ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜನವರಿ 16, 2012

ಗಾಳಿಯೇ ಇಲ್ಲದ ಟೈರ್ - ಬ್ರಿಡ್ಜ್ ಸ್ಟೋನ್ ಸಂಸ್ಥೆಯ ನೂತನ ಬಿಡುಗಡೆ


ಗಾಳಿಯೇ ಬೇಕಿಲ್ಲದ ಹೊಸ ಟೈರ್ ನ ಅವಿಷ್ಕಾರದ ವಿಷಯವನ್ನು ಖ್ಯಾತ ಟೈರ್ ನಿರ್ಮಾಣ ಸಂಸ್ಥೆಯಾದ ಬ್ರಿಡ್ಜ್ ಸ್ಟೋನ್ ಕಳೆದ ತಿಂಗಳು ಪ್ರಕಟಿಸಿದೆ. ನಾನ್ ನ್ಯೂಮಾಟಿಕ್ (non-pneumatic) ಅಥವಾ ವಾಯುರಹಿತ ಟೈರುಗಳ ತಂತ್ರಜ್ಞಾನದ ಪರಿಕಲ್ಪನೆ ಬೆನ್ನು ಹತ್ತಿರುವ ಹಲವು ಸಂಸ್ಥೆಗಳ ಪೈಕಿ ಬ್ರಿಡ್ಜ್ ಸ್ಟೋನ್ ಸಹಾ ಒಂದು. ಈಗ ಬಳಸಲ್ಪಡುತ್ತಿರುವ ಟೈರುಗಳ ಬದಲಿಗೆ ನೇರವಾಗಿ ಬಳಸಬಹುದಾದ ವಾಯುರಹಿತ ಟೈರಿನ ಆವಿಷ್ಕಾರ ಈಗ ನನಸಾಗಿದೆ.

ಅತಿ ಕಡಿಮೆ ಪ್ರದೂಷಣೆ ಇರುವ, ಪರಿಸರಕ್ಕೆ ಹಾನಿಮಾಡದ, ವಾತಾವರಣಕ್ಕೆ ಅತಿಕಡಿಮೆ ಪ್ರಮಾಣದಲ್ಲಿ ಇಂಗಾಲವನ್ನು ಬಿಡುಗಡೆಮಾಡುವ ಲಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಟೈರನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಇದಕ್ಕೆ ಬಳಸಲಾಗುವ ಕಚ್ಚಾವಸ್ತುಗಳನ್ನು ಹೆಚ್ಚೂಕಡಿಮೆ ಸಂಪೂರ್ಣವಾಗಿ ಮರುಬಳಕೆ ಮಾಡಬಹುದು. ಮಧ್ಯಭಾಗದ ರಿಮ್ ಹಗುರವಾದ ಆದರೆ ಧೃಡವಾದ ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ. ಟೈರಿನ ಉಳಿದ ಭಾಗದಲ್ಲಿ ನಮ್ಮ ಬೈಕ್ ಚಕ್ರದಲ್ಲಿರುವಂತಹ ಕಡ್ದಿಗಳ ಬದಲಿಗೆ ವಿಶೇಷ ಥರ್ಮೋಪ್ಲಾಸ್ಟಿಕ್ ರೆಸಿನ್ ವಸ್ತುವಿನ ಅಗಲ ಪಟ್ಟಿಗಳು ಒಂದು ವಿಶೇಷ ವಿನ್ಯಾಸದಲ್ಲಿ ಅಚ್ಚುಹಾಕಲ್ಪಟ್ಟಿದೆ. ಈ ವಿನ್ಯಾಸದಿಂದ ಸಾಮಾನ್ಯ ಟೈರು ಹೊರಬಲ್ಲಕ್ಕಿಂತಲೂ ಮೂರು ಪಟ್ಟು
 ಹೆಚ್ಚಿನ ಭಾರವನ್ನು ಈ ಟೈರು ಹೊರಬಲ್ಲದು. ಆಯಾ ಕಾರಿಗೆ ಅಗತ್ಯವಿರುವ ಗಾಳಿಯ ಒತ್ತಡಕ್ಕೆ ಅನುಗುಣವಾಗಿ ಈ ಟೈರನ್ನು ನಿರ್ಮಿಸಲಾಗಿದ್ದು ಪರಿಧಿಯಲ್ಲಿರುವ ರಬ್ಬರ್ ಸಾಮಾನ್ಯ ಟೈರಿಗೆ ಬಳಸುವ ರಬ್ಬರೇ ಆಗಿದೆ. ಈ ರಬ್ಬರ್ ಸವೆದ ಬಳಿಕ ಸುಲಭವಾಗಿ ಹೊಸ ರಬ್ಬರ್ ಕವಚವನ್ನು ಬದಲಿಸಿಕೊಳ್ಳಬಹುದು.




ಈಗ ಬಳಕೆಯಲ್ಲಿರುವ ವಾಯು ತುಂಬಿಸುವ ಟೈರುಗಳಿಗೆ ಹೋಲಿಸಿದರೆ ವಾಯುರಹಿತ ಟೈರುಗಳಿಂದ ಹಲವು ಅನುಕೂಲತೆಗಳಿವೆ. ಮೊದಲನೆಯದಾಗಿ ವೇಗದಲ್ಲಿರುವ ಕಾರಿನ ಟೈರ್ ಸ್ಪೋಟಗೊಂಡು ಆಗುವ ಅನಾಹುತಕ್ಕೆ ಕಡಿವಾಣ. ಎರಡನೆಯದಾಗಿ ಗಾಳಿಯೇ ಇಲ್ಲದಿರುವುದರಿಂದ ಟೈರಿನ ವಾಯು ಒತ್ತಡ ಅವಲಂಬಿಸಿ ಏರುಪೇರಾಗುವ ಮೈಲೇಜ್ ಪ್ರಶ್ನೆಯೇ ಇಲ್ಲ. ಒಂದು ವೇಳೆ ಮೊಳೆ ಮುಂತಾದ ಮೊನಚಾದ ವಸ್ತುಗಳು ಚುಚ್ಚಿಕೊಂಡರೂ ಪಂಚರ್ ಆಗುವ ಮಾತೇ ಇಲ್ಲ. ಅಲ್ಲೇ ಚುಚ್ಚಿಕೊಂಡಿರುವ ಮೊಳೆಯನ್ನು ಬಳಿಕ ಯಾವಾಗಲಾದರೂ ಕಿತ್ತು ಹಾಕಿದರಾಯಿತು. ಸಾಮಾನ್ಯ ಟೈರಿನ ಕಾಲುಭಾಗದಷ್ಟು ಭಾರವಿರುವ ಈ ಟೈರುಗಳಿಂದ ಹೆಚ್ಚಿನ ಮೈಲೇಜ್ ಸಿಗುತ್ತದೆ. ವಾಹನ ಚಾಲನೆಯಲ್ಲಿರುವಾಗ ವಿಶೇಷ ವಿನ್ಯಾಸದ ಪಟ್ಟಿಗಳ ಮೂಲಕ ಗಾಳಿ ಹಾಯುವುದರಿಂದ ಟೈರು ಬಿಸಿಯಾಗುವುದೇ ಇಲ್ಲ.





ಈ ಹಿಂದೆಯೂ ಗಾಳಿ ಇಲ್ಲದ ಟೈರ್ ನಿರ್ಮಿಸಲು ಖ್ಯಾತ ಟೈರು ಸಂಸ್ಥೆಗಳಾದ ಮಿಶೆಲಿನ್ ಹಾಗೂ ರೆಸಿಲಿಯೆಂಟ್ ಟೆಕ್ನಾಲಜೀಸ್ ಪ್ರಯತ್ನಿಸಿ ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದ್ದವು. ಆದರೆ ಈ ಟೈರುಗಳು ವಿಪರೀತ ದುಬಾರಿಯಾದವೂ, ಅಳವಡಿಸಲು ವಾಹನದ ವಿನ್ಯಾಸದಲ್ಲಿ ಬದಲಾವಣೆ ಬೇಡುವಂತಹವೂ, ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ಉತ್ಪಾದಿಸಲು ಆಗದಂತಹವೂ ಆಗಿದ್ದರಿಂದ ಹೆಚ್ಚಿನ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಬ್ರಿಡ್ಜ್ ಸ್ಟೋನ್ ಟೈರು ಮಾತ್ರ ಈ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಭವಿಷ್ಯದಲ್ಲಿ ಜನರ ಮೆಚ್ಚುಗೆ ಗಳಿಸುವ ಭರವಸೆ ಮೂಡಿಸಿದೆ.
ಮಿಶೆಲಿನ್

ರೆಸಿಲಿಯೆಂಟ್ ಟೆಕ್ನಾಲಜೀಸ್


ಈಗಿನ್ನೂ ಪ್ರಾರಂಭದ ಹಂತದಲ್ಲಿರುವ ಈ ತಂತ್ರಜ್ಞಾನ ಟೈರು ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಹುದು. ಥರ್ಮೋಪ್ಲಾಸ್ಟಿಕ್ ರೆಸಿನ್ ಸಹಾ ಲೋಹಕ್ಕಿಂತ ತುಂಬಾ ಕಡಿಮೆ ಬೆಲೆಯುಳ್ಳದ್ದದುದರಿಂದ ಹಾಗೂ ರಬ್ಬರ್ ಸಹಾ ಕಡಿಮೆ ಪ್ರಮಾಣದಲ್ಲಿ ಉಪಯೋಗವಾಗುವುದರಿಂದ ಪ್ರತಿ ಟೈರಿನ ಬೆಲೆಯೂ ಕಡಿಮೆಯಾಗಬಹುದು. ಆದರೆ ಆ ಹಂತ ತಲುಪಿ ಜನಸಾಮಾನ್ಯರಿಗೆ ಲಭ್ಯವಾಗಬೇಕಾದರೆ ಎಷ್ಟು ವರ್ಷ ಬೇಕಾಗಬಹುದೋ ಕಾದು ನೋಡಬೇಕು. 

4 ಕಾಮೆಂಟ್‌ಗಳು:

  1. Dear Arshad
    Wonderful article.... you r the first to share this information. I do watch news & other innovative programs in the media, but this information is much elaborated & right presentation

    I expect many articles like this……

    ಪ್ರತ್ಯುತ್ತರಅಳಿಸಿ
  2. "ಬ್ಲಾಗ್‌ ಬೆಂಬಲಿಗರ" ಗಡ್ಜೆಟ್‌ ಅನ್ನು ನಿಮ್ಮ ಬ್ಲಾಗ್‌ನಲ್ಲಿ ಹಾಕಿರಿ. ಇದರಿಂದ ಹೆಚ್ಚಿನವರು ಓದಲು ಸಹಾಯಕವಾಗುತ್ತದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತಮ್ಮ ಸಲಹೆಗೆ ಧನ್ಯವಾದಗಳು.
      ಬೆಂಬಲಿಗರು ಗ್ಯಾಡ್ಜೆಟ್ ಇನ್ನೂ ಪ್ರಾಯೋಗಿಕ ಎಂದು ಬರುತ್ತಿದೆ, ಅಳವಡಿಸಿಕೊಳ್ಳಲು ಲಿಂಕ್ ಇಲ್ಲ.
      ಪರ್ಯಾಯವಾದ ಬೇರೆ ಗ್ಯಾಡ್ಜೆಟ್ ಇದ್ದರೆ ಸೂಚಿಸಿ.
      ವಂದನೆಗಳೊಂದಿಗೆ - ಅರ್ಶದ್.

      ಅಳಿಸಿ