ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಮಾರ್ಚ್ 27, 2010

ವಿಶ್ವದ ಏಕಮಾತ್ರ ಅಮರಜೀವಿ

ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು ಪಡೆದುಕೊಳ್ಳುವ ಸಲುವಾಗಿ ನಡೆಸಿದ ಪ್ರಯತ್ನಗಳು ನಮ್ಮ ಪುರಾಣಗಳಲ್ಲಿವೆ, ಹಲವು ಥ್ರಿಲ್ಲರ್ ಕಥೆಗಳಿಗೆ ಜೀವಾಳವಾಗಿವೆ.

ವಿಶ್ವದ ಅಸಂಖ್ಯ ಜೀವಿಗಳಲ್ಲಿ ಇನ್ನೂ ಎಷ್ಟೊ ಜೀವಿಗಳು ಇನ್ನೂ ಮಾನವನಿಗೆ ಅಪರಿಚಿತವಾಗಿಯೇ ಉಳಿದಿವೆ. ನಿರಂತರವಾಗಿ ಜರುಗುತ್ತಿರುವ ಸಂಶೋಧನೆಗಳಿಂದ ಆಗಾಗ ಹೊಸಜೀವಿಗಳ ಅಸ್ತಿತ್ವದ ಬಗ್ಗೆ ಹಾಗೂ ಜೀವನಕ್ರಮಗಳ ಬಗ್ಗೆ ವಿವರಗಳು ದೊರಕಿ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಿವೆ. ಇತ್ತೀಚೆಗೆ ದೊರಕಿರುವ ಮಾಹಿತಿಗಳ ಪ್ರಕಾರ ಸಾಗರಜೀವಿಯಾದ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ (turritopsis nutricula) ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿಫಿಶ್) ವಿಶ್ವದ ಏಕಮಾತ್ರ ಅಮರಜೀವಿಯಾಗಿದೆ. ಅಂದರೆ ಅದಕ್ಕೆ ಸಹಜವಾದ ಸಾವೇ ಇಲ್ಲ. ಸಾವು ಬರುದೇನಿದ್ದರೂ ಅದು ಬೇರೆ ಜೀವಿಗೆ ಆಹಾರವಾದಾಗ ಮಾತ್ರ.
ಈ ಲೋಳೆಮೀನು ಹ್ರೈಡ್ರೊಜೋವಾ ಅಕಶೇರುಕ ವರ್ಗಕ್ಕೆ ಸೇರಿದ್ದು (ಬೆನ್ನುಮೂಳೆ ಇಲ್ಲದ ಪ್ರಜಾತಿ) ಸಾವು ಹತ್ತಿರ ಬರುತ್ತಿದ್ದಂತೆ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಮರಳುತ್ತದೆ.ಅಂದರೆ ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ (transdifferentiation) ಎಂಬ ಹೆಸರನ್ನು ನೀಡಲಾಗಿದ್ದು ಈ ಮೂಲಕ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವವನ್ನು ಪಡೆಯುತ್ತದೆ. ಈ ಅಮರತ್ವದ ಗುಣ ಹೊಂದಿರುವ ಜೀವಿ ಇದುವರೆಗೆ ಇದೊಂದೇ ಪತ್ತೆಯಾಗಿದ್ದು ಸಧ್ಯಕ್ಕೆ ಏಕಮಾತ್ರ ಜೀವಿಯಾಗಿದೆ. ಭೂಮಧ್ಯರೇಖೆಯ ಸಮಶೀತೋಷ್ಣವಲಯದ ಸಾಗರದಲ್ಲಿ ಕಂಡುಬರುವ ಈ ಲೋಳೆಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸ ಹೊಂದಿದೆ. ಹೆಚ್ಚಾಗಿ ಈ ಲೋಳೆಮೀನು ಆಸ್ಟ್ರೇಲಿಯಾ ಬಳಿ ಪತ್ತೆಯಾಗಿವೆ.
ಈ ಗುಣ ಹಲ್ಲಿ ಮತ್ತು ಸರೀಸೃಪ ಮೊದಲಾದವುಗಳಲ್ಲಿ ಕೊಂಚ ಮಟ್ಟಿಗೆ ಇರುವುದನ್ನು ನಾವೆಲ್ಲಾ ಗಮನಿಸಿಯೇ ಇದ್ದೇವೆ. ಹಲ್ಲಿ ಓತಿಕೇತಗಳು ಅಪಾಯ ಕಂಡುಬಂದಾಗ ತಮ್ಮ ಬಾಲವನ್ನು ಉದುರಿಸಿ ಓಡುತ್ತವೆ. ವೈರಿ ಉದುರಿದ ಬಾಲ ಎಗರಾಡುವುದನ್ನೇ ನೋಡಿ ಇದನ್ನೂ ಒಂದು ಜೀವಿ ಎಂದೇ ತಿಳಿದುಕೊಂಡು ಅದರ ಮೇಲೆ ದಾಳಿ ಎಸಗುತ್ತವೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲಸಮಯದಲ್ಲಿಯೇ ಹೊಸಬಾಲ ಬೆಳೆಯುತ್ತದೆ. ಆದರೆ ಇವು ಕೇವಲ ಒಂದು ಅಂಗವನ್ನು ಮಾತ್ರ ಮರುಬೆಳೆಸಬಲ್ಲವೇ ಹೊರತು ಲೋಳೆಮೀನಿನ ತಹರ ಮತ್ತೆ ಹೊಸಜನ್ಮವನ್ನು ಪಡೆಯಲಾರವು.
ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಲೋಳೇಮೀನಿನ ರಹಸ್ಯ ಕಂಡುಹಿಡಿಯಲು ಪ್ರಯತ್ನಗಳು ಸಾಗುತ್ತಿವೆ.
-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

5 ಕಾಮೆಂಟ್‌ಗಳು:

  1. ಮಾಹಿತಿಯುಕ್ತ ಪರಿಪೂರ್ಣ ಲೇಖನ, ನೀವು ಇಷ್ಟೊಂದು ತೊಡಗಿಕೊಂಡಿದ್ದೀರಿ ಅಂದರೆ ಆಶ್ಚರ್ಯ, ದುಬೈ ಯಲ್ಲಿ ಬರೇ ಕೆಲಸದ ಗೊಡವೆ ಜಾಸ್ತಿ, ಒತ್ತಡದಲ್ಲಿ ಬೇರೆ ಏನೂ ಮಾಡಲು ಆಗುವುದಿಲ್ಲ ಅನ್ನುವವರಿದ್ದಾರೆ ಆದರೆ ನೀವು ಸ್ವಲ್ಪ ಭಿನ್ನವಾಗಿ ಕಂಡಿರಿ, ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಹಲ್ಲಿಯೂ ಸಹಜವಾದ ಸಾವಿಲ್ಲ ಎಂದು ಎಲ್ಲೋ ಓದಿದ ನೆನಪು. ಒೞೆಯ ಮಾಹಿತಿ!

    ಪ್ರತ್ಯುತ್ತರಅಳಿಸಿ
  3. ವಿಸ್ಮಯವಾದ ಬರಹ ಚೆನ್ನಾಗಿದೆ,
    ಇನ್ನೂ ಇಂತಹ ಕುತೂಹಲಗಳು ಜಗತ್ತಿನಲ್ಲಿ ಎಸ್ಟೊಂದು ಇರಬಹುದು ಅಲ್ವಾ!!
    ವಂದನೆಗಳೊಂದಿಗೆ.
    ಕಂಡಷ್ಟೂ ಖಗೋಳ

    ಪ್ರತ್ಯುತ್ತರಅಳಿಸಿ