ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜುಲೈ 21, 2014

ಗ್ರಾಮೀಣ ಮಹಿಳೆಯರಿಗೆ ನೀರು ಒಯ್ಯಲು ಸುಲಭ ಸಾಧನ-ವೆಲ್ಲೋ ನೀರುಚಕ್ರ (ವಾಟರ್ ವ್ಹೀಲ್)

ಭಾರತದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಮನೆಗೆ ತರುವುದೇ ದೊಡ್ಡ ಸಮಸ್ಯೆ. ಅದರಲ್ಲೂ ನೀರು ದೊರಕುವ ಸ್ಥಳದಿಂದ ಮನೆ ದೂರವಿದ್ದಷ್ಟೂ ತರಲು ಸಾಧ್ಯವಾಗುವ ನೀರಿನ ಪ್ರಮಾಣ ಕಡಿಮೆ. ಶ್ರಮವೂ ಹೆಚ್ಚು, ಸಮಯವೂ ಹೆಚ್ಚು.  ಈ ತೊಂದರೆಯನ್ನು ಮನಗಂಡ ಅಮೇರಿಕಾದ ನಾಗರಿಕ ಸಂಸ್ಥೆಯೊಂದು ವೆಲ್ಲೋ ವ್ಹೀಲ್ ಎಂಬ ಸಾಧನವನ್ನು ಸಿದ್ಧಪಡಿಸಿದೆ. ಮಕ್ಕಳ ಮೂರುಚಕ್ರದ ಮುಂದಿನ ಚಕ್ರವನ್ನು ಬೇರ್ಪಡಿಸಿ ಆ ಚಕ್ರದೊಳಕ್ಕೆ ನೀರು ತುಂಬಿಸಿ ಓಡಿಸಿದರೆ ಹೇಗಿರುತ್ತದೆಯೋ ಹಾಗೇ ಈ ಮಾದರಿ ಇದೆ. ಒಮ್ಮೆಲೇ ಸುಮಾರು ಐವತ್ತು ಲೀಟರ್ ನಷ್ಟು ನೀರನ್ನು ತುಂಬಿ ಬಿರಡೆ ಬಿಗಿಯಾಗಿ ಮುಚ್ಚಿ ದೂಡಿಕೊಂಡು ಸುಲಭವಾಗಿ ಮನೆ ತಲುಪಬಹುದು. ಪರಿಣಾಮವಾಗಿ ಮಹಿಳೆಯರಿಗೆ ಕಡಿಮೆ ಸಮಯದಲ್ಲಿ, ಕಡಿಮೆ ಶ್ರಮದಲ್ಲಿ ಹೆಚ್ಚಿನ ನೀರು ದೊರಕಿದಂತಾಯಿತು, ಉಳಿದ ಕೆಲಸಗಳನ್ನು ನಿರ್ವಹಿಸಲು ಸಮಯವೂ ದೊರಕಿದಂತಾಯಿತು.



ಪ್ರಯೋಗಾರ್ಥವಾಗಿ ಭಾರತದ ರಾಜಸ್ತಾನದಲ್ಲಿ ಉಪಯೋಗಿಸಿ ಯಶಸ್ಸು ಪಡೆದ ಬಳಿಕ ಈಗ ಗುಜರಾತ್ ನ ಅಹ್ಮದಾಬಾದ್ ನಲ್ಲಿ ವಾರ್ಷಿಕ ಇಪ್ಪತ್ತು ಸಾವಿರ ಸಾಧನಗಳನ್ನು ಉತ್ಪಾದಿಸುತ್ತಿದೆ. ದತ್ತಕ ಸಂಸ್ಥೆಗಳಿಂದ ನೆರವು ಪಡೆದಬಳಿಕ ಪ್ರತಿ ಸಾಧನಕ್ಕೆ ಸುಮಾರು ಎರಡೂವರೆ ಸಾವಿರ ರೂಪಾಯಿಗಳಾಗುತ್ತದೆ.

ಭಾರತದಲ್ಲಿ ಯಶಸ್ವಿಯಾದ ಬಳಿಕ ಮೆಕ್ಸಿಕೋ ಹತ್ತು ಹೈತಿ ದೇಶಗಳಲ್ಲಿಯೂ ಪ್ರಯೋಗಿಸಿ ನೋಡಲಾಗಿದೆ. ಶೀಘ್ರವೇ ಈ ಸಾಧನ ವಿಶ್ವದ ಇನ್ನುಳಿದ ರಾಷ್ಟ್ರಗಳಿಗೂ ಆಗಮಿಸಲಿದೆ.

ಶುಕ್ರವಾರ, ಜುಲೈ 18, 2014

ಮೈಲೇಜ್ ಹೆಚ್ಚಿಸಲು ಮತ್ತೊಮ್ಮೆ ನಿಸರ್ಗದ ಮೊರೆ - ನೆರವಿಗೆ ಬಂದ ಶಾರ್ಕ್

ಶಾರ್ಕ್ ಮೀನಿಗೂ ಮೈಲೇಜ್ ಹೆಚ್ಚಳಕ್ಕೂ ಯಾವ ಸಂಬಂಧ? ಇಮಾಂಸಾಬಿಗೂ ಗೋಕುಲಾಷ್ಟಮಿಗೆ ಇರುವಷ್ಟೇ ಸಂಬಂಧ ಎಂದು ಲೇವಡಿ ಮಾಡುವವರಿಗೆ ಒಂದು ಕುತೂಹಲಕಾರಿ ವಿಷಯ. ವಾಹನದ ಮೈಲೇಜ್ ಹೆಚ್ಚಿಸಲು ಶಾರ್ಕ್ ನಿಜಕ್ಕೂ ಪ್ರೇರಣೆ ನೀಡಿದೆ. ಕೆನಡಾದ ಸ್ಕಿನ್ಝ್ ರಾಪ್ಸ್ ಎನ್ನು ಸಂಸ್ಥೆ ವಾಹನದ ಮೇಲ್ಮೈಯನ್ನು ಶಾರ್ಕ್ ಮೀನಿಗಿರುವ ಮಾದರಿಯಲ್ಲಿ ನಿರ್ಮಿಸಿ ಮೈಲೇಜ್ ಹೆಚ್ಚಳವನ್ನು ಸಾಧಿಸಿ ತೋರಿಸಿದೆ.

ಶಾರ್ಕ್ ಮೀನು ಒಂದು ಅತಿವೇಗದಲ್ಲಿ ಸಾಗುವ ಜಲಚರ. ಆಹಾರದ ಬೇಟೆಯಾಡಲು ಅದಕ್ಕೆ ವೇಗ ಅತಿಮುಖ್ಯವಾಗಿದೆ. ನಿಜಕ್ಕೂ ಶಾರ್ಕ್ ಈಜುವುದಿಲ್ಲ, ವಿಮಾನ ಗಾಳಿಯಲ್ಲಿ ತೇಲುವಂತೆ ನೀರಿನಲ್ಲಿ ತೇಲುತ್ತದೆ. ವಿಮಾನಕ್ಕಿರುವ ರೆಕ್ಕೆಗಳಂತೆಯೇ ಇದಕ್ಕೂ ಎರೆಡು ರೆಕ್ಕೆಗಳಿದ್ದು ಬಾಲವನ್ನು ಅತ್ತಿತ್ತ ಆಡಿಸುವ ಮೂಲಕ ಚಾಲನೆ ಪಡೆಯುತ್ತದೆ. ಆದರೆ ನೀರೊಳಗಣ ಘರ್ಷಣೆ ಅದರ ವೇಗವನ್ನು ತಗ್ಗಿಸಬೇಕಲ್ಲವೇ, ಆದರೆ ಆಳದಲ್ಲಿಯೂ ಅದು ಸುಲಲಿತವಾಗಿ ವೇಗವಾಗಿ ಈಜುವುದು ಅದರ ಚರ್ಮದ ವಿಶೇಷ ರಚನೆ ಕಾರಣವಾಗಿದೆ. ಹತ್ತಿರದಿಂದ ಗಮನಿಸಿದರೆ ಅದರ ಚರ್ಮ ಚಿಕ್ಕ ಗೋಲಿಯೊಂದನ್ನು ಒಂದರ ಪಕ್ಕದಲ್ಲೊಂದು ಬರುವಂತೆ ಒತ್ತಿರುವ ಮಾದರಿಯಲ್ಲಿದೆ. ಗಾಲ್ಫ್ ಚೆಂಡಿನ ಮೇಲ್ಮೈ ಸಹಾ ಇದೇ ರೀತಿಯಲ್ಲಿದೆ. ಈ ರಚನೆ ಹೊಂದಿದ ವಸ್ತು (ಅಥವಾ ಜೀವಿ) ನಯವಾದ ಮೇಲ್ಮೈ ಹೊಂದಿರುವ ವಸ್ತುವಿಗಿಂತ (ಅಥವಾ ಜೀವಿಗಿಂತ) ಕಡಿಮೆ ಘರ್ಷಣೆ ಪಡೆಯುತ್ತದೆ.  

ಪರಿಣಾಮವಾಗಿ ಹೆಚ್ಚಿನ ದೂರಕ್ಕೆ ಸಾಗಲು ಸಾಧ್ಯವಾಗುತ್ತದೆ. ಕೆನಡಾದ ಸಂಸ್ಥೆ ಈ ನಿಟ್ಟಿನಲ್ಲಿ ವಾಹನವೊಂದರ ಮೇಲ್ಮೈಯನ್ನು ಶಾರ್ಕ್ ಮೀನಿನ ಚರ್ಮದ ಮಾದರಿಯಲ್ಲಿ ಚಿಕ್ಕ ಚಿಕ್ಕ ಗುಣಿಗಳಿರುವಂತೆ ರಚಿಸಿ ಪರೀಕ್ಷಾರ್ಥ ಓಡಾಟ ನಡೆಸಿದಾಗ ಅದರ ಮೈಲೇಜಿನಲ್ಲಿ ೧೮ ರಿಂದ ೨೦ ಶೇಖಡಾದಷ್ಟು ಗಮನಾರ್ಹ ಬದಲಾವಣೆ ಕಂಡುಬಂದಿದೆ. ನಿಜವಾಗಿ ನೋಡಿದರೆ ನಯವಾದ ಮೇಲ್ಮೈ ಕಡಿಮೆ ಪ್ರತಿರೋಧ ಹಾಗೂ ಗುಣಿಗಳುಳ್ಳ ಮೇಲ್ಮೈ ಹೆಚ್ಚಿನ ಪ್ರತಿರೋಧ ಒಡ್ಡಬೇಕು. ಆದರೆ ವಾಹನ ಹೆಚ್ಚಿನ ವೇಗದಲ್ಲಿದ್ದಾಗ ಗಾಳಿಯ ಕಣಗಳು ಏಕಪ್ರಕಾರವಾಗಿ ಒತ್ತಡವನ್ನು ಹೇರುತ್ತವೆ. ವಾಹನ ಮುಂದೆ ಸರಿದಾಗ ಹಿಂಬದಿಯಲ್ಲಿ ಸುರುಳಿಯಾಕಾರದಲ್ಲಿ ಸುತ್ತುವ ಗಾಳಿ ಕೊಂಚ ಒತ್ತಡದಲ್ಲಿ ವ್ಯಾತ್ಯಾಸವನ್ನು ತೋರಿ ವಾಹನವನ್ನು ಹಿಂದಕ್ಕೆಳೆಯುತ್ತದೆ. ಪರಿಣಾಮವಾಗಿ ವಾಹನ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅದೇ ಗುಣಿಗಳಿರುವ ಮೇಲ್ಮೈಯಲ್ಲಿ ಗಾಳಿ ಪ್ರತಿ ಗುಣಿಯಲ್ಲಿ ಹಾದು ಬರಬೇಕಾದುದರಿಂದ ಒತ್ತಡ ಅಸಮಾನವಾಗಿ ಹರಡಿ ವಾಹನದ ಮೇಲೆ ಬೀಳುವ ಒಟ್ಟಾರೆ ಒತ್ತಡ ಕಡಿಮೆಯಾಗುತ್ತದೆ. ಇದೇ ರೀತಿಯ ಮೇಲ್ಮೈ ಹೊಂದಿರುವ ಗಾಲ್ಫ್ ಚೆಂಡು ಸಹಾ ಗಾಳಿಯಲ್ಲಿ ಅತಿದೂರಕ್ಕೆ ಸಾಗುತ್ತದೆ. ಗುಣಿಗಳಿರುವ ಮೇಲ್ಮೈಯೊಂದಿಗೆ ಆಕರ್ಷಕ ವಿನ್ಯಾಸವನ್ನು ನೀಡುವ ಮೂಲಕ ವಾಹನಕ್ಕೆ ಹೆಚ್ಚಿನ ಸೌಂದರ್ಯವನ್ನೂ ನೀಡಬಹುದಾಗಿದೆ. ಅಮೇರಿಕಾದ ಸ್ಕಿನ್ ರಾಪ್ಸ್ ಸಂಸ್ಥೆ ಇದೇ ಕೆಲಸವನ್ನು ಮಾಡುತ್ತಿದೆ. ಸುಲಭ, ಸರಳವಾಗಿ ಕಂಡುಬರುವ ಈ ವಿಧಾನವನ್ನು ಅನುಸರಿಸಿ ಭಾರತದಲ್ಲಿಯೂ ಮೈಲೇಜು ಹೆಚ್ಚು ಪಡೆಯಬಹುದಲ್ಲವೇ?