

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ, ಬಿರಿಯಾನಿಯಂತಹ ಭಾರೀ ಊಟವೇ ಆಗಲಿ, ಸೌತೆಕಾಯಿ ಹೋಳು ಪಕ್ಕದಲ್ಲಿದ್ದರೆ ಊಟಕ್ಕೊಂದು ಕಳೆ.
ಒಂದು ವೇಳೆ ಇದೇ ಸೌತೆಕಾಯಿಯನ್ನು ಅಡ್ಡಡ್ಡಲಾಗಿ ಕತ್ತರಿಸಿದಾಗ ಮೂಡುವ ಹೋಳುಗಳು ವೃತ್ತಾಕಾರದಲ್ಲಿಲ್ಲದೆ ಹೃದಯಾಕಾರ, ನಕ್ಷತ್ರಾಕಾರ ಅಥವಾ ನಮಗೆ ಬೇಕಾದ ಇನ್ಯಾವುದೇ ಆಕಾರದಲ್ಲಿದ್ದರೆ?ಇದರಲ್ಲೆಲ್ಲಾ ತಲೆ ಓಡುವುದು ಜಪಾನೀಯರದ್ದೇ ಅಂತ ಅವರು ಮತ್ತೊಮ್ಮೆ ಪುರಾವೆ ಸಮೇತ ಸಾಧಿಸಿತೋರಿಸಿದ್ದಾರೆ.ಜಪಾನಿನ ಹಲವಾರು ತರಕಾರಿ ಬೆಳೆಸುವ ತೋಟಗಳು ವಿವಿಧ ರೂಪದಲ್ಲಿ ಬೆಳೆಸಲಾದ ಸೌತೆಕಾಯಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದಕ್ಕಾಗಿ ಅವು ಹೆಚ್ಚೇನೂ ಕಷ್ಟಪಡುವುದಿಲ್ಲ. ತಮಗೆ ಬೇಕಾದ ಆಕೃತಿಯಿರುವ ಸಂಪೂರ್ಣ ಪಾರದರ್ಶಕವಾದ ಆದರೆ ಅಷ್ಟೇ ಧೃಢವಾದ ಪ್ಲಾಸ್ಟಿಕ್ ಕೊಳವೆಯೊಂದನ್ನು ಸೌತೆ ಇನ್ನೂ ಹೀಚಾಗಿರುವಾಗಲೇ ತೂರಿಸಿಬಿಟ್ಟರಾಯಿತು ಅಷ್ಟೇ. ಸೌತೆ ಬೆಳೆಯುತ್ತಾ ಹೋದಂತೆ ಪ್ಲಾಸ್ಟಿಕ್ ಒಳಗಣ ವಿಸ್ತಾರದ ಪ್ರಕಾರ ದೊಡ್ಡದಾಗುತ್ತಾ ಹೋಗಿ ಕಟಾವಿಗೆ ಬರುವ ವೇಳೆಗೆ ಕೊಳವೆಯನ್ನು ಆಕ್ರಮಿಸಿರುತ್ತದೆ. ಕಟಾವು ಮಾಡಿದ ಬಳಿಕ ಕೊಳವೆಯನ್ನು ಕಳಚಿದರೆ ಸಾಕು. ಯಥಾ ಆಕೃತಿಯ ಸೌತೇಕಾಯಿ ಲಭ್ಯ.
ಅಡ್ಡಡ್ಡಲಾಗಿ ಕತ್ತರಿಸಿದಾದ ಸುಂದರ ವಿನ್ಯಾಸದ ಹೋಳು ಊಟದ ಸೊಬಗನ್ನು ಹೆಚ್ಚಿಸಲೂ ಸಾಧ್ಯ.ಇದೇ ವಿಧಾನವನ್ನು ಅನುಸರಿಸಿ ಜಪಾನಿನ ತೋಟಗಳು ಚೌಕಾಕಾರದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನ ಸೆಳೆದಿದ್ದವು. ನಾಳೆ ಇನ್ನೇನು ಬರಬಹುದೋ ಗೊತ್ತಿಲ್ಲ. ಹೃದಯಾಕಾರದ ಮಾವಿನಕಾಯಿ, ವೃತ್ತಾಕಾರದ ಪಡವಲಕಾಯಿ..... ಇನ್ನೇನಾದರೂ ಹೊಳೆಯುತ್ತಿದೆಯೇ?
ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀರಿನಾಳದಲ್ಲಿ ನಡೆಸಿದರೆ?
ಹುಚ್ಚುತನವೆಂದು ಅನ್ನಿಸುವ ಈ ಕಾರ್ಯಕ್ಕೂ ಒಂದು ಗಿನ್ನೆಸ್ ದಾಖಲೆಯಿದೆ. ಕಳೆದ ವರ್ಷ ಹತ್ತು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯಾದ ಎಪ್ಪತ್ತೆರೆಡು ಮುಳುಗುಗಾರರ ತಂಡ ಲಿನೆನ್ ಬಟ್ಟೆಯೊಂದನ್ನು ಇಸ್ತ್ರಿ ಮಾಡಿತ್ತು.
ಆದರೆ ಈ ವರ್ಷ ಬ್ರಿಟನ್ನಿನ ಎಂಭತ್ತಾರು ಮುಳುಗುಗಾರರ ತಂಡ ಆ ದಾಖಲೆಯನ್ನು ಮುರಿದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ತ್ಯಜಿಸಲಾಗಿರುವ ಗಣಿಯೊಂದರಲ್ಲಿ 173 ಅಡಿ ಆಳದದಲ್ಲಿ ಹತ್ತು ನಿಮಿಷದಲ್ಲಿ ಎಂಭತ್ತಾರು ಮುಳುಗುಗಾರರು ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿದ್ದಾರೆ.
ಬ್ರಿಟನ್ನಿನ ಸೌಥ್ ವೇಲ್ಸ್ ಎಂಬಲ್ಲಿ ನಡೆದ ಈ ಸಾಧನೆ ನಿಜಕ್ಕೂ ಲೈಫ್ ಬೋಟ್ ರಕ್ಷಣಾಗಾರರಿಗೆ ನೆರವು ನೀಡುವಲ್ಲಿ ಧನಸಂಗ್ರಹದ ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತೇ ವಿನಃ ದಾಖಲೆಗಾಗಿ ಅಲ್ಲ ಎಂದು ತಂಡದ ನಾಯಕ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಗಾರೆಥ್ ಲಾಕ್ ಅವರು ತಿಳಿಸಿದ್ದಾರೆ.
ಈ ಪ್ರಯತ್ನವನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಆಗಮಿಸಿದ್ದುದು ವಿಶೇಷವಾಗಿದೆ. ಹೊಸ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಇನ್ನು ಒಂದೆರೆಡು ವಾರದಲ್ಲಿ ಪ್ರಕಟಿಸಬಹುದು.
ಇಸ್ತ್ರಿ ಮಾಡಿದ ಬಟ್ಟೆ ಒದ್ದೆಯಾಗಿಯೇ ಇದ್ದರೆ ತೊಡುವುದು ಹೇಗೆ? ಈ ಮಾಹಿತಿಯನ್ನು ಅವರು ನೀಡಿಲ್ಲ.
ಕೃಪೆ: www.thesun.co.uk
ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು. ಈ ಭ್ರಮೆಯನ್ನು ಹೆಚ್ಚಿನವರು ಭೂತಕ್ಕೆ ಕಲ್ಪಿಸಿಕೊಂಡು ಭಯಭೀತರಾಗುತ್ತಾರೆಂದು ಒಂದು ಸಂಶೋಧನೆ ತಿಳಿಸಿದೆ.
ನಮ್ಮ ಶರೀರ ತಾಳಿಕೊಳ್ಳಬಹುದಾದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ರಕ್ತದಲ್ಲಿ ಸೇರಿದಾಗ ಈ ಪರಿಣಾಮಗಳಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ. ಹಾಗಾದರೆ ಯಾರಾದರೂ ಭೂತ ನೋಡಿದ್ದಾರೆಂದು ತಿಳಿಸಿದರೆ ಮೊದಲು ಎಷ್ಟು ಕಪ್ ಕಾಫಿ ಕುಡಿದಿದ್ದೀಯಾ ಎಂದು ಮೊದಲು ವಿಚಾರಿಸುವುದು ಒಳಿತು.
ಕೃಪೆ: http://www.thesun.co.uk