್ರತೆಯನ್ನೂ, ಇನ್ನೊಂದೆಡೆ ಕಡಿಮೆ ಸಾಂದ್ರತೆಯನ್ನೂ ಪಡೆಯುವುದರಿಂದ ವಸ್ತುವಿನ ಪಥದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ವಸ್ತುವನ್ನು ವೇಗವಾಗಿ ಬೀಸುತ್ತಿರುವ ಗಾಳಿಯ ಮಧ್ಯೆ ಇರಿಸಿದರೆ? ಇದಕ್ಕೆ ವಿರುದ್ಧವಾದ
ಪ್ರತಿಕ್ರಿಯೆ ಉಂಟಾಗುತ್ತದೆ. ಅಂದರೆ ವಸ್ತು ತಿರುಗಲು ಪ್ರಾರಂಭಿಸುತ್ತದೆ. (ಗಿರಿಗಿಟ್ಟಲೆ ನೆನಪಿಗೆ ಬಂತಲ್ಲವೇ) ಈಗ ಈ ಗಿರಿಗಿಟ್ಟಲೆಯನ್ನು ವೇಗವಾಗಿ ಗಾಳಿ ಬೀಸುತ್ತಿರುವಲ್ಲಿಟ್ಟರೆ ಗಿರಿಗಿರಿ ತಿರುಗುತ್ತದೆ. ಆ ತಿರುಗುವ ಗಿರಿಗಿಟ್ಟಲೆಯನ್ನು ವಿದ್ಯುತ್ ಉತ್ಪಾದಿಸುವ ರೋಟಾರಿಗೆ ಜೋಡಿಸಿದರೆ ಸತತ ವಿದ್ಯುತ್ ಲಭ್ಯವಾಗುತ್ತದೆ. ಮಾರ್ಸ್ ಉಪಕರಣ ಉಪಯೋಗಿಸುವ ತಂತ್ರಜ್ಞಾನದ ಜೀವಾಳವೂ ಇದೇ.



ಆದರೆ ಸತತವಾಗಿ ವೇಗವಾಗಿ ಬೀಸುತ್ತಿರುವ ಗಾಳಿ ಇರುವುದು ಎಲ್ಲಿ? ಬೇರೆಲ್ಲೂ ಹೋಗುವುದು ಬೇಡ, ನಾವಿದ್ದಲ್ಲಿಯೇ ಮುನ್ನೂರು ಅಡಿ ಮೇಲೆ ಹೋದರೆ ಸಾಕು. ಸತತವಾದ, ಒಂದೇ ದಿಕ್ಕಿನಲ್ಲಿ ಬೀಸುತ್ತಿರುವ ಸಾಧಾರಣವಾಗಿ ಹತ್ತು ಮೀ/ಸೆಕೆಂಡ್ ಗೆ ಕಡಿಮೆಯಿಲ್ಲದ ವೇಗದ ಗಾಳಿ ಸದಾ ಲಭ್ಯ. ಆದರೆ ಅಷ್ಟು ಎತ್ತರದಲ್ಲಿ ಸ್ಥಾಪಿಸುವುದು ಹೇಗೆ? ಇದಕ್ಕೆ ಉತ್ತರ ಹಗುರ ಅನಿಲ. ಅನಿಲಗಳಲ್ಲಿಯೇ ಅತಿಹಗುರವಾಗಿರುವುದು ಜಲಜನಕ. ಆದರೆ ಜಲಜನಕ ಸ್ವದಹ್ಯ (ಅಂದರೆ ತನಗೆ ತಾನೇ ಹೊತ್ತಿಕೊಳ್ಳುವ) ಗುಣವುಳ್ಳ ಅನಿಲವಾದ್ದರಿಂದ ಅದರ ಬಳಿಕ ಅತಿಹಗುರವಾದ ಅನಿಲ ಹೀಲಿಯಂ ಅನಿಲ ಈ ಉಪಕರಣದ ಮುಖ್ಯ ಪರಿಕರ.



ಮಾರ್ಸ್ ಕಾರ್ಯನಿರ್ವಹಣೆ: ಅಗತ್ಯಕ್ಕೆ ತಕ್ಕ ಗಾತ್ರದ ಬೆಲೂನ್ ಹಾಗೂ ಅದಕ್ಕೆ ಅಲವಡಿಸಬಹುದಾದ ಬ್ಲೇಡುಗಳನ್ನು ಸಾಮಾನ್ಯ ವಾಹನದಲ್ಲಿ ಕೊಂಡೊಯ್ದು ಹೀಲಿಯಂ ತುಂಬಿಸಿ ಬಲಿಷ್ಠವಾದ ಉಕ್ಕಿನ ಕೇಬಲ್ ಮೂಲಕ ಆಗಸಕ್ಕೆ ಹಾರಿಬಿಟ್ಟರೆ ಸಾಕು. ಇಡಿಯ ಪಟ್ಟಣಕ್ಕೆ ವಿದ್ಯುತ್ ಅಗತ್ಯವಾದರೆ ಒಂದಕ್ಕಿಂತ ಹೆಚ್ಚಿನ ಬೆಲೂನುಗಳ ಸಮೂಹದ ಅಗತ್ಯವಿದೆ. ಆಗಸದಲ್ಲಿ ಗಿರಗಿರ ತಿರುಗುವ ರೋಟರಿಗೆ ಅಳವಡಿಸಿರುವ ಡಿ.ಸಿ. ವಿದ್ಯುತ್ ಜನರೇಟರ್ ಮೂಲಕ ಭೂಮಿಗೆ ವಿದ್ಯುತ್ ವರ್ಗಾಯಿಸಿ ಸೂಕ್ತ ಆಲ್ಟರ್ನೇಟರ್ ಮೂಲಕ ಎ.ಸಿ.ಗೆ ಪರಿವರ್ತಿಸಿಕೊಳ್ಳಬಹುದು.






ಅತಿಸರಳವಾದ ಈ ಮಾರ್ಸ್ ಉಪಕರಣದ ಉಪಯೋಗಗಳು ಹಲವಾರು. ಇದನ್ನು ಯಾವುದೇ ಊರಿನಲ್ಲಿ, ಯಾವುದೇ ಸ್ಥಳದಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಅಗತ್ಯವಾದ ಗಾಳಿಯ ವೇಗ ಕನಿಷ್ಟ ನಾಲ್ಕು ಮೀಟರ್ ಪ್ರತಿ ಸೆಕೆಂಡ್ ಇದ್ದರೂ ಸಾಕು. ಆದರೆ ಸುಮಾರು ಮೂನ್ನೂರು ಅಡಿ ಎತ್ತರದಲ್ಲಿ ಕನಿಷ್ಟ ಹತ್ತು ಮೀಟರ್ ಆದರೂ ಗಾಳಿ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ಉಪಕರಣ ನಿಲ್ಲುವ ಭಯ ಇಲ್ಲವೇ ಇಲ್ಲ. ಎಷ್ಟೇ ವೇಗವಾದ ಗಾಳಿಯಿದ್ದರೂ ತಡೆದುಕೊಳ್ಳುವ ಸಾಮರ್ಥ್ಯ ಮಾರ್ಸ್ ಗೆ ಇದೆ.
ಸುಮಾರು ಆರುನೂರರಿಂದ ಒಂದು ಸಾವಿರ ಅಡಿ ಎತ್ತರದಲ್ಲಿ ಉಪಕರಣವನ್ನು ಸ್ಥಾಪಿಸಿದರೆ ಆ ಊರಿನ ವಿದ್ಯುತ್ ಕೊರತೆ ಶಾಶ್ವತವಾಗಿ ನೀಗಲು ಸಾಧ್ಯ. ಚಿಕ್ಕ ಮನೆಗೆ ಬೇಕಾದ ಒಂದು ಯಂತ್ರದಿಂದ ಹಿಡಿದು ಇಡಿಯ ನಗರಕ್ಕೆ ಬೇಕಾದ ಹಲವು ಯಂತ್ರಗಳ ಸಮುಚ್ಛಯದವರೆಗೂ ಸ್ಥಾಪಿಸಲು ಸಾಧ್ಯ. ಗಾಳಿಯಂತ್ರದ ಒಂದು ಭಾಗದಷ್ಟು ಮಾತ್ರ ಉತ್ಪಾದನಾವೆಚ್ಚವಿರುವ ಮಾರ್ಸ್ ಉಪಕರಣವನ್ನು ಮೇಲಕ್ಕೇರಿಸುವುದೂ ನಿರ್ವಹಣೆಗಾಗಿ ಕೆಳಕ್ಕಿಳಿಸುವುದೂ ಅತಿಸುಲಭ. ಹಗುರವಾದ್ದರಿಂದ ಯಾವ ಸ್ಥಳದಲ್ಲಿ ಅಗತ್ಯವಿದೆಯೋ ಅಲ್ಲಿ ಸುಲಭವಾಗಿ ವಾಹನದಲ್ಲಿ ಕೊಂಡೊಯ್ಯಲೂ ಸಾದ್ಯ. ಯಾವುದೇ ರೀತಿಯ ಮಾಲಿನ್ಯವಿರದ ಕಾರಣ ಅತ್ಯಂತ ಪರಿಸರಸ್ನೇಹಿ ಕೂಡಾ. ಸುರಕ್ಷತೆಯ ಕಾರಣಕ್ಕೆ ಲೈಟ್ನಿಂಗ್ ಅರೆಸ್ಟರ್ ಅಳವಡಿಸುವುದು ಅಗತ್ಯ. ಮಳೆಗಾಲದಲ್ಲಿ ಸಹಾ ಮೇಲ್ಬಾಗದಲ್ಲಿ ಗಾಳಿಯೊಂದಿಗೆ ಮಳೆಹನಿ ಹಾಗೂ ತೇವಾಂಶದ ಕಾರಣ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆಯಿರುವುದರಿಂದ ತುಕ್ಕು ನಿರೋಧಕ ಹಾಗೂ ಹಗುರವಾದ ಅಲ್ಯೂಮಿನಿಯಂ ಲೋಹದಿಂದ ಮಾರ್ಸ್ ಉಪಕರಣವನ್ನು ತಯಾರಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಬಳಿಕ ಹೆಚ್ಚೂ ಕಡಿಮೆ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾದುದರಿಂದ ವಿದ್ಯುತ್ ಬೆಲೆ ಈಗ ಲಭ್ಯವಾಗುತ್ತಿರುವ ವಿದ್ಯುತ್ ಬೆಲೆಯ ಒಂದಂಶದಷ್ಟು ಅಗ್ಗವಾಗಲಿದೆ.



ಹತ್ತು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉಪಕರಣದ ಅಂಕಿ‌ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಒಮ್ಮೆ ಅಳವಡಿಸಿದರೆ ಸುಮಾರು ಹದಿನೈದು ವರ್ಷಗಳವರೆಗೆ ಬಾಳಿಕೆ ಬರುವ ಈ ಉಪಕರಣದ ಬೆಲೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಈ ವರ್ಷದ ಅಂತ್ಯದಲ್ಲಿ ಮಾರ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.



Magenn Power Product
Model 10kW
Rated Power 10,000 Watts
Size (Diameter x Length) 30 feet by 60 feet
Shipping Weight Under 3,000 lbs - depending on tether length
Volume of Helium 33,000 cubic feet (approx.)
Tether Height 400 ft standard - up to 1,000 ft optional tether length, in increments of 100 feet
Start-up Wind Speed 2.0 m/sec - 4.48 mph
Cut-in Wind Speed 3.0 m/sec - 6.7 mph
Rated Wind Speed 12.0 m/sec - 26.8 mph
Cut-out Wind Speed 25.0 m/sec - 53.7 mph
Maximum Wind Speed 28.0 m/sec - 62.6 mph
Temperature Range -40ºC /-40ºF to +45ºC/+113ºF
Generators 2 x 5 kW
Output Form Various Options Available: 120 VAC 60Hz - 240 VAC 50 Hz - Regulated DC 12-600V
Warranty Up to 5 Years
Life Cycle 10 - 15 Years
Price (USD) (Estimated) TBD
Availability 2009-10




ಪ್ರಸ್ತುತ ಗಣಿ, ಸಮುದ್ರ, ಧೃವಪ್ರದೇಶ ಮೊದಲಾದ ನಿeನ ಪ್ರದೇಶಗಳಲ್ಲೂ ಜನವಸರಿ ವಿರಳವಾದೆಡೆಗಳಲ್ಲೂ ವಿದ್ಯುತ್ ಉತ್ಪಾದನೆ ಸುಲಭಸಾಧ್ಯವಲ್ಲ. ಇಲ್ಲಿ ಭಾರವಾದ ಡೀಸೆಲ್ eನರೇಟರುಗಳನ್ನು ಉಪಯೋಗಿಸಲಾಗುತ್ತಿದೆ. ಉರಿಸುವ ಡೀಸೆಲ್ ಹೊಗೆ ಪರಿಸರಕ್ಕೂ ಹಾನಿಕರ, ಇಂಜಿನ್ ನಿರ್ವಹಣೆಯೂ ಕಷ್ಟಕರ. ಇಂಥಹ ಸ್ಥಳಗಳಲ್ಲೆಲ್ಲಾ ಮಾರ್ಸ್ ಒಂದು ವರದಾನವಾಗಿ ಪರಿಣಮಿಸಲಿದೆ.


ಈ ಸರಳವಿದ್ಯುತ್ ಗಾಳಿಯಂತ್ರ ನಮ್ಮ ಊರುಗಳಿಗೂ ಶೀಘ್ರವೇ ಆಗಮಿಸುವಂತಾಗಲಿ ಎಂದು ಆಶಿಸೋಣ.


(ಈ ಲೇಖನ ಸುಧಾ ವಾರಪತ್ರಿಕೆಯಲ್ಲಿ 2010 ರ ಏಪ್ರಿಲ್ ನಂದು ಪ್ರಕಟವಾಗಿದೆ.)