ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಮಾರ್ಚ್ 11, 2011

ಬೆಂಗಳೂರು: ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಲೋಕಾರ್ಪಣೆ- ಅಧ್ಯಕ್ಷತೆ ವಹಿಸಿದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ


ಮುನ್ನುಡಿ ಬರೆದ ಡಾ. ನಾ ಸೋಮೇಶ್ವರ, ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಉಪಸ್ಥಿತಿ














ಬೆಂಗಳೂರು, ಮಾರ್ಚ್ 8: ಅನಿವಾಸಿ ಕನ್ನಡಿಗ ಶ್ರೀ ಅರ್ಶದ್ ಹುಸೇನ್ ಅವರು ಬರೆದಿರುವ ವಿಸ್ಮಯ ಪ್ಲಸ್ ಕೃತಿ ಕಳೆದ ಮಾರ್ಚ್ ರ ಸೋಮವಾರ ಸಂಜೆ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಿಲಾಯೆನ್ಸ್ ಟೈಮ್ ಔಟ್ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆಗೊಂಡಿತು.
 

 
ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದೂರದರ್ಶನ ಚಂದನ ವಾಹಿನಿಯ ಯಶಸ್ವಿ ಕ್ವಿಜ್ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಆಗಿರುವ ಡಾ. ನಾ. ಸೋಮೇಶ್ವರ ಹಾಗೂ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀ ಬಿ.ಎಂ. ಹನೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮ ಸಂಜೆ ಸುಮಾರು ಆರುವರೆಗೆ ಪ್ರಾರಂಭವಾಯಿತು. ಹಲವು ಟೀವಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟಿ ಶ್ರೀಮತಿ ಕಸ್ತೂರಿ ಈರಣ್ಣ ಮೂಲಿಮನಿಯವರು ಸಭಿಕರನ್ನು ಸ್ವಾಗತಿಸಿದರು. ಹಲವು ಟೀವಿ ಸಂಗೀತ ಸ್ಪರ್ಧೆಗಳಲ್ಲಿ ಜಯಗಳಿಸಿರುವ ಕುಮಾರಿ ತನ್ಮಯ ತನ್ನ ಸುಶ್ರಾವ್ಯ ಕಂಠದಿಂದ ಸ್ವಾಗತಗೀತೆಯನ್ನು ಹಾಡಿದಳು.

 

ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ನಗರದ ಸುರಾಮಾ ಕಾಲೇಜಿನ ಗ್ರಂಥಪಾಲಕರಾಗಿರುವ ಡಾ. ಬಿ.ಆರ್ ಸತ್ಯನಾರಾಯಣರವರು ವಹಿಸಿದ್ದರು.

ಬಳಿಕ ಮಾತನಾಡಿದ ಶ್ರೀ ಬಿ.ಎಂ. ಹನೀಫ್ ವಿಸ್ಮಯ ಪ್ಲಸ್ ಕನ್ನಡಕ್ಕೆ ಒಂದು ಹೊಸರೂಪದ ಕೊಡುಗೆಯಾಗಿದೆ, ಇತ್ತೀಚೆಗೆ ಟೀವಿಯ ಪ್ರವೇಶದಿಂದ ಓದುಗರಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳಾ ಓದುಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು ಈ ಸಂಖ್ಯೆಯಲ್ಲಿ ಏರಿಕೆಗೆ ಕರೆನೀಡಿದರು. ಟೀವಿ ಧಾರಾವಾಹಿಗಳ ಕಥೆಗಿಂತಲೂ ಪುಸ್ತಕಗಳು ನೀಡುವ ಜ್ಞಾನ ಹೆಚ್ಚಿನ ಮಹತ್ವದ್ದಾಗಿವೆ ಎಂದು ತಿಳಿಸಿದರು. ಪುಸ್ತಕವೊಂದು ಪ್ರಕಟಣೆಗೊಂಡರೆ ಸಮಾಜಕ್ಕೆ ಸಾಂಸ್ಕತಿಕ ಕೊಡುಗೆಯೊಂದು ಲಭ್ಯವಾದಂತಾಗುತ್ತದೆ, ಇದುವರೆಗೆ ಕನ್ನಡದಲ್ಲಿ ವಿಜ್ಞಾನದ ವಿಷಯದಲ್ಲಿ ಆಸಕ್ತಿಯಿಂದ ಬರೆಯುವವರು ವಿರಳವಾಗಿದ್ದಾರೆ, ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಹಲವು ಲೇಖನಗಳನ್ನು ಬರೆದಿದ್ದಾರೆ. ಲೇಖಕರ ಹಲವು ಲೇಖನಗಳು ಸುಧಾ ವಾರಪತ್ರಿಕೆಯಲ್ಲಿ ಈಗಾಗಲೇ ಪ್ರಟಕ‍ವಾಗಿವೆ, ಅದರಲ್ಲೂ ಎರಡು ಲೇಖನಗಳು ಮುಖಪುಟ ಲೇಖನಗಳಾಗಿ ಪ್ರಕಟವಾಗಿವೆ ಎಂದು ತಿಳಿಸಿದರು.
 
ಇದುವರೆಗೆ ಲೇಖಕರನ್ನು ತಾವು ಬರೆಯ ಈಮೇಲ್ ಮತ್ತು ಫೋನ್ ಸಂಭಾಷಣೆಗಳ ಮೂಲಕ ಮಾತ್ರ ಸಂಪರ್ಕಿಸುತ್ತಿದ್ದು ಇಂದೇ ಮುಖತಃ ಭೇಟಿಯಾಗುತ್ತಿದ್ದೇವೆ. ಆದರೂ ವಿದೇಶದಲ್ಲಿದ್ದೂ ಕನ್ನಡ ಪುಸ್ತಕವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲು ತಮಗೆ ಹರ್ಷವಾಗುತ್ತಿದೆ ಎಂದು ಅವರು ತಿಳಿಸಿದರು.

 ನಂತರ ಮಾತನಾಡಿದ ಶ್ರೀ ಮಹಮ್ಮದ್ ರಫಿಯವರು ಲೇಖಕರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರಾಗಿದ್ದು ನವಾಯತ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ನವಾಯತ್ ಸಮುದಾಯದ ಇವರು ವಿಸ್ಮಯ ಪ್ಲಸ್ ಕೃತಿಯ ಮೂಲಕ ಪ್ರಥಮ ಕನ್ನಡ ಲೇಖಕರಾಗಿರುವುದು ಸಮುದಾಯಕ್ಕೇ ಸಂತೋಷಕರ ವಿಷಯವಾಗಿದೆ, ಇವರಿಂದ ಇನ್ನೂ ಹಲವು ಕೃತಿಗಳು
ಹೊರಹೊಮ್ಮಲಿ ಎಂದು ಹಾರೈಸಿದರು. 
 


ಬಳಿಕ ಮಾತನಾಡಿದ ಡಾ. ನಾ. ಸೋಮೇಶ್ವರರವರು ವಿಸ್ಮಯ ವಿಷಯದ ಮೇಲೆ ಹಲವು ವ್ಯಾಖ್ಯಾನಗಳ ಮೂಲಕ ಬೆಳಕು ಚೆಲ್ಲಿದರು. ಒಂದು ಜೀವಕೋಶದಿಂದ ಪ್ರಾರಂಭವಾಗುವ ಮಾನವ ಜೀವ ಒಂದು ಪರಿಪೂರ್ಣ ಶರೀರವಾಗುವವರೆಗೆ ಹೊಂದುವ ಪರಿವರ್ತನೆಗಳೇ ಒಂದು ವಿಸ್ಮಯ, ಈ ಕೃತಿಯಲ್ಲಿ ಹಲವು ದೇಶಗಳ ವಿಸ್ಮಯಗಳ ಬಗ್ಗೆ ವಿವರ ನೀಡಲಾಗಿವೆ. ಆದರೆ ಕರ್ನಾಟಕದಲ್ಲಿಯೇ ಹಲವಾರು ವಿಸ್ಮಯಗಳಿವೆ ಎಂದು ತಿಳಿಸಿದರು. ಬೀದರಿನ ಪಿಸುಗುಡುವ ಗೋಪುರ, ಕೊಡಚಾದ್ರಿಯ ತುಕ್ಕು ಹಿಡಿಯದ ಕಬ್ಬಿಣದ ಕಂಭ, ವರ್ಷದಲ್ಲೊಂದು ದಿನ ಮಾತ್ರ ಚಂದ್ರನ ಪ್ರತಿಬಿಂಬದ ಬೆಳಕು ಶಿವಲಿಂಗದ ಮೇಲೆ ಬೀಳುವ ನರಸಿಂಹ ಝರನಾ ಗುಹಾಲಯ, ಬೆಂಗಳೂರಿನಲ್ಲಿರುವ ಪಚ್ಚೆ ಗಣಿ, ಜಗತ್ತಿನಲ್ಲಿಯೇ ಅತ್ಯಂತ ಆಳದ ಗಣಿಯಾಗಿರುವ ಕೋಲಾರದ ಚಿನ್ನದ ಗಣಿ, ಆ ವಿಷಯದ ಮೇಲೆ ಸಂಶೋಧನೆ ನಡೆಸಿರುವ ಪಾಕಿಸ್ತಾನದ ಸಂಶೋಧಕರು ವಿಶ್ವಖ್ಯಾತಿ ದೊರಕಿಸಿಕೊಂಡಿದ್ದರೂ ಈ ಬಗ್ಗೆ ವಿವರಣೆ ನೀಡುವ ಪ್ರಯತ್ನ ನಮ್ಮ ಜನರಲ್ಲಿ ಮೂಡುತ್ತಿಲ್ಲ ಎಂದು ವಿಷಾದಿಸಿದರು.

 
 

ಅಲ್ಲದೇ ನೀಹಾರಿಕೆ, ಆಕಾಶ, ನಕ್ಷತ್ರ, ಬ್ರಹ್ಮಾಂಡ ಮೊದಲಾದ ವಿಷಯಗಳ ಬಗ್ಗೆ ಅವರು ಹಲವು ಮಾಹಿತಿಗಳನ್ನು ನೀಡಿದರು. ವಿಸ್ಮಯ ಪ್ಲಸ್ ಜಗತ್ತಿನ ಹಲವು ವಿಸ್ಮಯಗಳ ಬಗ್ಗೆ ಬಳಕು ಚೆಲ್ಲುವ ಕೃತಿಯಾಗಿದ್ದು ಜೊತೆಗೆ ಪೂರಕ ಮಾಹಿತಿಯ ಸೀಡಿಯೊಂದನ್ನು ನೀಡಲಾಗಿದ್ದು ಪ್ರಾಯಶಃ ಇದು ಕನ್ನಡದ ಮಟ್ಟಿಗೆ ಪ್ರಥಮ ಪ್ರಯೋಗವಾಗಿರಬಹುದು ಎಂದು ಅವರು ತಿಳಿಸಿದರು. ತಾವು ಲೇಖಕರನ್ನು ನಾಲ್ಕಾರು ವರ್ಷಗಳಿಂದ ಅಂತರ್ಜಾಲದ ಮೂಲಕ ಬಲ್ಲೆನಾದರೂ ಇಂದೇ ಮುಖತಃ ಭೇಟಿಯಾಗುತ್ತಿದ್ದೇನೆ, ವಿದೇಶದಲ್ಲಿದ್ದೂ ಕನ್ನಡದ ಬಗ್ಗೆ ಅಪಾರ ಕಳಕಳಿ ವಹಿಸಿರುವ ಲೇಖಕರ ಈ ಕೃತಿ ಪ್ರಥಮ ಪ್ರಯೋಗವಾಗಿದ್ದು ಕೃತಿಗೆ ಮುನ್ನುಡಿ ಬರೆದಿರುವುದು ತಮಗೆ ಸಂತೋಷವಾಗುತ್ತಿದೆ ಎಂದು ಅವರು ತಿಳಿಸಿದರು.


ಆ ಬಳಿಕ ಡಾ. ನಾ ಸೋಮೇಶ್ವರರು ವಿಸ್ಮಯ ಪ್ಲಸ್ ಕೃತಿಯನ್ನು ಅನಾವರಣಗೊಳಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.


 

ಬಳಿಕ ಮಾತನಾಡಿದ ಲೇಖಕ ಶ್ರೀ ಅರ್ಶದ್ ಹುಸೇನ್ ತಮ್ಮ ಕೃತಿಯ ಬಗ್ಗೆ ಕೆಲವು ಮಾತನಾಡಿ ವಿಸ್ಮಯ ಪ್ಲಸ್ ಕೃತಿಯನ್ನು ರಚಿಸಲು ಪ್ರೇರಣೆ ನೀಡಿದ ಪೂರ್ಣಚಂದ್ರ ತೇಜಸ್ವಿಯವರ ವಿಸ್ಮಯ ಪುಸ್ತಕಗಳನ್ನು ಉಲ್ಲೇಖಿಸಿದರು. ಈ ಕೃತಿಯ ರಚಿನೆಯಲ್ಲಿ ನೆರವು ನೀಡಿದವರನ್ನು ಉಲ್ಲೇಖಿಸಿ ಎಲ್ಲರಿಗೂ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ವಿದೇಶದಲ್ಲಿದ್ದು ಬೆಂಗಳೂರಿನಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸುವ ಕನಸಿಗೆ ನೀರೆರೆದು ನನಸು ಮಾಡುವಲ್ಲಿ ಸಹಕರಿಸಿದ ಶ್ರೀ ಗೋಪಿನಾಥ ರಾವ್, ಶ್ರೀ ಗಣೇಶ್ ರೈ, ಶ್ರೀ ಬೆಳಗೂರು, ಶ್ರಿ ಈರಣ್ಣ ಮೂಲಿಮನಿ, ಶ್ರೀ ಸಂಜಯ್, ಶ್ರೀ ಬಿ.ಎಂ. ಹನೀಫ್. ಡಾ. ನಾ. ಸೋಮೇಶ್ವರ, ಪುಸ್ತಕವನ್ನು ಪ್ರಾಯೋಜಿಸಿದ ಶ್ರೀ ಜಫರುಲ್ಲಾ ಖಾನ್, ಪುಸ್ತಕ ಬಿಡುಗಡೆಗೆ ಸ್ಥಳಾವಕಾಶ ನೀಡಿದ ರಿಲಾಯೆನ್ಸ್ ಟೈಮ್ ಔಟ್ ನ ಶ್ರೀ ಮಂಜುನಾಥ ನಾಯಕ್, ಪುಸ್ತಕದ ವಿತರಣೆಯ ಭಾರ ಹೊತ್ತಿರುವ ನವಕರ್ನಾಟಕ ಪಬ್ಲಿಕೇಶನ್ ಸಂಸ್ಥೆಯ ಶ್ರೀ ಎ.ಆರ್. ಉಡುಪ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸ್ನೇಹಿತರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಇಂದಿನ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ಲೇಖಕಿ ನೇಮಿಚಂದ್ರರವರು ಆಗಮಿಸಬೇಕಾಗಿತ್ತು, ಆದರೆ ಅನಿವಾರ್ಯ ಕಾರ್ಯನಿಮಿತ್ತ ಅವರು ದೆಹಲಿಗೆ ಹೋಗಬೇಕಾಗಿ ಬಂದಿದರಿಂದ ಅವರಿಲ್ಲಿ ಉಪಸ್ಥಿತರಿಲ್ಲ ಎಂದು ಅವರು ತಿಳಿಸಿದರು.


ಬಳಿಕ ವೇದಿಕೆಯನ್ನಲಂಕರಿಸಿದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಲೇಖಕರನ್ನು ತಾನು ದುಬೈಯಲ್ಲಿ ಒಂದೆರಡು ಬಾರಿ ಬೇಟಿಯಾಗಿದ್ದು ಆ ನಾಡಿನಲ್ಲಿ ಅವರು ಕನ್ನಡಕ್ಕೆ ನೀಡುತ್ತಿರುವ ಸೇವೆಯನ್ನು ಗಮನಿಸಿದ್ದೆ. ಕಳೆದ ವರ್ಷದ ಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.ವಿದೇಶದಲ್ಲಿದ್ದು ಕೇವಲ ಅಂತರ್ಜಾಲದ ಮೂಲಕ ಡಾ. ನಾ. ಸೋಮೇಶ್ವರ ಹಾಗೂ ಬಿ.ಎಂ. ಹನೀಫ್ ರಂತಹ ಗಣ್ಯರೊಂದಿಗೆ ಸಂಪರ್ಕ ನಾಧಿಸಿ ಈ ಕೃತಿಯನ್ನು ಹೊರತಂದಿರುವುದು ಖಂಡಿತವಾಗಿಯೂ ಮೆಚ್ಚತಕ್ಕ ಪ್ರಯತ್ನ ಎಂದು ಅವರು ತಿಳಿಸಿದರು.

 
 

ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು ಗ್ರಂಥಾಲಯಗಳಲ್ಲಿ ಜನರು ಆಗಮಿಸುವುದು ಕಡಿಮೆಯಾಗಿದೆ. ಓದುವ ಅಭ್ಯಾಸಕ್ಕೆ ಒತ್ತು ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು ಮುಂದಿನ ವರ್ಷದಿಂದ ರಾಜ್ಯದ ಪ್ರತಿಯೊಂದೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಪ್ರಕಟಿಸಿದರು. ಈಗಾಗಲೇ ರಾಜ್ಯದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಪಠ್ಯಸಂಬಂಧಿ ಕಾರ್ಯಕ್ರಮಗಳು ನಡೆಯುತ್ತಿದ್ದು ಅದರ ಮುಂದುವರೆದ ಅಂಗವಾಗಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ ಗ್ರಂಥಾಲಯ ತೆರೆಯಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುತ್ತಿರುವುದು ಟೀವಿ ಎನ್ನುವ ವಿಷಯದಲ್ಲಿ ಹುರುಳಿಲ್ಲ. ಆದರೆ ಕನ್ನಡದಲ್ಲಿ ಯುವಪೀಳಿಗೆಯನ್ನು ಆಕರ್ಷಿಸುವ ವೈವಿಧ್ಯಮಯ ಗ್ರಂಥಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವುದೇ ಕೊರತೆ. ಈಗ ಲೋಕಾರ್ಪಣೆಯಾಗಿರುವ ವಿಸ್ಮಯ ಪ್ಲಸ್ ಕೃತಿ ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಕೊರತೆಯನ್ನು ತುಂಬಲಿದೆ ಎಂದು ನುಡಿದರು. ವಿದೇಶದಲ್ಲಿದ್ದೂ ಕನ್ನಡದಲ್ಲಿ ಕೃತಿಯನ್ನು ಹೊರತಂದ ಲೇಖಕರ ಪ್ರಯತ್ನವನ್ನು ಶ್ಲಾಘಿಸಿದ ಅವರು ಲೇಖಕರಿಂದ ಇನ್ನೂ ಹಲವಾರು ಕೃತಿಗಳು ಹೊರಬರಲಿ ಹಾಗೂ ಅವರ ಅಂತರ್ಜಾಲದ ಜಾಲ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು.


ಅಂತಿಮವಾಗಿ ಶ್ರೀ ಚೇತನ್ ರವರು ವಂದನಾರ್ಪಣೆ ಸಲ್ಲಿಸಿದರು. ಎಲ್ಲಾ ಆಹ್ವಾನಿತ ಅತಿಥಿಗಳಿಗೆ ಮತ್ತು ವಿಸ್ಮಯ ಪ್ಲಸ್ ಕೃತಿಯ ಲೋಕಾರ್ಪಣೆಗೆ ಸಹಕರಿಸಿದ ಗಣ್ಯರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.


 

ಆಗಮಿಸಿದ ಎಲ್ಲರಿಗೂ ಲಘು ಉಪಾಹಾರವನ್ನು ನೀಡಿ ಬೀಳ್ಕೊಡಲಾಯಿತು. ಹಲವು ಟೀವಿ ಹಾಗೂ ವಾರ್ತಾ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮುರ್ಡೇಶ್ವರ ನವಾಯತ್ ಸಂಘಟನೆಯ ಸದಸ್ಯರು, ಅಕ್ಕ ಪ್ರಕಾಶನದ ಶ್ರೀ ಮುಕುಂದರಾಜ್ ಹಾಗೂ ಶ್ರೀ ವಿಶಕಂಠೇಗೌಡ, ಶ್ರೀ ಎಂ.ಹೆಚ್, ಇಕ್ಬಾಲ್ ಅಹಮದ್, ಶ್ರೀ ಎಂ. ಹೆಚ್. ಉಬೇದುಲ್ಲಾ, ಎಂ.ಹೆಚ್, ಮಕ್ಸೂದ್ ಅಲಿ, ಎಂ.ಹೆಚ್, ತಾಹಿರ್ ಹುಸೇನ್, ಶ್ರೀ ಸಂಜಯ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 


ವರದಿ: ಅರ್ಶದ್ ಹುಸೇನ್ ಎಂ.ಹೆಚ್.
ಚಿತ್ರಗಳು: ತಾಹಿರ್ ಹುಸೇನ್ ಎಂ.ಹೆಚ್.


4 ಕಾಮೆಂಟ್‌ಗಳು:

  1. It was indeed pleasure hosting this function @ Reliance TimeOut, Cunningham Road-Blore. On behalf of Reliance TimeOut I wish you gr8 success...Manjunath Nayak

    ಪ್ರತ್ಯುತ್ತರಅಳಿಸಿ
  2. Dear Mr. Manjunath Nayak
    Thank you very much for the courtesy.
    We never expected the function would be such a grand one.
    Thank you on behalf of my family and entire nawayat community.
    Arshad Hussain.

    ಪ್ರತ್ಯುತ್ತರಅಳಿಸಿ
  3. hollow sir congratulation of urs first book is release i have some busy in the work so i don't come to attend that function so sorry


    i just say it urs effort is fantastic thanks.

    ಪ್ರತ್ಯುತ್ತರಅಳಿಸಿ
  4. ನೆಚ್ಹಿನ ಅರ್ಶದ್ ಹುಸೇನ್,

    ನಿಮ್ಮೊಡನೆ ದೂರವಾಣಿಯ ಮೂಲಕ ಪರಿಚಯವಾಗಿ ಸುಮಾರು ೨ ವರುಷವಾಯಿತು. ನಾನು ಬೆ೦ಗಳೂರಿನಲ್ಲಿದ್ದರೂ, ಮಾರ್ಚ್ ೮, ೨೦೧೧ ಕ್ಕೆ ನೀವು ಬರೆದಿರುವ ’ವಿಸ್ಮಯ ಪ್ಲಸ್’ ಕೃತಿ ಸಾರ್ವಜನಿಕವಾಗಿ ಬಿಡುಗಡೆಯಾಗಿದ್ದು ತಿಳಿದಿರಲಿಲ್ಲ. ನಿಮ್ಮನ್ನು ಮುಖತಃ ಭೇಟಿಯಾಗುವ ಸ೦ದರ್ಭ ಕಳೆದು ಹೋಯಿತೆ೦ದು ಬೇಸರವಾಯಿತು. ನೀವು ಬರೆದ ಪುಸ್ತಕ ಇನ್ನೂ ನನ್ನ ಕೈ ಸೇರಲಿಲ್ಲ. ಬಹು ಬೇಗನೆ ಅದನ್ನು ಖರೀದಿಸಿ ಓದಬೇಕೆ೦ಬ ಹ೦ಬಲವಾಗಿದೆ. ನಿಮ್ಮ ಮೂಲ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಎ೦ದು ಗೊತ್ತಿರಲಿಲ್ಲ. ನಾನು ಹುಟ್ಟಿದ್ದು ಭಟ್ಕಳದಲ್ಲಿ. ನನ್ನ ಅಮ್ಮನ ಊರು ಭಟ್ಕಳ.

    ಇದೇ ರೀತಿ ನಿಮ್ಮ ಕನ್ನಡದ ಬರವಣಿಗೆಯು ಪುಸ್ತಕ ರೂಪದಲ್ಲಿ ಹೊರ ಬ೦ದು ಓದುಗರ ಕೈ ಸೇರಲಿ ಎ೦ದು ಹಾರೈಸುವೆ.

    ಆರ್.ಜಿ.ಭಟ್, ಬೆ೦ಗಳೂರು

    ಪ್ರತ್ಯುತ್ತರಅಳಿಸಿ