ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಫೆಬ್ರವರಿ 6, 2019

ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ

ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ
https://kannada.boldsky.com/health/wellness/2019/consume-this-foods-daily-to-purify-blood-naturally-019223.html

ನಮ್ಮ ದೇಹದ ರಕ್ತಕ್ಕೆ ಹಲವಾರು ಜವಾಬ್ದಾರಿಗಳಿವೆ. ಎಲ್ಲಕ್ಕಿಂತ ಮುಖ್ಯ ಕಾರ್ಯವೆಂದರೆ ಶ್ವಾಸಕೋಶದಿಂದ ಆಮ್ಲಜನಕವನ್ನು ಪಡೆದು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸುವುದು ಹಾಗೂ ಕಲ್ಮಶಗಳನ್ನು ಹೊತ್ತು ತಂದು ದೇಹದಿಂದ ವಿಸರ್ಜಿಸುವುದು. ಜೊತೆಗೇ ವಿವಿಧ ರಸದೂತಗಳು, ಸಕ್ಕರೆ, ಕೊಬ್ಬು ಮೊದಲಾದವುಗಳನ್ನು ಅವುಗಳು ತಲುಪಬೇಕಾದ ಸ್ಥಳಗಳಿಗೆ ಕೊಂಡೊಯ್ದು ತಲುಪಿಸುವುದು, ರಕ್ತ ನಿರೋಧಕ ಶಕ್ತ್ಗಿಗೆ ಅಗತ್ಯವಾದ ಜೀವಕೋಶಗಳು (ವಿಶೇಷವಾಗಿ ಬಿಳಿ ರಕ್ತಕಣಗಳು) ಹಾಗೂ ಇತರ ಅಂಶಗಳನ್ನು ತಲುಪಿಸುವುದು, ಗಾಯವಾದರೆ ತಕ್ಷಣವೇ ಗೋಡೆಯಂತೆ ಒಂದಕ್ಕೊಂದು ಕಣಗಳು ಅಂಟಿಕೊಂಡು ರಕ್ತ ನಷ್ಟವಾಗುವುದನ್ನು ತಪ್ಪಿಸುಸುವು ಮೊದಲಾದ ಹತ್ತು ಹಲವು ಪ್ರಮುಖ ಕಾರ್ಯಗಳಿವೆ. ಜೀವನ ಪರ್ಯಂತ ರಕ್ತ ಸತತವಾಗಿ ನಮ್ಮ ದೇಹದಲ್ಲಿ ಹರಿಯುತ್ತಲೇ ಇರುತ್ತದೆ.


ನಮ್ಮ ಆಹಾರ, ಉಸಿರಾಟದ ಮೂಲಕ ನಾವು ಸೇವಿಸುವ ಘನ, ದ್ರವ ಮತ್ತು ವಾಯುಗಳಲ್ಲಿಯೂ ವಿಷಕಾರಿ ಅಂಶಗಳಿದ್ದು ಪ್ರಮುಖ ಅಂಗಗಳು ಇವುಗಳನ್ನು ಶೋಧಿಸಿದ ಬಳಿಕ ಈ ತ್ಯಾಜ್ಯಗಳನ್ನು ಸತತವಾಗಿ ದೇಹದಿಂದ ವಿಸರ್ಜಿಸುತ್ತಲೇ ಇರಬೇಕು. ಅಚ್ಚರಿ ಎಂದರೆ ಮಾನಸಿಕ ಒತ್ತಡದಿಂದಲೂ ನಮ್ಮ ರಕ್ತ ಅಶುದ್ಧಿಗೊಳ್ಳುತ್ತದೆ. ಈ ರಕ್ತವನ್ನು ಶುದ್ದೀಕರಿಸುವ ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ, ತ್ವಚೆ ಕಳಕಳಿಸುತ್ತದೆ ಹಾಗೂ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನೈಸರ್ಗಿಕ ಶುದ್ದೀಕರಣ ಕ್ರಿಯೆಯಲ್ಲಿ ನಮ್ಮ ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರ್ಯದಲ್ಲಿ ಕೆಲವು ಆಹಾರಗಳು ತಮ್ಮ ಸಹಕಾರವನ್ನು ಒದಗಿಸಿ ಈ ಅಂಗಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿವೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಆದರೆ ಇದಕ್ಕೂ ಮುನ್ನ ನಮ್ಮ ರಕ್ತವನ್ನು ಶುದ್ದೀಕರಿಸುವುದು ಎಷ್ಟು ಅಗತ್ಯ ಎಂದು ನೋಡೋಣ..
ರಕ್ತ ಮಲಿನವಾಗಿದ್ದರೆ

ರಕ್ತ ಮಲಿನವಾಗಿದ್ದರೆ

ರಕ್ತ ಮಲಿನವಾಗಿದ್ದರೆ ಸೂಕ್ಷ್ಮ ಮತ್ತು ದೇಹದ ಕೇಂದ್ರಕ್ಕೆ ಹೋಲಿಸಿದರೆ ಅಂಚಿನ ಭಾಗದಲ್ಲಿರುವ ತ್ವಚೆಗೆ ಅತಿ ಕಡಿಮೆ ಆರೈಕೆ ದೊರಕುತ್ತದೆ. ಪರಿಣಾಮವಾಗಿ ತ್ವಚೆಯ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗದೇ ಅಲ್ಲೇ ಉಳಿದು ಸೋಂಕು ಉಂಟಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಮೊಡವೆ, ತ್ವಚೆ ಕಳಾರಹಿತವಾಗುವುದು ಹಾಗೂ ಸೂಕ್ಷ್ಮಗೀರುಗಳು ಬೀಳುವುದು ಮೊದಲಾದವು ಎದುರಾಗುತ್ತವೆ. ವಾಸ್ತವವಾಗಿ ರಕ್ತದ ಮಲಿನತೆಯನ್ನು ತ್ವಚೆಯ ಈ ಲಕ್ಷಣಗಳೇ ಪ್ರಥಮವಾಗಿ ಸಾದರಪಡಿಸುತ್ತವೆ ಹಾಗೂ ವೈದ್ಯರೂ ಈ ಲಕ್ಷಣವನ್ನೇ ಪ್ರಥಮವಾಗಿ ಗಮನಿಸುತ್ತಾರೆ.

ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

ರಕ್ತ ಶುದ್ದೀಕರಣದ ಮೂಲಕ ದೇಹಕ್ಕೆ ಎದುರಾಗಬಹುದಾದ ಹಲವಾರು ರೋಗಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು ಹಾಗೂ ಮಲಿನ ರಕ್ತದಿಂದ ಎದುರಾಗಬಹುದಾಗಿದ್ದ ಇತರ ತೊಂದರೆಗಳನ್ನೂ ಇಲ್ಲವಾಗಿಸಬಹುದು. ಇದರಲ್ಲಿ ಹಲವು ಬಗೆಯ ಅಲರ್ಜಿಗಳು, ತಲೆನೋವು, ವಾಕರಿಕೆ ಇತ್ಯಾದಿಗಳು ಪ್ರಮುಖವಾಗಿವೆ. ನಮ್ಮ ದೇಹದ ಕೆಲವು ಅಂಗಗಳಿಗೆ ರಕ್ತಪೂರೈಕೆ ಸತತವಾಗಿ ಆಗುತ್ತಲೇ ಇರಬೇಕು. ಮೆದುಳು, ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶ, ದುಗ್ಧಗ್ರಂಥಿ ವ್ಯವಸ್ಥೆ ಮೊದಲಾದವುಗಳಿಗೆ ಹೃದಯ ನರವ್ಯವಸ್ಥೆಯ ಮುಲಕ ಸತತವಾಗಿ ರಕ್ತವನ್ನು ಒದಗಿಸುತ್ತಲೇ ಇರುತ್ತದೆ. ಈ ಎಲ್ಲಾ ಅಂಗಗಳ ಕ್ಷಮತೆ ರಕ್ತದ ಶುದ್ದತೆಯನ್ನು ಅವಲಂಬಿಸಿದೆ.

ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

ರಕ್ತ ಶುದ್ದೀಕರಿಸುವ ಮೂಲಕ ಶ್ವಾಸಕೋಶದಿಂದ ಆಮ್ಲಜನಕ ಕೊಂಡೊಯ್ಯುವ ಮತ್ತು ಜೀವಕೋಶಗಳಿಂದ ಪಡೆದ ಇಂಗಾಲದ ಡೈ ಆಕ್ಸೈಡ್ ಅನ್ನು ವಿಸರ್ಜಿಸಲು ಕೊಂಡು ತರುವ ಸಾಮರ್ಥ್ಯವೂ ಗರಿಷ್ಟವಾಗಿರುತ್ತದೆ. ರಕ್ತ ಶುದ್ದೀಕರಣದಿಂದ ನಮ್ಮ ದೇಹದ ದ್ರವದಲ್ಲಿ (ನಮ್ಮ ದೇಹದ ಶೇಖಡಾ ಎಪ್ಪತ್ತು ಭಾಗ ನೀರು) ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಮಟ್ಟ) ಹಾಗೂ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿ ರಕ್ತಕಣಗಳಿರುತ್ತವೆ ಹಾಗೂ ಗಾಯವಾದಾದ ಇವು ರಕ್ತ ನಷ್ಟಗೊಳ್ಳುವುದನ್ನು ತಡೆಯಲು ನೆರವಾಗುತ್ತವೆ ಹಾಗೂ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೊಂದಲು ನೆರವಾಗುತ್ತವೆ. ರಕ್ತ ಶುದ್ದೀಕರಣ ವ್ಯವಸ್ಥೆಗೆ ನೆರವು ನೀಡುವ ಕೆಲವು ಪ್ರಮುಖ ಆಹಾರಗಳಿವೆ ಹಾಗೂ ಇವನ್ನು ನಿಯಮಿತವಾಗಿ ಸೇವಿಸುವುದೂ ಅಗತ್ಯವಾಗಿದೆ.

ಬ್ರೋಕೋಲಿ

ಬ್ರೋಕೋಲಿ

ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿ ಅತ್ಯುತ್ತಮ ರಕ್ತ ಶುದ್ದೀಕಾರಕ ಆಹಾರವಾಗಿದ್ದು ದೇಹದಿಂದ ರಕ್ತವನ್ನು ಹೊರಹಾಕಲು ನೆರವಾಗುತ್ತದೆ. ಈ ತರಕಾರಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ೩ ಕೊಬ್ಬಿನ ಆಮ್ಲಗಳು, ಕರಗುವ ನಾರು, ಪೊಟ್ಯಾಶಿಯಂ, ಮ್ಯಾಂಗನೀಸ್, ಗಂಧಕ ಮತ್ತು ಗ್ಲುಕೋಸೈನೋಲೇಟ್ಸ್ ಮೊದಲಾದ ಪೋಷಕಾಂಶಗಳಿವೆ. ಬ್ರೋಕೋಲಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟ್ ಗಳನ್ನು ಒದಗಿಸಬಹುದು ಹಾಗೂ ಇದು ರಕ್ತಶುದ್ದೀಕರಣ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸಲು ನೆರವಾಗುತ್ತದೆ. ಬೇಯಿಸಿ ತಿನ್ನುವ ಆಹಾರದ ಜೊತೆಗೇ ಕೊಂಚ ಪ್ರಮಾಣವನ್ನು ಹಸಿಯಾಗಿ ಸಾಲಾಡ್ ಜೊತೆಗೇ ಸೇರಿಸಿ ತಿನ್ನುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬಹುದು.


ಶುಕ್ರವಾರ, ಜೂನ್ 29, 2018

ಬಕ್ಕತಲೆ: ಇದಕ್ಕೆ ಚಿಕಿತ್ಸೆ ಇದೆಯೇ?

https://kannada.boldsky.com/health/wellness/2018/is-there-cure-baldness-017422.html
ಬೋಲ್ಡ್ ಸ್ಕೈ.ಒನ್ ಇಂಡಿಯಾ ತಾಣದಲ್ಲಿ ಪ್ರಕಟವಾದ ಲೇಖನ

ವಿಶ್ವದಾದ್ಯಂತ 80% ರಷ್ಟು ಪುರುಷರು ಕೊಂಚ ಮಟ್ಟಿಗಾದರೂ ಬಕ್ಕತಲೆಯ ಹಾಗೂ ಕೂದಲುದುರುವಿಕೆಯ ತೊಂದರೆಗೆ ಒಳಗಾಗಿಯೇ ಇದ್ದಾರೆ. ಒಂದು ಹಂತದ ವಯಸ್ಸು ದಾಟಿದ ಬಳಿಕ ಹೆಚ್ಚಿನ ಪುರುಷರಲ್ಲಿ ಬಕ್ಕತನ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ಈಗ ಬಕ್ಕತನ ಕೇವಲ ಒಂದು ವಯಸ್ಸಿಗೆ ಮಾತ್ರವೇ ಸೀಮಿತವಾಗಿಲ್ಲ, ಇನ್ನೂ ಚಿಕ್ಕ ವಯಸ್ಸಿನಲ್ಲಿರುವವರಲ್ಲಿಯೂ ಬಕ್ಕತನ ಆವರಿಸುತ್ತಿರುವುದನ್ನು ಗಮನಿಸಬಹುದು. ಅನಾರೋಗ್ಯಕರ ಆಹಾರಕ್ರಮ, ಒತ್ತಡದಲ್ಲಿರುವ ಜೀವನ, ಹತ್ತು ಹಲವು ಸೌಂದರ್ಯಪ್ರಸಾದನಗಳು ಹಾಗೂ ಕೂದಲುದುರುವುದನ್ನು ತಡೆಗಟ್ಟಲು ವಿಭಿನ್ನ ಪ್ರಸಾದನಗಳ ಪ್ರಯೋಗ ಮೊದಲಾದವುಗಳು ಇಂದು ಹದಿಹರೆಯದವರಲ್ಲಿಯೂ ಬಕ್ಕತನವನ್ನು ಆವರಿಸುವಂತೆ ಮಾಡುತ್ತಿವೆ. ಬಕ್ಕತನಕ್ಕೆ ವೈದ್ಯವಿಜ್ಞಾನದಲ್ಲಿ alopecia ಎಂಬ ಹೆಸರಿದೆ ಹಾಗೂ ಹೆಚ್ಚು ಹೆಚ್ಚು ಕೂದಲು ಉದುರಿ ಆ ಭಾಗದಲ್ಲಿ ಹೊಸ ಕೂದಲು ಬೆಳೆಯದಿರಲು (ವಾಸ್ತವವಾಗಿ ಈ ಸ್ಥಳದಲ್ಲಿ ಅತಿ ಸೂಕ್ಷ್ಮ ಹಾಗೂ ಪಾರದರ್ಶಕ ಚಿಕ್ಕ ಕೂದಲು ಬೆಳೆಯುತ್ತದೆ, ಇದು ಮೇಲ್ನೋಟಕ್ಕೆ ಕಾಣದೇ ಇರುವ ಕಾರಣದಿಂದ ಕೂದಲು ಇಲ್ಲದಂತೆ ಭಾಸವಾಗುತ್ತದೆ) ಕಾರಣವಾಗಿ ಬಕ್ಕತಲೆ ಆವರಿಸಿ ಒಂದು ವಿನ್ಯಾಸದಲ್ಲಿ ವಿಸ್ತರಿಸುತ್ತಾ ಹೋಗುತ್ತದೆ.
Baldness in men
ಕೂದಲ ಬಗ್ಗೆ ಒಂದಿಷ್ಟು:
ಸಸ್ತನಿಗಳ ಶರೀರದದ ಚರ್ಮದ ಬಹುತೇಕ ಭಾಗದಲ್ಲಿ ಕೂದಲು ಆವರಿಸುವುದು ನೈಸರ್ಗಿಕವಾಗಿದೆ. ಮಾನವರ ದೇಹವೂ ಅಷ್ಟೇ, ತುಟಿ, ಹಸ್ತ, ಪಾದ ಮೊದಲಾದ ಕೆಲವೇ ಭಾಗಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಕೂದಲುಗಳಿವೆ. ಆದರೆ ಕೂದಲ ದಟ್ಟತೆ ಮತ್ತು ನೀಳತೆ ಕೆಲವು ಭಾಗದಲ್ಲಿ ಮಾತ್ರವೇ ಅತಿ ಹೆಚ್ಚಾಗಿರುತ್ತದೆ. ಇದರಲ್ಲಿ ತಲೆಯ ಚರ್ಮದಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿ ಕೂದಲ ಬುಡಗಳಿರುತ್ತವೆ ಹಾಗೂ ಇದು ತಲೆಬುರುಡೆಯ ರಕ್ಷಣೆ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಉಳಿದೆಲ್ಲಾ ಭಾಗದ ಚರ್ಮದಲ್ಲಿಯೂ ಕೂದಲುಗಳಿದ್ದೇ ಇರುತ್ತವೆ ಆದರೆ ಇವು ಕಣ್ಣಿಗೆ ಗೋಚರವಾಗದಷ್ಟು ಸೂಕ್ಷ್ಮ ಹಾಗೂ ಪಾರದರ್ಶಕವಾಗಿರುತ್ತವೆ. ಕೂದಲು ಕೆರಾಟಿನ್ ಎಂಬ ಬಗೆಯ ಪ್ರೋಟೀನ್ ನಿಂದ ನಿರ್ಮಿಸಲ್ಪಟ್ಟಿದೆ ಹಾಗೂ ವಿಶೇಷವಾದ ಜೀವಕೋಶಗಳಿಂದ ಕೂಡಿದ ಕೂದಲ ಬುಡ (hair follicle) ಕೂದಲನ್ನು ಸೃಷ್ಟಿಸಿ ಹೆಚ್ಚು ಹೆಚ್ಚು ಕೆರಾಟಿನ್ ತುಂಬಿಸಿ ದೂಡುವ ಮೂಲಕ ಕೂದಲು ಉದ್ದವಾಗಲು ಕಾರಣವಾಗುತ್ತದೆ. ಕೂದಲಿಗೆ ಅಗತ್ಯವಾದ ಆರ್ದ್ರತೆ, ಹೊಳಪು, ಆಮ್ಲಜನಕ, ಪೋಷಕಾಂಶ ಎಲ್ಲವನ್ನೂ ಕೂದಲ ಬುಡದಲ್ಲಿರುವ ಚಿಕ್ಕ ಗಡ್ಡೆಯಂತಹ ಅಂಗ (bulb)ವೇ ಪೂರೈಸುತ್ತದೆ.

ಕೂದಲು ಇರುವುದು ಅನಿವಾರ್ಯವಾದರೆ ಬಕ್ಕತನವೇಕೆ?
ನಮ್ಮ ದೇಹದ ಇತರ ಭಾಗದ ಕೂದಲು ಕಾಣೆಯಾದರೆ ನಾವಾರೂ ದೊಡ್ಡ ಕೊರತೆಯೆಂದು ಪರಿಗಣಿಸುವುದಿಲ್ಲ. ಆದರೆ ತಲೆಯ ಕೂದಲು ಇಲ್ಲವಾದಾಗ ಮಾತ್ರವೇ ಚಿಂತೆ ಆವರಿಸುತ್ತದೆ. ಪ್ರತಿಯೊಬ್ಬರ ತಲೆಯಿಂದಲೂ ನಿತ್ಯವು ನೂರರಷ್ಟು ಕೂದಲುಗಳು ಉದುರುತ್ತವೆ ಹಾಗೂ ಹೆಚ್ಚೂ ಕಡಿಮೆ ಅಷ್ಟೇ ಪ್ರಮಾಣದ ಕೂದಲು ಹೊಸದಾಗಿ ಹುಟ್ಟುತ್ತವೆ, ಹುಟ್ಟಬೇಕು. ವೈದ್ಯವಿಜ್ಞಾನಕ್ಕೂ ಸವಾಲಾಗಿರುವ ಯಾವುದೋ ಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಈ ದಪ್ಪನೆಯ ನೀಳ ಕೂದಲು ಉದುರಿದ ಬಳಿಕ ಆ ಸ್ಥಳದಲ್ಲಿ ದಟ್ಟವಾದ ಕಪ್ಪು ಕೂದಲು ಹುಟ್ಟುವ ಬದಲು ಅತಿ ಸೂಕ್ಷ್ಮವಾದ ನವಿರಾದ, ಪಾರದರ್ಶಕ (ಸರಿಸುಮಾರು ನಸುಗಂದು ಬಣ್ಣದ) ಅತಿ ಚಿಕ್ಕ ಕೂದಲು ಹುಟ್ಟುತ್ತದೆ. ಹೊರನೋಟಕ್ಕೆ ಈ ಕೂದಲು ಕಾಣದೇ ಹೋಗುವ ಮೂಲಕ ಕೂದಲು ಇಲ್ಲದೇ ಇರುವ ಭಾವನೆ ಮೂಡಿಸುತ್ತದೆ. ಈ ಪರಿ ಒಂದು ವಿನ್ಯಾಸದಲ್ಲಿ ಪ್ರಾರಂಭವಾಗಿ ಹರಡುತ್ತಾ ಹೋಗುತ್ತದೆ. ಇದನ್ನೇ ಬಕ್ಕತನ ಎಂದು ಕರೆಯುತ್ತಾರೆ.

ಬಕ್ಕತನ ಒಂದು ಹಂತದಲ್ಲಿ ಪ್ರಾರಂಭವಾಗಿ ಸರಿಸುಮಾರು ವೃದ್ದಾಪ್ಯದವರೆಗೂ ವಿಸ್ತರಿಸುತ್ತಾ ಹೋಗುವ ಕಾರಣ 90%ರಷ್ಟು ಬಕ್ಕತನದ ಪುರುಷರಲ್ಲಿ ವಿಸ್ತರಣಾ ಹಂತದಲ್ಲಿಯೇ ಇರುತ್ತಾರೆ ಹಾಗೂ 10% ರಶ್ಟು ಬಕ್ಕತಲೆಯ ಪುರುಷರದಲ್ಲಿ ಗರಿಷ್ಟ ಹಾಗೂ ಇನ್ನೂ ವಿಸ್ತರಿಸದ ಹಂತ ತಲುಪಿರುತ್ತಾರೆ. ಒಂದು ಕೂದಲು ಹುಟ್ಟಿದ ಬಳಿಕ ಸುಮಾರು ಮೂರು ತಿಂಗಳವರೆಗೆ ಇದರ ಆಯಸ್ಸು ಇರುತ್ತದೆ ಹಾಗೂ ಬಳಿಕ ಇದು ಉದುರುವುದು ನೈಸರ್ಗಿಕವಾಗಿದೆ. ಈ ಸ್ಥಳದಲ್ಲಿ ಮೊದಲಿನಂತಹ ಹೊಸ ಕೂದಲು ಹುಟ್ಟುತ್ತದೆಯೋ ಅಥವಾ ಪಾರದರ್ಶಕ ಚಿಕ್ಕ ಕೂದಲು ಹುಟ್ಟುತ್ತದೆಯೋ ಎಂಬ ನಿರ್ಧಾರವನ್ನು ನಮ್ಮ ವಂಶವಾಹಿನಿಗಳೇ ನಿರ್ಧರಿಸುವ ಕಾರಣ ಬಕ್ಕತನ ವಂಶವಾಹಿನಿಯಲ್ಲಿದ್ದರೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಬಕ್ಕತನಕ್ಕೆ ಏನು ಕಾರಣಗಳಿವೆ?
ಬಕ್ಕತನ ಕೂದಲ ಬದಲಾವಣೆಯ ನೈಸರ್ಗಿಕ ಪರಿಣಾಮವಾಗಿದ್ದು ಇದಕ್ಕೆ ವಂಶವಾಹಿನಿಯೇ ಪ್ರಮುಖ ಕಾರಣವಾಗಿದೆ. ಜೊತೆಗೇ ಕೆಳಗಿನ ಅಂಶಗಳೂ ಬಕ್ಕತನವನ್ನು ನಿರ್ಧರಿಸುತ್ತವೆ:್

• ಅನುವಂಶಿಕ ಕಾರಣಗಳು:
ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿ ಬಕ್ಕತನ ಆವರಿಸಿರುತ್ತದೆ ಹಾಗೂ ಈ ಕುಟುಂಬದ ಸದಸ್ಯರು ಒಂದು ವಯಸ್ಸಿಗೆ ಆಗಮಿಸುತ್ತಿದ್ದಂತೆಯೇ ನಿಸರ್ಗದ ಒಂದು ನಿಯಮಕ್ಕೆ ಒಳಪಟ್ಟಂತೆ ಬಕ್ಕತನವನ್ನು ಪ್ರಕಟಿಸತೊಡಗುತ್ತಾರೆ.

• ಕೇಶವಿನ್ಯಾಸ  ಹಾಗೂ ಕೇಶ ಚಿಕಿತ್ಸೆಗಳು:
ಇಂದು ಬಾಹ್ಯಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ದೊರಕುತ್ತಿದ್ದಂತೆಯೇ ಸೌಂದರ್ಯ ಪ್ರಸಾದನಗಳೂ ಹೆಚ್ಚಿನ ಬೇಡಿಕೆ ಪಡೆದಿವೆ. ವಿಶೇಷವಾಗಿ ಯುವಜನಾಂಗವನ್ನು ಸೆಳೆಯಲು ಈ ಉತ್ಪನ್ನಗಳನ್ನು ಅತ್ಯುತ್ತಮ ಗುಣಮಟ್ಟದ ಜಾಹೀರಾತುಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಜಾಹೀರಾತುಗಳಿಗೆ ಸುರಿಯುವ ವೆಚ್ಚ ಆ ಉತ್ಪನ್ನದ ಶೇಖಡಾ 60 ರಷ್ಟಿರುತ್ತದೆ ಎಂದರೆ ಈ ಉದ್ಯಮ ಯಾವ ಮಟ್ಟಿಗೆ ಜನರ ಮನಸ್ಸನ್ನು ಆವರಿಸಿರಬಹುದು ಎಂಬುದನ್ನು ಗಮನಿಸಬಹುದು. ಕೇಶವಿನ್ಯಾಸ ಸುಂದರವಾಗಿರಬೇಕೆಂದು ಬಿಗಿಯಾಗಿ ಕಟ್ಟುವುದು, ರಬ್ಬರ್ ಬ್ಯಾಂಡ್ ಮೂಲಕ ಬಂಧಿಸುವುದು ಮೊದಲಾದವು ಕೂದಲ ಬುಡದ ಮೇಲೆ ಹೆಚ್ಚಿನ ಸೆಳೆತ ಹೇರಿ ಸುಲಭವಾಗಿ ಉದುರಲು ಕಾರಣವಾಗುತ್ತದೆ. ಕೂದಲಿಗೆ ನೀಡುವ ಚಿಕಿತ್ಸೆಗಳಾದ ಬ್ಲೀಚಿಂಗ್, ಬಣ್ಣ ಹಚ್ಚುವುದು, ಗುಂಗುರನ್ನು ನೇರಗೊಳಿಸಲು ಬಿಸಿಯಾಗಿಸುವುದು, ಕೃತಕ ರಾಸಾಯನಿಕಗಳನ್ನು ಬಳಸುವುದು ಮೊದಲಾದವು ತಲೆಯ ಚರ್ಮ ಹಾಗೂ ಕೂದಲ ಬುಡಗಳನ್ನು ಶಿಥಿಲವಾಗಿಸುತ್ತವೆ. ಈ ಅಭ್ಯಾಸಗಳು ತಲೆಯ ಚರ್ಮವನ್ನು ಶಿಥಿಲವಾಗಿಸಿ ಮುಂದೆಂದೋ ಎದುರಾಗಬಹುದಾಗಿದ್ದ ಬಕ್ಕತಲೆಯನ್ನು ಶೀಘ್ರವೇ ಆವರಿಸುವಂತೆ ಮಾಡುತ್ತವೆ.

• ರಸದೂತಗಳ ಏರುಪೇರು:
ಕೂದಲ ಉದುರುವಿಕೆಗೆ ರಸದೂತಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಪುರುಷರೇ ಹೆಚ್ಚು ಬಕ್ಕತಲೆ ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆ ಅಥವಾ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಸಮಯದಲ್ಲಿ ತಾತ್ಕಾಲಿಕವಾದ ಬಕ್ಕತನ ಆವರಿಸಬಹುದು. ಆದರೆ ಈ ಸ್ಥಿತಿಗಳನ್ನು ದಾಟಿದ ಬಳಿಕ ಮಹಿಳೆಯರಲ್ಲಿ ಮತ್ತೊಮ್ಮೆ ಕೂದಲು ಮೂಡುತ್ತದೆ. ಅತಿ ಅಪರೂಪದ ಸಂದರ್ಭಗಳಲ್ಲಿ ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ನೀಡುವ ಖೀಮೋಥೆರಪಿ ಮೊದಲಾದ ಚಿಕಿತ್ಸೆಗಳ ಅಡ್ಡಪರಿಣಾಮವಾಗಿಯೂ ಬಕ್ಕತನ ಆವರಿಸಬಹುದು.

• ಮಾನಸಿಕ ಒತ್ತಡ:
ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆಯೇ ಬಕ್ಕತನ ಆವರಿಸುವ ಸಾಧ್ಯತೆಯೂ ಹೆಚ್ಚುವುದನ್ನು ಗಮನಿಸಲಾಗಿದೆ. ಕೌಟುಂಬಿಕ ಕಲಹ, ಆತ್ಮೀಯರೊಡನೆ ಮೂಡುವ ವೈಮನಸ್ಸು, ಪ್ರೀತಿಯ ವೈಫಲ್ಯ ಮೊದಲಾದವು ಬಕ್ಕತನವನ್ನು ಶೀಘ್ರವಾಗಿ ಅವರಿಸುವಂತೆ ಮಾಡುತ್ತವೆ.

• ಅನಾರೋಗ್ಯ
ಕೆಲವು ಕಾಯಿಲೆಗಳು ಹಾಗೂ ಇವುಗಳಿಗೆ ನೀಡುವ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳೂ ಅಡ್ಡಪರಿಣಾಮದ ರೂಪದಲ್ಲಿ ಬಕ್ಕತನವನ್ನು ಮೂಡಿಸಬಹುದು.

ಬಕ್ಕತನದ ಸೂಚನೆಗಳು:
ನಿತ್ಯವೂ ಕೊಂಚ ಪ್ರಮಾಣದ ಕೂದಲು ಉದುರುವುದು ಸಾಮಾನ್ಯವಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಹಾಗೂ ಈ ಪ್ರಮಾಣ ಹೆಚ್ಚಾಗಿ ಆ ಸ್ಥಳದಲ್ಲಿ ಹೊಸ ಕೂದಲು ಮೂಡದೇ ಇದ್ದರೆ ಬಕ್ಕತನ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳಬಹುದು.
• ಪುರುಷರದಲ್ಲಿ ಬಕ್ಕತನ ಎಡ ಮತ್ತು ಬಲ ಹುಬ್ಬಿನ ಮೇಲ್ಭಾಗದಿಂದ ಹಣೆ ವಿಸ್ತಾರಗೊಳ್ಳಲು ಆರಂಭಿಸಿ ಇಂಗ್ಲಿಷ್ ನ ಎಂ ಅಕ್ಷರದ ರೂಪದಲ್ಲಿ ಮುಂದುವರೆಯುತ್ತದೆ. ಮಹಿಳೆಯರಲ್ಲಿ ಈ ಬಗೆಯ ವಿನ್ಯಾಸ ಕಂಡುಬರದೇ ಹೋದರೂ ಎರಡು ಕೂದಲುಗಳ ನಡುವೆ ಅಲ್ಲಲ್ಲಿ ಒಂದೊಂದು ಕೂದಲು ಉದುರಿ ಒಟ್ಟಾರೆಯಾಗಿ ಅಲ್ಲದಿದ್ದರೂ ಮೊದಲಿನಷ್ಟು ಘನವಾಗಿಲ್ಲದಿರುವುದು ಕಂಡುಬರುತ್ತದೆ.
• ಪುರುಷರಲ್ಲಿ ತಲೆಯ ಮೇಲ್ಭಾಗದಲ್ಲಿ ಪುಟ್ಟ ವೃತ್ತಾಕಾರದ ಬಕ್ಕತನ ಆವರಿಸಲು ಪ್ರಾರಂಭಿಸಿ ನಿಧಾನವಾಗಿ ವಿಸ್ತರಿಸತೊಡಗುತ್ತದೆ. ಕೊಂಚ ತುರಿಕೆ ಹಾಗೂ ನೋವು ಇರುವ ಈ ವೃತ್ತಾಕಾರ ಯಾವಾಗ ಪ್ರಾರಂಭವಾಯಿತೋ ಆಗಲೇ ಬಕ್ಕತನವೂ ಪ್ರಾರಂಭವಾಯಿತೆಂದು ಹೇಳಬಹುದು. ಸುಮಾರು ನಾಣ್ಯದ ಗಾತ್ರದಲ್ಲಿ ಪ್ರಾರಂಭವಾಗುವ ಈ ವಿನ್ಯಾಸ ದಿನೇ ದಿನೇ ವಿಸ್ತರಿಸುತ್ತಾ ಕೆಲವು ವರ್ಷಗಳ ಬಳಿಕ ಹಣೆಯಿಂದ ಪ್ರಾರಂಭವಾಗಿದ್ದ ಎಂ ವಿನ್ಯಾಸವನ್ನು ಕೂಡಿ ಹೆಚ್ಚೂ ಕಡಿಮೆ ಇಡಿಯ ತಲೆಯ ನೆತ್ತಿಯನ್ನು ಬರಿದಾಗಿಸುತ್ತವೆ.
• ತಲೆ ತೊಳೆದುಕೊಳ್ಳುವಾಗ, ಹೆಚ್ಚಿನ ಒತ್ತಡವಿಲ್ಲದೇ ಕೂದಲನ್ನು ಬಾಚಿಕೊಳ್ಳುವಾಗ ಸುಲಭವಾಗಿ ಕೂದಲು ಕಿತ್ತುಬಂದರೂ ಇದು ಬಕ್ಕತನ ಆರಂಭವಾಗಿರುವ ಸೂಚನೆಯಾಗಿದೆ.

ಬಕ್ಕತನಕ್ಕೇನು ಚಿಕಿತ್ಸೆ?
ಬಕ್ಕತನ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಆವರಿಸಿರುವ ತೊಂದರೆಯಾಗಿದ್ದು ಪ್ರತಿಯೊಬ್ಬರೂ ಭಿನ್ನವಾದ ಸ್ಥಿತಿಯನ್ನು ಎದುರಿಸುತ್ತಾರೆ. ಬಕ್ಕತನ ನೈಸರ್ಗಿಕವಾಗಿದ್ದು ಸೌಂದರ್ಯದ ಕಾರಣದ ಹೊರತು ಇತರ ಯಾವುದೇ ಆರೋಗ್ಯದ ತೊಂದರೆಯನ್ನು ಉಂಟುಮಾಡುವುದಿಲ್ಲ. ಸಾವಿನ ಭಯವಂತೂ ಇಲ್ಲವೇ ಇಲ್ಲ. ಆದರೆ ಇತರರು ಮಾಡುವ ಅವಹೇಳನವೇ ಮಾನಸಿಕವಾಗಿ ಕುಗ್ಗಿಸಲು ಇದು ಸಾಕಾಗುತ್ತದೆ ಹಾಗೂ ಹೆಚ್ಚಿನವರು ಕೀಳರಿಮೆಯಿಂದ ಬಳಲುತ್ತಾರೆ.

ಬಕ್ಕತನವನ್ನು ನಿವಾರಿಸಲು ಸಧ್ಯಕ್ಕೆ ಈ ಜಗತ್ತಿನಲ್ಲಿ ಯಾವುದೇ ಸಿದ್ದೌಷಧವಿಲ್ಲ. ಆದರೆ ಬಕ್ಕತನವನ್ನು ಕೃತಕವಾಗಿ ನಿವಾರಿಸಲು ಕೆಲವಾರು ಚಿಕಿತ್ಸೆಗಳು ಲಭ್ಯವಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಗಳ ನೆಡುವಿಕೆ (hair transplant) ಅಂದರೆ ಕೂದಲು ಇರುವ ಚರ್ಮದಿಂದ ಆರೋಗ್ಯವಂತ ಕೂದಲ ಬುಡಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಕೂದಲು ಇಲ್ಲದ ಭಾಗದಲ್ಲಿ ನೆಡುವುದು. ಈ ಚಿಕಿತ್ಸೆಯನ್ನು ನೀಡುವ ಸೆಲೂನ್ ಗಳು ಇಂದು ವಿಶ್ವಮಟ್ಟದಲ್ಲಿ ಭಾರೀ ಯಶಸ್ಸು ಸಾಧಿಸುತ್ತಿವೆ. ಇನ್ನೊಂದು ವಿಧಾನವೆಂದರೆ ಕೃತಕ ಕೂದಲನ್ನು ಶಾಶ್ವತವಾಗಿ ನೆಡುವುದು, ಆದರೆ ಇದು ಹೆಚ್ಚಿನವರಿಗೆ ತುರಿಕೆ ಹಾಗೂ ಅಸಹನೀಯವಾದ ಅನುಭವವನ್ನು ನೀಡಿದ್ದ ಕಾರಣ ಇಂದು ಇದರ ಜನಪ್ರಿಯತೆ ಕಡಿಮೆಯಾಗಿದೆ. ಕೂದಲ ಬುಡಗಳ ನೆಡುವಿಕೆ ತೀರಾ ದುಬಾರಿ ಹಾಗೂ ಹೆಚ್ಚಿನ ಸಮಯವನ್ನು ಕಬಳಿಸುವ ಚಿಕಿತ್ಸೆಯಾಗಿರುವ ಕಾರಣ ಹೆಚ್ಚಿನವರು ಸೇವಿಸಬಹುದಾದ ಗುಳಿಗೆಗಳ ಅಥವಾ ತಲೆಗೆ ಹಚ್ಚಿಕೊಳ್ಳಬಹುದಾದ ಎಣ್ಣೆ-ಔಷಧಿಗಳನ್ನೇ ಪ್ರಯೋಗಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.

ಆದರೆ ಇಂದು ಈ ನಿಟ್ಟಿನಲ್ಲಿ ಆಶಾವಾದದ ಕಿರಣವೊಂದು ಗೋಚರಿಸಿದೆ. ಬಕ್ಕತಲೆಯಲ್ಲಿ ಕೂದಲ ಬುಡಗಳನ್ನು ಮತ್ತೊಮ್ಮೆ ಪ್ರಚೋದಿಸಿ ಮೊದಲಿನಂತಹ ಕಪ್ಪು ಕೂದಲುಗಳನ್ನೇ ಬೆಳೆಯುವಂತೆ ಮಾಡುವ ಔಷಧಿಯನ್ನು ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಇದು ಜನಸಾಮಾನ್ಯರ ಬಳಿ ತಲುಪುವಂತಾಗಲು ಎಷ್ಟು ವರ್ಷ ಕಾಯಬೇಕು ಎಂದು ಗೊತ್ತಿಲ್ಲ.

ವಾಸ್ತವವಾಗಿ ಈ ಔಷಧಿಯನ್ನು ಮೂಳೆಗಳ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಗಾಗಿ ಬಳಸಲಾಗುತ್ತಿತ್ತು ಹಾಗೂ ಈಗ ಬಕ್ಕತನಕ್ಕೂ ಇದನ್ನು ಬಳಸುವ ಬಗ್ಗೆ ವೈದ್ಯಕೀಯ ತಜ್ಞರು ಆಶಾಭಾವ ಹೊಂದಿದ್ದಾರೆ. ಇಂದು ಈ ಔಷಧಿ minoxidil ಮತ್ತು finasteride ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. Minoxidil ಪುರುಷರು ಮತ್ತು ಮಹಿಳೆಯರು ಸೇವಿಸಬಹುದಾದರೆ finasteride ಕೇವಲ ಪುರುಷರಿಗೆ ಮೀಸಲಾಗಿದೆ.

ಆದರೆ ಈ ಔಷಧಿಗಳ ಪ್ರಭಾವ ಮತ್ತು ಪರಿಣಾಮ ಯಾವ ಬಗೆಯಲ್ಲಿ ಆಗುತ್ತದೆ, ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ, ಅಡ್ಡ ಪರಿಣಾಮಗಳೇನು ಎಂಬುದನ್ನೆಲ್ಲಾ ಪ್ರಯೋಗಗಳ ಮೂಲಕ ಇನ್ನಷ್ಟೇ ಕಂಡುಕೊಳ್ಳಬೇಕಾಗಿದ್ದು ವೈದ್ಯರ ಅನುಮತಿಯಿಲ್ಲದೇ ಈ ಔಷಧಿಗಳನ್ನು ಈಗ ಪ್ರಯೋಗಿಸಬಾರದು. ಅಲ್ಲದೇ ಕೂದಲ ಬುಡದ ನೆಡುವ ಚಿಕಿತ್ಸೆಗೆ ಒಡ್ಡಿಕೊಳ್ಳುವ ಮುನ್ನವೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಡೆಯುವಂತೆ ಚರ್ಮವೈದ್ಯರು ಸಲಹೆ ಮಾಡುತ್ತಾರೆ.

ಬುಧವಾರ, ಫೆಬ್ರವರಿ 21, 2018

ತಪ್ಪದೇ ಓದಿ: ಈ ಹತ್ತು ಕೆಟ್ಟ ಅಭ್ಯಾಸಗಳೇ ಆರೋಗ್ಯಕ್ಕೆ ಮಾರಕ

ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/RFYbWv

ನಮ್ಮೆಲ್ಲರಲ್ಲಿಯೂ ಕೆಲವು ಕೆಟ್ಟ ಅಭ್ಯಾಸಗಳಿವೆ. ನಮಗೆ ಇದು ಕೆಟ್ಟದ್ದು ಎಂದು ಗೊತ್ತಿದ್ದರೂ ಉಪೇಕ್ಷಿಸಿ ಮುಂದುವರೆಸುತ್ತೇವೆ. ಕೆಲವು ಅಭ್ಯಾಸಗಳು ನಮಗೆ ಅರಿವಿಲ್ಲದೇ ಜರುಗುತ್ತಿರುತ್ತವೆ. ಕಾರಣವೇನೇ ಇರಲಿ, ಈ ಅಭ್ಯಾಸಗಳು ಅಪಾಯಕಾರಿಯಾಗಿದ್ದು ನಿಧಾನವಾಗಿ ನಮ್ಮನ್ನು ಸಾವಿನತ್ತ ದೂಡುತ್ತಿವೆ.

ಈ ಅಪಾಯವನ್ನು ಮುಂಗಂಡ ಹಿರಿಯರು, ಆಪ್ತರು ಈ ಬಗ್ಗೆ ನಿಮಗೆ ಹಿತವಚನವನ್ನು ನೀಡಿ ಈ ಅಭ್ಯಾಸ ಮುಂದುವರೆಸದೇ ಇರಲು ಸಲಹೆ ನೀಡುತ್ತಾರೆ. ಅದರಲ್ಲೂ ಈ ಅಭ್ಯಾಸವಿರಿಸಿಕೊಂಡಿದ್ದವರು ಇದರಿಂದಾಗಿ ಬಳಿಕ ತಮಗೆ ಎದುರಾದ ತೊಂದರೆಯನ್ನು ಉದಾಹರಿಸಿ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂತಹ ಹತ್ತು ಪ್ರಮುಖವಾದ, ಆರೋಗ್ಯಕ್ಕೆ ಮಾರಕವಾದ ಹತ್ತು ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ:


#1 ಬ್ಲಾಕ್ ಹೆಡ್ ಗಳನ್ನು ಚಿವುಟುವುದು
ಬ್ಲಾಕ್ ಹೆಡ್‌ಗಳನ್ನು ಚಿವುಟುವುದು
ನಾವೆಲ್ಲರೂ ನಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಬ್ಲಾಕ್ ಹೆಡ್ ಎಂಬ ಕಪ್ಪುಚುಕ್ಕೆಯನ್ನು ಚಿವುಟಿ ಹೊರಹಾಕಲು ಯತ್ನಿಸಿಯೇ ಇರುತ್ತೇವೆ. ಕೆಲವೊಮ್ಮೆ ನಮ್ಮ ತಾಯಿ, ಪತ್ನಿ ಅಥವಾ ಸಹೋದರಿ ಈ ಕೆಲಸವನ್ನು ಮಾಡಿರಲೂಬಹುದು. ಆದರೆ ಕಪ್ಪುತಲೆಗಳ ತುದಿಯನ್ನು ಚಿವುಟಿ ತೆಗೆಯುವುದು ನಿಮ್ಮ ಮುಖದ ಚರ್ಮಕ್ಕೆ ನೀವು ಮಾಡಬಹುದಾದ ಗರಿಷ್ಟ ಹಾನಿಯಾಗಿದೆ. ಏಕೆ? ಏಕೆಂದರೆ ವಾಸ್ತವವಾಗಿ ಈ ಕಪ್ಪುತಲೆಗಳು ಒಂದು ನೀಳವಾದ ಹಿಟ್ಟಿನ ಕಡ್ಡಿಯಂತಿದ್ದು ತುದಿಯ ಭಾಗ ಮಾತ್ರ ಗೋಚರಿಸುತ್ತದೆ ಹಾಗೂ ಇದರ ಬುಡ ಚರ್ಮದಾಳದಲ್ಲಿರುತ್ತದೆ. ಈ ತುದಿಯನ್ನು ಚಿವುಟಿದರೆ ಹಿಟ್ಟಿನ ಕಡ್ಡಿಯ ತುದಿಯನ್ನು ಕೊಂಚವೇ ಮುರಿದಂತಾಗುತ್ತದೆ ಅಷ್ಟೇ ಹೊರತು ಇಡಿಯ ಕಡ್ಡಿ ಹಾಗೇ ಇರುತ್ತದೆ. ಆದರೆ ತುದಿಯನ್ನು ಮುರಿದಾಗ ಇದರ ಬುಡದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಚರ್ಮದ ಹೊರಭಾಗಕ್ಕೆ ತಲುಪಲು ಸುಲಭವಗುತ್ತದೆ ಹಾಗೂ ಈ ಮೂಲಕ ಸೋಂಕು ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಕೀವುಭರಿತ ಗುಳ್ಳೆ, ಮೊಡವೆ ಮೊದಲಾದವು ಎದುರಾಗುತ್ತವೆ ಹಾಗೂ ಈ ಸೋಂಕು ಕೆಲದಿನಗಳ ಬಳಿಕ ನಿರ್ಗಮಿಸಿದರೂ ಈ ಭಾಗದಲ್ಲಿ ಕಪ್ಪು ಕಲೆಯೊಂದು ಶಾಶ್ವತವಾಗಿ ಉಳಿದುಬಿಡುತ್ತದೆ. ಆದ್ದರಿಂದ ಕಪ್ಪುತಲೆಯಾದರೆ ಸರ್ವಥಾ ಚಿವುಟಕೂಡದು.


#2 ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು:
ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು
ನಮ್ಮ ಮೂಗಿನ ಮೇಲ್ಭಾಗ, ಅಂದರೆ ಕಣ್ಣೀರು ಹನಿಯುವ ಭಾಗದಿಂದ ತುಟಿಗಳ ಅಂಚುಗಳವರೆಗೆ ಒಂದು ಗೆರೆ ಎಳೆದರೆ ಕಂಡುಬರುವ ಒಂದು ತ್ರಿಕೋಣ ನಮ್ಮ ಮುಖದ "ಅತ್ಯಂತ ಅಪಾಯಕಾರಿಯಾದ ಭಾಗ" ಎಂದು ವೈದ್ಯವಿಜ್ಞಾನ ತಿಳಿಸುತ್ತದೆ. ಏಕೆಂದರೆ ಈ ಭಾಗದಲ್ಲಿ ಅತಿ ಸೂಕ್ಷ್ಮವಾದ ನರತಂತುಗಳಿದ್ದು ಇವು ತಲೆಬುರುಡೆ ಹಾಗೂ ಮೆದುಳಿನೊಂದಿಗೆ ಸಂಪರ್ಕ ಪಡೆದಿವೆ. ಈ ನರಗಳಲ್ಲಿ ರಕ್ತವನ್ನು ಹಿಮ್ಮೆಟ್ಟಿಸುವುದನ್ನು ತಡೆಯಲು ಯಾವುದೇ ಕವಾಟದ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಭಾಗದಲ್ಲಿರುವ ಪುಟ್ಟ ಮೊಡವೆಗಳನ್ನು ಚಿವುಟಿ ಒಳಗಿನ ಬಿಳಿಭಾಗವನ್ನು ಒಸರುವಂತೆ ಮಾಡಿದಾಗ ಚರ್ಮದ ಈ ಸೂಕ್ಷ್ಮಭಾಗವನ್ನು ನೀವೇ ತೆರೆದು meningitis ಅಥವಾ ಒಂದು ಬಗೆಯ ಮೆದುಳಿಗೆ ಸಂಬಂಧಿಸಿದ ತೊಂದರೆಯನ್ನು ಆಹ್ವಾನಿಸುತ್ತಿದ್ದೀರಿ. ಇದರಿಂದ ಮೆದುಳಿಗೂ ಸೋಂಕು ಉಂಟಾಗಬಹುದು. ಏಕೆಂದರೆ ಮೊಡವೆಗಳಲ್ಲಿನ ಬ್ಯಾಕ್ಟೀರಿಯಾಗಳು ಸೂಕ್ಷ್ಮ ನರತಂತುಗಳಿಂದ ಹಿಮ್ಮೆಟ್ಟಿದ ರಕ್ತದ ಮೂಲಕ ಮೆದುಳನ್ನು ತಲುಪಬಹುದು!

#3 ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು
ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು
ನಮ್ಮ ಕಿವಿಯ ಕೊಳವೆಯ ಒಳಭಾಗದಲ್ಲಿ ಅತಿ ಸೂಕ್ಷ್ಮ ಹಾಗೂ ನವಿರಾದ ರೋಮಗಳಿದ್ದು ಇದರ ಬುಡದಿಂದ ಕಿವಿಯ ಮೇಣ ಉತ್ಪತ್ತಿಯಾಗುತ್ತದೆ. ಈ ಮೇಣ ನಾವಂದುಕೊಂಡಂತೆ ಅನಗತ್ಯವಾದುದಲ್ಲ. ಬದಲಿಗೆ ಈ ಮೇಣ ಅಂಟು ಅಂಟಾಗಿದ್ದು ಸೂಕ್ಷ್ಮವಾದ ತಮಟೆಯನ್ನು ಧೂಳು, ಪರಕೀಯ ಕಣ ಹಾಗೂ ತೆವಳುತ್ತಾ  ಕಿವಿಯೊಳಗೆ ಬರುವ ಅತಿ ಚಿಕ್ಕ ಕ್ರಿಮಿಗಳಿಂದ ರಕ್ಷಣೆ ಒದಗಿಸಲೆಂದೇ ಸ್ರವಿಸುವ ದ್ರವವಾಗಿದೆ. ಆದ್ದರಿಂದ ತೆಳುವಾಗಿ ನಿಮ್ಮ ಕಿವಿಯೊಳಗೆ ಮೇಣವಿದ್ದಷ್ಟೂ ಆರೋಗ್ಯಕರ. ಆದರೆ ಈ ಮೇಣ ಇದೆ ಎಂದ ಮಾತ್ರಕ್ಕೇ ನೀವು ಹತ್ತಿಸುತ್ತಿದ ಕಡ್ಡಿಯನ್ನು ಬಳಸಿ ಇದನ್ನು ಒರೆಸಿ ತೆಗೆಯಬೇಕಾಗಿಲ್ಲ. ಅಲ್ಲದೇ ಮೇಣವನ್ನು ತೆಗೆಯುವ ಭರದಲ್ಲಿ ಮೇಣವನ್ನು ಗುಡಿಸಿದಂತೆ ಒಟ್ಟುಗೂಡಿಸಿ ಇನ್ನಷ್ಟು ಒಳಭಾಗಕ್ಕೆ ತಳ್ಳಬಹುದು. ಇದು ತಮಟೆಗೆ ಹಾನಿ ಎಸಗಬಹುದು ಹಾಗೂ ಕಿವಿ ಕೇಳಿಸುವುದು ಕೊಂಚ ಕಡಿಮೆಯಾಗಬಹುದು. ಆದ್ದರಿಂದ ಮೇಣ ಹೆಚ್ಚಾಗಿದ್ದರೆ ನೀವೇ ತೆಗೆಯುವ ಬದಲು ಕಿವಿ ಮೂಗು ಗಂಟಲು ತಜ್ಞರ ಬಳಿಗೆ ಹೋದರೆ ಅವರು ಸುರಕ್ಷಿತವಾಗಿ ತಮ್ಮಲ್ಲಿರುವ ವೈಜ್ಞಾನಿಕ ಉಪಕರಣಗಳನ್ನು ಬಳಸಿ ತೆಗೆಯುತ್ತಾರೆ.


#4 ಸಿಗರೇಟ್ ಸೇವನೆ
ಸಿಗರೇಟ್ ಸೇವನೆ
ಸಿಗರೇಟು ಸೇದುವುದು ಆರೋಗ್ಯಕ್ಕೆ ಮಾರಕ ಎಂದು ಇತರರಿಗಿಂತಲೂ ಸಿಗರೇಟು ಸೇದುವವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದರೂ ಇವರ ಮನಃಸ್ಥಿತಿ ’ಅಪಾಯ ಬಂದಾಗ ನೋಡಿಕೊಂಡರಾಯ್ತು’ ಎಂಬ ಸ್ಥಿತಿಗೆ ತಲುಪಿರುವ ಕಾರಣ ಯಾರ ಹಿತವಚನವನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಸಿಗರೇಟಿನಲ್ಲಿರುವ ತಂಬಾಕಿನ ಹೊಗೆಯಲ್ಲಿ, ನಿಟೋಟಿನ್, ಬ್ಯೂಟೇನ್, ಪೈಂಟ್, ಆರ್ಸೆನಿಕ್ ಸಹಿತ ಸುಮಾರು ಎಪ್ಪತ್ತರಷ್ಟು ಅಪಾಯಕರ ರಾಸಾಯನಿಕಗಳಿವೆ. ಇವು ಧೂಮಪಾನಿಯ ಶ್ವಾಸಕೋಶದೊಳಗಿನ ಸೂಕ್ಷ್ಮ ನಳಿಕೆಗಳ ಕ್ಷಮತೆ ಕುಂದಿಸಿ ಉಸಿರಾಟದ ಕ್ಷಮತೆಯನ್ನೂ ಕಡಿಮೆ ಮಾಡುತ್ತವೆ ಹಾಗೂ ಕ್ಯಾನ್ಸರ್ ಉಂಟಾಗಲು ಈ ಜೀವಕೋಶಗಳು ಬೀಜದಂತೆ ಕಾರ್ಯನಿರ್ವಹಿಸುತ್ತವೆ. ಧೂಮಪಾನಿ ಬಿಟ್ಟ ಹೊಗೆ ಇತರರಿಗೂ ಮಾರಕವಾಗಿದ್ದು ಇದನ್ನು ಧೂಮಪಾನಿಗಳಲ್ಲದವರು ಪ್ರತಿಯೊಬ್ಬರೂ ವಿರೋಧಿಸುವ ಅಗತ್ಯವಿದೆ.


#5 ಹಸಿವಿಲ್ಲದಿದ್ದಾಗ ಊಟ ಮಾಡುವುದು
ಹಸಿವಿಲ್ಲದಿದ್ದಾಗ ಊಟ ಮಾಡುವುದು
ನಮ್ಮ ದೇಹಕ್ಕೆ ಊಟ ಬೇಕು ಎಂದು ಮೆದುಳಿಗೆ ಹೊಟ್ಟೆ ನೀಡುವ ಸೂಚನೆಯೇ ಹಸಿವು. ಅಂದರೆ ಈಗ ಹೊಟ್ಟೆ ಖಾಲಿಯಾಗಿದೆ, ಆಹಾರ ಒದಗಿಸಲು ಸೂಕ್ತ ಸಮಯ ಎಂದು ಹೇಳುತ್ತಿದೆ. ಆದರೆ ಇದಕ್ಕೆ ಬದಲಾಗಿ ನೈಸರ್ಗಿಕ ಸಮಯವನ್ನು ಧಿಕ್ಕರಿಸಿ ಹಸಿವಿಲ್ಲದಿರುವ ಇತರ ಸಮಯದಲ್ಲಿ ಆಹಾರ ಸೇವಿಸಿದರೆ, ಆ ಸಮಯದಲ್ಲಿ ಹೊಟ್ಟೆಯಲ್ಲಿ ಇನ್ನೂ ಆಹಾರವಿದ್ದು ಜೀರ್ಣಕ್ರಿಯೆಯ ನಡುವೆ ಇರುತ್ತದೆ. ಈ ಹೆಚ್ಚುವರಿ ಆಹಾರ ಅನಗತ್ಯವಾಗಿದ್ದು ಈಗಾಗಲೇ ಹೊಟ್ಟೆಯಲ್ಲಿರುವ ಜೀರ್ಣಗೊಂಡ ಆಹಾರದೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ಮೇಲೆ ಕೆಳಗೆ ಮಾಡುವುದಲ್ಲದೇ ಅನಗತ್ಯವಾದ ಕ್ಯಾಲೋಗಿಗಳಿಂದ ದೇಹದ ತೂಕ ಹೆಚ್ಚಲೂ ಕಾರಣವಾಗುತ್ತದೆ.

#6 ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು
ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು
ನೀವು ನಡೆಯುತ್ತಿದ್ದಾಗ ಥಟ್ಟನೇ ನಿಮ್ಮ ಮೊಬೈಲಿನಲ್ಲಿ ಯಾವುದೋ ಸಂದೇಶ ಬಂದಿರುವುದು ತಿಳಿದಾಗ ಏನು ಮಾಡುತ್ತೀರಿ? ಎಲ್ಲರಿಗೂ ಇದು ಯಾವ ಸಂದೇಶ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಪರಿಣಾಮವಾಗಿ ನಾವೆಲ್ಲರೂ ಸಂದೇಶವನ್ನು ತಕ್ಷಣ ಓದಲು ತವಕಿಸುತ್ತೇವೆ ಹಾಗೂ ಒಂದು ವೇಳೆ ಇದು ಪ್ರೀತಿಪಾತ್ರರ ಅಥವಾ ಇನ್ನಾವುದೋ ಅತಿ ಅಗತ್ಯದ ಸಂದೇಶವಾಗಿದ್ದರೆ ಇದಕ್ಕೆ ಆ ಕ್ಷಣವೇ ಪ್ರತಿಕ್ರಿಯಿಸಲೂ ಮುಂದಾಗುತ್ತೇವೆ. ಆಗೇನಾಗುತ್ತದೆ ಗೊತ್ತೇ? ನಿಮ್ಮ ಮೆದುಳಿಗೆ ಸೆರೋಟೋನಿನ್ ಭರದಲ್ಲಿ ನುಗ್ಗುತ್ತದೆ ಹಾಗೂ ಸಂದೇಶದ ಮೂಲಕ ನಿಮ್ಮ ಮನ ಪ್ರಫುಲ್ಲವಾಗಿರುವುದನ್ನು ನಿಮ್ಮ ವದನದ ನಗು ತಿಳಿಸುತ್ತದೆ. ನೆನಪಿಡಿ, ಈ ಸಮಯದಲ್ಲಿ ನೀವು ನಡೆಯುತ್ತಿದ್ದೀರಿ. ಆಗ ಆಗಬಾರದ ಅನಾಹುತ ಆಗಿ ಹೋಗುತ್ತದೆ. ನಡೆಯುವ ದಾರಿಯಲ್ಲಿ ತೆರೆದಿದ್ದ ಮ್ಯಾನ್ ಹೋಲ್ ಅಥವಾ ಚರಂಡಿಯಲ್ಲಿ ನೀವು ಬಿದ್ದ ಬಳಿಕವೇ ನಿಮಗೆ ಏನಾಯಿತೆಂದು ತಿಳಿದಿರುತ್ತದೆ. ಮುಂದಿನ ಕ್ಷಣಗಳಲ್ಲಿ ನೀವು ಎದುರಿಸಬೇಕಾದ ಮುಜುಗರ, ವ್ಯರ್ಥವಾಗುವ ಅಮೂಲ್ಯ ಸಮಯ, ಮೊಬೈಲು ಬಿದ್ದು ಆಗುವ ನಷ್ಟ ಅಥವಾ ಬೇರಾವುದೋ ವಿವರಿಸಲಾಗದ ಅನಾಹುತವೂ ಸಂಭವಿಸಬಹುದು. ಕೆಲವೊಮ್ಮೆ ನಿಮ್ಮ ಮಾರ್ಗ ನೇರವಾಗಿ ಮುಂದಿನ ಮುಖ್ಯ ರಸ್ತೆಗೆ ತೆರೆದುಕೊಂಡಿದ್ದು ಸಂದೇಶ ಓದುವ ಭರದಲ್ಲಿ ನೇರವಾಗಿ ರಸ್ತೆಗೆ ಕಾಲಿಟ್ಟ ತಕ್ಷಣ ಅತ್ತ ಬದಿಯಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆದು ಪ್ರಾಣಾಪಾಯವೂ ಎದುರಾಗಬಹುದು. ಇವೆಲ್ಲಾ ಏಕಾಯಿತು ಎಂದರೆ ಸಂದೇಶ ಬಂದ ಸಮಯದವರೆಗೂ ನಿಮ್ಮ ಮೆದುಳು ನಿಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ಸಂದೇಶ ಬಂದ ತಕ್ಷಣ ನಿಮ್ಮ ಗಮನ ಮಾಹಿತಿಯತ್ತ ಕೇಂದ್ರೀಕೃತಗೊಂಡು ನಡಿಗೆಯ ಕೆಲಸವನ್ನು ಮೆದುಳುಬಳ್ಳಿ ವಹಿಸಿಕೊಂಡಿತು. ಹಾಗಾಗಿ ನಡಿಗೆ ಮುಂದುವರೆಯಿತು. ಆದರೆ ಎದುರಿಗೆ ಬರುವ ಇತರ ಅಪಾಯಗಳನ್ನು ಗ್ರಹಿಸಿ ಆ ಪ್ರಕಾರ ಸೂಚನೆಗಳನ್ನು ನೀಡಲು ನಿಮ್ಮ ಮೆದುಳುಬಳ್ಳಿ ಸಮರ್ಥವಾಗಿಲ್ಲದಿರುವ ಕಾರಣ ಅನಾಹುತ ಸಂಭವಿಸಿದೆ. ಆದ್ದರಿಂದ ನಡೆಯುವ ವೇಳೆ ನಿಮ್ಮ ಮೆದುಳನ್ನು ಪೂರ್ಣವಾಗಿ ಮುಂದಿನ ಚಟುವಟಿಕೆಗಳ ಮೇಲೆ ಇರಿಸಬೇಕು. ಆ ಸಮಯದಲ್ಲಿ ಸಂದೇಶ ಬಂದರೆ ಪೂರ್ಣವಾಗಿ ನಡಿಗೆಯನ್ನು ನಿಲ್ಲಿಸಿ, ಪಕ್ಕದಲ್ಲಿ ನಿಂತು ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಮೊಬೈಲು ಮತ್ತೆ ಜೇಬಿನಲ್ಲಿರಿಸಿಯೇ ಮುಂದುವರೆಯಬೇಕು.


#7 ಕುತ್ತಿಗೆಯ ನೆಟಿಕೆ ತೆಗೆಯುವುದು
ಕುತ್ತಿಗೆಯ ನೆಟಿಕೆ ತೆಗೆಯುವುದು
ಕುತ್ತಿಗೆಯ ನೆಟಿಕೆ ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಕೆಲವು ಮಸಾಜ್ ಮಾಡುವವರೂ ನೆಟಿಕೆ ತೆಗೆಯುತ್ತಾರೆ. ಆದರೆ ಈ ಅಭ್ಯಾಸ ಮುಂದೊಂದು ದಿನ ಕುತ್ತಿಗೆಯ ನೋವು ಹಾಗೂ ಹೃದಯಾಘಾತದಿಂದ ಸಾವಿಗೂ ಕಾರಣವಾಗಬಹುದು.

#8 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು
 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸದಾ ಜಗಳವಾಡುತ್ತಿರುವ ಪತಿ ಪತ್ನಿಯರಿಗೆ ಹೃದಯ ಸ್ತಂಭನ ಹಾಗೂ ಇತರ ಹೃದಯ ಸಂಬಂಧಿತ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಒಂದು ವೇಳೆ ನಿಮ್ಮ ವಿವಾಹ ಜೀವನದಲ್ಲಿ ಸಂತೋಷ ಕಂಡುಕೊಳ್ಳಲಾಗದಿದ್ದರೆ ಮೊದಲಿಗೆ ಇದಕ್ಕೆ ಕಾರಣವೇನೆಂದು ಅರಿತು ಇದನ್ನು ಸರಿಪಡಿಸಿಕೊಂಡು ಇಬ್ಬರೂ ಪರಸ್ಪರ ಬದಲಾವಣೆಗಳನ್ನು ಹೊಂದುವ ಮೂಲಕ ಮತ್ತೆ ಸಂಸಾರದ ಬಂಡಿಯನ್ನು ಸರಿದೂಗಿಸಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸಂಬಂಧದಿಂದ ಹೊರಬೀಳುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಒಂದು ವೇಳೆ ಮಕ್ಕಳಾಗಿದ್ದರೆ ಹಿರಿಯರ/ನ್ಯಾಯಾಲಯದ ಸಲಹೆಯಂತೆ ಮಕ್ಕಳ ಸುಪರ್ದಿಯನ್ನು ಪಡೆದುಕೊಳ್ಳಬೇಕು.


#9 ಬೆಳಗ್ಗಿನ ಉಪಾಹಾರ ಮಾಡದೇ ಇರುವುದು
ಬೆಳಗ್ಗಿನ ಉಪಾಹಾರ ಮಾಡದೇ ಇರುವುದು
ನಂಬಲೇಬೇಕಾದ ಸತ್ಯ ಎಂದರೆ ಬೆಳಗ್ಗಿನ ಉಪಾಹಾರ ಮಾಡದೇ ಇರುವುದು ಅಥವಾ ಉಪಾಹಾರ ಸೇವನೆಯನ್ನು ತಡವಾಗಿಸುವುದು ಎರಡೂ ಆರೋಗ್ಯದ ದೃಷ್ಟಿಯಿಂದ ನೀವು ಮಾಡುತ್ತಿರುವ ಅತಿ ಕೆಟ್ಟ ಅಭ್ಯಾಸವಾಗಿದೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪಾಠಕ್ಕೆ ಇನ್ನೂ ಐದೇ ನಿಮಿಷ ಇರುವಾಗ ಎದ್ದು ತಡಬಡಿಸಿ ಉಪಾಹಾರ ಸೇವಿಸದೇ ಓಡಿ ಹೋಗುತ್ತಾರೆ. ವಾಸ್ತವವಾಗಿ ಇಂಗ್ಲಿಷ್ಟಿನ ಬ್ರೇಕ್ ಫಾಸ್ಟ್ ಎಂಬ ಪದವೇ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ಪಡೆದಿದ್ದ ಉಪವಾಸ (ಫಾಸ್ಟ್) ಅನ್ನು ಕೊನೆಗೊಳಿಸುವುದು (ಬ್ರೇಕ್) ಆಗಿದೆ. ರಾತ್ರಿಯ ಅನೈಚ್ಛಿಕ ಕ್ರಿಯೆಗಳಿಂದ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಗಳು ಉತ್ಪತ್ತಿಯಾಗಿರುತ್ತವೆ. ಇದು ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವೂ ಆಗಿದೆ. ಆದ್ದರಿಂದ ಬೆಳಗ್ಗಿನ ಉಪಾಹಾರದ ಮೂಲಕ ಈ ಆಮ್ಲಗಳನ್ನು ಬಳಸಿಕೊಂಡು ಇದರ ಪ್ರಕೋಪವನ್ನು ತಣ್ಣಗಾಗಿಸಬಹುದು. ಇದೇ ಕಾರಣಕ್ಕೆ ಉಪಾಹಾರ ಅಲ್ಪ ಪ್ರಮಾಣದಲ್ಲಿರಬೇಕು. ಸಮಯವಿಲ್ಲದಿದ್ದರೆ ಕೇವಲ ಒಂದು ಸೇಬು, ಒಂದು ಬಾಳೆಹಣ್ಣು ಅಥವಾ ಒಂದು ಮುಷ್ಟಿಯಷ್ಟು ಒಣಫಲ ಅಥವಾ ಸಿದ್ದ ರೂಪದ ಗ್ರನೋಲಾ ಬಾರ್ ಮೊದಲಾದ ಆಹಾರಗಳನ್ನು ಸೇವಿಸಿದರೂ ಸರಿ, ಯಾವುದಕ್ಕೂ ಹೊಟ್ಟೆಯನ್ನು ಖಾಲಿ ಬಿಡಬಾರದು.


#10 ಉಗುರು ಕಚ್ಚುವುದು
ಉಗುರು ಕಚ್ಚುವುದು
ನಿಮ್ಮ ದೇಹಕ್ಕೆ ಮಾಡಬಹುದಾದ ಅಪಾಯಕರ ಕ್ರಿಯೆ ಎಂದರೆ ಉಗುರು ಕಚ್ಚುವುದು. ಇಡಿಯ ದಿನ ಗಾಳಿಯಲ್ಲಿಯೇ ಇರುವ ಉಗುರುಗಳಲ್ಲಿ ಧೂಳು, ಕ್ರಿಮಿಗಳು ಹಾಗೂ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಈ ಧೂಳಿನ ವಿಶ್ಲೇಷಣೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಇದರಲ್ಲಿ ಸಾಲ್ಮೋನೆಲ್ಲಾ, ಈ ಕೊಲೈ ಎಂಬ ಭಯಾನಕ ಬ್ಯಾಕ್ಟೀರಿಯಾಗಳಿರುವುದನ್ನು ಕಂಡುಬಂದಿದೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ವಿಷವಾಗಿಸುವ ಹಾಗೂ ಅತಿಸಾರ, ಭೇದಿ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿವೆ. ಹೀಗಿದ್ದಾಗ ಈ ಬ್ಯಾಕ್ಟೀರಿಯಾಗಳನ್ನು ನಾವೇ ಕೈಯಾರೆ ಬಾಯಿಗೆ ಕೊಂಡೊಯ್ಯುವುದು ಎಷ್ಟು ಮಟ್ಟಿಗೆ ಸರಿ?

ಭಾನುವಾರ, ಫೆಬ್ರವರಿ 18, 2018

ಹಸಿರು ಟೀ - ಜಾಸ್ತಿ ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ!


ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/z9qXQb

ಹಸಿರು ಟೀ ಚೀನಾದಲ್ಲಿ ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದರೂ ಭಾರತ ಸಹಿತ ಇತರ ವರ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿದೆ  ಹಾಗೂ ವಿಶೇಷವಾಗಿ ತೂಕ ಇಳಿಸಿಕೊಳ್ಳುವವರು ತಮ್ಮ ಪೇಯವನ್ನು ಹಸಿರು ಟೀ ಗೆ ಬದಲಿಸಿಕೊಳ್ಳುತ್ತಿದ್ದಾರೆ. ಹಸಿರು ಟೀ ಎಲೆ, ದಂಟು ಹಾಗೂ ಕಾಂಡ ಎಲ್ಲವೂ ಔಷಧೀಯ ಗುಣಗಳಿಗೆ ಬಳಸಲ್ಪಡುತ್ತಿದ್ದು ಈ ಗುಣಗಳಿಂದಾಗಿಯೇ ವಿಶ್ವದ ಅತಿ ಹೆಚ್ಚಿನ ಆರೋಗ್ಯಕರ ಪೇಯ ಎಂದು ಪರಿಗಣಿಸಲ್ಪಟ್ಟಿದೆ.
ಜಠರದ ತೊಂದರೆಗಳು
ಆರೋಗ್ಯದ ಮೇಲೆ ಹಸಿರು ಟೀ ಬೀರುವ ಪರಿಣಾಮಗಳು ಅಪಾರವಾಗಿವೆ. ಕ್ಯಾನ್ಸರ್ ನಿಂದ ರಕ್ಷಣೆ, ಮೆದುಳಿನ ಕ್ಷಮತೆ ಹೆಚ್ಚಿಸುವುದು, ಖಿನ್ನತೆಯಿಂದ ರಕ್ಷಿಸುವುದು, ತಲೆನೋವು, ಅತಿಸಾರ, ಮೂಳೆಗಳು ಶಿಥಿಲಗೊಳ್ಳುವುದು, ಹೊಟ್ಟೆಯ ತೊಂದರೆಗಳು ಮೊದಲಾದವುಗಳ ವಿರುದ್ದ ರಕ್ಷಣೆ ಒದಗಿಸುವುದು, ಹೃದಯ ಸಂಬಂಧಿ ತೊಂದರೆ, ಮಧುಮೇಹ, ಕಡಿಮೆ ರಕ್ತದೊತ್ತಡ, ಅತಿಯಾದ ದಂತ ಆಯಾಸ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದು ಮೊದಲಾದ ತೊಂದರೆಗಳು ಎದುರಾಗದಂತೆ ರಕ್ಷಣೆ ಒದಗಿಸುವುದು ಮೊದಲಾದ ಪ್ರಯೋಜನಗಳಿವೆ.

ಆದರೆ ಈ ಜಗತ್ತಿನ ಯಾವುದೇ ವಸ್ತುವಿನಲ್ಲಿರುವಂತೆ ಹಸಿರು ಟೀ ಸಹಾ ತನ್ನದೇ ಆದ ಕೆಲವು ಅಡ್ಡ ಅಥವಾ ದುಷ್ಟರಿಣಾಮದಿಂದ ಹೊರತಾಗಿಲ್ಲ. ಏಕೆಂದರೆ ಹಸಿರು ಟೀ ಯಲ್ಲಿಯೂ ಇತರ ಟೀಯಲ್ಲಿರುವಂತೆ ಕೆಫೀನ್ ಇದೆ. ಕೆಫೀನ್ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ನಡುಕ, ಉದ್ವೇಗ ಹಾಗೂ ನರೋದ್ರೇಕವನ್ನು ಹೆಚ್ಚಿಸುತ್ತದೆ.

ಪ್ರತಿ ಲೋಟ ಹಸಿರು ಟೀಯಲ್ಲಿ 2-4 ದಷ್ಟು ಕೆಫೀನ್ ಇದೆ. ಇದರ ಸೇವನೆಯಿಂದ ಏಕಾಗ್ರತೆ ಹಾಗೂ ಚಿಂತನಾಶಕ್ತಿಯ ಮೇಲೆ ಪ್ರಭಾವವುಂಟಾಗುತ್ತದೆ. ಬನ್ನಿ, ಹಸಿರು ಟೀ ಸೇವನೆ ಅಧಿಕವಾದರೆ ಇದರಿಂದ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಅರಿಯೋಣ.
ತಲೆನೋವು
1. ಜಠರದ ತೊಂದರೆಗಳು
ಹಸಿರು ಟೀಯಲ್ಲಿರುವ ಕೆಫೀನ್ ಪ್ರಮಾಣ ಚಿಕ್ಕದೇ ಆಗಿದ್ದರೂ, ಈ ಚಿಕ್ಕ ಪ್ರಮಾಣವೇ ಹೊಟ್ಟೆಯನ್ನು ಕೆಡಿಸಲು ಸಾಕಾಗುತ್ತದೆ. ಏಕೆಂದರೆ ಕೆಫೀನ್ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣರಸದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಜಠರದ ತೊಂದರೆಗೆ ನಾಂದಿ ಹಾಡುತ್ತದೆ. ಇದರ ಅಡ್ಡಪರಿಣಾಮವಾಗಿ ನೋವು ಅಥವಾ ವಾಕರಿಕೆಯೂ ಎದುರಾಗಬಹುದು.
 ನಿದ್ದೆಯ ತೊಂದರೆಗಳು
2. ತಲೆನೋವು:
ಹಸಿರು ಟೀ ಸೇವನೆಯಿಂದ ಲಘುವಿನಿಂದ ಹಿಡಿದು ಭಾರೀ ಎನ್ನುವಷ್ಟು ತಲೆನೋವು ಆವರಿಸಬಹುದು. ಇದಕ್ಕೆಲ್ಲಾ ಇದರಲ್ಲಿರುವ ಕೆಫೀನ್ ಕಾರಣ. ಒಂದು ವೇಳೆ ಅತಿಯಾದ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಿದರೆ ತಲೆತಿರುಗುವಿಕೆ ಎದುರಾಗಬಹುದು. ಅದರಲ್ಲೂ ಮೈಗ್ರೇನ್ ತಲೆನೋವಿನ ರೋಗಿಗಳು ಹಸಿರು ಟೀ ಸೇವಿಸಿದರೆ ತಲೆನೋವು ಇನ್ನಷ್ಟು ಉಲ್ಬಣಗೊಳಿಸುವುದರಿಂದ ಈ ರೋಗಿಗಳಿಗೆ ಹಸಿರು ಟೀ ಸಲ್ಲದು. ಆದರೆ ಮೈಗ್ರೇನ್ ಲಘುವಾಗಿದ್ದರೆ ಹಾಗೂ ಹಸಿರು ಟೀ ಇಲ್ಲದೇ ಆಗುವುದಿಲ್ಲ ಎನ್ನುವಂತಿದ್ದರೆ ಮಾತ್ರ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.
ಕಬ್ಬಿಣದ ಕೊರತೆ
3. ನಿದ್ದೆಯ ತೊಂದರೆಗಳು
ಹಸಿರು ಟೀ ಯನ್ನು ಸಂಜೆಯ ಬಳಿಕ ಸರ್ವಥಾ ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ನರವ್ಯವಸ್ಥೆಯ ಮೇಲೆ ಪ್ರಚೋದನೆಯುಂಟಾಗಿ ನಿದ್ದೆ ಆವರಿಸಲು ತೊಂದರೆಯಾಗಬಹುದು ಹಾಗೂ ರಾತ್ರಿ ಬಲುಹೊತ್ತಿನವರೆಗೆ ನಿದ್ದೆ ಬಾರದೇ ಹೋಗಬಹುದು. ಇದರಲ್ಲಿರುವ ಕೆಫೇನ್ ನಿದ್ದೆ ಆವರಿಸಲು ಅಗತ್ಯವಾದ ರಾಸಾಯನಿಕಗಳು ಮೆದುಳನ್ನು ತಲುಪದಂತೆ ತಡೆಗಟ್ಟುತ್ತದೆ ಹಾಗೂ ಉದ್ವೇಗಕ್ಕೆ ಕಾರಣವಾಗುವ ಅಡ್ರಿನಲಿನ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

4. ಕಬ್ಬಿಣದ ಕೊರತೆ:
ಒಂದು ನಂಬಲರ್ಹ ಅಧ್ಯಯನದ ಪ್ರಕಾರ ಹಸಿರು ಟೀ ಸೇವನೆ ಹೆಚ್ಚಾದರೆ ರಕ್ತಹೀನತೆಯೂ ಹೆಚ್ಚಾಗಬಹುದು. ಅಲ್ಲದೇ ಅಹಾರದ ಮೂಲಕ ಲಭಿಸುವ ಕಬ್ಬಿಣವನ್ನು ದೇಹ ಬಳಸಿಕೊಳ್ಳಲು ವಿಫಲವಾಗಿಸಬಹುದು. ಈ ಟೀಯಲ್ಲಿರುವ ಟ್ಯಾನಿನ್ ಹಾಗೂ ಪಾಲಿಫಿನಾಲ್ ಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ. ಈ ಕಣಗಳು ಕಬ್ಬಿಣದ ಕಣಗಳೊಂದಿಗೆ ಮಿಳಿತಗೊಂಡು ದೇಹ ಹೀರಿಕೊಳ್ಳುವುದಕ್ಕಿಂತಲೂ ದೊಡ್ಡ ಕಣಗಳಾಗುವ ಮೂಲಕ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಪಡಿಸುತ್ತದೆ.
ಹೃದಯ ಬಡಿತದಲ್ಲಿ ಏರುಪೇರು
5. ಹೃದಯ ಬಡಿತದಲ್ಲಿ ಏರುಪೇರು:
ಹಸಿರು ಟೀಯಲ್ಲಿರುವ ಕೆಫೀನ್ ಹೃದಯದ ಬಡಿತವನ್ನು ಏರಿಸುತ್ತದೆ ಹಾಗೂ ಗತಿಯಲ್ಲಿ ಏರುಪೇರಾಗಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಉಬ್ಬರವಿಳಿತ (palpitations) ಎದುರಾಗಬಹುದು. ತನ್ಮೂಲಕ ಎದೆನೋವು ಹಾಗೂ ಹೃದಯದ ಬಡಿತ ಆತಂಕಕ್ಕೆ ಕಾರಣವಾಗುವಷ್ಟು ಹೆಚ್ಚಬಹುದು ಹಾಗೂ ಇದು ಹೃದಯದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಬಹುದು.
ಸ್ನಾಯುಗಳ ಸೆಡೆತ
6. ಸ್ನಾಯುಗಳ ಸೆಡೆತ
ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು ಹಾಗೂ ಕೆಲವು ಅಂಗಗಳು ತಿರುಚಬಹುದು. ಏಕೆಂದು ಗೊತ್ತೇ? ಟೀ ಯಲ್ಲಿರುವ ಕೆಫೀನ್ restless leg syndrome ಅಥವಾ ಸ್ನಾಯುಗಳನ್ನು ಸತತವಾಗಿ ಬಳಸಿಕೊಳ್ಳುವ ಮೂಲಕ ಎದುರಾಗುವ ಸ್ನಾಯುಗಳ ಕುಸಿತಕ್ಕೆ ಕಾರಣವಾಗುತ್ತದೆ. ಈ ಮೂಲಕ ಕೆಲವು ಮೂಳೆಗಳು ಹಿಮ್ಮರಳದಂತೆ  ಸ್ನಾಯುಗಳು ಸೆಡೆತಗೊಳುತ್ತವೆ. ವಿಶೇಷವಾಗಿ ಮೊಣಕಾಲಿನ ಮೀನಖಂಡ ಸೆಡೆತಕ್ಕೊಳಗಾಗಿ ಪಾದ ಮತ್ತು ಮೊಣಕಾಲು ಮಡಚಿ ನೇರವಾಗಿಸಲು ಆಗುವುದೇ ಇಲ್ಲ.
ಅತಿಸಾರ
7. ಅತಿಸಾರ
ಕೆಫೇನ್ ಒಂದು ವಿರೇಚಕ ಔಷಧಿಯಾಗಿದೆ. ಇದರ ಪ್ರಮಾಣ ಹೆಚ್ಚಾದರೆ ಅತಿಸಾರ ಎದುರಾಗುತ್ತದೆ ಹಾಗೂ ಸತವಾಗಿ ಶೌಚಾಲಯಕ್ಕೆ ಓಡಬೇಕಾಗುತ್ತದೆ ಹಾಗೂ ಮಲದ ಮೂಲಕ ಅತಿ ಹೆಚ್ಚೇ ಎನಿಸುವಷ್ಟು ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹಸಿರು ಟೀ ಕಡಿಮೆ ಪ್ರಮಾಣದಲ್ಲಿರಬೇಕು ಹಾಗೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
ವಾಂತಿ
8. ವಾಂತಿ
ಒಂದು ಭಾರತೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಹಸಿರು ಟೀಯಲ್ಲಿರುವ ಪಾಲಿಫೆನಾಲ್ ಗಳು ಉತ್ಕರ್ಷಶೀಲ ಒತ್ತಡ ಎದುರಿಸುತ್ತವೆ. ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ವಾಂತಿ, ವಾಕರಿಕೆಗೂ ಕಾರಣವಾಗಬಹುದು. ಪ್ರತಿದಿನ ಹಸಿರು ಟೀ ಮೂಲಕ ಸೇವಿಸಬಹುದಾದ ಕೆಫೀನ್ 300 ರಿಂದ 400 ಮಿಲಿಗ್ರಾಂ ಒಳಗೇ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಒಂದು ಕಪ್ ನಲ್ಲಿ ಸುಮಾರು ಐವತ್ತು ಮಿಲಿಗ್ರಾಂ ಕೆಫೀನ್ ಲಭಿಸುತ್ತದೆ. ಆ ಪ್ರಕಾರ ದಿನಕ್ಕೆ ಸೇವಿಸಬಹುದಾದ ಗರಿಷ್ಟ ಪ್ರಮಾಣವೆಂದರೆ ಎಂಟು ಕಪ್.
ಎದೆಯುರಿತ
9. ಎದೆಯುರಿತ
ಹಸಿರು ಟೀ ಆಮ್ಲೀಯವಾಗಿದ್ದು ಇದು ಅನ್ನಾನಾಳಕ್ಕೆ ಉರಿಯುಂಟುಮಾಡಬಹುದು. ಪರಿಣಾಮವಾಗಿ ಎದೆಯುರಿತ ಎದುರಾಗಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ರೂಪದ ಹಸಿರು ಟೀ ಸೇವನೆಗೆ ನಿಮ್ಮ ಮನ ತುಡಿದರೆ ನಾವು ಮೊದಲೇ ಎಚ್ಚರಿಸುತ್ತಿದ್ದೇವೆ, ಈ ಪೇಯಕ್ಕೆ ಸಂರಕ್ಷಕರೂಪದಲ್ಲಿ ಸೇರಿಸಿರುವ ಅಸ್ಕಾರ್ಬಿಕ್ ಆಮ್ಲ ಅನ್ನನಾಳದಿಂದ ಆಹಾರ ಹಿಮ್ಮರಳು ಪ್ರಚೋದಿಸಬಹುದು ಹಾಗೂ ಹುಳಿತೇಗು, ಎದೆಯುರಿ ಮೊದಲಾದವು ಎದುರಾಗಬಹುದು.
ಮಧುಮೇಹ
10. ಮಧುಮೇಹ:
ಮಧುಮೇಹಿಗಳು ಹಸಿರು ಟೀ ಸೇವನೆಯಿಂದ ದೂರವಿವುರುದೇ ಒಳ್ಳೆಯದು. ಏಕೆಂದರೆ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುಪೇರಾಗಬಹುದು. ಅದರಲ್ಲೂ ಟೈಪ್ ೨ ಮಧುಮೇಹ ಇರುವ ವ್ಯಕ್ತಿಗಳು ಹಸಿರು ಟೀ ಸರ್ವಥಾ ಸೇವಿಸಬಾರದು. ಏಕೆಂದರೆ ಇದು ದೇಹದ ಇನ್ಸುಲಿನ್ ಮಟ್ಟವನ್ನೇ ಏರುಪೇರುಗೊಳಿಸುತ್ತದೆ.
ಮೂಳೆಗಳು ಟೊಳ್ಳಾಗುವ Osteoporosis
11. ಮೂಳೆಗಳು ಟೊಳ್ಳಾಗುವ Osteoporosis
ಕೆಫೀನ್ ಸೇವನೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಸಿರು ಟೀ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಕ್ಯಾಲ್ಸಿಯಂ ವಿಸರ್ಜನೆಯ ಗತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಯಾವಾಗ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುತ್ತದೆಯೋ ಆಗ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಂಡು ಟೊಳ್ಳಾಗಿ ಶಿಥಿಲಗೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

ಭಾನುವಾರ, ಫೆಬ್ರವರಿ 4, 2018

ಸಕ್ಕರೆ-ಒಂದು ಸುಂದರ ವಿಷ: ಇಲ್ಲಿವೆ ಹತ್ತು ಪುರಾವೆಗಳು

ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
http://tinyurl.com/z6r69mf
ಆಯಸ್ಸು ಕಡಿಮೆಯಾಗುತ್ತದೆ

ನಾವು ಸೇವಿಸುವ ಆಹಾರಗಳಲ್ಲಿ ಹಲವು ನೋಡಲು ಸುಂದರವಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಿವೆ. ಉದಾಹರಣೆಗೆ ಮೈದಾಹಿಟ್ಟು. ಗೋಧಿಯ ನಾರಿನಂಶವನ್ನು ನಿವಾರಿಸಿ ಕೇವಲ ಬಿಳಿಯ ಭಾಗವನ್ನು ಹೊಂದಿರುವ ಮೈದಾ ಮಲಬದ್ದತೆಗೆ ಮೂಲ. ಆದರೆ ನೋಡಲು? ಅಪ್ಪಟ ಬಿಳಿಯ ಬಣ್ಣದ ಅಪ್ಸರೆ, ಇದಕ್ಕೆ ಅಥವಾ ಇದರಿಂದ ತಯಾರಾದ ಖಾದ್ಯಗಳಿಗೆ ಮರುಳಾಗದವರೇ ಇಲ್ಲ. ಅಂತೆಯೇ ಸಕ್ಕರೆ, ಅಜಿನೋಮೋಟೋ, ಅಡುಗೆ ಸೋಡಾ, ಡಬ್ಬಿಯಲ್ಲಿ ಸಿಗುವ ಸಂಸ್ಕರಿತ ಆಹಾರಗಳು, ಮಾರ್ಜಾರಿನ್ ಎಂಬ ಬೆಣ್ಣೆ ಮೊದಲಾದವು ಸಹಾ ನೋಡಲು  ಸುಂದರವಾದ ವಿಷಗಳಾಗಿವೆ.

ಇಂದು ಬಿಳಿಯ ಈ ಸಕ್ಕರೆ ಎಂಬ ವಿಷದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ. ಇದು ಏಕೆ ವಿಷವಾಗಿದೆ ಎಂದರೆ ಇದರಲ್ಲಿರುವ ಸಕ್ಕರೆಯ ಅಂಶ ಹೆಚ್ಚು. ಅರೆ, ಸಕ್ಕರೆಯಲ್ಲಿ ಸಕ್ಕರೆ ಅಂಶ ಇಲ್ಲದೇ ಇನ್ನೇನು ಉಪ್ಪಿನಂಶ ಇರುತ್ತೆಯೇ? ಇಲ್ಲಿ ಸಕ್ಕರೆ ಎಂದರೆ ಇದನ್ನು ಸೇವಿಸಿದ ಬಳಿಕ ನಮ್ಮ ರಕ್ತಕ್ಕೆ ಸೇರುವ ಗ್ಲುಕೋಸ್ ಪ್ರಮಾಣ. ಇದು ನಮಗೆ ಅಗತ್ಯವಿರುವುದಕ್ಕಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದೇ ನಿಜವಾದ ತೊಂದರೆ. ಇದು ಅನಗತ್ಯವಾದ ಕ್ಯಾಲೋರಿಗಳನ್ನು ತುಂಬಿಸುವ ಮೂಲಕ ನಮ್ಮ ದೇಹದ ವಿವಿಧ ವ್ಯವಸ್ಥೆಗಳನ್ನು ಏರುಪೇರುಗೊಳಿಸುತ್ತದೆ. ಪ್ರಮುಖವಾಗಿ ಮಧುಮೇಹ ಇದ್ದವರಿಗೆ ತಾಳಲು ಸಾಧ್ಯವೇ ಇಲ್ಲದಷ್ಟು ಹೆಚ್ಚಿನ ಗ್ಲುಕೋಸ್ ಸೇರಿಸುವುದರಿಂದ ಮಧುಮೇಹಿಗಳು ಸಕ್ಕರೆಯನ್ನೇ ತಿನ್ನಬಾರದು ಎಂದು ವೈದ್ಯರು ಕಟ್ಟಪ್ಪಣೆ ಮಾಡುತ್ತಾರೆ. ಆದರೆ ಮಧುಮೇಹಿಗಳು ತಿನ್ನಬಹುದಾದ ಅಂದರೆ ರಕ್ತದಲ್ಲಿ ನಿಧಾನವಾಗಿ ಮಿಳಿತವಾಗುವ ಇತರ ಸಿಹಿಗಳನ್ನು ತಿನ್ನಬಹುದು. ಸಕ್ಕರೆಯಲ್ಲಿನ ಗ್ಲೂಕೋಸ್ ಅಪಾರವಾಗಿದ್ದರೆ ಅದು ಹೆಚ್ಚಾಗಿ ಬಾಧಿಸುವುದು ನಮ್ಮ ಯಕೃತ್ ಅನ್ನು. ಇದರಿಂದ ಕ್ಯಾನ್ಸರ್, ಹೃದಯದ ತೊಂದರೆ, ಸ್ಥೂಲಕಾಯ ಮೊದಲಾದ ತೊಂದರೆಗಳು ನಿಧಾನವಾಗಿ ಎದುರಾಗುತ್ತವೆ.
 
ಸಕ್ಕರೆ ಸೇರಿಸಿ ತಯಾರಾದ ಸಿಹಿತಿಂಡಿಗಳಲ್ಲಿ ಅಪಾರವಾದ ಗ್ಲೂಕೋಸ್ ಇರುತ್ತದೆ. ಗಾಬರಿಪಡಿಸುವ ಅಂಶವೆಂದರೆ ಕೋಲಾಗಳಂತಹ ಲಘುಪಾನೀಯಗಳಲ್ಲಿ ಸಾಮಾನ್ಯ ಸಕ್ಕರೆಯ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ. ಹೌದು, ಇರಬಹುದು, ಸಕ್ಕರೆ ಸಿಹಿಯೇ, ತಿಂದರೇನೀಗ? ನಾವೆಲ್ಲಾ ಚಿಕ್ಕಂದಿನಿಂದ ತಿನ್ನುತ್ತಾ ಬಂದಿಲ್ಲವೇ? ನಮಗೇನು ರೋಗ ಬಡಿದಿದೆ? ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾದ ಹತ್ತು ಉತ್ತರಗಳು ನಿಮ್ಮ ಇದುವರೆಗಿನ ನಂಬಿಕೆಯನ್ನೇ ಅಲ್ಲಾಡಿಸುತ್ತವೆ. ಕುತೂಹಲ ಮೂಡಿತೇ? ಕೊನೆಯವರೆಗೆ ನೋಡುತ್ತಾ ಹೋಗಿ:
ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು
೧) ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು.
ಸಕ್ಕರೆಯಲ್ಲಿ ಬೀಟಾ ಕ್ಯಾಟೆನಿನ್ (β-catenin) ಎಂಬ ಪೋಷಕಾಂಶವಿದೆ. ಇದು ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡದು. ಆದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯಲ್ಲಿರುವ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಈ ಕಣ ಶಕ್ತಿಹೀನಗೊಳಿಸುತ್ತಾ ಬರುತ್ತದೆ. ಅಂದರೆ ಯಾವುದಾದರೂ ಜೀವಕೋಶ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಸಕ್ಕರೆ ಕಡಿಮೆ ತಿನ್ನುವವರಿಗಿಂತ ಹೆಚ್ಚಿರುತ್ತದೆ. ಒಂದು ವೇಳೆ ಕ್ಯಾನ್ಸರ್ ಈಗಾಗಲೇ ಆವರಿಸಿದ್ದರೆ ಜೀವಂತವಿರುವ ದಿನಗಳನ್ನು ಲೆಕ್ಕ ಹಾಕಿ ಜೀವಿಸುತ್ತಿರುವವರ ಲೆಕ್ಕವನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ.
ಸ್ಥೂಲಕಾಯ ಎದುರಾಗುತ್ತದೆ
೨) ಸ್ಥೂಲಕಾಯ ಎದುರಾಗುತ್ತದೆ.
ಸಕ್ಕರೆಯ ಸಿಹಿ ಯಾರಿಗೆ ಇಷ್ಟವಿಲ್ಲ? ಆದರೆ ಈ ಸಿಹಿಯೇ ಸ್ಥೂಲಕಾಯಕ್ಕೂ ಮೂಲವಾಗಿದೆ. ಮಕ್ಕಳಿಂದ ಹಿರಿಯರವರೆಗೆ ಸಕ್ಕರೆಯನ್ನು ಬೆಳಗ್ಗಿನಿಂದ ರಾತ್ರಿಯವರೆಗಿನ ವಿವಿಧ ಭಕ್ಷ್ಯ, ಪಾನೀಯಗಳ ಮೂಲಕ ಸೇವಿಸಿರುವ ಪರಿಣಾಮದಿಂದ ದೇಹದಲ್ಲಿ ಆಗಾಧ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿ ಸ್ಥೂಲಕಾಯ ಆವರಿಸಿರುತ್ತದೆ. ಅದರಲ್ಲೂ ಕೊಬ್ಬು ಇಡಿಯ ದೇಹ ತುಂಬಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸುವಲ್ಲಿ ಸಕ್ಕರೆಯ ದೇಣಿಗೆ ಬಹಳ ಹೆಚ್ಚು.
ಮಧುಮೇಹ ಆವರಿಸುತ್ತದೆ
೩) ಮಧುಮೇಹ ಆವರಿಸುತ್ತದೆ
ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮುಂದೆ ಯಾವುದೋ ವಯಸ್ಸಿನಲ್ಲಿ ಬರಬೇಕಾಗಿದ್ದ ಮಧುಮೇಹ ಚಿಕ್ಕವಯಸ್ಸಿಗೇ ವಕ್ಕರಿಸುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಹೆಚ್ಚಿರುತ್ತದೆ ಎಂದರೆ ಅದನ್ನು ಕೊಳೆಸಿದರೆ ವಿಸ್ಕಿ ಎಂಬ ಮದ್ಯವಾಗಿ ಪರಿವರ್ತಿತವಾಗುತ್ತದೆ.
ಸಕ್ಕರೆಗೆ ದಾಸರನ್ನಾಗಿಸುತ್ತದೆ
೪) ಸಕ್ಕರೆಗೆ ದಾಸರನ್ನಾಗಿಸುತ್ತದೆ.
ಸಕ್ಕರೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಂತೆ ಸಕ್ಕರೆಗೆ ದಾಸರಾಗುವ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚು ಕಡಿಮೆ ನಾವೆಲ್ಲಾ ಈ ಬಿಳಿಯ ಸಕ್ಕರೆಗೆ ಈಗಾಗಲೇ ದಾಸರಾಗಿರಲೂ ಬಹುದು. ಏಕೆಂದರೆ ನಮಗೆ ಸಕ್ಕರೆ ಅಥವಾ ಸಿಹಿ ಇಲ್ಲದ ಊಟ ಸೇರುವುದೇ ಇಲ್ಲ. ಈ ದಾಸ್ಯ ಹೆಚ್ಚಾದರೆ ಕೊಕೇಯ್ನ್, ಗಾಂಜಾ, ಮಾರಿಯುವಾನಾ (marijuana) ಮೊದಲಾದವುಗಳಿಗೆ ದಾಸರಾದಷ್ಟೇ ಮಾರಕವಾಗಿ ಪರಿಣಮಿಸಬಹುದು.
ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ
೫) ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ.
2012ರಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಸಕ್ಕರೆಯನ್ನು ಸೇವಿಸುತ್ತಾ ಬಂದವರಲ್ಲಿ ಸ್ಮರಣಶಕ್ತಿ ಕುಂದುತ್ತಾ ಬಂದಿದೆ. ಅಲ್ಲದೇ ಒಟ್ಟಾರೆ ಆರೋಗ್ಯವೂ ಬಾಧೆಗೊಳಗಾಗಿದೆ.
ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ
೬) ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ.
ದೇಹದಲ್ಲಿರುವ ಸಕ್ಕರೆ ಮಾರಕ ಏಡ್ಸ್ ರೋಗಕ್ಕೆ ಕಾರಣವಾಗುವ ಹೆಚ್ ಐ ವಿ ವೈರಸ್ಸುಗಳ ಪತ್ತೆಗೆ ಅಡ್ಡಿಪಡಿಸುತ್ತದೆ. ಏಕೆಂದರೆ ಈ ವೈರಸ್ಸುಗಳ ಸುತ್ತಾ ಸಕ್ಕರೆಯ ಕಣಗಳು ಸುತ್ತವರೆದಿದ್ದು ಪರೀಕ್ಷೆ ಇದನ್ನು ಸಕ್ಕರೆಯ ಕಣ ಎಂದೇ ಪರಿಗಣಿಸುತ್ತದೆ. ಪರಿಣಾಮವಾಗಿ ಹೆಚ್ ಐ ವಿ ಸೋಂಕು ಹರಡುವುದನ್ನು ತಡೆಯದೇ ಮಾರಕ ರೋಗ ಉಲ್ಬಣಾವಸ್ಥೆ ತಲುಪಲು ಪರೋಕ್ಷವಾಗಿ ನೆರವಾಗುತ್ತದೆ.
ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ
೭) ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
2013ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೇಹದಲ್ಲಿ ಸಕ್ಕರೆಯ ಅಂದರೆ ಸಕ್ಕರೆಯ ಮೂಲಕ ಆಗಮನವಾದ ಗ್ಲುಕೋಸ್ ಪ್ರಮಾಣ ಹೆಚ್ಚಿದಷ್ಟೂ ಹೃದಯದ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆಗಾಧವಾದ ಪ್ರಮಾಣದ ಗ್ಲುಕೋಸ್ ಬಂದರೆ ಅದಕ್ಕೊಂದು ಗತಿಗಾಣಿಸಬೇಕಲ್ಲ, ಈ ಆಗಾಧ ಪ್ರಮಾಣವನ್ನು ಎಲ್ಲೆಡೆ ಸಾಗಿಸಲು ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ದೇಹದ ತುದಿತುದಿಗಳಿಗೆ ರಕ್ತದ ಮೂಲಕ ಕಳುಹಿಸಬೇಕಾಗುತ್ತದೆ. ಹೀಗೆ ಅತಿ ಭಾರ ಅಥವಾ ಓವರ್ ಲೋಡ್ ಆದ ಹೃದಯ ಆಯಸ್ಸಿಗೂ ಮುನ್ನವೇ ಶಿಥಿಲಗೊಳ್ಳುತ್ತದೆ.
ಯಕೃತ್ ಹಾನಿಗೊಳಗಾಗುತ್ತದೆ
೮) ಯಕೃತ್ ಹಾನಿಗೊಳಗಾಗುತ್ತದೆ.
ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.
ಹೆಚ್ಚಿನ ಸಕ್ಕರೆ?
೯) ಹೆಚ್ಚಿನ ಸಕ್ಕರೆ?
ಕೆಲವೊಮ್ಮೆ ಮಕ್ಕಳನ್ನು ಮತ್ತು ಕೆಲವು ವಯಸ್ಕರನ್ನು ತಪಾಸಣೆಗೊಳಿಸಿದ ವೈದ್ಯರು 'sugar high’ ಎಂಬ ಪದವನ್ನು ಉಪಯೋಗಿಸುವುದನ್ನು ಗಮನಿಸಿರಬಹುದು. ಏಕೆಂದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಆತಂಕವನ್ನೇ ವೈದ್ಯರು ಶುಗರ್ ಹೈ ಎಂದು ಕರೆಯುತ್ತಾರೆ. ಈಗ ಕೆಲವು ಔಷಧಿಗಳ ಮೂಲಕ ಅಪಾರವಾದ ಈ ಗ್ಲೂಕೋಸ್ ಗೆ ಒಂದು ದಾರಿ ಕಾಣಿಸಲು ಪ್ರಯತ್ನಿಸಬೇಕಾಗುತ್ತದೆ.

೧೦) ಆಯಸ್ಸು ಕಡಿಮೆಯಾಗುತ್ತದೆ.
ಸಕ್ಕರೆಯ ಅಪಾರ ಪ್ರಮಾಣದ ಸೇವನೆಯಿಂದ ದೇಹದ ವಿವಿಧ ಭಾಗಗಳು ಬಾಧೆಗೊಳಗಾಗಿ ತಮ್ಮ ಕ್ಷಮತೆಯನ್ನು ಕುಗ್ಗಿಸಿಕೊಳ್ಳುವ ಪರಿಣಾಮವಾಗಿ ಒಟ್ಟಾರೆ ಆರೋಗ್ಯ ಮತ್ತು ತನ್ಮೂಲಕ ಆಯಸ್ಸು ಕಡಿಮೆಯಾಗುತ್ತದೆ.

ಈ ವಿಷದಿಂದ ಪಾರಾಗಲು ಏನು ಮಾಡಬೇಕು:
* ಬಿಳಿ ಸಕ್ಕರೆಯ ಬದಲು ಕಂದು ಸಕ್ಕರೆ ಅಥವಾ ಬೆಲ್ಲ ಉಪಯೋಗಿಸಿ. ಬೆಲ್ಲವೂ ಕಪ್ಪು ಅಥವಾ ಕೆಂಪಗಿದ್ದಷ್ಟೂ ಉತ್ತಮ
* ಮಾರುಕಟ್ಟೆಯಲ್ಲಿ ದೊರಕುವ ಸಿಹಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ
* ಶುಭಸಂದರ್ಭಗಳಲ್ಲಿ ನೀಡಲಾಗುವ ಸಿಹಿಗಳು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಂದು ತುಂಡಿನಲ್ಲಿ ಅರ್ಧವನ್ನು ಮಾತ್ರ ತಿನ್ನಿ, ಮತ್ತೆ ಅದರ ಕಡೆಗೆ ನೋಡಲೇಬೇಡಿ.
* ಅಮೇರಿಕ ಹಾರ್ಟ್ ಅಸೋಸಿಯೇಷನ್ ಸಂಸ್ಥೆ ಸೂಚಿಸುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಗರಿಷ್ಟ 6 ಚಿಕ್ಕ ಚಮಚ ಅಥವಾ 100 ಕ್ಯಾಲೋರಿಗಳವರೆಗೆ ಸುರಕ್ಷಿತವಾಗಿ ಸೇವಿಸಬಹುದು. ಅದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ. 
* ಬೇಕರಿಯ ಮೈದಾ ಆಧಾರಿತ ತಿಂಡಿಗಳನ್ನು ಆದಷ್ಟೂ ದೂರ ಮಾಡಿ. ಏಕೆಂದರೆ ಇದರಲ್ಲಿ ನಾರು ಇಲ್ಲದೇ ಇರುವುದು ಮತ್ತು ರುಚಿಗಾಗಿ ಸಕ್ಕರೆ ಹಾಕಿರುವುದು ಅರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ. 
* ಸಾಂಪ್ರಾದಾಯಿಕ ವಿಧಾನದ ಜೋನಿ ಬೆಲ್ಲ, ತಟ್ಟೆ ಬೆಲ್ಲ, ಜೇನು ಮೊದಲಾದವು ಬಿಳಿ ಸಕ್ಕರೆಯ ಬದಲಿಗೆ ಉಪಯೋಗಿಸಬಹುದಾದ ಸಿಹಿಗಳು.
* ಲೋ ಕ್ಯಾಲೋರಿ ಸ್ವೀಟ್ನರ್ ಎಂದು ಮಧುಮೇಹಿಗಳಿಗೆ ಸಿಗುವ ಸಕ್ಕರೆಯಲ್ಲಿ aspertame ಎಂಬ ಹೆಸರಿದೆಯೇ ಗಮನಿಸಿ. ಇದ್ದರೆ ಖಂಡಿತಾ ಕೊಳ್ಳಬೇಡಿ, ಏಕೆಂದರೆ ಇದು ಸಕ್ಕರೆಗಿಂತಲೂ ದೊಡ್ಡ ವಿಷವಾಗಿದೆ. 
* artificial sweetner ಎಂಬ ಹೆಸರು ಹೊತ್ತ ಪೊಟ್ಟಣದ ಸಕ್ಕರೆ ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಅಪಾಯಕಾರಿ.
* ಕೋಲಾ ಮೊದಲಾದ ಲಘುಪಾನೀಯಗಳ ಬದಲು ಲಿಂಬೆರಸ, ಮಜ್ಜಿಗೆ ಸೇವಿಸಿ
* ಪೊಟ್ಟಣಗಳಲ್ಲಿ ಸಿಗುತ್ತಿರುವ ಹಣ್ಣಿನ ರಸಗಳ ಬದಲಿಗೆ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. (ಇವುಗಳನ್ನು ಗುರುತಿಸುವುದು ಸುಲಭ, ಕೃತಕ ಸವಿ ಇರುವ ಪೇಯ ಡ್ರಿಂಕ್ ಎಂಬ ಹೆಸರಿನಲ್ಲಿ ಸಿಗುತ್ತದೆ. ಉದಾಹರಣೆಗೆ ಮ್ಯಾಂಗೋ ಡ್ರಿಂಕ್. ಅದೇ ಮಾನಿನ ರಸ ಮ್ಯಾಂಗೋ ಜ್ಯೂಸ್ ಎಂಬ ಹೆಸರಿನಲ್ಲಿ ಸಿಗುತ್ತದೆ ಹಾಗೂ ಕೊಂಚ ದುಬಾರಿಯಾಗಿರುತ್ತದೆ. ಆರೋಗ್ಯ ಉಳಿಸಿಕೊಳ್ಳಬೇಕು ಎನಿಸಿದರೆ ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ತಾಜಾ ಹಣ್ಣಿನ ರಸವನ್ನೇ ಕೊಳ್ಳಿ. 
* ಬೆಳಗ್ಗಿನ ಉಪಾಹಾರದಲ್ಲಿ ಸಕ್ಕರೆ ಚಿಮುಕಿಸಿ ತಿನ್ನುವ ಅಭ್ಯಾಸ ಕೊನೆಗೊಳಿಸಿ. (ಕೆಲವರಿಗೆ ದೋಸೆ, ಉಪ್ಪಿಟ್ಟು ಮೊದಲಾದವುಗಳನ್ನು ಸಕ್ಕರೆಯ ಜೊತೆ ಸೇವಿಸುವ ಅಭ್ಯಾಸವಿರುತ್ತದೆ)
* ಟೀ ಕಾಫಿ ಮೊದಲಾದ ನಿಮ್ಮ ನೆಚ್ಚಿನ ಪೇಯಗಳಲ್ಲಿ ಸಕ್ಕರೆ ಬದಲಿಗೆ ಕೊಂಚವೇ ಜೇನು ಸೇರಿಸಿ ಕುಡಿಯಬಹುದು. 

ಶನಿವಾರ, ಜನವರಿ 27, 2018

ಕೊಲೆಸ್ಟ್ರಾಲ್ ಬಗ್ಗೆ ನಿಮಗೆ ತಿಳಿದಿರದಿದ್ದ ಅಚ್ಚರಿಯ ಮಾಹಿತಿಗಳು

ಕನ್ನಡ.ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/vVuSSh

ಕೊಲೆಸ್ಟ್ರಾಲ್ ಬಗ್ಗೆ ನಾವೆಲ್ಲಾ ಕೆಟ್ಟ ಅಭಿಪ್ರಾಯವನ್ನೇ ಹೊಂದಿದ್ದೇವೆ. ಏಕೆಂದರೆ ಅಕ್ಕಪಕ್ಕದವರ ವೈದ್ಯಕೀಯ ತಪಾಸಣಾ ವಿವರಗಳನ್ನು ನೋಡಿದಾದ ಕೊಲೆಸ್ಟ್ರಾಲ್ ಉಂಟಂತೆ, ಮಾತ್ರೆ ಕೊಟ್ಟಿದ್ದಾರೆ ಎಂಬ ಮಾತುಗಳನ್ನೇ ಕೇಳುತ್ತೇವೆ. ಆದರೆ ವರದಿಯಲ್ಲಿ ಕೊಲೆಸ್ಟಾಲ್ ಮಟ್ಟ ಇಷ್ಟಿರಬೇಕಿದ್ದುದು ಇದಕ್ಕಿಂತ ಹೆಚ್ಚಾಗಿದೆ ಎಂದೇ ಇರುತ್ತದೆ. ಇದನ್ನು ಸರಿಯಾಗಿ ನೋಡದೇ ನಾವು ಕೊಲೆಸ್ಟ್ರಾಲ್ ಇರುವುದೇ ಕೆಟ್ಟದು ಎಂದು ತಿಳಿದುಕೊಂಡುಬಿಟ್ಟಿದ್ದೇವೆ.
Surprising Facts About Cholesterol


ವಾಸ್ತವವಾಗಿ ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಜಿಡ್ಡು. ಕಾರಿಗೆ ಇಂಜಿನ್ ಆಯಿಲ್ ಇದ್ದಾ ಹಾಗೆ ನಮ್ಮ ರಕ್ತದ ಹರಿವಿಗೂ ಕೊಲೆಸ್ಟಾಲ್ ಅಗತ್ಯವಿದೆ. ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸಿ ಎಲ್ಲೆಡೆ ಪಸರಿಸಲೂ ಕೊಲೆಸ್ಟ್ರಾಲ್ ಅಗತ್ಯವಿದೆ. ಆದರೆ ಇದು ಎಷ್ಟು ಅಗತ್ಯವಿದೆ ಎಂಬುವುದರ ಮೇಲೆ ಆರೋಗ್ಯಕರವೋ ಅನಾರೋಗ್ಯಕರವೋ ಎಂದು ತಿಳಿದುಬರುತ್ತದೆ.

ಸರಿಸುಮಾರು ಎಲ್ಲಾ ಆಹಾರಗಳಲ್ಲಿ ಕೊಲೆಸ್ಟಾಲ್ ಇದೆ. ಎಣ್ಣೆಯಲ್ಲಿ ಇದು ಹೆಚ್ಚಿರುತ್ತದೆ ಅಷ್ಟೇ. ಆದ್ದರಿಂದ ನಮಗೆ ಲಭ್ಯವಾದ ಕೊಲೆಸ್ಟಾಲ್ ನಲ್ಲಿ ಸಿಂಹಪಾಲು ಎಣ್ಣೆ, ಕೊಬ್ಬು ಪ್ರೋಟೀನುಗಳಿಂದ ದೊರಕುತ್ತದೆ. ಇದರಲ್ಲೂ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇದೆ. HDL-(High density lipoproteins) ಎಂಬುದು ಉತ್ತಮ ಕೊಲೆಸ್ಟ್ರಾಲ್ ಎಂದೂ LDL-(Low density lipoproteins) ಕೆಟ್ಟ ಕೊಲೆಸ್ಟಾಲ್ ಎಂದೂ ಪರಿಗಣಿಸಲ್ಪಟ್ಟಿದೆ. ಹೆಸರೇ ಸೂಚಿಸುವಂತೆ ಮೊದಲಿನದು ಹೆಚ್ಚಿನ ಸಾಂದ್ರತೆಯುಳ್ಳದ್ದಾಗಿದ್ದು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಆದರೆ ಎರಡನೆಯದು ಅಂಟಿಕೊಳ್ಳುತ್ತದೆ. ಇದೇ ಇದಕ್ಕೆ ಕೆಟ್ಟದೆಂಬ ಹೆಸರು ಬರಲಿಕ್ಕೆ ಕಾರಣ. ಮಿತಿ ಹೆಚ್ಚಾದರೆ ಈ ಕೊಲೆಸ್ಟಾಲ್ ನಮ್ಮ ನರನರಗಳ ಒಳಭಾಗದಲ್ಲೆಲ್ಲಾ, ಕವಲೊಡೆದಿರುವಲ್ಲಿ, ತಿರುವುಗಳಿರುವಲ್ಲೆಲ್ಲಾ ಅಂಟಿಕೊಂಡು ರಕ್ತದ ಪರಿಚಲನೆಗೆ ಅಡ್ಡಿಯುಂಟುಮಾಡುತ್ತವೆ. ಇದು ಹೃದಯದೊತ್ತಡಕ್ಕೆ ಮತ್ತು ಸ್ತಂಭನದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಆದ್ದರಿಂದ ಕೊಲೆಸ್ಟಾಲ್ ಹೆಚ್ಚು ಇರುವ ಆಹಾರಗಳನ್ನು ತ್ಯಜಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸಲು ಪರಿಣಿತರು ಸಲಹೆ ಮಾಡುತ್ತಾರೆ. ನಾರಿನ ಪ್ರಮಾಣ ಹೆಚ್ಚಿರುವಮ್ ಆಹಾರಗಳು ಇರುವ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಹಕಾರಿ. ಕೊಲೆಸ್ಟ್ರಾಲ್ ಬಗ್ಗೆ ಇನ್ನೂ ಹಲವು ಅಚ್ಚರಿಯ ಮಾಹಿತಿಗಳನ್ನುಇಲ್ಲಿ ನೀಡಲಾಗಿದೆ.

ಕೊಲೆಸ್ಟಾಲ್ ಆಹಾರದಿಂದ ಬರಬೇಕಾಗಿಲ್ಲ, ದೇಹವೇ ಉತ್ಪಾದಿಸಿಕೊಳ್ಳುತ್ತದೆ.
ದೇಹಕ್ಕೆ ಅಗತ್ಯವಾದ ಕೊಲೆಸ್ಟಾಲ್ ಅನ್ನು ಆಹಾರದ ಮೂಲಕ ನಾವು ಬಲವಂತವಾಗಿ ದೇಹಕ್ಕೆ ಉಣಿಸುತ್ತಿದ್ದೇವೆಯೇ ವಿನಃ ದೇಹ ಅಗತ್ಯವಿರುವ ಕೊಲೆಸ್ಟ್ರಾಲ್ ಅನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಫಲಾಹಾರಿಗಳು ಕೆಲವೇ ದಿನಗಳಲ್ಲಿ ಭಾರೀ ತೊಂದರೆ ಅನುಭವಿಸಬೇಕಾಗಿತ್ತು. ಆದ್ದರಿಂದ ನಿಮ್ಮ ಆಹಾರ ಸಾಧ್ಯವಾದಷ್ಟು ಕೊಲೆಸ್ಟಾಲ್ ರಹಿತವಾಗಿರಲಿ.
Surprising Facts About Cholesterol
ನಿಮ್ಮ ಕೊಲೆಸ್ಟ್ರಾಲ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿಮ್ಮ ವಂಶವಾಹಿನಿ ನಿರ್ಧರಿಸುತ್ತದೆ
ಕೊಲೆಸ್ಟಾಲ್ ಬಳಕೆಯಲ್ಲಿ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದನ್ನು ಅವರ ವಂಶವಾಹಿಸಿ ನಿರ್ಧರಿಸುತ್ತದೆ. ಅಂದರೆ ನಿಮ್ಮ ವಂಶವಾಹಿನಿಯಲ್ಲಿ ಕೊಲೆಸ್ಟ್ರಾಲ್ ತೊಂದರೆ ಇದ್ದರೆ ನಿಮಗೂ ಇರುವ ಸಾಧ್ಯತೆ ಹೆಚ್ಚು.

ಕೊಲೆಸ್ಟ್ರಾಲ್ ತೊಂದರೆ ಯಾವುದೇ ವಯಸ್ಸಿನಲ್ಲಿ ಬರಬಹುದು
ಕೊಲೆಸ್ಟ್ರಾಲ್ ತೊಂದರೆಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ, ಇದು ಯಾವುದೇ ವಯಸ್ಸಿನಲ್ಲಿ ಬರಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳ ರಕ್ತದಲ್ಲಿಯೂ ಅಘಾತಕಾರಿ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರುವುದು ಕಂಡುಬಂದಿದೆ. ಇನ್ನೂ ಕೆಲವು ನರಪೇತಲರು ದಪ್ಪನಾಗಬೇಕೆಂದು ಕೇಜಿಗಟ್ಟಲೆ ತಿಂದರೂ ಅವರ ರಕ್ತದಲ್ಲಿ ಕೊಲೆಸ್ಟಾಲ್ ಶೇಖರವಾಗದೇ ಇರುವುದು ಇನ್ನಷ್ಟು ಅಚ್ಚರಿ ತರಿಸುತ್ತದೆ.
Surprising Facts About Cholesterol
ತೂಕ ಇಳಿಸಿದರೆ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಾಧ್ಯ
ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗಿದ್ದು ಕಡಿಮೆಗೊಳಿಸಲು ತೂಕ ಕಳೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಸ್ಥೂಲಕಾಯಕ್ಕೂ ಕೊಲೆಸ್ಟಾಲ್ ಪ್ರಮಾಣಕ್ಕೂ ನಿಕಟ ಸಂಬಂಧವಿರುವುದನ್ನು ವೈದ್ಯಕೀಯ ವರದಿಗಳು ಸಾಬೀತುಪಡಿಸುತ್ತವೆ. ಆದ್ದರಿಂದ ಕೊಲೆಸ್ಟಾಲ್ ಇದೆ ಎಂದು ನಿಮ್ಮ ವೈದ್ಯಕೀಯ ವರದಿ ತಿಳಿಸಿದರೆ ನಿಮ್ಮ ಜಿಹ್ವೆಗೆ ಸಲಾಂ ಹೇಳಿ ತೂಕ ಕಳೆದುಕೊಳ್ಳಲು ಮನಸ್ಸು ಮಾಡಿ.


ಬುಧವಾರ, ಜನವರಿ 17, 2018

ಯು.ಎ.ಇ. ಕಾರು ಮಾಲಿಕರಿಗೆ ಶುಭಸುದ್ದಿ-ಹೊಸ ಟೈರುಗಳನ್ನು ಐದು ವರ್ಷ ಬಳಸಬಹುದು

-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.

ಯು.ಎ.ಇ.ಯಲ್ಲಿರುವ ಕಾರುಗಳನ್ನು ವರ್ಷಕ್ಕೊಂದು ಬಾರಿ ಪಾಸಿಂಗ್ ಮಾಡಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಸರ್ಕಾರದ ಅಧಿಕೃತ ಟೆಸ್ಟಿಂಗ್ ಸೆಂಟರ್ ನಲ್ಲಿ ಮಾತ್ರವೇ ವಾಹನಗಳನ್ನು ಪಾಸಿಂಗ್ ಮಾಡಿಸಬಹುದು. ಕಳೆದ ವರ್ಷ ಆರ್.ಟಿ.ಏ (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ) ಸಂಸ್ಥೆ ಹೊರಡಿಸಿದ ಕಟ್ಟಳೆಯ ಪ್ರಕಾರ ಕಾರಿಗೆ ಅಳವಡಿಸಿರುವ ಟೈರು ಮೂರು ವರ್ಷ ಮಾತ್ರವೇ ಹಳೆಯದಾಗಿರಬಹುದು. ಆರ್ ಟಿ. ಎ. ದೂರವಾಣಿ ಸಂಖ್ಯೆ 8009090 ಗೆ ಕರೆ ಮಾಡಿ ಈ ವಿಷಯ ವಿಚಾರಿಸಿದರೂ (ವಿಚಾರಿಸಲು ಅತ್ತ ಕಡೆ ಯಾರಾದರೂ ಉತ್ತರಿಸಬೇಕಾದರೆ ಸುಮಾರು ಇಪ್ಪತ್ತರಿಂದ ನಲವತ್ತು ನಿಮಿಷವಾದರೂ ತಾಳ್ಮೆಯಿಂದ ಕಾಯಬೇಕಾಗುತ್ತದೆ) ಟೈರು ಮೂರು ವರ್ಷ ಎಂದೇ ಉತ್ತರ ಸಿಗುತ್ತದೆ.

ನನ್ನ ಕಾರಿನ ಟೈರು 2015ರಲ್ಲಿ ತಯಾರಾಗಿದ್ದು 2018ರಲ್ಲಿ ಪಾಸ್ ಮಾಡಲಾರರು ಎಂಬ ಎಂದು ಟೈರು ಮಾರುವ ಅಂಗಡಿಗಳಲ್ಲಿ ಮಾಹಿತಿ ಸಿಕ್ಕಿದ್ದರಿಂದ ಹೊಸ ಟೈರುಗಳನ್ನು ಅನಿವಾರ್ಯವಾಗಿ ಹಾಕಿಸಬೇಕಾಗಿತ್ತು. ಹಾಗಾಗಿ ಕೊಂಚ ಹುಡುಕಾಟ ನಡೆಸಿದಾಗ ಟೈರ್ ಪ್ಲಸ್ ಎಂಬ ಸಂಸ್ಥೆ ಎರಡು ಹೊಸ ಟೈರುಗಳನ್ನು ಕೊಂಡರೆ ಎರಡು ಉಚಿತ ಎಂಬ ಪ್ರಲೋಭನೆ ಒಡ್ಡಿತ್ತು. ಅದೂ ಮಿಶೆಲಿನ್ ಸಂಸ್ಥೆಯ ಟಿಗಾರ್ ಎಂಬ ಸರ್ಬಿಯಾ ದೇಶದ ನಿರ್ಮಿತ ಉತ್ತಮ ಟೈರು. ನಾಲ್ಕು ಟೈರುಗಳನ್ನು ಒಟ್ಟಿಗೇ ಕೊಂಡರೆ ಚೀನಾದ ಟೈರಿನ ಬೆಲೆಯಲ್ಲಿಯೇ ಸಿಗುವುದಾದರೆ ಏಕೆ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ಟೈರ್ ಪ್ಲಸ್ ಅಂಗಡಿಗೆ ನಾನು ಮತ್ತು ಸ್ನೇಹಿತರಾದ ಬಸವರಾಜು ಲಗ್ಗೆಯಿಟ್ಟೆವು.

ಆದರೆ ಇವರು ಮಾರುವ ಟೈರುಗಳು ಏಪ್ರಿಲ್ 21016 ರಲ್ಲಿ ತಯಾರಾದವು. ಇವುಗಳನ್ನು ಹಾಕಿಸಿದರೆ ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು ಇನ್ನೂ ಒಂದೂವರೆ ವರ್ಷ ಮಾತ್ರವೇ ಸಿಗುತ್ತದಲ್ಲಾ ಎಂದು ಟೈರ್ ಪ್ಲಸ್ ವ್ಯಕ್ತಿಯಲ್ಲಿ ವಿಚಾರಿಸಿದರೆ ಅವರು ’ನಮ್ಮ ಟೈರುಗಳನ್ನು ಆರ್ ಟಿ. ಎ ಐದು ವರ್ಷಗಳ ಕಾಲ ಬಳಸಲು ಅನುಮೋದಿಸಿದೆ’ ಎಂದು ಕೆಳಗಿನ ಬ್ರೋಷರ್ ನೀಡಿದರು.


ಅನುಮಾನದಿಂದ ನಾವು ಆರ್ ಟಿ. ಎ ಗೆ ಕರೆ ಮಾಡಿ ವಿಚಾರಿಸಿದರೂ ’ಮೂರು ವರ್ಷವೇ’ ಎಂಬ ಉತ್ತರ ಸಿಕ್ಕಿತು. ಒಂದೂವರೆ ವರ್ಷಕ್ಕೇ ಆದರೂ ಚಿಂತೆಯಿಲ್ಲ ಟೈರು ಅತ್ಯುತ್ತಮ ಗುಣಮಟ್ಟ ಹೊಂದಿದ್ದರಿಂದ ಇರಲಿ ಎಂದು ಹೊಸ ಟೈರುಗಳನ್ನು ಹಾಕಿಸಿಕೊಂಡು ಬಂದೆವು. ಆದರೆ ಬಸವರಾಜು ಮಾತ್ರ ಸುಲಭಕ್ಕೆ ಒಪ್ಪದೇ ಆರ್ ಟಿ.ಎ ಗೆ ಮತ್ತೊಮ್ಮೆ ಕರೆ ಮಾಡಿ ತಮ್ಮ ಐವತ್ತು ನಿಮಿಷಗಳನ್ನು ವ್ಯಯಿಸಿ ನಾಲ್ಕಾರು ಪ್ರತಿನಿಧಿಗಳೊಂದಿಗೆ ಮಾತನಾಡಿ ’ಮೂರು ವರ್ಷದ’ ಹಳೆರಾಗವನ್ನು ಮತ್ತೊಮ್ಮೆ ಹಾಡಿಸಿಕೊಂಡರು. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಲಹಾ ತಾಣಕ್ಕೆ ಈಮೇಲ್ ಮಾಡಿ ಎಂದು ಆ ಪ್ರತಿನಿಧಿ ಹೇಳಿ ತಮ್ಮ ಮೇಲೆ ಎರಗಿದ್ದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು.

ಆದರೂ, ಈ ಟೈರ್ ಪ್ಲಸ್ ಸಂಸ್ಥೆ ಯು.ಎ.ಇ.ಯ ಹೆಸರಾಂತ ಸಂಸ್ಥೆಯಾಗಿದ್ದು ಸುಮ್ಮಸುಮ್ಮನೇ ಸುಳ್ಳು ಹೇಳಲಾರದು ಎನ್ನಿಸಿತು. ಅಲ್ಲದೇ ಇಲ್ಲದ ಅನುಮೋದನೆಯನ್ನು ಇದೆ ಎಂದು ತಿಳಿಸಿದರೆ ಇವರನ್ನು ಇಲ್ಲಿನ ಕಾನೂನು ಬಿಡುತ್ತದೆಯೇ ಅಂಬ ಅನುಮಾನವೂ ಬರತೊಡಗಿತು. ಯಾವುದಕ್ಕೂ ಇರಲಿ, ಎಂದು ಆ ಪ್ರತಿನಿಧಿ ತಿಳಿಸಿದಂತೆ ಆರ್ ಟಿ ಎ ಸಲಹಾ ಈಮೇಲ್ ವಿಳಾಸಕ್ಕೆ ಎಲ್ಲಾ ವಿಷಯವನ್ನು ತಿಳಿಸಿ ಈಮೇಲ್ ಬರೆದೆ. ಇದರ ಸಾರಾಂಶವೆಂದರೆ ಕಾರಿಗೆ ಹೊಸ ಟೈರು ಹಾಕಿಸಿದರೆ ಆರ್.ಟಿ.ಎ. ಪ್ರಕಾರ ಮೂರು ವರ್ಷ, ಆದರೆ ಟೈರ್ ಪ್ಲಸ್ ಪ್ರಕಾರ ಐದು ವರ್ಷ ಮಾತ್ರ ಬಳಸಬಹುದು, ಯಾರು ಸರಿ? ನಾವು ಯಾರನ್ನು ನಂಬಬಹುದು? ಒಂದು ವೇಳೆ ಮೂರು ವರ್ಷ ಸರಿಯಾದ ಮಾಹಿತಿಯಾದರೆ ಐದು ವರ್ಷ ಎಂದು ಟೈರ್ ಪ್ಲಸ್ ಜಾಹೀರಾತು ನೀಡಿ ಟೈರುಗಳನ್ನು ಮಾರುವುದು ವಂಚನೆಯಲ್ಲವೇ?

ಮೊದಲ ಉತ್ತರ ಮಾಮೂಲಿಯಂತೆ "ಮೂರು ವರ್ಷ" ದ ಅದೇ ರಾಗ ಅದೇ ಹಾಡೇ ಆಗಿತ್ತು. ಮತ್ತೊಮ್ಮೆ ಈ ವಿವರಗಳನ್ನು ನಿಮ್ಮ ತಾಂತ್ರಿಕ ವಿಭಾಗಕ್ಕೆ ಕಳುಹಿಸಿ ಅವರಿಂದ ಸ್ಪಷ್ಟನೆ ಬರಲಿ ಎಂದು ಮರುತ್ತರ ಬರೆದೆ. ಮರುದಿನವೇ ತಾಂತ್ರಿಕ ವಿಭಾಗದಿಂದ ಸ್ಪಷ್ಟವಾದ ಉತ್ತರ ಬಂದಿದೆ. ಈಮೇಲ್ ನ ಯಥಾವತ್ ಪ್ರತಿ ಇಲ್ಲಿದೆ:


ಈ ಈಮೇಲ್ ಪ್ರಕಾರ ಪಾಸಿಂಗ್ ಪರೀಕ್ಷೆಯಲ್ಲಿ ಕಾರು ತೇರ್ಗಡೆಯಾಗಲು ಟೈರುಗಳು ನಿರ್ಮಾಣ ದಿನಾಂಕದಿಂದ ಐದು ವರ್ಷಗಳು ಹಾಗೂ ಟೈರುಗಳ ಸವೆತದ ಬಳಿಕವೂ ಕನಿಷ್ಟ 1.6 ಮಿಮಿ ನಷ್ಟು ರಬ್ಬರ್ ಉಳಿದುಕೊಂಡಿರಬೇಕು ಹಾಗೂ ಇವುಗಳು ಯಾವುದೇ ನ್ಯೂನ್ಯತೆಯನ್ನು ಹೊಂದಿರಬಾರದು. ಒಂದು ವೇಳೆ ಪರೀಕ್ಷಿಸುವ ಇನ್ಸ್ ಪೆಕ್ಟರುಗಳಿಗೆ ಯಾವುದೋ ನ್ಯೂನ್ಯತೆ ಕಂಡುಬಂದರೂ ಅವರು ಈ ಅರ್ಹತೆಗಳಿದ್ದರೂ ಟೈರುಗಳನ್ನು ಸುರಕ್ಷಿತವಲ್ಲ ಎಂಬ ಕಾರಣದಿಂದ ನಾಪಾಸು ಮಾಡಬಹುದು.

ಟೈರು ಯಾವ ದಿನಾಂಕದಂದು ನಿರ್ಮಾಣವಾಗಿದೆ ಎಂದು ಕಂಡುಕೊಳ್ಳುವ ವಿಧಾನ ಹೀಗಿದೆ:






ಟೈರಿನ ಒಂದು ಭಾಗದಲ್ಲಿ ಈ ದಿನಾಂಕವನ್ನು ನಾಲ್ಕು ಅಂಕೆಗಳಲ್ಲಿ ಮುದ್ರಿಸಿರುತ್ತಾರೆ. ಮೊದಲ ಎರಡು ಅಂಕೆಗಳು ಆ ವರ್ಷದ ವಾರವನ್ನೂ, ನಂತರದ ಎರಡು ಅಂಕೆಗಳು ಇಸವಿಯನ್ನೂ ತಿಳಿಸುತ್ತದೆ. ಕೆಳಗಿನ ಚಿತ್ರದಲ್ಲಿ ವಿವರಿಸುವಂತೆ ಈ ಟೈರು 4708 ಎಂಬ ನಾಲ್ಕಂಕಿ ಹೊಂದಿದೆ. ಅದರ ಪ್ರಕಾರ 47 ಅಂದರೆ 47ನೇ ವಾರ. ಇದನ್ನು ನಾಲ್ಕರಿಂದ ಭಾಗಿಸಿದರೆ ತಿಂಗಳು ಸಿಗುತ್ತದೆ. 47/4=11.75 ಅಂದರೆ ನವೆಂಬರ್ ತಿಂಗಳ ಮೂರನೆಯ ವಾರ, 2008ನೆಯ ಇಸವಿಯಲ್ಲಿ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರ ನಿಮ್ಮ ಕಾರಿನ ಟೈರು ಯಾವ ವರ್ಷ ತಯಾರಾಗಿದೆ ಎಂದು ಕಂಡುಕೊಳ್ಳಬಹುದು. ಆರ್.ಟಿ. ಎ ಪ್ರಕಾರ ಈ ದಿನಾಂಕದಿಂದ ಐದುವರ್ಷದವರೆಗೆ ಈ ಟೈರುಗಳನ್ನು ಉಪಯೋಗಿಸಬಹುದು. ಒಂದು ವೇಳೆ ಪಾಸಿಂಗ್ ಆದ ಬಳಿಕ ಈ ಟೈರು ಮುಂದಿನ ಪಾಸಿಂಗಿಗೂ ಮೊದಲೇ ಅಂತಿಮ ದಿನಾಂಕ ದಾಟವುದಿದ್ದರೆ ಹಾಗೂ ಆ ದಿನಾಂಕ ದಾಟಿದರೂ ಟೈರು ಬದಲಿಸದೇ ಇದ್ದರೆ ಹಾಗೂ ಒಂದು ವೇಳೆ ಅಪಘಾತ ಅಥವಾ ಇನ್ನಾವುದೋ ಕಾರಣಕ್ಕೆ ಕಾರಿನ ತಪಾಸಣೆ ನಡೆದು ಟೈರಿನ ಅವಧಿ ಮುಗಿದಿರುವುದು ತಿಳಿದುಬಂದರೆ ಕಾರಿನ ಮಾಲಿಕ ತಪ್ಪಿತಸ್ಥನಾಗಬೇಕಾಗುತ್ತದೆ. ಬಳಿಕ ಏನಾಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ.

ಟೈರಿನಲ್ಲಿ ಸವೆತದ ಬಳಿಕವೂ 1.6mm ನಷ್ಟು ರಬ್ಬರ್ ಉಳಿದಿರಬೇಕು ಎಂಬ ಇನ್ನೊಂದು ಕಟ್ಟಳೆ ಇದೆ. 1.6mm ಕಂಡುಕೊಳ್ಳುವುದು ಹೇಗೆ? ಟೈರಿನ ಚಪ್ಪಟೆ ಭಾಗದ ನಡುವೆ ಇರುವ ಜಾಗದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಉಬ್ಬುಗಳಿರುತ್ತವೆ. ಇವಕ್ಕೆ ಟೈರ್ ವೇರ್ ಇಂಡಿಕೇಟರ್ಸ್ ಎಂದು ಕರೆಯುತ್ತಾರೆ.

ಈ ಭಾಗವನ್ನು ತಳವೆಂದು ಪರಿಗಣಿಸಿ ಅಲ್ಲಿಂದ ಎಷ್ಟು ದಪ್ಪಕ್ಕೆ ಟೈರಿನ ರಬ್ಬರ್ ಉಳಿದಿದೆ ಎಂದು ಅಳೆಯಬೇಕು. ಇದನ್ನು ಅಳೆಯಲು ಟೈರ್ ಡೆಪ್ತ್ ಗೇಜ್ ಎಂಬ ಉಪಕರಣವನ್ನು ಎಲ್ಲಾ ಟೈರು ಅಂಗಡಿಯವರು ಕಡ್ಡಾಯವಾಗಿ ಇರಿಸಿರಬೇಕು ಹಾಗೂ ಗ್ರಾಹಕರು ಕೇಳಿದಾಗ ಇಲ್ಲವೆನ್ನದೇ ಕೊಡಬೇಕು. ಇದರ ಮೂಲಕ ಟೈರಿನಲ್ಲಿ ಉಳಿದಿರುವ ರಬ್ಬರ್ 1.6mm ಗಿಂತಲೂ ಹೆಚ್ಚಿದ್ದರೆ ಟೈರು ಪಾಸ್ ಆಗುತ್ತದೆ. ಪಾಸ್ ಮಾಡಬೇಕೆಂದೇ  ನಾವು ಅಳೆಯಬೇಕಿಲ್ಲ, ನಮ್ಮ ಸುರಕ್ಷತೆಗಾಗಿ ಆಗಾಗ ನಾವೇ ಒಂದು ಅಳತೆಪಟ್ಟಿ ಉಪಯೋಗಿಸಿ ಅಂದಾಜು ಒಂದೂವರೆ ಮಿಮಿ ಇದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು.

ಹಾಗಾಗಿ ನಿಮ್ಮ ಕಾರಿಗೆ ಹೊಸ ಟೈರು ಹಾಕಿಸುವುದಾದರೆ ನಿರ್ಮಾಣ ವರ್ಷದಿಂದ ಐದು ವರ್ಷಗಳ ಕಾಲ ಖಂಡಿತವಾಗಿಯೂ ಉಪಯೋಗಿಸಬಹುದು.

ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ನಿಮ್ಮ ಸ್ನೇಹಿತರು ಹಾಗೂ ಆಪ್ತರಿಗೆ ತಿಳಿಸಿ ಈ ಮಾಹಿತಿಯ ಪ್ರಯೋಜನ ಪಡೆಯುವಂತಾಗಲಿ.
ಇಂತಿ ವಂದನೆಗಳು
'ಸರ್ವೇಜನ ಸುಖಿನೋಭವಂತು'
-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.