ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 25, 2009

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು






ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್ನಾಮಿನ ಜನಪ್ರಿಯ ಮಾದಕದ್ರವ್ಯ. ವಿಯೆಟ್ನಾಂ ನಲ್ಲಿ ಮದ್ಯ ತುಂಬಿದ ಒಂದು ಬಾಟಲಿಯಲ್ಲಿ ಇಡಿಯ ನಾಗರಹಾವನ್ನೇ ಮುಳುಗಿಸಿಟ್ಟಿರುವ ಪೇಯ ಸ್ನೇಕ್ ವೈನ್ (ಕನ್ನಡದಲ್ಲಿ ಹಾಮ್ವದ್ಯ ಎಂದು ಕರೆಯಬಹುದೇ???) ಎಂದೇ ಜನಪ್ರಿಯ. ಬರೆಯ ವಿಯೆಟ್ನಾಂ ಮಾತ್ರವಲ್ಲದೇ ಹಲವು ಆಗ್ನೇಯ ಏಷಿಯಾ ದೇಶಗಳಲ್ಲೂ ಹಲವು ಶತಮಾನಗಳಿಂದ ಈ ಪೇಯ ಜನರಿಗೆ ಕಿಕ್ ನೀಡುತ್ತಿದೆ. ಆದರೆ ನಾಗರ ಹಾವಿನ ವಿಷದಿಂದ ಸಾವು ಕಟ್ಟಿಟ್ಟ ಬುತ್ತಿಯಲ್ಲವೇ? ಅದು ಹೇಗೆ ಹಾವಿನ ವಿಷ ಸೇರಿದ ಮದ್ಯ ಮನುಷ್ಯರನ್ನು ಕೊಲ್ಲುವುದಿಲ್ಲ್? ನಿಜಕ್ಕೂ ಹಾವಿನ ವಿಷ ಒಂದು ಪ್ರೋಟೀನ್. ರಕ್ತದಲ್ಲಿ ಸೇರಿದೊಡನೇ ಅದು ರಕ್ತದಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ನರಮಂಡಲವನ್ನೇ ಘಾಸಿಗೊಳಿಸುವುದರಿಂದಲೇ ಸಾವು ಸಂಭವಿಸುತ್ತದೆ. ಆದರೆ ಮದ್ಯದಲ್ಲಿ ಮಿಶ್ರವಾದ ಹಾವಿನ ವಿಷ ಮದ್ಯ (ಇಥನಾಲ್) ಹುಳಿಬಂದಂತೆ (ಫರ್ಮೆಂಟ್) ಹಾವಿನ ವಿಷ ತನ್ನ ವಿಷಯುಕ್ತ ಗುಣವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಹಾಗಾಗಿ ಮದ್ಯದೊಳಗಿರುವ ಸತ್ತ ಹಾವಿನಷ್ಟೇ ಅದರ ವಿಷವೂ ನಿರಪಾಯಕಾರಿ. ಆದರೆ ಈ ಪ್ರಕ್ರಿಯೆಗೆ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕಾದುದರಿಂದ ಹಾವು ಮುಳುಗಿಸಿದ ಒಂದು ತಿಂಗಳ ಒಳಗೇ ಏನಾದರೂ ರುಚಿ ನೋಡಿದರೆ ಆತಂಕ ಕಟ್ಟಿಟ್ಟ ಬುತ್ತಿ. ಈ ಹಾವ್ಮದ್ಯದಲ್ಲಿ ಬರೆಯ ನಾಗರ ಹಾವಲ್ಲದೇ ಇತರ ಹಾವುಗಳು, ಚೇಳು, ಓತಿಕ್ಯಾತ, ಜಿರಳೆ, ಹಕ್ಕಿಗಳು, ಆಮೆ, ಅಥವಾ ಇವುಗಳಲ್ಲಿ ಒಂದೆರೆಡದ ಸಂಯೋಜನೆಯ ಮದ್ಯವೂ ದೊರಕುತ್ತದೆ. ಬಾಟಲಿಯಿಂದ ಚಿಕ್ಕ ಕಪ್ ಗಳಲ್ಲಿ ಮದ್ಯ ಸುರುವಿ ಗ್ರಾಹಕನಿಗೆ ನೀಡಲಾಗುತ್ತದೆ. ಹೆಚ್ಚಿಗೆ ಈ ಮದ್ಯವನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ. ಬೇರೆ ಧಾನ್ಯಗಳ ಮದ್ಯ ವಿಷವನ್ನು ಅಷ್ಟೊಂದು ಚೆನ್ನಾಗಿ ಹೀರಿಕೊಳ್ಳುವುದಿಲ್ಲ ಎಂದು ಅಕ್ಕಿಯ ಮದ್ಯವನ್ನೇ ಆರಿಸಿಕೊಳ್ಳಲಾಗುತ್ತದೆ. ಹಾವಿನ ವಿಷದಂತೆ ಹಾವಿನ ರಕ್ತಭರಿತ ಮದ್ಯವೂ ಚಲಾವಣೆಯಲ್ಲಿದೆ. ಹಾವಿನ ಮೈಗೆ ಹರಿತವಾದ ಚಾಕುವಿನಿಂದ ಗೆರೆಗಳನ್ನೆಳೆದು ರಕ್ತ ಮದ್ಯದಲ್ಲಿ ಸೇರುವಂತೆ ಮಾಡಲಾಗುತ್ತದೆ. ಹಾವಿನ ಯಕೃತ್ತು ಅಥವಾ ಪಿತ್ತರಸಬೆರೆತ ಮದ್ಯ ಇನ್ನೊಂದು ವಿಶೇಷ. ಅಲ್ಲದೇ ಹಾವಿನ ಇತರ ಅಂಗಗಳಾದ ಚರ್ಮ, ಮಾಂಸ, ಯಕೃತ್ತು ಮೊದಲಾದವುಗಳು ಸೈಡ್ ಡಿಶ್ ಆಗಿಯೂ ಲಭ್ಯ. ಮುಂದಿನ ಸಲ ವಿಯೆಟ್ನಾಂ ಅಥವಾ ಇತರ ಸುತ್ತಮುತ್ತಲ ದೇಶಗಳಿಗೆ ಪ್ರವಾಸ ಹೋದಾಗ ಚಿಕ್ಕ ಕಪ್ಪಿನಲ್ಲಿ ವಿಶೇಷ ಎಂದು ಮದ್ಯ ಕೊಟ್ಟರೆ ಕೊಂಚ ಜಾಗರೂಕರಾಗಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ